ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 29, 2019

Mahabharata Tatparya Nirnaya Kannada 1334_1337


ಜ್ಯೇಷ್ಠಂ ವಿಹಾಯ ಸ ಕದಾಚಿದಚಿನ್ತ್ಯಶಕ್ತಿರ್ಗ್ಗೋಗೋಪಗೋಗಣಯುತೋ ಯಮುನಾ ಜಲೇಷು।
ರೇಮೇ ಭವಿಷ್ಯದನುವೀಕ್ಷ್ಯ ಹಿ ಗೋಪದುಃಖಂ ತತ್ಬಾಧನಾಯ ನಿಜಮಗ್ರಜಮೇಷು ಸೋsಧಾತ್ ॥೧೩.೩೪

ಒಮ್ಮೆ ಅಚಿನ್ತ್ಯಶಕ್ತಿಯುಳ್ಳ  ಶ್ರೀಕೃಷ್ಣನು ಜ್ಯೇಷ್ಠನಾದ ಬಲರಾಮನನ್ನು ಬಿಟ್ಟು, ಗೋವುಗಳಿಂದಲೂ, ಗೋಪಾಲಕರಿಂದಲೂ ಕೂಡಿಕೊಂಡು ಯಮುನಾ ಜಲದಲ್ಲಿ ಕ್ರೀಡಿಸುತ್ತಿದ್ದನು. 
ಮುಂದೆ  ಗೋಪಾಲಕರು ಎದುರಿಸಬೇಕಾಗಿರುವ ದುಃಖವನ್ನು ಮನಗಂಡು, ಅವರೊಂದಿಗಿದ್ದು, ಅವರ ದುಃಖವನ್ನು ಪರಿಹರಿಸುವುದಕ್ಕಾಗಿ ಅಣ್ಣ ಬಲರಾಮನನ್ನು ಶ್ರೀಕೃಷ್ಣ  ಗೋಪಾಲಕರಿಗಾಗಿ ಹಾಗೆ ಬಿಟ್ಟಿದ್ದನು.  
[ಮುಂದೆ ಕಾಳಿಯಮರ್ದನವೆಂಬ ಅತ್ಯಂತ ಭಯಂಕರ ಘಟನೆ ನಡೆಯಲಿದ್ದು, ಆ ಸಮಯದಲ್ಲಿ ಭಯಭೀತರಾಗುವ ಗೋಪಾಲಕರನ್ನು ನೋಡಿಕೊಳ್ಳುವುದಕ್ಕಾಗಿ ಅಣ್ಣ ಬಲರಾಮನನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟು, ಯಮುನಾನದಿಯಲ್ಲಿ ಕೃಷ್ಣ ಕ್ರೀಡಿಸುತ್ತಿದ್ದನು]


ಸ ಬ್ರಹ್ಮಣೋ ವರಬಲಾದುರಗಂ ತ್ವವದ್ಧ್ಯಂ ಸರ್ವೈರವಾರ್ಯ್ಯವಿಷವೀರ್ಯ್ಯಮೃತೇ ಸುಪರ್ಣ್ಣಾತ್ ।
ವಿಜ್ಞಾಯ ತದ್ವಿಷವಿದೂಷಿತವಾರಿಪಾನಸನ್ನಾನ್ ಪಶೂನಪಿ ವಯಸ್ಯಜನಾನ್ ಸ ಆವೀತ್ ॥೧೩.೩೫॥

ಬ್ರಹ್ಮದೇವರ ವರಬಲದಿಂದ ಅವಧ್ಯನಾಗಿದ್ದ, ಗರುಡನನ್ನು ಬಿಟ್ಟು ಉಳಿದ ಯಾರಿಂದಲೂ ತಡೆಯಲು ಅಸಾಧ್ಯವಾದ ವಿಷದ ಪರಾಕ್ರಮವುಳ್ಳ ಅವನು(ಕಾಳಿಯಃ) ಅಲ್ಲಿದ್ದಾನೆ ಎಂದು ತಿಳಿದು, ವಿಷದಿಂದ ಕೊಳಕಾದ ನೀರನ್ನು ಕುಡಿದುದ್ದರಿಂದ ಸತ್ತ ಪಶುಗಳನ್ನೂ,  ಮಿತ್ರರೆಲ್ಲರನ್ನೂ ಕೃಷ್ಣ ರಕ್ಷಣೆ ಮಾಡಿದನು.

ಹೇಗೆ ರಕ್ಷಣೆ ಮಾಡಿದ ಅಂದರೆ:

ತದ್ದೃಷ್ಟಿದಿವ್ಯಸುಧಯಾ ಸಹಸಾsಭಿವೃಷ್ಟಾಃ  ಸರ್ವೇಪಿ ಜೀವಿತಮವಾಪುರಥೋಚ್ಚಶಾಖಮ್ ।
ಕೃಷ್ಣಃ ಕದಮ್ಬಮಧಿರುಹ್ಯ ತತೋsತಿತುಙ್ಗಾದಾಸ್ಪೋಟ್ಯ ಗಾಢರಶನೋ ನ್ಯಪತದ್ ವಿಷೋದೇ॥೧೩.೩೬॥

ಪರಮಾತ್ಮನ ಕಣ್ನೋಟವೆಂಬ ಅಮೃತದಿಂದ ಪುಳಕಿತರಾದ ಎಲ್ಲರೂ ಕೂಡಾ ಕೂಡಲೇ ಮರುಜೀವವನ್ನು ಹೊಂದಿದರು.
ತದನಂತರ, ಎತ್ತರದ ಕೊಂಬೆಗಳುಳ್ಳ ಕದಂಬ(ಕಡವೆ) ವೃಕ್ಷವನ್ನು ಏರಿ, ಅತ್ಯಂತ ಎತ್ತರವಾಗಿರುವ ಅಲ್ಲಿಂದ, ದೃಢವಾದ ಕಟಿಬಂಧನವುಳ್ಳವನಾಗಿ, ತನ್ನ ಭುಜಗಳನ್ನು ತಟ್ಟುತ್ತಾ, ವಿಷಪೂರಿತವಾದ ಅಗಾಧ ಜಲಕ್ಕೆ ಹಾರಿದನು ಕೃಷ್ಣ.
[ಈ ಕುರಿತಾದ ವಿವರ ಭಾಗವತದಲ್ಲಿ(೧೦.೧೪.೬) ಕಾಣಸಿಗುತ್ತದೆ: ‘ತಂ ಚಣ್ಡವೇಗವಿಷವೀರ್ಯಮವೇಕ್ಷ್ಯ ತೇನ ದುಷ್ಟಾಂ ನದೀಂ ಚ ಖಲಸಂಯಮನಾವತಾರಃ ಕೃಷ್ಣಃ ಕದಂಬಮಧಿರುಹ್ಯ ತತೋsತಿತುಙ್ಗಾದಾಸ್ಫೋಟ್ಯ ಗಾಢರಶನೋ ನ್ಯಪತದ್ ವಿಶೋದೇ’]

ಸಾರ್ಪ್ಪಹ್ರದಃ ಪುರುಷಸಾರನಿಪಾತವೇಗಸಙ್ಕ್ಷೋಭಿತೋರಗವಿಷೋಚ್ಛ್ವಸಿತಾಮ್ಬುರಾಶಿಃ 
ಪರ್ಯ್ಯುತ್ಪ್ಲುತೋ ವಿಷಕಷಾಯವಿಭೀಷಣೋರ್ಮ್ಮಿಭೀಮೋ ಧನುಃಶತಮನನ್ತಬಲಸ್ಯ ಕಿಂ ತತ್ ॥೧೩.೩೭॥

ಆ ಕಾಳಿಯಸರ್ಪವಿರುವ ಮಡುವು, ಪುರುಷರಲ್ಲಿ ಶ್ರೇಷ್ಠನಾದ ಕೃಷ್ಣನ ಬೀಳುವಿಕೆಯ ವೇಗದಿಂದ ಉಲ್ಲೋಲಕಲ್ಲೋಲವಾಯಿತು.  ನದಿ ಹಾವಿನ ವಿಷಭರಿತವಾದ ನಿಟ್ಟುಸಿರಿನಿಂದ ಉಲ್ಲೋಲಕಲ್ಲೋಲವಾಗಿ ನೀರಿನ ಭಯಂಕರವಾದ ಅಲೆಗಳುಳ್ಳದ್ದಾಗಿ ಎಲ್ಲೆಡೆ ಉಕ್ಕಿ ಹರಿಯಿತು. ಆದರೆ ಈರೀತಿ ನೂರು ಮಾರು ಎಗರಿದ ನೀರು  ಅನಂತಬಲನಾಗಿರುವ ಕೃಷ್ಣನಿಗೆ ಯಾವ ಲೆಕ್ಕ. 

Thursday, June 27, 2019

Mahabharata Tatparya Nirnaya Kannada 1330_1333


ದೈತ್ಯಂ ಸ ವತ್ಸತನುಮಪ್ರಮಯಃ ಪ್ರಗೃಹ್ಯ ಕಂಸಾನುಗಂ ಹರವರಾದಪರೈರವದ್ಧ್ಯಮ್ ।
ಪ್ರಕ್ಷಿಪ್ಯ ವೃಕ್ಷಶಿರಸಿ ನ್ಯಹನದ್ ಬಕೋsಪಿ ಕಂಸಾನುಗೋsಥ ವಿಭುಮಚ್ಯುತಮಾಸಸಾದ ॥೧೩.೩೦

ಸಂಪೂರ್ಣವಾಗಿ  ಯಾರಿಂದಲೂ ತಿಳಿಯಲಾಗದ ಪರಾಕ್ರಮವುಳ್ಳ ಶ್ರೀಕೃಷ್ಣನು, ರುದ್ರದೇವರ ವರದಿಂದ ಇನ್ನ್ಯಾರಿಂದಲೂ ಕೊಲ್ಲಲಾಗದ ಕಂಸನ ಭೃತ್ಯನಾದ, ಗೋವಿನಂತೆ(ಕರುವಿನಂತೆ) ಶರೀರವಿರುವ ದೈತ್ಯನನ್ನು ವೃಕ್ಷದ ಮೇಲುಗಡೆ ಎಸೆದು ಕೊಂದನು. ಹೀಗೆ ಕಂಸನನ್ನೇ ಅನುಸರಿಸಿರುವ ಬಕನೂ ಕೂಡಾ ಗುಣಗಣಾದಿಗಳಿಂದ ಎಂದೂ ಜಾರದ, ಸೃಷ್ಟಿಕರ್ತ ಪರಮಾತ್ಮನನ್ನು ಹೊಂದಿದನು.

ಸ್ಕನ್ದಪ್ರಸಾದಕವಚಃ ಸ ಮುಖೇ ಚಕಾರ ಗೋವಿನ್ದಮಗ್ನಿವದಮುಂ ಪ್ರದಹನ್ತಮುಚ್ಚೈಃ ।
ಚಚ್ಛರ್ದ್ದ ತುಣ್ಡಶಿರಸೈವ ನಿಹನ್ತುಮೇತಮಾಯಾನ್ತಮೀಕ್ಷ್ಯ ಜಗೃಹೇsಸ್ಯ ಸ ತುಣ್ಡಮೀಶಃ ॥೧೩.೩೧॥     

ಸ್ಕನ್ದನ ಅನುಗ್ರಹವೆಂಬ ಕವಚವುಳ್ಳ ಬಕನು, ಶ್ರೀಕೃಷ್ಣನನ್ನು ತನ್ನ ಬಾಯಿಯಿಂದ ನುಂಗಿದನು. ಆದರೆ ಬೆಂಕಿಯಂತೆ ಚೆನ್ನಾಗಿ ಸುಡುತ್ತಿರುವ ಶ್ರೀಕೃಷ್ಣನು ಆ ಬಕನನ್ನು ವಾಂತಿಮಾಡಿಸಿದನು. ತನ್ನ ಕೊಕ್ಕಿನಿಂದಲೇ ಕೊಲ್ಲಲು ಬಂದಿರುವ  ಬಕನ ಕೊಕ್ಕನ್ನು ಶ್ರೀಕೃಷ್ಣ ಹಿಡಿದನು.

ತುಣ್ಡದ್ವಯಂ ಯದುಪತಿಃ ಕರಪಲ್ಲವಾಭ್ಯಾಂ ಸಙ್ಗೃಹ್ಯ ಚಾsಶು ವಿದದಾರ ಹ ಪಕ್ಷಿದೈತ್ಯಮ್ ।
ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ  ಸಾಯಂ ಯಯೌ ವ್ರಜಭುವಂ ಸಹಿತೋsಗ್ರಜೇನ ॥೧೩.೩೨॥

ಯದುಪತಿಯಾದ ಶ್ರೀಕೃಷ್ಣನು ತನ್ನ ಎರಡು ಕೈಗಳಿಂದ ಆ ಪಕ್ಷಿದೈತ್ಯನ ಕೊಕ್ಕನ್ನು ಹಿಡಿದು  ಸೀಳಿದನು. ಪುಷ್ಪವೃಷ್ಟಿಯನ್ನು ಸುರಿಸುವ ಬ್ರಹ್ಮಾದಿಗಳಿಂದ ಸ್ತೋತ್ರಮಾಡುವವನಾದ ಶ್ರೀಕೃಷ್ಣನು ಅಣ್ಣನಿಂದ ಕೂಡಿಕೊಂಡು ಸಂಜೆ ವ್ರಜಕ್ಕೆ ತೆರಳಿದನು.

ಏವಂ ಸ ದೇವವರವನ್ದಿತಪಾದಪದ್ಮೋ ಗೋಪಾಲಕೇಷು ವಿಹರನ್ ಭುವಿ ಷಷ್ಠಮಬ್ದಮ್ ।
ಪ್ರಾಪ್ತೋ ಗವಾಮಖಿಲಪೋsಪಿ ಸ ಪಾಲಕೋsಭೂದ್ ವೃನ್ದಾವನಾನ್ತರಗಸಾನ್ದ್ರಲತಾವಿತಾನೇ ॥೧೩. ೩೩॥

ಈರೀತಿಯಾಗಿ ಶ್ರೇಷ್ಠ ದೇವತೆಗಳಿಂದಲೂ ವನ್ದ್ಯವಾದ ಪಾದಕಮಲಗಳುಳ್ಳ ಕೃಷ್ಣನು, ಗೋಪಾಲಕರೊಂದಿಗೆ ಕ್ರೀಡಿಸುತ್ತಾ,  ಈ ಭೂಮಿಯಲ್ಲಿ ಆರನೆಯ ವರ್ಷವನ್ನು ಹೊಂದಿದನು. ಎಲ್ಲವನ್ನೂ ಪಾಲನೆ ಮಾಡುವವನಾದರೂ ಕೂಡಾ, ವೃಂದಾವನದ ನಿಬಿಡವಾಗಿರುವ ಬಳ್ಳಿಗಳ ಮಧ್ಯದಲ್ಲಿ ಶ್ರೀಕೃಷ್ಣ ಗೋವುಗಳನ್ನು ಕಾಯುವವನಾಗಿ ಕಂಡನು.

Wednesday, June 26, 2019

Mahabharata Tatparya Nirnaya Kannada 1326_1329


ವೃನ್ದಾವನಯಿಯಾಸುಃ ಸ  ನನ್ದಸೂನುರ್ಬೃಹದ್ವನೇ ।
ಸಸರ್ಜ್ಜ ರೋಮಕೂಪೇಭ್ಯೋ ವೃಕಾನ್ ವ್ಯಾಘ್ರಸಮಾನ್ ಬಲೇ ॥೧೩.೨೬॥  

ನಂದಗೋಪನ ಮಗನಾಗಿರುವ ಶ್ರೀಕೃಷ್ಣನು, ಪ್ರಸ್ತುತ ತಾವಿರುವ ಸ್ಥಳವನ್ನು ಬಿಟ್ಟು ವೃಂದಾವನಕ್ಕೆ ತೆರಳಬೇಕೆಂಬ ಇಚ್ಛೆಯುಳ್ಳವನಾಗಿ, ಆ ಬೃಹದ್ವನದಲ್ಲಿ ತನ್ನ ರೋಮಕೂಪದಿಂದ, ಬಲದಲ್ಲಿ ಹುಲಿಗೆ ಸಮಾನವಾದ ಅನೇಕ ತೋಳಗಳನ್ನು ಸೃಷ್ಟಿಮಾಡಿದನು.
[ಈಕುರಿತು ಹರಿವಂಶದಲ್ಲಿ ವಿವರಣೆ ಕಾಣಸಿಗುತ್ತದೆ: ಶ್ರೂಯತೇ ಹಿ ವನಂ ರಮ್ಯಂ ಪರ್ಯಾಪ್ತತೃಣಸಂಸ್ತರಮ್  ನಾಮ್ನಾ ವೃನ್ದಾವನಂ ನಾಮ  ಸ್ವಾದುವೃಕ್ಷಫಲೋದಕಮ್ (ವಿರಾಟಪರ್ವ ೮.೨೨) ವೃಂದಾವನ ಎನ್ನುವುದು ಒಂದು ಕಾಡು ಪ್ರದೇಶ. ಅಲ್ಲಿ ನೀರೂ ಸೇರಿದಂತೆ ಎಲ್ಲವೂ ಸಮಗ್ರವಾಗಿದೆ.  ತತ್ರ ಗೋವರ್ಧನಂ ಚೈವ ಭಾನ್ಡೀರಂ ಚ ವನಸ್ಪತಿಮ್ ಕಾಳಿನ್ದೀಂ ಚ ನದೀಂ ರಮ್ಯಾಂ ದ್ರಕ್ಷ್ಯಾವಶ್ಚರತಃ ಸುಖಂ (೨೮).... ಅಲ್ಲಿ ಗೋವರ್ಧನ ಎನ್ನುವ ಪರ್ವತ,  ಭಾನ್ಡೀರ ಎನ್ನುವ ದೊಡ್ಡ ವಟವೃಕ್ಷ, ಕಾಳಿಂದಿ ನದಿ, ಮಡು ಎಲ್ಲವೂ ಇದೆ. ಅದಕ್ಕಾಗಿ ಈಗ ಅಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡಿ, ... ಸಂತ್ರಾಸಯಾವೋ ಭದ್ರಂ ತೇ ಕಿಞ್ಚಿದುತ್ಪಾದ್ಯ  ಕಾರಣಮ್ ಏವಂ ಕಥಯತಸ್ತಸ್ಯ ವಾಸುದೇವಸ್ಯ ಧೀಮತಃ ಪ್ರಾದುರ್ಬಭೂವುಃ ಶತಶೋ ರಕ್ತಮಾಂಸವಸಾಶನಾಃ ಘೋರಾಶ್ಚಿನ್ತಯತಸ್ತಸ್ಯ ಸ್ವತನೂರುಹಜಾಸ್ತದಾ ವಿನಿಷ್ಪೇತುರ್ಭಯಕರಾಃ  ಸರ್ವಶಃ ಶತಶೋ ವೃಕಾಃ [೨೯-೩೧]. ಪ್ರಸ್ತುತ ತಾವಿರುವ ಪ್ರದೇಶವನ್ನು ಬಿಡುವುದಕ್ಕಾಗಿ, ಯಾವುದೋ ಒಂದು ಕಾರಣದಿಂದ ಎಲ್ಲರನ್ನೂ ಹೆದರಿಸಬೇಕು ಎಂದು ತನ್ನ ಕೂದಲಿನಿಂದ ನೂರಾರು ತೋಳಗಳನ್ನು ಸೃಷ್ಟಿಸಿದನು]      

ಅನೇಕಕೋಟಿಸಙ್ಘೈಸ್ತೈಃ ಪೀಡ್ಯಮಾನಾ ವ್ರಜಾಲಯಾಃ ।
ಯಯುರ್ವೃನ್ದಾವನಂ ನಿತ್ಯಾನನ್ದಮಾದಾಯ ನನ್ದಜಮ್ ॥೧೩.೨೭॥

ಅನೇಕ ಕೋಟಿ ಸಂಘವಾಗಿರುವ ಆ ತೋಳಗಳಿಂದ ಪೀಡೆಗೊಳಗಾದ ಗೋಪರು, ನಿತ್ಯಾನಂದಮೂರ್ತಿಯಾದ, ನಂದಪುತ್ರ   ಶ್ರೀಕೃಷ್ಣನನ್ನು ಕರೆದುಕೊಂಡು ವೃಂದಾವನಕ್ಕೆ ತೆರಳಿದರು.

ಇನ್ದಿರಾಪತಿರಾನನ್ದಪೂರ್ಣ್ಣೋ ವೃನ್ದಾವನೇ ಪ್ರಭುಃ ।
ನನ್ದಯಾಮಾಸ ನನ್ದಾದೀನುದ್ದಾಮತರಚೇಷ್ಟಿತೈಃ ॥೧೩.೨೮॥

ಆನಂದಪೂರ್ಣನೂ,  ಸರ್ವಸಮರ್ಥನೂ ಆಗಿರುವ ಇಂದಿರಾಪತಿ ಶ್ರೀಕೃಷ್ಣನು,  ನಂದ ಮೊದಲಾದವರನ್ನು ತನ್ನ ಉತ್ಕೃಷ್ಟವಾದ ಕ್ರಿಯೆಗಳಿಂದ ಸಂತಸಗೊಳಿಸಿದನು.

ಸ ಚನ್ದ್ರತೋ ಹಸತ್ಕಾನ್ತವದನೇನೇನ್ದುವರ್ಚ್ಚಸಾ ।
ಸಂಯುತೋ ರೌಹಿಣೇಯೇನ ವತ್ಸಪಾಲೋ ಬಭೂವ ಹ ॥೧೩.೨೯॥

ಚಂದ್ರನಿಗಿಂತಲೂ ಮಿಗಿಲಾಗಿ ಮುಗುಳುನಗುವ ಮನೋಹರವಾಗಿರುವ ಮುಖವುಳ್ಳ ಶ್ರೀಕೃಷ್ಣನು, ಚಂದ್ರನ ಕಾಂತಿಯಂತೆ ಕಾಂತಿಯುಳ್ಳ ಬಲರಾಮನಿಂದ ಕೂಡಿಕೊಂಡು ಕರುಮೇಯಿಸತಕ್ಕವನಾದನು.