ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, February 29, 2020

Mahabharata Tatparya Nirnaya Kannada 1628_1633


ಕೃಷ್ಣೋ ಜಿತ್ವಾ ಮಾಗಧಂ ರೌಹಿಣೇಯಯುಕ್ತೋ ಯಯೌ ದಮಘೋಷೇಣ ಸಾರ್ದ್ಧಮ್ ।
ಪಿತೃಷ್ವಸಾಯಾಃ ಪತಿನಾ ತೇನ ಚೋಕ್ತಃ ಪೂರ್ವಂ ಜಿತೇನಾಪಿ ಯುಧಿ ಸ್ಮ ಬಾನ್ಧವಾತ್ ॥೧೬.೨೮ ॥

ಕೃಷ್ಣನು ಬಲರಾಮನಿಂದ ಕೂಡಿಕೊಂಡು ಮಾಗಧನನ್ನು ಗೆದ್ದು, ತನ್ನ ಅತ್ತೆಯ ಗಂಡನಾದ ದಮಘೋಷನಿಂದ ಕೂಡಿಕೊಂಡು ಅಲ್ಲಿಂದ ತೆರಳಿದನು. ಈಗಷ್ಟೇ ಯುದ್ಧದಲ್ಲಿ ಸೋತ ದಮಘೋಷನೊಂದಿಗೆ  ಬಾಂಧವ್ಯ ಇರುವುದರಿಂದಾಗಿ ಅವರಿಬ್ಬರು ಜೊತೆಯಾಗಿ ಅಲ್ಲಿಂದ ತೆರಳಿದರು.
[ವಸುದೇವನ ಸಹೋದರಿ ಶ್ರುತದೇವೇ. ಅವಳ ಪತಿ ದಮಘೋಷ. ಇವರ ದಾಂಪತ್ಯದಲ್ಲಿ ಹುಟ್ಟಿಬಂದವನೇ ಶಿಶುಪಾಲ. ಆದ್ದರಿಂದ ದಮಘೋಷ ಶ್ರೀಕೃಷ್ಣನ ಸೋದರತ್ತೆಯ ಗಂಡ (ಪಿತೃಷ್ವಸಾಯಾಃ ಪತಿ)]

ಯಾಮಃ ಪುರಂ ಕರಿವೀರಾಖ್ಯಮೇವ ಮಹಾಲಕ್ಷ್ಮ್ಯಾಃ ಕ್ಷೇತ್ರಸನ್ದರ್ಶನಾಯ ।
ಶ್ರುತ್ವಾ ವಾಕ್ಯಂ ತಸ್ಯ ಯುದ್ಧೇ ಜಿತಸ್ಯ ಭೀತ್ಯಾ ಯುಕ್ತಸ್ಯಾsತ್ಮನಾ ತದ್ಯುತೋsಗಾತ್ ॥೧೬.೨೯ ॥

‘ಕರವೀರಪುರ (ಕೋಲ್ಹಾಪುರ)ಎಂಬ ಹೆಸರಿನ ಮಹಾಲಕ್ಷ್ಮಿಯ ಕ್ಷೇತ್ರವನ್ನು ನೋಡಲು ಹೊರಡೋಣ’ ಎನ್ನುವ  ಭಯದಿಂದ ಕೂಡಿದ, ತನ್ನಿಂದ ಸೋತಿರುವ ದಮಘೋಷನ ಮಾತಿನಂತೆ ಶ್ರೀಕೃಷ್ಣ  ಕರವೀರ ಕ್ಷೇತ್ರಕ್ಕೆ ತೆರಳಿದನು.  

ಗನ್ಧರ್ವೋsಸೌ ದನುನಾಮಾ ನರೋsಭೂತ್ ತಸ್ಮಾತ್ ಕೃಷ್ಣೇ ಭಕ್ತಿಮಾಂಶ್ಚಾsಸ ರಾಜಾ ।
ಪುರಪ್ರಾಪ್ತಾಂಸ್ತಾನ್ ಸ ವಿಜ್ಞಾಯ ಪಾಪಃ ಸೃಗಾಲಾಖ್ಯೋ ವಾಸುದೇವಃ ಕ್ರುಧಾssಗಾತ್ ॥೧೬.೩೦ ॥

ಈ ದಮಘೋಷನು ಮೂಲತಃ  ‘ದನು’ ಎಂಬ ಹೆಸರುಳ್ಳ ಗಂಧರ್ವನು. ಈಗ ಮನುಷ್ಯಲೋಕದಲ್ಲಿ ಅವತರಿಸಿ ಬಂದಿರುವವನು. ಆಕಾರಣದಿಂದ ಕೃಷ್ಣನಲ್ಲಿ ಭಕ್ತಿಯುಳ್ಳವನಾದನು.
ಇತ್ತ ಕರವೀರಪುರಕ್ಕೆ ಬಂದಿರುವ ಅವರನ್ನು ತಿಳಿದ ಪಾಪಿಷ್ಠನಾಗಿರುವ ಸೃಗಾಲವಾಸುದೇವನು ಸಿಟ್ಟಿನಿಂದ ಅವರತ್ತ ಬಂದನು.

ಸೂರ್ಯ್ಯಪ್ರದತ್ತಂ ರಥಮಾರುಹ್ಯ ದಿವ್ಯಂ ವರಾದವದ್ಧ್ಯಸ್ತಿಗ್ಮರುಚೇಃ ಸ ಕೃಷ್ಣಮ್ ।
ಯೋದ್ಧುಂ ಯಯಾವಮುಚಚ್ಚಾಸ್ತ್ರಙ್ಘಾಞ್ಛಿರಸ್ತಸ್ಯಾಥಾsಶು ಜಹಾರ ಕೃಷ್ಣಃ ॥ ೧೬.೩೧ ॥

ಸೃಗಾಲವಾಸುದೇವನು ಸೂರ್ಯಕೊಟ್ಟ ರಥವನ್ನು ಏರಿ, ಸೂರ್ಯನ ವರದಿಂದ ಅವಧ್ಯನಾದವನಾಗಿ, ಕೃಷ್ಣನನ್ನು ಕುರಿತು ಯುದ್ಧಮಾಡಲೆಂದು ಬಂದ. ಅನೇಕ ಅಸ್ತ್ರಗಳನ್ನು ಬಿಟ್ಟ ಆ ಸೃಗಾಲವಾಸುದೇವನ ಕತ್ತನ್ನು ಶ್ರೀಕೃಷ್ಣ  ತಕ್ಷಣ ಕತ್ತರಿಸಿದ.   

ದ್ವಿಧಾ ಕೃತ್ವಾ ದೇಹಮಸ್ಯಾರಿಣಾ ಚ ಪುತ್ರಂ ಭಕ್ತಂ ತಸ್ಯ ರಾಜ್ಯೇsಭಿಷಿಚ್ಯ ।
ಸ ಶಕ್ರದೇವಂ ಮಾಣಿಭದ್ರಃ ಪುರಾ ಯೋ ಯಯೌ ಪುರೀಂ ಸ್ವಾಂ ಸಹಿತೋsಗ್ರಜೇನ ॥೧೬.೩೨ ॥

ಸೃಗಾಲ ವಾಸುದೇವನ ದೇಹವನ್ನು ಚಕ್ರದಿಂದ ಎರಡನ್ನಾಗಿ ಮಾಡಿ, ತನ್ನ ಭಕ್ತನಾದ ಸೃಗಾಲ ವಾಸುದೇವನ ಮಗನಾದ ಶಕ್ರದೇವ ಎನ್ನುವ ಹೆಸರಿನ ತನ್ನ ಭಕ್ತನನ್ನು ರಾಜ್ಯದಲ್ಲಿ ಅಭಿಷೇಕ ಮಾಡಿದ ಶ್ರೀಕೃಷ್ಣ, ತನ್ನ ಪಟ್ಟಣಕ್ಕೆ ತೆರಳಿದನು.
ಈ ಶಕ್ರದೇವ ಯಾರೆಂದರೆ: ಅವನು ಮಣಿಭದ್ರನ  (ಕುಬೇರನ) ಸೇವಕ. ಅವನಿಗೆ ರಾಜ್ಯಾಭಿಷೇಕ ಮಾಡಿ, ತನ್ನ ಅಣ್ಣನೊಂದಿಗೆ ಕೂಡಿಕೊಂಡು ಶ್ರೀಕೃಷ್ಣ ಮಧುರೆಗೆ ತೆರಳಿದನು.

[ಹರಿವಂಶದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ಸಾವಿತ್ರೇ ನಿಯಮೇ ಪೂರ್ಣೆ ಯಂ ದದೌ ಸವಿತಾ ಸ್ವಯಮ್ ।.... ತೇನ  ಸ್ಯಂದನಮುಖ್ಯೇನ ದ್ವಿಷತ್ಸ್ಯನ್ದನಘಾತಿನಾ । ಸ ಸೃಗಾಲೋsಭ್ಯಯಾತ್ ಕೃಷ್ಣಂ ಶಲಭಃ ಪಾವಕಂ ಯಥಾ’ (ವಿಷ್ಣುಪರ್ವಣಿ ೪೪.೬-೭) ‘ಚಕ್ರೇಣೋರಸಿ ನಿರ್ಭಿಣ್ಣಃ ಸಗತಾಸುರ್ಗತೋತ್ಸವಃ’ (ವಿಷ್ಣುಪರ್ವಣಿ ೪೪.೨೯) (ಇದಲ್ಲದೇ ಭಾಗವತದಲ್ಲೂ ಈ ಮಾತು ಬರುತ್ತದೆ): ‘ಶಿರೋ ಜಹಾರ ಗೋವಿನ್ದಃ ಕ್ಷಣೇನ ಮಕುಟೋಜ್ಜ್ವಲಂ’(ಭಾಗವತ: ೧೦.೫೨,೩೯).  ಇನ್ನು ಹರಿವಂಶದಲ್ಲಿ ಹೇಳುತ್ತಾರೆ: ಚಕ್ರನಿರ್ದಾರಿತೋರಸ್ಕಂ  ಭಿನ್ನಶೃಙ್ಗಮಿವಾಚಲಮ್’(೩೭) ‘ತಸ್ಯ ಪದ್ಮಾವತೀ ನಾಮ ಮಹಿಷೀ ಪ್ರಮದೊತ್ತಮ । ರುದತಿ ಪುತ್ರಮಾದಾಯವಾಸುದೇವಮುಪಸ್ಥಿತಾ ।... (ಸೃಗಾಲವಾಸುದೇವನ ಹೆಂಡತಿ ಪದ್ಮಾವತಿ ತನ್ನ ಮಗನನ್ನು ಕರೆದುಕೊಂಡು ಬಂದು ಪರಮಾತ್ಮನಿಗೆ ನಮಸ್ಕಾರ ಮಾಡುತ್ತಾಳೆ). ಅಯಮಸ್ಯ  ವಿಪನ್ನಸ್ಯ  ಬಾಂಧವಸ್ಯ ತವಾನಘ । ಸಂತತಿ ರಕ್ಷ್ಯತಾಂ ವೀರ ಪುತ್ರಃ  ಪುತ್ರ ಇವಾsತ್ಮಜಃ । (ನಿನ್ನ ಅಣ್ಣನ ಮಗನಾಗಿರುವುದರಿಂದ ಇವನು ನಿನ್ನ ಮಗನೇ ಎಂದು ಶ್ರಿಕೃಷ್ಣನಲ್ಲಿ ಆಕೆ ಹೇಳುತ್ತಾಳೆ).  ತಸ್ಯಾಸ್ತದ್  ವಚನಂ ಶ್ರುತ್ವಾ ಮಹಿಷ್ಯಾ ಯದುನಂದನಃ । ಮೃದುಪೂರ್ವಮಿದಂ ವಾಕ್ಯಮುವಾಚ ವದತಾಂ ವರಃ । (ಆಕೆಯೊಂದಿಗೆ ಶ್ರೀಕೃಷ್ಣ  ಮೃದುವಾಗಿ ಮಾತನಾಡುತ್ತಾನೆ). ಯೋsಯಂ ಪುತ್ರಃ ಸೃಗಾಲಸ್ಯ ಮಮಾಪ್ಯೇಷ ನ ಸಂಶಯಃ । ಅಭಯಂ ಚಾಭಿಷೇಕಂ ಚ ದದಾಮ್ಯಸ್ಯ  ಸುಖಾಯ ವೈ’ (ವಿಷ್ಣುಪರ್ವಣಿ. ೪೪.೪೮-೫೬) (ಶ್ರೀಕೃಷ್ಣ ಅವರಿಗೆ ತನ್ನ  ಅಭಯ ದಾನ ಮಾಡುತ್ತಾನೆ).   
ಹರಿವಂಶದಲ್ಲಿ  ಸೃಗಾಲವಾಸುದೇವನ ಮಗನಿಗೆ ಅಭಿಷೇಕ ಮಾಡಿ ಅದೇ ದಿನ ಕೃಷ್ಣ-ಬಲರಾಮರು ಹೊರಟರು ಎಂದಿದೆ.ಅಭಿಷಿಚ್ಯ ಸೃಗಾಲಸ್ಯ  ಕರವೀರಪುರೇ ಸುತಂ । ಕೃಷ್ಣಸ್ತದಹರೇವಾsಶು ಪ್ರಯಾಣಮಭಿರೋಚಯತ್’ (ವಿಷ್ಣುಪರ್ವಣಿ ೪೪.೫೯) ಇನ್ನು ಭಾಗವತದಲ್ಲಿ  ನಾಕು ತಿಂಗಳು ವಾಸಮಾಡಿದರು ಎಂದಿದೆ. ಅವರುಹ್ಯ ಗಿರೇಃ ಶೃಙ್ಗಾತ್ ಕರವೀರಪುರಂ ಗತೌ ।  ತತ್ರ ತೌ ಚತುರೋ ಮಾಸಾನುಶಿತ್ವಾ ಭರತರ್ಷಭ । ಮಹತ್ಯಾ ಸೇನಯಾ ಸಾರ್ಧಂ ಜಗ್ಮತುರ್ಮಧುರಾಂ ಪುರಿಮ್’ (ಭಾಗವತ ೧೦.೫೩.೨೦-೨೧) ಈ ಗೊಂದಲವನ್ನು ಆಚಾರ್ಯರು ಪರಿಹರಿಸುತ್ತಾ,  ಗೋಮಂತ ಪರ್ವತದಲ್ಲಿ ಶ್ರೀಕೃಷ್ಣ-ಬಲರಾಮರು  ನಾಲ್ಕು ತಿಂಗಳು ವಾಸಮಾಡಿದರು ಎನ್ನುವ ನಿರ್ಣಯವನ್ನು ನೀಡಿದ್ದಾರೆ].   



ನೀತಿಂ ಬಲಿಷ್ಠಸ್ಯ ವಿಹಾಯ ಸೇನಾಂ ದೂರಾದ್ ಯುದ್ಧಂ ದರ್ಶಯಿತ್ವೈವ ಗುಪ್ತ್ಯೈ ।
ಸ್ವಸೇನಾಯಾಃ ಸರ್ವಪೂರ್ಣ್ಣಾತ್ಮಶಕ್ತಿಃ ಪುನಃ ಪುರೀಂ ಪ್ರಾಪ್ಯ ಸ ಪೂಜಿತೋsವಸತ್ ॥೧೬.೩೩ ॥

ಬಲಿಷ್ಠನೊಬ್ಬನು ಸೇನೆಯನ್ನು ಬಿಟ್ಟು ಬಹಳ ದೂರದಿಂದಲೇ ತನ್ನ ದೇಶದ ರಕ್ಷಣೆಗಾಗಿ ಯುದ್ಧವನ್ನು ಯಾವ ರೀತಿ ಮಾಡಬೇಕು ಎಂದು ತೋರಿಸಿ, ತನ್ನ ಸೇನೆಯನ್ನು ಯಾವರೀತಿ ರಕ್ಷಿಸಿಕೊಳ್ಳಬೇಕು ಎನ್ನುವ ನೀತಿಯನ್ನು ತೋರಿಸಿ, ಪೂರ್ಣಶಕ್ತಿಯಾದ ಪರಮಾತ್ಮನು ಮತ್ತೆ ಮಧುರೆಗೆ ತೆರಳಿ ಪೂಜಿತನಾಗಿ ಅಲ್ಲಿ ಆವಾಸಮಾಡಿದ.


ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸೃಗಾಲವಧೋ ನಾಮ ಷೋಡಶೋsದ್ಧ್ಯಾಯಃ

*********


Friday, February 28, 2020

Mahabharata Tatparya Nirnaya Kannada 1620_1627


ಜರಾಸುತೋ ರೌಹಿಣೇಯೇನ ಯುದ್ಧಂ ಚಿರಂ ಕೃತ್ವಾ ತನ್ಮುಸಲೇನ ಪೋಥಿತಃ ।
ವಿಮೋಹಿತಃ ಪ್ರಾಪ್ತಸಂಜ್ಞಶ್ಚಿರೇಣ ಕ್ರುದ್ಧೋ ಗದಾಂ ತದುರಸ್ಯಭ್ಯಪಾತಯತ್ ॥೧೬.೨೦ ॥

ಜರಾಸಂಧನು ಬಲರಾಮನೊಂದಿಗೆ ಧೀರ್ಘಕಾಲ ಯುದ್ಧಮಾಡಿ, ಅವನ ಒನಕೆಯ ಪೆಟ್ಟು ತಿನ್ದವನಾಗಿ, ಪ್ರಜ್ಞೆ ಕಳೆದುಕೊಂಡು, ಬಹಳ ಹೊತ್ತಿನ ನಂತರ ಸಂಜ್ಞೆಯನ್ನು ಹೊಂದಿ, ಕ್ರುದ್ಧನಾಗಿ ತನ್ನ ಗದೆಯನ್ನು ಬಲರಾಮನ ಎದೆಯಮೇಲೆ ಎಸೆದನು.

ತೇನಾsಹತಃ ಸುಭೃಶಂ ರೌಹಿಣೇಯಃ ಪಪಾತ ಮೂರ್ಛಾಭಿಗತಃ ಕ್ಷಣೇನ ।
ಅಜೇಯತ್ವಂ ತಸ್ಯ ದತ್ತಂ ಹಿ ಧಾತ್ರಾ ಪೂರ್ವಂ ಗೃಹೀತೋ ವಿಷ್ಣುನಾ ರಾಮಗೇನ ॥೧೬.೨೧ ॥

ಅವನಿಂದ ಚೆನ್ನಾಗಿ ಹೊಡೆಯಲ್ಪಟ್ಟ ಬಲರಾಮನು ಒಂದು ಕ್ಷಣ ಮೂರ್ಛೆಹೋದನು. ಜರಾಸಂಧನಿಗೆ  ಬ್ರಹ್ಮನಿಂದ ಅಜೇಯತ್ವವು ಕೊಡಲ್ಪಟ್ಟಿತ್ತಷ್ಟೇ.
(ಆದರೆ ಹಿಂದಿನ ಶ್ಲೋಕದಲ್ಲಿ ಜರಾಸಂಧ ಬಲರಾಮನ ಹೊಡೆತದಿಂದ ಮೂರ್ಛೆಹೋಗಿದ್ದ ಎಂದು ಹೇಳಲಾಗಿದೆಯಲ್ಲಾ ಎಂದರೆ:) ಹಿಂದೆ ಬಲರಾಮನಲ್ಲಿರುವ ಸಂಕರ್ಷಣರೂಪಿ ಪರಮಾತ್ಮನಿಂದಾಗಿ ಜರಾಸಂಧ ಹಿಡಿಯಲ್ಪಟ್ಟಿದ್ದ.  

ತಥಾಕೃತೇ ಬಲಭದ್ರೇ ತು ಕೃಷ್ಣೋ ಗದಾಮಾದಾಯ ಸ್ವಾಮಗಾನ್ಮಾಗಧೇಶಮ್ ।
ತತಾಡ ಜತ್ರೌ ಸ ತಯಾsಭಿತಾಡಿತೋ ಜಗಾಮ ಗಾಂ ಮೂರ್ಚ್ಛಯಾsಭಿಪ್ಲುತಾಙ್ಗಃ ॥೧೬.೨೨ ॥

ಜರಾಸಂಧನಿಂದ ಬಲರಾಮ ಹೊಡೆಯಲ್ಪಟ್ಟಾಗ ಶ್ರೀಕೃಷ್ಣನು ತನ್ನ ಕೌಮೋದಕಿ ಗದೆಯನ್ನು ಹಿಡಿದು  ಜರಾಸಂಧನನ್ನು ಕುರಿತು ತೆರಳಿದನು. ಆ ಗದೆಯಿಂದ ಜರಾಸಂಧನ ಜತ್ರುವಿನಲ್ಲಿ(ಎದೆಗಿಂತ ಮೇಲೆ, ಕಂಠಕ್ಕಿಂತ ಕೆಳಗೆ) ಹೊಡೆದನು ಕೂಡಾ. ಇದರಿಂದ ಜರಾಸಂಧ ಒದ್ದಾಡುತ್ತಾ, ಮೂರ್ಛೆಹೊಂದಿ ಭೂಮಿಯಲ್ಲಿ ಬಿದ್ದನು.

ಅಥೋತ್ತಸ್ಥೌ ರೌಹಿಣೇಯಃ ಸಹೈವ ಸಮುತ್ತಸ್ಥೌ ಮಾಗಧೋsಪ್ಯಗ್ರ್ಯವೀರ್ಯ್ಯಃ ।
ಕ್ರುದ್ಧೋ ಗೃಹೀತ್ವಾ ಮೌಲಿಮಸ್ಯಾsಶು ರಾಮೋ ವಧಾಯೋದ್ಯಚ್ಚನ್ಮುಸಲಂ ಬಾಹುಷಾಳೀ ॥೧೬.೨೩ ॥

ತದನಂತರ ಬಲರಾಮನು ಮೇಲೆದ್ದ. ಬಲರಾಮ ಏಳುತ್ತಿರುವಾಗಲೇ ಶ್ರೇಷ್ಠವಾದ ಪರಾಕ್ರಮವುಳ್ಳ ಜರಾಸಂಧನೂ ಕೂಡಾ ಎದ್ದುನಿಂತ. ಆಗ ಸಿಟ್ಟಿನವನಾಗಿ ರಾಮನು ಜರಾಸಂಧನ ತೆಲೆಗೂದಲನ್ನು ಹಿಡಿದನು, ಒಳ್ಳೆಯ ಬಲವುಳ್ಳ ಬಲರಾಮನು ಜರಾಸಂಧನನ್ನು ಸಾಯಿಸಲೆಂದು ತನ್ನ ಒನಕೆಯನ್ನು ಎತ್ತಿ ಹಿಡಿದನು.

ಅಥಾಬ್ರವೀದ್ ವಾಯುರೇನಂ ನ ರಾಮ ತ್ವಯಾ ಹನ್ತುಂ ಶಕ್ಯತೇ ಮಾಗಾಧೋsಯಮ್ ।
ವೃಥಾ ನ ತೇ ಬಾಹುಬಲಂ ಪ್ರಯೋಜ್ಯಮಮೋಘಂ ತೇ ಯದ್ ಬಲಂ ತದ್ವದಸ್ತ್ರಮ್ ॥೧೬.೨೪ ॥

ತದನಂತರ ಮುಖ್ಯಪ್ರಾಣನು(ಅಶರೀರವಾಣಿ) ಬಲರಾಮನನ್ನು ಕುರಿತು ಹೀಗೆ ಹೇಳಿದನು: ‘ಬಲರಾಮನೇ, ನಿನ್ನಿಂದ ಈ ಜರಾಸಂಧನನ್ನು ಕೊಲ್ಲಲು ಸಾಧ್ಯವಿಲ್ಲ. ಹಾಗಾಗಿ ನಿನ್ನ ಬಾಹುಬಲವನ್ನು ವ್ಯರ್ಥವಾಗಿ ಪ್ರಯೋಗಮಾಡಬೇಡ. ನನ್ನ ಅಸ್ತ್ರದಂತೆ ನಿನ್ನ ಬಲವೂ ಕೂಡಾ ಅಮೋಘವಾಗಿದೆ. ಅದನ್ನು ವ್ಯರ್ಥಮಾಡಿಕೊಳ್ಳಬೇಡ’.

ಅನ್ಯೋ ಹನ್ತಾ ಬಲವಾನಸ್ಯ ಚೇತಿ ಶ್ರುತ್ವಾ ಯಯೌ ಬಲಭದ್ರೋ ವಿಮುಚ್ಯ ।
ಜರಾಸುತಂ ಪುನರುದ್ಯಚ್ಛಮಾನಂ ಜಘಾನ ಕೃಷ್ಣೋ ಗದಯಾ ಸ್ವಯೈವ ॥೧೬. ೨೫ ॥

‘ಇನ್ನೊಬ್ಬ ಬಲಿಷ್ಠ ಇವನನ್ನು ಕೊಲ್ಲುತ್ತಾನೆ’ ಎನ್ನುವ ಮಾತನ್ನು ಕೇಳಿದ ಬಲರಾಮನು ಜರಾಸಂಧನನ್ನು ಅಲ್ಲೇ ಬಿಟ್ಟು ತೆರಳಿದನು. ಆದರೆ ಮತ್ತೆ ಅವನತ್ತ ಧಾವಿಸುತ್ತಿರುವ ಜರಾಸಂಧನನ್ನು ಶ್ರೀಕೃಷ್ಣ ತನ್ನ ಕೌಮೋದಕಿ ಗದೆಯಿಂದ ಹೊಡೆದನು.

[ಹರಿವಂಶದಲ್ಲಿ ಮುಖ್ಯಪ್ರಾಣ ಬಲರಾಮನನ್ನು ಕುರಿತು ಹೇಳಿದ ಮಾತಿನ ವಿವರವನ್ನು ಕಾಣಬಹುದು: ‘ತತೋsನ್ತರಿಕ್ಷೇ ವಾಗಾಸೀತ್ ಸುಸ್ವರಾ ಲೋಕಸಾಕ್ಷಿಣೀ । ನ ತ್ವಯಾ ರಾಮ ವಧ್ಯೋsಯಮಲಂ ಖೇದೇನ ಮಾನದ । ವಿಹಿತೋsಸ್ಯ ಮಯಾ ಮೃತ್ಯುಸ್ತಸ್ಮಾತ್ ಸಾಧು ವ್ಯುಪಾರಮ । ಅಚಿರೇಣೈವ ಕಾಲೇನ ಪ್ರಾಣಾಂಸ್ತ್ಯಕ್ಷತಿ ಮಾಗಧಃ’ (ವಿಷ್ಣುಪರ್ವಣೀ ೪೩.೭೨-೭೩) [ಈ ಜರಾಸಂಧನನ್ನು ನಾನೇ ಕೊಲ್ಲುವವನಿದ್ದೇನೆ. ಇಂದು ನೀನು ಹೊಡೆದರೂ ಅವನು ಸಾಯುವುದಿಲ್ಲ. ಏಕೆ ಸುಮ್ಮನೆ ನಿನ್ನ ಬಾಹುಬಲವನ್ನು ವ್ಯರ್ಥ ಮಾಡಿಕೊಳ್ಳುವೆ’ 
ಪ್ರಹರ್ತವ್ಯೋ ನ ರಾಜಾsಯಮವಧ್ಯೋsಯಂ ತ್ವಯಾsನಘ । ಕಲ್ಪಿತೋsಸ್ಯ ವಧೋsನ್ಯಸ್ಮಾದ್  ವಿರಮಸ್ವ ಹಲಾಯುಧ । ಶ್ರುತ್ವಾsಹಂ ತೇನ ವಾಕ್ಯೇನ ಚಿನ್ತಾವಿಷ್ಟೋ ನಿವರ್ತಿತಃ । ಸರ್ವಪ್ರಾಣಹರಂ ಘೋರಂ ಬ್ರಹ್ಮಣಾ ಸ್ವಯಮೀರಿತಮ್’ (೭೩.೪೯-೫೦) [‘ಸ್ವಯಂ ಬ್ರಹ್ಮನ(ಪ್ರಾಣ-ಬ್ರಹ್ಮ ಅಭೇದ) ಈ ಮಾತಿನಿಂದಾಗಿ ಚಿಂತಾವರ್ತಿತನಾಗಿ ನಾನು ಆ ಕೆಲಸದಿಂದ ಹಿಂದೆ ಸರಿದೆ’ ಎಂದು ಇಲ್ಲಿ ಬಲರಾಮ ಹೇಳಿರುವುದನ್ನು ಕಾಣುತ್ತೇವೆ].

ತೇನಾsಹತಃ ಸ್ತ್ರಸ್ತಸಮಸ್ತಗಾತ್ರಃ ಪಪಾತ ಮೂರ್ಚ್ಛಾಭಿಗತಃ ಸ ರಾಜಾ ।
ಚಿರಾತ್ ಸಙ್ಜ್ಞಾಂ ಪ್ರಾಪ್ಯ ಚಾನ್ತರ್ಹಿತೋsಸೌ ಸಮ್ಪ್ರಾದ್ರವದ್ ಭೀತಭೀತಃ ಸಲಜ್ಜಃ ॥೧೬.೨೬ ॥

ಕೃಷ್ಣನಿಂದ ಹೊಡೆಯಲ್ಪಟ್ಟ, ತನ್ನೆಲ್ಲಾ ದೇಹದ ನಿಯಂತ್ರಣವನ್ನು ಕಳೆದುಕೊಂಡು ಮೂರ್ಛೆಯನ್ನು ಹೊಂದಿದ ಆ ರಾಜನು ಬಹಳ ಹೊತ್ತಿನ ನಂತರ ಮೂರ್ಛೆಯಿಂದೆದ್ದು, ಭಯಗೊಂಡು, ತನ್ನನ್ನು ಅಡಗಿಸಿಕೊಂಡು, ಲಜ್ಜೆಯಿಂದ ಕೂಡಿ, ಓಡಿಹೋದನು. 

ಯಯೌ ಶಿಷ್ಟೈ ರಾಜಭಿಃ ಸಂಯುತಶ್ಚ ಪುರಂ ಜೀವೇತ್ಯೇವ ಕೃಷ್ಣೇನ ಮುಕ್ತಃ ।
ಪುನರ್ಯ್ಯುದ್ಧಂ ಬಹುಶಃ ಕೇಶವೇನ ಕೃತ್ವಾ ಜಿತೋ ರಾಜಗಣೈಃ ಸಮೇತಃ ॥೧೬.೨೭ ॥

ಉಳಿದ ರಾಜರಿಂದ ಕೂಡಿಕೊಂಡ ಅವನು ‘ಬದುಕಿಕೋ ಹೋಗು’ ಎಂಬಿತ್ತ್ಯಾದಿಯಾಗಿ ಹೇಳಿ ಶ್ರೀಕೃಷ್ಣನಿಂದ ಬಿಡಲ್ಪಟ್ಟವನಾಗಿ ಪಟ್ಟಣಕ್ಕೆ ತೆರಳಿದನು. ಇದೇ ರೀತಿ ಮತ್ತೆ ಶ್ರೀಕೃಷ್ಣನ ಜೊತೆಗೆ ಅನೇಕ ಬಾರಿ ಯುದ್ಧಮಾಡಿ, ತನ್ನ ರಾಜಗಣಸಮೇತನಾಗಿಯೇ ಜರಾಸಂಧ ಸೋತುಹೋದ.

Wednesday, February 26, 2020

Mahabharata Tatparya Nirnaya Kannada 1613_1619


ಏವಂ ತಯೋಃ ಕ್ರೀಡತೋಃ ಸ್ವೈರಮತ್ರ ರಾಜನ್ಯವೃನ್ದಾನುಗತೋ ಜರಾಸುತಃ ।
ಗಿರಿಂ ಗೋಮನ್ತಂ ಪರಿವಾರ್ಯ್ಯಾದಹತ್ ತಂ ದೃಷ್ಟ್ವಾ ದೇವೌ ಪುಪ್ಲುವತುರ್ಬಲಾಬ್ಧೌ ॥೧೬.೧೩॥

ಈರೀತಿಯಾಗಿ ಶ್ರೀಕೃಷ್ಣ ಹಾಗೂ ಬಲರಾಮರಿಬ್ಬರು ಗೋಮಂತಪರ್ವತದಲ್ಲಿ[1] ಸ್ವೇಚ್ಛಾನುಸಾರ ವಿಹರಿಸುತ್ತಿರಲು, ರಾಜರ ಸಮೂಹದಿಂದ ಅನುಸರಿಸಲ್ಪಟ್ಟ ಜರಾಸಂಧನು ಆ ದೊಡ್ಡ ಬೆಟ್ಟವನ್ನು ಸುತ್ತುವರಿದು ಅದಕ್ಕೆ ಬೆಂಕಿಯಿಟ್ಟನು. ಹೀಗೆ ಪರ್ವತವನ್ನು ಸುಟ್ಟ ಜರಾಸಂಧನನ್ನು ನೋಡಿದ ಅವರಿಬ್ಬರು ಪರ್ವತದಿಂದ ಕೆಳಗಿದ್ದ ಸೈನ್ಯ ಸಾಗರದಲ್ಲಿ ಧುಮುಕಿದರು. 

ಗಿರಿಸ್ತಾಭ್ಯಾಂ ಪೀಡಿತಃ ಸನ್ ನಿಮಗ್ನೋ ಭೂಮೌ ಪದ್ಭ್ಯಾಂ ಯೋಜನೈಕಾದಶಂ ಸಃ ।
ನಿಷ್ಪೀಡಿತಾಜ್ಜಲಧಾರೋದ್ಗತಾsಸ್ಮಾದ್ ವಹ್ನಿಂ ವ್ಯಾಪ್ತಂ ಶಮಯಾಮಾಸ ಸರ್ವಮ್ ॥೧೬.೧೪ ॥

ರಾಮ-ಕೃಷ್ಣರು ಪರ್ವತದಿಂದ ಕೆಳಗೆ ಹಾರುವಾಗ, ಅವರಿಬ್ಬರ ಪಾದದಿಂದ ಒತ್ತಲ್ಪಟ್ಟ ಬೆಟ್ಟವು ಭೂಮಿಯಲ್ಲಿ ಹನ್ನೊಂದು ಯೋಜನ ಕೆಳಗೆ ಮುಳುಗಿತು. ಈರೀತಿ ಭೂಮಿಯಲ್ಲಿ ಹುದುಗಿಹೋದ ಆ ಪರ್ವತದಿಂದಾಗಿ ಅಲ್ಲಿ  ನೀರಿನ ಸಮೂಹವೇ ಮೇಲೆದ್ದಿತು ಮತ್ತು ಅದು ಅಲ್ಲಿ ಎಲ್ಲೆಡೆ ಹರಡಿದ್ದ ಬೆಂಕಿಯನ್ನು ನಂದಿಸಿತು ಕೂಡಾ.

ಸೇನಾಂ ಪ್ರವಿಷ್ಟೌ ಸರ್ವರಾಜನ್ಯವೃನ್ದಂ ವ್ಯಮತ್ಥ್ನಾತಾಂ ದೇವವರೌ ಸ್ವಶಸ್ತ್ರೈಃ ।
ತತ್ರ ಹಂಸೋ ಡಿಭಕಶ್ಚೈಕಲವ್ಯಃ ಸ ಕೀಚಕಸ್ತೌ ಶಿಶುಪಾಲಪೌಣ್ಡ್ರಕೌ ॥೧೬.೧೫ ॥

ಭೌಮಾತ್ಮಜೌ ದನ್ತವಕ್ರಶ್ಚ ರುಗ್ಮೀ ಸೌಭಾಧಿಪೋ ಮೈನ್ದಮೈನ್ದಾನುಜೌ ಚ ।
ಅನ್ಯೇ ಚ ಯೇ ಪಾರ್ತ್ಥಿವಾಃ ಸರ್ವ ಏವ ಕ್ರೋಧಾತ್ ಕೃಷ್ಣಂ ಪರಿವಾರ್ಯ್ಯಾಭ್ಯವರ್ಷನ್ ॥೧೬.೧೬ ॥

ಸೇನೆಯನ್ನು ಪ್ರವೇಶಿಸಿದ ದೇವತಾಶ್ರೇಷ್ಠ ಬಲರಾಮ-ಕೃಷ್ಣರು ಸರ್ವರಾಜರ ಸಮೂಹವನ್ನು ಚೆನ್ನಾಗಿ ನಿಗ್ರಹಿಸಿದರು. ಆಗ ಹಂಸ, ಡಿಭಕ, ಏಕಲವ್ಯ, ಕೀಚಕ, ಶಿಶುಪಾಲ, ಪೌಣ್ಡ್ರಕ, ಭಗದತ್ತ, ದಂತವಕ್ರ, ರುಗ್ಮಿ, ಸಾಲ್ವ, ಮೈನ್ಧ, ವಿವಿದ, ಇತರ ಎಲ್ಲಾ ರಾಜರು ಸಿಟ್ಟಿನಿಂದ ಕೃಷ್ಣನನ್ನು ಸುತ್ತುವರಿದು ಅವನ ಮೇಲೆ ಬಾಣಗಳ ಮಳೆಗರೆದರು.     

ಶಸ್ತ್ರೈರಸ್ತ್ರೈರ್ದ್ದ್ರುಮಪೂಗೈಃ ಶಿಲಾಭಿರ್ಭಕ್ತಾಶ್ಚ ಯೇ ಶಲ್ಯಬಾಹ್ಲೀಕಮುಖ್ಯಾಃ ।
ಸಸೋಮದತ್ತಾಃ ಸೌಮದತ್ತಿರ್ವಿರಾಟಃ  ಪಾಞ್ಚಾಲರಾಜಶ್ಚ ಜರಾಸುತಸ್ಯ ।
ಭಯಾತ್ ಕೃಷ್ಣಂ ಶಸ್ತ್ರವರ್ಷೈರವರ್ಷನ್ ಕಾರಾಗೃಹೇ ವಾಸಿತಾ ಮಾಗಧೇನ ॥೧೬.೧೭ ॥

ಆ ರಾಜರುಗಳಲ್ಲಿ ಕೃಷ್ಣನ ಭಕ್ತರಾಗಿರುವ ಶಲ್ಯ, ಬಾಹ್ಲೀಕ, ಮೊದಲಾಗಿರುವ, ಸೋಮದತ್ತನಿಂದ ಕೂಡಿರುವ, ಸೋಮದತ್ತನ ಮಗನಾದ ಭೂರಿಶ್ರವಸ್ಸು, ವಿರಾಟ, ದ್ರುಪದ, ಇವರೆಲ್ಲರೂ ಕೂಡಾ (ಭಕ್ತರಾಗಿದ್ದರೂ ಕೂಡಾ) ಜರಾಸಂಧನಿಂದ ಹಿಂದೆ ಕಾರಾಗ್ರಹ ಪೀಡಿತರಾಗಿದ್ದುದರ ಭಯದಿಂದಾಗಿ, ಶಸ್ತ್ರಾಸ್ತ್ರದ ಮಳೆಗೆರೆಯುವಿಕೆಯಿಂದ ಕೃಷ್ಣನನ್ನು ಪೀಡಿಸಿದರು. 

ಸರ್ವಾನೇತಾಞ್ಛರವರ್ಷೇಣ ಕೃಷ್ಣೋ ವಿಸೂತವಾಜಿಧ್ವಜಶಸ್ತ್ರವರ್ಮ್ಮಣಃ ।
ಕೃತ್ವಾ ವಮಚ್ಛೋಣಿತಾನಾರ್ತ್ತರೂಪಾನ್ ವಿದ್ರಾವಯಾಮಾಸ ಹರಿರ್ಯ್ಯಥಾ ಮೃಗಾನ್ ॥೧೬.೧೮ ॥

ಆ ಎಲ್ಲಾ ರಾಜರುಗಳನ್ನು ಕೃಷ್ಣನು ಶರವರ್ಷದಿಂದ (ಬಾಣಗಳ ಮಳೆಗರೆದು), ಕುದುರೆ, ಧ್ವಜ, ಶಸ್ತ್ರ, ಕವಚ ಇವುಗಳಿಂದ ರಹಿತರನ್ನಾಗಿ ಮಾಡಿ, ರಕ್ತಕಾರಿಕೊಂಡ ಭಯಂಕರವಾದ ಶರೀರವುಳ್ಳವರನ್ನಾಗಿ ಮಾಡಿ ಓಡಿಸಿದನು. ಸಿಂಹವು ಹೇಗೆ ಜಿಂಕೆಗಳನ್ನು ಓಡಿಸುತ್ತದೋ ಹಾಗೇ.

ಹತ್ವಾ ಸೇನಾಂ ವಿಂಶದೋಕ್ಷೋಹಿಣೀಂ ತಾಂ ತ್ರಿಭಿರ್ಯ್ಯುಕ್ತಾಂ ರುಗ್ಮಿಣಂ ನೈವ ಕೃಷ್ಣಃ ।
ರುಗ್ಮಿಣ್ಯರ್ತ್ಥೇ ಪೀಡಯಾಮಾಸ ಶಸ್ತ್ರಾಣ್ಯಸ್ಯ ಚ್ಛಿತ್ವಾ ವಿರಥಂ ದ್ರಾವಯಾನಃ ॥೧೬.೧೯ ॥

ಹೀಗೆ ಶ್ರೀಕೃಷ್ಣನು ೨೩ ಅಕ್ಷೋಹಿಣಿಯಿಂದ ಕೂಡಿರುವ ಆ ಸೇನೆಯನ್ನು ಸಂಹಾರಮಾಡಿದನು.  ರುಗ್ಮಿಯನ್ನು ಮಾತ್ರ ಶ್ರೀಕೃಷ್ಣನು ರುಗ್ಮಿಣಿಗಾಗಿ ಹೆಚ್ಚಾಗಿ ಪೀಡಿಸಲಿಲ್ಲ. ಅವನ ಆಯುಧಗಳನ್ನು ಕತ್ತರಿಸಿದ ಶ್ರೀಕೃಷ್ಣ , ಅವನನ್ನು ರಥಹೀನನನ್ನಾಗಿ ಮಾಡಿ ಅಲ್ಲಿಂದ ಓಡಿಸಿದನು.




[1]  ಇಂದಿನ ‘ಗೋವಾ’ ಎನ್ನುವ ಹೆಸರು ಈ ಪರ್ವತದ ಹೆಸರಿನಿಂದಲೇ ಬಂದಿರುವುದು.