ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 27, 2019

Mahabharata Tatparya Nirnaya Kannada 1546_1550


ತದಾ ಕರ್ಣ್ಣೋsಥೈಕಲವ್ಯಶ್ಚ ದಿವ್ಯಾನ್ಯಸ್ತ್ರಾಣ್ಯಾಪ್ತುಂ ದ್ರೋಣಸಮೀಪಮೀಯತುಃ
ಸೂತೋ ನಿಷಾದ ಇತಿ ನೈತಯೋರದಾದಸ್ತ್ರಾಣಿ ವಿಪ್ರಃ ಸ ತು ರಾಮಶಿಷ್ಯಃ ೧೫.೪೬

ಆಗಲೇ ಕರ್ಣ ಹಾಗು ಏಕಲವ್ಯನೂ ಕೂಡಾ ದಿವ್ಯಾಸ್ತ್ರಗಳನ್ನು ಹೊಂದಲು ದ್ರೋಣಾಚಾರ್ಯರ ಸಮೀಪಕ್ಕೆ ಬಂದರು. ಆ ದ್ರೋಣಾಚಾರ್ಯರು ಯಾವ ಕಾರಣದಿಂದ ವಿಶೇಷವಾಗಿ ಪರಶುರಾಮನ ಶಿಷ್ಯರೇ ಆಗಿರುತ್ತಾರೋ, ಆದಕಾರಣ ಕರ್ಣ ಹಾಗು ಏಕಲವ್ಯನಿಗೆ ಸೂತಪುತ್ರ ಹಾಗೂ ನಿಷಾದ(ಬೇಡ) ಎನ್ನುವ ಕಾರಣಕ್ಕಾಗಿ ಅಸ್ತ್ರಗಳನ್ನು ಕೊಡಲಿಲ್ಲ.

ಕರ್ಣ್ಣೋsನವಾಪ್ಯ ನಿಜಮೀಪ್ಸಿತಮುಚ್ಚಮಾನೋ ಯಸ್ಮಾದವಾಪ ಪುರುಷೋತ್ತಮತೋsಸ್ತ್ರವೃನ್ದಮ್
ವಿಪ್ರೋsಪ್ಯಯಂ ತಮಜಮೇಮಿ ಭೃಗೋಃ ಕುಲೋತ್ಥಮಿತ್ಥಂ ವಿಚಿನ್ತ್ಯ ಸ ಯಯೌ ಭೃಗುಪಾಶ್ರಮಾಯಾ ೧೫.೪೭

ಕರ್ಣನು ತನ್ನ ಬಯಕೆಯನ್ನು ಹೊಂದದೇ, ಬಹಳ ಸ್ವಾಭಿಮಾನ ಉಳ್ಳವನಾಗಿ, ಯಾವ ಭೃಗುವಿನ ಕುಲದಲ್ಲಿ  ಹುಟ್ಟಿದ, ಪುರುಷೋತ್ತಮನಾದ ಪರಶುರಾಮದೇವರಿಂದ ದ್ರೋಣ  ಅಸ್ತ್ರಗಳನ್ನು ಪಡೆದನೋ, ಅಂತಹ ಪರಶುರಾಮನನ್ನು ಹೊಂದುತ್ತೇನೆ ಎಂದು ಚಿಂತಿಸಿ, ಪರಶುರಾಮದೇವರ ಆಶ್ರಮಕ್ಕೆ ತೆರಳಿದನು.

ಸ ಸರ್ವವೇತ್ತುಶ್ಚ ವಿಭೋರ್ಭಯೇನ ವಿಪ್ರೋsಹಮಿತ್ಯವದದಸ್ತ್ರವರಾತಿಲೋಭಾತ್
ಜಾನನ್ನಪಿ ಪ್ರದದಾವಸ್ಯ ರಾಮೋ ದಿವ್ಯಾನ್ಯಸ್ತ್ರಾಣ್ಯಖಿಲಾನ್ಯವ್ಯಯಾತ್ಮಾ ೧೫.೪೮

ಆ ಕರ್ಣನು ಎಲ್ಲವನ್ನೂ ಬಲ್ಲ ಪರಶುರಾಮದೇವರ ಭಯದಿಂದ, ಅಸ್ತ್ರಶ್ರೇಷ್ಠಗಳ ಅತಿಲೋಭದಿಂದಲೂ ಕೂಡಾ, ಪರಶುರಾಮನಲ್ಲಿ  ‘ನಾನು ಬ್ರಾಹ್ಮಣ’ ಎಂದು ಹೇಳಿದನು. ಎಲ್ಲವನ್ನೂ ತಿಳಿದರೂ ಕೂಡಾ, ಪರಶುರಾಮದೇವರು ಸಮಸ್ತ ಅಸ್ತ್ರವಿದ್ಯೆಗಳನ್ನು ಕರ್ಣನಿಗೆ ಉಪದೇಶ ನೀಡಿದರು.

ಕರ್ಣ ಸೂತಪುತ್ರ ಎಂದು ತಿಳಿದಿದ್ದರೂ ಕೂಡಾ ಪರಶುರಾಮದೇವರು ಅವನಿಗೆ ಏಕೆ ಉಪದೇಶ ನೀಡಿದರು ಎಂದರೆ-

ಅಸ್ತ್ರಜ್ಞಚೂಳಾಮಣಿಮಿನ್ದ್ರಸೂನುಂ ವಿಶ್ವಸ್ಯ ಹನ್ತುಂ ಧೃತರಾಷ್ಟ್ರಪುತ್ರಃ
ಏನಂ ಸಮಾಶ್ರಿತ್ಯ ದೃಢೋ ಭವೇತೇತ್ಯದಾಜ್ಜ್ಞಾತ್ವೈವಾಸ್ತ್ರಮಸ್ಮೈ ರಮೇಶಃ             ೧೫.೪೯

ಧೃತರಾಷ್ಟ್ರಪುತ್ರನು ಈ ಕರ್ಣನನ್ನು ಆಶ್ರಯಿಸಿ, ಅಸ್ತ್ರಗಳನ್ನು ಬಲ್ಲವರಲ್ಲೇ ಶ್ರೇಷ್ಠನಾದ ಅರ್ಜುನನನ್ನು  ಕೊಲ್ಲವುದಕ್ಕಾಗಿ, ವಿಶ್ವಾಸವಿಟ್ಟು ದೃಢನಾಗಲಿ ಎಂದೇ ಪರಶುರಾಮದೇವರು ಸಮಸ್ತ ಅಸ್ತ್ರಗಳನ್ನು ಕರ್ಣನಿಗೆ ನೀಡಿದರು.

ಜ್ಞಾನಂ ಚ ಭಾಗವತಮಪ್ಯಪರಾಶ್ಚ ವಿದ್ಯಾ ರಾಮಾದವಾಪ್ಯ ವಿಜಯಂ ಧನುರಗ್ರ್ಯಯಾನಮ್
ಅಬ್ದೈಶ್ಚತುರ್ಭಿರಥ ಚ ನ್ಯವಸತ್ ತದನ್ತೇ ಹಾತುಂ ನ ಶಕ್ತ ಉರುಗಾಯಮಿಮಂ ಸ ಕರ್ಣ್ಣಃ ೧೫.೫೦

ಆ ಕರ್ಣನು ನಾಲ್ಕು ವರ್ಷಗಳಲ್ಲಿ ಪರಮಾತ್ಮನ ಜ್ಞಾನವನ್ನು, ಉಳಿದ ವಿದ್ಯೆಗಳನ್ನು ರಾಮನಿಂದ ಪಡೆದು, ವಿಜಯವೆಂಬ ಬಿಲ್ಲನ್ನೂ, ಶ್ರೇಷ್ಠವಾದ ರಥವನ್ನೂ ಪಡೆದು, (ಎಲ್ಲವನ್ನೂ ಪಡೆದ ಮೇಲೂ ಕೂಡಾ) ಪರಮಾತ್ಮನನ್ನು ಬಿಡಲು ಶಕ್ತನಾಗದೇ ಅವರ ಸಮೀಪದಲ್ಲಿಯೇ ವಾಸಮಾಡಿದನು.

No comments:

Post a Comment