ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 7, 2021

Mahabharata Tatparya Nirnaya Kannada 20: 238 - 245

             ದೈತ್ಯಾಶ್ಚ ನಾಗಾಶ್ಚ ಪಿಶಾಚಯಕ್ಷಾ ಹತಾಃ ಸರ್ವೇ ತದ್ವನಸ್ಥಾ ಹಿ ತಾಭ್ಯಾಮ್ ।

ಋತೇ ಚತುಷ್ಪಕ್ಷಿಣಶ್ಚಾಶ್ವಸೇನಂ ಮಯಂ ಚ ನಾನ್ಯತ್ ಕಿಞ್ಚಿದಾಸಾತ್ರ ಮುಕ್ತಮ್ ॥೨೦.೨೩೮॥

 

ಖಾಣ್ಡವವನದಲ್ಲಿ ಎಲ್ಲರೂ ಸುಟ್ಟುಹೋದರು. ಅಲ್ಲಿ ಅಡಗಿದ್ದ ದೈತ್ಯರು, ನಾಗರು, ಪಿಶಾಚಿಗಳು, ಯಕ್ಷರು, ಹೀಗೆ ಎಲ್ಲರೂ ಕೂಡಾ ಕೃಷ್ಣಾರ್ಜುನರಿಂದ ಸಾಯಿಸಲ್ಪಟ್ಟರು. ನಾಲ್ಕು ಪಕ್ಷಿಗಳು, ಅಶ್ವಸೇನ ಎನ್ನುವ ತಕ್ಷಕನ ಮಗ  ಮತ್ತು ದೈತ್ಯಶಿಲ್ಪಿ ಮಯ ಇವರನ್ನು ಬಿಟ್ಟರೆ ಉಳಿದ ಯಾವುದೇ ಪ್ರಾಣಿಯೂ ಅಲ್ಲಿ ಬದುಕುಳಿಯಲಿಲ್ಲ.

 

ಅಯಮಗ್ನೇ ಜರಿತೇತ್ಯಾದಿಮನ್ತ್ರೈಃ ಸ್ತುತ್ವಾ ವಹ್ನಿಂ ಪಕ್ಷಿಣೋ ನೋಪದಗ್ಧಾಃ ।

ಅಶ್ವಸೇನಃ ಪುತ್ರಕಸ್ತಕ್ಷಕಸ್ಯ ಮಾತ್ರಾ ಗ್ರಸ್ತಃ ಪ್ರಾತಿಲೋಮ್ಯೇನ ಕಣ್ಠೇ ॥೨೦.೨೩೯॥

 

ಅಯಮಗ್ನೇ ಜರಿತಾ (ಋಗ್ವೇದ ೧೦.೧೪೨. ೧-೮) ಇತ್ಯಾದಿ ಮಂತ್ರಗಳಿಂದ ಅಗ್ನಿಯ ಒಳಗಿರುವ ನಾರಾಯಣನನ್ನು ಸ್ತೋತ್ರಮಾಡಿದ ನಾಲ್ಕು ಪಕ್ಷಿಗಳು ಸುಡಲ್ಪಡಲಿಲ್ಲ. ತಕ್ಷಕನ ಮಗನಾಗಿರುವ ಅಶ್ವಸೇನನು ತಾಯಿಯಿಂದ ಪ್ರಾತಿಲೋಮ್ಯವಾಗಿ ನುಂಗಲ್ಪಟ್ಟು ಬದುಕುಳಿದನು (ಅಶ್ವಸೇನನನ್ನು ರಕ್ಷಿಸಲು ಅವನ ತಾಯಿ ಅವನನ್ನು ನುಂಗಿದಳು. ಆಗ ಅವನ ತಲೆ ಅವಳ ಬಾಲದಲ್ಲಿ, ಬಾಲ ಅವಳ ಬಾಯಿಯಲ್ಲಿ ಸೇರಿಕೊಂಡಿತು. ಹೀಗೆ ವ್ಯತ್ಯಸ್ತ್ಯವಾಗಿ ಕೊರಳಲ್ಲಿ ನುಂಗಲ್ಪಟ್ಟ ಅವನು ಬದುಕುಳಿದನು).   

 

ಛಿನ್ನೇsರ್ಜ್ಜುನೇನಾನ್ತರಿಕ್ಷೇ ಪತನ್ತ್ಯಾಸ್ತಸ್ಯಾಃ ಶಕ್ರೇಣಾವಿತಶ್ಛಿನ್ನಪುಚ್ಛಃ ।

ವಧಾನ್ಮಾತುಃ ಪುಚ್ಛಭಙ್ಗಾಚ್ಚ ರೋಷಾದ್ಧನ್ತುಂ ಪಾರ್ತ್ಥಂ ಕರ್ಣ್ಣತೂಣೀರಗೋsಭೂತ್ ॥೨೦.೨೪೦॥

 

ಆಕಾಶದಲ್ಲಿ ಹಾರುತ್ತಿರುವ ತಕ್ಷಕನ ಹೆಂಡತಿಯ ಕತ್ತು ಕತ್ತರಿಸಲ್ಪಡಲು, ಇಂದ್ರನಿಂದ ರಕ್ಷಿಸಲ್ಪಡುವವನಾಗಿ,  ಆದರೆ ಬಾಲವನ್ನು ಕಳೆದುಕೊಂಡವನಾಗಿ, ತಾಯಿಯ ಕೊಲೆ ಹಾಗೂ ತನ್ನ ಬಾಲ ಹೋಗಿದ್ದುದರಿಂದ ಸಿಟ್ಟುಗೊಂಡ ಅಶ್ವಸೇನ ಅರ್ಜುನನನ್ನು ಕೊಲ್ಲಲು ಕರ್ಣನ ಬತ್ತಳಿಕೆಯಲ್ಲಿ ಸೇರಿಕೊಂಡನು.

[ಮಹಾಭಾರತ :  ‘ತಕ್ಷಕಸ್ತು ನ ತತ್ರಾsಸಿನ್ನಾಗರಾಜೋ ಮಹಾಬಲಃ ।   ದಹ್ಯಮಾನೇ ವನೇ ತಸ್ಮಿನ್ ಕುರುಕ್ಷೇತ್ರಂ ಗತೋ ಹಿ ಸಃ ।  ಅಶ್ವಸೇನೋsಭವತ್  ತತ್ರ ತಕ್ಷಕಸ್ಯ  ಸುತೋ ಬಲಿ(ಆದಿಪರ್ವ ೨೫೩.೪-೫). ತಕ್ಷಕ ಆ ಸಂದರ್ಭದಲ್ಲಿ ಅಲ್ಲಿರಲಿಲ್ಲ, ಅವನು ಕುರುಕ್ಷೇತ್ರಕ್ಕೆ ಹೋಗಿದ್ದ. ಅಶ್ವಸೇನ ಎನ್ನುವ ತಕ್ಷಕನ ಮಗ ಅಲ್ಲಿದ್ದ.  ‘ ತಸ್ಮಿನ್ ವನೇ ದಹ್ಯಮಾನೇ ಷಡಗ್ನಿರ್ನ  ದದಾಹ ಚ ।  ಅಶ್ವಸೇನಂ ಮಯಂ ಚೈವ   ಚತುರಃ ಶಾರ್ಙ್ಗಕಾಂಸ್ತಥಾ’ (ಆದಿಪರ್ವ ೨೫೪.೪೭) ‘ಆ ಕಾಡು ಸುಡುತ್ತಿರಲು, ಅಶ್ವಸೇನ, ಮಯ, ಮತ್ತು ನಾಲ್ಕು ಶಾರ್ಙ್ಗಕಪಕ್ಷಿಗಳು ಮಾತ್ರ  ಸಾಯಲಿಲ್ಲ. ಈ ಶಾರ್ಙ್ಗಕ ಪಕ್ಷಿಗಳು ಜ್ಞಾನಿಗಳು’.

ಪಕ್ಷಿಗಳಿಗೆ ವಿದ್ಯೆಯಲ್ಲಿ ಅಧಿಕಾರವಿದೆಯೇ ಎನ್ನುವುದನ್ನು ವಿವರಿಸುತ್ತಾ ಆಚಾರ್ಯರು ಬ್ರಹ್ಮಸೂತ್ರಭಾಷ್ಯದಲ್ಲಿ ಮೇಲಿನ ಮಾತನ್ನು ತೆಗೆದುಕೊಳ್ಳುತ್ತಾರೆ. ಮನುಷ್ಯರಿಗೆ ಮಾತ್ರ ವಿದ್ಯೆಯಲ್ಲಿ ಅಧಿಕಾರವೇ ಎಂದರೆ  ಅದಕ್ಕೆ ವೇದವ್ಯಾಸರ ಉತ್ತರ- ‘ಸಾಮಾನ್ಯವಾಗಿ ಮನುಷ್ಯರಿಗೆ.  ಆದರೆ ಯಾರಿಗೂ  ಕೂಡಾ ಅಧಿಕಾರ ಇರಬಹುದು’. ಅಂದರೆ ಮನುಷ್ಯರಿಗಿಂತ ಹೊರತಾಗಿಯೂ ಕೂಡಾ ಅಧಿಕಾರ ಇದೆ ಎಂದರ್ಥ. ಇಲ್ಲಿ ಶಾರ್ಙ್ಗಕಪಕ್ಷಿಗಳು ಜ್ಞಾನಿಗಳು. ಅವು ವೇದವನ್ನು ಕಂಡವು. ‘ಅಯಮಗ್ನೇ ಜರಿತಾ... ಎಂದು ಋಗ್ವೇದದಲ್ಲಿ  ಈ ಪಕ್ಷಿಗಳು ಕಂಡ ಮಂತ್ರವಿದೆ. ಹಾಗಾಗಿ ಕೇವಲ ಮನುಷ್ಯರಿಗೆ ಮಾತ್ರ ವೇದದಲ್ಲಿ ಅಧಿಕಾರ ಅಲ್ಲ].

 

[ಮಯನ ಕುರಿತು ಹೇಳುತ್ತಾರೆ:]

ಮಯಃ ಕೃಷ್ಣೇನಾsತ್ತಚಕ್ರೇಣ ದೃಷ್ಟೋ ಯಯೌ ಪಾರ್ತ್ಥಂ ಶರಣಂ ಜೀವನಾರ್ಥೀ ।

ಪಾರ್ತ್ಥಾರ್ತ್ಥಮೇನಂ ನ ಜಘಾನ ಕೃಷ್ಣಃ ಸ್ವಭಕ್ತಶ್ಚೇತ್ಯತಿಮಾಯಂ ಪರೇಶಃ ॥೨೦.೨೪೧

 

ಮಯನು ಚಕ್ರವನ್ನು ಹಿಡಿದಿರುವ ಕೃಷ್ಣನಿಂದ ನೋಡಲ್ಪಟ್ಟವನಾಗಿ, ಜೀವನ ಬೇಕು ಎನ್ನುವ ಬಯಕೆಯಿಂದ ಅರ್ಜುನನನ್ನು ಶರಣು ಹೊಂದಿದ. ಸರ್ವಸಮರ್ಥನಾದ ಕೃಷ್ಣನು ಅರ್ಜುನನಿಗಾಗಿ ಮತ್ತು ತನ್ನ ಭಕ್ತ ಎನ್ನುವ ಕಾರಣಕ್ಕೆ ಕಪಟವಿಲ್ಲದ ಮಯನನ್ನು ಕೊಲ್ಲಲಿಲ್ಲ.

 

[ಮಯ ನೇರವಾಗಿ  ಕೃಷ್ಣನಲ್ಲಿ ಶರಣುಹೊಂದಬಹುದಿತ್ತು. ಅರ್ಜುನನನ್ನು ಶರಣುಹೊಂದಿ, ಅರ್ಜುನನ ಮೂಲಕ ಕೃಷ್ಣನಿಂದ ಏಕೆ ಜೀವ ಉಳಿಸಿಕೊಂಡ ಎನ್ನುವುದನ್ನು ವಿವರಿಸುತ್ತಾರೆ:]

ದೇವಾರಿರಿತ್ಯೇವ ಮಯಿ ಪ್ರಕೋಪಃ ಕೃಷ್ಣಸ್ಯ ತೇನಾಹಮಿಮಂ ಪುರನ್ದರಮ್ ।

ಪಾರ್ತ್ಥಾತ್ಮಕಂ ಶರಣಂ ಯಾಮಿ ತೇನ ಕೃಷ್ಣಪ್ರಿಯಃ ಸ್ಯಾಮಿತಿ ತಸ್ಯ ಬುದ್ಧಿಃ ೨೦.೨೪೨

 

‘ದೇವತೆಗಳ ಶತ್ರು ಎಂದು ನನ್ನಲ್ಲಿ ಕೃಷ್ಣನಿಗೆ ಕೋಪವೇ ಇದೆ. ಆ ಕಾರಣದಿಂದ ನಾನು ಈ ಅರ್ಜುನನ ರೂಪದಲ್ಲಿರುವ ಇಂದ್ರನನ್ನೇ ರಕ್ಷಣೆಗಾಗಿ ಹೊಂದುತ್ತೇನೆ. ಅದರಿಂದ ಕೃಷ್ಣನಿಗೆ ಪ್ರಿಯನಾಗಬಹುದು’  ಎಂದುಕೊಡ ಮಯ  ಅರ್ಜುನನಲ್ಲಿ ಶರಣುಹೊಂದಿದ.

[ಮಹಾಭಾರತ ಆದಿಪರ್ವ: ‘ತಥಾsಸುರಂ ಮಯಂ ನಾಮ ತಕ್ಷಕಸ್ಯ ನಿವೇಶನಾತ್ । ವಿಪ್ರದ್ರವನ್ತಂ ಸಹಸಾ ದದರ್ಶ ಮಧುಸೂದನಃ(೨೫೪.೩) ‘ ‘ಜಿಘಾಂಸುರ್ವಾಸುದೇವಸ್ತಂ ಚಕ್ರಮುಧ್ಯಮ್ಯ ಧಿಷ್ಠಿತಃ । ಸ ಚಕ್ರಮುಧ್ಯತಂ ದೃಷ್ಟ್ವಾ  ದಿಧಕ್ಷನ್ತಂ ಚ ಪಾವಕಮ್ । ಅಭಿಧಾಯಾರ್ಜುನೇತ್ಯೇವಂ ಮಯಸ್ತ್ರಾಹೀತಿ ಚಾಬ್ರವೀತ್(೪೨).   ಕೃಷ್ಣ ಅವನನ್ನು ಕೊಲ್ಲಲು ಹೋದ ಎಂದು ಇಲ್ಲಿ ಹೇಳಿರುವುದು ದರ್ಶನ ಭಾಷೆ. ‘ಕೃಷ್ಣ ನನ್ನನ್ನು ಕೊಲ್ಲಲಿಕ್ಕೆ ಬರುತ್ತಿದ್ದಾನೆ ಎಂದು ಮಯ ತಿಳಿದುಕೊಂಡ. ಅವನ ಮಾನಸಿಕ ಪರಿಭಾಷೆಯನ್ನು ವೇದವ್ಯಾಸರು ‘ಜಿಘಾಂಸುರ್ವಾಸುದೇವಃ’ ಎಂದು ಹೇಳಿರುವುದೇ ಹೊರತು, ಅವನು ನನ್ನ ಭಕ್ತ ಎನ್ನುವುದು ಕೃಷ್ಣನಿಗೆ ಗೊತ್ತಿತ್ತು. ‘ತಂ ಪಾರ್ಥನಾಭಯೇ ದತ್ತೇ ನಮುಚೇರ್ಭ್ರಾತರಂ ಮಯಮ್ ।  ನ ಹನ್ತುಮೈಚ್ಛದ್  ದಾಶಾರ್ಹಃ ಪಾವಕೋ ನ ದದಾಹ ಚ । ತದ್ವನಂ ಪಾವಕೋ ಧೀಮಾನ್ ದಿನಾನಿ ದಶ ಪಞ್ಚ ಚ । ದದಾಹ ಕೃಷ್ಣಪಾರ್ಥಾಭ್ಯಾಂ ರಕ್ಷಿತಃ ಪಾಕಶಾಸನಾತ್’(೪೫-೪೬) ಅರ್ಜುನನಿಂದ ಅಭಯ ಕೊಡಲ್ಪಡಲು, ಮಯನನ್ನು ಕೊಲ್ಲಲು ಕೃಷ್ಣ ಬಯಸಲಿಲ್ಲ. ಹದಿನೈದು ದಿನಗಳ ಕಾಲ ನಿರಂತರವಾಗಿ ಖಾಣ್ಡವವನ್ನು ಸುಟ್ಟ ಅಗ್ನಿ ಮಯನನ್ನು ಸುಡಲು ಬಯಸಲಿಲ್ಲ].

 

ಪ್ರಾಣೋಪಕೃತ್  ಪ್ರತ್ಯುಪಕಾರಮಾಶು ಕಿಂ ತೇ ಕರೋಮೀತಿ ಸ ಪಾರ್ತ್ಥಮಾಹ ।

ಕೃಷ್ಣಪ್ರಸಾದಾದ್ಧಿ ಭವಾನ್ ವಿಮುಕ್ತಸ್ತಸ್ಮೈ ಕರೋತ್ವಿತ್ಯವದತ್ ಸ ಪಾರ್ತ್ಥಃ ॥೨೦.೨೪೩

 

‘ಪ್ರಾಣವನ್ನು ಉಳಿಸಿದ್ದೀಯ . ಅದರಿಂದ ನಿನಗೆ ಯಾವ ಪ್ರತ್ಯುಪಕಾರವನ್ನು ಮಾಡಲಿ’ ಎಂದು ಮಯನು ಅರ್ಜುನನನ್ನು ಕುರಿತು ಕೇಳಿದ. ಅರ್ಜುನನಾದರೋ – ‘ಎಲೈ ಮಯನೇ, ಕೃಷ್ಣನ ಅನುಗ್ರಹದಿಂದ ನೀನು ಬಿಡುಗಡೆಯಾದೆಯಷ್ಟೇ. ಹಾಗಾಗಿ ಕೃಷ್ಣ ಏನು ಹೇಳುತ್ತಾನೋ ಅದನ್ನು ಕೃಷ್ಣನಿಗಾಗಿ ಮಾಡು. (ನಿನಗೆ ಜೀವದಾನ ಮಾಡಿದುದು ಶ್ರೀಕೃಷ್ಣನೇ ಹೊರತು ನಾನಲ್ಲ)’ ಎಂದು ಹೇಳಿದ.

[ಮಹಾಭಾರತ ಸಭಾಪರ್ವದಲ್ಲಿ(೧.೧೯) ಈ ಘಟನೆಯನ್ನು ವಿವರಿಸಲಾಗಿದೆ: ‘ಕೃಷ್ಣಾಯ ಕ್ರಿಯತಾಂ ಕಿಞ್ಚಿತ್ ತಥಾ ಪ್ರತಿಕೃತಂ ಮಯಿ ಮಾಡುವುದಿದ್ದರೆ ಕೃಷ್ಣನಿಗೆ ಮಾಡು. ಅದು ಅವನಿಗೆ ಸ್ವಲ್ಪವೇ, ಆದರೂ ಮಾಡು. ಅವನಿಗೆ ಮಾಡಿದರೆ ಅದು ನನಗೆ ಮಾಡಿದ ಹಾಗೇ].

 

ಕೃಷ್ಣೋsಪಿ ರಾಜ್ಞೋsತಿವಿಚಿತ್ರರೂಪಸಭಾಕೃತಾವದಿಶತ್ ತಾಂ ಸ ಚಕ್ರೇ ।

ಅನಿರ್ಗ್ಗಮಂ ಪ್ರಾಣಿನಾಮರ್ತ್ಥಿತೌ ತೌ ಹುತಾಶನೇನಾಥ ವಿಧಾಯ ಜಗ್ಮತುಃ ॥೨೦.೨೪೪॥

 

‘ಯುದಿಷ್ಠಿರನಿಗಾಗಿ ಅತ್ಯಂತ ವಿಚಿತ್ರವಾದ ಸಭೆಯನ್ನು ಮಾಡು’ ಎಂದು ಶ್ರೀಕೃಷ್ಣ ಮಯನಿಗೆ ಆಜ್ಞೆ ಮಾಡಿದ. ಮಯನಾದರೋ, ಆ ವಿಚಿತ್ರವಾದ ಸಭೆಯನ್ನು ನಿರ್ಮಿಸಿದ. ತದನಂತರ ಅಗ್ನಿಯಿಂದ ಉಳಿದ ಪ್ರಾಣಿಗಳ ಹೊರ ಬರುವಿಕೆ ಆಗಬಾರದು ಎಂದು ಪ್ರಾರ್ಥಿತರಾಗಿ, ಹಾಗೆಯೇ ಮಾಡಿದ ಕೃಷ್ಣಾರ್ಜುನರು ಅಲ್ಲಿಂದ  ಹೊರಟರು.

[ಸಭಾಪರ್ವ: ಯಾಂ ಕ್ರಿಯಾಂ ನಾನುಕುರ್ಯುಸ್ತೇ ಮಾನವಾಃ ಪ್ರೇಕ್ಷ್ಯ ವಿಸ್ಮಿತಾಃ । ಮನುಷ್ಯಲೋಕೇ ಸಕಲೇ ತಾದೃಶೀಮ್ ಕುರು ವೈ ಸಭಾಮ್’ ಯಾವ ನಿನ್ನ ಸಭೆಯ ಮಾಡುವಿಕೆಯನ್ನು ಮನುಷ್ಯರ್ಯಾರೂ ಕೂಡಾ ಅನುಕರಣೆ ಮಾಡಲಾರರೋ, ಆ ರೀತಿಯ ಸಭೆಯನ್ನು ಧರ್ಮರಾಯನಿಗೆ ನಿರ್ಮಿಸಿಕೊಡು ಎಂದು ಕೃಷ್ಣ ಹೇಳಿದ].  

 

ದೃಷ್ಟ್ವಾ ಚ ತೌ ಪಾಣ್ಡವಾಃ ಸರ್ವ ಏವ ಮಹಾಮುದಂ ಪ್ರಾಪುರೇತನ್ನಿಶಮ್ಯ ।

ಕೃಷ್ಣೋsಪಿ ಪಾರ್ತ್ಥೈರ್ಮ್ಮುಮುದೇsನನ್ತಶಕ್ತಿಸುಖಜ್ಞಾನಪ್ರಾಭವೌದಾರ್ಯ್ಯವೀರ್ಯ್ಯಃ ॥೨೦.೨೪೫॥

 

ಈರೀತಿಯಾಗಿ ಇಂದ್ರನನ್ನು ಗೆದ್ದು, ಖಾಣ್ಡವವನವನ್ನು ಸುಟ್ಟು, ಮಯ ಮೊದಲಾದವರನ್ನು  ಉಳಿಸಿದ ಈ ಎಲ್ಲವನ್ನೂ ಕೇಳಿದ ಸಮಸ್ತ ಪಾಂಡವರೂ ಕೂಡಾ ಅತ್ಯಂತ ಸಂತೋಷವನ್ನು ಹೊಂದಿದರು. ಎಣಿಯಿರದ ಶಕ್ತಿ, ಸುಖ, ಜ್ಞಾನ, ಒಡೆತನ, ಔದಾರ್ಯ, ವೀರ್ಯ ಇವುಗಳಿಂದ ಕೂಡಿದವನಾದ ಶ್ರೀಕೃಷ್ಣನೂ ಕೂಡಾ  ಪಾಂಡವರೊಂದಿಗೆ ಕೂಡಿಕೊಂಡು ಸಂತೋಷಪಟ್ಟ.

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಖಾಣ್ಡವದಾಹೋ ನಾಮ    ವಿಂಶೋsಧ್ಯಾಯಃ ॥

  

******************






Mahabharata Tatparya Nirnaya Kannada 20: 233 - 237

            ಅಸ್ತ್ರೈಸ್ತು ವೃಷ್ಟಿಂ ವಿನಿವಾರ್ಯ್ಯ ಕೃಷ್ಣಃ  ಪಾರ್ತ್ಥಶ್ಚ ಶಕ್ರಂ ಸುರಪೂಗಯುಕ್ತಮ್ ।

ಅಯುದ್ಧ್ಯತಾಂ ಸೋsಪಿ ಪರಾಜಿತೋsಭೂತ್ ಪ್ರೀತಶ್ಚ ದೃಷ್ಟ್ವಾ ಬಲಮಾತ್ಮನಸ್ತತ್ ॥೨೦.೨೩೩॥

 

ಕೃಷ್ಣನೂ ಅರ್ಜುನನೂ ಕೂಡಾ ಅಸ್ತ್ರಗಳಿಂದ ಮಳೆಯನ್ನು ತಡೆದು, ದೇವತೆಗಳ ಸಮೂಹಗಳಿಂದ ಕೂಡಿದ ಇಂದ್ರನೊಂದಿಗೆ ಯುದ್ಧಮಾಡಿದರು. ಆ ಯುದ್ಧದಲ್ಲಿ ಸೋತ ಇಂದ್ರನು ತನ್ನ ಮಗನ ಬಲವನ್ನು ಕಂಡು ಪ್ರೀತನಾದನು(ಸಂತುಷ್ಟನಾದನು). 

[ಮಹಾಭಾರತದಲ್ಲಿ ‘ಇಂದ್ರ ತನ್ನ ಬಲವನ್ನು ಕಂಡು ಸಂತೋಷಪಟ್ಟ ಎಂದಿದೆ. ಆ ಶ್ಲೋಕವನ್ನು ಹೇಗೆ ವ್ಯಾಖ್ಯಾನ ಮಾಡಬೇಕು ಎನ್ನುವುದು ಆಚಾರ್ಯರ ಈ ವಿವರಣೆಯಿಂದ ಸ್ಪಷ್ಟವಾಗುತ್ತದೆ]

 

ಸ್ನೇಹಂ ಚ ಕೃಷ್ಣಸ್ಯ ತದಾsರ್ಜ್ಜುನೇ ಧೃತಂ ವಿಲೋಕ್ಯ ಪಾರ್ತ್ಥಸ್ಯ ಬಲಂ ಚ ತಾದೃಶಮ್ ।

ನಿವರ್ತ್ತ್ಯ ಮೇಘಾನತಿತುಷ್ಟಚಿತ್ತಃ ಪ್ರಣಮ್ಯ ಕೃಷ್ಣಂ ತನಯಂ ಸಮಾಶ್ಲಿಷತ್ ॥೨೦.೨೩೪॥

 

ಅರ್ಜುನನಲ್ಲಿ ಶ್ರೀಕೃಷ್ಣನಿರಿಸಿದ್ದ ಪ್ರೀತಿಯನ್ನು, ಅರ್ಜುನನ ಬಲವನ್ನು ಕಂಡು ಅತ್ಯಂತ ಸಂತಸಗೊಂಡ ಬಗೆಯುಳ್ಳವನಾದ ಇಂದ್ರ,  ಮೋಡಗಳನ್ನು ಹಿಂದೆ ಕಳುಹಿಸಿ, ಕೃಷ್ಣನಿಗೆ ನಮಸ್ಕರಿಸಿ, ಮಗನನ್ನು ಆಲಂಗಿಸಿದ.

 

ವಿಷ್ಣುಶ್ಚ ಶಕ್ರೇಣ ಸಹೇತ್ಯ ಕೇಶವಂ ಸಮಾಶ್ಲಿಷನ್ನಿರ್ವಿಶೇಷೋsಪ್ಯನನ್ತಮ್ ।

ಸ ಕೇವಲಂ ಕ್ರೀಡಮಾನಃ ಸಶಕ್ರಃ ಸ್ಥಿತೋ ಹಿ ಪೂರ್ವಂ ಯುಯುಧೇ ನ ಕಿಞ್ಚಿತ್ ॥೨೦.೨೩೫

 

ವಿಷ್ಣುವು(ಸ್ವರ್ಗದಲ್ಲಿರುವ ಉಪೇಂದ್ರರೂಪಿ ಭಗವಂತನೂ) ಕೂಡಾ ಇಂದ್ರನೊಂದಿಗೆ ಬಂದು ಕೇಶವನನ್ನು ಆಲಂಗಿಸಿದ. ಈ ವಿಷ್ಣು ಮತ್ತು ಶ್ರೀಕೃಷ್ಣನ ನಡುವೆ ಯಾವುದೇ ವ್ಯತ್ಯಾಸ ಇಲ್ಲದಿದ್ದರೂ, ಇಂದ್ರನಿಂದ ಕೂಡಿಕೊಂಡು, ಕ್ರೀಡಿಸುತ್ತಾ ಈ ರೀತಿಯ ಕ್ರಿಯೆಗಳನ್ನು ಭಗವಂತ ಮಾಡಿ ತೋರಿಸಿದ. ಇಂದ್ರ ಯುದ್ಧ ಮಾಡುತ್ತಿರುವಾಗ ಉಪೇಂದ್ರ  ಯುದ್ಧ ಮಾಡಲಿಲ್ಲ ಆದರೆ ಆಲಂಗಿಸಲು ಮಾತ್ರ ಬಂದ.

 

ಬ್ರಹ್ಮಾ ಚ ಶರ್ವಶ್ಚ ಸಮೇತ್ಯ ಕೃಷ್ಣಂ ಪ್ರಣಮ್ಯ ಪಾರ್ತ್ಥಸ್ಯ ಚ ಕೃಷ್ಣನಾಮ ।

ಸಞ್ಚಕ್ರತುಶ್ಚಾಪಿ ಶಿಕ್ಷಾಪ್ರಕರ್ಷಾಚ್ಚಕ್ರುಶ್ಚ ಸರ್ವೇ ಸ್ವಾಸ್ತ್ರದಾನೇ ಪ್ರತಿಜ್ಞಾಮ್ ॥೨೦.೨೩೬॥

 

ಬ್ರಹ್ಮ, ಸದಾಶಿವನೂ ಕೂಡಾ ಕೃಷ್ಣನ ಬಳಿ ಬಂದು ನಮಸ್ಕರಿಸಿ ಅರ್ಜುನನಿಗೆ ‘ಕೃಷ್ಣ’ ಎಂದು ನಾಮಕರಣ ಮಾಡಿದರು. ಅರ್ಜುನನ ಅತ್ಯಂತ ಉತ್ಕೃಷ್ಟವಾದ ಧನುರ್ವಿದ್ಯಾಭ್ಯಾಸಕ್ಕಾಗಿ ಅವರು ಅವನಿಗೆ ಈ ರೀತಿಯ ನಾಮಕರಣ ಮಾಡಿದರು. ಮುಂದೆ ಕಾಡಿಗೆ ಬಂದಾಗ ನಮ್ಮ ಅಸ್ತ್ರಗಳನ್ನು ನಿನಗೆ ಕೊಡುತ್ತೇವೆ ಎನ್ನುವ ಪ್ರತಿಜ್ಞೆಯನ್ನೂ ಅವರು ಇಲ್ಲಿ ಮಾಡಿದರು.

 

ಅನುಜ್ಞಾತಾಸ್ತೇ ಪ್ರಯಯುಃ  ಕೇಶವೇನ ಕ್ರೀಡಾರ್ತ್ಥಮಿನ್ದ್ರೋ ಯಯುಧೇ ಹಿ ತತ್ರ ।

ಪ್ರೀತ್ಯಾ ಕೀರ್ತ್ತಿಂ ದಾತುಮಪ್ಯರ್ಜ್ಜುನಸ್ಯ ತತಸ್ತುಷ್ಟಃ ಸಹ ದೇವೈಸ್ತಯೋಃ ಸಃ ॥೨೦.೨೩೭॥

 

ಬ್ರಹ್ಮಾದಿಗಳು ಶ್ರೀಕೃಷ್ಣನ ಅನುಜ್ಞೆಯನ್ನು ಪಡೆದು ಹಿಂತಿರುಗಿದರು. ಇಂದ್ರ ಕೇವಲ ಕ್ರೀಡೆಗಾಗಿ ಹಾಗೂ  ಅರ್ಜುನನಿಗೆ ಕೀರ್ತಿಯನ್ನು ಕೊಡುವುದಕ್ಕಾಗಿ ಯುದ್ಧಮಾಡಿದ್ದ. ತದನಂತರ ಸಂತುಷ್ಟನಾದ ಇಂದ್ರ ಇತರ ದೇವತೆಗಳೊಂದಿಗೆ ಸ್ವರ್ಗಲೋಕವನ್ನು ಕುರಿತು ತೆರಳಿದ.

Mahabharata Tatparya Nirnaya Kannada 20: 228 - 232

 

ವಿಶೇಷತೋ ಧ್ವಜಸಂಸ್ಥೇ ಹನೂಮತ್ಯಜೇಯತಾ ಸ್ಯಾಜ್ಜಯರೂಪೋ ಯತೋsಸೌ ।

ಸರ್ವಂ ಚ ತದ್ ದಿವ್ಯಮಭೇದ್ಯಮೇವ ವಿದ್ಯುತ್ಪ್ರಭಾ ಜ್ಯಾ ಚ ಗಾಣ್ಡೀವಸಂಸ್ಥಾ ॥೨೦.೨೨೮॥

 

ಯಾವ ಕಾರಣದಿಂದ ಎಲ್ಲರನ್ನೂ ಗೆದೆಯಬಲ್ಲ ಆ ಮುಖ್ಯಪ್ರಾಣನು ಜಯರೂಪನೇ ಆಗಿದ್ದಾನೋ, ಅಂತಹ  ಹನುಮಂತನು ವಿಶೇಷವಾಗಿ ಧ್ವಜದಲ್ಲಿ ಇರತ್ತಿರಲು, ಈ ರಥಿಕನನ್ನು ಇನ್ನೊಬ್ಬರು ಜಯಿಸಲು ಅಶಕ್ಯರು. ಮಿಂಚಿನಂತೆ ಕಾಂತಿಯುಳ್ಳ ನೇಣಿರುವ ಗಾಣ್ಡೀವ ಹಾಗೂ ಸಮಸ್ತವೂ ಅಲೌಕಿಕವಾದದ್ದು ಹಾಗೂ ಅಭೇದ್ಯವಾದುದು.

[ಮೇಲಿನ ಮಾತಿಗೆ ವಿರೋಧವೆಂಬಂತೆ ಮಹಾಭಾರತದಲ್ಲಿ ಅಶ್ವತ್ಥಾಮ ಗಾಣ್ಡೀವವನ್ನು ಭೇದಿಸಿದ ಎಂದು ಹೇಳಿದಂತೆ ಕಾಣುತ್ತೇದೆ.ಅಥಾನ್ಯಾ ಜ್ಯಾssಸೀತ್ ತಯಾ ಗಾಣ್ಡಿವಂ ಸೋsಪ್ಯಯುಙ್ಕ್ತ  ಆದರೆ ಅಲ್ಲಿ ಮುಂದೆ  ಅಥಾನ್ಯಯಾ ಜ್ಯಯಾ ಪುನರ್ಗಾಣ್ಡಿವಂ ಸೋsಪ್ಯಯುಙ್ಕ್ತ’ ಎಂದು ಹೇಳಬೇಕಿತ್ತು. ಆದರೆ ಅಲ್ಲಿ ಹಾಗೆ ಹೇಳದೇ ‘ಸಂಧಾಯ ಚಾಪರಾಮ್’ ಎಂದು ಹೇಳಿದ್ದಾರೆ. ಅಂದರೆ ‘ಇನ್ನೊಮ್ಮೆ ನೇಣನ್ನು ಕಟ್ಟಿದ’ ಎಂದು ಹೇಳಿದ್ದಾರೆ. ಹೀಗಾಗಿ ಅಶ್ವತ್ಥಾಮ ಗಾಣ್ಡೀವ ಬಿಲ್ಲಿನ ನೇಣಿನ ಸಂಪರ್ಕವನ್ನಷ್ಟೇ ಕತ್ತರಿಸಿದ ಎನ್ನುವುದು ತಿಳಿಯುತ್ತದೆ. ಹೀಗಾಗಿ ಗಾಣ್ಡೀವ ಅಭೇದ್ಯ ಎನ್ನುವ ಮಾತಿಗೆ ಇದು ವಿರೋಧವನ್ನು ಹೇಳುವುದಿಲ್ಲ.]

 

ಗಾಣ್ಡೀವಮಪ್ಯಾಸ ಕೃಷ್ಣಪ್ರಸಾದಾಚ್ಛಕ್ಯಂ ಧರ್ತ್ತುಂ ಪಾಣ್ಡವಸ್ಯಾಪ್ಯಧಾರ್ಯ್ಯಮ್ ।

ದೇವೈಶ್ಚ ತೈರ್ಬ್ರಹ್ಮವರಾದ್ ಧೃತಂ ತದ್ ಬ್ರಹ್ಮೈವ ಸಾಕ್ಷಾತ್ ಪ್ರಭುರಸ್ಯ ಧಾರಣೇ ॥೨೦.೨೨೯॥

 

ಬ್ರಹ್ಮನನ್ನು ಹೊರತುಪಡಿಸಿ ಉಳಿದವರಿಗೆ ಗಾಣ್ಡೀವವನ್ನು ಧರಿಸಲು ಸಾಧ್ಯವಿಲ್ಲ. ಆದರೆ   ಕೃಷ್ಣನ ಅನುಗ್ರಹದಿಂದ ಅರ್ಜುನನಿಗೆ ಗಾಣ್ಡೀವ ಧರಿಸಲು ಸಾಧ್ಯವಾಯಿತು. ಇತರ ದೇವತೆಗಳಿಗೂ ಬ್ರಹ್ಮನ ವರದಿಂದಲೇ ಗಾಣ್ಡೀವ ಧರಿಸಲು ಸಾಧ್ಯವಾಗಿರುವುದು.

  

ಇನ್ದ್ರಸ್ಯ ದತ್ತಶ್ಚ ವರಃ ಸ್ವಯಮ್ಭುವಾ ತೇನಾಪಿ ಪಾರ್ತ್ಥಸ್ಯ ಬಭೂವ ಧಾರ್ಯ್ಯಮ್ ।

ಇನ್ದ್ರೋ ಹ್ಯಸೌ ಫಲ್ಗುನತ್ವೇನ ಜಾತಸ್ತತತಃ ಸೋsಸ್ತ್ರೈಃ ಶರಶಾಲಾಂ ಚಕಾರ ॥೨೦.೨೩೦॥

 

ಗಾಣ್ಡೀವ ಧರಿಸಲು ಇತರ ದೇವತೆಗಳಂತೆ ಇಂದ್ರನಿಗೂ ಬ್ರಹ್ಮದೇವರ ವರವಿತ್ತು. ಅದರಿಂದಲೂ ಕೂಡಾ ಅರ್ಜುನನಾಗಿ ಹುಟ್ಟಿದ ಇಂದ್ರನಿಗೆ ಅದನ್ನು ಧರಿಸಲು ಸಾಧ್ಯವಾಯಿತು.

ತದನಂತರ ಅಸ್ತ್ರಗಳಿಂದ ಅರ್ಜುನ ಖಾಣ್ಡವವನಕ್ಕೆ  ಆವರಣವಾಗಿ ಶರಶಾಲೆಯನ್ನು ನಿರ್ಮಾಣ ಮಾಡಿದ.

 

ಸ ಯೋಜನದ್ವಾದಶಕಾಭಿವಿಸ್ತೃತಂ ಪುರಂ ಚಕಾರಾsಶು ಪುರನ್ದರಾತ್ಮಜಃ

ಹುತಾಶನೋsಪ್ಯಾಶು ವನಂ ಪ್ರಗೃಹ್ಯ ಪ್ರಭಕ್ಷಯಾಮಾಸ ಸಮುದ್ಧತಾರ್ಚ್ಚಿಃ ॥೨೦.೨೩೧

 

ಇಂದ್ರನ ಮಗನಾಗಿರುವ ಅರ್ಜುನನು ಹನ್ನೆರಡು ಯೋಜನ ವಿಸ್ತೃತವಾಗಿರುವ ಖಾಣ್ಡವವನಕ್ಕೆ ಶರಶಾಲೆಯನ್ನು ನಿರ್ಮಿಸುತ್ತಿದ್ದಂತೇ,  ಅಗ್ನಿ ಜಾಜ್ವಲ್ಯಮಾನನಾಗಿ ಕಾಡನ್ನು  ತಿನ್ನಲಾರಂಭಿಸಿದ.

 

ಪ್ರಭಕ್ಷ್ಯಮಾಣಂ ನಿಜಕಕ್ಷಮೀಕ್ಷ್ಯ ಸನ್ಧುಕ್ಷಯಾಮಾಸ ತದಾssಶುಶುಕ್ಷಣಿಮ್ ।

ಅಕ್ಷೋಪಮಾಭಿರ್ಬಹುಲೇಕ್ಷಣೋsಮ್ಭಸಾಂ ಧಾರಾಭಿರಾಕ್ಷುಬ್ಧಮನಾಃ ಕ್ಷಯಾಯ ॥೨೦.೨೩೨॥

 

ತಿನ್ನಲ್ಪಡುತ್ತಿರುವ ತನ್ನ ವನವನ್ನು ಕಂಡು, ಬಹಳ ಕಣ್ಣುಗಳುಳ್ಳ ಇಂದ್ರನು ಅಗ್ನಿಯನ್ನು ಬಹಳ ದೊಡ್ಡದಾಗಿರುವ ನೀರಿನ ಧಾರೆಗಳಿಂದ ಶಮನಮಾಡಲು ಬಯಸಿದ.

[ಮಹಾಭಾರತದಲ್ಲಿ(ಆದಿಪರ್ವ ೨೫೨.೧೯) ಈಕುರಿತ ವಿವರವನ್ನು ಕಾಣಬಹುದು.  ತತೋsಕ್ಷಮಾತ್ರಾ ವ್ಯಸೃಜನ್ ಧಾರಾಃ ಶತಸಹಸ್ರಶಃ   ಚೋದಿತಾ ದೇವರಾಜೇನ ಜಲದಾಃ ಖಾಣ್ಡವಂ ಪ್ರತಿ ಒಂದು ಒನಕೆಯಷ್ಟು ದಪ್ಪನಾದ ಹನಿಗಳಿಂದ ಕೂಡಿದ ಧಾರಾಕಾರ ಮಳೆಯನ್ನು ಇಂದ್ರ ಸುರಿಸಿದ.

ಇಲ್ಲಿ ಆಚಾರ್ಯರು ಲಾಟಾನುಪ್ರಾಸ ಪ್ರಯೋಗ ಮಾಡಿರುವುದನ್ನು ಕಾಣುತ್ತೇವೆ. ಜೊತೆಗೆ ಇಲ್ಲಿ ಒಂಬತ್ತು ‘ಕ್ಷ-ಕಾರ ಪ್ರಯೋಗವಾಗಿರುವುದನ್ನು ಓದುಗರು ಗಮನಿಸಬೇಕು. ‘ಕ್ಷಕಾರೋ ನೃಸಿಂಹವಚನಃ’.  ಆ ನರಸಿಂಹನ ಆವೇಶ ಆಗ ಅಗ್ನಿಯಲ್ಲಿತ್ತು. ಆದ್ದರಿಂದ ಅವನು ಎಲ್ಲವನ್ನೂ ನುಂಗಲು ಸಾಧ್ಯವಾಯಿತು. ಅಗ್ನಿಯಲ್ಲಿರುವ ನರಸಿಂಹನೇ ಆ ಕಾಡನ್ನು ನಾಶ ಮಾಡಿದ ಎನ್ನುವ ಸೂಕ್ಷ್ಮ ಈ ಮಂತ್ರದಲ್ಲಡಗಿದೆ. ಇದೇ ರೀತಿಯ ಪ್ರಯೋಗವನ್ನು ಆಚಾರ್ಯರು ಅಣು-ವ್ಯಾಖ್ಯಾನದಲ್ಲಿ ಬಳಸಿರುವುದನ್ನು ಕಾಣುತ್ತೇವೆ- ‘ಪ್ರತ್ಯಕ್ಷೇಕ್ಷಾಕ್ಷಮಃ ಸಾಕ್ಷಾತ್ ಕಂ ಪಕ್ಷಮವಲಮ್ಬತೇ । ತಸ್ಮಾದಕ್ಷಮಪಕ್ಷತ್ವಾನ್ಮೋಕ್ಷಶಾಸ್ತ್ರೇsಭ್ಯುಪೇಕ್ಷಿತಃ’   ನವವಿಧವಾದ ಭಕ್ತಿ, ನವವಿಧವಾಗಿರುವ ದ್ವೇಷ ಎರಡನ್ನೂ ಕೂಡಾ ಗಮನಿಸಿ, ಅದಕ್ಕೆ ಅನುಕೂಲವಾಗಿರುವ ಫಲವನ್ನು ನರಸಿಂಹ  ಆಯಾ ಪಕ್ಷಗಳಿಗೆ ಕೊಡುತ್ತಾನೆ ಎನ್ನುವುದು ಅಣುವ್ಯಾಖ್ಯಾನದಲ್ಲಿ ಸೂಚಿತವಾದ ಅರ್ಥ. ಅದೇ ರೀತಿ ಇಲ್ಲಿಯೂ ಕೂಡಾ ಅಂತಹುದೇ ಅರ್ಥವನ್ನು ಮಾಡಬೇಕು ಎಂದು ವ್ಯಾಖ್ಯಾನಕಾರರು ಹೇಳಿದ್ದಾರೆ. ಖಾಣ್ಡವವನದಲ್ಲಿ ದೈತ್ಯರು, ನಾಗರು, ಪಿಶಾಚಿಗಳು, ಯಕ್ಷರೇ ಮೊದಲಾದ ನವ ವಿಧದ ಜೀವಸಂಕುಲಗಳಿದ್ದವು. ಅವರೊಬ್ಬರನ್ನೂ ಬಿಡದೆ ಅಗ್ನಿ ಸುಟ್ಟಿದ್ದಾನೆ ಎಂದು ಹೇಳುವುದಕ್ಕೆ ಇಲ್ಲಿ ಒಂಬತ್ತು ಕ್ಷ-ಕಾರ ಪ್ರಯೋಗ ಮಾಡಲಾಗಿದೆ].