ಸಮಸ್ತಮಾಧುರಾನ್
ಪ್ರಭುಃ ಕುಶಸ್ಥಲೀಸ್ಥಿತಾನ್ ಕ್ಷಣಾತ್ ।
ವಿಧಾಯ
ಬಾಹುಯೋಧಕಃ ಸ ಯಾವನಂ ಸಮಭ್ಯಯಾತ್ ॥೧೭.೧೧೭॥
ಸರ್ವಸಮರ್ಥನಾದ ಕೃಷ್ಣನು ಮಧುರಾಪಟ್ಟಣ ಪ್ರದೇಶದಲ್ಲಿರುವ ಎಲ್ಲಾ ನಾಗರಿಕರನ್ನು ಕ್ಷಣದಲ್ಲಿಯೇ
ದ್ವಾರಕಾಪಟ್ಟಣದಲ್ಲಿ ಇರುವವರನ್ನಾಗಿ ಮಾಡಿ, ಕೈಗಳಿಂದಲೇ
ಯುದ್ಧ (ಬಾಹುಯುದ್ಧ) ಮಾಡಲು ಬಯಸಿ, ಕಾಲಯವನನನ್ನು ಎದುರುಗೊಂಡ.
[ಹಾಗಾದರೆ ಶ್ರೀಕೃಷ್ಣ ಮಧುರಾಪಟ್ಟಣದಲ್ಲಿದ್ದ ಯಾದವರನ್ನು ಕಾಲಯವನ ಹಾಗೂ ಜರಾಸಂಧನಿಂದ ರಕ್ಷಿಸುವ
ಶಕ್ತಿ ಇಲ್ಲದೇ ದ್ವಾರಕಾನಗರಿಗೆ ಸ್ಥಳಾಂತರಿಸಿದನೇ ಎಂದರೆ :]
ಅನನ್ತಶಕ್ತಿರಪ್ಯಜಃ
ಸುನೀತಿದೃಷ್ಟಯೇ ನೃಣಾಮ್ ।
ವ್ಯವಾಸಯನ್ನಿಜಾನ್
ಜನಾನ್ ಸ ಲೀಲಯೈವ ಕೇವಲಮ್ ॥೧೭.೧೧೮॥
ಎಣೆಯಿರದ ಕಸುವಿನವನಾದ, ಎಂದೂ ಹುಟ್ಟದ ಪರಮಾತ್ಮನು, ಮನುಷ್ಯರಿಗೆ ಆಪತ್ಕಾಲದಲ್ಲಿ ಅನುಸರಿಸಬೇಕಾದ
ನೀತಿಯನ್ನು ತೋರಿಸಲೋಸುಗ, ಕೇವಲ ಲೀಲೆಯಿಂದ ತನ್ನವರನ್ನು ಸ್ಥಳಾಂತರ ಮಾಡಿದ.
ಅನಾದ್ಯನನ್ತಕಾಲಕಂ
ಸಮಸ್ತಲೋಕಮಣ್ಡಲಮ್ ।
ಯದೀಕ್ಷಯೈವ
ರಕ್ಷ್ಯತೇ ಕಿಮಸ್ಯ ವೃಷ್ಣಿರಕ್ಷಣಮ್ ॥೧೭.೧೧೯॥
ಅನಾದಿಕಾಲದಿಂದ, ಅನಂತಕಾಲದವರೆಗೆ ಇಡೀ ಲೋಕಸಮೂಹವು ಯಾರ ನೋಟದಿಂದಲೇ
ರಕ್ಷಿಸಲ್ಪಡುತ್ತಿದೆಯೋ, ಅಂತಹ ಪರಮಾತ್ಮನಿಗೆ ಯಾದವರ ರಕ್ಷಣೆ ಯಾವ ಲೆಕ್ಕ?
ನಿರಾಯುಧಂ ಚ
ಮಾಮಯಂ ವರಾಚ್ಛಿವಸ್ಯ ನ ಕ್ಷಮಃ ।
ಸಮಸ್ತಸೇನಯಾ
ಯುತೋsಪಿ ಯೋದ್ಧುಮಿತ್ಯದರ್ಶಯತ್ ॥೧೭.೧೨೦॥
‘ಯಾವುದೇ ಆಯುಧವನ್ನು ಇಟ್ಟುಕೊಳ್ಳದ ನನ್ನನ್ನು, ಇವನು
ಸದಾಶಿವನ ವರವಿದ್ದೂ ಗೆಲ್ಲಲಾರ’. ಕೇವಲ ಅವನೊಬ್ಬನೇ ಅಲ್ಲ, ಸಮಸ್ತ ಸೇನೆಯೊಂದಿಗೆ ಕೂಡಿದರೂ ಕೂಡಾ, ಅವನು ಕೃಷ್ಣನೊಂದಿಗೆ ಯುದ್ಧಮಾಡಲು
ಸಮರ್ಥನಲ್ಲ ಎಂಬುವುದನ್ನು ಭಗವಂತ ತೋರಿಸಿದ.
[ಕಾಲಯವನನನ್ನು ಯುದ್ಧಭೂಮಿಯಲ್ಲಿ ಕೃಷ್ಣ ಎದುರುಗೊಳ್ಳುವುದಕ್ಕೂ ಮೊದಲು ಒಂದು ಘಟನೆ
ನಡೆದಿತ್ತು. ಆ ಘಟನೆಯ ವಿವರವನ್ನು ಇಲ್ಲಿ ಹೇಳುತ್ತಾರೆ:]
ಸ ಕೃಷ್ಣಪನ್ನಗಂ
ಘಟೇ ನಿಧಾಯ ಕೇಶವೋsರ್ಪ್ಪಯತ್ ।
ನಿರಾಯುಧೋsಪ್ಯಹಂ ಕ್ಷಮೋ ನಿಹನ್ತುಮಪ್ರಿಯಾನಿತಿ ॥೧೭.೧೨೧॥
ಕೃಷ್ಣನು ಕಪ್ಪುಸರ್ಪವೊಂದನ್ನು(ಘಟಸರ್ಪವೊಂದನ್ನು) ಮಡಿಕೆಯಲ್ಲಿಟ್ಟು, ಕಾಲಯವನನಿಗೆ
ಕಳುಹಿಸಿದ. ಅದರ ಹಿಂದಿನ ಸಂದೇಶ ಏನು ಎಂದರೆ: ನಾನು ಆಯುಧವಿಲ್ಲದೇ, ನನಗೆ ಅಪ್ರಿಯರಾದವರನ್ನು
ಕೊಲ್ಲಲು ಸಮರ್ಥನು.(ಹೇಗೆ ಹಾವು ಯಾವುದೇ ಆಯುಧವಿಲ್ಲದೆ ತನ್ನ ಶತ್ರುವನ್ನು ಕೊಲ್ಲಬಲ್ಲದೋ, ಹಾಗೆ).
ಘಟಂ
ಪಿಪೀಲಿಕಾಗಣೈಃ ಪ್ರಪೂರ್ಯ್ಯ ಯಾವನೋsಸ್ಯ ಚ ।
ಬಹುತ್ವತೋ
ವಿಜೇಷ್ಯ ಇತ್ಯಹಿಂ ಮೃತಂ ವ್ಯದರ್ಶಯತ್ ॥೧೭.೧೨೨॥
ಕಾಲಯವನನು ಇರುವೆಗಳ ಸಮೂಹಗಳಿಂದ ಆ ಸರ್ಪವಿರುವ ಮಡಿಕೆಯನ್ನು ತುಂಬಿಸಿ, ಸತ್ತ ಹಾವನ್ನು ಕೃಷ್ಣನಿಗೆ
ತೋರಿಸಿಕೊಟ್ಟ. ಅದರರ್ಥ: ‘ಬಹಳ ಜನ ಇರುವುದರಿಂದ ನಾನೇ ಗೆಲ್ಲುತ್ತೇನೆ’ ಎಂದು.
[ಈ ಎಲ್ಲಾ ಅಂಶಗಳನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೭.೩೨-೩೭) ವಿವರಿಸಲಾಗಿದೆ: ‘ತತಃ ಕುಮ್ಭೇ ಮಹಾಸರ್ಪಂ
ಭಿನ್ನಾಞ್ಜನಚಯೋಪಮಮ್ । ಘೋರಮಾಶೀವಿಷಂ ಕೃಷ್ಣಂ ಕೃಷ್ಣಃ ಪ್ರಾಕ್ಷೇಪಯತ್
ತದಾ । ತತಸ್ತಂ ಮುದ್ರಯಿತ್ವಾ ತು ಸ್ವೇನ ದೂತೇನ ಹಾರಯತ್ । (ಅಂಜನದಂತೆ
ಕಪ್ಪಗಿರುವ, ದಂತದಲ್ಲಿ ವಿಷವಿರುವ(ಆಶೀವಿಷ)
ಹಾವನ್ನು ಕುಮ್ಭದಲ್ಲಿಟ್ಟು, ಅದನ್ನು ಮುಚ್ಚಿ (ಮುದ್ರೆಮಾಡಿ), ದೂತನ ಮುಖೇನ
ಶ್ರೀಕೃಷ್ಣ ಕಳುಹಿಸಿದ). ನಿದರ್ಶನಾರ್ಥಂ ಗೋವಿಂದೋ
ಭೀಶಯಾಮಾಸ ತಂ ನೃಪಮ್ । ಸ ದೂತಃ ಕಾಲಯವನೇ
ದರ್ಶಯಾಮಾಸ ತಂ ಘಟಮ್ । ಕಾಳಸರ್ಪೋಪಮಃ ಕೃಷ್ಣ ಇತ್ಯುತ್ತ್ವಾ ಭರತರ್ಷಭ । (ಕಾಲಯವನನನ್ನು
ಕಂಡ ದೂತ, ‘ಈ ಮಡಿಕೆಯ ಒಳಗಡೆ ಇರುವ ಹಾವಿನಷ್ಟೇ ಭಯಂಕರ ಶ್ರೀಕೃಷ್ಣ’ ಎಂದ) ತತ್ಕಾಲಯವನೋ ಬುದ್ಧ್ವಾ ತ್ರಾಸನಂ ಯಾದವೈಃ ಕೃತಮ್
। ಪಿಪೀಲಿಕಾನಾಂ ಚನ್ಡಾನಾಂ ಪೂರಯಾಮಾಸ ತಂ ಘಟಮ್ । ಸ ಸರ್ಪೋ ಬಹುಭಿಸ್ತೀಕ್ಷ್ಣೈಃ
ಸರ್ವತಸ್ತೈಃ ಪಿಪೀಲಿಕೈಃ । ಭಕ್ಷ್ಯಮಾಣಃ ಕಿಲಾಙ್ಗೇಷು ಭಸ್ಮೀಭೂತೋsಭವತ್ ತದಾ । ತಂ ಮುದ್ರಯಿತ್ವಾsಥ ಘಟಂ
ತಥೈವ ಯವನಾಧಿಪಃ । ಪ್ರೇಶಯಾಮಾಸ ಕೃಷ್ಣಾಯ
ಬಾಹುಲ್ಯಮುಪವರ್ಣಯನ್’ (ಕಾಲಯವನ ಬಹಳ ಪಿಪೀಲಿಕಗಳ ಗಣವನ್ನು ಮಡಿಕೆಯೊಳಗೆ ಬಿಟ್ಟ. ಆಗ ಹಾವು ಸತ್ತಿತು. ಹೀಗೆ,
ನಾವು ಬಹಳ ಜನರಿದ್ದೇವೆ ಎಂಬ ಸಂದೇಶವನ್ನು ಆತ ಹಿಂದೆ
ಕಳುಹಿಸಿದ)].
ಕಿಮತ್ರ
ಸತ್ಯಮಿತ್ಯಹಂ ಪ್ರದರ್ಶಯಿಷ್ಯ ಇತ್ಯಜಃ ।
ಉದೀರ್ಯ
ದೂತಮಭ್ಯಯಾತ್ ಸ ಯಾವನಂ ಪ್ರಬಾಧಿತುಮ್ ॥೧೭.೧೨೩॥
‘ಈವಿಚಾರದಲ್ಲಿ ಯಾವುದು ಸತ್ಯವಾಗುವುದು ಎಂದು ತೋರಿಸುತ್ತೇನೆ’ ಎಂದು ದೂತನನ್ನು ಕುರಿತು
ಹೇಳಿದ ಶ್ರೀಕೃಷ್ಣ, ಕಾಲಯವನನನ್ನು ಪೀಡಿಸಲು
ತೆರಳಿದ.
No comments:
Post a Comment