ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 25, 2020

Mahabharata Tatparya Nirnaya Kannada 1983_1987

 

ಉಕ್ತ್ವೈವಮೇತ್ಯ ನಿಖಿಲಂ ಚ ಜಗಾದ ಭೀಮ ಉದ್ಧರ್ಶ ಆಸ ಸ ನಿಶಮ್ಯ ಮಹಾಸ್ವಧರ್ಮ್ಮಮ್ ।

ಪ್ರಾಪ್ತಂ ವಿಲೋಕ್ಯ ತಮತೀವ ವಿಘೂರ್ಣ್ಣನೇತ್ರಂ ದೃಷ್ಟ್ವಾ ಜಗಾದ ಯಮಸೂನುರುಪೇತ್ಯ ಚಾನ್ಯೈಃ ॥೧೯.೮೩॥

 

ಮಾತಃ ಕಿಮೇಷ ಮುದಿತೋsತಿತರಾಮಿತಿ ಸ್ಮ ತಸ್ಮೈ ಚ ಸಾ ನಿಖಿಲಮಾಹ ಸ ಚಾಬ್ರವೀತ್ ತಾಮ್ ।

ಕಷ್ಟಂ ತ್ವಯಾ ಕೃತಮಹೋ ಬಲಮೇವ ಯಸ್ಯ ಸರ್ವೇ ಶ್ರಿತಾ ವಯಮಮುಂ ಚ ನಿಹನ್ಸಿ ಭೀಮಮ್ ॥೧೯.೮೪॥

 

ಹಿಂತಿರುಗಿಬಂದ ಕುಂತಿಯಿಂದ ಎಲ್ಲವನ್ನೂ ಕೇಳಿ ತಿಳಿದ ಭೀಮಸೇನ ಬಹಳ ಸಂತೋಷಗೊಂಡ. (ಏಕೆಂದರೆ ದೈತ್ಯನಿಗ್ರಹ ಪರಮಾತ್ಮನಿಗೆ ಪ್ರೀತಿಕಾರಕ. ಅದರಿಂದ ಪರಮಾತ್ಮನ ಪೂಜೆಯಾಗುತ್ತದೆ). ಮಹತ್ತಾದ ಸ್ವಧರ್ಮಪಾಲನೆಯ ಅವಕಾಶ ತಾನಾಗಿಯೇ ಒದಗಿ ಬಂದುದರಿಂದ ಭೀಮ ಸಂತೋಷದಿಂದ ಅರಳಿದ ಕಣ್ಗಳುಳ್ಳವನಾದ. ಅದನ್ನು ಕಂಡ ಧರ್ಮರಾಜ ತಾಯಿಯನ್ನು ಕುರಿತು ಹೀಗೆ ಕೇಳುತ್ತಾನೆ: ‘ಓ ಮಾತೇ, ಈ ಭೀಮನು ಯಾವಕಾರಣಕ್ಕಾಗಿ ಅತ್ಯಂತ ಸಂತಸಗೊಂಡಿದ್ದಾನೆ’ ಎಂದು. ಆಗ ಅವಳು ಧರ್ಮರಾಜನಿಗೆ ಎಲ್ಲವನ್ನೂ ಹೇಳುತ್ತಾಳೆ. ಅವನಾದರೋ, ಅವಳನ್ನು ಕುರಿತು ಹೇಳುತ್ತಾನೆ: ‘ನೀನು ಬಹಳ ಅವಿವೇಕದ ಹೆಜ್ಜೆಯನ್ನಿಡುತ್ತಿರುವೆ. ಯಾರ ಬಲವನ್ನು ನಾವೆಲ್ಲಾರೂ ಆಶ್ರಯಿಸಿದ್ದೇವೋ, ಅಂತಹ ಈ ಭೀಮಸೇನನನ್ನು ನೀನೇ ಸಾವಿನತ್ತ ತಳ್ಳುತ್ತಿದ್ದೀಯ. 

 

ಯದ್ಬಾಹುವೀರ್ಯ್ಯಪರಮಾಶ್ರಯತೋ ಹಿ ರಾಜ್ಯಮಿಚ್ಛಾಮ ಏವ ನಿಖಿಲಾರಿವಧಂ ಸ್ವಧರ್ಮ್ಮಮ್ ।

ಸೋsಯಂ ತ್ವಯಾsದ್ಯ ನಿಶಿಚಾರಿಮುಖಾಯ ಮಾತಃ ಪ್ರಸ್ಥಾಪ್ಯತೇ ವದ ಮಮಾsಶು ಕಯೈವ ಬುದ್ಧ್ಯಾ॥೧೯.೮೫॥

 

ಯಾರ ತೋಳ್ಬಲದ ಪರಮಾಶ್ರಯದಿಂದ ಸ್ವಧರ್ಮಕ್ಕಾಗಿ ನಾವು ರಾಜ್ಯವನ್ನು ಬಯಸುತ್ತಿದ್ದೆವೋ, ನಮ್ಮ ಎಲ್ಲಾ ಶತ್ರುಗಳ ನಾಶವನ್ನು ಬಯಸುತ್ತಿದ್ದೆವೋ, ಅಂತಹ ಇವನು ನಿನ್ನಿಂದ ಈಗ ರಾಕ್ಷಸನ ಮುಖಕ್ಕಾಗಿ ಕಳುಹಿಸಲ್ಪಡುತ್ತಿದ್ದಾನೆ. ಎಲೈ ತಾಯಿಯೇ, ಯಾವ ಕಾರಣಕ್ಕಾಗಿ ಇಂತಹ ನಿರ್ಧಾರ ಎನ್ನುವುದನ್ನು ನನಗೆ ಹೇಳು’.

 

ಇತ್ಯುಕ್ತವನ್ತಮಮುಮಾಹ ಸುಧೀರಬುದ್ಧಿಃ ಕುನ್ತೀ ನ ಪುತ್ರಕ ನಿಹನ್ತುಮಯಂ ಹಿ ಶಕ್ಯಃ ।

ಸರ್ವೈಃ ಸುರೈರಸುರಯೋಗಿಭಿರಪ್ಯನೇನ ಚೂರ್ಣ್ಣೀಕೃತೋ ಹಿ ಶತಶೃಙ್ಗಗಿರಿಃ ಪ್ರಸೂತ್ಯಾಮ್ ॥೧೯.೮೬॥

 

ಈರೀತಿಯಾಗಿ ಹೇಳುತ್ತಿರುವ ಧರ್ಮರಾಜನನ್ನು ಕುರಿತು, ಧೈರ್ಯವಂತೆಯಾದ^ ಕುಂತಿಯು ಹೇಳುತ್ತಾಳೆ: ‘ಮಗನೇ, ದೇವತೆಗಳು, ದೈತ್ಯರು, ಎಲ್ಲರೂ ಒಟ್ಟಿಗೇ ಬಂದರೂ ಕೂಡಾ ಇವನು ಕೊಲ್ಲಲ್ಪಡಲು  ಯೋಗ್ಯನಲ್ಲ(ಅವರ್ಯಾರಿಂದಲೂ ಇವನನ್ನು ಕೊಲ್ಲಲು ಸಾಧ್ಯವಿಲ್ಲ). ಇವನಿಂದ ನನ್ನ ಬಾಣಂತನದ ಕಾಲದಲ್ಲೇ ಶತಶೃಂಗ ಪರ್ವತವು ಪುಡಿಪುಡಿಯಾಯಿತಷ್ಟೇ?

 [^ಕುಂತಿ ಮಹಾಧೈರ್ಯವಂತೆ. ಕುಂತಿಯ ಧೈರ್ಯ, ಗಾಂಧಾರಿಯ ಧರ್ಮಶೀಲತೆ, ವಿದುರನ ಪ್ರಜ್ಞೆ ಇದನ್ನೇ ತೋರಿಸಲು ವೇದವ್ಯಾಸರು ಮಹಾಭಾರತವನ್ನು ರಚಿಸಿದರು ಎನ್ನುವಮಾತನ್ನು ಮಹಾಭಾರತದ ಆದಿಪರ್ವದಲ್ಲಿ ಹೇಳಿರುವುದನ್ನು  ನಾವು ಕಾಣುತ್ತೇವೆ]

ಏಷ ಸ್ವಯಂ ಹಿ ಮರುದೇವ ನರಾತ್ಮಕೋsಭೂತ್ ಕೋ ನಾಮ ಹನ್ತುಮಿಮಮಾಪ್ತಬಲೋ  ಜಗತ್ಸು ।

ಇತ್ಯೇವಮಸ್ತ್ವಿತಿ ಸ ತಾಮವದತ್ ಪರೇದ್ಯುರ್ಭೀಮೋ ಜಗಾಮ ಶಕಟೇನ ಕೃತೋರುಭೋಗಃ ॥೧೯.೮೭॥

 

‘ಸಾಕ್ಷಾತ್ ಮುಖ್ಯಪ್ರಾಣನೇ ಆದ ಇವನು ಮನುಷ್ಯಾವತಾರದಲ್ಲಿದ್ದಾನೆ. ಇವನನ್ನು ಕೊಲ್ಲಲು ಜಗತ್ತಿನಲ್ಲಿ ಯಾರುತಾನೇ ಬಲವನ್ನು ಹೊಂದಿದ್ದಾರೆ?’ ಈರೀತಿಯಾಗಿ ಕುಂತಿ ನುಡಿದಾಗ ಧರ್ಮರಾಜನು ‘ಹಾಗಿದ್ದಲ್ಲಿ ಹಾಗೆಯೇ ಆಗಲಿ’ ಎಂದನು. ಮಾರನೆಯದಿನ  ಭೀಮನು ಚನ್ನಾಗಿರುವ ಭೋಗಸಾಮಗ್ರಿಗಳನ್ನು ಇಟ್ಟುಕೊಂಡು ಗಾಡಿಯೊಂದಿಗೆ ತೆರಳಿದನು.        

Wednesday, September 23, 2020

Mahabharata Tatparya Nirnaya Kannada 1978_1982

 

ಪೃಷ್ಟಸ್ತಯಾssಹ ಸ ತು ವಿಪ್ರವರೋ ಬಕಸ್ಯ ವೀರ್ಯ್ಯಂ ಬಲಂ ಚ ದಿತಿಜಾರಿಭಿರಪ್ಯಸಹ್ಯಮ್ ।

ಸಂವತ್ಸರತ್ರಯಯುತೇ ದಶಕೇ ಕರಂ ಚ ಪ್ರಾತಿಸ್ವಿಕಂ ದಶಮುಖಸ್ಯ ಚ ಮಾತುಲಸ್ಯ ॥೧೯.೭೮॥

 

ಕುಂತಿಯಿಂದ ಪ್ರಶ್ನಿಸಲ್ಪಟ್ಟ ಆ ಬ್ರಾಹ್ಮಣಶ್ರೇಷ್ಠನು, ಬಕನಲ್ಲಿರುವ,  ದೇವತೆಗಳಿಗೂ ಕೂಡಾ ತಡೆಯಲು ಅಸಾಧ್ಯವಾದ ಬಲ-ವೀರ್ಯದ ಕುರಿತು ಹೇಳಿದನು. ಪ್ರತಿಯೊಬ್ಬನೂ ಸರದಿಯಂತೆ ಹದಿಮೂರು ವರ್ಷಗಳಿಗೊಮ್ಮೆ ರಾವಣನ ಸೋದರಮಾವನಾದ ಬಕನಿಗೆ ಕೊಡಲೇಬೇಕಿರುವ ಕರದ ಕುರಿತೂ ಹೇಳಿದನು.

 

ಶ್ರುತ್ವಾ ತಮುಗ್ರಬಲಮತ್ಯುರುವೀರ್ಯ್ಯಮೇವ ರಾಮಾಯಣೇ ರಘುವರೋರುಶರಾತಿಭೀತಮ್ ।

ವಿಷ್ಟಂ ಬಿಲೇಷ್ವಥ ನೃಪಾನ್ ವಶಮಾಶು ಕೃತ್ವಾ ಭೀತ್ಯೈವ ತೈಸ್ತದನು ದತ್ತಕರಂ ನನನ್ದ ॥೧೯.೭೯॥

 

‘ರಾಮಾಯಣದ ಕಾಲದಲ್ಲಿ ರಾಮಚಂದ್ರನ ಬಾಣಕ್ಕೆ ಹೆದರಿ, ಅವನ ಉಗ್ರಬಲವನ್ನು ಕೇಳಿ ಬಿಲದಲ್ಲಿ ಅಡಗಿಕೊಂಡು, ಆಮೇಲೆ (ರಾಮಾವಾತಾರ ಸಮಾಪ್ತಿಯ ನಂತರ) ಎಲ್ಲಾ ರಾಜರುಗಳನ್ನು ತನ್ನ ವಶರನ್ನಾಗಿ ಮಾಡಿಕೊಂಡು, ಎಲ್ಲರನ್ನೂ ಭಯಗ್ರಸ್ಥರನ್ನಾಗಿಮಾಡಿ ಅವರಿಂದ ಕರವನ್ನು ಪಡೆಯುತ್ತಿದ್ದ’. ಬ್ರಾಹ್ಮಣನಿಂದ ಬಕನ ಕುರಿತಾಗಿ ಈ ಎಲ್ಲಾ  ವಿಷಯವನ್ನು ಕೇಳಿ ತಿಳಿದ ಕುಂತಿ ಸಂತೋಷಪಟ್ಟಳು!

 

[ಕುಂತೀದೇವಿ ಏಕೆ ಸಂತೋಷಪಟ್ಟಳು ಎನ್ನುವುದನ್ನು ವಿವರಿಸುತ್ತಾರೆ:]

 

ಏವಂ ಬಲಾಢ್ಯಮಮುಮಾಶು ನಿಹತ್ಯ ಭೀಮಃ ಕೀರ್ತ್ತಿಂ ಚ ಧರ್ಮ್ಮಮಧಿಕಂ ಪ್ರತಿಯಾಸ್ಯತೀಹ ।

ಸರ್ವೇ ವಯಂ ಚ ತಮನು ಪ್ರಗೃಹೀತಧರ್ಮ್ಮಾ ಯಾಸ್ಯಾಮ ಇತ್ಯವದದಾಶು ಧರಾಸುರಂ ತಮ್ ॥೧೯.೮೦॥

 

‘ಈರೀತಿ ಬಲಸಹಿತನಾಗಿರುವ ಬಕನನ್ನು ಕೊಂದು, ಭೀಮಸೇನನು ಕೀರ್ತಿಯನ್ನೂ, ಪುಣ್ಯವನ್ನೂ  ಹೊಂದುತ್ತಾನೆ. ನಾವೆಲ್ಲರೂ ಕೂಡಾ ಪುಣ್ಯವನ್ನು ಪಡೆದು ತೆರಳೋಣ’ ಎಂದು ಅವಳು ಸಂಕಲ್ಪ ಮಾಡಿ, ಆ ಬ್ರಾಹ್ಮಣನನ್ನು ಕುರಿತು ಹೇಳಿದಳು:

 

ಸನ್ತಿ ಸ್ಮ ವಿಪ್ರವರ ಪಞ್ಚ ಸುತಾ ಮಮಾದ್ಯ ತೇಷ್ವೇಕ ಏವ ನರವೈರಿಮುಖಾಯ ಯಾತು ।

ಇತ್ಯುಕ್ತ ಆಹ ಸ ನ ತೇ ಸುತವದ್ಧ್ಯಯಾsಹಂ ಪಾಪೋ ಭವಾನಿ ತವ ಹನ್ತ ಮನೋsತಿಧೀರಮ್ ॥೧೯.೮೧॥

 

‘ವಿಪ್ರವರ, ನನಗೆ ಐದುಜನ ಮಕ್ಕಳು. ಅವರಲ್ಲಿ ಒಬ್ಬ ಮನುಷ್ಯ ಭಕ್ಷಕನಾದ ಬಕನ ಮುಖವನ್ನು ಕುರಿತು ತೆರಳಲಿ’. ಈರೀತಿಯಾಗಿ ಕುಂತಿಯಿಂದ ಹೇಳಲ್ಪಟ್ಟ ಆ ಬ್ರಾಹ್ಮಣನು, ‘ನಿನ್ನ ಮಗನನ್ನು  ಕೊಂದ  ಪಾಪಕ್ಕೆ ನಾನು ಕಾರಣನಾಗಲಾರೆ. ಆದರೆ  ಅಮ್ಮಾ, ನಿನ್ನ ಮನಸ್ಸು ಅತ್ಯಂತ ಧೈರ್ಯಯುಕ್ತವಾದುದು’ ಎಂದು ಹೇಳಿ,   ಆಶ್ಚರ್ಯದ ಉದ್ಗಾರ(ಹಂತ)ಮಾಡುತ್ತಾನೆ.

 

ಉಕ್ತೈವಮಾಹ ಚ ಪೃಥಾ  ತನಯೇ ಮದೀಯೇ ವಿದ್ಯಾsಸ್ತಿ ದಿಕ್ಪತಿಭಿರಪ್ಯವಿಷಹ್ಯರೂಪಾ ।

ಉಕ್ತೋsಪಿ ನೋ ಗುರುಭಿರೇಷ ನಿಯುಙ್ಕ್ತ ಏತಾಂ ವದ್ಧ್ಯಸ್ತಥಾsಪಿ ನ ಸುರಾಸುರಪಾಲಕೈಶ್ಚ ॥೧೯.೮೨॥

 

ಈರೀತಿಯಾಗಿ ಬ್ರಾಹ್ಮಣನಿಂದ ಹೇಳಲ್ಪಟ್ಟ ಕುಂತಿಯು ಹೇಳುತ್ತಾಳೆ: ‘ನನ್ನ ಮಗನಲ್ಲಿ ದೇವತೆಗಳಿಂದಲೂ ಕೂಡಾ ಎದುರಿಸಲು ಸಾಧ್ಯವಾಗದ ವಿದ್ಯೆಯೊಂದಿದೆ. ಗುರುಗಳಿಂದ ಹೇಳಿದರೂ ಕೂಡಾ ಅವನು ಅದನ್ನು ತನ್ನ ಆತ್ಮರಕ್ಷಣೆಗಾಗಿ ಉಪಯೋಗಿಸುವುದಿಲ್ಲ.  ಆದರೂ, ಯಾರಿಂದಲೂ ನನ್ನ ಮಗ ವಧ್ಯನಲ್ಲ’ ಎಂದು.

Tuesday, September 22, 2020

Mahabharata Tatparya Nirnaya Kannada 1972_1977

 

ಜಾನೀಹಿ ವಿಪ್ರರುದಿತಂ ಕುತ ಇತ್ಯತಶ್ಚ ಯೋಗ್ಯಂ ವಿಧಾಸ್ಯ ಇತಿ ಸಾ ಪ್ರಯಯೌ ಚ ಶೀಘ್ರಮ್ ।

ಸಾ ಸಂವೃತೈವ ಸಕಲಂ ವಚನಂ ಗೃಹೇsಸ್ಯ ಶುಶ್ರಾವ ವಿಪ್ರವರ ಆಹ ತದಾ ಪ್ರಿಯಾಂ ಸಃ ॥೧೯.೭೨॥

 

‘ಬ್ರಾಹ್ಮಣ ಅಳುತ್ತಿರುವುದು ಏಕಾಗಿ ಎಂದು ತಿಳಿ, ಅದಕ್ಕೆ ಯೋಗ್ಯವಾದ ಪರಿಹಾರವನ್ನು ಮಾಡುತ್ತೇನೆ’ ಎಂದು ಭೀಮಸೇನನಿಂದ ಹೇಳಲ್ಪಟ್ಟ ಕುಂತಿಯು, ಶೀಘ್ರವಾಗಿ ತೆರಳಿದಳು. ಅವರ ಕಣ್ಣಿಗೆ ಕಾಣಿಸಿಕೊಳ್ಳದೇ, ಆ ಮನೆಯಲ್ಲಿ ನಡೆದ ಎಲ್ಲಾ ಮಾತುಗಳನ್ನೂ ಆಕೆ ಕೇಳಿಸಿಕೊಂಡಳು. ಆಗ ಬ್ರಾಹ್ಮಣನು ತನ್ನ ಹೆಂಡತಿಯನ್ನು ಕುರಿತು ಹೀಗೆ ಹೇಳುತ್ತಿದ್ದ:

 

ದಾತವ್ಯ ಏವ ಹಿ ಕರೋsದ್ಯ ಚ ರಕ್ಷಸೋsಸ್ಯ ಸಾಕ್ಷಾದ್ ಬಕಸ್ಯ ಗಿರಿಸನ್ನಿಭಭಕ್ಷ್ಯಭೋಜ್ಯಃ ।

ಪುಂಸಾsನಸಾ ಚ ಸಹಿತಾನಡುಹಾ ಪುಮಾಂಸ್ತು ನೈವಾಸ್ತಿ ನೋsಪ್ರದದತಾಂ ಚ ಸಮಸ್ತನಾಶಃ ॥೧೯.೭೩॥

 

ಈದಿನ ಭಕನೆಂಬ ರಾಕ್ಷಸನಿಗೆ ಒಂದು ಪರ್ವತದಷ್ಟು ಎತ್ತರ ಭಕ್ಷ್ಯವೂ, ಭೋಜ್ಯವೂ, ಅನ್ನವೂ ಇರುವ, ಎರಡು ಎತ್ತುಗಳುಳ್ಳ ಬಂಡಿ ಮತ್ತು ಪುರುಷನನ್ನು ಕರವಾಗಿ ಕೊಡಬೇಕಾಗಿದೆ. ದುಡ್ಡಿಲ್ಲದ ನಮ್ಮಲ್ಲಿ ಕೊಡಲು ಪುರುಷನಿಲ್ಲ. ನಾವು ಕೊಡದೇ ಹೋದರೆ ಎಲ್ಲವೂ ನಾಶವಾಗುತ್ತದೆ.

[ಹಣವುಳ್ಳ ಶ್ರೀಮಂತರು ಹಣದಿಂದ ಬೇರೊಬ್ಬ ಪುರುಷನನ್ನು ಖರೀದಿಸಿ ಕಳುಹಿಸುತ್ತಿದ್ದರು. ಆದರೆ ಈ ಬ್ರಾಹ್ಮಣನಲ್ಲಿ ಆರೀತಿ ಮಾಡಲು ಹಣವಿರಲಿಲ್ಲ.]

 

ಅನ್ಯತ್ರ ಯಾಮ ಇತಿ ಪೂರ್ವಮುದಾಹೃತಂ ಮೇ ನೈತತ್ ಪ್ರಿಯೇ ತವ ಮನೋಗತಮಾಸ ತೇನ ।

ಯಾಸ್ಯಾಮಿ ರಾಕ್ಷಸಮುಖಂ ಸ್ವಯಮೇವ ಮರ್ತ್ತುಂ ಭಾರ್ಯ್ಯೈನಮಾಹ ನ ಭವಾನಹಮತ್ರ ಯಾಮಿ ॥೧೯.೭೪॥

 

‘ಬೇರೆಕಡೆಗೆ ಹೋಗೋಣ ಎಂದು ನಾನು ಈ ಹಿಂದೆ ಹೇಳಿದ್ದೆ. ಆದರೆ ಆ ಮಾತನ್ನು ಪ್ರಿಯೇ, ನೀನು ಒಪ್ಪಲಿಲ್ಲ. ಅದರಿಂದ ನಾನೇ ರಾಕ್ಷಸನ ಮುಖಕ್ಕೆ ಆಹಾರವಾಗಿ ಹೋಗುತ್ತೇನೆ’ ಎನ್ನುತ್ತಾನೆ ಬ್ರಾಹ್ಮಣ. ಆಗ ಹೆಂಡತಿಯು ಬ್ರಾಹ್ಮಣನನ್ನು ಕುರಿತು: ‘ಬೇಡ, ನೀವು ಹೋಗುವುದು ಬೇಡ. ನಾನು ರಾಕ್ಷಸನ ಬಾಯಿಗೆ ಆಹಾರವಾಗಿ ಹೋಗುತ್ತೇನೆ’ ಎನ್ನುತ್ತಾಳೆ

 

ಅರ್ತ್ಥೇ ತವಾದ್ಯ ತನುಸನ್ತ್ಯಜನಾದಹಂ ಸ್ಯಾಂ ಲೋಕೇ ಸತೀಪ್ರಚರಿತೇ ತದೃತೇ ತ್ವಧಶ್ಚ ।

ಕನ್ಯಾssಹ ಚೈನಮಹಮೇವ ನ ಕನ್ಯಯಾsರ್ತ್ಥ ಇತ್ಯುಕ್ತ ಆಹ ಧಿಗಿತಿ ಸ್ಮ ಸ ವಿಪ್ರವರ್ಯ್ಯಃ  ॥ ೧೯.೭೫ ॥

 

‘ನಿನ್ನ ಪರವಾಗಿ ನಾನು ದೇಹವನ್ನು ಬಿಡುವುದರಿಂದ ಪತಿವ್ರತೆಯರಿಗೆ ಸಿಗುವ ಲೋಕವನ್ನು ಹೊಂದುತ್ತೇನೆ. ಅದಿಲ್ಲದೇ ಹೋದರೆ ಅಧೋಗತಿಯನ್ನು ಹೋಗುತ್ತೇನೆ’ ಎನ್ನುತ್ತಾಳೆ ಬ್ರಾಹ್ಮಣನ ಪತ್ನಿ. ಆಗ ಅವರ ಹಿರಿಯ ಮಗಳು ಹೇಳುತ್ತಾಳೆ: ‘ನಾನೇ ಹೋಗುತ್ತೇನೆ. ಹೆಣ್ಣಿನಿಂದ ಬೇರೆ ಪ್ರಯೋಜನವಿಲ್ಲಾ’ ಎಂದು. ಆ ಮಾತನ್ನು ಕೇಳಿದ  ಬ್ರಾಹ್ಮಣನು ‘ಧಿಕ್ಕಾರವಿರಲಿ’ ಎನ್ನುತ್ತಾನೆ.

 

ಕನ್ಯೋದಿತಾ ಬತ ಕುಲದ್ವಯತಾರಿಣೀತಿ ಜಾಯಾ ಸಖೇತಿ ವಚನಂ ಶ್ರುತಿಗಂ ಸುತಶ್ಚ ।

ಆತ್ಮೈವ ತೇನ ನತು ಜೀವನಹೇತುತೋsಹಂ ಧೀಪೂರ್ವಕಂ ನೃಶನಕೇ ಪ್ರತಿಪಾದಯಾಮಿ ॥೧೯.೭೬॥

 

‘ಹೆಣ್ಣು ಹುಟ್ಟಿದಕುಲ ಮತ್ತು ಹೋದಕುಲ ಎರಡಕ್ಕೂ ತಾರಕಳು ಎಂದು ವೇದವಾಣಿ ಹೇಳುತ್ತದೆ. ಹೆಂಡತಿ ಗೆಳತಿ ಎಂದು ವೇದದ ವಚನವಿದೆ. ಮಗನು ನನ್ನ ಸಮರ್ಥ ಪ್ರತಿನಿಧಿ. ಆಕಾರಣದಿಂದ ಕೇವಲ ಬದುಕುವ  ಆಸೆಯಿಂದ ಪ್ರಜ್ಞಾಪೂರ್ವಕವಾಗಿ ಮನುಷ್ಯರನ್ನು ತಿನ್ನುವ ರಾಕ್ಷಸರಲ್ಲಿ  ನಾನು ನಿಮ್ಮನ್ನು ಕಳುಹಿಸುವುದಿಲ್ಲ’ ಎಂದು ನೋವಿನಿಂದ ನುಡಿಯುತ್ತಾನೆ ಬ್ರಾಹ್ಮಣ.

 

ಏವಂ ರುದತ್ಸು ಸಹಿತೇಷು ಕುಮಾರಕೋsಸ್ಯ ಪ್ರಾಹ ಸ್ವಹಸ್ತಗತೃಣಂ ಪ್ರತಿದರ್ಶ್ಯ ಚೈಷಾಮ್ ।

ಏತೇನ ರಾಕ್ಷಸಮಹಂ ನಿಹನಿಷ್ಯ ಏವೇತ್ಯುಕ್ತೇ ಸುವಾಕ್ಯಮನು ಸಾ ಪ್ರವಿವೇಶ ಕುನ್ತೀ ॥೧೯.೭೭ ॥

 

ಈರೀತಿಯಾಗಿ ಎಲ್ಲರೂ ಅಳುತ್ತಿರಲು, ಬ್ರಾಹ್ಮಣನ ಪುಟ್ಟಮಗನು ತನ್ನ ಕೈಯಲ್ಲಿರುವ ಹುಲ್ಲನ್ನು ಇವರೆಲ್ಲರ ಮುಂದೆ ತೋರಿಸುತ್ತಾ, ‘ಇದರಿಂದ ನಾನು ಆ ರಾಕ್ಷಸನನ್ನು ಕೊಲ್ಲುತ್ತೇನೆ’ ಎಂದು ಒಳ್ಳೆಯ ಮಾತನ್ನು ಹೇಳಲು, (ಸ್ವಲ್ಪಮಟ್ಟಿಗೆ ಅಲ್ಲಿನ ವಾತಾವರಣ ತಿಳಿಗೊಳ್ಳಲು) ಕುಂತಿಯು ಪ್ರವೇಶಿಸಿದಳು.