ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 11, 2019

Mahabharata Tatparya Nirnaya Kannada 1501_1505


. ಪಾಣ್ಡವಶಸ್ತ್ರಾಭ್ಯಾಸಃ


ಓಂ ॥
ಏವಂ ಪ್ರಶಾಸತಿ ಜಗತ್ ಪುರುಶೋತ್ತಮೇsಸ್ಮಿನ್ ಭೀಮಾರ್ಜ್ಜುನೌ ತು ಸಹದೇವಯುತಾವನುಜ್ಞಾಮ್
ಕೃಷ್ಣಾದವಾಪ್ಯ ವರ್ಷತ್ರಿತಯಾತ್ ಪುರಂ ಸ್ವಮಾಜಗ್ಮತುರ್ಹರಿಸುತೇನ ವಿಶೋಕನಾಮ್ನಾ ೧೫.೦೧

ಈರೀತಿಯಾಗಿ ಪುರುಷೋತ್ತಮನಾದ ಶ್ರೀಕೃಷ್ಣನು ಜಗತ್ತನ್ನು ಆಳುತ್ತಿರಲು, ಸಹದೇವನಿಂದ ಕೂಡಿದ ಭೀಮಾರ್ಜುನರಾದರೋ, ಮೂರು ವರ್ಷ ಕಳೆದಮೇಲೆ, ಶ್ರೀಕೃಷ್ಣನ ಅನುಜ್ಞೆಯನ್ನು ಪಡೆದು, ಪರಮಾತ್ಮನ ಮಗನಾದ ವಿಶೋಕ ಎಂಬುವವನಿಂದ ಕೂಡಿಕೊಂಡು ತಮ್ಮ ಪಟ್ಟಣವಾದ ಹಸ್ತಿನಾವತಿಗೆ ಬಂದರು.

ಸೈರನ್ಧ್ರಿಕೋದರಭವಃ ಸ ತು ನಾರದಸ್ಯ ಶಿಷ್ಯೋ ವೃಕೋದರರಥಸ್ಯ ಭಭೂವ ಯನ್ತಾ
ಯಾ ಪಿಙ್ಗಲಾsನ್ಯಭವ ಆತ್ಮನಿ ಸಂಸ್ಥಿತಂ ತಂ ಸಂಸ್ಮೃತ್ಯ ಕಾನ್ತಮುರುಗಾಯಮಭೂತ್ ತ್ರಿವಕ್ರಾ ೧೫.೦೨

ಆ ವಿಶೋಕನು ಸೈರನ್ಧ್ರಿ ತ್ರಿವಕ್ರೆಯಲ್ಲಿ ಪರಮಾತ್ಮನಿಂದ ಹುಟ್ಟಿದವನು. ನಾರದರ ಶಿಷ್ಯನಾಗಿರುವ ಆತ ಭೀಮಸೇನನ ಸಾರಥಿಯಾದನು. ಯಾರು ಹೋದಜನ್ಮದಲ್ಲಿ ಪಿಂಗಲೆಯಾಗಿದ್ದಳೋ, ಅವಳೇ  ತನ್ನೊಳಗಿರುವ, ದೊಡ್ಡವರಿಂದಲೂ ಕೂಡಾ ಸ್ತೋತ್ರಮಾಡಲ್ಪಡುವ ನಾರಾಯಣನನ್ನು ತನ್ನ ಗಂಡ ಎಂದು ಸ್ಮರಣೆಮಾಡಿ, ಈಜನ್ಮದಲ್ಲಿ ತ್ರಿವಕ್ರೆಯಾಗಿ ಹುಟ್ಟಿದ್ದಳು.

ತಂ ಪಞ್ಚರಾತ್ರವಿದಮಾಪ್ಯ ಸುಷಾರಥಿಂ ಸ ಭೀಮೋ ಮುಮೋದ ಪುನರಾಪ ಪರಾತ್ಮವಿದ್ಯಾಮ್
ವ್ಯಾಸಾತ್ ಪರಾತ್ಮತ ಉವಾಚ ಚ ಫಲ್ಗುನಾದಿದೈವೇಷು ಸರ್ವವಿಜಯೀ ಪರವಿದ್ಯಯೈಷಃ ೧೫.೦೩

ಭೀಮಸೇನನು ಪಂಚರಾತ್ರವನ್ನು ತಿಳಿದಿದ್ದ ವಿಶೋಕನನ್ನು ಸಾರಥಿಯಾಗಿ ಪಡೆದು ಸಂತಸಪಟ್ಟನು. ಅಂತಹ ಭೀಮಸೇನನು ವೇದವ್ಯಾಸರೂಪಿ ಪರಮಾತ್ಮನಿಂದ ಪರವಿದ್ಯೆಯನ್ನು ಮತ್ತೆ ಪಡೆದನು. (ವೇದವ್ಯಾಸರ ಶಿಷ್ಯನೂ ಆಗಿದ್ದ ಎಂದರ್ಥ). ಪರವಿದ್ಯೆಯಿಂದ ಎಲ್ಲರನ್ನೂ ಗೆದ್ದಿದ್ದ ಮತ್ತು ಎಲ್ಲರಿಗಿಂತಲೂ ಮಿಗಿಲಾಗಿದ್ದ ಭೀಮಸೇನನು,  ಅರ್ಜುನನೇ ಮೊದಲಾದ ದೈವಿಕ ಸ್ವಭಾವವುಳ್ಳವರಿಗೆ ಉಪದೇಶ ನೀಡಿದ ಕೂಡಾ.

ಸರ್ವಾನಭಾಗವತಶಾಸ್ತ್ರಪಥಾನ್ ವಿಧೂಯ ಮಾರ್ಗ್ಗಂ ಚಕಾರ ಸ ತು ವೈಷ್ಣವಮೇವ ಶುಭ್ರಮ್
ಕ್ರೀಡಾರ್ತ್ಥಮೇವ ವಿಜಿಗಾಯ ತಥೋಭಯಾತ್ಮಯುದ್ಧೇ ಬಲಂ ಚ ಕರವಾಕ್ಪ್ರಭವೇsಮಿತಾತ್ಮಾ ೧೫.೦೪

ಭೀಮಸೇನನು ಭಾಗವತ ಶಾಸ್ತ್ರವಲ್ಲದ ಇತರ ಎಲ್ಲಾರೀತಿಯ ಮಾರ್ಗಗಳನ್ನು ನಿರಾಕರಣೆ ಮಾಡಿ, ವಿಷ್ಣುಸಂಬಂಧಿಯಾದ ಉತ್ಕೃಷ್ಟ ಮಾರ್ಗದ ಶಾಸ್ತ್ರವನ್ನು ಊರ್ಜಿತ ಮಾಡಿದನು. ಹಾಗೆಯೇ, ಎರಡೂ ತರಹದ ಯುದ್ಧದಲ್ಲಿ(ಬಾಹು ಮತ್ತು ವಾಗ್ಯುದ್ಧ)  ಕ್ರೀಡೆಗಾಗಿಯೇ ಎಲ್ಲರನ್ನೂ ಭೀಮಸೇನ ಗೆದ್ದ.

ನಿತ್ಯಪ್ರಭೂತಸುಶುಭಪ್ರತಿಭೋSಪಿ ವಿಷ್ಣೋಃ ಶ್ರುತ್ವಾ ಪರಾಂ ಪುನರಪಿ ಪ್ರತಿಭಾಮವಾಪ
ಕೋ ನಾಮ ವಿಷ್ಣ್ವನುಪಜೀವಕ ಆಸ ಯಸ್ಯ ನಿತ್ಯಾಶ್ರಯಾದಭಿಹಿತಾSಪಿ ರಮಾ ಸದಾ ಶ್ರೀಃ ೧೫.೦೫

ಭೀಮಸೇನನು ಯಾವಾಗಲೂ ಅತ್ಯಂತ ಮಂಗಳಕರವಾದ ಪ್ರತಿಭೆಯುಳ್ಳವನಾದರೂ ಕೂಡಾ, ಶ್ರೀಹರಿಯಿಂದ (ಶ್ರೀಕೃಷ್ಣ ಮತ್ತು ವೇದವ್ಯಾಸರೂಪಿ ಭಗವಂತನಿಂದ) ಪರವಿದ್ಯೆಯನ್ನು ಕೇಳಿ, ಇನ್ನೂ ಉತ್ಕೃಷ್ಟವಾದ ಜ್ಞಾನವಿಶೇಷವನ್ನು ಹೊಂದಿದನು.
ನಾರಾಯಣನನ್ನು ಉಪಜೀವಿಸಿಕೊಂಡಿಲ್ಲದವನು ಯಾರಿದ್ದಾನೆ ? ಯಾರೂ ಇಲ್ಲ.  ಪರಮಾತ್ಮನ ನಿತ್ಯಾಶ್ರಾಯದಿಂದಾಗಿಯೇ ಲಕ್ಷ್ಮೀದೇವಿಯೂ ಕೂಡಾ ಶ್ರೀಃ ಎಂದು ಹೇಳಲ್ಪಟ್ಟಿದ್ದಾಳೆ.  (ನಿತ್ಯ ಆಶ್ರಿತ ಆಗಿರುವುದರಿಂದ ಆಕೆಯನ್ನು ಶ್ರೀಃ ಎಂದು ಕರೆಯುತ್ತಾರೆ).
[ಹೀಗೆ ಭೀಮಸೇನನೂ, ಮೊದಲು ಪ್ರತಿಭೆ ಇದ್ದರೂ ಕೂಡಾ, ಪರಮಾತ್ಮನಿಂದಲೇ ಪ್ರತಿಭೆಯ ಹೆಚ್ಚಳವನ್ನು ಪಡೆದನು. ಇದನ್ನೇ ಮಧ್ವವಿಜಯದಲ್ಲಿ(೮.೪) ನಾರಾಯಣ ಪಂಡಿತರು ಮಧ್ವಾಚಾರ್ಯರ ಕುರಿತು  ಈ ರೀತಿ ವರ್ಣಿಸಿದ್ದಾರೆ: ಇತಿಹಾಸ ಸುಂದರ ಪುರಾಣ ಸೂತ್ರ ಸತ್ ಪ್ರಿಯ ಪಂಚರಾತ್ರ ನಿಜಭಾವ ಸಂಯುತಮ್ ಅಶೃಣೋದನಂತ ಹೃದನಂತ ತೋSಚಿರಾತ್ ಪರಮಾರ್ಥಮಪ್ಯಗಣಿತಾಗಮಾವಲೇಃ ಎಲ್ಲವನ್ನು ತಿಳಿದವರಾದರೂ ಕೂಡಾ ಮಧ್ವಾಚಾರ್ಯರು ಮತ್ತೆ ವೇದವ್ಯಾಸರಿಂದ ಎಲ್ಲವನ್ನೂ ಪಡೆದರು].

Sunday, December 8, 2019

Mahabharata Tatparya Nirnaya Kannada 14105_14112

ಕೃಷ್ಣೋsಥ ಚೌಪಗವಿಮುತ್ತಮನೀತಿಯುಕ್ತಂ ಸಮ್ಪ್ರೇಷಯನ್ನಿದಮುವಾಚ ಹ ಗೋಕುಲಾಯ
ದುಃಖಂ ವಿನಾಶಯ ವಚೋಭಿರರೇ ಮದೀಯೈರ್ನ್ನನ್ದಾದಿನಾಂ ವಿರಹಜಂ ಮಮ ಚಾsಶು ಯಾಹಿ ೧೪.೧೦೫

ಕೆಲವು ದಿವಸಗಳಾದಮೇಲೆ ಕೃಷ್ಣನು  ಉತ್ಕೃಷ್ಟವಾದ ನೀತಿಯನ್ನು ಹೊಂದಿರುವ ಉಪಗವ ಎಂಬ ಯಾದವನ ಮಗನಾದ ಉದ್ಧವನನ್ನು ಗೋಕುಲಕ್ಕೆ ಕಳುಹಿಸುತ್ತಾ ಹೇಳಿದ: ‘ಎಲೈ ಉದ್ಧವನೇ, ನನ್ನ ಮಾತುಗಳಿಂದ ನಂದ ಮೊದಲಾದವರಿಗೆ ನನ್ನ ವಿಯೋಗದಿಂದ ಬಂದ ದುಃಖವನ್ನು ನಾಶಗೊಳಿಸಲು ನೀನು ಶೀಘ್ರವಾಗಿ ಅಲ್ಲಿಗೆ ತೆರಳು’ ಎಂದು.

ಮತ್ತೋ ವಿಯೋಗ ಇಹ ಕಸ್ಯಚಿದಸ್ತಿ ನೈವ ಯಸ್ಮಾದಹಂ ತನುಭೃತಾಂ ನಿಹಿತೋsನ್ತರೇವ
ನಾಹಂ ಮನುಷ್ಯ ಇತಿ ಕುತ್ರಚ ವೋsಸ್ತು ಬುದ್ಧಿರ್ಬ್ರಹ್ಮೈವ ನಿರ್ಮ್ಮಲತಮಂ ಪ್ರವದನ್ತಿ ಮಾಂ ಹಿ ೧೪.೧೦೬

ಯಾವ ಕಾರಣದಿಂದ ನಾನು ಸಮಸ್ತ ದೇಹಿಗಳ ಒಳಗೇ ಇದ್ದೇನೋ, ಆ ಕಾರಣದಿಂದ ನನ್ನಿಂದ ವಿಯೋಗವು ಈ ಬ್ರಹ್ಮಾಂಡದಲ್ಲಿ ಯಾರಿಗೂ ಇಲ್ಲ. (ಸಮಸ್ತ ಜೀವರ ಹೃತ್ಕಮಲವಾಸಿಯಾದ ನನ್ನಿಂದ ಯಾರಿಗೂ ವಿಯೋಗವಿಲ್ಲ). ನಾನು ಮನುಷ್ಯ ಎಂದು ಎಲ್ಲಿಯೂ ಕೂಡಾ ನಿಮಗೆ ಬುದ್ಧಿಯು ಇರದಿರಲಿ. ಏಕೆಂದರೆ ನನ್ನನ್ನು ಯಾವುದೇ ದೋಷವಿಲ್ಲದ ಬ್ರಹ್ಮನೆಂದು ಹೇಳುತ್ತಾರಷ್ಟೇ.
ಶ್ರೀಕೃಷ್ಣ ಹಿಂದೆ ನಂದಗೋಕುಲದಲ್ಲಿ ನಡೆದಿದ್ದ ಕೆಲವು ದಿವ್ಯ ಘಟನೆಗಳನ್ನು ಉದ್ಧವನಿಗೆ  ಹೇಳಿ, ಅದನ್ನು ಗೋಕುಲವಾಸಿಗಳಿಗೆ ನೆನಪಿಸುವಂತೆ ಹೇಳುತ್ತಾನೆ: -  

ಪೂರ್ವಂ ಯದಾ ಹ್ಯಜಗರೋ ನಿಜಗಾರ ನನ್ದಂ ಸರ್ವೇ ನ ಶೇಕುರಥ ತತ್ಪ್ರವಿಮೋಕ್ಷಣಾಯ
ಮತ್ಪಾದಸಂಸ್ಪರ್ಶತಃ ಸ ತದಾsತಿದಿವ್ಯೋ ವಿದ್ಯಾಧರಸ್ತದುದಿತಂ ನಿಖಿಲಂ ಸ್ಮರನ್ತು ೧೪.೧೦೭

ಹಿಂದೆ, ಒಮ್ಮೆ ಹೆಬ್ಬಾವು ನಂದನನ್ನು ಹಿಡಿದಾಗ ಯಾರೂ ಕೂಡಾ  ಆ ಹೆಬ್ಬಾವಿನಿಂದ ನಂದನನ್ನು ಬಿಡುಗಡೆ ಮಾಡಲು ಸಮರ್ಥರಾಗಲಿಲ್ಲ. ಆದರೆ ನನ್ನ ಪಾದಸ್ಪರ್ಶದಿಂದ ಆ ಹೆಬ್ಬಾವು ಅತ್ಯಂತ ದಿವ್ಯವಾದ ವಿದ್ಯಾಧರನಾದ. ಈರೀತಿ ಶಾಪ ವಿಮೋಚನೆಗೊಂಡ ವಿದ್ಯಾಧರ ಆಗ ಹೇಳಿದ ಮಾತೆಲ್ಲವನ್ನೂ ಸ್ಮರಿಸಿರಿ.

ಪೂರ್ವಂ ಸ ರೂಪಮದತಃ ಪ್ರಜಹಾಸ ವಿಪ್ರಾನ್ ನಿತ್ಯಂ ತಪಃಕೃಶತರಾಙ್ಗಿರಸೋ ವಿರೂಪಾನ್
ತೈಃ ಪ್ರಾಪಿತಃ ಸಪದಿ ಸೋsಜಗರತ್ವಮೇವ ಮತ್ತೋ ನಿಜಾಂ ತನುಮವಾಪ್ಯ ಜಗಾದ ನನ್ದಮ್ ೧೪.೧೦೮

ಹಿಂದೆ, ವಿದ್ಯಾಧರನು ತನ್ನ ರೂಪಮದದಿಂದ ಬ್ರಾಹ್ಮಣರನ್ನು ಅಪಹಾಸ್ಯ ಮಾಡಿ ನಕ್ಕಿದ್ದ. ಯಾವಾಗಲೂ ತಪಸ್ಸಿನಿಂದ ಕೃಶರಾಗಿರುವ, ವಿರೂಪರಾಗಿರುವ, ಅಂಗಿರಸ ವಂಶದಲ್ಲಿ ಬಂದಿರುವ ಬ್ರಾಹ್ಮಣರನ್ನು  ಆತ ಅಪಹಾಸಮಾಡಿದ್ದ. ಅದರಿಂದಾಗಿ  ಅವನು ಕೂಡಲೇ ಹೆಬ್ಬಾವಿನ ರೂಪವನ್ನು ಪಡೆಯುವಂತಾಯಿತು. ಅಂತಹ ವಿದ್ಯಾಧರ  ಮತ್ತೆ ನನ್ನಿಂದ ತನ್ನ ಹಿಂದಿನ ದೇಹವನ್ನು ಪಡೆದ ಮತ್ತು ನಂದನನ್ನು ಕುರಿತು ಹೇಳಿದ:

[ವಿದ್ಯಾಧರನ ಕಥೆಯನ್ನು ಭಾಗವತದಲ್ಲಿ(೧೦.೩೨.೧೨-೧೬) ಕಾಣಬಹುದು: ಅಹಂ ವಿದ್ಯಾಧರಃ ಕಶ್ಚಿತ್ ಸುದರ್ಶನ ಇತಿ ಶ್ರುತಃ ಶ್ರಿಯಾ ಸ್ವರೂಪಸಂಪತ್ತ್ಯಾ ವಿಮಾನೇನಾಚರಂ ದಿಶಃ ಋಷೀನ್ ವಿರೂಪಾನಙ್ಗಿರಸಃ ಪ್ರಾಹಸಂ ರೂಪದರ್ಪಿತಃ  ತೈರಿಮಾಂ ಪ್ರಾಪಿತೋ ಯೋನಿಂ ಪ್ರಲಬ್ಧಃ ಸ್ವೇನ ಪಾಪ್ಮನಾ ಶಾಪೋ ಮೇಽನುಗ್ರಹಾಯೈವ ಕೃತಸ್ತೈಃ ಕರುಣಾತ್ಮಭಿಃ (ಅವರು ಶಾಪ ಕೊಟ್ಟರು. ಆದರೆ ಆ ಶಾಪದಿಂದ ಕರುಣೆಯನ್ನೇ ಮಾಡಿದರು. ಏಕೆಂದರೆ: ) ಯದಹಂ ಲೋಕಗುರುಣಾ ಪಾದಸ್ಪೃಷ್ಟೋ ಹತಾಶುಭಃ ತಂ ತ್ವಾಹಂ ಭವಭೀತಾನಾಂ ಪ್ರಪನ್ನಾನಾಂ ಭಯಾಪಹಮ್ ಆಪೃಚ್ಛೇ ಶಾಪನಿರ್ಮುಕ್ತಃ ಪಾದಸ್ಪರ್ಶಾದಮೀವಹನ್ ಪ್ರಪನ್ನೋಽಸ್ಮಿ ಮಹಾಯೋಗಿನ್ ಮಹಾಪುರುಷ ಸತ್ಪತೇ ಅನುಜಾನೀಹಿ ಮಾಂ ಕೃಷ್ಣ ಸರ್ವಲೋಕೇಶ್ವರೇಶ್ವರ’]

ವಿದ್ಯಾಧರನ ಮಾತನ್ನು ವಿವರಿಸುತ್ತಾರೆ-


ನಾಯಂ ನರೋ ಹರಿರಯಂ ಪರಮಃ ಪರೇಭ್ಯೋ ವಿಶ್ವೇಶ್ವರಃ ಸಕಲಕಾರಣ ಆತ್ಮತನ್ತ್ರಃ
ವಿಜ್ಞಾಯ ಚೈನಮುರುಸಂಸೃತಿತೋ ವಿಮುಕ್ತಾ ಯಾನ್ತ್ಯಸ್ಯ ಪಾದಯುಗಳಂ ಮುನಯೋ ವಿರಾಗಾಃ೧೪.೧೦೯

ಇವನು ಮನುಷ್ಯನಲ್ಲಾ. ಇವನು ಹರಿಯೇ. ಶ್ರೇಷ್ಠರಿಗಿಂತಲೂ ಕೂಡಾ ಶ್ರೇಷ್ಠ. ಜಗದೊಡೆಯ. ಎಲ್ಲಕ್ಕೂ ಕಾರಣ. ಸ್ವತಂತ್ರ. ವಿರಾಗಿಗಳಾದ ಮುನಿಗಳು ಇವನನ್ನು ತಿಳಿದು, ಉತ್ಕೃಷ್ಟವಾದ ಸಂಸಾರದಿಂದ ಬಿಡುಗಡೆಗೊಂಡು, ಇವನ ಜೋಡಿ ಪಾದಗಳನ್ನು ಹೊಂದುತ್ತಾರೆ.

ನನ್ದಂ ಯದಾ ಚ ಜಗೃಹೇ ವರುಣಸ್ಯ ದೂತಸ್ತತ್ರಾಪಿ ಮಾಂ ಜಲಪತೇರ್ಗ್ಗೃಹಮಾಶು ಯಾತಮ್
ಸಮ್ಪೂಜ್ಯ ವಾರಿಪತಿರಾಃ ವಿಮುಚ್ಚ್ಯ ನನ್ದಂ ನಾಯಂ ಸುತಸ್ತವ ಪುಮಾನ್ ಪರಮಃ ಸ ಏಷಃ ೧೪.೧೧೦

ಯಾವಾಗ ವರುಣನ ದೂತನು ನಂದನನ್ನು ಹಿಡಿದುಕೊಂಡನೋ, ಅಲ್ಲಿಯೂ ಕೂಡಾ, ವರುಣನ ಮನೆಗೆ ಹೊರಟಿದ್ದ ನನ್ನನ್ನು ವರುಣನು ಪೂಜಿಸಿ, ನಂದನನ್ನು ಬಿಡುಗಡೆಗೊಳಿಸಿ, ಹೇಳಿದ: ‘ಇವನು ನಿನ್ನ ಮಗನಲ್ಲಾ. ಇವನು ಉತ್ಕೃಷ್ಟನಾದ ಪುರುಷನೇ ಆಗಿದ್ದಾನೆ’ ಎಂದು.
[ಭಾಗವತದಲ್ಲಿ(೧೦.೨೬.೬-೭) ವರುಣನ ಮಾತಿನ ವಿವರವನ್ನು ಈ ರೀತಿ ವಿವರಿಸಲಾಗಿದೆ: : ನಮಸ್ತುಭ್ಯಂ ಭಗವತೇ ಬ್ರಹ್ಮಣೇ ಪರಮಾತ್ಮನೇ ನ ಯತ್ರ ಶ್ರೂಯತೇ ಮಾಯಾ ಲೋಕದೃಷ್ಟಿವಿಡಂಬನಾ ಅಜಾನತಾ ಮಾಮಕೇನ ಮೂಢೇನಾಕಾರ್ಯವೇದಿನಾ ಆನೀತೋಽಯಂ ತವ ಪಿತಾ ತತ್ ಪ್ರಭೋ ಕ್ಷಂತುಮರ್ಹಸಿ’. ]

ಸನ್ದರ್ಶಿತೋ ನನು ಮಯೈವ ವಿಕುಣ್ಠಲೋಕೋ ಗೋಜೀವಿನಾಂ ಸ್ಥಿತಿರಪಿ ಪ್ರವರಾ ಮದೀಯಾ
ಮಾನುಷ್ಯಬುದ್ಧಿಮಪನೇತುಮಜೇ ಮಯಿ ಸ್ಮ ತಸ್ಮಾನ್ಮಯಿ ಸ್ಥಿತಿಮವಾಪ್ಯ ಶಮಂ ಪ್ರಯಾನ್ತು೧೪.೧೧೧

ನನ್ನಿಂದಲೇ ಗೋಪಾಲಕರಿಗೆ ವೈಕುಂಠಲೋಕವು ತೋರಿಸಲ್ಪಟ್ಟಿತಷ್ಟೇ. ನನ್ನ ಉತ್ಕೃಷ್ಟವಾದ ಸ್ಥಿತಿಯು ಹೇಗಿದೆ ಎನ್ನುವುದನ್ನು ನಾನು ಗೋಪಾಲಕರಿಗೆ ತೋರಿಸಿದೆ. ಹೇಗೆ ‘ಎಂದೂ ಹುಟ್ಟದ’ ನನ್ನಲ್ಲಿ ‘ಮನುಷ್ಯ’ ಎಂಬ ಬುದ್ಧಿಯನ್ನು ನಾಶಮಾಡಲು, ನಂದಗೋಪಾ ಮೊದಲಾದವರಿಗೆ ಅತಿಶ್ರೇಷ್ಠವಾದ ನನ್ನ ಸ್ಥಿತಿಯು ಹಿಂದೆ ತೋರಿಸಲ್ಪಟ್ಟಿತೋ, ಅಂತಹ ನನ್ನಲ್ಲಿ,  ಇರುವಿಕೆಯನ್ನು ಹೊಂದಿ, ಅವರೆಲ್ಲರೂ ಶಾಂತಿಯನ್ನು ಹೊಂದಲಿ. (ಹೀಗೆ  ಈ ಎಲ್ಲಾ ಘಟನೆಗಳನ್ನು ನಂದಾದಿಗಳಿಗೆ ನೆನಪಿಸುವಂತೆ ಶ್ರೀಕೃಷ್ಣ ಉದ್ಧವನಿಗೆ ಹೇಳಿ ಕಳುಹಿಸಿದ)
[ಗೋಪಾಲಕರು ತನ್ನನ್ನು ತಿಳಿದಿಲ್ಲ, ಅದನ್ನು ತಿಳಿಸಬೇಕು ಎನ್ನುವ ಕೃಪೆಯಿಂದ ಭಗವಂತ ಅವರೆಲ್ಲರಿಗೆ ಯಮುನಾ ನದಿಯಲ್ಲಿ ಮುಳುಗಲು ಹೇಳಿ, ಅವರಿಗೆ ಎಲ್ಲವನ್ನೂ ಕೂಡಾ ತೋರಿಸಿದ ಎನ್ನುವ ವಿವರಣೆಯನ್ನು ಭಾಗವತದಲ್ಲಿ(೧೦.೨೬.೧೪-೧೭) ಕಾಣಬಹುದು: ದರ್ಶಯಾಮಾಸ ಲೋಕಂ ಸ್ವಂ ಗೋಪಾನಾಂ ತಮಸಃ ಪರಮ್ ಸತ್ಯಂ ಜ್ಞಾನಮನಂತಂ ಯದ್ ಬ್ರಹ್ಮ ಜ್ಯೋತಿಃ ಸನಾತನಮ್ ಯದ್ಧಿ ಪಶ್ಯಂತಿ ಮುನಯೋ ಗುಣಾಪಾಯೇ ಸಮಾಹಿತಾಃ ತೇ ತು ಬ್ರಹ್ಮಹ್ರದಂ ನೀತಾ ಮಗ್ನಾಃ ಕೃಷ್ಣಮಚಕ್ಷತ ದದೃಶುರ್ಬ್ರಹ್ಮಣೋ ರೂಪಂ ಯತ್ರಾಕ್ರೂರೋಽಧ್ಯಗಾತ್ ಪುರಾ ನಂದಾದಯಸ್ತು ತಂ ದೃಷ್ಟ್ವಾ ಪರಮಾನಂದನಿರ್ವೃತಾಃ  ಕೃಷ್ಣಂ ಚ ತತ್ರ ಚ್ಛಂದೋಭಿಃ ಸ್ತೂಯಮಾನಂ ಸುವಿಸ್ಮಿತಾಃ’  ]

ಶ್ರುತ್ವೋದ್ಧವೋ ನಿಗದಿತಂ ಪರಮಸ್ಯ ಪುಂಸೋ ವೃನ್ದಾವನಂ ಪ್ರತಿ ಯಯೌ ವಚನೈಶ್ಚ ತಸ್ಯ
ದುಃಖಂ ವ್ಯಪೋಹ್ಯ ನಿಖಿಲಂ ಪಶುಜೀವನಾನಾಮಾಯಾತ್ ಪುನಶ್ಚರಣಸನ್ನಿಧಿಮೇವ ವಿಷ್ಣೋಃ ೧೪.೧೧೨

ಉದ್ಧವನು ಪರಮಪುರುಷನ ಮಾತನ್ನು ಕೇಳಿ, ವೃನ್ದಾವನಕ್ಕೆ ತೆರಳಿದ. ತನ್ನ ಮಾತುಗಳಿಂದ ಗೋಪಾಲಕರ ಎಲ್ಲಾ ದುಃಖವನ್ನು ತೊಡೆದ ಆತ, ಮತ್ತೆ ಪರಮಾತ್ಮನ ಚರಣಸನ್ನಿಧಿಗೆ ಬಂದ.
[ಭಾಗವತದಲ್ಲಿ ಹೇಳುವಂತೆ: ‘ಉವಾಸ ದುಃಖೋಪಶಮಂ ಗೋಪೀನಾಂ  ವಿನುದನ್ ಶುಚಃ ಕೃಷ್ಣಲೀಲಾಕಥಾ ಗಾಯನ್ ರಮಯಾಮಾಸ ಗೋಕುಲಮ್ (೧೦.೪೬.೨) ಗೋಪಿಯರಿಗೆ ದುಃಖವನ್ನು ನಾಶಮಾಡಲೆಂದೇ, ಕೃಷ್ಣನ ಲೀಲೆಗಳನ್ನು ಹೇಳುತ್ತಾ ಸ್ವಲ್ಪಕಾಲ ಉದ್ಧವ ಅಲ್ಲಿ ವಾಸಮಾಡಿದ. ಅಥ ಗೋಪೀರನುಜ್ಞಾಪ್ಯ ಯಶೋದಾಂ ನಂದಮೇವ ಚ ಗೋಪಾನಾಮಂತ್ರ್ಯ ದಾಶಾರ್ಹೋ ಯಾಸ್ಯನ್ನಾರುರುಹೇ ರಥಂ(೧೦.೪೬.೧೨) ಎಲ್ಲಾ ಗೋಪಿಯರಲ್ಲಿ ತಾನು ಹೋಗಿ ಬರುತ್ತೇನೆ ಎಂದು ಹೇಳಿ, ಯಶೋದೆ ಹಾಗು ನಂದಗೋಪರ ಅನುಜ್ಞೆಯನ್ನು ಪಡೆದುಕೊಂಡ ಉದ್ಧವನು ಶ್ರೀಕೃಷ್ಣನಲ್ಲಿಗೆ ತೆರಳಲು ರಥವನ್ನೇರಿದನು].


ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಉದ್ಧವಪ್ರತಿಯಾನಂ ನಾಮ ಚತುರ್ದ್ದಶೋsದ್ಧ್ಯಾಯಃ

 

*********

Saturday, December 7, 2019

Mahabharata Tatparya Nirnaya Kannada 1496_14104

ಸೋsಯಾದ್ ಗಜಾಹ್ವಯಮಮುತ್ರ ವಿಚಿತ್ರವೀರ್ಯ್ಯಪುತ್ರೇಣ ಭೀಷ್ಮಸಹಿತೈಃ ಕುರುಭಿಃ ಸಮಸ್ತೈಃ
ಸಮ್ಪೂಜಿತಃ ಕತಿಪಯಾನವಸಚ್ಚ ಮಾಸಾನ್ ಜ್ಞಾತುಂ ಹಿ ಪಾಣ್ಡುಷು ಮನಃಪ್ರಸೃತಿಂ ಕುರೂಣಾಮ್ ೧೪.೯೬

ಗಜಾಹ್ವಯಕ್ಕೆ(ಹಸ್ತಿನಪುರಕ್ಕೆ) ತೆರಳಿ, ವಿಚಿತ್ರವೀರ್ಯಪುತ್ರನಾದ ಧೃತರಾಷ್ಟ್ರನಿಂದಲೂ, ಭೀಷ್ಮನಿಂದಲೂ ಕೂಡಿರುವ ಎಲ್ಲಾ ಕುರುಗಳಿಂದಲೂ ಪೂಜಿಸಲ್ಪಟ್ಟವನಾದ ಅಕ್ರೂರನು, ಪಾಂಡವರಲ್ಲಿ ಕುರುಗಳ ಮನಸ್ಸಿನ ಪ್ರಸಾದವನ್ನು ತಿಳಿಯಬೇಕೆಂದು, ಕೆಲವು ತಿಂಗಳುಗಳ ಕಾಲ ಅಲ್ಲೇ ವಾಸಮಾಡಿದನು.

ಜ್ಞಾತ್ವಾ ಸ ಕುನ್ತಿವಿದುರೋಕ್ತಿತ ಆತ್ಮನಾ ಚ ಮಿತ್ರಾರಿಮಧ್ಯಮಜನಾಂಸ್ತನಯೇಷು ಪಾಣ್ಡೋಃ
ವಿಜ್ಞಾಯ ಪುತ್ರವಶಗಂ ಧೃತರಾಷ್ಟ್ರಮಞ್ಜಃ  ಸಾಮ್ನೈವ ಭೇದಸಹಿತೇನ ಜಗಾದ ವಿದ್ವಾನ್ ೧೪.೯೭

ಜ್ಞಾನಿಯಾದ ಅಕ್ರೂರನು  ಕುಂತಿ ಹಾಗು ವಿದುರನ ಮಾತಿನಿಂದಲ್ಲದೇ, ತಾನೂ ಕೂಡಾ, ಪಾಂಡುವಿನ ಮಕ್ಕಳಿಗೆ ಮಿತ್ರರು ಯಾರು, ಶತ್ರುಗಳು ಯಾರು, ತಟಸ್ತರು ಯಾರು ಎಂದು ತಿಳಿದುಕೊಂಡ. ಧೃತರಾಷ್ಟ್ರನು ಚೆನ್ನಾಗಿ ಪುತ್ರವಶವಾಗಿದ್ದಾನೆ ಎನ್ನುವ ಸತ್ಯವನ್ನು ಅರಿತ ಅವನು ಭೇದದಿಂದ ಕೂಡಿದ ಸಾಮೋಪಾಯದಿಂದ ಮಾತನ್ನಾಡಿದ:

ಪುತ್ರೇಷು ಪಾಣ್ಡುತನಯೇಷು ಚ ಸಾಮ್ಯವೃತ್ತಿಃ ಕೀರ್ತ್ತಿಂಧರ್ಮ್ಮಮುರುಮೇಷಿ ತಥಾsರ್ತ್ಥಕಾಮೌ
ಪ್ರೀತಿಂ ಪರಾಂ ತ್ವಯಿ ಕರಿಷ್ಯತಿ ವಾಸುದೇವಃ ಸಾಕಂ ಸಮಸ್ತಯದುಭಿಃ ಸಹಿತಃ ಸುರಾದ್ಯೈಃ ೧೪.೯೮

‘ನಿನ್ನ ಮಕ್ಕಳೇ ಆಗಿರುವ ಪಾಂಡವರಲ್ಲಿ ಸಮಾನವಾದ ವೃತ್ತಿಯನ್ನು ಮಾಡಿದರೆ ಕೀರ್ತಿಯನ್ನೂ, ಉತ್ಕೃಷ್ಟವಾದ ಧರ್ಮವನ್ನೂ, ಹಾಗೆಯೇ ಅರ್ಥ-ಕಾಮಗಳನ್ನೂ ಹೊಂದುತ್ತೀಯ. ನೀನು ಇವರನ್ನು ಚೆನ್ನಾಗಿ ನೋಡಿಕೊಂಡರೆ ಎಲ್ಲಾ ದೇವತೆಗಳಿಂದ ಮತ್ತು ಯದುಗಳಿಂದ ಕೂಡಿರುವ ಕೃಷ್ಣನು ನಿನ್ನಲ್ಲಿ ಉತ್ಕೃಷ್ಟವಾದ ಪ್ರೀತಿಯನ್ನು ಮಾಡುತ್ತಾನೆ.

ಧರ್ಮ್ಮಾರ್ತ್ಥಕಾಮಸಹಿತಾಂ ಚ ವಿಮುಕ್ತಿಮೇಷಿ ತತ್ಪ್ರೀತಿತಃ ಸುನಿಯತಂ ವಿಪರೀತವೃತ್ತಿಃ
ಯಾಸ್ಯೇವ ರಾಜವರ ತತ್ಫಲವೈಪರೀತ್ಯಮಿತ್ಥಂ ವಚೋ ನಿಗದಿತಂ ತವ ಕಾರ್ಷ್ಣಮಧ್ಯ ೧೪.೯೯

ಧರ್ಮ-ಅರ್ಥ-ಕಾಮ ಇವುಗಳಿಂದ ಕೂಡಿರುವ ಮುಕ್ತಿಯನ್ನು ಪರಮಾತ್ಮನ ಪ್ರೀತಿಯ ದೆಸೆಯಿಂದಾಗಿ ಖಂಡಿತವಾಗಿ  ಹೊಂದುತ್ತೀಯ. ಇದಕ್ಕೆ ವಿಪರೀತವಾದ ವೃತ್ತಿಯನ್ನು ಮಾಡಿದರೆ, ಎಲೈ ರಾಜಶ್ರೇಷ್ಠನೇ, ಇಲ್ಲಿಯೂ ಇಲ್ಲಾ-ಅಲ್ಲಿಯೂ ಇಲ್ಲವಾಗುವಂತಹ (ಇಲ್ಲಿ ಧರ್ಮ-ಅರ್ಥ-ಕಾಮವಿಲ್ಲಾ, ಅಲ್ಲಿ ಮುಕ್ತಿ ಇಲ್ಲಾ. ಅಂತಹ) ಫಲವೈಪರೀತ್ಯವನ್ನು ಹೊಂದುವೆ.  ಈ ರೀತಿಯಾದ ಶ್ರೀಕೃಷ್ಣನ ಮಾತನ್ನೇ ನಾನು ನಿನಗಾಗಿ ಹೇಳಿದ್ದೇನೆ’.
  
ಇತ್ಥಂ ಸಮಸ್ತಕುರುಮದ್ಧ್ಯ  ಉಪಾತ್ತವಾಕ್ಯೋ ರಾಜಾsಪಿ ಪುತ್ರವಶಗೋ ವಚನಂ ಜಗಾದ
ಸರ್ವಂ ವಶೇ ಭಗವತೋ ನ ವಯಂ ಸ್ವತನ್ತ್ರಾ ಭೂಭಾರಸಂಹೃತಿಕೃತೇ ಸ ಇಹಾವತೀರ್ಣ್ಣಃ ೧೪.೧೦೦

ಈರೀತಿಯಾಗಿ ಎಲ್ಲಾ ಕುರುಗಳ ಮಧ್ಯದಲ್ಲಿ ಕೃಷ್ಣನಿಂದ ಹೇಳಲ್ಪಟ್ಟ ಮಾತನ್ನು ಅಕ್ರೂರನಿಂದ ಕೇಳಿಸಿಕೊಂಡೂ ಕೂಡಾ, ಧೃತರಾಷ್ಟ್ರನು ಪುತ್ರವಶನಾಗಿ ಮಾತನಾಡುತ್ತಾನೆ: ‘ಎಲ್ಲವೂ ಪರಮಾತ್ಮನ ವಶದಲ್ಲಿದೆ. ನಾವು ಸ್ವತಂತ್ರರಲ್ಲಾ. ಭೂಭಾರ ಸಂಹಾರ ಮಾಡಲಿಕ್ಕಾಗಿ ಅವನು ಇಲ್ಲಿ ಅವತಾರ ಮಾಡಿದವನಲ್ಲವೇ?’

ಏತನ್ನಿಶಮ್ಯ ವಚನಂ ಸ ತು ಯಾದವೋsಸ್ಯ ಜ್ಞಾತ್ವಾ ಮನೋsಸ್ಯ ಕಲುಷಂ ತವ ನೈವ ಪುತ್ರಾಃ
ಇತ್ಯೂಚಿವಾನ್ ಸಹ ಮರುತ್ತನಯಾರ್ಜ್ಜುನಾಭ್ಯಾಂ ಪ್ರಾಯಾತ್ ಪುರೀಂ ಚ ಸಹದೇವಯುತಃ ಸ್ವಕೀಯಾಮ್ ೧೪.೧೦೧

ಧೃತರಾಷ್ಟ್ರನ ಮಾತನ್ನು ಕೇಳಿದ ಅಕ್ರೂರನು ಅವನ ಮನಸ್ಸು ಕೊಳೆಯಾಗಿದೆ ಎಂಬುದನ್ನು ತಿಳಿದು, ‘ನಿನ್ನ ಮಕ್ಕಳು ಖಂಡಿತವಾಗಿ ಒಳ್ಳೆಯ ಕೀರ್ತಿಯನ್ನು ಪಡೆಯಲಾರರು’  ಎಂದು ಹೇಳಿ,  ಭೀಮಾರ್ಜುನರು ಹಾಗೂ  ಸಹದೇವನಿಂದ ಕೂಡಿಕೊಂಡು ಮಧುರಾ ಪಟ್ಟಣದತ್ತ ತೆರಳಿದನು.

ಜ್ಞಾನಂ ತು ಭಾಗವತಮುತ್ತಮಮಾತ್ಮಯೋಗ್ಯಂ ಭೀರ್ಮಾರ್ಜ್ಜುನೌ ಭಗವತಃ ಸಮವಾಪ್ಯ ಕೃಷ್ಣಾತ್

ತತ್ರೋಷತುರ್ಭಗವತಾ ಸಹ ಯುಕ್ತಚೇಷ್ಟೌ ಸಮ್ಪೂಜಿತೌ ಯದುಭಿರುತ್ತಮಕರ್ಮ್ಮಸಾರೌ ೧೪.೧೦೨

ಭೀಮಾರ್ಜುನರು ಆ ಮಧುರಾ ಪಟ್ಟಣದಲ್ಲಿ ಭಗವಾನ್ ಕೃಷ್ಣನಿಂದ, ಉತ್ಕೃಷ್ಟವಾದ, ತಮ್ಮ ಯೋಗ್ಯತೆಗೆ ಅನುಗುಣವಾದ, ಭಗವತ್ಸಂಬಂಧಿಯಾದ ಜ್ಞಾನವನ್ನು ಹೊಂದಿ, ಅಲ್ಲಿಯೇ ವಾಸಮಾಡಿದರು. ಉತ್ತಮ ಕ್ರಿಯೆಗಳುಳ್ಳವರಾದ ಅವರು, ಯದುಗಳಿಂದ ಉತ್ಕೃಷ್ಟವಾದ ಕರ್ಮವನ್ನು ಮಾಡುವವರಾಗಿ ಪೂಜಿಸಲ್ಪಟ್ಟರು. [ಸಮಸ್ತ ಯದುಗಳೂ ಕೂಡಾ ಅವರನ್ನು ಗೌರವದಿಂದ ಕಂಡರು].

ಪ್ರತ್ಯುದ್ಯಮೋ ಭಗವತಾsಪಿ ಭವೇದ್ ಗದಾಯಾಃ ಶಿಕ್ಷಾ ಯದಾ ಭಗವತಾ ಕ್ರಿಯತೇ ನಚೇಮಮ್
ಕುರ್ಯ್ಯಾಮಿತಿ ಸ್ಮ ಭಗವತ್ಸಮನುಜ್ಞಯೈವ ರಾಮಾದಶಿಕ್ಷದುರುಗಾಯಪುರಃ ಸ ಭೀಮಃ ೧೪.೧೦೩

‘ಯಾವಾಗ ಕೃಷ್ಣನಿಂದಲೇ ಗದೆಯ ಅಭ್ಯಾಸವು  ಮಾಡಲ್ಪಡುತ್ತದೋ, ಆಗ ಕೃಷ್ಣನ ಜೊತೆಗೆ  ಪ್ರತ್ಯುದ್ಯಮವೂ ಆಗುವುದು.(ಗದಾಭ್ಯಾಸವು ಪ್ರಹಾರ-ಪ್ರತಿಪ್ರಹಾರ ರೂಪವಾಗಿರುತ್ತದೆ) ಅದನ್ನು ನಾನು  ಮಾಡಲಾರೆ’ ಎಂದು, ಕೃಷ್ಣನ ಅನುಜ್ಞೆಯಿಂದಲೇ, ಕೃಷ್ಣನ ಸಮ್ಮುಖದಲ್ಲೇ ಭೀಮ ಬಲರಾಮನಿಂದ ಗದಾಭ್ಯಾಸ ಮಾಡಿದ (ಶಿಕ್ಷಣ ಪಡೆದ).
[ಮಹಾಭಾರತದ ಆದಿಪರ್ವದಲ್ಲಿ(೧೫೧.೫) ಈಕುರಿತ ವಿವರವನ್ನು ಕಾಣಬಹುದು. ಅಸಿಯುದ್ಧೇ ಗದಾಯುದ್ಧೇ ರಥಯುದ್ಧೇ ಚ ಪಾಣ್ಡವಃ ಸಙ್ಕರ್ಷಣಾದಶಿಕ್ಷದ್ ವೈ ಶಶ್ವಚ್ಛಿಕ್ಷಾಂ ವೃಕೋದರಃ].

ರಾಮೋsಪಿ ಶಿಕ್ಷಿತಮರೀನ್ದ್ರಧರಾತ್ ಪುರೋsಸ್ಯ ಭೀಮೇ ದದಾವಥ ವರಾಣಿ ಹರೇರವಾಪ
ಅಸ್ತ್ರಾಣಿ ಶಕ್ರತನಯಃ ಸಹದೇವ ಆರ ನೀತಿಂ ತಥೋದ್ಧವಮುಖಾತ್ ಸಕಲಾಮುದಾರಾಮ್ ೧೪.೧೦೪

ಬಲರಾಮನೂ ಕೂಡಾ ಕೃಷ್ಣನ ಎದುರಲ್ಲಿಯೇ  ತಾನು  ಕೃಷ್ಣನಿಂದ ಕಲಿತದ್ದನ್ನು ಭೀಮಸೇನನಿಗೆ ಕೊಟ್ಟ. ತದನಂತರ ಅರ್ಜುನನು ಪರಮಾತ್ಮನಿಂದ ಉತ್ಕೃಷ್ಟವಾದ ಅಸ್ತ್ರಗಳನ್ನು ಪಡೆದ. ಹಾಗೆಯೇ, ಉದ್ಧವನಿಂದ  ಸಹದೇವನು ಎಲ್ಲದರಿಂದ ಕೂಡಿರುವ ಉತ್ಕೃಷ್ಟವಾದ ನೀತಿಯನ್ನು(ನೀತಿಶಾಸ್ತ್ರವನ್ನು) ಪಡೆದ.