ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, April 29, 2020

Mahabharata Tatparya Nirnaya Kannada 17124_17131


ಸ ಬಾಹುನೈವ ಕೇಶವೋ ವಿಜಿತ್ಯ ಯಾವನಂ ಪ್ರಭುಃ ।
ನಿಹತ್ಯ ಸರ್ವಸೈನಿಕಾನ್ ಸ್ವಮಸ್ಯ ಯಾಪಯತ್ ಪುರೀಮ್ ॥೧೭.೧೨೪॥

ಕೃಷ್ಣನಾದರೋ, ಕೇವಲ ತನ್ನ ಬಾಹುಗಳಿಂದ ಕಾಲಯವನನನ್ನು ಗೆದ್ದು, ಅವನ ಎಲ್ಲಾ ಸೈನಿಕರನ್ನು ಕೊಂದು, ಅವನಿಗೆ ಸೇರಿದ ಎಲ್ಲಾ  ದ್ರವ್ಯಗಳನ್ನು ತನ್ನ ಪಟ್ಟಣವನ್ನು ಕುರಿತು ಕಳುಹಿಸಿಕೊಟ್ಟನು.

ಸಹಾಸ್ತ್ರಶಸ್ತ್ರಸಞ್ಚಯಾನ್ ಸೃಜನ್ತಮಾಶು ಯಾವನಮ್ ।
ನ್ಯಪಾತಯದ್ ರಥೋತ್ತಮಾತ್ ತಳೇನ ಕೇಶವೋsರಿಹಾ ॥೧೭.೧೨೫॥

ಶತ್ರುಗಳನ್ನು ಕೊಲ್ಲುವ ಕೇಶವನು, ಅಸ್ತ್ರ-ಶಸ್ತ್ರಗಳ ಸಮೂಹವನ್ನೇ ತನ್ನತ್ತ ಬಿಡುತ್ತಿರುವ ಕಾಲಯವನನನ್ನು  ಉತ್ಕೃಷ್ಟವಾದ ಅವನ ರಥದಿಂದ ಕೆಳಗೆ ಬೀಳಿಸಿದನು.

ವಿವಾಹನಂ ನಿರಾಯುಧಂ ವಿಧಾಯ ಬಾಹುನಾ ಕ್ಷಣಾತ್ ।
ವಿಮೂರ್ಚ್ಛಿತಂ ನಚಾಹನತ್ ಸುರಾರ್ತ್ಥಿತಂ ಸ್ಮರನ್ ಹರಿಃ ॥೧೭.೧೨೬॥

ಪರಮಾತ್ಮನು ಕ್ಷಣದಲ್ಲಿ ತನ್ನ ಬಾಹುವಿನಿಂದ ಅವನನ್ನು ವಾಹನವಿಲ್ಲದವನಾಗಿಯೂ, ಆಯುಧವಿಲ್ಲದವನಾಗಿಯೂ ಮಾಡಿದನು.  ಮೂರ್ಛೆಗೊಂಡ ಅವನನ್ನು ದೇವತೆಗಳ ಪ್ರಾರ್ಥನೆಯನ್ನು  ನೆನಪಿಸಿಕೊಂಡು ಕೊಲ್ಲಲಿಲ್ಲ.

[ದೇವತೆಗಳ ಪ್ರಾರ್ಥನೆ ಏನಾಗಿತ್ತು?]

ಪುರಾ ಹಿ ಯೌವನಾಶ್ವಜೇ ವರಪ್ರದಾಃ ಸುರೇಶ್ವರಾಃ ।
ಯಯಾಚಿರೇ ಜನಾರ್ದ್ದನಂ ವರಂ ವರಪ್ರದೇಶ್ವರಮ್ ॥೧೭.೧೨೭॥

ಅನರ್ತ್ಥಕೋ ವರೋsಮುನಾ ವೃತೋsಪಿ ಸಾರ್ತ್ಥಕೋ ಭವೇತ್ ।
ಅರಿಂ ಭವಿಷ್ಯಯಾವನಂ ದಹತ್ವಯಂ ತವೇಶ್ವರ ॥೧೭.೧೨೮॥

ಯುವನಾಶ್ವನ ಮಗ ಮಾನ್ಧಾತಾ, ಮಾನ್ಧಾತಾನ ಮಗನಾದ  ಮುಚುಕುನ್ದನಿಗೆ ಹಿಂದೆ  ವರವನ್ನು ನೀಡಿದ್ದ ಶ್ರೇಷ್ಠರಾದ ದೇವತೆಗಳು, ತಾವು ಕೊಟ್ಟ ವರವನ್ನು ಸತ್ಯವಾಗಿಸುವಂತೆ, ವರವನ್ನು ಕೊಡುವವರಲ್ಲಿಯೇ ಅಗ್ರಗಣ್ಯನಾದ ನಾರಾಯಣನನ್ನು ಕುರಿತು ಹೀಗೆ ಬೇಡಿದ್ದರು:
‘ಈ ಮುಚುಕುನ್ದನಿಂದ ವ್ಯರ್ಥವಾದ ವರವು ಬೇಡಲ್ಪಟ್ಟರೂ ಕೂಡಾ, ಅದು ಅವನಿಗೆ ಸಾರ್ಥಕವಾಗಬೇಕು. ನಿನ್ನ ಶತ್ರುವಾಗಿರುವ, ಮುಂದೆ ಬರುವ ಕಾಲಯವನನನ್ನು ಈ ಮುಚುಕುನ್ದನು  ಸುಟ್ಟುಬಿಡಲಿ’  ಎಂದು.

ತಥಾsಸ್ತ್ವಿತಿ ಪ್ರಭಾಷಿತಂ ಸ್ವವಾಕ್ಯಮೇವ ಕೇಶವಃ ।
ಋತಂ ವಿಧಾತುಮಭ್ಯಯಾತ್ ಸ ಯೌವನಾಶ್ವಜಾನ್ತಿಕಮ್ ॥೧೭.೧೨೯॥

ಕೃಷ್ಣನು ‘ಹಾಗೆಯೇ ಆಗಲಿ’ ಎಂದು ಹೇಳಲ್ಪಟ್ಟ  ತನ್ನ ಮಾತನ್ನೇ ಸತ್ಯವನ್ನಾಗಿ ಮಾಡಲು ಮುಚಕುನ್ದನ ಸಮೀಪ ತೆರಳಿದನು.

ಸಸಙ್ಜ್ಞಕೋsಥ ಯಾವನೋ ಧರಾತಳಾತ್ ಸಮುತ್ಥಿತಃ ।
ನಿಪಾತ್ಯ ಯಾನ್ತಮೀಶ್ವರಂ ಸ ಪೃಷ್ಠತೋsನ್ವಯಾತ್ ಕ್ರುಧಾ ॥೧೭.೧೩೦॥

ಸ್ವಲ್ಪಹೊತ್ತಾದಮೇಲೆ, ಪ್ರಜ್ಞೆಬಂದ ಕಾಲಯವನನು, ಭೂಮಿಯಿಂದ ಮೇಲೆದ್ದು, ಕೋಪದಿಂದ,  ತೆರಳುತ್ತಿರುವ ಕೃಷ್ಣನನ್ನು ಹಿಂದಿನಿಂದ ಅನುಸರಿಸಿದನು.

[ಈ ಎಲ್ಲಾ ಘಟನೆಯ ವಿವರವನ್ನು ನಾವು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೭.೪೩-೪೭)ಕಾಣುತ್ತೇವೆ:  ಮಾನ್ಧಾತುಸ್ತು ಸುತೋ ರಾಜಾ ಮುಚುಕುನ್ದೋ ಮಹಾಯಶಾಃ  । (ಯುವನಾಶ್ವನ ಮಗ ಮಾನ್ಧಾತ, ಮಾನ್ಧಾತುವಿನ ಮಗ  ಮುಚುಕುನ್ದ) ಪುರಾ ದೇವಾಸುರೇ ಯುದ್ಧೇ ಕೃತಕರ್ಮ ಮಹಾಬಲಃ । ವರೇಣ  ಚ್ಛನ್ದಿತೋ ದೆವೈರ್ನಿದ್ರಾಮೇವ ಗೃಹೀತವಾನ್ ।  (ದೇವಾಸುರ ಯುದ್ಧದಲ್ಲಿ ದೇವತೆಗಳ ಪರವಾಗಿ ಯುದ್ಧಮಾಡಿ ದಣಿದಿದ್ದ ಮುಚುಕುನ್ದ, ಯುದ್ಧಾನಂತರ  ತನಗೆ ವಿಶ್ರಾಂತಿಬೇಕು ಎಂದು ನಿದ್ರೆಯನ್ನೇ ವರವಾಗಿ ಬೇಡಿದ) ಶ್ರಾನ್ತಸ್ಯ ತಸ್ಯ ವಾಗೇವಂ ತದಾ ಪ್ರಾದುರಭೂತ್ ಕಿಲ । ಪ್ರಸುಪ್ತೋ ಬೋಧಯೇದ್ ಯೋ ಮಾಂ ತಂ ದಹೇಯಮಹಂ ಸುರಾಃ  ।  (‘ನಾನು ಮಲಗಿರುತ್ತೇನೆ. ಯಾರಾದರು ವಿಶ್ರಾಂತಿ ಕಾಲದಲ್ಲಿ ನನ್ನನ್ನು ಎಬ್ಬಿಸಿದರೆ ಅವರು ಬಸ್ಮವಾಗಲಿ’ ಎಂದು ಅವನು ವರವನ್ನು ಬೇಡಿದ್ದ) ಚಕ್ಷುಷಾ ಕ್ರೋಧದೀಪ್ತೇನ ಏವಮಾಹ ಪುನಃಪುನಃ  (ಒಮ್ಮೆ ಅಲ್ಲ, ಪದೇಪದೇ ಅದನ್ನೇ ಕೇಳಿದ). ಏವಮಸ್ತ್ವಿತಿ ತಂ ಶಕ್ರ ಉವಾಚ ತ್ರಿದಶೈಃ ಸಹ ।  ಸ ಸುರೈರಭ್ಯನುಜ್ಞಾತೋ ಲೋಕಂ  ಮಾನುಷಮಾಗಮತ್ । ಸ ಪರ್ವತಗುಹಾಂ  ಕಾಞ್ಚಿತ್ ಪ್ರವಿಷ್ಯ ಶ್ರಮಕರ್ಷಿತಃ  (ವರವನ್ನು ಪಡೆದ ಮುಚುಕುನ್ದ ಮನುಷ್ಯಲೋಕಕ್ಕೆ ಬಂದು, ಗೂಢವಾದ ಪರ್ವತದ ಗುಹೆಯ  ಒಳಗಡೆ ಮಲಗಿದ್ದ).  ಸುಶ್ವಾಪ ಕಾಲಮೇತಂ ವೈ ಯಾವತ್ ಕೃಷ್ಣಸ್ಯ ದರ್ಶನಮ್’ (ಶ್ರೀಕೃಷ್ಣನ ದರ್ಶನವಾಗುವ ತನಕವೂ ಅಲ್ಲೇ ಮಲಗಿದ್ದ. 

ಹರಿರ್ಗ್ಗುಹಾಂ ನೃಪಸ್ಯ ತು ಪ್ರವಿಶ್ಯ ಸಂವ್ಯವಸ್ಥಿತಃ ।
ಸ ಯಾವನಃ ಪದಾsಹನನ್ನೃಪಂ ಸ ತಂ ದದರ್ಶ ಹ ॥೧೭.೧೩೧॥

ಪರಮಾತ್ಮನು ಮುಚುಕುನ್ದ ರಾಜನು ನಿದ್ರಿಸುತ್ತಿರುವ ಗವಿಯನ್ನು ಪ್ರವೇಶಮಾಡಿ, ಅಲ್ಲೇ ಅಡಗಿ ನಿಂತ. ಶ್ರೀಕೃಷ್ಣನನ್ನು ಹಿಂಬಾಲಿಸಿ ಬಂದ ಕಾಲಯವನನು ನಿದ್ರಿಸುತ್ತಿರುವ ಮುಚುಕುನ್ದನನ್ನು ತುಳಿದ. ಆಗ ಮುಚುಕುನ್ದ ನಿದ್ರೆಯಿಂದೆದ್ದು ಕಾಲಯವನನನ್ನು ಕಂಡ.

Sunday, April 26, 2020

Mahabharata Tatparya Nirnaya Kannada 17117_17123


ಸಮಸ್ತಮಾಧುರಾನ್ ಪ್ರಭುಃ ಕುಶಸ್ಥಲೀಸ್ಥಿತಾನ್ ಕ್ಷಣಾತ್ ।
ವಿಧಾಯ ಬಾಹುಯೋಧಕಃ ಸ ಯಾವನಂ ಸಮಭ್ಯಯಾತ್ ॥೧೭.೧೧೭॥

ಸರ್ವಸಮರ್ಥನಾದ ಕೃಷ್ಣನು ಮಧುರಾಪಟ್ಟಣ ಪ್ರದೇಶದಲ್ಲಿರುವ ಎಲ್ಲಾ ನಾಗರಿಕರನ್ನು ಕ್ಷಣದಲ್ಲಿಯೇ ದ್ವಾರಕಾಪಟ್ಟಣದಲ್ಲಿ ಇರುವವರನ್ನಾಗಿ ಮಾಡಿ, ಕೈಗಳಿಂದಲೇ ಯುದ್ಧ (ಬಾಹುಯುದ್ಧ) ಮಾಡಲು ಬಯಸಿ, ಕಾಲಯವನನನ್ನು  ಎದುರುಗೊಂಡ.

[ಹಾಗಾದರೆ ಶ್ರೀಕೃಷ್ಣ ಮಧುರಾಪಟ್ಟಣದಲ್ಲಿದ್ದ  ಯಾದವರನ್ನು ಕಾಲಯವನ ಹಾಗೂ ಜರಾಸಂಧನಿಂದ ರಕ್ಷಿಸುವ ಶಕ್ತಿ ಇಲ್ಲದೇ ದ್ವಾರಕಾನಗರಿಗೆ ಸ್ಥಳಾಂತರಿಸಿದನೇ ಎಂದರೆ :]

ಅನನ್ತಶಕ್ತಿರಪ್ಯಜಃ ಸುನೀತಿದೃಷ್ಟಯೇ ನೃಣಾಮ್ ।
ವ್ಯವಾಸಯನ್ನಿಜಾನ್ ಜನಾನ್ ಸ ಲೀಲಯೈವ ಕೇವಲಮ್ ॥೧೭.೧೧೮॥

ಎಣೆಯಿರದ ಕಸುವಿನವನಾದ, ಎಂದೂ ಹುಟ್ಟದ ಪರಮಾತ್ಮನು, ಮನುಷ್ಯರಿಗೆ ಆಪತ್ಕಾಲದಲ್ಲಿ ಅನುಸರಿಸಬೇಕಾದ ನೀತಿಯನ್ನು ತೋರಿಸಲೋಸುಗ, ಕೇವಲ ಲೀಲೆಯಿಂದ ತನ್ನವರನ್ನು ಸ್ಥಳಾಂತರ ಮಾಡಿದ.

ಅನಾದ್ಯನನ್ತಕಾಲಕಂ ಸಮಸ್ತಲೋಕಮಣ್ಡಲಮ್ ।
ಯದೀಕ್ಷಯೈವ ರಕ್ಷ್ಯತೇ ಕಿಮಸ್ಯ ವೃಷ್ಣಿರಕ್ಷಣಮ್ ॥೧೭.೧೧೯॥

ಅನಾದಿಕಾಲದಿಂದ, ಅನಂತಕಾಲದವರೆಗೆ ಇಡೀ ಲೋಕಸಮೂಹವು ಯಾರ ನೋಟದಿಂದಲೇ ರಕ್ಷಿಸಲ್ಪಡುತ್ತಿದೆಯೋ, ಅಂತಹ ಪರಮಾತ್ಮನಿಗೆ ಯಾದವರ ರಕ್ಷಣೆ ಯಾವ ಲೆಕ್ಕ?

ನಿರಾಯುಧಂ ಚ ಮಾಮಯಂ ವರಾಚ್ಛಿವಸ್ಯ ನ ಕ್ಷಮಃ ।
ಸಮಸ್ತಸೇನಯಾ ಯುತೋsಪಿ ಯೋದ್ಧುಮಿತ್ಯದರ್ಶಯತ್ ॥೧೭.೧೨೦॥

‘ಯಾವುದೇ ಆಯುಧವನ್ನು ಇಟ್ಟುಕೊಳ್ಳದ ನನ್ನನ್ನು, ಇವನು ಸದಾಶಿವನ ವರವಿದ್ದೂ ಗೆಲ್ಲಲಾರ’. ಕೇವಲ ಅವನೊಬ್ಬನೇ ಅಲ್ಲ, ಸಮಸ್ತ ಸೇನೆಯೊಂದಿಗೆ ಕೂಡಿದರೂ ಕೂಡಾ, ಅವನು ಕೃಷ್ಣನೊಂದಿಗೆ   ಯುದ್ಧಮಾಡಲು  ಸಮರ್ಥನಲ್ಲ  ಎಂಬುವುದನ್ನು  ಭಗವಂತ ತೋರಿಸಿದ.


[ಕಾಲಯವನನನ್ನು ಯುದ್ಧಭೂಮಿಯಲ್ಲಿ ಕೃಷ್ಣ ಎದುರುಗೊಳ್ಳುವುದಕ್ಕೂ ಮೊದಲು ಒಂದು ಘಟನೆ ನಡೆದಿತ್ತು. ಆ ಘಟನೆಯ ವಿವರವನ್ನು ಇಲ್ಲಿ ಹೇಳುತ್ತಾರೆ:]

ಸ ಕೃಷ್ಣಪನ್ನಗಂ ಘಟೇ ನಿಧಾಯ ಕೇಶವೋsರ್ಪ್ಪಯತ್ ।
ನಿರಾಯುಧೋsಪ್ಯಹಂ ಕ್ಷಮೋ ನಿಹನ್ತುಮಪ್ರಿಯಾನಿತಿ ॥೧೭.೧೨೧॥

ಕೃಷ್ಣನು ಕಪ್ಪುಸರ್ಪವೊಂದನ್ನು(ಘಟಸರ್ಪವೊಂದನ್ನು) ಮಡಿಕೆಯಲ್ಲಿಟ್ಟು, ಕಾಲಯವನನಿಗೆ ಕಳುಹಿಸಿದ. ಅದರ ಹಿಂದಿನ ಸಂದೇಶ ಏನು ಎಂದರೆ: ನಾನು ಆಯುಧವಿಲ್ಲದೇ, ನನಗೆ ಅಪ್ರಿಯರಾದವರನ್ನು ಕೊಲ್ಲಲು ಸಮರ್ಥನು.(ಹೇಗೆ ಹಾವು ಯಾವುದೇ ಆಯುಧವಿಲ್ಲದೆ ತನ್ನ ಶತ್ರುವನ್ನು ಕೊಲ್ಲಬಲ್ಲದೋ, ಹಾಗೆ).

ಘಟಂ ಪಿಪೀಲಿಕಾಗಣೈಃ ಪ್ರಪೂರ್ಯ್ಯ ಯಾವನೋsಸ್ಯ ಚ ।
ಬಹುತ್ವತೋ ವಿಜೇಷ್ಯ ಇತ್ಯಹಿಂ ಮೃತಂ ವ್ಯದರ್ಶಯತ್ ॥೧೭.೧೨೨॥

ಕಾಲಯವನನು ಇರುವೆಗಳ ಸಮೂಹಗಳಿಂದ ಆ ಸರ್ಪವಿರುವ ಮಡಿಕೆಯನ್ನು ತುಂಬಿಸಿ, ಸತ್ತ ಹಾವನ್ನು ಕೃಷ್ಣನಿಗೆ ತೋರಿಸಿಕೊಟ್ಟ. ಅದರರ್ಥ: ‘ಬಹಳ ಜನ ಇರುವುದರಿಂದ ನಾನೇ ಗೆಲ್ಲುತ್ತೇನೆ ಎಂದು.

[ಈ ಎಲ್ಲಾ ಅಂಶಗಳನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೭.೩೨-೩೭) ವಿವರಿಸಲಾಗಿದೆ: ‘ತತಃ ಕುಮ್ಭೇ ಮಹಾಸರ್ಪಂ ಭಿನ್ನಾಞ್ಜನಚಯೋಪಮಮ್ ಘೋರಮಾಶೀವಿಷಂ ಕೃಷ್ಣಂ ಕೃಷ್ಣಃ  ಪ್ರಾಕ್ಷೇಪಯತ್  ತದಾ । ತತಸ್ತಂ ಮುದ್ರಯಿತ್ವಾ ತು ಸ್ವೇನ ದೂತೇನ ಹಾರಯತ್ । (ಅಂಜನದಂತೆ ಕಪ್ಪಗಿರುವ,  ದಂತದಲ್ಲಿ ವಿಷವಿರುವ(ಆಶೀವಿಷ) ಹಾವನ್ನು ಕುಮ್ಭದಲ್ಲಿಟ್ಟು, ಅದನ್ನು ಮುಚ್ಚಿ (ಮುದ್ರೆಮಾಡಿ), ದೂತನ ಮುಖೇನ ಶ್ರೀಕೃಷ್ಣ ಕಳುಹಿಸಿದ).  ನಿದರ್ಶನಾರ್ಥಂ  ಗೋವಿಂದೋ  ಭೀಶಯಾಮಾಸ  ತಂ ನೃಪಮ್ । ಸ ದೂತಃ ಕಾಲಯವನೇ ದರ್ಶಯಾಮಾಸ ತಂ ಘಟಮ್ । ಕಾಳಸರ್ಪೋಪಮಃ ಕೃಷ್ಣ ಇತ್ಯುತ್ತ್ವಾ ಭರತರ್ಷಭ । (ಕಾಲಯವನನನ್ನು ಕಂಡ ದೂತ, ‘ಈ ಮಡಿಕೆಯ ಒಳಗಡೆ ಇರುವ ಹಾವಿನಷ್ಟೇ ಭಯಂಕರ ಶ್ರೀಕೃಷ್ಣ’  ಎಂದ) ತತ್ಕಾಲಯವನೋ ಬುದ್ಧ್ವಾ ತ್ರಾಸನಂ ಯಾದವೈಃ ಕೃತಮ್ । ಪಿಪೀಲಿಕಾನಾಂ ಚನ್ಡಾನಾಂ ಪೂರಯಾಮಾಸ ತಂ ಘಟಮ್ ।  ಸ ಸರ್ಪೋ ಬಹುಭಿಸ್ತೀಕ್ಷ್ಣೈಃ ಸರ್ವತಸ್ತೈಃ ಪಿಪೀಲಿಕೈಃ  । ಭಕ್ಷ್ಯಮಾಣಃ  ಕಿಲಾಙ್ಗೇಷು ಭಸ್ಮೀಭೂತೋsಭವತ್ ತದಾ ।  ತಂ ಮುದ್ರಯಿತ್ವಾsಥ ಘಟಂ ತಥೈವ  ಯವನಾಧಿಪಃ । ಪ್ರೇಶಯಾಮಾಸ ಕೃಷ್ಣಾಯ ಬಾಹುಲ್ಯಮುಪವರ್ಣಯನ್’ (ಕಾಲಯವನ ಬಹಳ ಪಿಪೀಲಿಕಗಳ  ಗಣವನ್ನು ಮಡಿಕೆಯೊಳಗೆ ಬಿಟ್ಟ. ಆಗ ಹಾವು ಸತ್ತಿತು. ಹೀಗೆ,  ನಾವು ಬಹಳ ಜನರಿದ್ದೇವೆ ಎಂಬ ಸಂದೇಶವನ್ನು ಆತ ಹಿಂದೆ ಕಳುಹಿಸಿದ)].

ಕಿಮತ್ರ ಸತ್ಯಮಿತ್ಯಹಂ ಪ್ರದರ್ಶಯಿಷ್ಯ ಇತ್ಯಜಃ ।
ಉದೀರ್ಯ ದೂತಮಭ್ಯಯಾತ್ ಸ ಯಾವನಂ ಪ್ರಬಾಧಿತುಮ್ ॥೧೭.೧೨೩॥

‘ಈವಿಚಾರದಲ್ಲಿ ಯಾವುದು ಸತ್ಯವಾಗುವುದು ಎಂದು ತೋರಿಸುತ್ತೇನೆ’ ಎಂದು ದೂತನನ್ನು ಕುರಿತು ಹೇಳಿದ ಶ್ರೀಕೃಷ್ಣ,  ಕಾಲಯವನನನ್ನು ಪೀಡಿಸಲು ತೆರಳಿದ.

Saturday, April 25, 2020

Mahabharata Tatparya Nirnaya Kannada 17112_17116


ಸ ಭೌವನಃ ಸಮಾಗತಃ ಕುಶಸ್ಥಲೀಂ ವಿನಿರ್ಮ್ಮಮೇ ।  
ನಿರಮ್ಬುಕೇ ತು ಸಾಗರೇ ಜನಾರ್ದ್ದನಾಜ್ಞಯಾ ಕೃತೇ ॥೧೭.೧೧೨॥

ಭುವನನೆಂಬ ಋಷಿಯ ಮಗನಾದ ವಿಶ್ವಕರ್ಮನು ಬಂದವನಾಗಿ, ಪರಮಾತ್ಮನ ಆಜ್ಞೆಯಿಂದ ಆ ಪ್ರದೇಶದಲ್ಲಿ ನೀರಿಲ್ಲವಾಗುತ್ತಿರಲು, ಅಲ್ಲಿ  ದ್ವಾರಕಾನಗರಿಯನ್ನು ನಿರ್ಮಿಸಿದನು.

[ಈ ಕುರಿತಾದ ವಿವರ ಮಹಾಭಾರತದ ಆದಿಪರ್ವದಲ್ಲಿ(೩೨.೩)ಕಾಣಸಿಗುತ್ತದೆ ‘ಭೌವನಃ ಸುಮಹಾವೀರ್ಯಃ  ಸೋಮಸ್ಯ ಪರಿರಕ್ಷಿತಾ’.  ಋಗ್ವೇದದ ವಿಶ್ವಕರ್ಮಸೂಕ್ತದ(೧೦.೮೧)  ಅನುಕ್ರಮಣಿಕೆಯಲ್ಲಿ ಹೇಳುವಂತೆ: ‘ಯ ಇಮಾ ವಿಶ್ವಕರ್ಮಾ ಭೌವನೋ ವೈಶ್ವಕರ್ಮಣಂ ತು’  ಭಾಗವತದಲ್ಲೂ(೧೦.೫೩.೩೨-೩೪)  ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ವರುಣೇನಾಭಿಸಙ್ಗಮ್ಯ ಸಮಾಭಾಷ್ಯಾಭಿಪೂಜಿತಃ । ಇತಿ ಸಮ್ಮಂತ್ರ್ಯ ಭಗವಾನ್ ದುರ್ಗಂ ದ್ವಾದಶಯೋಜನಮ್ । (ಹನ್ನೆರಡು ಯೋಜನ ವಿಸ್ತಾರವಾಗಿರುವ ಪಟ್ಟಣವನ್ನು ಕಟ್ಟಲು ತೀರ್ಮಾನ ಮಾಡಿದ). ಅಂತಃಸಮುದ್ರೇ ನಗರಂ ಕೃಷ್ಟೋsದ್ಭುತಮಚೀಕರತ್ । ದೃಶ್ಯತೇ ಯತ್ರ ಹಿ ತ್ವಾಷ್ಟ್ರಂ ವಿಜ್ಞಾನಂ ಶಿಲ್ಪನೈಪುಣಮ್’ (ಸಮಗ್ರವಾದ ಶಿಲ್ಪಿನೈಪುಣ್ಯದಿಂದ ಕೂಡಿದ ದ್ವಾರಕಾಪಟ್ಟಣವನ್ನು ನಿರ್ಮಿಸಿದ ). ಇನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೪೪) ಹೇಳುವಂತೆ: ತತಃ ಸಾ ನಿರ್ಮಿತಾ ಕಾಂತಾ ಪುರೀ ದ್ವಾರಾವತೀ ತದಾ । ಮಾನಸೇನ ಪ್ರಯತ್ನೇನ ವೈಷ್ಣವೀ ವಿಶ್ವಕರ್ಮಣಾ’ (ಭಗವಂತ ಸಂಕಲ್ಪಮಾತ್ರದಿಂದ ವಿಶ್ವಕರ್ಮನ ಮುಖೇನ ಪಟ್ಟಣ ನಿರ್ಮಾಣ ಮಾಡಿದ).
ಹೀಗೆ ಈ ಪಟ್ಟಣದ ಇತಿಹಾಸವನ್ನು ಹರಿವಂಶಪರ್ವದಲ್ಲಿ, ವಿಷ್ಣುಪುರಾಣದಲ್ಲಿ,  ಭಾಗವತದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು. ‘ಒಂದು ಕಾಲದಲ್ಲಿ ಆ ಸ್ಥಳ ಪಟ್ಟಣವೇ ಆಗಿದ್ದು, ಆನಂತರ ಸಮುದ್ರ ಅದನ್ನು ಆಕ್ರಮಿಸಿ ಕೊಂಡಿತ್ತು. ಅದನ್ನು ಮತ್ತೆ ಶ್ರೀಕೃಷ್ಣ ಪಟ್ಟಣವನ್ನಾಗಿ ಮಾಡಿದ. ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡುತ್ತಿದ್ದಂತೆಯೇ ಸಮುದ್ರ ಆ ಸ್ಥಳವನ್ನು ಮತ್ತೆ ನುಂಗಿತು’ ಎಂದು ಮಹಾಭಾರತದ ಮೌಸಲಪರ್ವದಲ್ಲಿ ಹೇಳುತ್ತಾರೆ. ‘ಇಲ್ಲಿರುವ  ರತ್ನಗಳೆಲ್ಲವೂ ಹಾಗೇ ಇರಲಿ, ಇದನ್ನು ಯಾರಿಗೂ ಕೂಡಾ ಕೊಡಬಾರದು, ಮತ್ತೆ ನಾನು ಬರುತ್ತೇನೆ’ ಎಂದು ಸಮುದ್ರನಿಗೆ ಭಗವಂತನ ಆಜ್ಞೆಯಾಗಿದೆ ಎಂದೂ ಹೇಳುತ್ತಾರೆ].

ಮಹೋದಕಸ್ಯ ಮದ್ಧ್ಯತಶ್ಚಕಾರ ತಾಂ ಪುರೀಂ ಶುಭಾಮ್ ।
ದ್ವಿಷಟ್ಕಯೋಜನಾಯತಾಂ ಪಯೋಬ್ಧಿಮದ್ಧ್ಯಗೋಪಮಾಮ್ ॥೧೭.೧೧೩॥

ಹೀಗೆ, ಭಗವಂತನ ಆಜ್ಞೆಯಂತೆ, ಜಲಸಮೂಹದ ಮಧ್ಯದಲ್ಲಿ, ಹನ್ನೆರಡು ಯೋಜನ ವಿಸ್ತೃತವಾದ, ಕ್ಷೀರಸಾಗರ ಮಧ್ಯದಲ್ಲಿರುವ ಶ್ವೇತದ್ವೀಪಕ್ಕೆ ಸದೃಶವಾದ, ಶ್ರೇಷ್ಠವಾದ ಪಟ್ಟಣವನ್ನು ವಿಶ್ವಕರ್ಮ ನಿರ್ಮಾಣಮಾಡಿದನು.

ಚಕಾರ ಲಾವಣೋದಕಂ ಜನಾರ್ದ್ದನೋsಮೃತೋಪಮಮ್ ।
ಸಭಾಂ ಸುದರ್ಮ್ಮನಾಮಕಾಂ ದದೌ ಸಮೀರಣೋsಸ್ಯ ಚ ॥೧೧.೧೧೪॥

ಜನಾರ್ದನನು ಸಂಕಲ್ಪಮಾತ್ರದಿಂದ ಉಪ್ಪುನೀರನ್ನು ಅಮೃತತುಲ್ಯವನ್ನಾಗಿ ಮಾಡಿದನು. ದೇವಲೋಕದಲ್ಲಿದ್ದ ‘ಸುಧರ್ಮ’ ಎಂಬ ಹೆಸರಿನ ಸಭೆಯನ್ನು ಮುಖ್ಯಪ್ರಾಣದೇವರು ನೀಡಿದರು.  

[ವಿಷ್ಣುಪುರಾಣದಲ್ಲಿ(೫.೨೩.೧೩) ಹೇಳುವಂತೆ: ಯಾದವಾಭಿಭವಂ ದೃಷ್ಟಾ ಮಾ ಕುರ್ವನ್ತ್ವರಯೋsಧಿಕಾಃ । ಇತಿ ಸಞ್ಚಿನ್ತ್ಯ ಗೋವಿಂದೋ ಯೋಜನಾನಾಂ  ಮಹೋದಧಿಮ್ । ಯಯಾಚೇ ದ್ವಾದಶ ಪುರೀಂ ದ್ವಾರಕಾಂ  ತತ್ರ ನಿರ್ಮಮೇ’ (ಶ್ರೀಕೃಷ್ಣ ಸಮುದ್ರರಾಜನನ್ನು ಬೇಡಿಕೊಂಡ(ದರ್ಶನ ಭಾಷೆ), ಹಾಗೂ ಸಮುದ್ರ ಹನ್ನೆರಡು ಯೋಜನ ಸ್ಥಳವನ್ನು ಬಿಟ್ಟುಕೊಟ್ಟ). ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೭೬) ಈ ಕುರಿತಾದ ವಿವರ ಕಾಣಸಿಗುತ್ತದೆ. ‘ಸುಧರ್ಮಾಯ  ಸುಧರ್ಮಾಂ  ತಾಂ ಕೃಷ್ಣಯಾಕ್ಲಿಷ್ಟಕಾರಿಣೇ ದೇವೋ  ದೇವಸಭಾಂ  ದತ್ವಾ  ವಾಯುರಂತರ ಧೀಯತ’]

ಶತಕ್ರತೋಃ ಸಭಾಂ ತು ತಾಂ ಪ್ರದಾಯ ಕೇಶವಾಯ ಸಃ ।
ನಿಧೀನ್ ಸಮರ್ಪ್ಯ ಸರ್ವಶೋ ಯಯೌ ಪ್ರಣಮ್ಯ ತಂ ಪ್ರಭುಮ್ ॥೧೭.೧೧೫॥

ಇಂದ್ರನ ಸಭೆಯನ್ನು ಕೇಶವನಿಗಾಗಿ  ತಂದುಕೊಟ್ಟ, ಬೇರೆಬೇರೆ ಲೋಕಗಳಲ್ಲಿರುವ ಅಪೂರ್ವ ನಿಧಿಗಳನ್ನೂ ತಂದುಕೊಟ್ಟ ಮುಖ್ಯಪ್ರಾಣನು ಪರಮಾತ್ಮನಿಗೆ ನಮಸ್ಕಾರ ಮಾಡಿದನು.

ಸಮಸ್ತದೇವತಾಗಣಾಃ ಸ್ವಕೀಯಮರ್ಪ್ಪಯನ್ ಹರೌ ।
ವಿಮುಚ್ಯ ಪಕ್ಷಿಪುಙ್ಗವಂ ಸ ಯೋದ್ಧುಮೈಚ್ಛದಚ್ಯುತಃ ॥೧೭.೧೧೬॥

ಎಲ್ಲಾ ದೇವತೆಗಳ ಗಣಗಳೂ ಕೂಡಾ ತಮ್ಮತಮ್ಮ ಸಂಪತ್ತನ್ನು ಪರಮಾತ್ಮನಿಗೆ ಅರ್ಪಿಸಿದರು. ಶ್ರೀಕೃಷ್ಣನು ಪಕ್ಷಿಶ್ರೇಷ್ಠನಾದ ಗರುಡನನ್ನು ಬಿಟ್ಟು ತಾನೇ ಯುದ್ಧಮಾಡಲು ಬಯಸಿದನು.

[ಈ ಪ್ರಸಂಗವನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೬೪)  ವಿವರಿಸಿರುವುದನ್ನು ನಾವು ಕಾಣುತ್ತೇವೆ.  ಗೃಹೀತ್ವಾ  ಶಾಸನಂ ಮೂರ್ಧ್ನ ನಿಧಿರಾಟ್ ಕೇಶವಸ್ಯ ಹ । ನಿಧೀನಾಜ್ಞಾಪಯಾಮಾಸ ದ್ವಾರವತ್ಯಾಂ ಗೃಹೇಗೃಹೇ (ಇಲ್ಲಿ ನಿಧಿರಾಟ್ ಎಂದರೆ ನಮಗೆ ‘ಕುಬೇರ’ ಎಂಬಂತೆ ತೋರುತ್ತದೆ. ಆದರೆ ನಿಧಿಗಳಿಗೆ ಮೂಲ ಒಡೆಯ ಮುಖ್ಯಪ್ರಾಣನೇ. ನಿಧಿಗಳಿಗೆ ಒಡೆಯನಾದ ಮುಖ್ಯಪ್ರಾಣನು ದೇವರ ಆಜ್ಞೆಯನ್ನು ತಲೆಯಮೇಲೆ ಹೊತ್ತು, ಎಲ್ಲಾ ನಿಧಿಗಳನ್ನೂ ಕೂಡಾ, ದ್ವಾರವತಿಯ ಮನೆಮನೆಯಲ್ಲಿಯೂ ಇರುವಂತೆ ನೋಡಿಕೊಂಡ. ಭಾಗವತದಲ್ಲಿ( ೧೦.೫೩.೪೦-೪೧) ಹೇಳುವಂತೆ: ಶ್ಯಾಮೈಕಕರ್ಣಾನ್ ವರುಣೋ ಹಯಾನ್ ಶುಕ್ಲಾನ್ ಮನೋಜವಾನ್ । ದದೌ ಸಹಸ್ರಸಙ್ಖ್ಯಾತಾನ್ ದೇವದೇವಾಯ ತೋಯರಾಟ್ । ಅಷ್ಟೌ ನಿಧಿಪತಿಃ ಕೋಶಾನ್ ರತ್ನಪೂರ್ಣನವಿಕ್ಷಯಾನ್ । ತಥಾsನ್ಯೇ ಲೋಕಪಾಲಾಶ್ಚ ದದುಃ ಸ್ವಾಧಿಕೃತಂ ಧನಂ    (ಒಂದು ಕಿವಿ ಮಾತ್ರ ಕಪ್ಪಾಗಿರುವ, ಇಡೀ ದೇಹ ಬೆಳ್ಳಗಿರುವ, ವೇಗದಿಂದ ಸಾಗುವ, ಸಹಸ್ರಾರು ಸಂಖ್ಯೆಯ ಕುದುರೆಗಳನ್ನು ವರುಣನು ನೀಡಿದ. ಅವನು ಅಷ್ಟನಿಧಿಕೋಶಗಳನ್ನೇ ಕೊಟ್ಟ. ಹಾಗೆಯೇ, ಬೇರೆ ಲೋಕಪಾಲರೂ ಕೂಡಾ, ತಮ್ಮಲ್ಲಿರುವ ನಿಧಿಯನ್ನು ಪರಮಾತ್ಮನಿಗೆ ಅರ್ಪಿಸಿದರು).]