ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 27, 2019

Mahabharata Tatparya Nirnaya Kannada 1546_1550


ತದಾ ಕರ್ಣ್ಣೋsಥೈಕಲವ್ಯಶ್ಚ ದಿವ್ಯಾನ್ಯಸ್ತ್ರಾಣ್ಯಾಪ್ತುಂ ದ್ರೋಣಸಮೀಪಮೀಯತುಃ
ಸೂತೋ ನಿಷಾದ ಇತಿ ನೈತಯೋರದಾದಸ್ತ್ರಾಣಿ ವಿಪ್ರಃ ಸ ತು ರಾಮಶಿಷ್ಯಃ ೧೫.೪೬

ಆಗಲೇ ಕರ್ಣ ಹಾಗು ಏಕಲವ್ಯನೂ ಕೂಡಾ ದಿವ್ಯಾಸ್ತ್ರಗಳನ್ನು ಹೊಂದಲು ದ್ರೋಣಾಚಾರ್ಯರ ಸಮೀಪಕ್ಕೆ ಬಂದರು. ಆ ದ್ರೋಣಾಚಾರ್ಯರು ಯಾವ ಕಾರಣದಿಂದ ವಿಶೇಷವಾಗಿ ಪರಶುರಾಮನ ಶಿಷ್ಯರೇ ಆಗಿರುತ್ತಾರೋ, ಆದಕಾರಣ ಕರ್ಣ ಹಾಗು ಏಕಲವ್ಯನಿಗೆ ಸೂತಪುತ್ರ ಹಾಗೂ ನಿಷಾದ(ಬೇಡ) ಎನ್ನುವ ಕಾರಣಕ್ಕಾಗಿ ಅಸ್ತ್ರಗಳನ್ನು ಕೊಡಲಿಲ್ಲ.

ಕರ್ಣ್ಣೋsನವಾಪ್ಯ ನಿಜಮೀಪ್ಸಿತಮುಚ್ಚಮಾನೋ ಯಸ್ಮಾದವಾಪ ಪುರುಷೋತ್ತಮತೋsಸ್ತ್ರವೃನ್ದಮ್
ವಿಪ್ರೋsಪ್ಯಯಂ ತಮಜಮೇಮಿ ಭೃಗೋಃ ಕುಲೋತ್ಥಮಿತ್ಥಂ ವಿಚಿನ್ತ್ಯ ಸ ಯಯೌ ಭೃಗುಪಾಶ್ರಮಾಯಾ ೧೫.೪೭

ಕರ್ಣನು ತನ್ನ ಬಯಕೆಯನ್ನು ಹೊಂದದೇ, ಬಹಳ ಸ್ವಾಭಿಮಾನ ಉಳ್ಳವನಾಗಿ, ಯಾವ ಭೃಗುವಿನ ಕುಲದಲ್ಲಿ  ಹುಟ್ಟಿದ, ಪುರುಷೋತ್ತಮನಾದ ಪರಶುರಾಮದೇವರಿಂದ ದ್ರೋಣ  ಅಸ್ತ್ರಗಳನ್ನು ಪಡೆದನೋ, ಅಂತಹ ಪರಶುರಾಮನನ್ನು ಹೊಂದುತ್ತೇನೆ ಎಂದು ಚಿಂತಿಸಿ, ಪರಶುರಾಮದೇವರ ಆಶ್ರಮಕ್ಕೆ ತೆರಳಿದನು.

ಸ ಸರ್ವವೇತ್ತುಶ್ಚ ವಿಭೋರ್ಭಯೇನ ವಿಪ್ರೋsಹಮಿತ್ಯವದದಸ್ತ್ರವರಾತಿಲೋಭಾತ್
ಜಾನನ್ನಪಿ ಪ್ರದದಾವಸ್ಯ ರಾಮೋ ದಿವ್ಯಾನ್ಯಸ್ತ್ರಾಣ್ಯಖಿಲಾನ್ಯವ್ಯಯಾತ್ಮಾ ೧೫.೪೮

ಆ ಕರ್ಣನು ಎಲ್ಲವನ್ನೂ ಬಲ್ಲ ಪರಶುರಾಮದೇವರ ಭಯದಿಂದ, ಅಸ್ತ್ರಶ್ರೇಷ್ಠಗಳ ಅತಿಲೋಭದಿಂದಲೂ ಕೂಡಾ, ಪರಶುರಾಮನಲ್ಲಿ  ‘ನಾನು ಬ್ರಾಹ್ಮಣ’ ಎಂದು ಹೇಳಿದನು. ಎಲ್ಲವನ್ನೂ ತಿಳಿದರೂ ಕೂಡಾ, ಪರಶುರಾಮದೇವರು ಸಮಸ್ತ ಅಸ್ತ್ರವಿದ್ಯೆಗಳನ್ನು ಕರ್ಣನಿಗೆ ಉಪದೇಶ ನೀಡಿದರು.

ಕರ್ಣ ಸೂತಪುತ್ರ ಎಂದು ತಿಳಿದಿದ್ದರೂ ಕೂಡಾ ಪರಶುರಾಮದೇವರು ಅವನಿಗೆ ಏಕೆ ಉಪದೇಶ ನೀಡಿದರು ಎಂದರೆ-

ಅಸ್ತ್ರಜ್ಞಚೂಳಾಮಣಿಮಿನ್ದ್ರಸೂನುಂ ವಿಶ್ವಸ್ಯ ಹನ್ತುಂ ಧೃತರಾಷ್ಟ್ರಪುತ್ರಃ
ಏನಂ ಸಮಾಶ್ರಿತ್ಯ ದೃಢೋ ಭವೇತೇತ್ಯದಾಜ್ಜ್ಞಾತ್ವೈವಾಸ್ತ್ರಮಸ್ಮೈ ರಮೇಶಃ             ೧೫.೪೯

ಧೃತರಾಷ್ಟ್ರಪುತ್ರನು ಈ ಕರ್ಣನನ್ನು ಆಶ್ರಯಿಸಿ, ಅಸ್ತ್ರಗಳನ್ನು ಬಲ್ಲವರಲ್ಲೇ ಶ್ರೇಷ್ಠನಾದ ಅರ್ಜುನನನ್ನು  ಕೊಲ್ಲವುದಕ್ಕಾಗಿ, ವಿಶ್ವಾಸವಿಟ್ಟು ದೃಢನಾಗಲಿ ಎಂದೇ ಪರಶುರಾಮದೇವರು ಸಮಸ್ತ ಅಸ್ತ್ರಗಳನ್ನು ಕರ್ಣನಿಗೆ ನೀಡಿದರು.

ಜ್ಞಾನಂ ಚ ಭಾಗವತಮಪ್ಯಪರಾಶ್ಚ ವಿದ್ಯಾ ರಾಮಾದವಾಪ್ಯ ವಿಜಯಂ ಧನುರಗ್ರ್ಯಯಾನಮ್
ಅಬ್ದೈಶ್ಚತುರ್ಭಿರಥ ಚ ನ್ಯವಸತ್ ತದನ್ತೇ ಹಾತುಂ ನ ಶಕ್ತ ಉರುಗಾಯಮಿಮಂ ಸ ಕರ್ಣ್ಣಃ ೧೫.೫೦

ಆ ಕರ್ಣನು ನಾಲ್ಕು ವರ್ಷಗಳಲ್ಲಿ ಪರಮಾತ್ಮನ ಜ್ಞಾನವನ್ನು, ಉಳಿದ ವಿದ್ಯೆಗಳನ್ನು ರಾಮನಿಂದ ಪಡೆದು, ವಿಜಯವೆಂಬ ಬಿಲ್ಲನ್ನೂ, ಶ್ರೇಷ್ಠವಾದ ರಥವನ್ನೂ ಪಡೆದು, (ಎಲ್ಲವನ್ನೂ ಪಡೆದ ಮೇಲೂ ಕೂಡಾ) ಪರಮಾತ್ಮನನ್ನು ಬಿಡಲು ಶಕ್ತನಾಗದೇ ಅವರ ಸಮೀಪದಲ್ಲಿಯೇ ವಾಸಮಾಡಿದನು.

Mahabharata Tatparya Nirnaya Kannada 1541_1545


ಭೀಮಃ ಸಮಸ್ತಂ ಪ್ರತಿಭಾಬಲೇನ ಜಾನನ್ ಸ್ನೇಹಂ ತ್ವದ್ವಿತೀಯಂ ಕನಿಷ್ಠೇ
ದ್ರೋಣಸ್ಯ ಕೃತ್ವಾ ಸಕಲಾಸ್ತ್ರವೇದಿನಂ ಕರ್ತುಂ ಪಾರ್ತ್ಥಂ ನಾರ್ಜ್ಜುನವಚ್ಚಕಾರ ೧೫.೪೧

ತನ್ನಲ್ಲಿ ಸಮಸ್ತ ಪ್ರತಿಭಾಬಲ ಇದ್ದರೂ ಕೂಡಾ, ಅದನ್ನು ತೋರಿಸಿಕೊಳ್ಳದೇ, ಕನಿಷ್ಠನಾದ ಅರ್ಜುನನಿಗೆ ದ್ರೋಣರ ವಿಶೇಷ ಅನುಗ್ರಹವಾಗುವಂತೆ ಮಾಡಲು ಹಾಗೂ ಅವನನ್ನು ಎಲ್ಲಾ ಅಸ್ತ್ರಗಳನ್ನು ಬಲ್ಲವನನ್ನಾಗಿ ಮಾಡಬೇಕೆಂದು ಭೀಮಸೇನ   ಅರ್ಜುನನಂತೆ ತಾನು ಗುರುಗಳ ಸೇವೆಯನ್ನು ಮಾಡುತ್ತಿರಲಿಲ್ಲಾ.

ನೈವಾತಿಯತ್ನೇನ  ದದರ್ಶ ಲಕ್ಷಂ^ ಶುಶ್ರೂಷಾಯಾಂ ಪಾರ್ತ್ಥಮಗ್ರೇ ಕರೋತಿ
ಸ್ವಬಾಹುವೀರ್ಯ್ಯಾದ್ ಭಗವತ್ಪ್ರಸಾದಾನ್ನಿಹನ್ಮಿ ಶತ್ರೂನ್ ಕಿಮನೇನ ಚೇತಿ ೧೫.೪೨

ಭೀಮ ಅಷ್ಟೊಂದು ಯತ್ನದಿಂದ ಶರಪ್ರಯೋಗ ಮಾಡುತ್ತಿರಲಿಲ್ಲ, ಏಕೆಂದರೆ ಪಾರ್ಥನನ್ನು ದ್ರೋಣರ ಕಣ್ಣಲ್ಲಿ ದೊಡ್ಡವನನ್ನಾಗಿ ಮಾಡಬೇಕು ಎನ್ನುವ ಉದ್ದೇಶ ಅವನದ್ದಾಗಿತ್ತು. ಹಾಗಾಗಿ ಭೀಮ  ಸೇವೆಯಲ್ಲಿ ಅರ್ಜುನನನ್ನು ಮುಂದೆ ಮಾಡಿದ.
ತನ್ನ ಸಹಜವಾದ ಬಲದಿಂದ, ಪರಮಾತ್ಮನ ಅನುಗ್ರಹದಿಂದ ಶತ್ರುಗಳನ್ನು ಕೊಲ್ಲುತ್ತೇನೆ, ಇದರಿನ್ದೇನು(ಈ ಅಸ್ತ್ರಗಳಿಂದ ನನಗೇನಾಗಬೇಕು) ಎಂದು ಆತ ಅಸ್ತ್ರವಿದ್ಯೆಯಲ್ಲಿ ನಿಪುಣತೆಯನ್ನು ತೋರಲಿಲ್ಲ.(ಇದು ಭೀಮನ ಆಂತರ್ಯ)
[^ಇಲ್ಲಿ ‘ಲಕ್ಷ’ ಎನ್ನುವ ಪದ ಪ್ರಯೋಗವಾಗಿದೆ. ಅಭಿಧಾನ ಕೋಶದಲ್ಲಿ ಹೇಳಿರುವಂತೆ: ‘ಲಕ್ಷಂ ವ್ಯಾಜಶರವ್ಯಯೋಃ ಸಙ್ಖ್ಯಾಯಾಮಪಿ’.  ಲಕ್ಷ ಎನ್ನುವುದಕ್ಕೆ ವ್ಯಾಜ(ಗುರಿ), ಶರ(ಬಾಣ), ವ್ಯಯ, ಸಂಖ್ಯಾ, ಇತ್ಯಾದಿ ಅನೇಕ ಅರ್ಥಗಳಿವೆ. ಇಲ್ಲಿ ‘ಲಕ್ಷ’ ಎನ್ನುವುದನ್ನು ‘ಶರ’  ಎನ್ನುವ ಅರ್ಥದಲ್ಲಿ ಪ್ರಯೋಗ ಮಾಡಿದ್ದಾರೆ.]

ತದಾ ಸಮೀಯುಃ ಸಕಲಾಃ ಕ್ಷಿತೀಶಪುತ್ರಾ ದ್ರೋಣಾತ್ ಸಕಲಾಸ್ತ್ರಾಣ್ಯವಾಪ್ತುಮ್
ದದೌ ಸ ತೇಷಾಂ ಪರಮಾಸ್ತ್ರಾಣಿ ವಿಪ್ರೋ ರಾಮಾದವಾಪ್ತಾನ್ಯಗತಾನಿ ಚಾನ್ಯೈಃ             ೧೫.೪೩

ಆಗ ದ್ರೋಣಾಚಾರ್ಯರಿಂದ ಅಸ್ತ್ರಗಳನ್ನು ಪಡೆಯಲು ಎಲ್ಲಾ ರಾಜಕುಮಾರರೂ ಕೂಡಾ ಅಲ್ಲಿಗೆ ಬಂದರು. ಅವರೆಲ್ಲರಿಗೆ ದ್ರೋಣಾಚಾರ್ಯರು ಪರಶುರಾಮನಿಂದ ವಿಶೇಷವಾಗಿ ತಾನು ಪಡೆದ, ಇನ್ನೊಬ್ಬರಲ್ಲಿ ಈಗಾಗಲೇ ಇರದ ಅಸ್ತ್ರಗಳನ್ನು ಕೊಟ್ಟರು.

ಅಸ್ತ್ರಾಣಿ ಚಿತ್ರಾಣಿ ಮಹಾನ್ತಿ ದಿವ್ಯಾನ್ಯನ್ಯೈರ್ನೃಪೈರ್ಮ್ಮನಸಾsಪ್ಯಸ್ಮೃತಾನಿ 
ಅವಾಪ್ಯ ಸರ್ವೇ ತನಯಾ ನೃಪಾಣಾಂ ಶಕ್ತಾ ಬಭೂವುರ್ನ್ನ ಯಥೈವ ಪೂರ್ವೇ             ೧೫.೪೪

ಆಶ್ಚರ್ಯಕರವಾದ(ಮಹತ್ತರವಾಗಿರುವ), ಅಲೌಕಿಕವಾಗಿರುವ, ಬೇರೆ ರಾಜರಿಂದ ಮನಸ್ಸಿನಿಂದ ಚಿಂತಿಸಲೂ ಅಸಾಧ್ಯವಾದ ಅಸ್ತ್ರಗಳನ್ನು ಪಡೆದ ಆ ಎಲ್ಲಾ ರಾಜಕುಮಾರರೂ ಕೂಡಾ ಶಕ್ತರಾದರು. ಹಿಂದಿನವರಂತೆ  ಅಲ್ಲಾ(ಹಿಂದಿನವರಿಗಿಂತ ಅಧಿಕ. ಹಿಂದೆ ಯಾರೋ ಒಬ್ಬ ಬಲಿಷ್ಠನಿರುತ್ತಿದ್ದ, ಆದರೆ ಮಹಾಭಾರತ ಕಾಲದಲ್ಲಿ ಎಲ್ಲರೂ ಬಲಿಷ್ಠರಾಗಿರುವುದು ವಿಶೇಷ).

ನೈತಾದೃಶಾಃ ಪೂರ್ವಮಾಸನ್ ನರೇನ್ದ್ರಾ ಅಸ್ತ್ರೇ ಬಲೇ ಸರ್ವವಿದ್ಯಾಸು ಚೈವ
ದೌಷ್ಷನ್ತಿಮಾನ್ಧಾತೃಮರುತ್ತಪೂರ್ವಾಶ್ಚೈತತ್ಸಮಾನಾಃ ಸುರುದಾರವೀರ್ಯ್ಯಾಃ             ೧೫.೪೫

ಈರೀತಿಯಾಗಿ ಅಸ್ತ್ರದಲ್ಲಿ, ಬಲದಲ್ಲಿ, ಎಲ್ಲಾ ವಿದ್ಯೆಗಳಲ್ಲಿಯೂ ಕೂಡಾ, ದ್ರೋಣ ಶಿಷ್ಯರಿಗೆ ಸದೃಶರಾದ ರಾಜರು ಪೂರ್ವದಲ್ಲಿ ಇರಲಿಲ್ಲಾ. ಹೀಗೆ ಅವರು ಭರತ, ಮಾನ್ಧಾತೃ, ಮರುತ್ತರಾಜ ಮೊದಲಾದ ರಾಜರಿಗೆ   ಸಮನಾದರು.
[ಹಿಂದೆ ಅಸ್ತ್ರವಿದ್ಯೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಹಾಗಾಗಿ ಯಾರೋ ಒಬ್ಬರು ಅಸ್ತ್ರ ತಿಳಿದವರಾಗಿ ಬಲಿಷ್ಠರಾಗಿರುತ್ತಿದ್ದರು. ಆದರೆ ಮಹಾಭಾರತ ಕಾಲದಲ್ಲಿ ಪರಶುರಾಮದೇವರಿಂದ, ದ್ರೋಣರ ಮುಖೇನ ಹರಿದುಬಂದ ಅಸ್ತ್ರವಿದ್ಯೆಯಿಂದ ಎಲ್ಲರೂ ಬಲಿಷ್ಠರೆನಿಸಿದರು]

Thursday, December 26, 2019

Mahabharata Tatparya Nirnaya Kannada 1536_1540


ಉನ್ಮಾದನಾದೀನಿ ಸ ವೇದ ಕೃಷ್ಣಾದಸ್ತ್ರಾಣ್ಯನಾಪತ್ಸು ನ ತಾನಿ ಮುಞ್ಚೇತ್
ಇತ್ಯಾಜ್ಞಯಾ ಕೇಶವಸ್ಯಾಪರಾಣಿ ಪ್ರಯೋಗಯೋಗ್ಯಾನಿ ಸದೇಚ್ಛತಿ ಸ್ಮ ೧೫.೩೬

ಅರ್ಜುನನು ಉನ್ಮಾದನಾದಿ ಅಸ್ತ್ರಗಳನ್ನು ಕೃಷ್ಣನಿಂದ ಈಗಾಗಲೇ ತಿಳಿದಿದ್ದನಾದರೂ ಕೂಡಾ, ‘ಆಪತ್ತು ಇಲ್ಲದಿರಬೇಕಾದರೆ ಆ ಅಸ್ತ್ರಗಳನ್ನು ಪ್ರಯೋಗಿಸಬಾರದು ಎನ್ನುವ ಶ್ರೀಕೃಷ್ಣನ ಆಜ್ಞೆಯಿಂದಾಗಿ  ಬೇರೆ ಪ್ರಯೋಗ ಯೋಗ್ಯವಾದ ಅಸ್ತ್ರಗಳನ್ನು ಯಾವಾಗಲೂ ಬಯಸುತ್ತಿದ್ದ.

ಭೀಷ್ಮಾದಿಭಿರ್ಭವಿತಾ ಸಙ್ಗರೋ ನಸ್ತದಾ ನಾಹಂ ಗುರುಭಿರ್ನ್ನಿತ್ಯಯೋದ್ಧಾ
ಭವೇಯಮೇಕಃ ಫಲ್ಗುನೋsಸ್ತ್ರಜ್ಞ ಏಷಾಂ ನಿವಾರಕಶ್ಚೇನ್ಮಮ ಧರ್ಮ್ಮಲಾಭಃ             ೧೫.೩೭

ನ ಬುದ್ಧಿಪೂರ್ವಂ ವರ ಇನ್ದಿರಾಪತೇರನ್ಯತ್ರ ಮೇ ಗ್ರಾಹ್ಯ ಇತಶ್ಚ ಜಿಷ್ಣುಃ
ಕರೋತು ಗುರ್ವರ್ತ್ಥಮಿತಿ ಸ್ಮ ಚಿನ್ತಯನ್ ಭೀಮಃ ಪ್ರತಿಜ್ಞಾಂ ನ ಚಕಾರ ತತ್ರ             ೧೫.೩೮

‘ಭೀಷ್ಮ ಮೊದಲಾದವರೊಂದಿಗೆ ಮುಂದೆ ಯುದ್ಧವಾಗಲಿದ್ದು ಆಗ ಗುರು-ಹಿರಿಯರಾದ ಅವರೊಂದಿಗೆ ನಾನೆಂದಿಗೂ ಯುದ್ಧಮಾಡುವುದಿಲ್ಲ. ಹಾಗಾಗಿ, ಅಸ್ತ್ರಗಳನ್ನು ತಿಳಿದಿರುವ ಅರ್ಜುನ ಭೀಷ್ಮಾದಿಗಳನ್ನು ನಿವಾರಣಮಾಡತಕ್ಕವನಾದರೆ  ಅದರಿಂದ ನನಗೆ ಧರ್ಮಲಾಭವಾಗುತ್ತದೆ’.  ಇದಲ್ಲದೇ, ‘ಇನ್ದಿರಾಪತಿ ನಾರಾಯಣನಿಗಿಂತ ಹೊರತಾಗಿ  ಬೇರೆಯವರಿಂದ ಬುದ್ಧಿಪೂರ್ವಕವಾಗಿ ನಾನು ವರವನ್ನು ಪಡೆಯಬಾರದು’ ಎಂಬ ಈ ಎರಡು ಕಾರಣಗಳಿಂದ ‘ಅರ್ಜುನನೇ ಗುರುಗಳಿಗಾಗಿ ಪ್ರತಿಜ್ಞೆಯನ್ನು ಮಾಡಲಿ’ ಎಂದು ಚಿಂತಿಸಿದ ಭೀಮನು, ಆಗ ಯಾವುದೇ ಪ್ರತಿಜ್ಞೆಯನ್ನು ಮಾಡಲಿಲ್ಲ.

ತತ್ಪ್ರೇರಿತೇನಾರ್ಜ್ಜುನೇನ ಪ್ರತಿಜ್ಞಾ ಕೃತಾ ಯದಾ ವಿಪ್ರವರಸ್ತತಃ ಪರಮ್
ಸ್ನೇಹಂ ನಿತಾನ್ತಂ ಸುರರಾಜಸೂನೌ ಕೃತ್ವಾ ಮಹಾಸ್ತ್ರಾಣಿ ದದೌ ಸ ತಸ್ಯ             ೧೫.೩೯

ಭೀಮಸೇನನಿಂದ ಪ್ರೇರಿತನಾದ ಅರ್ಜುನನಿಂದ ಯಾವಾಗ ಪ್ರತಿಜ್ಞೆ ಮಾಡಲ್ಪಪಟ್ಟಿತೋ, ಅದಾದ ನಂತರ ದ್ರೋಣಾಚಾರ್ಯರು ಇಂದ್ರನ ಮಗನಾದ ಅರ್ಜುನನಲ್ಲಿ ಆತ್ಯಂತಿಕವಾದ  ಪ್ರೀತಿಯಿಟ್ಟು, ಅವನಿಗೆ   ಮಹಾಸ್ತ್ರಗಳನ್ನು ನೀಡಿದರು.

ಸ ಪಕ್ಷಪಾತಂ ಚ ಚಕಾರ ತಸ್ಮಿನ್ ಕರೋತಿ ಚಾಸ್ಯೋರುತರಾಂ ಪ್ರಶಂಸಾಮ್
ರಹಸ್ಯವಿದ್ಯಾಶ್ಚ ದದಾತಿ ತಸ್ಯ ನಾನ್ಯಸ್ಯ ಕಸ್ಯಾಪಿ ತಥಾ ಕಥಞ್ಚಿತ್ ೧೫.೪೦

ದ್ರೋಣಾಚಾರ್ಯರು ಅರ್ಜುನನಲ್ಲಿ ಅತ್ಯಂತ ಪಕ್ಷಪಾತವನ್ನು ಮಾಡಿಕೊಂಡು, ಅವನನ್ನು ಆತ್ಯಂತಿಕವಾಗಿ  ಹೊಗಳಿಕೆ ಮಾಡುತ್ತಿದ್ದರು. ಅವನಿಗೆ ಅನೇಕ ರಹಸ್ಯ ವಿದ್ಯೆಗಳನ್ನೂ ಕೂಡಾ ಉಪದೇಶಿಸಿದ ಅವರು, ಅರ್ಜುನನಂತೆ ಉಳಿದವರಿಗೆ ಏನನ್ನೂ ಕೊಡುತ್ತಿರಲಿಲ್ಲ.