ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 25, 2020

Mahabharata Tatparya Nirnaya Kannada 1983_1987

 

ಉಕ್ತ್ವೈವಮೇತ್ಯ ನಿಖಿಲಂ ಚ ಜಗಾದ ಭೀಮ ಉದ್ಧರ್ಶ ಆಸ ಸ ನಿಶಮ್ಯ ಮಹಾಸ್ವಧರ್ಮ್ಮಮ್ ।

ಪ್ರಾಪ್ತಂ ವಿಲೋಕ್ಯ ತಮತೀವ ವಿಘೂರ್ಣ್ಣನೇತ್ರಂ ದೃಷ್ಟ್ವಾ ಜಗಾದ ಯಮಸೂನುರುಪೇತ್ಯ ಚಾನ್ಯೈಃ ॥೧೯.೮೩॥

 

ಮಾತಃ ಕಿಮೇಷ ಮುದಿತೋsತಿತರಾಮಿತಿ ಸ್ಮ ತಸ್ಮೈ ಚ ಸಾ ನಿಖಿಲಮಾಹ ಸ ಚಾಬ್ರವೀತ್ ತಾಮ್ ।

ಕಷ್ಟಂ ತ್ವಯಾ ಕೃತಮಹೋ ಬಲಮೇವ ಯಸ್ಯ ಸರ್ವೇ ಶ್ರಿತಾ ವಯಮಮುಂ ಚ ನಿಹನ್ಸಿ ಭೀಮಮ್ ॥೧೯.೮೪॥

 

ಹಿಂತಿರುಗಿಬಂದ ಕುಂತಿಯಿಂದ ಎಲ್ಲವನ್ನೂ ಕೇಳಿ ತಿಳಿದ ಭೀಮಸೇನ ಬಹಳ ಸಂತೋಷಗೊಂಡ. (ಏಕೆಂದರೆ ದೈತ್ಯನಿಗ್ರಹ ಪರಮಾತ್ಮನಿಗೆ ಪ್ರೀತಿಕಾರಕ. ಅದರಿಂದ ಪರಮಾತ್ಮನ ಪೂಜೆಯಾಗುತ್ತದೆ). ಮಹತ್ತಾದ ಸ್ವಧರ್ಮಪಾಲನೆಯ ಅವಕಾಶ ತಾನಾಗಿಯೇ ಒದಗಿ ಬಂದುದರಿಂದ ಭೀಮ ಸಂತೋಷದಿಂದ ಅರಳಿದ ಕಣ್ಗಳುಳ್ಳವನಾದ. ಅದನ್ನು ಕಂಡ ಧರ್ಮರಾಜ ತಾಯಿಯನ್ನು ಕುರಿತು ಹೀಗೆ ಕೇಳುತ್ತಾನೆ: ‘ಓ ಮಾತೇ, ಈ ಭೀಮನು ಯಾವಕಾರಣಕ್ಕಾಗಿ ಅತ್ಯಂತ ಸಂತಸಗೊಂಡಿದ್ದಾನೆ’ ಎಂದು. ಆಗ ಅವಳು ಧರ್ಮರಾಜನಿಗೆ ಎಲ್ಲವನ್ನೂ ಹೇಳುತ್ತಾಳೆ. ಅವನಾದರೋ, ಅವಳನ್ನು ಕುರಿತು ಹೇಳುತ್ತಾನೆ: ‘ನೀನು ಬಹಳ ಅವಿವೇಕದ ಹೆಜ್ಜೆಯನ್ನಿಡುತ್ತಿರುವೆ. ಯಾರ ಬಲವನ್ನು ನಾವೆಲ್ಲಾರೂ ಆಶ್ರಯಿಸಿದ್ದೇವೋ, ಅಂತಹ ಈ ಭೀಮಸೇನನನ್ನು ನೀನೇ ಸಾವಿನತ್ತ ತಳ್ಳುತ್ತಿದ್ದೀಯ. 

 

ಯದ್ಬಾಹುವೀರ್ಯ್ಯಪರಮಾಶ್ರಯತೋ ಹಿ ರಾಜ್ಯಮಿಚ್ಛಾಮ ಏವ ನಿಖಿಲಾರಿವಧಂ ಸ್ವಧರ್ಮ್ಮಮ್ ।

ಸೋsಯಂ ತ್ವಯಾsದ್ಯ ನಿಶಿಚಾರಿಮುಖಾಯ ಮಾತಃ ಪ್ರಸ್ಥಾಪ್ಯತೇ ವದ ಮಮಾsಶು ಕಯೈವ ಬುದ್ಧ್ಯಾ॥೧೯.೮೫॥

 

ಯಾರ ತೋಳ್ಬಲದ ಪರಮಾಶ್ರಯದಿಂದ ಸ್ವಧರ್ಮಕ್ಕಾಗಿ ನಾವು ರಾಜ್ಯವನ್ನು ಬಯಸುತ್ತಿದ್ದೆವೋ, ನಮ್ಮ ಎಲ್ಲಾ ಶತ್ರುಗಳ ನಾಶವನ್ನು ಬಯಸುತ್ತಿದ್ದೆವೋ, ಅಂತಹ ಇವನು ನಿನ್ನಿಂದ ಈಗ ರಾಕ್ಷಸನ ಮುಖಕ್ಕಾಗಿ ಕಳುಹಿಸಲ್ಪಡುತ್ತಿದ್ದಾನೆ. ಎಲೈ ತಾಯಿಯೇ, ಯಾವ ಕಾರಣಕ್ಕಾಗಿ ಇಂತಹ ನಿರ್ಧಾರ ಎನ್ನುವುದನ್ನು ನನಗೆ ಹೇಳು’.

 

ಇತ್ಯುಕ್ತವನ್ತಮಮುಮಾಹ ಸುಧೀರಬುದ್ಧಿಃ ಕುನ್ತೀ ನ ಪುತ್ರಕ ನಿಹನ್ತುಮಯಂ ಹಿ ಶಕ್ಯಃ ।

ಸರ್ವೈಃ ಸುರೈರಸುರಯೋಗಿಭಿರಪ್ಯನೇನ ಚೂರ್ಣ್ಣೀಕೃತೋ ಹಿ ಶತಶೃಙ್ಗಗಿರಿಃ ಪ್ರಸೂತ್ಯಾಮ್ ॥೧೯.೮೬॥

 

ಈರೀತಿಯಾಗಿ ಹೇಳುತ್ತಿರುವ ಧರ್ಮರಾಜನನ್ನು ಕುರಿತು, ಧೈರ್ಯವಂತೆಯಾದ^ ಕುಂತಿಯು ಹೇಳುತ್ತಾಳೆ: ‘ಮಗನೇ, ದೇವತೆಗಳು, ದೈತ್ಯರು, ಎಲ್ಲರೂ ಒಟ್ಟಿಗೇ ಬಂದರೂ ಕೂಡಾ ಇವನು ಕೊಲ್ಲಲ್ಪಡಲು  ಯೋಗ್ಯನಲ್ಲ(ಅವರ್ಯಾರಿಂದಲೂ ಇವನನ್ನು ಕೊಲ್ಲಲು ಸಾಧ್ಯವಿಲ್ಲ). ಇವನಿಂದ ನನ್ನ ಬಾಣಂತನದ ಕಾಲದಲ್ಲೇ ಶತಶೃಂಗ ಪರ್ವತವು ಪುಡಿಪುಡಿಯಾಯಿತಷ್ಟೇ?

 [^ಕುಂತಿ ಮಹಾಧೈರ್ಯವಂತೆ. ಕುಂತಿಯ ಧೈರ್ಯ, ಗಾಂಧಾರಿಯ ಧರ್ಮಶೀಲತೆ, ವಿದುರನ ಪ್ರಜ್ಞೆ ಇದನ್ನೇ ತೋರಿಸಲು ವೇದವ್ಯಾಸರು ಮಹಾಭಾರತವನ್ನು ರಚಿಸಿದರು ಎನ್ನುವಮಾತನ್ನು ಮಹಾಭಾರತದ ಆದಿಪರ್ವದಲ್ಲಿ ಹೇಳಿರುವುದನ್ನು  ನಾವು ಕಾಣುತ್ತೇವೆ]

ಏಷ ಸ್ವಯಂ ಹಿ ಮರುದೇವ ನರಾತ್ಮಕೋsಭೂತ್ ಕೋ ನಾಮ ಹನ್ತುಮಿಮಮಾಪ್ತಬಲೋ  ಜಗತ್ಸು ।

ಇತ್ಯೇವಮಸ್ತ್ವಿತಿ ಸ ತಾಮವದತ್ ಪರೇದ್ಯುರ್ಭೀಮೋ ಜಗಾಮ ಶಕಟೇನ ಕೃತೋರುಭೋಗಃ ॥೧೯.೮೭॥

 

‘ಸಾಕ್ಷಾತ್ ಮುಖ್ಯಪ್ರಾಣನೇ ಆದ ಇವನು ಮನುಷ್ಯಾವತಾರದಲ್ಲಿದ್ದಾನೆ. ಇವನನ್ನು ಕೊಲ್ಲಲು ಜಗತ್ತಿನಲ್ಲಿ ಯಾರುತಾನೇ ಬಲವನ್ನು ಹೊಂದಿದ್ದಾರೆ?’ ಈರೀತಿಯಾಗಿ ಕುಂತಿ ನುಡಿದಾಗ ಧರ್ಮರಾಜನು ‘ಹಾಗಿದ್ದಲ್ಲಿ ಹಾಗೆಯೇ ಆಗಲಿ’ ಎಂದನು. ಮಾರನೆಯದಿನ  ಭೀಮನು ಚನ್ನಾಗಿರುವ ಭೋಗಸಾಮಗ್ರಿಗಳನ್ನು ಇಟ್ಟುಕೊಂಡು ಗಾಡಿಯೊಂದಿಗೆ ತೆರಳಿದನು.        

No comments:

Post a Comment