ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 17, 2020

Mahabharata Tatparya Nirnaya Kannada 19196_19200

 ಸರ್ವೇಷು ತೇಷು ವಿಜಿತೇಷ್ವಭಿಜಗ್ಮಿವಾನ್ ಸ ಯೋದ್ಧುಂ ಬೃಹದ್ರಥಸುತೋsಪ್ಯಮುನಾ ರಥೇನ ।

ತಂ ಚೈವ ರಾಮವರತೋ ವಿರಥಂ ವಿಶಸ್ತ್ರಂ ಚಕ್ರೇ ಸ ಚೈನಮಥ ಮುಷ್ಟಿಭಿರಭ್ಯುಪೇತೌ ॥೧೯.೧೯೬॥

 

ಆ ಎಲ್ಲಾ ರಾಜರೂ ಸೋಲಲು, ಜರಾಸಂಧ ಸ್ವಯಂ ಕರ್ಣನೊಂದಿಗೆ ಯುದ್ಧಮಾಡಲು ಬಂದ. ಆಗ ಪರಶುರಾಮನ ವರದಿಂದ ಕರ್ಣ ಜರಾಸಂಧನನ್ನು ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದರೆ, ಬ್ರಹ್ಮನ ವರಬಲವನ್ನು ಹೊಂದಿರುವ ಜರಾಸಂಧ ಕರ್ಣನನ್ನು ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದ. ಹೀಗೆ ಪರಸ್ಪರ ರಥ-ಆಯುಧಹೀನರಾದ ಅವರು, ಮುಷ್ಟಿಯುದ್ಧಕ್ಕಿಳಿದರು.

 

ಸನ್ಧೌ ಯದೈವ ಜರಯಾ ಪ್ರತಿಸನ್ಧಿತಸ್ಯ ಕರ್ಣ್ಣೋ ಜಘಾನ ನ ಪರತ್ರ ತುತೋಷ ರಾಜಾ ।

ನ ಜ್ಞಾತಮೇತದಪಿ ಹೋ ಹಲಿನಾ ತದೇತಜ್ಜ್ಞಾತಂ ತ್ವಯಾ ಭವ ತತೋ ಮಮ ಭೃತ್ಯ ಏವ ॥೧೯.೧೯೭॥

 

ಯಾವಾಗ ಜರಾ ಎಂಬ ರಾಕ್ಷಸಿಯಿಂದ ಜೋಡಿಸಿದ ಜರಾಸಂಧನ ದೇಹದ ಭಾಗಕ್ಕೆ ಕರ್ಣನು ಹೊಡೆದನೋ, ಆಗ ಜರಾಸಂಧನಿಗೆ ಸಂತೋಷವಾಯಿತು. ಕರ್ಣನ ಅಥವಾ ದುರ್ಯೋಧನನ ಇನ್ನಾವುದೇ ಕೆಲಸದಿಂದ ಆತ ಸಂತೋಷಪಟ್ಟಿರಲಿಲ್ಲ. “ಬಲರಾಮನಿಂದಲೂ ಕೂಡಾ ಇದು ತಿಳಿಯಲ್ಪಡಲಿಲ್ಲ.  ಅದನ್ನು ನೀನು ತಿಳಿದಿದ್ದೀಯ. ಆಕಾರಣದಿಂದ ನೀನು ನನ್ನ ದಾಸನಾಗು” ಎನ್ನುತ್ತಾನೆ ಜರಾಸಂಧ.

[ಗುಣಗ್ರಾಹಿ ಜರಾಸಂಧನ ಮರ್ಮಸ್ಥಾನಕ್ಕೆ ಕರ್ಣ ಆಕಸ್ಮಿಕವಾಗಿ(Fluke) ಹೊಡೆದಿದ್ದರೂ ಕೂಡಾ, ಅದಕ್ಕೆ ಅವನು ಖುಷಿಪಟ್ಟ. ಇಲ್ಲಿ ಕರ್ಣ ಗೆದ್ದಿರುವುದು ಆಕಸ್ಮಿಕವಾಗಿ. ಆದ್ದರಿಂದ ಜರಾಸಂಧ ಅವನಿಗೆ ತನ್ನ ದಾಸನಾಗುವಂತೆ ಹೇಳುತ್ತಾನೆ].

 

ಏವಂವಿಧಂ ಸುಕುಶಲಂ ಬಹುಯುದ್ಧಶೌಣ್ಡಂ ನ ತ್ವಾಂ ಹನಿಷ್ಯ ಉತ ತೇ ಪಿತುರೇವ ಪೂರ್ವಮ್ ।

ಬಾಹ್ವೋರ್ಬಲಾದಭಿಹೃತಂ ಹಿ ಮಯಾsಙ್ಗರಾಜ್ಯಂ ತತ್ ತ್ವಂ ಗೃಹಾಣ ಯುಧಿ ಕರ್ಮ್ಮಕರಶ್ಚ ಮೇ ಸ್ಯಾಃ ॥೧೯.೧೯೮॥

 

ಇತ್ಯುಕ್ತ ಆಶು ಸ ತಥೈವ ಚಕಾರ ಕರ್ಣ್ಣಃ ಪೂರ್ವಂ ಹಿ ತಸ್ಯ ನಿಜರಾಜ್ಯಪದೈಕದೇಶಃ ।

ದುರ್ಯ್ಯೋಧನೇನ ವಿಹಿತೋ ಮಗಧಾಧಿರಾಜಂ ಜಿತ್ವಾ ವೃಕೋದರಹೃತಃ ಪಿತುರೇವ ದತ್ತಃ ॥೧೯.೧೯೯॥

 

‘ಈಪ್ರಕಾರವಾಗಿ  ಕೌಶಲ್ಯವುಳ್ಳ, ಬಹಳತರಹದ ಯುದ್ಧಗಳಲ್ಲಿ ಚತುರನಾದ ನಿನ್ನನ್ನು ನಾನು ಕೊಲ್ಲಬಯಸುವುದಿಲ್ಲ. (ನಿನ್ನಂತಹ ಒಳ್ಳೇ ವೀರನನ್ನು ಕಳೆದುಕೊಳ್ಳಬೇಕು ಎಂದು ನನಗನಿಸುತ್ತಿಲ್ಲ). ಅಷ್ಟೇ ಅಲ್ಲದೇ, ನಿನ್ನ ತಂದೆಯಿಂದ(ಅಧಿರಥನಿಂದ) ಹಿಂದೆ ಬಾಹುಬಲದಿಂದ ಕಸಿಯಲ್ಪಟ್ಟ ಅಂಗರಾಜ್ಯವನ್ನು  ಈಗ ನೀನು ತೆಗೆದುಕೋ ಮತ್ತು ಯುದ್ಧದಲ್ಲಿ ನೀನು ನನ್ನ ಪರ ಕೆಲಸಮಾಡಬೇಕು’  ಎನ್ನುತ್ತಾನೆ ಜರಾಸಂಧ.

ಈರೀತಿಯಾಗಿ ಹೇಳಲ್ಪಟ್ಟ ಕರ್ಣನು ಕೂಡಲೇ ‘ಆಯಿತು’ ಎಂದು ಹೇಳಿದನು. ಮೊದಲು ಈರಾಜ್ಯದ ಒಂದು ಭಾಗ  ದುರ್ಯೋಧನನಿಂದ ಕೊಡಲ್ಪಟ್ಟಿತ್ತು. ಅದು ಜರಾಸಂಧನನ್ನು ಸೋಲಿಸಿ ವೃಕೋದರನಿಂದ ತೆಗೆದುಕೊಳ್ಳಲ್ಪಟ್ಟ ಭಾಗವಾಗಿತ್ತು. ಆಗ  ಭೀಮ ಅದನ್ನು ಧೃತರಾಷ್ಟ್ರನಿಗೆ ಕೊಟ್ಟಿದ್ದ.    

 

[ಹಿಂದೆ ಜರಾಸಂಧನನ್ನು ಗೆದ್ದು ಅಂಗರಾಜ್ಯವನ್ನು ಭೀಮ ವಶಪಡಿಸಿಕೊಂಡು ಧೃತರಾಷ್ಟ್ರನಿಗೆ ಕೊಟ್ಟಿದ್ದ.  ಧೃತರಾಷ್ಟ್ರ ಅದನ್ನೇ ದುರ್ಯೋಧನನ ಮೂಲಕ ಕರ್ಣನಿಗೆ ಕೊಟ್ಟ. ಕರ್ಣ ತನಗೆ ಲಭಿಸಿದ ಅಂಗರಾಜ್ಯವನ್ನು ಉಪೇಕ್ಷೆ ಮಾಡಿ ಅಲ್ಲಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಅವನ ತಂದೆಯೇ ಅಲ್ಲಿನ ರಾಜ್ಯಭಾರ ನೋಡಿಕೊಳ್ಳುತ್ತಿದ್ದ. ಆಗ ಅಧಿರಥನಿಂದ ಮತ್ತೆ ಜರಾಸಂಧ ಅಂಗರಾಜ್ಯವನ್ನು ಅಪಹರಿಸಿದ. ಅದನ್ನೇ ಈಗ ಜರಾಸಂಧ  ಕರ್ಣನಿಗೆ ಹಿಂತಿರುಗಿಸಿದ ಮತ್ತು ‘ಯುದ್ಧದಲ್ಲಿ ನೀನು ನನ್ನ ಪರ ಕೆಲಸಮಾಡಬೇಕು’  ಎಂದು ಹೇಳಿದ. ಈರೀತಿ ಪಾಂಡವ ವಿರೋಧಿಯಾದ, ಶೂರನಾದ ಕರ್ಣನನ್ನು  ರಾಜಕೀಯ ಚತುರನಾದ ಜರಾಸಂಧ ತನ್ನ ಭೃತ್ಯನನ್ನಾಗಿ ಮಾಡಿಕೊಂಡ].  

 

ಅಙ್ಗಾಧಿರಾಜ್ಯಮುಪಲಭ್ಯ ಜರಾಸುತಸ್ಯ ಸ್ನೇಹಂ ಚ ಸೂರ್ಯ್ಯಸುತ ಆಶು ಕುರೂನ್ ಜಗಾಮ ।

ದೃಷ್ಟ್ವೈವ ತಂ ಮುಮುದಿರೇ ಧೃತರಾಷ್ಟ್ರಪುತ್ರಾ ನಾನೇನ ತುಲ್ಯಮಧಿಜಗ್ಮುರತೋ ಹರಿಂ ಚ ॥೧೯.೨೦೦॥

 

ಅಙ್ಗರಾಜ್ಯವನ್ನು ಪಡೆದು, ಜರಾಸಂಧನ ಸ್ನೇಹವನ್ನೂ ಪಡೆದ  ಸೂರ್ಯಸುತ ಕರ್ಣನು ಕೂಡಲೇ ಕುರುಪಟ್ಟಣಕ್ಕೆ ತೆರಳಿದನು. ದುರ್ಯೋಧನಾದಿಗಳು ಅವನನ್ನು ಕಂಡು ಸಂತೋಷಪಟ್ಟರು. ‘ಇವನು ಕೃಷ್ಣನಿಗಿಂತ ಮಿಗಿಲು’ ಎಂದುಕೊಂಡರು.

Thursday, October 15, 2020

Mahabharata Tatparya Nirnaya Kannada 19188_19195

 

ವಾಸಿಷ್ಠಯಾದವವೃಷಾವಪಿ ಕೇಶವೌ ತೌ ತತ್ರೋಷತುಃ ಪರಮಸೌಹೃದತೋ ಹಿ ತೇಷು ।

ತಾಭ್ಯಾಮನನ್ತಗುಣಪೂರ್ಣ್ಣಸುಖಾತ್ಮಕಾಭ್ಯಾಂ ಪಾರ್ತ್ಥಾಶ್ಚ ತೇ ಮುಮುದಿರೇ ಯುತಸತ್ಕಥಾಭಿಃ ॥೧೯.೧೮೮॥

 

ವೇದವ್ಯಾಸ ಮತ್ತು ಯಾದವಶ್ರೇಷ್ಠ (ಎರಡು ರೂಪದಲ್ಲಿರುವ) ಕೇಶವರು ಪಾಂಡವರಲ್ಲಿ ಅತ್ಯಂತ ಪ್ರೀತಿಯಿಂದ ಕೂಡಿ, ಹಸ್ತಿನಾವತಿಯಲ್ಲಿಯೇ ವಾಸಮಾಡಿದರು. ಅನಂತಗುಣಪೂರ್ಣ ಹಾಗೂ ಸುಖವೇ ಮೈವೆತ್ತು ಬಂದ ಅವರಿಂದ ಕೂಡಿಕೊಂಡು, ಅವರು ಹೇಳಿದ ಶಾಸ್ತ್ರೋಪದೇಶವನ್ನು ಕೇಳುತ್ತಾ, ಪಾಂಡವರು ಸಂತೋಷಪಟ್ಟರು. (ಭಗವಂತ ಎರಡು ರೂಪದೊಂದಿಗೆ ಜೊತೆಗಿರುವುದು ಅತ್ಯಂತ ದುರ್ಲಭವಾದ, ಯಾರಿಗೂ ಸಿಗದ ಸುಖ. ಅಂತಹ ಸುಖ ಪಾಂಡವರಿಗೆ ದೊರೆಯಿತು). 

 

ಪೂರ್ವಂ ಹಿ ತೇಷು ವನಗೇಷು ಬಭೂವ ಕಾಶಿರಾಜ್ಞಃ ಸುತಾಕೃತ ಉರುಕ್ಷಿತಿಪಾಲಯೋಗಃ ।

ತತ್ರ ಸ್ವಯಮ್ಬರಗತಾಂ ಧೃತರಾಷ್ಟ್ರಪುತ್ರಃ ಕನ್ಯಾಂ ಬಲಾಜ್ಜಗೃಹ ಆತ್ಮಬಲಾತಿದೃಪ್ತಃ ॥೧೯.೧೮೯॥

 

ಹಿಂದೆ ಪಾಂಡವರು ಕಾಡಿನಲ್ಲಿರುತ್ತಿರಲು, ಕಾಶಿರಾಜನ ಮಗಳ ಸ್ವಯಮ್ಬರಕ್ಕಾಗಿ ಬಹಳ ಜನ ರಾಜರ ಸೇರುವಿಕೆಯಾಯಿತು. ಆದರೆ ಅಲ್ಲಿ ಆ ಕನ್ಯೆಯನ್ನು  ಧೃತರಾಷ್ಟ್ರನ ಮಗ ದುರ್ಯೋಧನನು ತನ್ನ ಬಲದ ಅಹಂಕಾರದಿಂದ  ಬಲಾತ್ಕಾರವಾಗಿ ಅಪಹರಿಸಿದನು.

[ಈ ಘಟನೆ ನಡೆದದ್ದು ಯಾವಾಗ ಎನ್ನುವುದನ್ನು ಮಹಾಭಾರತದಲ್ಲೇ  ತಿಳಿಯಬಹುದು. ‘ಏತದ್ ವೈ ಶಾಲಿಹೋತ್ರಸ್ಯ  ತಪಸಾ ನಿರ್ಮಿತಂ  ಸರಃ । ರಮಣೀಯಮಿದಂ ತೋಯಂ ಕ್ಷುತ್ಪಿಪಾಸಾಶ್ರಮಾಪಹಮ್ । ಕಾರ್ಯಾರ್ಥಿನಸ್ತು  ಷಣ್ಮಾಸಾನ್ ವಿಹರಧ್ವಂ ಯಥಾಸುಖಮ್’ (ಆದಿಪರ್ವ ೧೬೮.೪೦). ಹಿಡಿಮ್ಬವಧೆಯ  ನಂತರ ವೇದವ್ಯಾಸರು ಕಾಡಿನಲ್ಲಿದ್ದ ಸುಂದರವಾದ ಸರೋವರವೊಂದನ್ನು ತೋರಿಸಿ,  ‘ಇದು ಶಾಲಿಹೋತ್ರನಿಂದ ನಿರ್ಮಿಸಲ್ಪಟ್ಟ ಸರೋವರ. ಇಲ್ಲಿ ಆರು ತಿಂಗಳುಗಳ ಕಾಲ ವಾಸಮಾಡಿ ಎಂದು ಪಾಂಡವರಿಗೆ ಸೂಚಿಸಿದ್ದರು. ಅದರಂತೆ ಇವರು ಅಲ್ಲೇ ಇದ್ದರು. ಇದೇ ಕಾಲದಲ್ಲಿ  ಕಾಶೀರಾಜನ ಪುತ್ರಿಯ ಸ್ವಯಮ್ಬರ ನಡೆಯಿತು].     

 

ಪೂರ್ವಂ ಹಿ ರಾಜಗಣನೇ ಮಗಧಾಧಿರಾಜಃ ಸಙ್ಖ್ಯಾತ ಇತ್ಯತಿರುಷಾ ಪ್ರಗೃಹೀತಕನ್ಯೇ ।

ದುರ್ಯ್ಯೋಧನೇ ನೃಪತಯೋ ಯುಯುಧುಃ ಸ್ಮ ತೇನ ಭಗ್ನಾಶ್ಚ ಕರ್ಣ್ಣಸಹಿತೇನ ಸಹಾನುಜೇನ॥೧೯.೧೯೦॥

 

ಸ್ವಯಮ್ಬರಕ್ಕೂ ಮೊದಲು ರಾಜರನ್ನು ಗಣನೆ ಮಾಡುವಾಗ ಜರಾಸಂಧನು ಮೊದಲನೆಯವನಾಗಿ  ಪರಿಗಣಿಸಲ್ಪಟ್ಟಿದ್ದನು. ಈ ಕಾರಣದಿಂದ ಅತ್ಯಂತ ಕೋಪಗೊಂಡ ದುರ್ಯೋಧನನಿಂದ ಕನ್ಯೆಯು ಅಪಹರಿಸಲ್ಪಡುತ್ತಿರಲು, ರಾಜರೆಲ್ಲರೂ ಕೂಡಿಕೊಂಡು ಯುದ್ಧಮಾಡಿದರು. ಆದರೆ ಕರ್ಣ ಹಾಗೂ ಅನುಜರಿಂದ ಕೂಡಿದ ದುರ್ಯೋಧನರಿಂದ ಅವರೆಲ್ಲರೂ ಸೋತರೂ ಕೂಡಾ.   

 

ಭಗ್ನೇಷು ತೇಷು ಪುನರಾತ್ತಶರಾಸನೇಷು ಕರ್ಣ್ಣೋ ಜಗಾದ ಧೃತರಾಷ್ಟ್ರಸುತಂ ಪ್ರಯಾಹಿ ।

ಯುಕ್ತಃ ಸಹೋದರಜನೈರ್ಗ್ಗರುಭೀಷ್ಮಮುಖ್ಯಯುಕ್ತಸ್ಯ ತೇ ನ ಪುರಮೇತ್ಯ ಹಿ ಧರ್ಷಣೇಶಾಃ॥೧೯.೧೯೧॥

 

ಮೊದಲು ಸೋತರೂ, ಅವರೆಲ್ಲರೂ ಮತ್ತೆ ಬಿಲ್ಲನ್ನು ಕೈಗೆತ್ತಿಕೊಳ್ಳುತ್ತಿರಲು, ಕರ್ಣನು ದುರ್ಯೋಧನನನ್ನು  ಕುರಿತು ಹೀಗೆ ಹೇಳಿದ: ‘ಮೊದಲು ನೀನು ನಿನ್ನೆಲ್ಲಾ ಸಹೋದರರಿಂದ ಕೂಡಿಕೊಂಡು ಇಲ್ಲಿಂದ ಓಡಿಹೋಗು. ದ್ರೋಣಾಚಾರ್ಯರು, ಭೀಷ್ಮಾಚಾರ್ಯರು ಮೊದಲಾದವರಿಂದ ಕೂಡಿರುವ ನಿನ್ನನ್ನು ಹಸ್ತಿನಾವತಿಗೆ ಬಂದು ಸೋಲಿಸಲು ಸಾಧ್ಯವಿಲ್ಲ.

 

ಏಕಾನ್ತತೋ ಜಯಮವೀಕ್ಷ್ಯ ಚ ನಾನುಯಾತಿ ಬಾರ್ಹದ್ರಥಃ ಪುರಗತಸ್ಯ ಜಯೇ ನ ನಿಷ್ಠಾ ।

ದ್ರೌಣಿಂ ಚ ರುದ್ರತನುಮೇಷ ಸದಾ ವಿಜಾನನ್ ನೋ ತೇನ ಯುದ್ಧಮಭಿವಾಞ್ಛತಿ ರುದ್ರಭಕ್ತಃ॥೧೯.೧೯೨॥

 

ಬೃಹದ್ರತನ ಮಗನಾದ  ಜರಾಸಂಧ ಗೆಲುವನ್ನು ಕಾಣದೇ (ಖಂಡಿತ ಗೆದ್ದೇ ಗೆಲ್ಲುತ್ತೇನೆ ಎನ್ನುವ ಖಾತರಿ ಇಲ್ಲದೇ) ನಿನ್ನನ್ನು ಹಿಂಬಾಲಿಸುವುದಿಲ್ಲ. ಪುರಗತನಾದ ನಿನ್ನ ಮೇಲೆ ಜಯದ ನಿಶ್ಚಯ ಅವನಿಗಿರುವುದಿಲ್ಲ. ಅಷ್ಟೇ ಅಲ್ಲದೇ, ಅಶ್ವತ್ಥಾಮಾಚಾರ್ಯರನ್ನು  ರುದ್ರಾವತಾರ ಎಂದು ಯಾವಾಗಲೂ ತಿಳಿದವನಾದ, ಸ್ವಯಂ  ರುದ್ರಭಕ್ತನಾದ  ಜರಾಸಂಧ ಅವನೊಂದಿಗೆ ಯುದ್ಧವನ್ನು ಬಯಸುವುದಿಲ್ಲ.

 

ಏಕೋsಹಮೇವ ನೃಪತೀನ್ ಪ್ರತಿಯೋಧಯಿಷ್ಯ ಏತೈರ್ಮ್ಮಯಿ ಪ್ರತಿಜಿತೇsಪಿ ನ ತೇsಸ್ತ್ಯಕೀರ್ತ್ತಿಃ  

ಏಕಂ ಚ ತೇsನುಜಮಿಮೇ ಯದಿ ಪೌರುಷೇಣ ಗೃಹ್ಣೀಯುರತ್ರ ತವ ಕೀರ್ತ್ತಿರುಪೈತಿ ನಾಶಮ್॥೧೯.೧೯೩॥

 

ನಾನೊಬ್ಬನೇ ಈಎಲ್ಲಾ ರಾಜರನ್ನೂ ಎದುರಿಸುತ್ತೇನೆ. ಇವರಿಂದ ನಾನು ಸೋತರೂ ಕೂಡಾ ನಿನಗೆ ಕೀರ್ತಿನಾಶವಿಲ್ಲ(ಏಕೆಂದರೆ ದುರ್ಯೋಧನನ ಭೃತ್ಯ ಸೋತ ಎಂದಾಗುತ್ತದೆಯೇ ಹೊರತು ದುರ್ಯೋಧನ ಸೋತ ಎಂದಾಗುವುದಿಲ್ಲ). ಒಂದುವೇಳೆ ಅವರು ಪರಾಕ್ರಮದಿಂದ ನಿನ್ನ ಒಬ್ಬ ತಮ್ಮನನ್ನು ಹಿಡಿದರೂ ಕೂಡಾ, ಆಗ ನಿನ್ನ ಕೀರ್ತಿಯು ನಾಶವಾಗುತ್ತದೆ.

[ಮಹಾಭಾರತದ ಶಾಂತಿಪರ್ವದ ೩ನೆಯ ಅಧ್ಯಾಯದಲ್ಲಿ ಪ್ರಾಸಂಗಿಕವಾಗಿ ಕರ್ಣನ ಗುಣಗಳನ್ನು ಹೇಳುವಾಗ ಈ ವಿಷಯವನ್ನೂ ಅಲ್ಲಿ ಹೇಳುವುದನ್ನು ನಾವು ಕಾಣಬಹುದು].

 

ಭೀಷ್ಮಾದಯೋsಪಿ ನಹಿ ಯೋಧಯಿತುಂ ಸಮರ್ತ್ಥಾ ರಾಜ್ಞಾ ಹ್ಯನೇನ ತತ ಏವ ಹಿ ಬಾಹ್ಲಿಕೋsಸ್ಯ ।

ಭೃತ್ಯೋ ಬಭೂವ ನತು ಭೀಷ್ಮಮಯಂ ಯುಧೇsಗಾದ್ ರಾಜಾ ನಹೀತಿ ನಚ ತೇನ ವಿರೋಧ ಆಸೀತ್ ॥೧೯.೧೯೪॥

 

ಭೀಷ್ಮಾದಿಗಳೂ ಕೂಡಾ ಈ ಜರಾಸಂಧನೊಂದಿಗೆ ಕಾದಲು ಸಮರ್ಥರಲ್ಲ. ಆ ಕಾರಣದಿಂದಲೇ(ಜರಾಸಂಧನೊಂದಿಗೆ ಕಾದಲು ಸಮರ್ಥನಲ್ಲದ ಕಾರಣದಿಂದಲೇ) ಬಾಹ್ಲೀಕರಾಜನು ಈ ಜರಾಸಂಧನಿಗೆ ಯುದ್ಧದಲ್ಲಿ ಸಹಾಯಕನಾದ. ಭೀಷ್ಮಾಚಾರ್ಯರು ಸ್ವಯಂ ರಾಜನಲ್ಲದ  ಕಾರಣದಿಂದ ಜರಾಸಂಧ ಅವರೊಂದಿಗೆ ಯುದ್ಧಕ್ಕಾಗಿ ತೆರಳಿಲ್ಲ. ಹೀಗಾಗಿ ಅವರಲ್ಲಿ ಅವನಿಗೆ ವಿರೋಧವಿರಲಿಲ್ಲ’.

[ಹೀಗಾಗಿ ಭೀಷ್ಮಾಚಾರ್ಯರು ಜರಾಸಂಧನಿಗೆ ಯುದ್ಧದಲ್ಲಿ ಸಹಾಯಮಾಡುವ ಕರ್ಮಕ್ಕೆ ಒಳಗಾಗಿರಲಿಲ್ಲ. ಆದರೆ ಬಾಹ್ಲೀಕ, ಶಲ್ಯ, ದ್ರುಪದ ಇವರೆಲ್ಲರೂ ಆ ಕೆಲಸವನ್ನು ಮಾಡಿದ್ದರು. ಯಾವಾಗ ಭೀಮಾರ್ಜುನರು ಪ್ರಬಲರಾದರೋ, ಆಗ ಈ ಎಲ್ಲಾ ಸಾತ್ವಿಕ ರಾಜರು ಜರಾಸಂಧನನ್ನು ಬಿಟ್ಟು ಭೀಮಾರ್ಜುನರನ್ನು ಆಶ್ರಯಿಸಿದರು].  

 

ಇತ್ಯುಕ್ತ ಆಶು ಸ ವಿಮೃಶ್ಯ ಯಯೌ ಪುರಂ ಸ್ವಂ ಕರ್ಣ್ಣೋsಪಿ ತೈಃ ಪ್ರತಿಯುಯೋಧ ಜಿಗಾಯ ಚೈನಾನ್ ।

ಕರ್ಣ್ಣಸ್ಯ ವೀರ್ಯ್ಯಮಗಣಯ್ಯ ಜರಾಸುತೋsಪಿ ಹ್ಯೇಕೈಕಮೇವ ನೃಪತಿಂ ಸ ದಿದೇಶ ಯೋದ್ಧುಮ್ ॥೧೯.೧೯೫॥

 

ಕರ್ಣನಿಂದ ಈರೀತಿಯಾಗಿ ಹೇಳಲ್ಪಟ್ಟ ದುರ್ಯೋಧನನು ‘ಅದು ಸರಿ’ ಎಂದು ಮನಗೊಂಡು ತನ್ನ ಪಟ್ಟಣಕ್ಕೆ ತೆರಳಿದನು. ಕರ್ಣನೂ ಕೂಡಾ ಆ ಎಲ್ಲಾ ರಾಜರೊಂದಿಗೆ ಯುದ್ಧಮಾಡಿ, ಜರಾಸಂಧನ ಪಕ್ಷದವರೆಲ್ಲರನ್ನೂ ಗೆದ್ದ ಕೂಡಾ. ಕರ್ಣನ ವೀರ್ಯವನ್ನು ಕಡೆಗಣಿಸಿ ಜರಾಸಂಧನು ಒಬ್ಬೊಬ್ಬರೇ ರಾಜರನ್ನು ಯುದ್ಧಮಾಡಲು ಕಳುಹಿಸಿದ್ದ.

Mahabharata Tatparya Nirnaya Kannada 19183_19187

ಊಷುಸ್ತಥೈವ ಪರಿವತ್ಸರಪಞ್ಚಕಂ ತೇ ಪಾಣ್ಡೋರ್ಗ್ಗೃಹೇ ಸುಸುಖಿನೋsಖಿಲಭೋಗಯುಕ್ತಾಃ ।

ಕೃಷ್ಣಾ ಚ ತೇಷು ಪೃಥಗೇವ ಚತುಃಸ್ವರೂಪಾ ರೇಮೇ ತಥೈಕತನುರಪ್ಯಭಿಮಾನಿಭೇದಾತ್ ॥೧೯.೧೮೩॥

 

ಹೀಗೆ ಆ ಪಾಂಡವರು ತಂದೆಯಾದ ಪಾಂಡುವಿನ ಮನೆಯಲ್ಲಿ ಒಳ್ಳೆಯ ಸುಖವುಳ್ಳವರಾಗಿ, ಒಳ್ಳೆಯ ಭೋಗದಿಂದ ಕೂಡಿದವರಾಗಿ, ಸರಿಸುಮಾರು ಐದುವರ್ಷಗಳ ಕಾಲ ವಾಸಮಾಡಿದರು. ದ್ರೌಪದಿಯೂ ಕೂಡಾ ಅವರಲ್ಲಿ ನಾಲ್ಕು ಸ್ವರೂಪವುಳ್ಳವಳಾಗಿ ಕ್ರೀಡಿಸಿದಳು.

[ಇಲ್ಲಿ ‘ಸುಸುಖಿನಃ’ ಎಂದೂ, ‘ಅಖಿಲಭೋಗಯುಕ್ತಾಃ’ ಎಂದೂ ಹೇಳಿದ್ದಾರೆ. ಸುಸುಖಿನಃ ಎಂದರೆ ಸ್ವರೂಪಸುಖ ಉಳ್ಳವರಾಗಿ ಎಂದರ್ಥ, ಅಖಿಲಭೋಗಯುಕ್ತಾಃ  ಎಂದರೆ ಬಾಹ್ಯಭೋಗವನ್ನೂ ಹೊಂದಿದ್ದರು ಎಂದರ್ಥ. ಸ್ವರೂಪಸುಖ ಬಾಹ್ಯಸುಖದಿಂದ ಬರುವಂತದ್ದಲ್ಲ.

ಇನ್ನು ಇಲ್ಲಿ ದ್ರೌಪದಿ ನಾಲ್ಕು ಸ್ವರೂಪವುಳ್ಳವಳಾಗಿ ಕ್ರೀಡಿಸಿದಳು ಎಂದು ಹೇಳಿದ್ದಾರೆ. ನಾಲ್ಕು ಸ್ವರೂಪಗಳು ಒಂದೇ ದೇಹದಲ್ಲಿ ಒಟ್ಟಿಗೇ ಅಭಿವ್ಯಕ್ತವಾಗುವುದಿಲ್ಲವೇ ಎಂದರೆ: ಅಭಿಮಾನ ಬೇಧದಿಂದಾಗಿ ಒಂದೇ ದೇಹವುಳ್ಳವಳಾದರೂ ಕೂಡಾ ನಾಲ್ಕು ಸ್ವರೂಪಗಳು ಕ್ರಮೇಣ ಬರುತ್ತದೇ ಹೊರತು, ಎಲ್ಲವೂ ಒಟ್ಟೊಟ್ಟಿಗೆ ಅಭಿವ್ಯಕ್ತವಾಗುವುದಿಲ್ಲ. ಈ ದೇವಗುಹ್ಯವನ್ನು ಆಚಾರ್ಯರು ಮುಂದಿನ ನಾಲ್ಕು ಪದ್ಯಗಳಲ್ಲಿ ವಿವರಿಸಿದ್ದಾರೆ. ದ್ರೌಪದಿ ಒಂದೇ ದೇಹದವಳಾದರೂ ಕೂಡಾ, ಒಳಗೆ ನಾಲ್ಕು ರೂಪವುಳ್ಳವಳು. ಆ ದೇಹದಲ್ಲಿ ಶ್ಯಾಮಲ, ಭಾರತಿ, ಶಚಿ ಉಷಾ ಇದ್ದಾರೆ. .(ಜೊತೆಗೆ ಆ ದೇಹದಲ್ಲಿ ಪಾರ್ವತಿಯೂ ಇದ್ದಾಳೆ. ಈ ಹಿಂದೆ(೧೮.೧೪೯) ಹೇಳಿದಂತೆ- ‘ಸಂಯುಕ್ತಾ ವ್ಯವಹಾರೇಷು ಪ್ರವರ್ತ್ತೇತ ನಚಾನ್ಯಥಾ’  ಭಾರತಿಯಿಂದ ಕೂಡಿ ಪಾರ್ವತಿಯೂ ಇದ್ದಾಳೆ. ಆದರೆ ಅವಳು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿದ್ದಾಳೆ. ಅಶ್ವತ್ಥಾಮರೂಪಿ ಶಿವ ಬ್ರಹ್ಮಚಾರಿ ಆದ್ದರಿಂದ ಇಲ್ಲಿ ಪಾರ್ವತಿಯೂ ಬ್ರಹ್ಮಚಾರಿಣಿ).

ಶ್ಯಾಮಲ ಯಮಧರ್ಮನ(ಅವತಾರಭೂತನಾದ ಯುಧಿಷ್ಠಿರನ) ಪತ್ನಿ. ಭಾರತಿ ಸಾಕ್ಷಾತ್ ಮುಖ್ಯಪ್ರಾಣನ(ಭೀಮನ) ಪತ್ನಿ.  ಶಚಿ ಇಂದ್ರನ(ಅವತಾರಭೂತನಾದ ಅರ್ಜುನನ)ಪತ್ನಿ. ಉಷಾ ನಾಸತ್ಯ-ದಸ್ರರ(ನಕುಲ-ಸಹದೇವರ)ಪತ್ನಿ. ಹೀಗೆ ಇಲ್ಲಿ ಒಂದೇ ದೇಹದಲ್ಲಿ ನಾಲ್ಕು ಸ್ತ್ರೀ ಜೀವಗಳಿವೆ. ಅವು ಅಭಿಮಾನಿಭೇದದಿಂದ ಬೇರೆಬೇರೆಯಾಗಿಯೇ ರಮಿಸುವುದರಿಂದ ಅಲ್ಲಿ  ಯಾವುದೇ ದೋಷವಿಲ್ಲ. ಈ ಕುರಿತಾದ, ಮನುಷ್ಯರಲ್ಲಿ ಸಾಧ್ಯವಾಗದ, ಮನುಷ್ಯರಿಗೆ ಅರ್ಥವಾಗದ, ದೇವಗುಹ್ಯದ ಇಣುಕು ನೋಟ ಮುಂದಿನ ನಾಲ್ಕು ಶ್ಲೋಕ].

 

ಕನ್ಯೈವ ಸಾsಭವದತಃ ಪ್ರತಿವಾಸರಂ ಚ ಜನ್ಮಾಭವದ್ಧ್ಯಭಿಮತೇಃ ಪೃಥಗೇವ ನಾಶಾತ್ ।

ಪ್ರಾಯೋ ಹಿ ನಾಭಿಮತಿನಾಶಮವಾಪ ವಾಣೀ ತಸ್ಮಾನ್ಮರುಚ್ಚ ಸಕಲೇಷ್ವಭಿವಿಷ್ಟ ಆಸೀತ್ ॥೧೯.೧೮೪॥

 

ಯಾವ ಕಾರಣದಿಂದ ಪ್ರತಿದಿನವೂ ಅಭಿಮಾನ ನಾಶವಾಗಿ ಮತ್ತೆ ಮರಳಿ ಬರುತ್ತಿತ್ತೋ, ಆ ಕಾರಣದಿಂದ ಪ್ರತಿದಿನವೂ ಅವಳು ಕನ್ಯೆಯೇ ಆಗಿರುತ್ತಿದ್ದಳು. ಭಾರತೀದೇವಿಯು ಹೆಚ್ಚು ಸಂದರ್ಭದಲ್ಲಿ ಅಭಿಮಾನದ ನಾಶವನ್ನು ಹೊಂದಲಿಲ್ಲ. ಹಾಗಾದರೆ ಭಾರತೀದೇವಿಗೆ ತಾರತಮ್ಯದಲ್ಲಿ ಅತ್ಯಂತ ಚಿಕ್ಕವರಾದ ಇಂದ್ರ, ಯಮ ಮೊದಲಾದವರ ಸಂಗವಾಯ್ತಲ್ಲಾ ಎಂದರೆ: ಹಾಗೆ ಆಗಬಾರದು ಎಂತಲೇ ಮುಖ್ಯಪ್ರಾಣನೂ ಕೂಡಾ ಉಳಿದ ನಾಲ್ಕೂಜನರಲ್ಲಿ ಇದ್ದ ಎಂದಿದ್ದಾರೆ ಆಚಾರ್ಯರು.

[ಧರ್ಮರಾಜನ ಜೊತೆಗಿದ್ದಾಗ ದ್ರೌಪದಿ ದೇಹದಲ್ಲಿ ಶ್ಯಾಮಲ ಮಾತ್ರ. ಮಿಕ್ಕ ಎಲ್ಲರೂ ಇದು ನನ್ನದೇಹ ಎನ್ನುವ ಅಭಿಮಾನವನ್ನು ಕಳೆದುಕೊಂಡಿರುತ್ತಾರೆ. ಅಭಿಮಾನವನ್ನು ಕಳೆದುಕೊಂಡರು ಎಂದರೆ ಅವರು ಎಲ್ಲರೂ ಇಲ್ಲಾ ಎಂದೇ ಅರ್ಥ. ಶ್ಯಾಮಲೆಗೆ  ಮಾತ್ರ ಇದು ನನ್ನ ದೇಹ ಎನ್ನುವ ಅಭಿಮಾನವಿದೆ. ಆದಿನ ಕಳೆದು ಮುಂದಿನ ದಿನ ಶ್ಯಾಮಲೆಗೆ ಅಭಿಮಾನ ಕಳೆಯಿತು, ಭಾರತಿಗೆ ಮಾತ್ರ ಅಭಿಮಾನ ಮತ್ತು ಅವಳು ಆಗ ಭೀಮನೊಂದಿಗಿರುತ್ತಾಳೆ. ಮೂರನೇ ದಿನ ಶಚಿಗೆ ಮಾತ್ರ ಅಭಿಮಾನ ಮತ್ತು ಆಕೆ ಅರ್ಜುನನ ಜೊತೆಗಿರುತ್ತಾಳೆ. ಹೀಗೆ ಪ್ರತಿನಿತ್ಯ ಒಂದೊಂದು ಜೀವರು ಈ ದೇಹದಮೇಲೆ ಅಭಿಮಾನ ತಾಳುತ್ತಾರೆ. ಆದ್ದರಿಂದಲೇ ಆ ದೇಹಕ್ಕೆ ಪ್ರತಿದಿನ ಹೊಸಹುಟ್ಟು. ಏಕೆಂದರೆ ದೇಹವನ್ನು ಪ್ರವೇಶಿಸಿದ ಜೀವಕ್ಕೆ ಇದು ನನ್ನ ದೇಹ ಎಂದು ಹೊಸದಾಗಿ ಅಭಿಮಾನ ಹುಟ್ಟುತ್ತದೆ.  ‘ಇದು ನನ್ನ ದೇಹ ಎನ್ನುವ ಅಭಿಮಾನವೇ ಜನನ. ಆ ಅಭಿಮಾನದ ನಾಶವೇ ಮರಣ. ಇಲ್ಲಿ ಆಗಿದ್ದೂ ಕೂಡಾ ಇದೇ. ಪ್ರತಿನಿತ್ಯ  ಹೊಸಜೀವಕ್ಕೆ ಈದೇಹ ನನ್ನದು ಎಂಬ ಅಭಿಮಾನ ಹುಟ್ಟುತ್ತಿತ್ತು. ಆದ್ದರಿಂದ ಈ ದೇಹಕ್ಕೆ ಪ್ರತಿದಿನ ಹೊಸಹುಟ್ಟು. ಹೀಗೆ ಪ್ರತಿನಿತ್ಯ ಹೊಸದಾಗಿ ಹುಟ್ಟುತ್ತಿದ್ದರಿಂದಲೇ ಅವಳು ಪ್ರತಿನಿತ್ಯ ಕನ್ಯೆಯಾಗುತ್ತಿದ್ದಳು.

ಒಟ್ಟಿನಲ್ಲಿ ಹೇಳಬೇಕೆಂದರೆ: ಅಭಿಮಾನಿಜೀವ ತಾನು ಯಾವಾಗ ಅಭಿಮಾನ ಪಡೆದುಕೊಳ್ಳುತ್ತದೋ ಆಗ ಜನ್ಮ. ಇಲ್ಲದೇ ಇದ್ದಾಗ  ಅದೇ ಮರಣ. ಹೀಗೆ ಪ್ರತಿನಿತ್ಯ, ಯಾರೊಂದಿಗೆ ರಮಿಸುತ್ತಿದ್ದಳೋ ಆಗ  ಅವರ ನಿಯತಪತ್ನಿ ಅಭಿಮಾನ ತಾಳುತ್ತಿದ್ದಳು. ಹೊಸಜನ್ಮ ಬರುತ್ತಿತ್ತು. ಮರುದಿನ ಅಭಿಮಾನವಿಲ್ಲ, ಆದ್ದರಿಂದ ಅವಳಿಲ್ಲ. ಮತ್ತೊಂದು ಜೀವದ ಅಭಿಮಾನ ಬರುತ್ತಿದ್ದುದರಿಂದ ಅದು ಹೊಸ ಹುಟ್ಟಾಗುತ್ತಿತ್ತು. ಅದು ಹೊಸ ಹುಟ್ಟಾಗಿರುವುದರಿಂದ ಅವಳು ಮತ್ತೆ ಕನ್ಯೆಯಾಗಿರುತ್ತಿದ್ದಳು.

ಆದರೆ ಇಲ್ಲೊಂದು ಪ್ರಶ್ನೆ ಬರುತ್ತದೆ: ಎಲ್ಲರೂ ತಿಳಿದಿರುವಂತೆ ದ್ರೌಪದಿ ಭಾರತೀದೇವಿಯ ಅವತಾರ. ಅಂದರೆ ಭಾರತೀದೇವಿಯೇ ದ್ರೌಪದಿಯಾಗಿ ಅವತರಿಸಿ ಬಂದಿದ್ದಳು.  ಅವಳಲ್ಲಿ ಶ್ಯಾಮಲೆ, ಶಚಿ ಮತ್ತು ಉಷಾದೇವಿ ಆಶ್ರಯ ಪಡೆದಿದ್ದರು. ಆ ದೇಹ ಭಾರತೀದೇವಿಯ ನಿಯತವಾದ ದೇಹವೆಂದಾದರೆ, ಶ್ಯಾಮಲೆ ತಾನು ಅಭಿಮಾನಿಯಾದಾಗ, ಭಾರತೀದೇವಿಯೂ ಅಲ್ಲಿರಲೇಬೇಕಲ್ಲವೇ ಎಂದರೆ:  ಹೌದು ಎನ್ನುತ್ತಾರೆ ಆಚಾರ್ಯರು. ಶ್ಯಾಮಲೆ, ಶಚಿ, ಉಷಾ, ಹೀಗೆ ಯಾರೇ ಅಭಿಮಾನ ತಾಳಿದಾಗಲೂ, ಭಾರತಿ ಅಲ್ಲಿರುತ್ತಿದ್ದಳು. ಭಾರತಿಗೆ ಖಂಡಿತವಾಗಿಯೂ ಕೂಡಾ ಅಭಿಮಾನ ನಾಶ ಆಗಲಿಲ್ಲ. ಅಂದರೆ ಮೊದಲದಿನ ಯುಧಿಷ್ಠಿರನ ಜೊತೆ ಶ್ಯಾಮಲೆ ಇರುವಾಗ ಭಾರತೀದೇವಿಯೂ ಇರುತ್ತಿದ್ದಳು.  ಆದರೆ ಶಚಿ ಮತ್ತು ಉಷಾದೇವಿಗೆ ಅಭಿಮಾನ ಇರುತ್ತಿರಲಿಲ್ಲ. ಎರಡನೇದಿನ ಭೀಮನಜೊತೆಗಿರುವಾಗ ಕೇವಲ ಭಾರತೀದೇವಿಯ ಅಭಿಮಾನ.  ಶ್ಯಾಮಲೆ, ಶಚಿ ಮತ್ತು ಉಷಾ ಅಭಿಮಾನ ಕಳೆದುಕೊಳ್ಳುತ್ತಿದ್ದರು. ಮೂರನೇ ದಿನ ಶಚಿ ಮತ್ತು ಭಾರತೀದೇವಿ, ಅದೇರೀತಿ ನಾಲ್ಕನೇ ದಿನ ಉಷಾ ಮತ್ತು ಭಾರತೀದೇವಿ ಅಭಿಮಾನ ಹೊಂದಿರುತ್ತಿದ್ದರು, ಉಳಿದವರು ಕಳೆದುಕೊಳ್ಳುತ್ತಿದ್ದರು. ಹೀಗೆ ಭಾರತೀದೇವಿಯ ಅಭಿಮತಿ ಅದು ನಿಯತ. ಅದು ಸದಾ ಇರುತ್ತಿತ್ತು. ಮಿಕ್ಕವರಲ್ಲಿ ಅದು ತಮ್ಮ-ತಮ್ಮ ಗಂಡಂದಿರ ಕಾಲಕ್ಕೆ ಮಾತ್ರ ಬರುತ್ತಿತ್ತು. ಹಾಗಾಗಿ ಭಾರತೀದೇವಿಗೆ ನಿಶ್ಚಿತವಾಗಿ ಅಭಿಮತಿ ನಾಶ ಇರಲಿಲ್ಲ.

ಈರೀತಿ ಹೇಳಿದಾಗ ಇಲ್ಲಿ ಇನ್ನೊಂದು ದೊಡ್ಡ ಪ್ರಶ್ನೆ ಎದುರಾಗುತ್ತದೆ. ಭಾರತೀದೇವಿಯ ಅಭಿಮಾನ ನಾಶವಿಲ್ಲದೇ ಯುಧಿಷ್ಠಿರ, ಅರ್ಜುನ ಮತ್ತು ನಕುಲ ಸಹದೇವರು ಹೇಗೆ ತಮ್ಮ ಪತ್ನಿಯರನ್ನು ಮಾತ್ರ ಸೇರುತ್ತಿದ್ದರು ?  ಅಭಿಮಾನಿನಿಯಾದ ದೇಹವನ್ನು ಅವರು ಭಾರತೀ ದೇವಿಯನ್ನು ಹೊರತುಪಡಿಸಿ ಹೇಗೆ ಸೇರಲು ಸಾಧ್ಯ ಎಂದರೆ: ಮುಖ್ಯಪ್ರಾಣನೂ ಕೂಡಾ  ಯುಧಿಷ್ಠಿರ, ಅರ್ಜುನ, ನಕುಲ-ಸಹದೇವರಲ್ಲಿಯೂ ಆವಿಷ್ಟನಾಗಿ, ದ್ರೌಪದಿಯಲ್ಲಿರುವ ಭಾರತೀದೇವಿಯೊಂದಿಗೆ ರಮಿಸುತ್ತಾನೆ ಎನ್ನುತ್ತಾರೆ ಆಚಾರ್ಯರು].  

  

ಹಾಗಿದ್ದರೆ ರಮಣ ಕ್ರಿಯೆ ಹೇಗೆ ನಡೆಯುತ್ತಿತ್ತು ಎಂದರೆ:

 

ಧರ್ಮ್ಮಾತ್ಮಜಾದಿಷು ಮರುತ್ ಪ್ರತಿವಿಷ್ಟ ಏಷಾಂ ಬುದ್ಧಿಂ ವಿಮೋಹ್ಯ ರಮತೇ ಸತತಂ ತಯಾ ಯತ್ ।

ಶುದ್ಧೈವ ಸಾ ಹಿ ತತ ಏವ ದಿನೇದಿನೇ ಚ ಸಮ್ಮೋಹತೋ ಮರಣವದ್ ಭವತೀಹ ಕನ್ಯಾ ॥೧೯.೧೮೫॥

 

ಧರ್ಮರಾಜ ಮೊದಲಾದವರಲ್ಲಿ ಪ್ರವೇಶ ಮಾಡಿದ ಮುಖ್ಯಪ್ರಾಣನು ಅವರ ಬುದ್ಧಿಯನ್ನು ಮಾಯಕದಲ್ಲಿರಿಸಿ ನಿರಂತರವಾಗಿ ಭಾರತಿಯೊಂದಿಗೆ ರಮಿಸುತ್ತಾನೆ, ಆಕಾರಣದಿಂದ ಪ್ರತಿದಿನವೂ ಕೂಡಾ ಅವಳು ಶುದ್ಧಳಾಗಿಯೇ ಇದ್ದಳು. ದೇಹದಲ್ಲಿ ಮೋಹವನ್ನು ಹೊಂದದ್ದರಿಂದ ಅದು ಸಾವಿನಂತೆ ಸಂಭವಿಸುತ್ತಿತ್ತು. ಮತ್ತೆ ಮರಳಿ ಆಕೆ ಕನ್ಯೆಯಾಗುತ್ತಿದ್ದಳು.

[ಧರ್ಮರಾಜನಿಗೆ ಶ್ಯಾಮಲೆಯೊಂದಿಗೆ ರಮಣ ಮಾಡುವಾಗ ಅವನಿಗೆ ಈ ದೇಹದಲ್ಲಿ ದ್ರೌಪದಿ ಇದ್ದಾಳೆ ಎನ್ನುವುದು ಗೊತ್ತೇ ಆಗುತ್ತಿರಲಿಲ್ಲ. ಧರ್ಮರಾಜನಿಗೆ ದ್ರೌಪದಿಯೊಂದಿಗಿನ ಸಂಭೋಗ ಎಂದು ನೋಡಿದರೆ ಅಲ್ಲಿ ಕೇವಲ ಶ್ಯಾಮಲೆ ಮಾತ್ರ ಇದ್ದಾಳೆ ಎಂಬ ಅರಿವು ಅಷ್ಟೇ. ಅಲ್ಲಿ ಭಾರತೀದೇವಿ ಇದ್ದಾಳೆ, ನನ್ನೊಳಗೆ ಮುಖ್ಯಪ್ರಾಣ ಇದ್ದಾನೆ, ಅವರಿಬ್ಬರೂ ರಮಣ ಮಾಡುತ್ತಿದ್ದಾರೆ ಇದ್ಯಾವುದೂ ಅವನಿಗೆ ತಿಳಿಯುವುದಿಲ್ಲ. ಅದೇ ರೀತಿ ಅರ್ಜುನ, ನಕುಲ-ಸಹದೇವ. ಹೀಗೆ ಪ್ರಾಣ-ಭಾರತಿಯರು ಎಲ್ಲರ ದೇಹದಲ್ಲಿದ್ದು ಸತತ ರಮಿಸುತ್ತಿದ್ದರು. `ಯುಧಿಷ್ಠಿರ, ಅರ್ಜುನ, ನಕುಲ ಸಹದೇವರು ಒಂದೊಂದು ದಿನ ಮಾತ್ರ ತಮ್ಮ ಪತ್ನಿಯರಲ್ಲಿ ರಮಿಸಿದರೆ, ಭೀಮ ಮಾತ್ರ ಎಲ್ಲರಲ್ಲೂ  ಆವಿಷ್ಟನಾಗಿ ಪ್ರತಿನಿತ್ಯ ರಮಿಸುತ್ತಿದ್ದ.

ಶ್ಯಾಮಲೆ, ಶಚಿ, ಉಷೆಯರಿಗೆ ಮಾತ್ರ ಅವರಿಗೆ ನಿಗದಿಪಡಿಸಿದ ದಿನ  ಕಳೆದಮೇಲೆ ದೇಹದ ಅಭಿಮಾನ ನಾಶವಾಗುತ್ತಿತ್ತು. ಆದ್ದರಿಂದ ಅದು ಮರಣದಂತೆ ಆಗುತ್ತಿತ್ತು. ಉದಾಹರಣೆಗೆ ಮೊದಲ ದಿನ ಯುಧಿಷ್ಠಿರನೊಂದಿಗೆ  ದ್ರೌಪದಿ ಇದ್ದಳು ಎಂದರೆ ಅಲ್ಲಿ ಶ್ಯಾಮಲೆ ಮಾತ್ರ ಭಾರತಿಯ ಜೊತೆಗಿದ್ದಳು. ಭಾರತಿ ಧರ್ಮರಾಜನ ಒಳಗಿರುವ ಮುಖ್ಯಪ್ರಾಣನನ್ನು ಮಾತ್ರ ಸಂಪರ್ಕ ಮಾಡುತ್ತಿದ್ದಳು. ಮಾರನೇ ದಿನ ಶ್ಯಾಮಲೆ ಅಭಿಮಾನ ಕಳೆದುಕೊಂಡಾಗ ದೇಹಕ್ಕೆ ಮರಣ ಬಂತು ಎಂದರ್ಥ. ಮರುದಿನ ಶಚಿ ಹೊಸದಾಗಿ ಹುಟ್ಟುತ್ತಿದ್ದಳು ಮತ್ತು ಅರ್ಜುನನನ್ನು ಸೇರುತ್ತಿದ್ದಳು. ಹೀಗೆ ಮುಂದುವರಿಯುತ್ತಿತ್ತು.

ಇದು ನನ್ನ ದೇಹ ಎಂಬ ಅರಿವು ಇಲ್ಲದ ಕಾರಣ ಪ್ರತಿನಿತ್ಯ ಸಾವು ಎಂದರ್ಥ. ಧರ್ಮರಾಜನ ಜೊತೆಗೆ ಸಂಭೋಗ ಮಾಡಿದ ಮರುದಿನ ಶ್ಯಾಮಲೆಗೆ ಸಾವು. ಏಕೆಂದರೆ ಅವಳು ತನ್ನ ಅಭಿಮಾನ ಕಳೆದುಕೊಳ್ಳುತ್ತಿದ್ದಳು. ಹೀಗೆ ಅಭಿಮಾನ ಕಳೆದುಕೊಳ್ಳುವುದನ್ನು ಇಲ್ಲಿ ಮರಣದಂತೆ ಎಂದು ಹೇಳಿದ್ದಾರೆ.

 

ನೋಸುಪ್ತಿವತ್ ತ್ವಿದಮತೋsನ್ಯವಶತ್ವತೋ ಹಿ ದೇಹಸ್ಯ ಸಂಸ್ಮೃತಿತ ಏವ ಹರೇರ್ನ್ನ ಮೋಹಃ ।

ನಾsವೇಶವಚ್ಚ ತತ ಏವ ಮೃತೇಃ ಸ್ವರೂಪಮೇತತ್ ತ್ವತಃ ಪ್ರತಿದಿನಂ ಜನನಾದ್ಧಿ ಕನ್ಯಾ ॥೧೯.೧೮೬॥

 

ಈಪ್ರಕ್ರಿಯೆ ಸುಪ್ತಿಯಂತಲ್ಲ. ಏಕೆಂದರೆ ದೇಹಕ್ಕೆ ಅನ್ಯರ ಅಧೀನವಿರುವುದರಿಂದ. ಪರಮಾತ್ಮನ ಸ್ಮರಣೆ ಇರುವುದರಿಂದ ಇದು ಮೋಹವಲ್ಲ.  ಆವೇಶ ತರವೂ ಅಲ್ಲ. ಏಕೆಂದರೆ ಪರಮಾತ್ಮನ ಸ್ಮರಣೆ ಅಲ್ಲಿರುವ ಜೀವಕ್ಕಿರುವುದರಿಂದ. ಆ ಕಾರಣದಿಂದಲೇ ಇದು ಸಾವಿನಂತೆ. ಹೀಗಾಗಿ ಪ್ರತಿದಿನವೂ ಕೂಡಾ ಹೊಸ  ಹುಟ್ಟಿನಿಂದ ಆಕೆ  ಕನ್ಯೆಯಾಗಿಯೇ ಇದ್ದಳು.

[ಇದು ಏಕೆ ಮರಣದಂತೆ ಎಂದರೆ: ಇಲ್ಲಿ ನಾಲ್ಕು ವಿಷಯಗಳನ್ನು ಹೇಳುತ್ತಾರೆ. ಅಭಿಮಾನ ನಾಶವಾಗುವುದು ನಾಲ್ಕು ಸ್ಥಾನಗಳಲ್ಲಿ ೧. ಸುಪ್ತಿಯಲ್ಲಿ, ೨. ಮೋಹಬಂದಾಗ, ೩. ಯಾರಾದರೂ ದೇಹವನ್ನು ವಶಪಡಿಸಿಕೊಂಡಾಗ(ಆವೇಶ ಬಂದಾಗ) ೪. ಮರಣ ಹೊಂದಿದಾಗ. ಈ ನಾಲ್ಕು ಸ್ಥಾನಗಳಲ್ಲಿ ಜೀವಕ್ಕೆ ದೇಹದಮೇಲಿನ ಅಭಿಮಾನ ನಾಶವಾಗುತ್ತದೆ. ಇಲ್ಲಿ ಮರಣದಂತೆ ಎಂದು ಹೇಳಿರುವುದು ಮಿಕ್ಕ ಮೂರು ಸರಿ ಹೊಂದದೇ ಇರುವುದರಿಂದ. ಸುಪ್ತಿಯಲ್ಲಿ  ಜೀವಕ್ಕೆ ಅಭಿಮಾನವಿಲ್ಲ ಆದರೆ ಇದು ಸುಪ್ತಿಯಂತೆ ಅಲ್ಲಾ. ಏಕೆಂದರೆ ಅವರೆಲ್ಲರೂ ಆ ದೇಹದಲ್ಲಿದ್ದು ಭಕ್ತಿಪೋರ್ವಕವಾಗಿ ಹರಿಯ ಸ್ಮರಣೆಯಲ್ಲಿದ್ದಾರೆ. ಆದ್ದರಿಂದ ಮೋಹವೂ ಅಲ್ಲ. (ಮೋಹ ಎಂದರೆ ಭಗವಂತನನ್ನು ಮರೆಯುವುದು). ಇದು ಆವೇಶ ಕೂಡಾ ಅಲ್ಲ. ಏಕೆಂದರೆ ಬೇರೆ ಜೀವದ ಆವೇಶ ಬಂದಾಗ ಆವಿಷ್ಟನಾದ ಜೀವ ಸ್ಮರಣೆ ಮಾಡುತ್ತಾನೆ ಆದರೆ ದ್ರೌಪದಿಯ ದೇಹದಲ್ಲಿ ಹಾಗಿಲ್ಲ.  ಹೀಗಾಗಿ ಇದು ಮರಣದಂತೆ, ಪ್ರತಿದಿನವೂ ಹೊಸಹುಟ್ಟಿನಂತೆ. ಹೀಗೆ  ಪ್ರತಿದಿನವೂ ಅವಳು ಕನ್ಯೆಯಾಗಿರುತ್ತಿದ್ದಳು].

 

ಏವಂ ಸ ವಾಯುರನುವಿಷ್ಟಯುಧಿಷ್ಠಿರಾದಿಭೀಮಾತ್ಮನೈವ ರಮತೇ ಸತತಂ ತಯೈಕಃ ।

ಅನ್ಯಾದೃಶಾ ಹಿ ಸುರಭುಕ್ತಿರತೋsನ್ಯರೂಪಾ ಮಾನುಷ್ಯಭುಕ್ತಿರಿತಿ ನಾತ್ರ ವಿಚಾರ್ಯ್ಯಮಸ್ತಿ ॥೧೯.೧೮೭॥

 

ಈರೀತಿಯಾಗಿ ಮುಖ್ಯಪ್ರಾಣನು ಯುಧಿಷ್ಠಿರ ಮೊದಲಾದವರಲ್ಲಿ ಪ್ರವೇಶಮಾಡಿ ನಿರಂತರವಾಗಿ ಅವಳಿಂದ ಕ್ರೀಡಿಸುತ್ತಿದ್ದ. ದೇವತೆಗಳ ಸಂಭೋಗವು ಬೇರೆರೀತಿ ಇರುತ್ತದೆ ಮತ್ತು ಅದು ಮನುಷ್ಯರ ಸಂಭೋಗಕ್ಕಿಂತ ವಿಲಕ್ಷಣವಾದುದು. ಹೀಗೆ ತಿಳಿದು, ಇಲ್ಲಿ ಹೆಚ್ಚು ವಿಚಾರ ಮಾಡುವ ಅಗತ್ಯವಿಲ್ಲ.

[ಹೀಗೆ ಮುಖ್ಯಪ್ರಾಣ ಯುಧಿಷ್ಠಿರ, ಅರ್ಜುನ, ನಕುಲ-ಸಹದೇವರಲ್ಲಿ ತಾನು ಇದ್ದೇ, ಜೊತೆಗೆ ಭೀಮನಾಗಿದ್ದು, ದ್ರೌಪದಿಯ ಜೊತೆಗೆ ತಾನೊಬ್ಬನೇ ಪ್ರತಿದಿನ ರಮಿಸುತ್ತಿದ್ದ. ಧರ್ಮರಾಜನಲ್ಲಿ ತಾನು ಆವಿಷ್ಟನಾಗಿ ದ್ರೌಪದಿಯಲ್ಲಿರುವ ಭಾರತಿಯೊಂದಿಗೆ  ರಮಣ ಮಾಡುತ್ತಿದ್ದ. ಭೀಮನಾಗಿಯೂ ಸಾಕ್ಷಾತ್ ರಮಣ ಮಾಡುತ್ತಿದ್ದ. ಅರ್ಜುನನಲ್ಲಿ ಆವಿಷ್ಟನಾಗಿ ದ್ರೌಪದಿಯಲ್ಲಿರುವ ಭಾರತಿಯ ಜೊತೆಗೆ ರಮಣ ಮಾಡುತ್ತಿದ್ದ. ನಕುಲ ಸಹದೇವರಲ್ಲಿ ಆವಿಷ್ಟನಾಗಿ ದ್ರೌಪದಿಯಲ್ಲಿರುವ ಭಾರತಿ ಜೊತೆಗೇ ರಮಣ ಮಾಡುತ್ತಿದ್ದ. ಮಿಕ್ಕ ಎಲ್ಲರಿಗೆ ಒಂದು ದಿನವಾದರೆ, ಭೀಮ ಆವಿಷ್ಟನಾಗಿಯೂ, ಸಾಕ್ಷಾತ್ ಆಗಿಯೂ ಪ್ರತಿದಿನವೂ ರಮಣ ಮಾಡುತ್ತಿದ್ದ.   

ಇದೇನಿದು ? ಧರ್ಮರಾಜನಲ್ಲಿ ಯಮ, ದ್ರೌಪದಿಯಲ್ಲಿ ಶ್ಯಾಮಲೆ, ಅದಲ್ಲದೆ, ದ್ರೌಪದಿಯಲ್ಲಿ ಭಾರತಿಯೂ ಇದ್ದಾಳೆ, ಧರ್ಮರಾಜನಲ್ಲಿ ಮುಖ್ಯಪ್ರಾಣನೂ ಇದ್ದಾನೆ. ಹೀಗಿರುವಾಗ ಹೇಗೆ  ಬೇರೆಬೇರೆಯಾಗಿ ರಮಣ ಮಾಡಲು ಸಾಧ್ಯ? ಇದು ಅರ್ಥವಾಗುತ್ತಿಲ್ಲವಲ್ಲಾ ಎಂದರೆ: ಈ ಕುರಿತು ವಿಚಾರ ಮಾಡುವ ಅಗತ್ಯವಿಲ್ಲ. ಇದು ಅನ್ಯಾದೃಶವಾದುದು. ಯಾರೂ ಅರಿಯಲಾಗದಂತಹ, ಮನುಷ್ಯರಲ್ಲಿ ನಡೆಯಲು ಸಾಧ್ಯವಿಲ್ಲದ, ಸುರಭುಕ್ತಿ ಇದಾಗಿದೆ. ದೇವತೆಗಳು ಹೀಗೆ ರಮಣ ಮಾಡುತ್ತಾರೆ . ದೇವತೆಗಳಲ್ಲಿ ಇದು ಸಾಧ್ಯವಿದೆ. ಇದು ದೇವಗುಹ್ಯ ಮತ್ತು ದೇವತೆಗಳಿಗೆ ಮಾತ್ರ ಅರ್ಥವಾಗುವಂತಹ ರಮಣಕ್ರಿಯೆ. ಆದ್ದರಿಂದ ಇದು ಮಿಕ್ಕ ಯಾರಿಗೂ ತಿಳಿಯಲು ಸಾಧ್ಯವಾದುದಲ್ಲ.

ಹೀಗೆ ‘ಮನುಷ್ಯರಲ್ಲಿ ಸಾಧ್ಯವಾಗದ, ಮನುಷ್ಯರಿಗೆ ಅರ್ಥವಾಗದ, ದೇವತೆಗಳಲ್ಲಿ ಮಾತ್ರ ನಡೆಯುವ, ಬೇರೆಯೇ ರೀತಿಯಾದ ಈ ಕ್ರಿಯೆಯಕುರಿತು ಹೆಚ್ಚು ವಿಚಾರ ಮಾಡುವ ಅಗತ್ಯವಿಲ್ಲ’ ಎಂದು ಹೇಳಿ, ಆಚಾರ್ಯರು ದ್ರೌಪದಿಯ ದಾಂಪತ್ಯ ಜೀವನದ ಬಗೆಗೆ   ಯಾರೂ ಹೇಳದ ರಹಸ್ಯದ ಇಣುಕು ನೋಟವನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ].