ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 24, 2020

Mahabharata Tatparya Nirnaya Kannada 1878_1886

 

ಹಸ್ತಪ್ರಾಪ್ತಂ ಚ ಪಾಞ್ಚಾಲಂ ನಾಗ್ರಹೀತ್ ಸ ವೃಕೋದರಃ ।

ಗುರ್ವರ್ತ್ಥಾಮರ್ಜ್ಜುನಸ್ಯೋರ್ವೀಂ ಪ್ರತಿಜ್ಞಾಂ ಕರ್ತ್ತುಮಪ್ಯೃತಾಮ್ ॥೧೮.೭೮॥

 

ಮಾನಭಙ್ಗಾಯ ಕರ್ಣ್ಣಸ್ಯ ಪಾರ್ತ್ಥಮೇವ ನ್ಯಯೋಜಯತ್  

ಸ ಶರಾನ್ ಕ್ಷಿಪತಸ್ತಸ್ಯ ಪಾಞ್ಚಾಲಸ್ಯಾರ್ಜ್ಜುನೋ ದ್ರುತಮ್ ॥೧೮.೭೯॥

 

ಪುಪ್ಲುವೇ ಸ್ಯನ್ದನೇ ಚಾಪಂ ಛಿತ್ವಾ ತಂ ಚಾಗ್ರಹೀತ್ ಕ್ಷಣಾತ್ ।

ಸಿಂಹೋ ಮೃಗಮಿವಾsದಾಯ ಸ್ವರಥೇ ಚಾಭಿಪೇತಿವಾನ್ ॥೧೮.೮೦॥

 

ತಮ್ಮನ ಮೇಲಿನ ಪ್ರೀತಿಯಿಂದ, ಕೈಗೆ ಸಿಕ್ಕಿದ ದ್ರುಪದನನ್ನು ಭೀಮ ಹಿಡಿದುಕೊಳ್ಳಲಿಲ್ಲ. ಅರ್ಜುನನ ಮಹತ್ತರವಾದ ಪ್ರತಿಜ್ಞೆಯನ್ನು ಈಡೇರಿಸಲು ಮತ್ತು  ಕರ್ಣನ ಮಾನಭಂಗಕ್ಕಾಗಿಯೇ ಈ ಕಾರ್ಯಕ್ಕೆ ಭೀಮ   ಅರ್ಜುನನನ್ನು ನಿಯೋಜಿಸಿದ.

ಅರ್ಜುನನು ಬಾಣಗಳನ್ನು ಎಸೆಯುವ ಪಾಞ್ಚಾಲನ ರಥಕ್ಕೆ ಹಾರಿ, ಕ್ಷಣದಲ್ಲೇ ಅವನ ಬಿಲ್ಲನ್ನು ಕತ್ತರಿಸಿ, ಅವನನ್ನು ಹಿಡಿದು, ಒಂದು ಸಿಂಹವು ಜಿಂಕೆಯನ್ನು ಎಳೆದು ತರುವಂತೆ ದ್ರುಪದನನ್ನು ತನ್ನ ರಥಕ್ಕೆ ಎಳೆದು ತಂದ.

 

ಅಥ ಪ್ರಕುಪಿತಂ ಸೈನ್ಯಂ ಫಲ್ಗುನಂ ಪರ್ಯ್ಯವಾರಯತ್ ।

ಜಘಾನ ಭೀಮಸ್ತರಸಾ ತತ್ ಸೈನ್ಯಂ ಶರವೃಷ್ಟಿಭಿಃ ॥೧೮.೮೧॥

 

ಅರ್ಜುನನು ದ್ರುಪದರಾಜನನ್ನು ಬಂಧಿಸಿದಾಗ, ಮುನಿದ ಪಾಞ್ಚಾಲ ಸೈನ್ಯವು ಅರ್ಜುನನನ್ನು ಸುತ್ತುವರಿಯಿತು. ಭೀಮನು ಬಾಣದ ಮಳೆಗಳಿಂದ ಆ ಸೈನ್ಯವನ್ನು ಹೊಡೆದ. 

 

ಅಥ ಸತ್ಯಜಿದಭ್ಯಾಗಾತ್  ಪಾರ್ತ್ಥಂ ಮುಞ್ಚಞ್ಛರಾನ್ ಬಹೂನ್ ।

ತಮರ್ಜ್ಜುನಃ ಕ್ಷಣೇನೈವ ಚಕ್ರೇ ವಿರಥಕಾರ್ಮ್ಮುಕಮ್ ॥೧೮.೮೨ ॥

 

ತದನಂತರ ಸತ್ಯಜಿತ್  ಎನ್ನುವ ದ್ರುಪದನ ಮಗನು ಅರ್ಜುನನನ್ನು ಕುರಿತು ಬಹಳ ಬಾಣಗಳನ್ನು ಬಿಡುತ್ತಾ ಬಂದ. ಹಾಗೆ ಬಂದ ಸತ್ಯಜಿದನನ್ನು ಅರ್ಜುನನು ಕ್ಷಣದಲ್ಲಿ ರಥ ಹಾಗೂ ಬಾಣಹೀನನನ್ನಾಗಿ ಮಾಡಿದ.

 

ಘ್ನನ್ತಂ ಭೀಮಂ ಪುನಃ ಸೈನ್ಯಮರ್ಜ್ಜುನಃ ಪ್ರಾಹ ಮಾ ಭವಾನ್ ।

ಸೇನಾಮರ್ಹತಿ ರಾಜ್ಞೋsಸ್ಯ ವೀರ ಹನ್ತುಮಶೇಷತಃ ॥೧೮.೮೩॥

 

ಸಮ್ಬನ್ಧಯೋಗ್ಯಸ್ತಾತಸ್ಯ ಸಖಾsಯಂ ನಃ ಸುಧಾರ್ಮ್ಮಿಕಃ ।

ನೇಷ್ಯಾಮ ಏನಮೇವಾತೋ ಗುರೋರ್ವಚನಗೌರವಾತ್ ॥೧೮.೮೪॥

 

ಇತ್ತ ಪಾಞ್ಚಾಲ ಸೈನ್ಯದಮೇಲೆ ಪ್ರಹಾರಮಾಡುತ್ತಿರುವ ಭೀಮನನ್ನು ಕುರಿತು ಅರ್ಜುನ ಹೇಳುತ್ತಾನೆ: ‘ಎಲೋ ವೀರ, ನೀನು ಈ ರಾಜನ ಸೇನೆಯನ್ನು ಕೊಲ್ಲಲು ಪ್ರಯತ್ನಪಡಬೇಡ. ಈ ದ್ರುಪದನು ನಮ್ಮ ಸಂಬಂಧಯೋಗ್ಯ ಮತ್ತು  ನಮ್ಮ ಅಪ್ಪನ ಸಖ.  ಎಲ್ಲಕ್ಕಿಂತ ಮಿಗಿಲಾಗಿ ಇವನು ಧರ್ಮದಲ್ಲಿದ್ದಾನೆ. ಹೀಗಾಗಿ ಗುರುಗಳ ಮಾತಿನ ಗೌರವದಿಂದ ಇವನನ್ನು ಕೊಂಡೊಯ್ಯೋಣ’ ಎಂದು. 

 

ಸ್ನೇಹಪಾಶಂ ತತಶ್ಚಕ್ರೇ ಬೀಭತ್ಸೌ ದ್ರುಪದೋsಧಿಕಮ್ ।

ತತಃ ಸೇನಾಂ ವಿಹಾಯೈವ ಭೀಮೋ ಬೀಭತ್ಸುಮನ್ವಯಾತ್ ॥೧೮.೮೫॥

 

ಅರ್ಜುನನ ಈ ಮಾತಿನಿಂದಾಗಿ ದ್ರುಪದನು ಅವನಲ್ಲಿ ಬಹಳ ಸ್ನೇಹವನ್ನು ಮಾಡಿದ. ಇತ್ತ ಭೀಮಸೇನನು ಪಾಞ್ಚಾಲ ಸೇನೆಯನ್ನು ಬಿಟ್ಟು,  ಭೀಭತ್ಸುವನ್ನು(ಅರ್ಜುನನನ್ನು) ಅನುಸರಿಸಿದ.

 

ಮುಕ್ತಾ ಕಥಞ್ಚಿದ್ ಭೀಮಾತ್ ಸ್ಯಾತ್ ಸಾ ಸೇನಾ ದುದ್ರುವೇ ಭಯಾತ್ ।

ದ್ರುಪದಂ ಸ್ಥಾಪಯಾಮಾಸಾಥಾರ್ಜ್ಜುನೋ ದ್ರೋಣಸನ್ನಿಧೌ ॥೧೮.೮೬ ॥

 

ಭೀಮನಿಂದ ಬಿಡಲ್ಪಟ್ಟ ಆ ಸೇನೆಯು ಭಯದಿಂದ ಓಡಿಹೋಯಿತು.  ತದನಂತರ ಅರ್ಜುನನು ದ್ರೋಣರ ಸನ್ನಿಧಿಯಲ್ಲಿ ದ್ರುಪದನನ್ನು ಕರೆತಂದು ನಿಲ್ಲಿಸಿದ.

No comments:

Post a Comment