ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 17, 2020

Mahabharata Tatparya Nirnaya Kannada 19196_19200

 ಸರ್ವೇಷು ತೇಷು ವಿಜಿತೇಷ್ವಭಿಜಗ್ಮಿವಾನ್ ಸ ಯೋದ್ಧುಂ ಬೃಹದ್ರಥಸುತೋsಪ್ಯಮುನಾ ರಥೇನ ।

ತಂ ಚೈವ ರಾಮವರತೋ ವಿರಥಂ ವಿಶಸ್ತ್ರಂ ಚಕ್ರೇ ಸ ಚೈನಮಥ ಮುಷ್ಟಿಭಿರಭ್ಯುಪೇತೌ ॥೧೯.೧೯೬॥

 

ಆ ಎಲ್ಲಾ ರಾಜರೂ ಸೋಲಲು, ಜರಾಸಂಧ ಸ್ವಯಂ ಕರ್ಣನೊಂದಿಗೆ ಯುದ್ಧಮಾಡಲು ಬಂದ. ಆಗ ಪರಶುರಾಮನ ವರದಿಂದ ಕರ್ಣ ಜರಾಸಂಧನನ್ನು ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದರೆ, ಬ್ರಹ್ಮನ ವರಬಲವನ್ನು ಹೊಂದಿರುವ ಜರಾಸಂಧ ಕರ್ಣನನ್ನು ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದ. ಹೀಗೆ ಪರಸ್ಪರ ರಥ-ಆಯುಧಹೀನರಾದ ಅವರು, ಮುಷ್ಟಿಯುದ್ಧಕ್ಕಿಳಿದರು.

 

ಸನ್ಧೌ ಯದೈವ ಜರಯಾ ಪ್ರತಿಸನ್ಧಿತಸ್ಯ ಕರ್ಣ್ಣೋ ಜಘಾನ ನ ಪರತ್ರ ತುತೋಷ ರಾಜಾ ।

ನ ಜ್ಞಾತಮೇತದಪಿ ಹೋ ಹಲಿನಾ ತದೇತಜ್ಜ್ಞಾತಂ ತ್ವಯಾ ಭವ ತತೋ ಮಮ ಭೃತ್ಯ ಏವ ॥೧೯.೧೯೭॥

 

ಯಾವಾಗ ಜರಾ ಎಂಬ ರಾಕ್ಷಸಿಯಿಂದ ಜೋಡಿಸಿದ ಜರಾಸಂಧನ ದೇಹದ ಭಾಗಕ್ಕೆ ಕರ್ಣನು ಹೊಡೆದನೋ, ಆಗ ಜರಾಸಂಧನಿಗೆ ಸಂತೋಷವಾಯಿತು. ಕರ್ಣನ ಅಥವಾ ದುರ್ಯೋಧನನ ಇನ್ನಾವುದೇ ಕೆಲಸದಿಂದ ಆತ ಸಂತೋಷಪಟ್ಟಿರಲಿಲ್ಲ. “ಬಲರಾಮನಿಂದಲೂ ಕೂಡಾ ಇದು ತಿಳಿಯಲ್ಪಡಲಿಲ್ಲ.  ಅದನ್ನು ನೀನು ತಿಳಿದಿದ್ದೀಯ. ಆಕಾರಣದಿಂದ ನೀನು ನನ್ನ ದಾಸನಾಗು” ಎನ್ನುತ್ತಾನೆ ಜರಾಸಂಧ.

[ಗುಣಗ್ರಾಹಿ ಜರಾಸಂಧನ ಮರ್ಮಸ್ಥಾನಕ್ಕೆ ಕರ್ಣ ಆಕಸ್ಮಿಕವಾಗಿ(Fluke) ಹೊಡೆದಿದ್ದರೂ ಕೂಡಾ, ಅದಕ್ಕೆ ಅವನು ಖುಷಿಪಟ್ಟ. ಇಲ್ಲಿ ಕರ್ಣ ಗೆದ್ದಿರುವುದು ಆಕಸ್ಮಿಕವಾಗಿ. ಆದ್ದರಿಂದ ಜರಾಸಂಧ ಅವನಿಗೆ ತನ್ನ ದಾಸನಾಗುವಂತೆ ಹೇಳುತ್ತಾನೆ].

 

ಏವಂವಿಧಂ ಸುಕುಶಲಂ ಬಹುಯುದ್ಧಶೌಣ್ಡಂ ನ ತ್ವಾಂ ಹನಿಷ್ಯ ಉತ ತೇ ಪಿತುರೇವ ಪೂರ್ವಮ್ ।

ಬಾಹ್ವೋರ್ಬಲಾದಭಿಹೃತಂ ಹಿ ಮಯಾsಙ್ಗರಾಜ್ಯಂ ತತ್ ತ್ವಂ ಗೃಹಾಣ ಯುಧಿ ಕರ್ಮ್ಮಕರಶ್ಚ ಮೇ ಸ್ಯಾಃ ॥೧೯.೧೯೮॥

 

ಇತ್ಯುಕ್ತ ಆಶು ಸ ತಥೈವ ಚಕಾರ ಕರ್ಣ್ಣಃ ಪೂರ್ವಂ ಹಿ ತಸ್ಯ ನಿಜರಾಜ್ಯಪದೈಕದೇಶಃ ।

ದುರ್ಯ್ಯೋಧನೇನ ವಿಹಿತೋ ಮಗಧಾಧಿರಾಜಂ ಜಿತ್ವಾ ವೃಕೋದರಹೃತಃ ಪಿತುರೇವ ದತ್ತಃ ॥೧೯.೧೯೯॥

 

‘ಈಪ್ರಕಾರವಾಗಿ  ಕೌಶಲ್ಯವುಳ್ಳ, ಬಹಳತರಹದ ಯುದ್ಧಗಳಲ್ಲಿ ಚತುರನಾದ ನಿನ್ನನ್ನು ನಾನು ಕೊಲ್ಲಬಯಸುವುದಿಲ್ಲ. (ನಿನ್ನಂತಹ ಒಳ್ಳೇ ವೀರನನ್ನು ಕಳೆದುಕೊಳ್ಳಬೇಕು ಎಂದು ನನಗನಿಸುತ್ತಿಲ್ಲ). ಅಷ್ಟೇ ಅಲ್ಲದೇ, ನಿನ್ನ ತಂದೆಯಿಂದ(ಅಧಿರಥನಿಂದ) ಹಿಂದೆ ಬಾಹುಬಲದಿಂದ ಕಸಿಯಲ್ಪಟ್ಟ ಅಂಗರಾಜ್ಯವನ್ನು  ಈಗ ನೀನು ತೆಗೆದುಕೋ ಮತ್ತು ಯುದ್ಧದಲ್ಲಿ ನೀನು ನನ್ನ ಪರ ಕೆಲಸಮಾಡಬೇಕು’  ಎನ್ನುತ್ತಾನೆ ಜರಾಸಂಧ.

ಈರೀತಿಯಾಗಿ ಹೇಳಲ್ಪಟ್ಟ ಕರ್ಣನು ಕೂಡಲೇ ‘ಆಯಿತು’ ಎಂದು ಹೇಳಿದನು. ಮೊದಲು ಈರಾಜ್ಯದ ಒಂದು ಭಾಗ  ದುರ್ಯೋಧನನಿಂದ ಕೊಡಲ್ಪಟ್ಟಿತ್ತು. ಅದು ಜರಾಸಂಧನನ್ನು ಸೋಲಿಸಿ ವೃಕೋದರನಿಂದ ತೆಗೆದುಕೊಳ್ಳಲ್ಪಟ್ಟ ಭಾಗವಾಗಿತ್ತು. ಆಗ  ಭೀಮ ಅದನ್ನು ಧೃತರಾಷ್ಟ್ರನಿಗೆ ಕೊಟ್ಟಿದ್ದ.    

 

[ಹಿಂದೆ ಜರಾಸಂಧನನ್ನು ಗೆದ್ದು ಅಂಗರಾಜ್ಯವನ್ನು ಭೀಮ ವಶಪಡಿಸಿಕೊಂಡು ಧೃತರಾಷ್ಟ್ರನಿಗೆ ಕೊಟ್ಟಿದ್ದ.  ಧೃತರಾಷ್ಟ್ರ ಅದನ್ನೇ ದುರ್ಯೋಧನನ ಮೂಲಕ ಕರ್ಣನಿಗೆ ಕೊಟ್ಟ. ಕರ್ಣ ತನಗೆ ಲಭಿಸಿದ ಅಂಗರಾಜ್ಯವನ್ನು ಉಪೇಕ್ಷೆ ಮಾಡಿ ಅಲ್ಲಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಅವನ ತಂದೆಯೇ ಅಲ್ಲಿನ ರಾಜ್ಯಭಾರ ನೋಡಿಕೊಳ್ಳುತ್ತಿದ್ದ. ಆಗ ಅಧಿರಥನಿಂದ ಮತ್ತೆ ಜರಾಸಂಧ ಅಂಗರಾಜ್ಯವನ್ನು ಅಪಹರಿಸಿದ. ಅದನ್ನೇ ಈಗ ಜರಾಸಂಧ  ಕರ್ಣನಿಗೆ ಹಿಂತಿರುಗಿಸಿದ ಮತ್ತು ‘ಯುದ್ಧದಲ್ಲಿ ನೀನು ನನ್ನ ಪರ ಕೆಲಸಮಾಡಬೇಕು’  ಎಂದು ಹೇಳಿದ. ಈರೀತಿ ಪಾಂಡವ ವಿರೋಧಿಯಾದ, ಶೂರನಾದ ಕರ್ಣನನ್ನು  ರಾಜಕೀಯ ಚತುರನಾದ ಜರಾಸಂಧ ತನ್ನ ಭೃತ್ಯನನ್ನಾಗಿ ಮಾಡಿಕೊಂಡ].  

 

ಅಙ್ಗಾಧಿರಾಜ್ಯಮುಪಲಭ್ಯ ಜರಾಸುತಸ್ಯ ಸ್ನೇಹಂ ಚ ಸೂರ್ಯ್ಯಸುತ ಆಶು ಕುರೂನ್ ಜಗಾಮ ।

ದೃಷ್ಟ್ವೈವ ತಂ ಮುಮುದಿರೇ ಧೃತರಾಷ್ಟ್ರಪುತ್ರಾ ನಾನೇನ ತುಲ್ಯಮಧಿಜಗ್ಮುರತೋ ಹರಿಂ ಚ ॥೧೯.೨೦೦॥

 

ಅಙ್ಗರಾಜ್ಯವನ್ನು ಪಡೆದು, ಜರಾಸಂಧನ ಸ್ನೇಹವನ್ನೂ ಪಡೆದ  ಸೂರ್ಯಸುತ ಕರ್ಣನು ಕೂಡಲೇ ಕುರುಪಟ್ಟಣಕ್ಕೆ ತೆರಳಿದನು. ದುರ್ಯೋಧನಾದಿಗಳು ಅವನನ್ನು ಕಂಡು ಸಂತೋಷಪಟ್ಟರು. ‘ಇವನು ಕೃಷ್ಣನಿಗಿಂತ ಮಿಗಿಲು’ ಎಂದುಕೊಂಡರು.

No comments:

Post a Comment