ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 26, 2020

Mahabharata Tatparya Nirnaya Kannada 1887_1896

 

ಪಪ್ರಚ್ಛೈನಂ ತದಾ ದ್ರೋಣಸಖ್ಯಮಸ್ತ್ಯುತ ನೇತಿ ಹ ।

ಅಸ್ತೀದಾನೀಮಿತಿ ಪ್ರಾಹ ದ್ರುಪದೋsಙ್ಗಿರಸಾಂ ವರಮ್ ॥೧೮.೮೭ ॥

 

ತನ್ನೆದುರು ಬಂಧಿಯಾಗಿ ನಿಂತಿರುವ ದ್ರುಪದನನ್ನು ಕುರಿತು ದ್ರೋಣಾಚಾರ್ಯರು:  ‘ಈಗ ನಮ್ಮಿಬ್ಬರ ನಡುವೆ ಗೆಳೆತನ ಇದೆಯೋ ಇಲ್ಲವೋ ಎಂದು ಕೇಳುತ್ತಾರೆ. ಅಙ್ಗಿರಸ ಋಷಿಗಳ ಗೋತ್ರದಲ್ಲಿ ಶ್ರೇಷ್ಠನಾಗಿರುವ ದ್ರೋಣಾಚಾರ್ಯರಲ್ಲಿ ‘ಈಗ ನಮ್ಮ ನಡುವೆ ಸಖ್ಯವಿದೆ’ ಎನ್ನುತ್ತಾನೆ ದ್ರುಪದ.

 

ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।

ನಹ್ಯರಾಜ್ಞಾ ಭವೇತ್ ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥

 

ಆಗ ದ್ರುಪದನನ್ನು ಕುರಿತು ದ್ರೋಣಾಚಾರ್ಯರು: ‘ನಿನ್ನ ನಾಶವಾಗದ ಗೆಳೆತನವನ್ನು ನಾನು ಬಯಸುತ್ತೇನೆ. ಯಾವ ಕಾರಣದಿಂದ ರಾಜನಲ್ಲದವರಿಂದ ನಿನ್ನ ಗೆಳೆತನ ಇರಲಾರದೋ, ಆ ಕಾರಣದಿಂದ ಈ ರೀತಿ ಮಾಡಬೇಕಾಯಿತು (ಇದನ್ನು ಮಾಡಿದೆ)’ ಎನ್ನುತ್ತಾರೆ.

 

ನ ವಿಪ್ರಧರ್ಮ್ಮೋ ಯದ್ ಯುದ್ಧಮತಸ್ತ್ವಂ ನ ಮಯಾ ಧೃತಃ ।

ಶಿಷ್ಯೈರೇತತ್ ಕಾರಿತಂ ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥

 

ಮುಂದುವರಿದು ದ್ರೋಣಾಚಾರ್ಯರು ಹೇಳುತ್ತಾರೆ: ‘ಯಾವ ಕಾರಣದಿಂದ ಯುದ್ಧವು ಬ್ರಾಹ್ಮಣರ ಧರ್ಮವಲ್ಲವೋ, ಆ ಕಾರಣದಿಂದ ನನ್ನಿಂದ ನೀನು ಬಂಧಿಸಲ್ಪಡಲಿಲ್ಲ. ನನ್ನ ಶಿಷ್ಯರಿಂದ ನಿನ್ನ ಗೆಳೆತನವನ್ನು ಬಯಸಿ ನಾನು ಈ ಕೆಲಸವನ್ನು ಮಾಡಿಸಿದೆ.

 

ಅತಃ ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।

ಗಙ್ಗಾಯಾ ದಕ್ಷಿಣೇ ಕೂಲೇ  ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥

 

ಆ ಕಾರಣದಿಂದ ಗೆಳೆತನಕ್ಕಾಗಿಯೇ ನಿನ್ನ ರಾಜ್ಯದ ಸ್ವಲ್ಪಭಾಗವು  ನನ್ನಿಂದ ತೆಗೆದುಕೊಳ್ಳಲ್ಪಟ್ಟಿದೆ. ಗಂಗೆಯ ದಕ್ಷಿಣದಲ್ಲಿರುವ ಪ್ರದೇಶಕ್ಕೆ ನೀನೇ ಒಡೆಯ. ಉತ್ತರದಲ್ಲಿರುವ ಭಾಗಕ್ಕೆ ನಾನು ಒಡೆಯ.

 

            ನಹ್ಯರಾಜತ್ವ ಏಕಸ್ಯ ಸಖ್ಯಂ ಸ್ಯಾದಾವಯೋಃ ಸಖೇ ।

           ಇತ್ಯುಕ್ತ್ವೋನ್ಮುಚ್ಯ ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥

 

ಯಯೌ ಶಿಷ್ಯೈರ್ನ್ನಾಗಪುರಂ ನ್ಯವಸತ್  ಸುಖಮತ್ರ ಚ ।

ಬ್ರಾಹ್ಮಣ್ಯತ್ಯಾಗಭೀರುಃ ಸ ನ ಗೃಹ್ಣನ್  ಧನುರಪ್ಯಸೌ ॥೧೮.೯೨ ॥

 

ರಾಜನಲ್ಲದೇ ಹೋದರೆ ನಮ್ಮಿಬ್ಬರ  ಸಖ್ಯ ಸಾಧ್ಯವಿಲ್ಲ. ಆದ್ದರಿಂದ ಓ ಗೆಳೆಯನೇ, ನಾವಿಬ್ಬರೂ ಈಗ ರಾಜರಾದೆವು. ಈಗಲಾದರೂ ಗೆಳೆತನ ಇರಬಹುದಲ್ಲಾ’ ಎಂದು  ಹೇಳಿ, ದ್ರುಪದನ  ರಾಜ್ಯದ ಸ್ವಲ್ಪ ಭಾಗವನ್ನು ಸ್ವೀಕರಿಸಿದ ದ್ರೋಣಾಚಾರ್ಯರು, ದ್ರುಪದನನ್ನು ಬಿಡಿಸಿ ( ಬಿಟ್ಟು) , ಶಿಷ್ಯರಿಂದ ಕೂಡಿಕೊಂಡು ಹಸ್ತಿನಾವತಿಗೆ ತೆರಳಿ ಸುಖವಾಗಿ ವಾಸಮಾಡಿದರು. ಬ್ರಾಹ್ಮಣ್ಯವು ನಾಶವಾದೀತು ಎನ್ನುವ ಭಯದಿಂದ ಅವರು ಧನುಸ್ಸನ್ನೂ ಕೂಡಾ ಹಿಡಿಯದೇ, ಇದೆಲ್ಲವನ್ನೂ ಕೂಡಾ ಮಾಡಿದರು.

ಧಾರ್ತ್ತರಾಷ್ಟ್ರೈಸ್ತು ಭೀಮಸ್ಯ ಭಯಾತ್ ಪಾದೌ ಪ್ರಣಮ್ಯ ಚ ।

ಶರಣಾರ್ತ್ಥಂ ಯಾಚಿತತ್ವಾತ್ ಸಪುತ್ರೋ ಯುಯುಧೇ ಪರೈಃ ॥೧೮.೯೩ ॥

 

ದುರ್ಯೋಧನಾದಿಗಳು ಭೀಮನ ಭಯದಿಂದ ದ್ರೋಣಾಚಾರ್ಯರ ಪಾದಕ್ಕೆರಗಿ: ‘ಶರಣು ಬಂದಿದ್ದೇವೆ, ನಮ್ಮನ್ನು ರಕ್ಷಿಸಿ’ ಎಂದು ಯಾಚನೆ ಮಾಡಿದ್ದರಿಂದ ತನ್ನ ಮಗನಿಂದ ಕೂಡಿಕೊಂಡು ಅವರು ಯುದ್ಧಮಾಡಿದರು.

 

ಏವಂ ಹರೀಚ್ಛಯೈವಾಸೌ ಕ್ಷಾತ್ರಂ ಧರ್ಮ್ಮಮುಪೇಯಿವಾನ್ ।

ದ್ರುಪದಸ್ತು ದಿವಾರಾತ್ರಂ ತಪ್ಯಮಾನಃ ಪರಾಭವಾತ್ ॥೧೮.೯೪ ॥

 

ಭೀಮಾರ್ಜ್ಜುನಬಲಂ ದೃಷ್ಟ್ವಾ ಚೇಚ್ಛನ್ ಪಾಣ್ಡವಸಂಶ್ರಯಮ್ ।

ಸಮ್ಬನ್ಧೀತ್ಯರ್ಜ್ಜುನವಚಶ್ಚಿಕೀರ್ಷುಃ ಸತ್ಯಮೇವ ಚ ॥೧೮.೯೫ ॥

 

ಮಾರ್ದ್ದವಂ ಚಾರ್ಜ್ಜುನೇ ದೃಷ್ಟ್ವಾ ಸುತಾಮೈಚ್ಛತ್ ತದರ್ತ್ಥತಃ ।

ಪುತ್ರಂ ಚ ದ್ರೋಣಹನ್ತಾರಮಿಚ್ಛನ್ ವಿಪ್ರವರೌ ಯಯೌ ॥೧೮.೯೬ ॥

 

ಈರೀತಿಯಾಗಿ ದ್ರೋಣಾಚಾರ್ಯರು  ಪರಮಾತ್ಮನ ಇಚ್ಛೆಯಂತೇ  ಕ್ಷತ್ರಿಯ ಧರ್ಮವನ್ನು ಹೊಂದಿದರು. ದ್ರುಪದರಾಜನಾದರೋ, ಪರಾಜಯದಿಂದಾಗಿ ಹಗಲೂ-ರಾತ್ರಿ ಪರಿತಪಿಸಿ, ಭೀಮಾರ್ಜುನರ ಬಲವನ್ನು ನೋಡಿ, ಪಾಂಡವರ ಆಶ್ರಯವನ್ನು ಬಯಸಿದನು. ‘ಇವನು ನಮಗೆ ಸಂಬಂಧಿ’ ಎನ್ನುವ ಅರ್ಜುನನ ಮಾತನ್ನು ಸತ್ಯವನ್ನಾಗಿ ಮಾಡಲು, ಅರ್ಜುನನಲ್ಲಿ ತನ್ನ ಬಗೆಗಿನ ಮೃದುವಾದ ಭಾವನೆಯನ್ನು ಗಮನಿಸಿದ್ದ ದ್ರುಪದ, ಅವನಿಗಾಗಿ ಮಗಳನ್ನು ಪಡೆಯಬೇಕೆಂದೂ,  ದ್ರೋಣನನ್ನು ಸಾಯಿಸುವ ಮಗನನ್ನೂ ಬಯಸಿ, ಯಾಜ ಹಾಗು ಉಪಯಾಜರೆಂಬ ಶ್ರೇಷ್ಠ ಬ್ರಾಹ್ಮಣರನ್ನು ಕುರಿತು ತೆರಳಿದನು.


No comments:

Post a Comment