ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, April 25, 2020

Mahabharata Tatparya Nirnaya Kannada 17112_17116


ಸ ಭೌವನಃ ಸಮಾಗತಃ ಕುಶಸ್ಥಲೀಂ ವಿನಿರ್ಮ್ಮಮೇ ।  
ನಿರಮ್ಬುಕೇ ತು ಸಾಗರೇ ಜನಾರ್ದ್ದನಾಜ್ಞಯಾ ಕೃತೇ ॥೧೭.೧೧೨॥

ಭುವನನೆಂಬ ಋಷಿಯ ಮಗನಾದ ವಿಶ್ವಕರ್ಮನು ಬಂದವನಾಗಿ, ಪರಮಾತ್ಮನ ಆಜ್ಞೆಯಿಂದ ಆ ಪ್ರದೇಶದಲ್ಲಿ ನೀರಿಲ್ಲವಾಗುತ್ತಿರಲು, ಅಲ್ಲಿ  ದ್ವಾರಕಾನಗರಿಯನ್ನು ನಿರ್ಮಿಸಿದನು.

[ಈ ಕುರಿತಾದ ವಿವರ ಮಹಾಭಾರತದ ಆದಿಪರ್ವದಲ್ಲಿ(೩೨.೩)ಕಾಣಸಿಗುತ್ತದೆ ‘ಭೌವನಃ ಸುಮಹಾವೀರ್ಯಃ  ಸೋಮಸ್ಯ ಪರಿರಕ್ಷಿತಾ’.  ಋಗ್ವೇದದ ವಿಶ್ವಕರ್ಮಸೂಕ್ತದ(೧೦.೮೧)  ಅನುಕ್ರಮಣಿಕೆಯಲ್ಲಿ ಹೇಳುವಂತೆ: ‘ಯ ಇಮಾ ವಿಶ್ವಕರ್ಮಾ ಭೌವನೋ ವೈಶ್ವಕರ್ಮಣಂ ತು’  ಭಾಗವತದಲ್ಲೂ(೧೦.೫೩.೩೨-೩೪)  ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ವರುಣೇನಾಭಿಸಙ್ಗಮ್ಯ ಸಮಾಭಾಷ್ಯಾಭಿಪೂಜಿತಃ । ಇತಿ ಸಮ್ಮಂತ್ರ್ಯ ಭಗವಾನ್ ದುರ್ಗಂ ದ್ವಾದಶಯೋಜನಮ್ । (ಹನ್ನೆರಡು ಯೋಜನ ವಿಸ್ತಾರವಾಗಿರುವ ಪಟ್ಟಣವನ್ನು ಕಟ್ಟಲು ತೀರ್ಮಾನ ಮಾಡಿದ). ಅಂತಃಸಮುದ್ರೇ ನಗರಂ ಕೃಷ್ಟೋsದ್ಭುತಮಚೀಕರತ್ । ದೃಶ್ಯತೇ ಯತ್ರ ಹಿ ತ್ವಾಷ್ಟ್ರಂ ವಿಜ್ಞಾನಂ ಶಿಲ್ಪನೈಪುಣಮ್’ (ಸಮಗ್ರವಾದ ಶಿಲ್ಪಿನೈಪುಣ್ಯದಿಂದ ಕೂಡಿದ ದ್ವಾರಕಾಪಟ್ಟಣವನ್ನು ನಿರ್ಮಿಸಿದ ). ಇನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೪೪) ಹೇಳುವಂತೆ: ತತಃ ಸಾ ನಿರ್ಮಿತಾ ಕಾಂತಾ ಪುರೀ ದ್ವಾರಾವತೀ ತದಾ । ಮಾನಸೇನ ಪ್ರಯತ್ನೇನ ವೈಷ್ಣವೀ ವಿಶ್ವಕರ್ಮಣಾ’ (ಭಗವಂತ ಸಂಕಲ್ಪಮಾತ್ರದಿಂದ ವಿಶ್ವಕರ್ಮನ ಮುಖೇನ ಪಟ್ಟಣ ನಿರ್ಮಾಣ ಮಾಡಿದ).
ಹೀಗೆ ಈ ಪಟ್ಟಣದ ಇತಿಹಾಸವನ್ನು ಹರಿವಂಶಪರ್ವದಲ್ಲಿ, ವಿಷ್ಣುಪುರಾಣದಲ್ಲಿ,  ಭಾಗವತದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು. ‘ಒಂದು ಕಾಲದಲ್ಲಿ ಆ ಸ್ಥಳ ಪಟ್ಟಣವೇ ಆಗಿದ್ದು, ಆನಂತರ ಸಮುದ್ರ ಅದನ್ನು ಆಕ್ರಮಿಸಿ ಕೊಂಡಿತ್ತು. ಅದನ್ನು ಮತ್ತೆ ಶ್ರೀಕೃಷ್ಣ ಪಟ್ಟಣವನ್ನಾಗಿ ಮಾಡಿದ. ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡುತ್ತಿದ್ದಂತೆಯೇ ಸಮುದ್ರ ಆ ಸ್ಥಳವನ್ನು ಮತ್ತೆ ನುಂಗಿತು’ ಎಂದು ಮಹಾಭಾರತದ ಮೌಸಲಪರ್ವದಲ್ಲಿ ಹೇಳುತ್ತಾರೆ. ‘ಇಲ್ಲಿರುವ  ರತ್ನಗಳೆಲ್ಲವೂ ಹಾಗೇ ಇರಲಿ, ಇದನ್ನು ಯಾರಿಗೂ ಕೂಡಾ ಕೊಡಬಾರದು, ಮತ್ತೆ ನಾನು ಬರುತ್ತೇನೆ’ ಎಂದು ಸಮುದ್ರನಿಗೆ ಭಗವಂತನ ಆಜ್ಞೆಯಾಗಿದೆ ಎಂದೂ ಹೇಳುತ್ತಾರೆ].

ಮಹೋದಕಸ್ಯ ಮದ್ಧ್ಯತಶ್ಚಕಾರ ತಾಂ ಪುರೀಂ ಶುಭಾಮ್ ।
ದ್ವಿಷಟ್ಕಯೋಜನಾಯತಾಂ ಪಯೋಬ್ಧಿಮದ್ಧ್ಯಗೋಪಮಾಮ್ ॥೧೭.೧೧೩॥

ಹೀಗೆ, ಭಗವಂತನ ಆಜ್ಞೆಯಂತೆ, ಜಲಸಮೂಹದ ಮಧ್ಯದಲ್ಲಿ, ಹನ್ನೆರಡು ಯೋಜನ ವಿಸ್ತೃತವಾದ, ಕ್ಷೀರಸಾಗರ ಮಧ್ಯದಲ್ಲಿರುವ ಶ್ವೇತದ್ವೀಪಕ್ಕೆ ಸದೃಶವಾದ, ಶ್ರೇಷ್ಠವಾದ ಪಟ್ಟಣವನ್ನು ವಿಶ್ವಕರ್ಮ ನಿರ್ಮಾಣಮಾಡಿದನು.

ಚಕಾರ ಲಾವಣೋದಕಂ ಜನಾರ್ದ್ದನೋsಮೃತೋಪಮಮ್ ।
ಸಭಾಂ ಸುದರ್ಮ್ಮನಾಮಕಾಂ ದದೌ ಸಮೀರಣೋsಸ್ಯ ಚ ॥೧೧.೧೧೪॥

ಜನಾರ್ದನನು ಸಂಕಲ್ಪಮಾತ್ರದಿಂದ ಉಪ್ಪುನೀರನ್ನು ಅಮೃತತುಲ್ಯವನ್ನಾಗಿ ಮಾಡಿದನು. ದೇವಲೋಕದಲ್ಲಿದ್ದ ‘ಸುಧರ್ಮ’ ಎಂಬ ಹೆಸರಿನ ಸಭೆಯನ್ನು ಮುಖ್ಯಪ್ರಾಣದೇವರು ನೀಡಿದರು.  

[ವಿಷ್ಣುಪುರಾಣದಲ್ಲಿ(೫.೨೩.೧೩) ಹೇಳುವಂತೆ: ಯಾದವಾಭಿಭವಂ ದೃಷ್ಟಾ ಮಾ ಕುರ್ವನ್ತ್ವರಯೋsಧಿಕಾಃ । ಇತಿ ಸಞ್ಚಿನ್ತ್ಯ ಗೋವಿಂದೋ ಯೋಜನಾನಾಂ  ಮಹೋದಧಿಮ್ । ಯಯಾಚೇ ದ್ವಾದಶ ಪುರೀಂ ದ್ವಾರಕಾಂ  ತತ್ರ ನಿರ್ಮಮೇ’ (ಶ್ರೀಕೃಷ್ಣ ಸಮುದ್ರರಾಜನನ್ನು ಬೇಡಿಕೊಂಡ(ದರ್ಶನ ಭಾಷೆ), ಹಾಗೂ ಸಮುದ್ರ ಹನ್ನೆರಡು ಯೋಜನ ಸ್ಥಳವನ್ನು ಬಿಟ್ಟುಕೊಟ್ಟ). ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೭೬) ಈ ಕುರಿತಾದ ವಿವರ ಕಾಣಸಿಗುತ್ತದೆ. ‘ಸುಧರ್ಮಾಯ  ಸುಧರ್ಮಾಂ  ತಾಂ ಕೃಷ್ಣಯಾಕ್ಲಿಷ್ಟಕಾರಿಣೇ ದೇವೋ  ದೇವಸಭಾಂ  ದತ್ವಾ  ವಾಯುರಂತರ ಧೀಯತ’]

ಶತಕ್ರತೋಃ ಸಭಾಂ ತು ತಾಂ ಪ್ರದಾಯ ಕೇಶವಾಯ ಸಃ ।
ನಿಧೀನ್ ಸಮರ್ಪ್ಯ ಸರ್ವಶೋ ಯಯೌ ಪ್ರಣಮ್ಯ ತಂ ಪ್ರಭುಮ್ ॥೧೭.೧೧೫॥

ಇಂದ್ರನ ಸಭೆಯನ್ನು ಕೇಶವನಿಗಾಗಿ  ತಂದುಕೊಟ್ಟ, ಬೇರೆಬೇರೆ ಲೋಕಗಳಲ್ಲಿರುವ ಅಪೂರ್ವ ನಿಧಿಗಳನ್ನೂ ತಂದುಕೊಟ್ಟ ಮುಖ್ಯಪ್ರಾಣನು ಪರಮಾತ್ಮನಿಗೆ ನಮಸ್ಕಾರ ಮಾಡಿದನು.

ಸಮಸ್ತದೇವತಾಗಣಾಃ ಸ್ವಕೀಯಮರ್ಪ್ಪಯನ್ ಹರೌ ।
ವಿಮುಚ್ಯ ಪಕ್ಷಿಪುಙ್ಗವಂ ಸ ಯೋದ್ಧುಮೈಚ್ಛದಚ್ಯುತಃ ॥೧೭.೧೧೬॥

ಎಲ್ಲಾ ದೇವತೆಗಳ ಗಣಗಳೂ ಕೂಡಾ ತಮ್ಮತಮ್ಮ ಸಂಪತ್ತನ್ನು ಪರಮಾತ್ಮನಿಗೆ ಅರ್ಪಿಸಿದರು. ಶ್ರೀಕೃಷ್ಣನು ಪಕ್ಷಿಶ್ರೇಷ್ಠನಾದ ಗರುಡನನ್ನು ಬಿಟ್ಟು ತಾನೇ ಯುದ್ಧಮಾಡಲು ಬಯಸಿದನು.

[ಈ ಪ್ರಸಂಗವನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೮.೬೪)  ವಿವರಿಸಿರುವುದನ್ನು ನಾವು ಕಾಣುತ್ತೇವೆ.  ಗೃಹೀತ್ವಾ  ಶಾಸನಂ ಮೂರ್ಧ್ನ ನಿಧಿರಾಟ್ ಕೇಶವಸ್ಯ ಹ । ನಿಧೀನಾಜ್ಞಾಪಯಾಮಾಸ ದ್ವಾರವತ್ಯಾಂ ಗೃಹೇಗೃಹೇ (ಇಲ್ಲಿ ನಿಧಿರಾಟ್ ಎಂದರೆ ನಮಗೆ ‘ಕುಬೇರ’ ಎಂಬಂತೆ ತೋರುತ್ತದೆ. ಆದರೆ ನಿಧಿಗಳಿಗೆ ಮೂಲ ಒಡೆಯ ಮುಖ್ಯಪ್ರಾಣನೇ. ನಿಧಿಗಳಿಗೆ ಒಡೆಯನಾದ ಮುಖ್ಯಪ್ರಾಣನು ದೇವರ ಆಜ್ಞೆಯನ್ನು ತಲೆಯಮೇಲೆ ಹೊತ್ತು, ಎಲ್ಲಾ ನಿಧಿಗಳನ್ನೂ ಕೂಡಾ, ದ್ವಾರವತಿಯ ಮನೆಮನೆಯಲ್ಲಿಯೂ ಇರುವಂತೆ ನೋಡಿಕೊಂಡ. ಭಾಗವತದಲ್ಲಿ( ೧೦.೫೩.೪೦-೪೧) ಹೇಳುವಂತೆ: ಶ್ಯಾಮೈಕಕರ್ಣಾನ್ ವರುಣೋ ಹಯಾನ್ ಶುಕ್ಲಾನ್ ಮನೋಜವಾನ್ । ದದೌ ಸಹಸ್ರಸಙ್ಖ್ಯಾತಾನ್ ದೇವದೇವಾಯ ತೋಯರಾಟ್ । ಅಷ್ಟೌ ನಿಧಿಪತಿಃ ಕೋಶಾನ್ ರತ್ನಪೂರ್ಣನವಿಕ್ಷಯಾನ್ । ತಥಾsನ್ಯೇ ಲೋಕಪಾಲಾಶ್ಚ ದದುಃ ಸ್ವಾಧಿಕೃತಂ ಧನಂ    (ಒಂದು ಕಿವಿ ಮಾತ್ರ ಕಪ್ಪಾಗಿರುವ, ಇಡೀ ದೇಹ ಬೆಳ್ಳಗಿರುವ, ವೇಗದಿಂದ ಸಾಗುವ, ಸಹಸ್ರಾರು ಸಂಖ್ಯೆಯ ಕುದುರೆಗಳನ್ನು ವರುಣನು ನೀಡಿದ. ಅವನು ಅಷ್ಟನಿಧಿಕೋಶಗಳನ್ನೇ ಕೊಟ್ಟ. ಹಾಗೆಯೇ, ಬೇರೆ ಲೋಕಪಾಲರೂ ಕೂಡಾ, ತಮ್ಮಲ್ಲಿರುವ ನಿಧಿಯನ್ನು ಪರಮಾತ್ಮನಿಗೆ ಅರ್ಪಿಸಿದರು).]

No comments:

Post a Comment