ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, May 11, 2019

Mahabharata Tatparya Nirnaya Kannada 12.105-12.109


ಸ ಸರ್ವವಿದ್ ಬಲವಾನಸ್ತ್ರವೇತ್ತಾ  ಕೃಪಸ್ವಸಾಯಾಂ ದ್ರೋಣವೀರ್ಯ್ಯೋದ್ಭವೋsಭೂತ್ 
ದುರ್ಯ್ಯೋಧನಸ್ತಚ್ಚತುರ್ತ್ಥೇsಹ್ನಿ ಜಾತಸ್ತಸ್ಯಾಪರೇದ್ಯುರ್ಭೀಮಸೇನಃ ಸುಧೀರಃ ॥೧೨.೧೦೫॥       

ಎಲ್ಲವನ್ನೂ ಬಲ್ಲವನಾದ ಆ ಅಶ್ವತ್ಥಾಮನು ಬಲಿಷ್ಠನೂ, ಅಸ್ತ್ರವನ್ನು ಬಲ್ಲವನೂ ಆಗಿದ್ದು, ಕೃಪನ ತಂಗಿಯಾದ ಕೃಪಿಯಲ್ಲಿ ದ್ರೋಣಾಚಾರ್ಯರ ವೀರ್ಯದಿಂದ ಹುಟ್ಟಿದನು. ದುರ್ಯೋಧನನು ಅಶ್ವತ್ಥಾಮ ಹುಟ್ಟಿ ನಾಲ್ಕು ದಿನಗಳ ನಂತರ ಹುಟ್ಟಿದರೆ, ದುರ್ಯೋಧನ ಹುಟ್ಟಿದ ಮಾರನೆಯ ದಿನ ಬುದ್ಧಿವಂತನಾದ ಭೀಮಸೇನನ ಜನನವಾಯಿತು. 

[ಮಹಾಭಾರತದ ಆದಿಪರ್ವದಲ್ಲಿ(೧೨೯.೬೮)  ಮೇಲಿನ ಮಾತಿಗೆ ಸಂವಾದಿಯಾದ ವಿವರವನ್ನು ಕಾಣಬಹುದು: ‘ಯಸ್ಮಿನ್ನಹನಿ ಭೀಮಸ್ತು ಜಜ್ಞೇ ಭೀಮ ಪರಾಕ್ರಮಃ  ತಾಮೇವ ರಾತ್ರಿಂ ಪೂರ್ವಾಂ ತು ಜಜ್ಞೇ ದುರ್ಯೋಧನೋ ನೃಪಃ’] 

ಯದಾ ಸ ಮಾಸದ್ವಿತಯೀ ಬಭೂವ ತದಾ ರೋಹಿಣ್ಯಾಂ ಬಲದೇವೋsಭಿಜಾತಃ ।      
ಬಲೀ ಗುಣಾಢ್ಯಃ ಸರ್ವವೇದೀ ಯ ಏವ ಸೇವಾಖಿನ್ನೋ ಲಕ್ಷ್ಮಣೋsಗ್ರೇ ಹರೇರ್ಭೂತ್೧೨.೧೦೬

ಯಾರು ಬಲಿಷ್ಠನಾಗಿದ್ದನೋ, ಗುಣಗಳಿಂದ ತುಂಬಿದ್ದನೋ, ಎಲ್ಲವನ್ನೂ ಬಲ್ಲವನಾಗಿದ್ದನೋ, ಅಂತಹ ಬಲರಾಮನು, ಭೀಮಸೇನ ಎರಡು ತಿಂಗಳಿನ ಮಗುವಾಗಿದ್ದಾಗ ರೋಹಿಣಿಯಲ್ಲಿ ಹುಟ್ಟಿದನು.  ತ್ರೇತಾಯುಗದಲ್ಲಿ ಶ್ರೀರಾಮನ ತಮ್ಮನಾಗಿ  ಸೇವೆ ಮಾಡಿ ಪರಿಶ್ರಾಂತನಾದ ಲಕ್ಷ್ಮಣನೇ ಈಗ  ಪರಮಾತ್ಮನಿಗಿಂತ ಮೊದಲೇ ಬಲರಾಮನಾಗಿ  ಜನಿಸಿದನು.

ಯದಾ ಹಿ ಪುತ್ರಾನ್ ವಿನಿಹನ್ತುಮೇತೌ ಸಹೈವ ಬದ್ಧೌ ಗತಿಶೃಙ್ಖಲಾಯಾಮ್ ।
ಕಂಸೇನಾಪಾಪೌ ದೇವಕೀಶೂರಪುತ್ರೌ ವಿಯೋಜಿತಾಃ ಶೌರಿಭಾರ್ಯ್ಯಾಃ ಪರಾಶ್ಚ ॥೧೨.೧೦೭॥ 

ಯಾವಾಗ ಕಂಸನು ದೇವಕೀಪುತ್ರರನ್ನು ಕೊಲ್ಲುವುದಕ್ಕಾಗಿ, ಯಾವುದೇ ಪಾಪಮಾಡದ(ದ್ರೋಹರಹಿತರಾದ) ವಸುದೇವ-ದೇವಕಿಯರನ್ನು ಜೊತೆಯಾಗಿ, ಓಡಾಡಬಲ್ಲ ಸರಪಳಿಯಿಂದ ಕಟ್ಟಿದ್ದನೋ, ಆಗ,  ವಸುದೇವನ ಇತರ ಪತ್ನಿಯರು ವಸುದೇವನಿಂದ ಬೇರ್ಪಡಿಸಲ್ಪಟ್ಟಿದ್ದರು(ಸ್ತಾನಾಂತರ ಮಾಡಲ್ಪಟ್ಟಿದ್ದರು).  

ವಿನಿಶ್ಚಯಾರ್ತ್ಥಂ ದೇವಕೀಗರ್ಭಜಾನಾಮನ್ಯಾ ಭಾರ್ಯ್ಯಾ ಧೃತಗರ್ಭಾಃ ಸ ಕಂಸಃ
ಸ್ಥಾನಾನ್ತರೇ ಪ್ರಸವೋ ಯಾವದಾಸಾಂ ಸಂಸ್ಥಾಪಯಾಮಾಸ ಸುಪಾಪಬುದ್ಧಿಃ೧೨.೧೦೮

ಅತ್ಯಂತ ಪಾಪಬುದ್ಧಿಯುಳ್ಳ ಕಂಸನು, ದೇವಕಿಯ ಗರ್ಭದಲ್ಲಿ ಹುಟ್ಟುವ ಮಕ್ಕಳ ವಿಶೇಷ ನಿಶ್ಚಯಕ್ಕಾಗಿ, ವಸುದೇವನ ಇತರ ಎಲ್ಲಾ ಹೆಂಡಿರನ್ನು, ಅವರು ಗರ್ಭ ಧರಿಸಿದ ತಕ್ಷಣ , ಅವರ ಪ್ರಸವವಾಗುವ ತನಕ ಸ್ತಾನಾಂತರಮಾಡಿ ಬೇರೆ ಕಡೆ ಕಳುಹಿಸುತ್ತಿದ್ದ.
[ಒಂದು ವೇಳೆ ವಸುದೇವನ ಇತರ ಪತ್ನಿಯರು ಅಲ್ಲೇ ಇದ್ದು, ಅಲ್ಲೇ  ಅವರಿಗೆ ಹೆರಿಗೆಯಾದರೆ, ಆಗ ಮಗುವನ್ನು ವ್ಯತ್ಯಾಸ(ಅದಲುಬದಲು)ಪಡಿಸುವ ಸಾಧ್ಯತೆ ಇರುವುದರಿಂದ, ಗರ್ಭವತಿಯಾದ ವಸುದೇವನ ಇತರ ಪತ್ನಿಯರಿಗೆ ಆತನ ಜೊತೆಗೆ ಅಲ್ಲಿರಲು ಕಂಸ ಅವಕಾಶಕೊಡದೇ ಸ್ತಾನಾಂತರಮಾಡುತ್ತಿದ್ದ.]  

ಹೇತೋರೇತಸ್ಮಾದ್ ರೋಹಿಣೀ ನನ್ದಗೇಹೇ ಪ್ರಸೂತ್ಯರ್ತ್ಥಂ ಸ್ಥಾಪಿತಾ ತೇನ ದೇವೀ
ಲೇಭೇ ಪುತ್ರಂ ಗೋಕುಲೇ ಪೂರ್ಣ್ಣಚನ್ದ್ರಕಾನ್ತಾನನಂ ಬಲಭದ್ರಂ ಸುಶುಭ್ರಮ್ ॥೧೨.೧೦೯॥

ಇದೇ ಕಾರಣಕ್ಕಾಗಿ ಗರ್ಭಿಣಿಯಾದ  ರೋಹಿಣಿಯು ಹೆರಿಗೆಗಾಗಿ ನಂದನ ಮನೆಯಲ್ಲಿ(ಗೋಕುಲದಲ್ಲಿ) ಕಂಸನಿಂದ ಇಡಲ್ಪಟ್ಟಿದ್ದಳು.  ಹೀಗೆ ಅವಳು  ಗೋಕುಲದಲ್ಲಿ, ಪೂರ್ಣಚಂದಿರನಂತೆ ಮನೋಹರವಾದ ಮುಖವುಳ್ಳ, ಪವಿತ್ರನಾದ ಬಲಭದ್ರನನ್ನು ಮಗನನ್ನಾಗಿ ಪಡೆದಳು.


Friday, May 10, 2019

Mahabharata Tatparya Nirnaya Kannada 12.100-12.104


ಬೃಹಸ್ಪತಿಃ ಪೂರ್ವಮಭೂದ್ಧರೇಃ ಪದಂ  ಸಂಸೇವಿತುಂ ಪವನಾವೇಶಯುಕ್ತಃ ।
ಸ ಉದ್ಧವೋ ನಾಮ ಯದುಪ್ರವೀರಾಜ್ಜಾತೋ ವಿದ್ವಾನುಪಗವನಾಮಧೇಯಾತ್ ॥೧೨.೧೦೦      

ಇವರೆಲ್ಲರು(ಧರ್ಮರಾಯ, ಭೀಮ, ಬಲರಾಮ, ಕೃಷ್ಣ, ಅರ್ಜುನ ಇವರೆಲ್ಲರೂ)   ಹುಟ್ಟುವುದಕ್ಕೂ ಮೊದಲೇ, ನಾರಾಯಣನ ಪಾದವನ್ನು ಸೇವಿಸಲು ಬೃಹಸ್ಪತ್ಯಾಚಾರ್ಯರು ದ್ರೋಣನಾಮಕರಾಗಿ  ಹುಟ್ಟಿದ್ದರು. ಅವರೇ  ಮತ್ತೆ ಮುಖ್ಯಪ್ರಾಣನ ಆವೇಶದಿಂದೊಡಗೂಡಿ ‘ಉದ್ಧವ’ ಎನ್ನುವ ಹೆಸರಿನಿಂದ ‘ಉಪಗವ’ ಎನ್ನುವ ಹೆಸರುಳ್ಳ ಯದುಶ್ರೇಷ್ಠನಿಂದ  ಹುಟ್ಟಿದರು.

ದ್ರೋಣಾತ್ಮಕಂ ನಾತಿತರಾಂ ಸ್ವಸೇವಕಂ ಕುರ್ಯಾದ್ಧರಿರ್ಮ್ಮಾಮಿತಿ ಭೂಯ ಏವ ।
ಸ ಉದ್ಧವಾತ್ಮಾsವತತಾರ ಯಾದವೇಷ್ವಾಸೇವನಾರ್ತ್ಥಂ ಪುರುಷೋತ್ತಮಸ್ಯ ॥೧೨.೧೦೧

‘ದ್ರೋಣನಾಗಿರುವ ನನ್ನಿಂದ ಶ್ರೀಕೃಷ್ಣನು ಆತ್ಯಂತಿಕವಾಗಿ ತನ್ನ ಸೇವೆಯನ್ನು ಮಾಡಿಸಿಕೊಳ್ಳುವುದಿಲ್ಲ’ ಎಂದು ಯೋಚಿಸಿದ ಬೃಹಸ್ಪತ್ಯಾಚಾರ್ಯರು, ಹೀಗೆ ಉದ್ಧವ ಎನ್ನುವ ಹೆಸರಿನವನಾಗಿ, ಪುರುಷೋತ್ತಮನಾದ ನಾರಾಯಣನ ಸೇವೆಗಾಗಿ ಯಾದವರಲ್ಲಿ ಅವತರಿಸಿ ಬಂದರು.

ಬೃಹಸ್ಪತೇರೇವ ಸ ಸರ್ವವಿದ್ಯಾ ಅವಾಪ ಮನ್ತ್ರೀ ನಿಪುಣಃ ಸರ್ವೇವೇತ್ತಾ ।
ವರ್ಷತ್ರಯೇ ತತ್ಪರತಃ ಸ ಸಾತ್ಯಕಿರ್ಜ್ಜಜ್ಞೇ ದಿನೇ ಚೇಕಿತಾನಶ್ಚ ತಸ್ಮಿನ್ ॥೧೨.೧೦೨॥

ಉದ್ಧವನು ಬೃಹಸ್ಪತಿಯಿಂದಲೇ ಎಲ್ಲಾ ವಿದ್ಯೆಗಳನ್ನೂ ಹೊಂದಿದನು. ಮಂತ್ರಾಲೋಚನೆ ಮಾಡುವುದರಲ್ಲಿ ಆತ ನಿಪುಣನಾಗಿದ್ದು,  ಎಲ್ಲವನ್ನೂ ಬಲ್ಲವನಾಗಿದ್ದನು.
ಉದ್ಧವ ಹುಟ್ಟಿ  ಮೂರು ವರ್ಷಗಳ ನಂತರ ಸಾತ್ಯಕಿಯ ಜನನವಾಯಿತು. ಅದೇ ದಿನ ಚೇಕಿತಾನನೂ ಕೂಡಾ ಹುಟ್ಟಿದನು.

ಮರುತ್ಸು ನಾಮ ಪ್ರತಿಭೋ ಯದುಷ್ವಭೂತ್ ಸ ಚೇಕಿತಾನೋ ಹರಿಸೇವನಾರ್ತ್ಥಮ್ ।
ತದೈವ ಜಾತೋ ಹೃದಿಕಾತ್ಮಜೋsಪಿ ವರ್ಷತ್ರಯೇ ತತ್ಪರತೋ ಯುಧಿಷ್ಠಿರಃ ॥೧೨.೧೦೩॥

ಮರುದ್ದೇವತೆಗಳಲ್ಲಿ ‘ಪ್ರತಿಭಾ’ ಎನ್ನುವ ಮರುತ್ತು ಯದುಗಳಲ್ಲಿ ಹುಟ್ಟಿದ. ಅವನೇ ಚೇಕಿತಾನ. ಆಗಲೇ ಪರಮಾತ್ಮನ ಸೇವೆಗಾಗಿ ಕೃತವರ್ಮ ಹುಟ್ಟಿದ. (ಹೃತಿಕನ ಮಗ ಹಾರ್ದಿಕ್ಯ. ಅವನನ್ನು ಕೃತವರ್ಮ ಎಂದು ಕರೆಯುತ್ತಾರೆ). ನಂತರ ಮೂರು ವರ್ಷಗಳಾದ ಮೇಲೆ ಯುಧಿಷ್ಠಿರನ ಜನನವಾಯಿತು. 

ತತೋsಬ್ದತೋ  ಭೂಭರಸಂಹೃತೌ ಹರೇರಙ್ಗತ್ವಮಾಪ್ತುಂ ಗಿರಿಶೋsಜನಿಷ್ಟ ।
ಅಶ್ವತ್ಥಾಮಾ ನಾಮತೋsಶ್ವಧ್ವನಿಂ ಸ ಯಸ್ಮಾಚ್ಚಕ್ರೇ ಜಾಯಮಾನೋ ಮಹಾತ್ಮಾ ೧೨.೧೦೪

ತದನಂತರ, ಒಂದು ವರ್ಷವಾದ ಮೇಲೆ, ಹರಿಯ ಭೂಭಾರ ಹರಣದಲ್ಲಿ ಅಂಗಭೂತನಾಗಿ ತಾನೂ ಸೇವೆ ಮಾಡಬೇಕು ಎಂದು ಗಿರೀಶನಾದ ಶಿವನು ಭೂಮಿಯಲ್ಲಿ ಅವತರಿಸಿದ. ಯಾವ ಕಾರಣದಿಂದ ಹುಟ್ಟುತ್ತಲೇ, ಆ ಮಹಾತ್ಮನು ಕುದುರೆಯಂತೆ ಕೆನೆದನೋ, ಆ ಕಾರಣದಿಂದ ಹೆಸರಿನಿಂದ ಆತ ಅಶ್ವತ್ಥಾಮನಾದ.
[ಪಾದ್ಮಪುರಾಣದ ಸೃಷ್ಟಿಖಂಡದಲ್ಲಿ(೧೬.೨೧)  ಶಿವನೇ ಅಶ್ವತ್ಥಾಮ ಎನ್ನುವುದರ ಕುರಿತಾದ ವಿವರವಿದೆ:  ಗಾಙ್ಗೇಯೋ ವಸುಮುಖ್ಯಶ್ಚ ದ್ರೋಣೋ ದೇವಮುನಿಃ ಪ್ರಭುಃ ಅಶ್ವತ್ಥಾಮಾ ಹರಃ ಸಾಕ್ಷಾದ್ ಹರಿರ್ನಂದಕುಲೋದ್ಭವಃ   (ಗಾಙ್ಗೇಯ ಇನ್ನ್ಯಾರೂ ಅಲ್ಲ. ಅವನೇ ವಸುಮುಖ್ಯಸ್ಥ. ದ್ರೋಣಾಚಾರ್ಯರು ಸಾಕ್ಷಾತ್ ದೇವಮುನಿ ಬೃಹಸ್ಪತಿ.  ಅಶ್ವತ್ಥಾಮ ಹರನಾದರೆ ಹರಿಯೇ ಶ್ರೀಕೃಷ್ಣ).
ಇನ್ನು ಮಹಾಭಾರತದ ಆದಿಪರ್ವದಲ್ಲಿ ಅಶ್ವತ್ಥಾಮ ಎನ್ನುವ ಹೆಸರಿನ ಕುರಿತಾದ ವಿವರವನ್ನು  ಹೀಗೆ ಹೇಳಿದ್ದಾರೆ: ‘ಅಲಭದ್ ಗೌತಮೀ ಪುತ್ರಮಶ್ವತ್ಥಾಮಾನಮೇವ ಚ ಸ ಜಾತಮಾತ್ರೋ ವ್ಯನದದ್  ಯಥೈವೋಚ್ಚೈಃಶ್ರವಾ ಹಯಃ  ತಚ್ಛ್ರುತ್ವಾsನ್ತರ್ಹಿತಂ   ಭೂತಮಂತರಿಕ್ಷಸ್ಥಮಬ್ರವೀತ್   (ಗೌತಮಿಯಲ್ಲಿ ಹುಟ್ಟಿದ ಮಗು ಉಚ್ಚೈಃಶ್ರವಾ ಕುದುರೆಯಂತೆ ಕೆನೆಯಿತು. ಅದನ್ನು ಕೇಳಿ ಯಾರಿಗೂ ಕಾಣದ ಭೂತ(ವಾಯುದೇವರು) ಹೀಗೆ ಹೇಳುತ್ತಾರೆ: ) ಅಶ್ವಸ್ಯೇವಾಸ್ಯ ಯತ್ ಸ್ಥಾಮ ನದತಃ ಪ್ರದಿಶೋ ಗತಮ್ ಅಶ್ವತ್ಥಾಮೈವ  ಬಾಲೋsಯಂ ತಸ್ಮಾನ್ನಾಮ್ನಾ ಭವಿಷ್ಯತಿ’  (‘ಭವಿಷ್ಯದಲ್ಲಿ ಈತ ಅಶ್ವತ್ಥಾಮ ಎನ್ನುವ ಹೆಸರಿನಿಂದ ಪ್ರಸಿದ್ಧನಾಗುತ್ತಾನೆ’ ಎಂದು) ]

Thursday, May 9, 2019

Mahabharata Tatparya Nirnaya Kannada 12.94-12.99


ವಿವರ್ದ್ಧಮಾನೇ ಲೋಕದೃಷ್ಟ್ಯೈವ ಕೃಷ್ಣೇ ಪಾಣ್ಡುಃ ಪುನಃ ಪ್ರಾಹ ಪೃಥಾಮಿದಂ ವಚಃ ।  
ಧರ್ಮ್ಮಿಷ್ಠೋ ನೌ ಸೂನುರಗ್ರೇ ಬಭೂವ ಬಲದ್ವಯಜ್ಯೇಷ್ಠ ಉತಾಪರಶ್ಚ ॥೧೨.೯೪      

ಇತ್ತ, ಈರೀತಿಯಾಗಿ  ಜನರ ಕಣ್ಣಿಗೆ  ಗೋಪಾಲಕರ ನಡುವೆ  ಕೃಷ್ಣ ಬೆಳೆಯುತ್ತಿರುವಂತೆ ಕಾಣಿಸಿಕೊಳ್ಳುತ್ತಿರಲು, ಅತ್ತ  ಪಾಂಡುವು ಮತ್ತೆ ಕುಂತಿಯನ್ನು ಕುರಿತು ಹೀಗೆ ಹೇಳುತ್ತಾನೆ: ‘ನಮಗಿಬ್ಬರಿಗೂ ಮೊದಲು ಧರ್ಮದ ಪ್ರತಿನಿಧಿಯಾದ ಮಗನು ಹುಟ್ಟಿದನು. ಆನಂತರ ಜ್ಞಾನ ಹಾಗು ಬುದ್ಧಿಬಲದಲ್ಲಿ ಹಿರಿಯನಾದ ಎರಡನೇ ಮಗನು ಹುಟ್ಟಿದನು.’

ಯದೈಕ ಏವಾತಿಬಲೋಪಪನ್ನೋ ಭವೇತ್ ತದಾ ತೇನ ಪರಾವಮರ್ದ್ದೇ
ಪ್ರವರ್ತ್ತ್ಯಮಾನೇ ಸ್ವಪುರಂ ಹರೇಯುಶ್ಚೌರ್ಯ್ಯಾತ್ ಪರೇ ತದ್ ದ್ವಯಮತ್ರ ಯೋಗ್ಯಮ್ ॥೧೨.೯೫

‘ಯಾವಾಗ ಅತ್ಯಂತ ಬಲಿಷ್ಠನಾದ ಒಬ್ಬನೇ ಇರುತ್ತಾನೋ ಆಗ,  ಅವನು ಬೇರೊಬ್ಬರೊಂದಿಗೆ ಯುದ್ಧದಲ್ಲಿ ಭಾಗವಹಿಸುತ್ತಿರಲು, ಇನ್ನು ಕೆಲವು ಶತ್ರುಗಳು ಕಳ್ಳತನದಿಂದ ಅವನ ಪಟ್ಟಣವನ್ನು ಅಪಹಾರ ಮಾಡಬಹುದು. ಆ ಕಾರಣದಿಂದ, ಪುರರಕ್ಷಣೆಯ ವಿಚಾರದಲ್ಲಿ ಇಬ್ಬರು ಪುತ್ರರಿರುವುದು ಯೋಗ್ಯವಲ್ಲವೇ?’

ಶಸ್ತ್ರಾಸ್ತ್ರವಿದ್ ವೀರ್ಯ್ಯವಾನ್ ನೌ ಸುತೋsನ್ಯೋ ಭವೇದ್ ದೇವಂ ತಾದೃಶಮಾಹ್ವಯಾತಃ      
ಶೇಷಸ್ತವ ಭ್ರಾತೃಸುತೋsಭಿಜಾತಸ್ತಸ್ಮಾನ್ನಾಸೌ ಸುತದಾನಾಯ ಯೋಗ್ಯಃ ೧೨.೯೬

‘ಶಸ್ತ್ರಾಸ್ತ್ರಗಳನ್ನು ಬಲ್ಲ, ವೀರ್ಯವಂತನಾದ ಇನ್ನೊಬ್ಬ ಸುತನು ನಮಗೆ ಆಗಬೇಕು. ಅಂತಹ ಮಗನನ್ನು ಕೊಡಬಲ್ಲ ದೇವನನ್ನು ಆಹ್ವಾನಿಸು’ ಎನ್ನುತ್ತಾನೆ ಪಾಂಡು.
ಮುಂದುವರಿದು ಪಾಂಡು ಹೇಳುತ್ತಾನೆ: ‘ಶೇಷನು ನಿನ್ನ ಅಣ್ಣನ ಮಗನಾಗಿ ಹುಟ್ಟಿದ್ದಾನೆ. ಆ ಕಾರಣದಿಂದ ಅವನು  ನಮಗೆ ಮಗನನ್ನು ಕೊಡಲು ಯೋಗ್ಯನಲ್ಲ’.

ನವೈ ಸುಪರ್ಣ್ಣಃ ಸುತದೋ ನರೇಷು ಪ್ರಜಾಯತೇ ವಾsಸ್ಯ ಯತಸ್ತಥ್ssಜ್ಞಾ ।
ಕೃತಾ ಪುರಾ ಹರಿಣಾ ಶಙ್ಕರಸ್ತು ಕ್ರೋಧಾತ್ಮಕಃ ಪಾಲನೇ ನೈವ ಯೋಗ್ಯಃ ೧೨.೯೭

‘ಶೇಷನ ಸಮಾನ ಕಕ್ಷೆಯಲ್ಲಿರುವವನು ಗರುಡ. ಆದರೆ ಅವನನ್ನು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಅವನಿಗೆ ‘ಅವತಾರ ಮಾಡಬಾರದು’ ಎಂಬುದಾಗಿ ಭಗವಂತನ ಆಜ್ಞೆಯಿದೆ. ಹೀಗಾಗಿ ಗರುಡನು ಮಗನನ್ನು ಹುಟ್ಟಿಸುವವನಾಗಿ ಮನುಷ್ಯರಲ್ಲಿ ಹುಟ್ಟುವುದಿಲ್ಲ.
ಅದೇ ಕಕ್ಷೆಯಲ್ಲಿ ಬರುವ ಸದಾಶಿವನು ಬ್ರಹ್ಮನ ಕೋಪದಿಂದ ಹುಟ್ಟಿದವನು. ಹಾಗಾಗಿ ಅವನು ಬೇರೊಬ್ಬರನ್ನು ಪಾಲನೆ ಮಾಡುವುದರಲ್ಲಿ  ಯೋಗ್ಯನಲ್ಲ.

ಅತೋ ಮಹೇನ್ದ್ರೋ ಬಲವಾನನನ್ತರಃ ತೇಷಾಂ ಸಮಾಹ್ವಾನಮಿಹಾರ್ಹತಿ ಸ್ವರಾಟ್ ।
ಇತೀರಿತಾ ಸಾssಹ್ವಯದಾಶು ವಾಸವಂ ತತಃ ಪ್ರಜಜ್ಞೇ ಸ್ವಯಮೇವ ಶಕ್ರಃ ॥೧೨.೯೮

‘ಆ ಕಾರಣದಿಂದ ಗರುಡ-ಶೇಷ-ರುದ್ರರ ನಂತರ ಬಲಿಷ್ಠನಾಗಿರುವ ಇಂದ್ರನು ಆಹ್ವಾನವನ್ನು ಹೊಂದಲು ಯೋಗ್ಯನಾಗಿದ್ದಾನೆ.’  ಈರೀತಿಯಾಗಿ ಪಾಂಡುವಿನಿಂದ ಹೇಳಲ್ಪಟ್ಟ ಕುಂತಿಯು ಇಂದ್ರನನ್ನು ಕರೆಯುತ್ತಾಳೆ. ತದನಂತರ ಕುಂತಿಯ ಕರೆಯಂತೆ ಇಂದ್ರನು ತಾನೇ ಹುಟ್ಟಿ ಬರುತ್ತಾನೆ.

ಸ ಚಾರ್ಜ್ಜುನೋ ನಾಮ ನರಾಂಶಯುಕ್ತೋ ವಿಷ್ಣ್ವಾವೇಶೀ ಬಲವಾನಸ್ತ್ರವೇತ್ತಾ ।
ರೂಪ್ಯನ್ಯಃ ಸ್ಯಾತ್ ಸುನುರಿತ್ಯುಚ್ಯಮಾನಾ ಭರ್ತ್ತ್ರಾ ಕುನ್ತೀ ನೇತಿ ತಂ ಪ್ರಾಹ ಧರ್ಮ್ಮಾತ್ ॥೧೨.೯೯

ಇಂದ್ರನು ಅರ್ಜುನನೆಂಬ ಹೆಸರಿನಿಂದ ನರಾಂಶದಿಂದ ಕೂಡಿ, ವಿಷ್ಣುವಿನ ಆವೇಶದಿಂದಲೂ ಒಡಗೂಡಿ, ಬಲಿಷ್ಠನಾಗಿಯೂ, ಅಸ್ತ್ರವನ್ನು ಬಲ್ಲವನಾಗಿಯೂ  ಹುಟ್ಟುತ್ತಾನೆ.
‘ನಾಲ್ಕನೆಯವನಾಗಿ ಚೆಂದದ ರೂಪವುಳ್ಳ ಇನ್ನೊಬ್ಬ ಮಗನು ಆಗಲೀ’ ಎಂದು ಗಂಡನಿಂದ ಹೇಳಿಸಿಕೊಳ್ಳಲ್ಪಟ್ಟ ಕುಂತಿಯು, ಧರ್ಮದ ದೃಷ್ಟಿಯಿಂದ ‘ಅದು ಯೋಗ್ಯವಲ್ಲ’ ಎಂದು ಹೇಳುತ್ತಾಳೆ.

[ಮಹಾಭಾರತದ ಆದಿಪರ್ವದಲ್ಲಿ (೧೩೨.೬೩.೪) ಈ ಕುರಿತಾದ ವಿವರಣೆ ಬರುತ್ತದೆ:  ಪಾಣ್ಡುಸ್ತು ಪುನರೇವೈನಾಂ ಪುತ್ರಲೋಭಾನ್ಮಹಾಯಶಾಃ ಪ್ರಾದಿಶದ್ ದರ್ಶನೀಯಾರ್ಥಿ ಕುಂತೀ ತ್ವೆನಮಥಾಬ್ರವೀತ್ ನಾತಶ್ಚತುರ್ಥಂ ಪ್ರಸವಮಾಪತ್ತ್ಸ್ವಪಿ  ವದನ್ತ್ಯುತ ಅತಃ ಪರಂ ಸ್ವೈರಿಣೀ ಸ್ಯಾದ್ ಬಂಧಕೀ ಪಞ್ಚಮೇ ಭವೇತ್’  ಪಾಂಡುವು ಮತ್ತೆ ಪುತ್ರ ಲೋಭದಿಂದ ದರ್ಶನೀಯನಾಗಿರುವ ಮಗನನ್ನು ಬೇಡುವವನಾದಾಗ ಕುಂತಿ ಹೇಳುತ್ತಾಳೆ: ನಾಲ್ಕನೆಯ ಮಗನನ್ನು ಆಪತ್ಕಾಲದಲ್ಲಿಯೂ ಕೂಡಾ ಧರ್ಮಜ್ಞರು ಹೇಳುವುದಿಲ್ಲ. (ಯಾವುದೇ ಆಪತ್ತಿದ್ದರೂ ಕೂಡಾ, ನಿಯೋಗ ಪದ್ದತಿಯಿಂದ ಮೂರಕ್ಕಿಂತ ಹೆಚ್ಚಿನ ಮಕ್ಕಳನ್ನು ಪಡೆಯಲು ಅವಕಾಶವಿಲ್ಲ). ಒಂದುವೇಳೆ ನಿಯೋಗ ಪದ್ದತಿಗೆ ತೊಡಗಿಕೊಂಡವಳು ಪುತ್ರಲೋಭದಿಂದ ನಾಲ್ಕನೆಯ ಮಗನನ್ನು ಪಡೆದರೆ ಅವಳು ಸ್ವೈರಿಣೀ(ಇಷ್ಟಬಂದ ಗಂಡನ್ನು ಕೂಡುವವಳು) ಎನಿಸಿಕೊಳ್ಳುತ್ತಾಳೆ. ಐದನೇ ಮಗುವನ್ನು ಪಡೆದರೆ ಬಂಧಕಿಯೇ(ವೇಶ್ಯೆ/ಸೂಳೆ)ಆಗುತ್ತಾಳೆ. ಅದರಿಂದಾಗಿ ಅತ್ಯಂತ ಆಪತ್ತಿನಲ್ಲಿಯೂ ಕೂಡಾ, ನಿಯೋಗ ಪದ್ದತಿಯಿಂದ ಮೂರು ಜನ ಮಕ್ಕಳನ್ನು ಪಡೆಯಲು ಮಾತ್ರ ಅವಕಾಶ]