ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 15, 2020

Mahabharata Tatparya Nirnaya Kannada 19188_19195

 

ವಾಸಿಷ್ಠಯಾದವವೃಷಾವಪಿ ಕೇಶವೌ ತೌ ತತ್ರೋಷತುಃ ಪರಮಸೌಹೃದತೋ ಹಿ ತೇಷು ।

ತಾಭ್ಯಾಮನನ್ತಗುಣಪೂರ್ಣ್ಣಸುಖಾತ್ಮಕಾಭ್ಯಾಂ ಪಾರ್ತ್ಥಾಶ್ಚ ತೇ ಮುಮುದಿರೇ ಯುತಸತ್ಕಥಾಭಿಃ ॥೧೯.೧೮೮॥

 

ವೇದವ್ಯಾಸ ಮತ್ತು ಯಾದವಶ್ರೇಷ್ಠ (ಎರಡು ರೂಪದಲ್ಲಿರುವ) ಕೇಶವರು ಪಾಂಡವರಲ್ಲಿ ಅತ್ಯಂತ ಪ್ರೀತಿಯಿಂದ ಕೂಡಿ, ಹಸ್ತಿನಾವತಿಯಲ್ಲಿಯೇ ವಾಸಮಾಡಿದರು. ಅನಂತಗುಣಪೂರ್ಣ ಹಾಗೂ ಸುಖವೇ ಮೈವೆತ್ತು ಬಂದ ಅವರಿಂದ ಕೂಡಿಕೊಂಡು, ಅವರು ಹೇಳಿದ ಶಾಸ್ತ್ರೋಪದೇಶವನ್ನು ಕೇಳುತ್ತಾ, ಪಾಂಡವರು ಸಂತೋಷಪಟ್ಟರು. (ಭಗವಂತ ಎರಡು ರೂಪದೊಂದಿಗೆ ಜೊತೆಗಿರುವುದು ಅತ್ಯಂತ ದುರ್ಲಭವಾದ, ಯಾರಿಗೂ ಸಿಗದ ಸುಖ. ಅಂತಹ ಸುಖ ಪಾಂಡವರಿಗೆ ದೊರೆಯಿತು). 

 

ಪೂರ್ವಂ ಹಿ ತೇಷು ವನಗೇಷು ಬಭೂವ ಕಾಶಿರಾಜ್ಞಃ ಸುತಾಕೃತ ಉರುಕ್ಷಿತಿಪಾಲಯೋಗಃ ।

ತತ್ರ ಸ್ವಯಮ್ಬರಗತಾಂ ಧೃತರಾಷ್ಟ್ರಪುತ್ರಃ ಕನ್ಯಾಂ ಬಲಾಜ್ಜಗೃಹ ಆತ್ಮಬಲಾತಿದೃಪ್ತಃ ॥೧೯.೧೮೯॥

 

ಹಿಂದೆ ಪಾಂಡವರು ಕಾಡಿನಲ್ಲಿರುತ್ತಿರಲು, ಕಾಶಿರಾಜನ ಮಗಳ ಸ್ವಯಮ್ಬರಕ್ಕಾಗಿ ಬಹಳ ಜನ ರಾಜರ ಸೇರುವಿಕೆಯಾಯಿತು. ಆದರೆ ಅಲ್ಲಿ ಆ ಕನ್ಯೆಯನ್ನು  ಧೃತರಾಷ್ಟ್ರನ ಮಗ ದುರ್ಯೋಧನನು ತನ್ನ ಬಲದ ಅಹಂಕಾರದಿಂದ  ಬಲಾತ್ಕಾರವಾಗಿ ಅಪಹರಿಸಿದನು.

[ಈ ಘಟನೆ ನಡೆದದ್ದು ಯಾವಾಗ ಎನ್ನುವುದನ್ನು ಮಹಾಭಾರತದಲ್ಲೇ  ತಿಳಿಯಬಹುದು. ‘ಏತದ್ ವೈ ಶಾಲಿಹೋತ್ರಸ್ಯ  ತಪಸಾ ನಿರ್ಮಿತಂ  ಸರಃ । ರಮಣೀಯಮಿದಂ ತೋಯಂ ಕ್ಷುತ್ಪಿಪಾಸಾಶ್ರಮಾಪಹಮ್ । ಕಾರ್ಯಾರ್ಥಿನಸ್ತು  ಷಣ್ಮಾಸಾನ್ ವಿಹರಧ್ವಂ ಯಥಾಸುಖಮ್’ (ಆದಿಪರ್ವ ೧೬೮.೪೦). ಹಿಡಿಮ್ಬವಧೆಯ  ನಂತರ ವೇದವ್ಯಾಸರು ಕಾಡಿನಲ್ಲಿದ್ದ ಸುಂದರವಾದ ಸರೋವರವೊಂದನ್ನು ತೋರಿಸಿ,  ‘ಇದು ಶಾಲಿಹೋತ್ರನಿಂದ ನಿರ್ಮಿಸಲ್ಪಟ್ಟ ಸರೋವರ. ಇಲ್ಲಿ ಆರು ತಿಂಗಳುಗಳ ಕಾಲ ವಾಸಮಾಡಿ ಎಂದು ಪಾಂಡವರಿಗೆ ಸೂಚಿಸಿದ್ದರು. ಅದರಂತೆ ಇವರು ಅಲ್ಲೇ ಇದ್ದರು. ಇದೇ ಕಾಲದಲ್ಲಿ  ಕಾಶೀರಾಜನ ಪುತ್ರಿಯ ಸ್ವಯಮ್ಬರ ನಡೆಯಿತು].     

 

ಪೂರ್ವಂ ಹಿ ರಾಜಗಣನೇ ಮಗಧಾಧಿರಾಜಃ ಸಙ್ಖ್ಯಾತ ಇತ್ಯತಿರುಷಾ ಪ್ರಗೃಹೀತಕನ್ಯೇ ।

ದುರ್ಯ್ಯೋಧನೇ ನೃಪತಯೋ ಯುಯುಧುಃ ಸ್ಮ ತೇನ ಭಗ್ನಾಶ್ಚ ಕರ್ಣ್ಣಸಹಿತೇನ ಸಹಾನುಜೇನ॥೧೯.೧೯೦॥

 

ಸ್ವಯಮ್ಬರಕ್ಕೂ ಮೊದಲು ರಾಜರನ್ನು ಗಣನೆ ಮಾಡುವಾಗ ಜರಾಸಂಧನು ಮೊದಲನೆಯವನಾಗಿ  ಪರಿಗಣಿಸಲ್ಪಟ್ಟಿದ್ದನು. ಈ ಕಾರಣದಿಂದ ಅತ್ಯಂತ ಕೋಪಗೊಂಡ ದುರ್ಯೋಧನನಿಂದ ಕನ್ಯೆಯು ಅಪಹರಿಸಲ್ಪಡುತ್ತಿರಲು, ರಾಜರೆಲ್ಲರೂ ಕೂಡಿಕೊಂಡು ಯುದ್ಧಮಾಡಿದರು. ಆದರೆ ಕರ್ಣ ಹಾಗೂ ಅನುಜರಿಂದ ಕೂಡಿದ ದುರ್ಯೋಧನರಿಂದ ಅವರೆಲ್ಲರೂ ಸೋತರೂ ಕೂಡಾ.   

 

ಭಗ್ನೇಷು ತೇಷು ಪುನರಾತ್ತಶರಾಸನೇಷು ಕರ್ಣ್ಣೋ ಜಗಾದ ಧೃತರಾಷ್ಟ್ರಸುತಂ ಪ್ರಯಾಹಿ ।

ಯುಕ್ತಃ ಸಹೋದರಜನೈರ್ಗ್ಗರುಭೀಷ್ಮಮುಖ್ಯಯುಕ್ತಸ್ಯ ತೇ ನ ಪುರಮೇತ್ಯ ಹಿ ಧರ್ಷಣೇಶಾಃ॥೧೯.೧೯೧॥

 

ಮೊದಲು ಸೋತರೂ, ಅವರೆಲ್ಲರೂ ಮತ್ತೆ ಬಿಲ್ಲನ್ನು ಕೈಗೆತ್ತಿಕೊಳ್ಳುತ್ತಿರಲು, ಕರ್ಣನು ದುರ್ಯೋಧನನನ್ನು  ಕುರಿತು ಹೀಗೆ ಹೇಳಿದ: ‘ಮೊದಲು ನೀನು ನಿನ್ನೆಲ್ಲಾ ಸಹೋದರರಿಂದ ಕೂಡಿಕೊಂಡು ಇಲ್ಲಿಂದ ಓಡಿಹೋಗು. ದ್ರೋಣಾಚಾರ್ಯರು, ಭೀಷ್ಮಾಚಾರ್ಯರು ಮೊದಲಾದವರಿಂದ ಕೂಡಿರುವ ನಿನ್ನನ್ನು ಹಸ್ತಿನಾವತಿಗೆ ಬಂದು ಸೋಲಿಸಲು ಸಾಧ್ಯವಿಲ್ಲ.

 

ಏಕಾನ್ತತೋ ಜಯಮವೀಕ್ಷ್ಯ ಚ ನಾನುಯಾತಿ ಬಾರ್ಹದ್ರಥಃ ಪುರಗತಸ್ಯ ಜಯೇ ನ ನಿಷ್ಠಾ ।

ದ್ರೌಣಿಂ ಚ ರುದ್ರತನುಮೇಷ ಸದಾ ವಿಜಾನನ್ ನೋ ತೇನ ಯುದ್ಧಮಭಿವಾಞ್ಛತಿ ರುದ್ರಭಕ್ತಃ॥೧೯.೧೯೨॥

 

ಬೃಹದ್ರತನ ಮಗನಾದ  ಜರಾಸಂಧ ಗೆಲುವನ್ನು ಕಾಣದೇ (ಖಂಡಿತ ಗೆದ್ದೇ ಗೆಲ್ಲುತ್ತೇನೆ ಎನ್ನುವ ಖಾತರಿ ಇಲ್ಲದೇ) ನಿನ್ನನ್ನು ಹಿಂಬಾಲಿಸುವುದಿಲ್ಲ. ಪುರಗತನಾದ ನಿನ್ನ ಮೇಲೆ ಜಯದ ನಿಶ್ಚಯ ಅವನಿಗಿರುವುದಿಲ್ಲ. ಅಷ್ಟೇ ಅಲ್ಲದೇ, ಅಶ್ವತ್ಥಾಮಾಚಾರ್ಯರನ್ನು  ರುದ್ರಾವತಾರ ಎಂದು ಯಾವಾಗಲೂ ತಿಳಿದವನಾದ, ಸ್ವಯಂ  ರುದ್ರಭಕ್ತನಾದ  ಜರಾಸಂಧ ಅವನೊಂದಿಗೆ ಯುದ್ಧವನ್ನು ಬಯಸುವುದಿಲ್ಲ.

 

ಏಕೋsಹಮೇವ ನೃಪತೀನ್ ಪ್ರತಿಯೋಧಯಿಷ್ಯ ಏತೈರ್ಮ್ಮಯಿ ಪ್ರತಿಜಿತೇsಪಿ ನ ತೇsಸ್ತ್ಯಕೀರ್ತ್ತಿಃ  

ಏಕಂ ಚ ತೇsನುಜಮಿಮೇ ಯದಿ ಪೌರುಷೇಣ ಗೃಹ್ಣೀಯುರತ್ರ ತವ ಕೀರ್ತ್ತಿರುಪೈತಿ ನಾಶಮ್॥೧೯.೧೯೩॥

 

ನಾನೊಬ್ಬನೇ ಈಎಲ್ಲಾ ರಾಜರನ್ನೂ ಎದುರಿಸುತ್ತೇನೆ. ಇವರಿಂದ ನಾನು ಸೋತರೂ ಕೂಡಾ ನಿನಗೆ ಕೀರ್ತಿನಾಶವಿಲ್ಲ(ಏಕೆಂದರೆ ದುರ್ಯೋಧನನ ಭೃತ್ಯ ಸೋತ ಎಂದಾಗುತ್ತದೆಯೇ ಹೊರತು ದುರ್ಯೋಧನ ಸೋತ ಎಂದಾಗುವುದಿಲ್ಲ). ಒಂದುವೇಳೆ ಅವರು ಪರಾಕ್ರಮದಿಂದ ನಿನ್ನ ಒಬ್ಬ ತಮ್ಮನನ್ನು ಹಿಡಿದರೂ ಕೂಡಾ, ಆಗ ನಿನ್ನ ಕೀರ್ತಿಯು ನಾಶವಾಗುತ್ತದೆ.

[ಮಹಾಭಾರತದ ಶಾಂತಿಪರ್ವದ ೩ನೆಯ ಅಧ್ಯಾಯದಲ್ಲಿ ಪ್ರಾಸಂಗಿಕವಾಗಿ ಕರ್ಣನ ಗುಣಗಳನ್ನು ಹೇಳುವಾಗ ಈ ವಿಷಯವನ್ನೂ ಅಲ್ಲಿ ಹೇಳುವುದನ್ನು ನಾವು ಕಾಣಬಹುದು].

 

ಭೀಷ್ಮಾದಯೋsಪಿ ನಹಿ ಯೋಧಯಿತುಂ ಸಮರ್ತ್ಥಾ ರಾಜ್ಞಾ ಹ್ಯನೇನ ತತ ಏವ ಹಿ ಬಾಹ್ಲಿಕೋsಸ್ಯ ।

ಭೃತ್ಯೋ ಬಭೂವ ನತು ಭೀಷ್ಮಮಯಂ ಯುಧೇsಗಾದ್ ರಾಜಾ ನಹೀತಿ ನಚ ತೇನ ವಿರೋಧ ಆಸೀತ್ ॥೧೯.೧೯೪॥

 

ಭೀಷ್ಮಾದಿಗಳೂ ಕೂಡಾ ಈ ಜರಾಸಂಧನೊಂದಿಗೆ ಕಾದಲು ಸಮರ್ಥರಲ್ಲ. ಆ ಕಾರಣದಿಂದಲೇ(ಜರಾಸಂಧನೊಂದಿಗೆ ಕಾದಲು ಸಮರ್ಥನಲ್ಲದ ಕಾರಣದಿಂದಲೇ) ಬಾಹ್ಲೀಕರಾಜನು ಈ ಜರಾಸಂಧನಿಗೆ ಯುದ್ಧದಲ್ಲಿ ಸಹಾಯಕನಾದ. ಭೀಷ್ಮಾಚಾರ್ಯರು ಸ್ವಯಂ ರಾಜನಲ್ಲದ  ಕಾರಣದಿಂದ ಜರಾಸಂಧ ಅವರೊಂದಿಗೆ ಯುದ್ಧಕ್ಕಾಗಿ ತೆರಳಿಲ್ಲ. ಹೀಗಾಗಿ ಅವರಲ್ಲಿ ಅವನಿಗೆ ವಿರೋಧವಿರಲಿಲ್ಲ’.

[ಹೀಗಾಗಿ ಭೀಷ್ಮಾಚಾರ್ಯರು ಜರಾಸಂಧನಿಗೆ ಯುದ್ಧದಲ್ಲಿ ಸಹಾಯಮಾಡುವ ಕರ್ಮಕ್ಕೆ ಒಳಗಾಗಿರಲಿಲ್ಲ. ಆದರೆ ಬಾಹ್ಲೀಕ, ಶಲ್ಯ, ದ್ರುಪದ ಇವರೆಲ್ಲರೂ ಆ ಕೆಲಸವನ್ನು ಮಾಡಿದ್ದರು. ಯಾವಾಗ ಭೀಮಾರ್ಜುನರು ಪ್ರಬಲರಾದರೋ, ಆಗ ಈ ಎಲ್ಲಾ ಸಾತ್ವಿಕ ರಾಜರು ಜರಾಸಂಧನನ್ನು ಬಿಟ್ಟು ಭೀಮಾರ್ಜುನರನ್ನು ಆಶ್ರಯಿಸಿದರು].  

 

ಇತ್ಯುಕ್ತ ಆಶು ಸ ವಿಮೃಶ್ಯ ಯಯೌ ಪುರಂ ಸ್ವಂ ಕರ್ಣ್ಣೋsಪಿ ತೈಃ ಪ್ರತಿಯುಯೋಧ ಜಿಗಾಯ ಚೈನಾನ್ ।

ಕರ್ಣ್ಣಸ್ಯ ವೀರ್ಯ್ಯಮಗಣಯ್ಯ ಜರಾಸುತೋsಪಿ ಹ್ಯೇಕೈಕಮೇವ ನೃಪತಿಂ ಸ ದಿದೇಶ ಯೋದ್ಧುಮ್ ॥೧೯.೧೯೫॥

 

ಕರ್ಣನಿಂದ ಈರೀತಿಯಾಗಿ ಹೇಳಲ್ಪಟ್ಟ ದುರ್ಯೋಧನನು ‘ಅದು ಸರಿ’ ಎಂದು ಮನಗೊಂಡು ತನ್ನ ಪಟ್ಟಣಕ್ಕೆ ತೆರಳಿದನು. ಕರ್ಣನೂ ಕೂಡಾ ಆ ಎಲ್ಲಾ ರಾಜರೊಂದಿಗೆ ಯುದ್ಧಮಾಡಿ, ಜರಾಸಂಧನ ಪಕ್ಷದವರೆಲ್ಲರನ್ನೂ ಗೆದ್ದ ಕೂಡಾ. ಕರ್ಣನ ವೀರ್ಯವನ್ನು ಕಡೆಗಣಿಸಿ ಜರಾಸಂಧನು ಒಬ್ಬೊಬ್ಬರೇ ರಾಜರನ್ನು ಯುದ್ಧಮಾಡಲು ಕಳುಹಿಸಿದ್ದ.

No comments:

Post a Comment