ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 26, 2020

Mahabharata Tatparya Nirnaya Kannada 1887_1896

 

ಪಪ್ರಚ್ಛೈನಂ ತದಾ ದ್ರೋಣಸಖ್ಯಮಸ್ತ್ಯುತ ನೇತಿ ಹ ।

ಅಸ್ತೀದಾನೀಮಿತಿ ಪ್ರಾಹ ದ್ರುಪದೋsಙ್ಗಿರಸಾಂ ವರಮ್ ॥೧೮.೮೭ ॥

 

ತನ್ನೆದುರು ಬಂಧಿಯಾಗಿ ನಿಂತಿರುವ ದ್ರುಪದನನ್ನು ಕುರಿತು ದ್ರೋಣಾಚಾರ್ಯರು:  ‘ಈಗ ನಮ್ಮಿಬ್ಬರ ನಡುವೆ ಗೆಳೆತನ ಇದೆಯೋ ಇಲ್ಲವೋ ಎಂದು ಕೇಳುತ್ತಾರೆ. ಅಙ್ಗಿರಸ ಋಷಿಗಳ ಗೋತ್ರದಲ್ಲಿ ಶ್ರೇಷ್ಠನಾಗಿರುವ ದ್ರೋಣಾಚಾರ್ಯರಲ್ಲಿ ‘ಈಗ ನಮ್ಮ ನಡುವೆ ಸಖ್ಯವಿದೆ’ ಎನ್ನುತ್ತಾನೆ ದ್ರುಪದ.

 

ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।

ನಹ್ಯರಾಜ್ಞಾ ಭವೇತ್ ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥

 

ಆಗ ದ್ರುಪದನನ್ನು ಕುರಿತು ದ್ರೋಣಾಚಾರ್ಯರು: ‘ನಿನ್ನ ನಾಶವಾಗದ ಗೆಳೆತನವನ್ನು ನಾನು ಬಯಸುತ್ತೇನೆ. ಯಾವ ಕಾರಣದಿಂದ ರಾಜನಲ್ಲದವರಿಂದ ನಿನ್ನ ಗೆಳೆತನ ಇರಲಾರದೋ, ಆ ಕಾರಣದಿಂದ ಈ ರೀತಿ ಮಾಡಬೇಕಾಯಿತು (ಇದನ್ನು ಮಾಡಿದೆ)’ ಎನ್ನುತ್ತಾರೆ.

 

ನ ವಿಪ್ರಧರ್ಮ್ಮೋ ಯದ್ ಯುದ್ಧಮತಸ್ತ್ವಂ ನ ಮಯಾ ಧೃತಃ ।

ಶಿಷ್ಯೈರೇತತ್ ಕಾರಿತಂ ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥

 

ಮುಂದುವರಿದು ದ್ರೋಣಾಚಾರ್ಯರು ಹೇಳುತ್ತಾರೆ: ‘ಯಾವ ಕಾರಣದಿಂದ ಯುದ್ಧವು ಬ್ರಾಹ್ಮಣರ ಧರ್ಮವಲ್ಲವೋ, ಆ ಕಾರಣದಿಂದ ನನ್ನಿಂದ ನೀನು ಬಂಧಿಸಲ್ಪಡಲಿಲ್ಲ. ನನ್ನ ಶಿಷ್ಯರಿಂದ ನಿನ್ನ ಗೆಳೆತನವನ್ನು ಬಯಸಿ ನಾನು ಈ ಕೆಲಸವನ್ನು ಮಾಡಿಸಿದೆ.

 

ಅತಃ ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।

ಗಙ್ಗಾಯಾ ದಕ್ಷಿಣೇ ಕೂಲೇ  ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥

 

ಆ ಕಾರಣದಿಂದ ಗೆಳೆತನಕ್ಕಾಗಿಯೇ ನಿನ್ನ ರಾಜ್ಯದ ಸ್ವಲ್ಪಭಾಗವು  ನನ್ನಿಂದ ತೆಗೆದುಕೊಳ್ಳಲ್ಪಟ್ಟಿದೆ. ಗಂಗೆಯ ದಕ್ಷಿಣದಲ್ಲಿರುವ ಪ್ರದೇಶಕ್ಕೆ ನೀನೇ ಒಡೆಯ. ಉತ್ತರದಲ್ಲಿರುವ ಭಾಗಕ್ಕೆ ನಾನು ಒಡೆಯ.

 

            ನಹ್ಯರಾಜತ್ವ ಏಕಸ್ಯ ಸಖ್ಯಂ ಸ್ಯಾದಾವಯೋಃ ಸಖೇ ।

           ಇತ್ಯುಕ್ತ್ವೋನ್ಮುಚ್ಯ ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥

 

ಯಯೌ ಶಿಷ್ಯೈರ್ನ್ನಾಗಪುರಂ ನ್ಯವಸತ್  ಸುಖಮತ್ರ ಚ ।

ಬ್ರಾಹ್ಮಣ್ಯತ್ಯಾಗಭೀರುಃ ಸ ನ ಗೃಹ್ಣನ್  ಧನುರಪ್ಯಸೌ ॥೧೮.೯೨ ॥

 

ರಾಜನಲ್ಲದೇ ಹೋದರೆ ನಮ್ಮಿಬ್ಬರ  ಸಖ್ಯ ಸಾಧ್ಯವಿಲ್ಲ. ಆದ್ದರಿಂದ ಓ ಗೆಳೆಯನೇ, ನಾವಿಬ್ಬರೂ ಈಗ ರಾಜರಾದೆವು. ಈಗಲಾದರೂ ಗೆಳೆತನ ಇರಬಹುದಲ್ಲಾ’ ಎಂದು  ಹೇಳಿ, ದ್ರುಪದನ  ರಾಜ್ಯದ ಸ್ವಲ್ಪ ಭಾಗವನ್ನು ಸ್ವೀಕರಿಸಿದ ದ್ರೋಣಾಚಾರ್ಯರು, ದ್ರುಪದನನ್ನು ಬಿಡಿಸಿ ( ಬಿಟ್ಟು) , ಶಿಷ್ಯರಿಂದ ಕೂಡಿಕೊಂಡು ಹಸ್ತಿನಾವತಿಗೆ ತೆರಳಿ ಸುಖವಾಗಿ ವಾಸಮಾಡಿದರು. ಬ್ರಾಹ್ಮಣ್ಯವು ನಾಶವಾದೀತು ಎನ್ನುವ ಭಯದಿಂದ ಅವರು ಧನುಸ್ಸನ್ನೂ ಕೂಡಾ ಹಿಡಿಯದೇ, ಇದೆಲ್ಲವನ್ನೂ ಕೂಡಾ ಮಾಡಿದರು.

ಧಾರ್ತ್ತರಾಷ್ಟ್ರೈಸ್ತು ಭೀಮಸ್ಯ ಭಯಾತ್ ಪಾದೌ ಪ್ರಣಮ್ಯ ಚ ।

ಶರಣಾರ್ತ್ಥಂ ಯಾಚಿತತ್ವಾತ್ ಸಪುತ್ರೋ ಯುಯುಧೇ ಪರೈಃ ॥೧೮.೯೩ ॥

 

ದುರ್ಯೋಧನಾದಿಗಳು ಭೀಮನ ಭಯದಿಂದ ದ್ರೋಣಾಚಾರ್ಯರ ಪಾದಕ್ಕೆರಗಿ: ‘ಶರಣು ಬಂದಿದ್ದೇವೆ, ನಮ್ಮನ್ನು ರಕ್ಷಿಸಿ’ ಎಂದು ಯಾಚನೆ ಮಾಡಿದ್ದರಿಂದ ತನ್ನ ಮಗನಿಂದ ಕೂಡಿಕೊಂಡು ಅವರು ಯುದ್ಧಮಾಡಿದರು.

 

ಏವಂ ಹರೀಚ್ಛಯೈವಾಸೌ ಕ್ಷಾತ್ರಂ ಧರ್ಮ್ಮಮುಪೇಯಿವಾನ್ ।

ದ್ರುಪದಸ್ತು ದಿವಾರಾತ್ರಂ ತಪ್ಯಮಾನಃ ಪರಾಭವಾತ್ ॥೧೮.೯೪ ॥

 

ಭೀಮಾರ್ಜ್ಜುನಬಲಂ ದೃಷ್ಟ್ವಾ ಚೇಚ್ಛನ್ ಪಾಣ್ಡವಸಂಶ್ರಯಮ್ ।

ಸಮ್ಬನ್ಧೀತ್ಯರ್ಜ್ಜುನವಚಶ್ಚಿಕೀರ್ಷುಃ ಸತ್ಯಮೇವ ಚ ॥೧೮.೯೫ ॥

 

ಮಾರ್ದ್ದವಂ ಚಾರ್ಜ್ಜುನೇ ದೃಷ್ಟ್ವಾ ಸುತಾಮೈಚ್ಛತ್ ತದರ್ತ್ಥತಃ ।

ಪುತ್ರಂ ಚ ದ್ರೋಣಹನ್ತಾರಮಿಚ್ಛನ್ ವಿಪ್ರವರೌ ಯಯೌ ॥೧೮.೯೬ ॥

 

ಈರೀತಿಯಾಗಿ ದ್ರೋಣಾಚಾರ್ಯರು  ಪರಮಾತ್ಮನ ಇಚ್ಛೆಯಂತೇ  ಕ್ಷತ್ರಿಯ ಧರ್ಮವನ್ನು ಹೊಂದಿದರು. ದ್ರುಪದರಾಜನಾದರೋ, ಪರಾಜಯದಿಂದಾಗಿ ಹಗಲೂ-ರಾತ್ರಿ ಪರಿತಪಿಸಿ, ಭೀಮಾರ್ಜುನರ ಬಲವನ್ನು ನೋಡಿ, ಪಾಂಡವರ ಆಶ್ರಯವನ್ನು ಬಯಸಿದನು. ‘ಇವನು ನಮಗೆ ಸಂಬಂಧಿ’ ಎನ್ನುವ ಅರ್ಜುನನ ಮಾತನ್ನು ಸತ್ಯವನ್ನಾಗಿ ಮಾಡಲು, ಅರ್ಜುನನಲ್ಲಿ ತನ್ನ ಬಗೆಗಿನ ಮೃದುವಾದ ಭಾವನೆಯನ್ನು ಗಮನಿಸಿದ್ದ ದ್ರುಪದ, ಅವನಿಗಾಗಿ ಮಗಳನ್ನು ಪಡೆಯಬೇಕೆಂದೂ,  ದ್ರೋಣನನ್ನು ಸಾಯಿಸುವ ಮಗನನ್ನೂ ಬಯಸಿ, ಯಾಜ ಹಾಗು ಉಪಯಾಜರೆಂಬ ಶ್ರೇಷ್ಠ ಬ್ರಾಹ್ಮಣರನ್ನು ಕುರಿತು ತೆರಳಿದನು.


Monday, August 24, 2020

Mahabharata Tatparya Nirnaya Kannada 1878_1886

 

ಹಸ್ತಪ್ರಾಪ್ತಂ ಚ ಪಾಞ್ಚಾಲಂ ನಾಗ್ರಹೀತ್ ಸ ವೃಕೋದರಃ ।

ಗುರ್ವರ್ತ್ಥಾಮರ್ಜ್ಜುನಸ್ಯೋರ್ವೀಂ ಪ್ರತಿಜ್ಞಾಂ ಕರ್ತ್ತುಮಪ್ಯೃತಾಮ್ ॥೧೮.೭೮॥

 

ಮಾನಭಙ್ಗಾಯ ಕರ್ಣ್ಣಸ್ಯ ಪಾರ್ತ್ಥಮೇವ ನ್ಯಯೋಜಯತ್  

ಸ ಶರಾನ್ ಕ್ಷಿಪತಸ್ತಸ್ಯ ಪಾಞ್ಚಾಲಸ್ಯಾರ್ಜ್ಜುನೋ ದ್ರುತಮ್ ॥೧೮.೭೯॥

 

ಪುಪ್ಲುವೇ ಸ್ಯನ್ದನೇ ಚಾಪಂ ಛಿತ್ವಾ ತಂ ಚಾಗ್ರಹೀತ್ ಕ್ಷಣಾತ್ ।

ಸಿಂಹೋ ಮೃಗಮಿವಾsದಾಯ ಸ್ವರಥೇ ಚಾಭಿಪೇತಿವಾನ್ ॥೧೮.೮೦॥

 

ತಮ್ಮನ ಮೇಲಿನ ಪ್ರೀತಿಯಿಂದ, ಕೈಗೆ ಸಿಕ್ಕಿದ ದ್ರುಪದನನ್ನು ಭೀಮ ಹಿಡಿದುಕೊಳ್ಳಲಿಲ್ಲ. ಅರ್ಜುನನ ಮಹತ್ತರವಾದ ಪ್ರತಿಜ್ಞೆಯನ್ನು ಈಡೇರಿಸಲು ಮತ್ತು  ಕರ್ಣನ ಮಾನಭಂಗಕ್ಕಾಗಿಯೇ ಈ ಕಾರ್ಯಕ್ಕೆ ಭೀಮ   ಅರ್ಜುನನನ್ನು ನಿಯೋಜಿಸಿದ.

ಅರ್ಜುನನು ಬಾಣಗಳನ್ನು ಎಸೆಯುವ ಪಾಞ್ಚಾಲನ ರಥಕ್ಕೆ ಹಾರಿ, ಕ್ಷಣದಲ್ಲೇ ಅವನ ಬಿಲ್ಲನ್ನು ಕತ್ತರಿಸಿ, ಅವನನ್ನು ಹಿಡಿದು, ಒಂದು ಸಿಂಹವು ಜಿಂಕೆಯನ್ನು ಎಳೆದು ತರುವಂತೆ ದ್ರುಪದನನ್ನು ತನ್ನ ರಥಕ್ಕೆ ಎಳೆದು ತಂದ.

 

ಅಥ ಪ್ರಕುಪಿತಂ ಸೈನ್ಯಂ ಫಲ್ಗುನಂ ಪರ್ಯ್ಯವಾರಯತ್ ।

ಜಘಾನ ಭೀಮಸ್ತರಸಾ ತತ್ ಸೈನ್ಯಂ ಶರವೃಷ್ಟಿಭಿಃ ॥೧೮.೮೧॥

 

ಅರ್ಜುನನು ದ್ರುಪದರಾಜನನ್ನು ಬಂಧಿಸಿದಾಗ, ಮುನಿದ ಪಾಞ್ಚಾಲ ಸೈನ್ಯವು ಅರ್ಜುನನನ್ನು ಸುತ್ತುವರಿಯಿತು. ಭೀಮನು ಬಾಣದ ಮಳೆಗಳಿಂದ ಆ ಸೈನ್ಯವನ್ನು ಹೊಡೆದ. 

 

ಅಥ ಸತ್ಯಜಿದಭ್ಯಾಗಾತ್  ಪಾರ್ತ್ಥಂ ಮುಞ್ಚಞ್ಛರಾನ್ ಬಹೂನ್ ।

ತಮರ್ಜ್ಜುನಃ ಕ್ಷಣೇನೈವ ಚಕ್ರೇ ವಿರಥಕಾರ್ಮ್ಮುಕಮ್ ॥೧೮.೮೨ ॥

 

ತದನಂತರ ಸತ್ಯಜಿತ್  ಎನ್ನುವ ದ್ರುಪದನ ಮಗನು ಅರ್ಜುನನನ್ನು ಕುರಿತು ಬಹಳ ಬಾಣಗಳನ್ನು ಬಿಡುತ್ತಾ ಬಂದ. ಹಾಗೆ ಬಂದ ಸತ್ಯಜಿದನನ್ನು ಅರ್ಜುನನು ಕ್ಷಣದಲ್ಲಿ ರಥ ಹಾಗೂ ಬಾಣಹೀನನನ್ನಾಗಿ ಮಾಡಿದ.

 

ಘ್ನನ್ತಂ ಭೀಮಂ ಪುನಃ ಸೈನ್ಯಮರ್ಜ್ಜುನಃ ಪ್ರಾಹ ಮಾ ಭವಾನ್ ।

ಸೇನಾಮರ್ಹತಿ ರಾಜ್ಞೋsಸ್ಯ ವೀರ ಹನ್ತುಮಶೇಷತಃ ॥೧೮.೮೩॥

 

ಸಮ್ಬನ್ಧಯೋಗ್ಯಸ್ತಾತಸ್ಯ ಸಖಾsಯಂ ನಃ ಸುಧಾರ್ಮ್ಮಿಕಃ ।

ನೇಷ್ಯಾಮ ಏನಮೇವಾತೋ ಗುರೋರ್ವಚನಗೌರವಾತ್ ॥೧೮.೮೪॥

 

ಇತ್ತ ಪಾಞ್ಚಾಲ ಸೈನ್ಯದಮೇಲೆ ಪ್ರಹಾರಮಾಡುತ್ತಿರುವ ಭೀಮನನ್ನು ಕುರಿತು ಅರ್ಜುನ ಹೇಳುತ್ತಾನೆ: ‘ಎಲೋ ವೀರ, ನೀನು ಈ ರಾಜನ ಸೇನೆಯನ್ನು ಕೊಲ್ಲಲು ಪ್ರಯತ್ನಪಡಬೇಡ. ಈ ದ್ರುಪದನು ನಮ್ಮ ಸಂಬಂಧಯೋಗ್ಯ ಮತ್ತು  ನಮ್ಮ ಅಪ್ಪನ ಸಖ.  ಎಲ್ಲಕ್ಕಿಂತ ಮಿಗಿಲಾಗಿ ಇವನು ಧರ್ಮದಲ್ಲಿದ್ದಾನೆ. ಹೀಗಾಗಿ ಗುರುಗಳ ಮಾತಿನ ಗೌರವದಿಂದ ಇವನನ್ನು ಕೊಂಡೊಯ್ಯೋಣ’ ಎಂದು. 

 

ಸ್ನೇಹಪಾಶಂ ತತಶ್ಚಕ್ರೇ ಬೀಭತ್ಸೌ ದ್ರುಪದೋsಧಿಕಮ್ ।

ತತಃ ಸೇನಾಂ ವಿಹಾಯೈವ ಭೀಮೋ ಬೀಭತ್ಸುಮನ್ವಯಾತ್ ॥೧೮.೮೫॥

 

ಅರ್ಜುನನ ಈ ಮಾತಿನಿಂದಾಗಿ ದ್ರುಪದನು ಅವನಲ್ಲಿ ಬಹಳ ಸ್ನೇಹವನ್ನು ಮಾಡಿದ. ಇತ್ತ ಭೀಮಸೇನನು ಪಾಞ್ಚಾಲ ಸೇನೆಯನ್ನು ಬಿಟ್ಟು,  ಭೀಭತ್ಸುವನ್ನು(ಅರ್ಜುನನನ್ನು) ಅನುಸರಿಸಿದ.

 

ಮುಕ್ತಾ ಕಥಞ್ಚಿದ್ ಭೀಮಾತ್ ಸ್ಯಾತ್ ಸಾ ಸೇನಾ ದುದ್ರುವೇ ಭಯಾತ್ ।

ದ್ರುಪದಂ ಸ್ಥಾಪಯಾಮಾಸಾಥಾರ್ಜ್ಜುನೋ ದ್ರೋಣಸನ್ನಿಧೌ ॥೧೮.೮೬ ॥

 

ಭೀಮನಿಂದ ಬಿಡಲ್ಪಟ್ಟ ಆ ಸೇನೆಯು ಭಯದಿಂದ ಓಡಿಹೋಯಿತು.  ತದನಂತರ ಅರ್ಜುನನು ದ್ರೋಣರ ಸನ್ನಿಧಿಯಲ್ಲಿ ದ್ರುಪದನನ್ನು ಕರೆತಂದು ನಿಲ್ಲಿಸಿದ.

Sunday, August 23, 2020

Mahabharata Tatparya Nirnaya Kannada 1869_1877

 

ತಾನ್ ಪ್ರಭಗ್ನಾನ್ ಸಮಾಲೋಕ್ಯ ಭೀಮಃ ಪ್ರಹರತಾಂ ವರಃ ।

ಆರುರೋಹ ರಥಂ ವೀರಃ ಪುರ ಆತ್ತಶರಾಸನಃ ॥೧೮.೬೯॥

 

ಪ್ರಹಾರದಲ್ಲಿ ಅಗ್ರಗಣ್ಯನಾದ ಭೀಮಸೇನನು ಸೋಲುಂಡ ದುರ್ಯೋಧನಾದಿಗಳನ್ನು ಕಂಡು, ತನ್ನ ಬಿಲ್ಲನ್ನು ಹಿಡಿದು ಮುಂದೆ ನಿಂತು, ರಥವನ್ನೇರಿದನು.

 

ತಮನ್ವಯಾದಿನ್ದ್ರಸುತೋ ಯಮೌ ತಸ್ಯೈವ ಚಕ್ರಯೋಃ ।

ಯುಧಿಷ್ಠಿರಸ್ತು ದ್ರೋಣೇನ ಸಹ ತಸ್ಥೌ ನಿರೀಕ್ಷಕಃ ॥೧೮.೭೦॥

 

ಅರ್ಜುನನು ಭೀಮನನ್ನು ಅನುಸರಿಸಿ ಹೊರಟನು. ನಕುಲ-ಸಹದೇವರು ಅರ್ಜುನನ ರಥಚಕ್ರಗಳ ರಕ್ಷಕರಾಗಿ ನಿಂತು ಅವನನ್ನು ಅನುಸರಿಸಿದರು. ಯುಧಿಷ್ಠಿರನು ದ್ರೋಣಾಚಾರ್ಯರೊಡಗೂಡಿ ನಿರೀಕ್ಷಿಕನಾಗಿ(ಯುದ್ಧವನ್ನು ನೋಡುವವನಾಗಿ) ನಿಂತನು.

 

ಆಯಾನ್ತಮಗ್ರತೋ ದೃಷ್ಟ್ವಾಭೀಮಮಾತ್ತಶರಾಸನಮ್ ।

ದುದ್ರುವುಃ ಸರ್ವಪಾಞ್ಚಾಲಾಃ ವಿವಿಶುಃ ಪುರಮೇವ ಚ ॥೧೮.೭೧॥

 

ಬಿಲ್ಲನ್ನು ಹಿಡಿದು ಮುನ್ನುಗ್ಗಿ ಬರುತ್ತಿರುವ ಭೀಮನನ್ನು ಕಂಡ ಆ ಸ್ತ್ರೀ-ಬಾಲಕರು ಮೊದಲಾದ ಸಮಸ್ತ ಪಾಞ್ಚಾಲರು  ಹಿಂದಕ್ಕೆ  ಓಡಿ  ಪಟ್ಟಣವನ್ನು ಸೇರಿದರು.

 

ದ್ರುಪದಸ್ತ್ವಭ್ಯಯಾದ್ ಭೀಮಂ ಸಪುತ್ರಃ ಸಾರಸೇನಯಾ ।

ಚಕ್ರರಕ್ಷೌ ತು ತಸ್ಯಾsಸ್ತಾಂ ಯುಧಾಮನ್ಯೂತ್ತಮೋಜಸೌ ॥೧೮.೭೨॥

 

ಧಾತ್ರರ್ಯ್ಯಮಾವೇಶಯುತೌ ವಿಶ್ವಾವಸುಪರಾವಸೂ ।

ಸುತೌ ತಸ್ಯ ಮಹಾವೀರ್ಯ್ಯೌ ಸತ್ಯಜಿತ್ ಪೃಷ್ಠತೋsಭವತ್ ॥೧೮.೭೩॥

 

ಸ ಮಿತ್ರಾಂಶಯುತೋ ವೀರಶ್ಚಿತ್ರಸೇನೋ ಮಹಾರಥಃ ।

ಅಗ್ರತಸ್ತು ಶಿಖಣ್ಡ್ಯಾಗಾದ್ ರಥೋದಾರಃ ಶರಾನ್ ಕ್ಷಿಪನ್ ॥೧೮.೭೪॥

 

ದ್ರುಪದನು ಪುತ್ರರಿಂದ ಒಡಗೂಡಿ, ಸೈನಿಕಶಿಕ್ಷಣವನ್ನು ಪಡೆದ ಸೈನಿಕರೊಂದಿಗೆ ಭೀಮನನ್ನು ಎದುರುಗೊಂಡ. ಆ ದ್ರುಪದನ ಚಕ್ರರಕ್ಷಕರಾಗಿ  ಯುಧಾಮನ್ಯು ಮತ್ತು ಉತ್ತಮೋಜಸ್ ಇವರಿಬ್ಬರಿದ್ದರು. ಅವರು ಧಾತ್ರ ಮತ್ತು ಅರ್ಯಮಾ  ಎನ್ನುವ ಹನ್ನೆರಡು ಮಂದಿ ಆದಿತ್ಯರಲ್ಲಿ ಇಬ್ಬರಾದ, ಅವರ ಆವೇಶದಿಂದ ಕೂಡಿದವರಾದ,   ವಿಶ್ವಾವಸು-ಪರಾವಸೂ ಎನ್ನುವ ಗಂಧರ್ವರು. ಅವರಿಬ್ಬರೂ ಮಹಾಬಲವುಳ್ಳ ಮಕ್ಕಳು. ಸತ್ಯಜಿತ್ ಅನ್ನುವವನು ದ್ರುಪದನ ಹಿಂದಿನಿಂದ ರಕ್ಷಣೆ ಮಾಡುವವನಾಗಿದ್ದ. ಅವನು ಮಿತ್ರಾಂಶದಿಂದ ಕೂಡಿರುವ ಚಿತ್ರಸೇನ ಎನ್ನುವ ಗಂಧರ್ವ.  ಮುಂದೆ ರಥಿಗಳಲ್ಲೇ ಶ್ರೇಷ್ಠನಾದ  ಶಿಖಣ್ಡಿಯು ಬಾಣಗಳನ್ನು ಎಸೆಯುತ್ತಾ ಬಂದ.

 

ಜನಮೇಜಯಸ್ತಮನ್ವೇವ ಪೂರ್ವಂ ಚಿತ್ರರಥೋ ಹಿ ಯಃ ।

ತ್ವಷ್ಟುರಾವೇಶಸಂಯುಕ್ತಃ ಸ ಶರಾನಭ್ಯವರ್ಷತ ॥೧೮.೭೫॥

 

ಜನಮೇಜಯನು  ಶಿಖಣ್ಡಿಯನ್ನು ಅನುಸರಿಸಿ ಬಂದು ಬಾಣಗಳನ್ನು ಎಸೆದ. ಪೂರ್ವದಲ್ಲಿ ಅವನು ಚಿತ್ರರಥ ಎನ್ನುವ ಗಂಧರ್ವ. ದ್ವಾದಶಾದಿತ್ಯರಲ್ಲಿ ಒಬ್ಬನಾದ ತ್ವಷ್ಟುವಿನ ಆವೇಶ ಇವನಿಗಿತ್ತು.

 

ತಾವುಭೌ ವಿರಥೌ ಕೃತ್ವಾ ವಿಚಾಪೌ ಚ ವಿವರ್ಮ್ಮಕೌ ।

ಭೀಮೋ ಜಘಾನ ತಾಂ ಸೇನಾಂ ಸವಾಜಿರಥಕುಞ್ಜರಾಮ್ ॥೧೮.೭೬॥

 

ಜನಮೇಜಯ-ಶಿಖಣ್ಡಿ ಇಬ್ಬರನ್ನೂ ವಿರಥರನ್ನಾಗಿ, ಬಾಣಹೀನರನ್ನಾಗಿ, ಕವಚಹೀನರನ್ನಾಗಿ ಮತ್ತು ಬಿಲ್ಲಿನಿಂದ ರಹಿತರನ್ನಾಗಿ ಮಾಡಿದ ಭೀಮನು, ಆನೆ, ರಥ ಮತ್ತು ಕುದುರೆ ಇವುಗಳೆಲ್ಲವನ್ನೊಳಗೊಂಡ ಸೇನೆಯನ್ನು  ನಾಶಮಾಡಿದನು.

 

ಅಥೈನಂ ಶರವರ್ಷೇಣ ಯುಧಾಮನ್ಯೂತ್ತಮೋಜಸೌ ।

ಅಭೀಯತುಸ್ತೌ ವಿರಥೌ ಚಕ್ರೇ ಭೀಮೋ ನಿರಾಯುಧೌ ॥೧೮.೭೭॥

 

ತದನಂತರ ಯುಧಾಮನ್ಯು ಮತ್ತು ಉತ್ತಮೋಜಸರು ಬಾಣಗಳ ಮಳೆಗರೆಯುತ್ತಾ ಭೀಮನನ್ನು ಎದುರುಗೊಂಡರು. ಭೀಮನು ಅವರಿಬ್ಬರನ್ನೂ ನಿರಾಯುಧರನ್ನಾಗಿಯೂ, ವಿರಥರನ್ನಾಗಿಯೂ ಮಾಡಿದನು.