ಊಷುಸ್ತಥೈವ ಪರಿವತ್ಸರಪಞ್ಚಕಂ ತೇ ಪಾಣ್ಡೋರ್ಗ್ಗೃಹೇ ಸುಸುಖಿನೋsಖಿಲಭೋಗಯುಕ್ತಾಃ ।
ಕೃಷ್ಣಾ ಚ ತೇಷು ಪೃಥಗೇವ ಚತುಃಸ್ವರೂಪಾ ರೇಮೇ
ತಥೈಕತನುರಪ್ಯಭಿಮಾನಿಭೇದಾತ್ ॥೧೯.೧೮೩॥
ಹೀಗೆ ಆ ಪಾಂಡವರು ತಂದೆಯಾದ ಪಾಂಡುವಿನ ಮನೆಯಲ್ಲಿ ಒಳ್ಳೆಯ
ಸುಖವುಳ್ಳವರಾಗಿ, ಒಳ್ಳೆಯ ಭೋಗದಿಂದ ಕೂಡಿದವರಾಗಿ, ಸರಿಸುಮಾರು ಐದುವರ್ಷಗಳ ಕಾಲ ವಾಸಮಾಡಿದರು.
ದ್ರೌಪದಿಯೂ ಕೂಡಾ ಅವರಲ್ಲಿ ನಾಲ್ಕು ಸ್ವರೂಪವುಳ್ಳವಳಾಗಿ ಕ್ರೀಡಿಸಿದಳು.
[ಇಲ್ಲಿ ‘ಸುಸುಖಿನಃ’ ಎಂದೂ, ‘ಅಖಿಲಭೋಗಯುಕ್ತಾಃ’ ಎಂದೂ
ಹೇಳಿದ್ದಾರೆ. ಸುಸುಖಿನಃ ಎಂದರೆ ಸ್ವರೂಪಸುಖ ಉಳ್ಳವರಾಗಿ ಎಂದರ್ಥ, ಅಖಿಲಭೋಗಯುಕ್ತಾಃ ಎಂದರೆ ಬಾಹ್ಯಭೋಗವನ್ನೂ ಹೊಂದಿದ್ದರು ಎಂದರ್ಥ.
ಸ್ವರೂಪಸುಖ ಬಾಹ್ಯಸುಖದಿಂದ ಬರುವಂತದ್ದಲ್ಲ.
ಇನ್ನು ಇಲ್ಲಿ ದ್ರೌಪದಿ ನಾಲ್ಕು ಸ್ವರೂಪವುಳ್ಳವಳಾಗಿ
ಕ್ರೀಡಿಸಿದಳು ಎಂದು ಹೇಳಿದ್ದಾರೆ. ನಾಲ್ಕು ಸ್ವರೂಪಗಳು ಒಂದೇ ದೇಹದಲ್ಲಿ ಒಟ್ಟಿಗೇ
ಅಭಿವ್ಯಕ್ತವಾಗುವುದಿಲ್ಲವೇ ಎಂದರೆ: ಅಭಿಮಾನ ಬೇಧದಿಂದಾಗಿ ಒಂದೇ ದೇಹವುಳ್ಳವಳಾದರೂ ಕೂಡಾ ನಾಲ್ಕು
ಸ್ವರೂಪಗಳು ಕ್ರಮೇಣ ಬರುತ್ತದೇ ಹೊರತು, ಎಲ್ಲವೂ ಒಟ್ಟೊಟ್ಟಿಗೆ ಅಭಿವ್ಯಕ್ತವಾಗುವುದಿಲ್ಲ. ಈ
ದೇವಗುಹ್ಯವನ್ನು ಆಚಾರ್ಯರು ಮುಂದಿನ ನಾಲ್ಕು ಪದ್ಯಗಳಲ್ಲಿ ವಿವರಿಸಿದ್ದಾರೆ. ದ್ರೌಪದಿ ಒಂದೇ
ದೇಹದವಳಾದರೂ ಕೂಡಾ, ಒಳಗೆ ನಾಲ್ಕು ರೂಪವುಳ್ಳವಳು. ಆ ದೇಹದಲ್ಲಿ ಶ್ಯಾಮಲ, ಭಾರತಿ, ಶಚಿ ಉಷಾ ಇದ್ದಾರೆ. .(ಜೊತೆಗೆ ಆ ದೇಹದಲ್ಲಿ
ಪಾರ್ವತಿಯೂ ಇದ್ದಾಳೆ. ಈ ಹಿಂದೆ(೧೮.೧೪೯) ಹೇಳಿದಂತೆ- ‘ಸಂಯುಕ್ತಾ ವ್ಯವಹಾರೇಷು
ಪ್ರವರ್ತ್ತೇತ ನಚಾನ್ಯಥಾ’ ಭಾರತಿಯಿಂದ ಕೂಡಿ
ಪಾರ್ವತಿಯೂ ಇದ್ದಾಳೆ. ಆದರೆ ಅವಳು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿದ್ದಾಳೆ. ಅಶ್ವತ್ಥಾಮರೂಪಿ
ಶಿವ ಬ್ರಹ್ಮಚಾರಿ ಆದ್ದರಿಂದ ಇಲ್ಲಿ ಪಾರ್ವತಿಯೂ ಬ್ರಹ್ಮಚಾರಿಣಿ).
ಶ್ಯಾಮಲ ಯಮಧರ್ಮನ(ಅವತಾರಭೂತನಾದ ಯುಧಿಷ್ಠಿರನ) ಪತ್ನಿ. ಭಾರತಿ
ಸಾಕ್ಷಾತ್ ಮುಖ್ಯಪ್ರಾಣನ(ಭೀಮನ) ಪತ್ನಿ. ಶಚಿ
ಇಂದ್ರನ(ಅವತಾರಭೂತನಾದ ಅರ್ಜುನನ)ಪತ್ನಿ. ಉಷಾ ನಾಸತ್ಯ-ದಸ್ರರ(ನಕುಲ-ಸಹದೇವರ)ಪತ್ನಿ. ಹೀಗೆ ಇಲ್ಲಿ
ಒಂದೇ ದೇಹದಲ್ಲಿ ನಾಲ್ಕು ಸ್ತ್ರೀ ಜೀವಗಳಿವೆ. ಅವು ಅಭಿಮಾನಿಭೇದದಿಂದ ಬೇರೆಬೇರೆಯಾಗಿಯೇ ರಮಿಸುವುದರಿಂದ
ಅಲ್ಲಿ ಯಾವುದೇ ದೋಷವಿಲ್ಲ. ಈ ಕುರಿತಾದ, ಮನುಷ್ಯರಲ್ಲಿ
ಸಾಧ್ಯವಾಗದ, ಮನುಷ್ಯರಿಗೆ ಅರ್ಥವಾಗದ, ದೇವಗುಹ್ಯದ ಇಣುಕು ನೋಟ ಮುಂದಿನ ನಾಲ್ಕು ಶ್ಲೋಕ].
ಕನ್ಯೈವ ಸಾsಭವದತಃ ಪ್ರತಿವಾಸರಂ ಚ
ಜನ್ಮಾಭವದ್ಧ್ಯಭಿಮತೇಃ ಪೃಥಗೇವ ನಾಶಾತ್ ।
ಪ್ರಾಯೋ ಹಿ ನಾಭಿಮತಿನಾಶಮವಾಪ ವಾಣೀ ತಸ್ಮಾನ್ಮರುಚ್ಚ
ಸಕಲೇಷ್ವಭಿವಿಷ್ಟ ಆಸೀತ್ ॥೧೯.೧೮೪॥
ಯಾವ ಕಾರಣದಿಂದ ಪ್ರತಿದಿನವೂ ಅಭಿಮಾನ ನಾಶವಾಗಿ ಮತ್ತೆ ಮರಳಿ
ಬರುತ್ತಿತ್ತೋ, ಆ ಕಾರಣದಿಂದ ಪ್ರತಿದಿನವೂ ಅವಳು ಕನ್ಯೆಯೇ ಆಗಿರುತ್ತಿದ್ದಳು. ಭಾರತೀದೇವಿಯು
ಹೆಚ್ಚು ಸಂದರ್ಭದಲ್ಲಿ ಅಭಿಮಾನದ ನಾಶವನ್ನು ಹೊಂದಲಿಲ್ಲ. ಹಾಗಾದರೆ ಭಾರತೀದೇವಿಗೆ ತಾರತಮ್ಯದಲ್ಲಿ
ಅತ್ಯಂತ ಚಿಕ್ಕವರಾದ ಇಂದ್ರ, ಯಮ ಮೊದಲಾದವರ ಸಂಗವಾಯ್ತಲ್ಲಾ ಎಂದರೆ:
ಹಾಗೆ ಆಗಬಾರದು ಎಂತಲೇ ಮುಖ್ಯಪ್ರಾಣನೂ ಕೂಡಾ ಉಳಿದ ನಾಲ್ಕೂಜನರಲ್ಲಿ ಇದ್ದ ಎಂದಿದ್ದಾರೆ
ಆಚಾರ್ಯರು.
[ಧರ್ಮರಾಜನ ಜೊತೆಗಿದ್ದಾಗ ದ್ರೌಪದಿ ದೇಹದಲ್ಲಿ ಶ್ಯಾಮಲ ಮಾತ್ರ.
ಮಿಕ್ಕ ಎಲ್ಲರೂ ಇದು ನನ್ನದೇಹ ಎನ್ನುವ ಅಭಿಮಾನವನ್ನು ಕಳೆದುಕೊಂಡಿರುತ್ತಾರೆ. ಅಭಿಮಾನವನ್ನು
ಕಳೆದುಕೊಂಡರು ಎಂದರೆ ಅವರು ಎಲ್ಲರೂ ಇಲ್ಲಾ ಎಂದೇ ಅರ್ಥ. ಶ್ಯಾಮಲೆಗೆ ಮಾತ್ರ ಇದು
ನನ್ನ ದೇಹ ಎನ್ನುವ ಅಭಿಮಾನವಿದೆ. ಆದಿನ ಕಳೆದು ಮುಂದಿನ ದಿನ ಶ್ಯಾಮಲೆಗೆ ಅಭಿಮಾನ ಕಳೆಯಿತು,
ಭಾರತಿಗೆ ಮಾತ್ರ ಅಭಿಮಾನ ಮತ್ತು ಅವಳು ಆಗ ಭೀಮನೊಂದಿಗಿರುತ್ತಾಳೆ. ಮೂರನೇ ದಿನ ಶಚಿಗೆ ಮಾತ್ರ
ಅಭಿಮಾನ ಮತ್ತು ಆಕೆ ಅರ್ಜುನನ ಜೊತೆಗಿರುತ್ತಾಳೆ. ಹೀಗೆ ಪ್ರತಿನಿತ್ಯ ಒಂದೊಂದು ಜೀವರು ಈ
ದೇಹದಮೇಲೆ ಅಭಿಮಾನ ತಾಳುತ್ತಾರೆ. ಆದ್ದರಿಂದಲೇ ಆ ದೇಹಕ್ಕೆ ಪ್ರತಿದಿನ ಹೊಸಹುಟ್ಟು. ಏಕೆಂದರೆ
ದೇಹವನ್ನು ಪ್ರವೇಶಿಸಿದ ಜೀವಕ್ಕೆ ಇದು ನನ್ನ ದೇಹ ಎಂದು ಹೊಸದಾಗಿ ಅಭಿಮಾನ ಹುಟ್ಟುತ್ತದೆ. ‘ಇದು ನನ್ನ ದೇಹ’ ಎನ್ನುವ
ಅಭಿಮಾನವೇ ಜನನ. ಆ ಅಭಿಮಾನದ ನಾಶವೇ ಮರಣ. ಇಲ್ಲಿ ಆಗಿದ್ದೂ ಕೂಡಾ ಇದೇ. ಪ್ರತಿನಿತ್ಯ ಹೊಸಜೀವಕ್ಕೆ ಈದೇಹ ನನ್ನದು ಎಂಬ ಅಭಿಮಾನ
ಹುಟ್ಟುತ್ತಿತ್ತು. ಆದ್ದರಿಂದ ಈ ದೇಹಕ್ಕೆ ಪ್ರತಿದಿನ ಹೊಸಹುಟ್ಟು. ಹೀಗೆ ಪ್ರತಿನಿತ್ಯ ಹೊಸದಾಗಿ ಹುಟ್ಟುತ್ತಿದ್ದರಿಂದಲೇ
ಅವಳು ಪ್ರತಿನಿತ್ಯ ಕನ್ಯೆಯಾಗುತ್ತಿದ್ದಳು.
ಒಟ್ಟಿನಲ್ಲಿ ಹೇಳಬೇಕೆಂದರೆ: ಅಭಿಮಾನಿಜೀವ ತಾನು ಯಾವಾಗ
ಅಭಿಮಾನ ಪಡೆದುಕೊಳ್ಳುತ್ತದೋ ಆಗ ಜನ್ಮ. ಇಲ್ಲದೇ ಇದ್ದಾಗ
ಅದೇ ಮರಣ. ಹೀಗೆ ಪ್ರತಿನಿತ್ಯ, ಯಾರೊಂದಿಗೆ
ರಮಿಸುತ್ತಿದ್ದಳೋ ಆಗ ಅವರ ನಿಯತಪತ್ನಿ ಅಭಿಮಾನ
ತಾಳುತ್ತಿದ್ದಳು. ಹೊಸಜನ್ಮ ಬರುತ್ತಿತ್ತು. ಮರುದಿನ ಅಭಿಮಾನವಿಲ್ಲ, ಆದ್ದರಿಂದ ಅವಳಿಲ್ಲ.
ಮತ್ತೊಂದು ಜೀವದ ಅಭಿಮಾನ ಬರುತ್ತಿದ್ದುದರಿಂದ ಅದು ಹೊಸ ಹುಟ್ಟಾಗುತ್ತಿತ್ತು. ಅದು ಹೊಸ ಹುಟ್ಟಾಗಿರುವುದರಿಂದ
ಅವಳು ಮತ್ತೆ ಕನ್ಯೆಯಾಗಿರುತ್ತಿದ್ದಳು.
ಆದರೆ ಇಲ್ಲೊಂದು ಪ್ರಶ್ನೆ ಬರುತ್ತದೆ: ಎಲ್ಲರೂ ತಿಳಿದಿರುವಂತೆ
ದ್ರೌಪದಿ ಭಾರತೀದೇವಿಯ ಅವತಾರ. ಅಂದರೆ ಭಾರತೀದೇವಿಯೇ ದ್ರೌಪದಿಯಾಗಿ ಅವತರಿಸಿ ಬಂದಿದ್ದಳು. ಅವಳಲ್ಲಿ ಶ್ಯಾಮಲೆ, ಶಚಿ ಮತ್ತು ಉಷಾದೇವಿ ಆಶ್ರಯ ಪಡೆದಿದ್ದರು.
ಆ ದೇಹ ಭಾರತೀದೇವಿಯ ನಿಯತವಾದ ದೇಹವೆಂದಾದರೆ, ಶ್ಯಾಮಲೆ ತಾನು ಅಭಿಮಾನಿಯಾದಾಗ, ಭಾರತೀದೇವಿಯೂ ಅಲ್ಲಿರಲೇಬೇಕಲ್ಲವೇ
ಎಂದರೆ: ಹೌದು ಎನ್ನುತ್ತಾರೆ ಆಚಾರ್ಯರು. ಶ್ಯಾಮಲೆ, ಶಚಿ, ಉಷಾ, ಹೀಗೆ ಯಾರೇ ಅಭಿಮಾನ ತಾಳಿದಾಗಲೂ,
ಭಾರತಿ ಅಲ್ಲಿರುತ್ತಿದ್ದಳು. ಭಾರತಿಗೆ ಖಂಡಿತವಾಗಿಯೂ ಕೂಡಾ ಅಭಿಮಾನ ನಾಶ ಆಗಲಿಲ್ಲ. ಅಂದರೆ ಮೊದಲದಿನ
ಯುಧಿಷ್ಠಿರನ ಜೊತೆ ಶ್ಯಾಮಲೆ ಇರುವಾಗ ಭಾರತೀದೇವಿಯೂ ಇರುತ್ತಿದ್ದಳು. ಆದರೆ ಶಚಿ ಮತ್ತು ಉಷಾದೇವಿಗೆ ಅಭಿಮಾನ ಇರುತ್ತಿರಲಿಲ್ಲ.
ಎರಡನೇದಿನ ಭೀಮನಜೊತೆಗಿರುವಾಗ ಕೇವಲ ಭಾರತೀದೇವಿಯ ಅಭಿಮಾನ. ಶ್ಯಾಮಲೆ, ಶಚಿ ಮತ್ತು ಉಷಾ ಅಭಿಮಾನ
ಕಳೆದುಕೊಳ್ಳುತ್ತಿದ್ದರು. ಮೂರನೇ ದಿನ ಶಚಿ ಮತ್ತು ಭಾರತೀದೇವಿ, ಅದೇರೀತಿ ನಾಲ್ಕನೇ ದಿನ ಉಷಾ
ಮತ್ತು ಭಾರತೀದೇವಿ ಅಭಿಮಾನ ಹೊಂದಿರುತ್ತಿದ್ದರು, ಉಳಿದವರು ಕಳೆದುಕೊಳ್ಳುತ್ತಿದ್ದರು. ಹೀಗೆ
ಭಾರತೀದೇವಿಯ ಅಭಿಮತಿ ಅದು ನಿಯತ. ಅದು ಸದಾ ಇರುತ್ತಿತ್ತು. ಮಿಕ್ಕವರಲ್ಲಿ ಅದು ತಮ್ಮ-ತಮ್ಮ ಗಂಡಂದಿರ ಕಾಲಕ್ಕೆ ಮಾತ್ರ ಬರುತ್ತಿತ್ತು. ಹಾಗಾಗಿ ಭಾರತೀದೇವಿಗೆ ನಿಶ್ಚಿತವಾಗಿ ಅಭಿಮತಿ ನಾಶ ಇರಲಿಲ್ಲ.
ಈರೀತಿ ಹೇಳಿದಾಗ ಇಲ್ಲಿ ಇನ್ನೊಂದು ದೊಡ್ಡ ಪ್ರಶ್ನೆ
ಎದುರಾಗುತ್ತದೆ. ಭಾರತೀದೇವಿಯ ಅಭಿಮಾನ ನಾಶವಿಲ್ಲದೇ ಯುಧಿಷ್ಠಿರ, ಅರ್ಜುನ ಮತ್ತು ನಕುಲ ಸಹದೇವರು
ಹೇಗೆ ತಮ್ಮ ಪತ್ನಿಯರನ್ನು ಮಾತ್ರ ಸೇರುತ್ತಿದ್ದರು ? ಅಭಿಮಾನಿನಿಯಾದ ದೇಹವನ್ನು
ಅವರು ಭಾರತೀ ದೇವಿಯನ್ನು ಹೊರತುಪಡಿಸಿ ಹೇಗೆ ಸೇರಲು ಸಾಧ್ಯ ಎಂದರೆ: ಮುಖ್ಯಪ್ರಾಣನೂ ಕೂಡಾ ಯುಧಿಷ್ಠಿರ, ಅರ್ಜುನ, ನಕುಲ-ಸಹದೇವರಲ್ಲಿಯೂ ಆವಿಷ್ಟನಾಗಿ,
ದ್ರೌಪದಿಯಲ್ಲಿರುವ ಭಾರತೀದೇವಿಯೊಂದಿಗೆ ರಮಿಸುತ್ತಾನೆ ಎನ್ನುತ್ತಾರೆ ಆಚಾರ್ಯರು].
ಹಾಗಿದ್ದರೆ ರಮಣ ಕ್ರಿಯೆ ಹೇಗೆ ನಡೆಯುತ್ತಿತ್ತು ಎಂದರೆ:
ಧರ್ಮ್ಮಾತ್ಮಜಾದಿಷು ಮರುತ್ ಪ್ರತಿವಿಷ್ಟ ಏಷಾಂ ಬುದ್ಧಿಂ
ವಿಮೋಹ್ಯ ರಮತೇ ಸತತಂ ತಯಾ ಯತ್ ।
ಶುದ್ಧೈವ ಸಾ ಹಿ ತತ ಏವ ದಿನೇದಿನೇ ಚ ಸಮ್ಮೋಹತೋ ಮರಣವದ್
ಭವತೀಹ ಕನ್ಯಾ ॥೧೯.೧೮೫॥
ಧರ್ಮರಾಜ ಮೊದಲಾದವರಲ್ಲಿ ಪ್ರವೇಶ ಮಾಡಿದ ಮುಖ್ಯಪ್ರಾಣನು ಅವರ
ಬುದ್ಧಿಯನ್ನು ಮಾಯಕದಲ್ಲಿರಿಸಿ ನಿರಂತರವಾಗಿ ಭಾರತಿಯೊಂದಿಗೆ ರಮಿಸುತ್ತಾನೆ, ಆಕಾರಣದಿಂದ ಪ್ರತಿದಿನವೂ
ಕೂಡಾ ಅವಳು ಶುದ್ಧಳಾಗಿಯೇ ಇದ್ದಳು. ದೇಹದಲ್ಲಿ ಮೋಹವನ್ನು ಹೊಂದದ್ದರಿಂದ ಅದು ಸಾವಿನಂತೆ
ಸಂಭವಿಸುತ್ತಿತ್ತು. ಮತ್ತೆ ಮರಳಿ ಆಕೆ ಕನ್ಯೆಯಾಗುತ್ತಿದ್ದಳು.
[ಧರ್ಮರಾಜನಿಗೆ ಶ್ಯಾಮಲೆಯೊಂದಿಗೆ ರಮಣ ಮಾಡುವಾಗ ಅವನಿಗೆ ಈ ದೇಹದಲ್ಲಿ
ದ್ರೌಪದಿ ಇದ್ದಾಳೆ ಎನ್ನುವುದು ಗೊತ್ತೇ ಆಗುತ್ತಿರಲಿಲ್ಲ. ಧರ್ಮರಾಜನಿಗೆ ದ್ರೌಪದಿಯೊಂದಿಗಿನ
ಸಂಭೋಗ ಎಂದು ನೋಡಿದರೆ ಅಲ್ಲಿ ಕೇವಲ ಶ್ಯಾಮಲೆ ಮಾತ್ರ ಇದ್ದಾಳೆ ಎಂಬ ಅರಿವು ಅಷ್ಟೇ. ಅಲ್ಲಿ
ಭಾರತೀದೇವಿ ಇದ್ದಾಳೆ, ನನ್ನೊಳಗೆ ಮುಖ್ಯಪ್ರಾಣ ಇದ್ದಾನೆ, ಅವರಿಬ್ಬರೂ ರಮಣ ಮಾಡುತ್ತಿದ್ದಾರೆ ಇದ್ಯಾವುದೂ ಅವನಿಗೆ ತಿಳಿಯುವುದಿಲ್ಲ. ಅದೇ ರೀತಿ
ಅರ್ಜುನ, ನಕುಲ-ಸಹದೇವ. ಹೀಗೆ ಪ್ರಾಣ-ಭಾರತಿಯರು ಎಲ್ಲರ ದೇಹದಲ್ಲಿದ್ದು ಸತತ ರಮಿಸುತ್ತಿದ್ದರು.
`ಯುಧಿಷ್ಠಿರ, ಅರ್ಜುನ, ನಕುಲ ಸಹದೇವರು ಒಂದೊಂದು ದಿನ ಮಾತ್ರ ತಮ್ಮ ಪತ್ನಿಯರಲ್ಲಿ ರಮಿಸಿದರೆ, ಭೀಮ ಮಾತ್ರ ಎಲ್ಲರಲ್ಲೂ ಆವಿಷ್ಟನಾಗಿ
ಪ್ರತಿನಿತ್ಯ ರಮಿಸುತ್ತಿದ್ದ.
ಶ್ಯಾಮಲೆ, ಶಚಿ, ಉಷೆಯರಿಗೆ
ಮಾತ್ರ ಅವರಿಗೆ ನಿಗದಿಪಡಿಸಿದ ದಿನ ಕಳೆದಮೇಲೆ ದೇಹದ
ಅಭಿಮಾನ ನಾಶವಾಗುತ್ತಿತ್ತು. ಆದ್ದರಿಂದ ಅದು ಮರಣದಂತೆ ಆಗುತ್ತಿತ್ತು. ಉದಾಹರಣೆಗೆ ಮೊದಲ ದಿನ ಯುಧಿಷ್ಠಿರನೊಂದಿಗೆ
ದ್ರೌಪದಿ ಇದ್ದಳು ಎಂದರೆ ಅಲ್ಲಿ ಶ್ಯಾಮಲೆ ಮಾತ್ರ
ಭಾರತಿಯ ಜೊತೆಗಿದ್ದಳು. ಭಾರತಿ ಧರ್ಮರಾಜನ ಒಳಗಿರುವ ಮುಖ್ಯಪ್ರಾಣನನ್ನು ಮಾತ್ರ ಸಂಪರ್ಕ
ಮಾಡುತ್ತಿದ್ದಳು. ಮಾರನೇ ದಿನ ಶ್ಯಾಮಲೆ ಅಭಿಮಾನ ಕಳೆದುಕೊಂಡಾಗ ದೇಹಕ್ಕೆ ಮರಣ ಬಂತು ಎಂದರ್ಥ. ಮರುದಿನ
ಶಚಿ ಹೊಸದಾಗಿ ಹುಟ್ಟುತ್ತಿದ್ದಳು ಮತ್ತು ಅರ್ಜುನನನ್ನು ಸೇರುತ್ತಿದ್ದಳು. ಹೀಗೆ
ಮುಂದುವರಿಯುತ್ತಿತ್ತು.
ಇದು ನನ್ನ ದೇಹ ಎಂಬ ಅರಿವು ಇಲ್ಲದ ಕಾರಣ ಪ್ರತಿನಿತ್ಯ ಸಾವು
ಎಂದರ್ಥ. ಧರ್ಮರಾಜನ ಜೊತೆಗೆ ಸಂಭೋಗ ಮಾಡಿದ ಮರುದಿನ ಶ್ಯಾಮಲೆಗೆ ಸಾವು. ಏಕೆಂದರೆ ಅವಳು ತನ್ನ
ಅಭಿಮಾನ ಕಳೆದುಕೊಳ್ಳುತ್ತಿದ್ದಳು. ಹೀಗೆ ಅಭಿಮಾನ ಕಳೆದುಕೊಳ್ಳುವುದನ್ನು ಇಲ್ಲಿ ಮರಣದಂತೆ ಎಂದು
ಹೇಳಿದ್ದಾರೆ.
ನೋಸುಪ್ತಿವತ್ ತ್ವಿದಮತೋsನ್ಯವಶತ್ವತೋ ಹಿ ದೇಹಸ್ಯ ಸಂಸ್ಮೃತಿತ ಏವ ಹರೇರ್ನ್ನ ಮೋಹಃ ।
ನಾsವೇಶವಚ್ಚ ತತ ಏವ ಮೃತೇಃ
ಸ್ವರೂಪಮೇತತ್ ತ್ವತಃ ಪ್ರತಿದಿನಂ ಜನನಾದ್ಧಿ ಕನ್ಯಾ ॥೧೯.೧೮೬॥
ಈಪ್ರಕ್ರಿಯೆ ಸುಪ್ತಿಯಂತಲ್ಲ. ಏಕೆಂದರೆ ದೇಹಕ್ಕೆ ಅನ್ಯರ ಅಧೀನವಿರುವುದರಿಂದ.
ಪರಮಾತ್ಮನ ಸ್ಮರಣೆ ಇರುವುದರಿಂದ ಇದು ಮೋಹವಲ್ಲ. ಆವೇಶ
ತರವೂ ಅಲ್ಲ. ಏಕೆಂದರೆ ಪರಮಾತ್ಮನ ಸ್ಮರಣೆ ಅಲ್ಲಿರುವ ಜೀವಕ್ಕಿರುವುದರಿಂದ. ಆ ಕಾರಣದಿಂದಲೇ ಇದು ಸಾವಿನಂತೆ.
ಹೀಗಾಗಿ ಪ್ರತಿದಿನವೂ ಕೂಡಾ ಹೊಸ ಹುಟ್ಟಿನಿಂದ
ಆಕೆ ಕನ್ಯೆಯಾಗಿಯೇ ಇದ್ದಳು.
[ಇದು ಏಕೆ ಮರಣದಂತೆ ಎಂದರೆ: ಇಲ್ಲಿ ನಾಲ್ಕು ವಿಷಯಗಳನ್ನು
ಹೇಳುತ್ತಾರೆ. ಅಭಿಮಾನ ನಾಶವಾಗುವುದು ನಾಲ್ಕು ಸ್ಥಾನಗಳಲ್ಲಿ ೧. ಸುಪ್ತಿಯಲ್ಲಿ, ೨. ಮೋಹಬಂದಾಗ, ೩. ಯಾರಾದರೂ ದೇಹವನ್ನು
ವಶಪಡಿಸಿಕೊಂಡಾಗ(ಆವೇಶ ಬಂದಾಗ) ೪. ಮರಣ ಹೊಂದಿದಾಗ. ಈ ನಾಲ್ಕು ಸ್ಥಾನಗಳಲ್ಲಿ ಜೀವಕ್ಕೆ ದೇಹದಮೇಲಿನ
ಅಭಿಮಾನ ನಾಶವಾಗುತ್ತದೆ. ಇಲ್ಲಿ ಮರಣದಂತೆ ಎಂದು ಹೇಳಿರುವುದು ಮಿಕ್ಕ ಮೂರು ಸರಿ ಹೊಂದದೇ
ಇರುವುದರಿಂದ. ಸುಪ್ತಿಯಲ್ಲಿ ಜೀವಕ್ಕೆ
ಅಭಿಮಾನವಿಲ್ಲ ಆದರೆ ಇದು ಸುಪ್ತಿಯಂತೆ ಅಲ್ಲಾ. ಏಕೆಂದರೆ ಅವರೆಲ್ಲರೂ ಆ ದೇಹದಲ್ಲಿದ್ದು ಭಕ್ತಿಪೋರ್ವಕವಾಗಿ
ಹರಿಯ ಸ್ಮರಣೆಯಲ್ಲಿದ್ದಾರೆ. ಆದ್ದರಿಂದ ಮೋಹವೂ ಅಲ್ಲ. (ಮೋಹ ಎಂದರೆ ಭಗವಂತನನ್ನು ಮರೆಯುವುದು).
ಇದು ಆವೇಶ ಕೂಡಾ ಅಲ್ಲ. ಏಕೆಂದರೆ ಬೇರೆ ಜೀವದ ಆವೇಶ ಬಂದಾಗ ಆವಿಷ್ಟನಾದ ಜೀವ ಸ್ಮರಣೆ ಮಾಡುತ್ತಾನೆ
ಆದರೆ ದ್ರೌಪದಿಯ ದೇಹದಲ್ಲಿ ಹಾಗಿಲ್ಲ. ಹೀಗಾಗಿ ಇದು
ಮರಣದಂತೆ, ಪ್ರತಿದಿನವೂ ಹೊಸಹುಟ್ಟಿನಂತೆ. ಹೀಗೆ ಪ್ರತಿದಿನವೂ ಅವಳು ಕನ್ಯೆಯಾಗಿರುತ್ತಿದ್ದಳು].
ಏವಂ ಸ ವಾಯುರನುವಿಷ್ಟಯುಧಿಷ್ಠಿರಾದಿಭೀಮಾತ್ಮನೈವ ರಮತೇ ಸತತಂ
ತಯೈಕಃ ।
ಅನ್ಯಾದೃಶಾ ಹಿ ಸುರಭುಕ್ತಿರತೋsನ್ಯರೂಪಾ ಮಾನುಷ್ಯಭುಕ್ತಿರಿತಿ ನಾತ್ರ ವಿಚಾರ್ಯ್ಯಮಸ್ತಿ ॥೧೯.೧೮೭॥
ಈರೀತಿಯಾಗಿ ಮುಖ್ಯಪ್ರಾಣನು ಯುಧಿಷ್ಠಿರ ಮೊದಲಾದವರಲ್ಲಿ
ಪ್ರವೇಶಮಾಡಿ ನಿರಂತರವಾಗಿ ಅವಳಿಂದ ಕ್ರೀಡಿಸುತ್ತಿದ್ದ. ದೇವತೆಗಳ ಸಂಭೋಗವು ಬೇರೆರೀತಿ ಇರುತ್ತದೆ
ಮತ್ತು ಅದು ಮನುಷ್ಯರ ಸಂಭೋಗಕ್ಕಿಂತ ವಿಲಕ್ಷಣವಾದುದು. ಹೀಗೆ ತಿಳಿದು, ಇಲ್ಲಿ ಹೆಚ್ಚು ವಿಚಾರ
ಮಾಡುವ ಅಗತ್ಯವಿಲ್ಲ.
[ಹೀಗೆ ಮುಖ್ಯಪ್ರಾಣ ಯುಧಿಷ್ಠಿರ, ಅರ್ಜುನ, ನಕುಲ-ಸಹದೇವರಲ್ಲಿ ತಾನು ಇದ್ದೇ, ಜೊತೆಗೆ
ಭೀಮನಾಗಿದ್ದು, ದ್ರೌಪದಿಯ ಜೊತೆಗೆ ತಾನೊಬ್ಬನೇ ಪ್ರತಿದಿನ ರಮಿಸುತ್ತಿದ್ದ. ಧರ್ಮರಾಜನಲ್ಲಿ ತಾನು
ಆವಿಷ್ಟನಾಗಿ ದ್ರೌಪದಿಯಲ್ಲಿರುವ ಭಾರತಿಯೊಂದಿಗೆ
ರಮಣ ಮಾಡುತ್ತಿದ್ದ. ಭೀಮನಾಗಿಯೂ ಸಾಕ್ಷಾತ್ ರಮಣ ಮಾಡುತ್ತಿದ್ದ. ಅರ್ಜುನನಲ್ಲಿ
ಆವಿಷ್ಟನಾಗಿ ದ್ರೌಪದಿಯಲ್ಲಿರುವ ಭಾರತಿಯ ಜೊತೆಗೆ ರಮಣ ಮಾಡುತ್ತಿದ್ದ. ನಕುಲ ಸಹದೇವರಲ್ಲಿ
ಆವಿಷ್ಟನಾಗಿ ದ್ರೌಪದಿಯಲ್ಲಿರುವ ಭಾರತಿ ಜೊತೆಗೇ ರಮಣ ಮಾಡುತ್ತಿದ್ದ. ಮಿಕ್ಕ ಎಲ್ಲರಿಗೆ ಒಂದು
ದಿನವಾದರೆ, ಭೀಮ ಆವಿಷ್ಟನಾಗಿಯೂ, ಸಾಕ್ಷಾತ್ ಆಗಿಯೂ ಪ್ರತಿದಿನವೂ ರಮಣ ಮಾಡುತ್ತಿದ್ದ.
ಇದೇನಿದು ? ಧರ್ಮರಾಜನಲ್ಲಿ ಯಮ, ದ್ರೌಪದಿಯಲ್ಲಿ ಶ್ಯಾಮಲೆ, ಅದಲ್ಲದೆ,
ದ್ರೌಪದಿಯಲ್ಲಿ ಭಾರತಿಯೂ ಇದ್ದಾಳೆ, ಧರ್ಮರಾಜನಲ್ಲಿ ಮುಖ್ಯಪ್ರಾಣನೂ ಇದ್ದಾನೆ. ಹೀಗಿರುವಾಗ ಹೇಗೆ
ಬೇರೆಬೇರೆಯಾಗಿ ರಮಣ ಮಾಡಲು ಸಾಧ್ಯ? ಇದು
ಅರ್ಥವಾಗುತ್ತಿಲ್ಲವಲ್ಲಾ ಎಂದರೆ: ಈ ಕುರಿತು ವಿಚಾರ ಮಾಡುವ ಅಗತ್ಯವಿಲ್ಲ. ಇದು
ಅನ್ಯಾದೃಶವಾದುದು. ಯಾರೂ ಅರಿಯಲಾಗದಂತಹ, ಮನುಷ್ಯರಲ್ಲಿ ನಡೆಯಲು ಸಾಧ್ಯವಿಲ್ಲದ, ಸುರಭುಕ್ತಿ ಇದಾಗಿದೆ. ದೇವತೆಗಳು ಹೀಗೆ ರಮಣ ಮಾಡುತ್ತಾರೆ . ದೇವತೆಗಳಲ್ಲಿ ಇದು
ಸಾಧ್ಯವಿದೆ. ಇದು ದೇವಗುಹ್ಯ ಮತ್ತು ದೇವತೆಗಳಿಗೆ ಮಾತ್ರ ಅರ್ಥವಾಗುವಂತಹ ರಮಣಕ್ರಿಯೆ. ಆದ್ದರಿಂದ
ಇದು ಮಿಕ್ಕ ಯಾರಿಗೂ ತಿಳಿಯಲು ಸಾಧ್ಯವಾದುದಲ್ಲ.
ಹೀಗೆ ‘ಮನುಷ್ಯರಲ್ಲಿ ಸಾಧ್ಯವಾಗದ, ಮನುಷ್ಯರಿಗೆ ಅರ್ಥವಾಗದ,
ದೇವತೆಗಳಲ್ಲಿ ಮಾತ್ರ ನಡೆಯುವ, ಬೇರೆಯೇ ರೀತಿಯಾದ ಈ ಕ್ರಿಯೆಯಕುರಿತು ಹೆಚ್ಚು ವಿಚಾರ ಮಾಡುವ
ಅಗತ್ಯವಿಲ್ಲ’ ಎಂದು ಹೇಳಿ, ಆಚಾರ್ಯರು ದ್ರೌಪದಿಯ ದಾಂಪತ್ಯ ಜೀವನದ ಬಗೆಗೆ ಯಾರೂ
ಹೇಳದ ರಹಸ್ಯದ ಇಣುಕು ನೋಟವನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ].
No comments:
Post a Comment