ತಾನ್ ಪ್ರಭಗ್ನಾನ್ ಸಮಾಲೋಕ್ಯ ಭೀಮಃ ಪ್ರಹರತಾಂ ವರಃ ।
ಆರುರೋಹ ರಥಂ ವೀರಃ ಪುರ ಆತ್ತಶರಾಸನಃ ॥೧೮.೬೯॥
ಪ್ರಹಾರದಲ್ಲಿ ಅಗ್ರಗಣ್ಯನಾದ ಭೀಮಸೇನನು ಸೋಲುಂಡ ದುರ್ಯೋಧನಾದಿಗಳನ್ನು
ಕಂಡು, ತನ್ನ ಬಿಲ್ಲನ್ನು ಹಿಡಿದು ಮುಂದೆ ನಿಂತು, ರಥವನ್ನೇರಿದನು.
ತಮನ್ವಯಾದಿನ್ದ್ರಸುತೋ ಯಮೌ ತಸ್ಯೈವ ಚಕ್ರಯೋಃ ।
ಯುಧಿಷ್ಠಿರಸ್ತು ದ್ರೋಣೇನ ಸಹ ತಸ್ಥೌ ನಿರೀಕ್ಷಕಃ ॥೧೮.೭೦॥
ಅರ್ಜುನನು ಭೀಮನನ್ನು ಅನುಸರಿಸಿ ಹೊರಟನು. ನಕುಲ-ಸಹದೇವರು
ಅರ್ಜುನನ ರಥಚಕ್ರಗಳ ರಕ್ಷಕರಾಗಿ ನಿಂತು ಅವನನ್ನು ಅನುಸರಿಸಿದರು. ಯುಧಿಷ್ಠಿರನು ದ್ರೋಣಾಚಾರ್ಯರೊಡಗೂಡಿ
ನಿರೀಕ್ಷಿಕನಾಗಿ(ಯುದ್ಧವನ್ನು ನೋಡುವವನಾಗಿ) ನಿಂತನು.
ಆಯಾನ್ತಮಗ್ರತೋ ದೃಷ್ಟ್ವಾಭೀಮಮಾತ್ತಶರಾಸನಮ್ ।
ದುದ್ರುವುಃ ಸರ್ವಪಾಞ್ಚಾಲಾಃ ವಿವಿಶುಃ ಪುರಮೇವ ಚ ॥೧೮.೭೧॥
ಬಿಲ್ಲನ್ನು ಹಿಡಿದು ಮುನ್ನುಗ್ಗಿ ಬರುತ್ತಿರುವ ಭೀಮನನ್ನು ಕಂಡ
ಆ ಸ್ತ್ರೀ-ಬಾಲಕರು ಮೊದಲಾದ ಸಮಸ್ತ ಪಾಞ್ಚಾಲರು ಹಿಂದಕ್ಕೆ
ಓಡಿ ಪಟ್ಟಣವನ್ನು ಸೇರಿದರು.
ದ್ರುಪದಸ್ತ್ವಭ್ಯಯಾದ್ ಭೀಮಂ ಸಪುತ್ರಃ ಸಾರಸೇನಯಾ ।
ಚಕ್ರರಕ್ಷೌ ತು ತಸ್ಯಾsಸ್ತಾಂ ಯುಧಾಮನ್ಯೂತ್ತಮೋಜಸೌ ॥೧೮.೭೨॥
ಧಾತ್ರರ್ಯ್ಯಮಾವೇಶಯುತೌ ವಿಶ್ವಾವಸುಪರಾವಸೂ ।
ಸುತೌ ತಸ್ಯ ಮಹಾವೀರ್ಯ್ಯೌ ಸತ್ಯಜಿತ್ ಪೃಷ್ಠತೋsಭವತ್ ॥೧೮.೭೩॥
ಸ ಮಿತ್ರಾಂಶಯುತೋ ವೀರಶ್ಚಿತ್ರಸೇನೋ ಮಹಾರಥಃ ।
ಅಗ್ರತಸ್ತು ಶಿಖಣ್ಡ್ಯಾಗಾದ್ ರಥೋದಾರಃ ಶರಾನ್ ಕ್ಷಿಪನ್ ॥೧೮.೭೪॥
ದ್ರುಪದನು ಪುತ್ರರಿಂದ ಒಡಗೂಡಿ, ಸೈನಿಕಶಿಕ್ಷಣವನ್ನು ಪಡೆದ ಸೈನಿಕರೊಂದಿಗೆ
ಭೀಮನನ್ನು ಎದುರುಗೊಂಡ. ಆ ದ್ರುಪದನ ಚಕ್ರರಕ್ಷಕರಾಗಿ
ಯುಧಾಮನ್ಯು ಮತ್ತು ಉತ್ತಮೋಜಸ್ ಇವರಿಬ್ಬರಿದ್ದರು. ಅವರು ಧಾತ್ರ ಮತ್ತು ಅರ್ಯಮಾ ಎನ್ನುವ ಹನ್ನೆರಡು ಮಂದಿ ಆದಿತ್ಯರಲ್ಲಿ ಇಬ್ಬರಾದ, ಅವರ
ಆವೇಶದಿಂದ ಕೂಡಿದವರಾದ, ವಿಶ್ವಾವಸು-ಪರಾವಸೂ
ಎನ್ನುವ ಗಂಧರ್ವರು. ಅವರಿಬ್ಬರೂ ಮಹಾಬಲವುಳ್ಳ ಮಕ್ಕಳು. ಸತ್ಯಜಿತ್ ಅನ್ನುವವನು ದ್ರುಪದನ
ಹಿಂದಿನಿಂದ ರಕ್ಷಣೆ ಮಾಡುವವನಾಗಿದ್ದ. ಅವನು ಮಿತ್ರಾಂಶದಿಂದ ಕೂಡಿರುವ ಚಿತ್ರಸೇನ ಎನ್ನುವ
ಗಂಧರ್ವ. ಮುಂದೆ ರಥಿಗಳಲ್ಲೇ ಶ್ರೇಷ್ಠನಾದ ಶಿಖಣ್ಡಿಯು ಬಾಣಗಳನ್ನು ಎಸೆಯುತ್ತಾ ಬಂದ.
ಜನಮೇಜಯಸ್ತಮನ್ವೇವ ಪೂರ್ವಂ ಚಿತ್ರರಥೋ ಹಿ ಯಃ ।
ತ್ವಷ್ಟುರಾವೇಶಸಂಯುಕ್ತಃ ಸ ಶರಾನಭ್ಯವರ್ಷತ ॥೧೮.೭೫॥
ಜನಮೇಜಯನು ಶಿಖಣ್ಡಿಯನ್ನು
ಅನುಸರಿಸಿ ಬಂದು ಬಾಣಗಳನ್ನು ಎಸೆದ. ಪೂರ್ವದಲ್ಲಿ ಅವನು ಚಿತ್ರರಥ ಎನ್ನುವ ಗಂಧರ್ವ. ದ್ವಾದಶಾದಿತ್ಯರಲ್ಲಿ
ಒಬ್ಬನಾದ ತ್ವಷ್ಟುವಿನ ಆವೇಶ ಇವನಿಗಿತ್ತು.
ತಾವುಭೌ ವಿರಥೌ ಕೃತ್ವಾ ವಿಚಾಪೌ ಚ ವಿವರ್ಮ್ಮಕೌ ।
ಭೀಮೋ ಜಘಾನ ತಾಂ ಸೇನಾಂ ಸವಾಜಿರಥಕುಞ್ಜರಾಮ್ ॥೧೮.೭೬॥
ಜನಮೇಜಯ-ಶಿಖಣ್ಡಿ ಇಬ್ಬರನ್ನೂ ವಿರಥರನ್ನಾಗಿ, ಬಾಣಹೀನರನ್ನಾಗಿ, ಕವಚಹೀನರನ್ನಾಗಿ ಮತ್ತು
ಬಿಲ್ಲಿನಿಂದ ರಹಿತರನ್ನಾಗಿ ಮಾಡಿದ ಭೀಮನು, ಆನೆ, ರಥ ಮತ್ತು ಕುದುರೆ
ಇವುಗಳೆಲ್ಲವನ್ನೊಳಗೊಂಡ ಸೇನೆಯನ್ನು ನಾಶಮಾಡಿದನು.
ಅಥೈನಂ ಶರವರ್ಷೇಣ ಯುಧಾಮನ್ಯೂತ್ತಮೋಜಸೌ ।
ಅಭೀಯತುಸ್ತೌ ವಿರಥೌ ಚಕ್ರೇ ಭೀಮೋ ನಿರಾಯುಧೌ ॥೧೮.೭೭॥
ತದನಂತರ ಯುಧಾಮನ್ಯು ಮತ್ತು ಉತ್ತಮೋಜಸರು ಬಾಣಗಳ
ಮಳೆಗರೆಯುತ್ತಾ ಭೀಮನನ್ನು ಎದುರುಗೊಂಡರು. ಭೀಮನು ಅವರಿಬ್ಬರನ್ನೂ ನಿರಾಯುಧರನ್ನಾಗಿಯೂ, ವಿರಥರನ್ನಾಗಿಯೂ ಮಾಡಿದನು.
No comments:
Post a Comment