ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 22, 2020

Mahabharata Tatparya Nirnaya Kannada 1972_1977

 

ಜಾನೀಹಿ ವಿಪ್ರರುದಿತಂ ಕುತ ಇತ್ಯತಶ್ಚ ಯೋಗ್ಯಂ ವಿಧಾಸ್ಯ ಇತಿ ಸಾ ಪ್ರಯಯೌ ಚ ಶೀಘ್ರಮ್ ।

ಸಾ ಸಂವೃತೈವ ಸಕಲಂ ವಚನಂ ಗೃಹೇsಸ್ಯ ಶುಶ್ರಾವ ವಿಪ್ರವರ ಆಹ ತದಾ ಪ್ರಿಯಾಂ ಸಃ ॥೧೯.೭೨॥

 

‘ಬ್ರಾಹ್ಮಣ ಅಳುತ್ತಿರುವುದು ಏಕಾಗಿ ಎಂದು ತಿಳಿ, ಅದಕ್ಕೆ ಯೋಗ್ಯವಾದ ಪರಿಹಾರವನ್ನು ಮಾಡುತ್ತೇನೆ’ ಎಂದು ಭೀಮಸೇನನಿಂದ ಹೇಳಲ್ಪಟ್ಟ ಕುಂತಿಯು, ಶೀಘ್ರವಾಗಿ ತೆರಳಿದಳು. ಅವರ ಕಣ್ಣಿಗೆ ಕಾಣಿಸಿಕೊಳ್ಳದೇ, ಆ ಮನೆಯಲ್ಲಿ ನಡೆದ ಎಲ್ಲಾ ಮಾತುಗಳನ್ನೂ ಆಕೆ ಕೇಳಿಸಿಕೊಂಡಳು. ಆಗ ಬ್ರಾಹ್ಮಣನು ತನ್ನ ಹೆಂಡತಿಯನ್ನು ಕುರಿತು ಹೀಗೆ ಹೇಳುತ್ತಿದ್ದ:

 

ದಾತವ್ಯ ಏವ ಹಿ ಕರೋsದ್ಯ ಚ ರಕ್ಷಸೋsಸ್ಯ ಸಾಕ್ಷಾದ್ ಬಕಸ್ಯ ಗಿರಿಸನ್ನಿಭಭಕ್ಷ್ಯಭೋಜ್ಯಃ ।

ಪುಂಸಾsನಸಾ ಚ ಸಹಿತಾನಡುಹಾ ಪುಮಾಂಸ್ತು ನೈವಾಸ್ತಿ ನೋsಪ್ರದದತಾಂ ಚ ಸಮಸ್ತನಾಶಃ ॥೧೯.೭೩॥

 

ಈದಿನ ಭಕನೆಂಬ ರಾಕ್ಷಸನಿಗೆ ಒಂದು ಪರ್ವತದಷ್ಟು ಎತ್ತರ ಭಕ್ಷ್ಯವೂ, ಭೋಜ್ಯವೂ, ಅನ್ನವೂ ಇರುವ, ಎರಡು ಎತ್ತುಗಳುಳ್ಳ ಬಂಡಿ ಮತ್ತು ಪುರುಷನನ್ನು ಕರವಾಗಿ ಕೊಡಬೇಕಾಗಿದೆ. ದುಡ್ಡಿಲ್ಲದ ನಮ್ಮಲ್ಲಿ ಕೊಡಲು ಪುರುಷನಿಲ್ಲ. ನಾವು ಕೊಡದೇ ಹೋದರೆ ಎಲ್ಲವೂ ನಾಶವಾಗುತ್ತದೆ.

[ಹಣವುಳ್ಳ ಶ್ರೀಮಂತರು ಹಣದಿಂದ ಬೇರೊಬ್ಬ ಪುರುಷನನ್ನು ಖರೀದಿಸಿ ಕಳುಹಿಸುತ್ತಿದ್ದರು. ಆದರೆ ಈ ಬ್ರಾಹ್ಮಣನಲ್ಲಿ ಆರೀತಿ ಮಾಡಲು ಹಣವಿರಲಿಲ್ಲ.]

 

ಅನ್ಯತ್ರ ಯಾಮ ಇತಿ ಪೂರ್ವಮುದಾಹೃತಂ ಮೇ ನೈತತ್ ಪ್ರಿಯೇ ತವ ಮನೋಗತಮಾಸ ತೇನ ।

ಯಾಸ್ಯಾಮಿ ರಾಕ್ಷಸಮುಖಂ ಸ್ವಯಮೇವ ಮರ್ತ್ತುಂ ಭಾರ್ಯ್ಯೈನಮಾಹ ನ ಭವಾನಹಮತ್ರ ಯಾಮಿ ॥೧೯.೭೪॥

 

‘ಬೇರೆಕಡೆಗೆ ಹೋಗೋಣ ಎಂದು ನಾನು ಈ ಹಿಂದೆ ಹೇಳಿದ್ದೆ. ಆದರೆ ಆ ಮಾತನ್ನು ಪ್ರಿಯೇ, ನೀನು ಒಪ್ಪಲಿಲ್ಲ. ಅದರಿಂದ ನಾನೇ ರಾಕ್ಷಸನ ಮುಖಕ್ಕೆ ಆಹಾರವಾಗಿ ಹೋಗುತ್ತೇನೆ’ ಎನ್ನುತ್ತಾನೆ ಬ್ರಾಹ್ಮಣ. ಆಗ ಹೆಂಡತಿಯು ಬ್ರಾಹ್ಮಣನನ್ನು ಕುರಿತು: ‘ಬೇಡ, ನೀವು ಹೋಗುವುದು ಬೇಡ. ನಾನು ರಾಕ್ಷಸನ ಬಾಯಿಗೆ ಆಹಾರವಾಗಿ ಹೋಗುತ್ತೇನೆ’ ಎನ್ನುತ್ತಾಳೆ

 

ಅರ್ತ್ಥೇ ತವಾದ್ಯ ತನುಸನ್ತ್ಯಜನಾದಹಂ ಸ್ಯಾಂ ಲೋಕೇ ಸತೀಪ್ರಚರಿತೇ ತದೃತೇ ತ್ವಧಶ್ಚ ।

ಕನ್ಯಾssಹ ಚೈನಮಹಮೇವ ನ ಕನ್ಯಯಾsರ್ತ್ಥ ಇತ್ಯುಕ್ತ ಆಹ ಧಿಗಿತಿ ಸ್ಮ ಸ ವಿಪ್ರವರ್ಯ್ಯಃ  ॥ ೧೯.೭೫ ॥

 

‘ನಿನ್ನ ಪರವಾಗಿ ನಾನು ದೇಹವನ್ನು ಬಿಡುವುದರಿಂದ ಪತಿವ್ರತೆಯರಿಗೆ ಸಿಗುವ ಲೋಕವನ್ನು ಹೊಂದುತ್ತೇನೆ. ಅದಿಲ್ಲದೇ ಹೋದರೆ ಅಧೋಗತಿಯನ್ನು ಹೋಗುತ್ತೇನೆ’ ಎನ್ನುತ್ತಾಳೆ ಬ್ರಾಹ್ಮಣನ ಪತ್ನಿ. ಆಗ ಅವರ ಹಿರಿಯ ಮಗಳು ಹೇಳುತ್ತಾಳೆ: ‘ನಾನೇ ಹೋಗುತ್ತೇನೆ. ಹೆಣ್ಣಿನಿಂದ ಬೇರೆ ಪ್ರಯೋಜನವಿಲ್ಲಾ’ ಎಂದು. ಆ ಮಾತನ್ನು ಕೇಳಿದ  ಬ್ರಾಹ್ಮಣನು ‘ಧಿಕ್ಕಾರವಿರಲಿ’ ಎನ್ನುತ್ತಾನೆ.

 

ಕನ್ಯೋದಿತಾ ಬತ ಕುಲದ್ವಯತಾರಿಣೀತಿ ಜಾಯಾ ಸಖೇತಿ ವಚನಂ ಶ್ರುತಿಗಂ ಸುತಶ್ಚ ।

ಆತ್ಮೈವ ತೇನ ನತು ಜೀವನಹೇತುತೋsಹಂ ಧೀಪೂರ್ವಕಂ ನೃಶನಕೇ ಪ್ರತಿಪಾದಯಾಮಿ ॥೧೯.೭೬॥

 

‘ಹೆಣ್ಣು ಹುಟ್ಟಿದಕುಲ ಮತ್ತು ಹೋದಕುಲ ಎರಡಕ್ಕೂ ತಾರಕಳು ಎಂದು ವೇದವಾಣಿ ಹೇಳುತ್ತದೆ. ಹೆಂಡತಿ ಗೆಳತಿ ಎಂದು ವೇದದ ವಚನವಿದೆ. ಮಗನು ನನ್ನ ಸಮರ್ಥ ಪ್ರತಿನಿಧಿ. ಆಕಾರಣದಿಂದ ಕೇವಲ ಬದುಕುವ  ಆಸೆಯಿಂದ ಪ್ರಜ್ಞಾಪೂರ್ವಕವಾಗಿ ಮನುಷ್ಯರನ್ನು ತಿನ್ನುವ ರಾಕ್ಷಸರಲ್ಲಿ  ನಾನು ನಿಮ್ಮನ್ನು ಕಳುಹಿಸುವುದಿಲ್ಲ’ ಎಂದು ನೋವಿನಿಂದ ನುಡಿಯುತ್ತಾನೆ ಬ್ರಾಹ್ಮಣ.

 

ಏವಂ ರುದತ್ಸು ಸಹಿತೇಷು ಕುಮಾರಕೋsಸ್ಯ ಪ್ರಾಹ ಸ್ವಹಸ್ತಗತೃಣಂ ಪ್ರತಿದರ್ಶ್ಯ ಚೈಷಾಮ್ ।

ಏತೇನ ರಾಕ್ಷಸಮಹಂ ನಿಹನಿಷ್ಯ ಏವೇತ್ಯುಕ್ತೇ ಸುವಾಕ್ಯಮನು ಸಾ ಪ್ರವಿವೇಶ ಕುನ್ತೀ ॥೧೯.೭೭ ॥

 

ಈರೀತಿಯಾಗಿ ಎಲ್ಲರೂ ಅಳುತ್ತಿರಲು, ಬ್ರಾಹ್ಮಣನ ಪುಟ್ಟಮಗನು ತನ್ನ ಕೈಯಲ್ಲಿರುವ ಹುಲ್ಲನ್ನು ಇವರೆಲ್ಲರ ಮುಂದೆ ತೋರಿಸುತ್ತಾ, ‘ಇದರಿಂದ ನಾನು ಆ ರಾಕ್ಷಸನನ್ನು ಕೊಲ್ಲುತ್ತೇನೆ’ ಎಂದು ಒಳ್ಳೆಯ ಮಾತನ್ನು ಹೇಳಲು, (ಸ್ವಲ್ಪಮಟ್ಟಿಗೆ ಅಲ್ಲಿನ ವಾತಾವರಣ ತಿಳಿಗೊಳ್ಳಲು) ಕುಂತಿಯು ಪ್ರವೇಶಿಸಿದಳು.

No comments:

Post a Comment