ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 27, 2019

Mahabharata Tatparya Nirnaya Kannada 1541_1545


ಭೀಮಃ ಸಮಸ್ತಂ ಪ್ರತಿಭಾಬಲೇನ ಜಾನನ್ ಸ್ನೇಹಂ ತ್ವದ್ವಿತೀಯಂ ಕನಿಷ್ಠೇ
ದ್ರೋಣಸ್ಯ ಕೃತ್ವಾ ಸಕಲಾಸ್ತ್ರವೇದಿನಂ ಕರ್ತುಂ ಪಾರ್ತ್ಥಂ ನಾರ್ಜ್ಜುನವಚ್ಚಕಾರ ೧೫.೪೧

ತನ್ನಲ್ಲಿ ಸಮಸ್ತ ಪ್ರತಿಭಾಬಲ ಇದ್ದರೂ ಕೂಡಾ, ಅದನ್ನು ತೋರಿಸಿಕೊಳ್ಳದೇ, ಕನಿಷ್ಠನಾದ ಅರ್ಜುನನಿಗೆ ದ್ರೋಣರ ವಿಶೇಷ ಅನುಗ್ರಹವಾಗುವಂತೆ ಮಾಡಲು ಹಾಗೂ ಅವನನ್ನು ಎಲ್ಲಾ ಅಸ್ತ್ರಗಳನ್ನು ಬಲ್ಲವನನ್ನಾಗಿ ಮಾಡಬೇಕೆಂದು ಭೀಮಸೇನ   ಅರ್ಜುನನಂತೆ ತಾನು ಗುರುಗಳ ಸೇವೆಯನ್ನು ಮಾಡುತ್ತಿರಲಿಲ್ಲಾ.

ನೈವಾತಿಯತ್ನೇನ  ದದರ್ಶ ಲಕ್ಷಂ^ ಶುಶ್ರೂಷಾಯಾಂ ಪಾರ್ತ್ಥಮಗ್ರೇ ಕರೋತಿ
ಸ್ವಬಾಹುವೀರ್ಯ್ಯಾದ್ ಭಗವತ್ಪ್ರಸಾದಾನ್ನಿಹನ್ಮಿ ಶತ್ರೂನ್ ಕಿಮನೇನ ಚೇತಿ ೧೫.೪೨

ಭೀಮ ಅಷ್ಟೊಂದು ಯತ್ನದಿಂದ ಶರಪ್ರಯೋಗ ಮಾಡುತ್ತಿರಲಿಲ್ಲ, ಏಕೆಂದರೆ ಪಾರ್ಥನನ್ನು ದ್ರೋಣರ ಕಣ್ಣಲ್ಲಿ ದೊಡ್ಡವನನ್ನಾಗಿ ಮಾಡಬೇಕು ಎನ್ನುವ ಉದ್ದೇಶ ಅವನದ್ದಾಗಿತ್ತು. ಹಾಗಾಗಿ ಭೀಮ  ಸೇವೆಯಲ್ಲಿ ಅರ್ಜುನನನ್ನು ಮುಂದೆ ಮಾಡಿದ.
ತನ್ನ ಸಹಜವಾದ ಬಲದಿಂದ, ಪರಮಾತ್ಮನ ಅನುಗ್ರಹದಿಂದ ಶತ್ರುಗಳನ್ನು ಕೊಲ್ಲುತ್ತೇನೆ, ಇದರಿನ್ದೇನು(ಈ ಅಸ್ತ್ರಗಳಿಂದ ನನಗೇನಾಗಬೇಕು) ಎಂದು ಆತ ಅಸ್ತ್ರವಿದ್ಯೆಯಲ್ಲಿ ನಿಪುಣತೆಯನ್ನು ತೋರಲಿಲ್ಲ.(ಇದು ಭೀಮನ ಆಂತರ್ಯ)
[^ಇಲ್ಲಿ ‘ಲಕ್ಷ’ ಎನ್ನುವ ಪದ ಪ್ರಯೋಗವಾಗಿದೆ. ಅಭಿಧಾನ ಕೋಶದಲ್ಲಿ ಹೇಳಿರುವಂತೆ: ‘ಲಕ್ಷಂ ವ್ಯಾಜಶರವ್ಯಯೋಃ ಸಙ್ಖ್ಯಾಯಾಮಪಿ’.  ಲಕ್ಷ ಎನ್ನುವುದಕ್ಕೆ ವ್ಯಾಜ(ಗುರಿ), ಶರ(ಬಾಣ), ವ್ಯಯ, ಸಂಖ್ಯಾ, ಇತ್ಯಾದಿ ಅನೇಕ ಅರ್ಥಗಳಿವೆ. ಇಲ್ಲಿ ‘ಲಕ್ಷ’ ಎನ್ನುವುದನ್ನು ‘ಶರ’  ಎನ್ನುವ ಅರ್ಥದಲ್ಲಿ ಪ್ರಯೋಗ ಮಾಡಿದ್ದಾರೆ.]

ತದಾ ಸಮೀಯುಃ ಸಕಲಾಃ ಕ್ಷಿತೀಶಪುತ್ರಾ ದ್ರೋಣಾತ್ ಸಕಲಾಸ್ತ್ರಾಣ್ಯವಾಪ್ತುಮ್
ದದೌ ಸ ತೇಷಾಂ ಪರಮಾಸ್ತ್ರಾಣಿ ವಿಪ್ರೋ ರಾಮಾದವಾಪ್ತಾನ್ಯಗತಾನಿ ಚಾನ್ಯೈಃ             ೧೫.೪೩

ಆಗ ದ್ರೋಣಾಚಾರ್ಯರಿಂದ ಅಸ್ತ್ರಗಳನ್ನು ಪಡೆಯಲು ಎಲ್ಲಾ ರಾಜಕುಮಾರರೂ ಕೂಡಾ ಅಲ್ಲಿಗೆ ಬಂದರು. ಅವರೆಲ್ಲರಿಗೆ ದ್ರೋಣಾಚಾರ್ಯರು ಪರಶುರಾಮನಿಂದ ವಿಶೇಷವಾಗಿ ತಾನು ಪಡೆದ, ಇನ್ನೊಬ್ಬರಲ್ಲಿ ಈಗಾಗಲೇ ಇರದ ಅಸ್ತ್ರಗಳನ್ನು ಕೊಟ್ಟರು.

ಅಸ್ತ್ರಾಣಿ ಚಿತ್ರಾಣಿ ಮಹಾನ್ತಿ ದಿವ್ಯಾನ್ಯನ್ಯೈರ್ನೃಪೈರ್ಮ್ಮನಸಾsಪ್ಯಸ್ಮೃತಾನಿ 
ಅವಾಪ್ಯ ಸರ್ವೇ ತನಯಾ ನೃಪಾಣಾಂ ಶಕ್ತಾ ಬಭೂವುರ್ನ್ನ ಯಥೈವ ಪೂರ್ವೇ             ೧೫.೪೪

ಆಶ್ಚರ್ಯಕರವಾದ(ಮಹತ್ತರವಾಗಿರುವ), ಅಲೌಕಿಕವಾಗಿರುವ, ಬೇರೆ ರಾಜರಿಂದ ಮನಸ್ಸಿನಿಂದ ಚಿಂತಿಸಲೂ ಅಸಾಧ್ಯವಾದ ಅಸ್ತ್ರಗಳನ್ನು ಪಡೆದ ಆ ಎಲ್ಲಾ ರಾಜಕುಮಾರರೂ ಕೂಡಾ ಶಕ್ತರಾದರು. ಹಿಂದಿನವರಂತೆ  ಅಲ್ಲಾ(ಹಿಂದಿನವರಿಗಿಂತ ಅಧಿಕ. ಹಿಂದೆ ಯಾರೋ ಒಬ್ಬ ಬಲಿಷ್ಠನಿರುತ್ತಿದ್ದ, ಆದರೆ ಮಹಾಭಾರತ ಕಾಲದಲ್ಲಿ ಎಲ್ಲರೂ ಬಲಿಷ್ಠರಾಗಿರುವುದು ವಿಶೇಷ).

ನೈತಾದೃಶಾಃ ಪೂರ್ವಮಾಸನ್ ನರೇನ್ದ್ರಾ ಅಸ್ತ್ರೇ ಬಲೇ ಸರ್ವವಿದ್ಯಾಸು ಚೈವ
ದೌಷ್ಷನ್ತಿಮಾನ್ಧಾತೃಮರುತ್ತಪೂರ್ವಾಶ್ಚೈತತ್ಸಮಾನಾಃ ಸುರುದಾರವೀರ್ಯ್ಯಾಃ             ೧೫.೪೫

ಈರೀತಿಯಾಗಿ ಅಸ್ತ್ರದಲ್ಲಿ, ಬಲದಲ್ಲಿ, ಎಲ್ಲಾ ವಿದ್ಯೆಗಳಲ್ಲಿಯೂ ಕೂಡಾ, ದ್ರೋಣ ಶಿಷ್ಯರಿಗೆ ಸದೃಶರಾದ ರಾಜರು ಪೂರ್ವದಲ್ಲಿ ಇರಲಿಲ್ಲಾ. ಹೀಗೆ ಅವರು ಭರತ, ಮಾನ್ಧಾತೃ, ಮರುತ್ತರಾಜ ಮೊದಲಾದ ರಾಜರಿಗೆ   ಸಮನಾದರು.
[ಹಿಂದೆ ಅಸ್ತ್ರವಿದ್ಯೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಹಾಗಾಗಿ ಯಾರೋ ಒಬ್ಬರು ಅಸ್ತ್ರ ತಿಳಿದವರಾಗಿ ಬಲಿಷ್ಠರಾಗಿರುತ್ತಿದ್ದರು. ಆದರೆ ಮಹಾಭಾರತ ಕಾಲದಲ್ಲಿ ಪರಶುರಾಮದೇವರಿಂದ, ದ್ರೋಣರ ಮುಖೇನ ಹರಿದುಬಂದ ಅಸ್ತ್ರವಿದ್ಯೆಯಿಂದ ಎಲ್ಲರೂ ಬಲಿಷ್ಠರೆನಿಸಿದರು]

No comments:

Post a Comment