ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 24, 2021

Mahabharata Tatparya Nirnaya Kannada 21: 60-64

 

ಉತ್ತರೋತ್ತರತಃ ಸರ್ವೇ ಸುಖೇ ಶತಗುಣೋತ್ತರಾಃ

ಅನನ್ತಜನಸಮ್ಪೂರ್ಣ್ಣಾ ಅಪಿ ತೇ ಹೀಚ್ಛಯಾ ಹರೇಃ       ೨೧.೬೦

 

ಅವಕಾಶವನ್ತೋ ದಿವ್ಯತ್ವಾತ್ ಪೂರ್ಯ್ಯನ್ತೇ ನ ಕದಾಚನ ।

ಸರ್ವಕಾಮಸುಖೈಃ ಪೂರ್ಣ್ಣಾ ದಿವ್ಯಸ್ತ್ರೀಪುರುಷೋಜ್ಜ್ವಲಾಃ ೨೧.೬೧

 

ಈ ಲೋಕಗಳು (ಸ್ವರ್ಗಲೋಕದಿಂದ ಮೇಲೆ ವೈಕುಂಠದವರೆಗೆ ಇರುವ ಲೋಕಗಳು) ಸುಖದ ವಿಷಯದಲ್ಲಿ ಕ್ರಮೇಣ ಮೇಲು-ಮೇಲಕ್ಕೆ  ಒಂದರಿಂದ ಇನ್ನೊಂದು ನೂರುಪಟ್ಟು ಆಧಿಕ್ಯವನ್ನು  ಹೊಂದಿವೆ. ಅನಂತ ಜೀವರಾಶಿಗಳೂ ಇಲ್ಲಿದ್ದಾರೆ ಆದರೆ ಅಲೌಕಿಕವಾದ್ದರಿಂದ ಅವಕಾಶವುಳ್ಳವುದಾಗಿವೆ(ಇಲ್ಲಿ ಎಂದೂ ಜೀವಸಾಂದ್ರತೆ ಉಂಟಾಗುವುದಿಲ್ಲ). ಈ ಲೋಕಗಳು ಎಲ್ಲಾ ರೀತಿಯ ಸುಖ-ಸಮೃದ್ಧಿಯಿಂದ ಕೂಡಿರುವುದಾಗಿವೆ. ಅಲೌಕಿಕರಾದ ಸ್ತ್ರೀ-ಪುರುಷರಿಂದ ಈ ಲೋಕಗಳು ಶೋಭಿಸುತ್ತಿವೆ.

 

[ಭೂಲೋಕದಿಂದ ಸತ್ಯಲೋಕದತನಕ ಅಂತರಿಕ್ಷಲೋಕಗಳನ್ನು ನೋಡಿದೆವು. ಅದೇ ರೀತಿ ಕೆಳಗೆ ಏಳು ಪಾತಾಳ ಲೋಕಗಳಿವೆ-  ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು  ಪಾತಾಳ)]

 

ದಿವ್ಯರತ್ನಸಮಾಕೀರ್ಣ್ಣಂ ತಥಾ ಪಾತಾಳಸಪ್ತಕಮ್ ।

ಅಧಸ್ತಾಚ್ಛೇಷದೇವೇನ ಬಲಿನಾ ಸಮಧಿಷ್ಠಿತಮ್ ೨೧.೬೨

 

ದಿವ್ಯವಾದ ರತ್ನಗಳಿಂದ ತುಂಬಿರುವ ಪಾತಾಳ ಲೋಕಗಳು ಏಳು. ಈ ಲೋಕಗಳು ಬಲಿಷ್ಠನಾದ ಶೇಷನಿಂದ ಧರಿಸಲ್ಪಟ್ಟಿವೆ (ಅದನ್ನು ಶೇಷ ಹೊತ್ತು ನಿಂತಿದ್ದಾನೆ).

[ವಿಷ್ಣುಪುರಾಣ: ‘ಅತಳಂ ವಿತಳಂ ಚೈವ ನಿತಳಂ ಚ ಗಭಸ್ತಿಮತ್   ಮಹಾಖ್ಯಂ ಸುತಳಂ ಚಗ್ರ್ಯಂ ಪಾತಾಳಂ ಚಾಪಿ ಸಪ್ತಮಮ್’ (೨.೫.೩) (ಇಲ್ಲಿ ನಿತಳ ಎಂದರೆ ತಳಾತಳ ಎಂದು ಅರ್ಥ ಮಾಡಿಕೊಳ್ಳಬೇಕು). ಭಾಗವತದ ಐದನೇ ಸ್ಕಂಧದಲ್ಲಿ ಏಳು ಪಾತಾಳ ಲೋಕಗಳನ್ನು ಹೇಳಿದ್ದಾರೆ. ಈ ಎಲ್ಲಾ ಪಾತಾಳಗಳೂ ಕೂಡಾ ಅಲೌಕಿಕವಾದ ರತ್ನಗಳಿಂದ ಕೂಡಿವೆ.

ಈ ಎಲ್ಲಾ ಲೋಕಗಳಿಗೆ ಸಂಬಂಧಿಸಿದ ದೇವತಾ ಮೀಮಾಂಸೆ  ಮಹಾಭಾರತದ ಇಂದಿನ ಪಾಠದಲ್ಲಿ ಕಾಣಸಿಗುವುದಿಲ್ಲವಾದರೂ ಕೂಡಾ, ಪುರಾಣಗಳಲ್ಲಿ ಈ ಕುರಿತ ವಿವರವಿದೆ:  

·       ಭಾಗವತ(.೨೩.): ‘ವನೇರಪ್ಯಧಸ್ತಾತ್ ಸಪ್ತ ಭೂವಿವರಾ ಏಕೈಕಶೋ ಯೋಜನಾಯುತಾಯಾಮಾಸ್ತಾರತ್ಮಯೇನೋಪಕ್ಲುಪ್ತಾ  ಅತಳಂ ವಿತಳಂ ಸುತಳಂ ತಳಾತಳಂ ಮಹಾತಳಂ ರಸಾತಳಂ ಪಾತಾಳಮಿತಿ

·       ವಿಷ್ಣುಪುರಾಣ(..-) ಸ್ವರ್ಲೋಕಾದಪಿ ರಮ್ಯಾಣಿ ಪಾತಾಳಾದೀನಿ ನಾರದಃ ಪ್ರಾಹ ಸ್ವರ್ಗಸದಾಂ ಮಧ್ಯೇ ಪಾತಾಳೇಭ್ಯೋ ಗತೋ ದಿವಿ   ಆಹ್ಲಾದಕಾರಿಣಃ ಶುಭ್ರ ಮಣಯೋ ಯತ್ರ ಸುಪ್ರಭಾಃ  ನಾಗೈರಾಭ್ರಿಯಮಾಣಾಸ್ತು ಪಾತಾಳಂ ಕೇನ ತತ್ ಸಮಮ್

·       ವಿಷ್ಣುಪುರಾಣ(..೧೩) ಪಾತಾಳಾನಾಮಧಶ್ಚಾಸ್ತೇ ವಿಷ್ಣೋರ್ಯಾ ತಾಮಸೀ ತನುಃ ಶೇಷಾಖ್ಯಾ ಯದ್ಗುಣಾನ್ ವಕ್ತುಂ ಶಕ್ತಾ ದೈತ್ಯದಾನವಾಃ  

·       ಭಾಗವತ (.೨೩.೨೦)ತತೋಽಧಸ್ತಾತ್ ಸುತಳ ಉರುಶ್ರವಾಃ ಪುಣ್ಯಶ್ಲೋಕೋ ವಿರೋಚನಾತ್ಮಜೋ ಬಲಿರ್ಭಗವತಾ..... ವಾಮನರೂಪೇಣ ಪರಾಕ್ಷಿಪ್ತಲೋಕತ್ರಯಃ .....ಆಸ್ತೇಽಧುನಾsಪಿ]

 

ಕಾಮಭೋಗಸಮಾಯುಕ್ತಾ ಬಹುವರ್ಷಸಹಸ್ರಿಣಃ ।

ಸಪ್ತದ್ವೀಪೇಷು ಪುರುಷಾ ನಾರ್ಯ್ಯಶ್ಚೋಕ್ತಾಃ ಸುರೂಪಿಣಃ ೨೧.೬೩

 

ಕೆಳಗಿನ ಲೋಕದಲ್ಲಿರುವವರು ಬಯಸಿದ ಭೋಗವನ್ನು ಪಡೆಯುತ್ತಿರುತ್ತಾರೆ ಮತ್ತು ಅವರು ಬಹಳ ವರ್ಷಗಳ ಕಾಲ ಬಾಳುತ್ತಾರೆ. ಏಳೂ ದ್ವೀಪಗಳಲ್ಲಿ ಅತ್ಯಂತ ಸುಂದರಿಯರಾದ ನಾರಿಯರು, ಅತ್ಯಂತ ಸುಂದರರಾದ ಪುರುಷರಿದ್ದಾರೆ.

 

ಏಷಾಂ ಚ ಸರ್ವಲೋಕಾನಾಂ ಧಾತಾ ನಾರಾಯಣಃ ಪರಃ ।

ವಿಷ್ಣುಲೋಕಸ್ಥಿತೋ ಮುಕ್ತೈಃ ಸದಾ ಸರ್ವೈರುಪಾಸ್ಯತೇ             ೨೧.೬೪

 

ಈ ಸಮಸ್ತ ಲೋಕಗಳನ್ನೂ ಹೊತ್ತಿರುವವನು- ಮುಕ್ತಲೋಕದಲ್ಲಿದ್ದು, ಮುಕ್ತರಿಂದ ಯಾವಾಗಲೂ ಉಪಾಸಿಸಲ್ಪಡುವ ನಾರಾಯಣ.

[ಹೀಗೆ ಒಟ್ಟಿನಲ್ಲಿ ಇಲ್ಲಿ ಆಚಾರ್ಯರು ಭಾಗವತದ ಐದನೇ ಸ್ಕಂಧದಲ್ಲಿ ಹೇಳಿದ ಭೂಗೋಳ ವರ್ಣನೆ, ಖಗೋಳ ವರ್ಣನೆ ಮತ್ತು ವಿಷ್ಣುಪುರಾಣಾದಿಗಳಲ್ಲಿ ಹೇಳಿರುವ ಇಡೀ ಬ್ರಹ್ಮಾಂಡ ವರ್ಣನೆ ಈ ಮೂರನ್ನೂ ಸಮಷ್ಠಿಯಾಗಿ, ವ್ಯಾಖ್ಯಾನ ಮಾಡಿ ನಮಗೆ ನೀಡಿದ್ದಾರೆ].

Tuesday, November 23, 2021

Mahabharata Tatparya Nirnaya Kannada 21: 55-59

 

ತತಃ ಕದಾಚಿತ್ ಪ್ರವರೇ ಸಭಾತಳೇ ಧರ್ಮ್ಮಾತ್ಮಜೋ ರಾಜಭಿರ್ಭ್ರಾತೃಭಿಶ್ಚ ।

ವೃತೋ ನಿಶಮ್ಯೈವ ಸಭಾಃ ಸುರಾಣಾಂ ಯಥಾ ಸ್ಥಿತಾ ನಾರದಮನ್ವಪೃಚ್ಛತ್ ೨೧.೫೫

 

ತದನಂತರ ಒಮ್ಮೆ ಮಯ ನಿರ್ಮಿತವಾದ ಶ್ರೇಷ್ಠವಾದ ಸಭಾತಳದಲ್ಲಿ, ರಾಜರಿಂದಲೂ ಅಣ್ಣತಮ್ಮಂದಿರರಿಂದಲೂ ಕೂಡಿದ ಧರ್ಮರಾಜನು ದೇವತೆಗಳ ಸಭೆಯ ಬಗ್ಗೆ ಕೇಳಿ, ನಾರದರನ್ನು ಕುರಿತು ಪ್ರಶ್ನೆ ಮಾಡಿದನು.

[ಈ ಕಥಾ ಭಾಗವನ್ನು ನಾವು ಮಹಾಭಾರತದಲ್ಲಿ ಕಾಣಬಹುದು. ಮಯ ನಿರ್ಮಿಸಿದ ಈ ಸಭೆಯೇ ಅದ್ಭುತವೋ ಅಥವಾ ಜಗತ್ತಿನಲ್ಲಿ ಇಂತಹ ಸಭೆ ಇನ್ನೂ ಇದೆಯೋ ಎಂದು ಧರ್ಮರಾಜ ನಾರದರನ್ನು ಕೇಳುತ್ತಾನೆ. ಆಗ ನಾರದರು ಎಲ್ಲಾ ದೇವತೆಗಳ ಸಭೆಯನ್ನು ಕುರಿತು ವಿವರಿಸುತ್ತಾರೆ. ದೇವತೆಗಳ ಸಭೆಯ ಕುರಿತು ನಾರದರಿಂದ ತಿಳಿದ ಧರ್ಮರಾಜ ಮತ್ತೆ ಪ್ರಶ್ನೆ ಮಾಡುತ್ತಾನೆ. ಮೂಲ ಭಾರತದಲ್ಲಿ ಧರ್ಮರಾಜನ ಪ್ರಶ್ನೆ ಸಂಕ್ಷಿಪ್ತವಾಗಿದ್ದರೆ ಇಲ್ಲಿ ಅದನ್ನು ಆಚಾರ್ಯರು ವಿಸ್ತಾರವಾಗಿ ಹೇಳಿದ್ದಾರೆ. ಬೇರೆ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಧರ್ಮರಾಜನ ಗ್ರಹಿಕೆಯನ್ನೂ ವ್ಯಾಖ್ಯಾನ ಮಾಡಿ, ಅದನ್ನು ಧರ್ಮರಾಜನ ಮಾತಿನಲ್ಲಿ ಆಚಾರ್ಯರು ಇಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು]

 

ಅನ್ತರಿಕ್ಷಂ ತ್ವಯಾ ಪ್ರೋಕ್ತಂ ಲಕ್ಷಯೋಜನಮುಚ್ಛ್ರಿತಮ್ ।

ಅರ್ದ್ಧಕೋಟ್ಯುಚ್ಛ್ರಿತಃ ಸ್ವರ್ಗ್ಗೋ ವಿಮಾನಾವಲಿಸಙ್ಕುಲಃ ೨೧.೫೬

 

ನಾರದರೇ, ನಿಮ್ಮಿಂದ ಅಂತರಿಕ್ಷವು ಭೂಮಿಯಿಂದ ಲಕ್ಷ ಯೋಜನ ಎತ್ತರದಲ್ಲಿದೆ ಎಂದು ಹೇಳಲ್ಪಟ್ಟಿತು. ನಂತರ ಸ್ವರ್ಗವು ಐವತ್ತು ಲಕ್ಷ ಯೋಜನ ವಿಸ್ತಾರ  ಎಂದು ನಿಮ್ಮಿಂದ ನಾನು ತಿಳಿದಿದ್ದೇನೆ. ಅಲ್ಲಿ ವಿಮಾನಗಳ ಸಾಲು ಸಾಲೇ ಇದೆಯೆಂದು ನಾವು ಕೇಳಿದ್ದೇವೆ.

[ಅಂದರೆ ಭೂಮೇರು ಊರ್ಧ್ವ- ಲಕ್ಷ ಯೋಜನ ಪರ್ಯಂತ  ಅಂತರಿಕ್ಷಲೋಕ. ಅನಂತರ ಅರ್ಧ ಕೋಟಿ ಯೋಜನ ಸ್ವರ್ಗಲೋಕ. ಒಟ್ಟು ೫೧,೦೦೦೦೦ ಯೋಜನ ವಿಸ್ತಾರ]

  

ಭುವಃ ಸ್ವರ್ಗ್ಗಶ್ಚ ಕೋಟ್ಯೈವ ಯೋಜನಾನಾಂ ಪ್ರವಿಸ್ತೃತೌ ।

ಮಹರ್ಜ್ಜನಸ್ತಪಶ್ಚೈವ ಕ್ರಮಾದದ್ಧ್ಯರ್ದ್ಧಯೋಜನಾಃ ೨೧.೫೭

 

ಭುವಃಲೋಕ ಮತ್ತು ಸ್ವರ್ಗಲೋಕ ಒಂದು ಕೋಟಿ ಯೋಜನ ವಿಸ್ತಾರವಾಗಿದೆ ಎಂದು ಹೇಳಲಾಗಿದೆ.  ಮಹರ್ಲೋಕ, ಜನಲೋಕ, ತಪೋಲೋಕ ಇವುಗಳೂ ಕೂಡಾ ಕ್ರಮವಾಗಿ ಅರ್ಧಕ್ಕಿಂತ ಮಿಗಿಲು (ಒಂದೂವರೆಪಟ್ಟು) ಹೆಚ್ಚುಹೆಚ್ಚು ಪರಿಮಾಣವನ್ನು ಹೊಂದಿವೆ.

 

ಪಞ್ಚಾಶತ್ಕೋಟಿವಿಸ್ತಾರಾ ಯೋಜನಾನಾಂ ಸಮಸ್ತಶಃ

ಯಾವನ್ತ ಏತೇ ಮಿಳಿತಾಸ್ತತ್ಪ್ರಮಾಣ ಉದೀರಿತಃ ೨೧.೫೮

 

ಸತ್ಯಾಖ್ಯೋ ಬ್ರಹ್ಮಲೋಕಸ್ತು ಯತ್ರ ಬ್ರಹ್ಮಾ ವಿ ರಾಜತೇ

ತತಶ್ಚ ದ್ವಿಗುಣಃ ಪ್ರೋಕ್ತೋ ವಿಷ್ಣುಲೋಕಃ ಸನಾತನಃ ೨೧.೫೯

 

ಎಲ್ಲವೂ ಸೇರಿದರೆ (ಊರ್ಧ್ವಲೋಕ ಸಮೂಹ ಒಟ್ಟಿಗೆ) ಐವತ್ತು ಕೋಟಿ ಯೋಜನ ಎಂದು ಹೇಳಲಾಗುತ್ತದೆ. ಮಹರ್ಲೋಕ, ಜನಲೋಕ ಮತ್ತು ತಪೋಲೋಕದ ನಂತರ ಚತುರ್ಮುಖನ ಸತ್ಯಲೋಕವಿದೆ ಮತ್ತು ಇದರ ವಿಸ್ತಾರ ಭೂಮಧ್ಯಬಿಂದುವಿನಿಂದ ತಪೋಲೋಕದ ತನಕದ ವಿಸ್ತಾರಕ್ಕೆ ಸಮನಾಗಿದೆ. ಸತ್ಯಲೋಕಕ್ಕಿಂತ  ಎರಡುಪಟ್ಟು ಮಿಗಿಲಾಗಿದೆ ವಿಷ್ಣುಲೋಕ,

 

[ಮಹರ್ಲೋಕ :- ೫೧,೦೦೦೦೦ + ೨೫೫೦೦೦೦ = ೭೬೫೦೦೦೦ ಯೋಜನ. ಜನರ್ಲೋಕ:- ೭೬೫೦೦೦೦ + ೩೮೨೫೦೦೦ = ೧೧೪೭೫೦೦೦ ಯೋಜನ. ತಪೋಲೋಕ:- ೧೧೪೭೫೦೦೦ + ೫೭೩೭೫೦೦ = ೧೭೨೧೨೫೦೦ ಯೋಜನ.  ಭೂಮಧ್ಯಬಿಂದುವಿನಿಂದ ತಪೋಲೋಕದ ತನಕ – ೫೦೦೦೦ + ೫೧೦೦೦೦೦ + ೭೬೫೦೦೦೦ + ೧೧೪೭೫೦೦೦ + ೧೭೨೧೨೫೦೦ = ೪೧೪೮೭೫೦೦ ಯೋಜನ. ಸತ್ಯಲೋಕ -  ೪೧೪೮೭೫೦೦ X ೨ = ೮೨೯೭೫೦೦೦ ಯೋಜನ. ಸತ್ಯಲೋಕದ ದ್ವಿಗುಣ ವಿಷ್ಣುಲೋಕ- ೮೨೯೭೫೦೦೦ X ೨ = ೧೬೫೯೫೦೦೦೦ ಯೋಜನ. ಒಟ್ಟು ೮೨೯೭೫೦೦೦ + ೧೬೫೯೫೦೦೦೦= ೨೪೮೯೨೫೦೦೦. ಹೀಗೆ ಭೂಮಿಯ ಮಧ್ಯದಿಂದ^ ಗಣನೆಗೆ ತೆಗೆದುಕೊಂಡಾಗ ಒಟ್ಟು  ೨೫೦೦೦೦೦೦೦ ಯೋಜನ. ( ^೧೦೭೫೦೦೦+ ೨೪೮೯೨೫೦೦೦).

 ಮೇರು ಪರ್ವತವನ್ನೂ ಲೆಕ್ಕ ಹಾಕಿದರೆ ಐವತ್ತು ಕೋಟಿ ಯೋಜನ ವಿಸ್ತಾರ. ಮೇರು ಪರ್ವತದಿಂದ ಲೆಕ್ಕ ಹಾಕಿದರೆ ಇಪ್ಪತ್ತೈದು ಕೋಟಿ ವಿಸ್ತಾರ. ಅದರಿಂದಾಗಿ ಪುರಾಣದ ಮಾತಿಗೂ ಮಹಾಭಾರತದ ಮಾತುಗಳಿಗೂ ವಿರೋಧವಿಲ್ಲ. ಎಲ್ಲಿಂದ ಲೆಕ್ಕ ಹಾಕಿರುವುದು ಎನ್ನುವುದು ಮುಖ್ಯ. ಹೀಗಾಗಿ ಪುರಾಣ ಬೇರೆಬೇರೆ ಗಣಿತವನ್ನು ಹೇಳಿದಾಗ ಅದರ ವಿವಕ್ಷೆ ಏನಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು].

Sunday, November 21, 2021

Mahabharata Tatparya Nirnaya Kannada 21: 50-54

 

ಅನನ್ತಶೀರ್ಷೋsನನ್ತಾಕ್ಷೋsನನ್ತಪಾದಕರೋರುಕಃ ।

ಅನನ್ತಗುಣಮಾಹಾತ್ಮ್ಯಶ್ಚಿದಾನನ್ದಶರೀರಕಃ                              ೨೧.೫೦

 

ಅನಂತವಾದ ತಲೆಯುಳ್ಳವನು, ಅನಂತವಾದ ಕಣ್ಗಳುಳ್ಳವನು, ಅನಂತ ಪಾದ-ಕರಕಮಲಗಳುಳ್ಳವನು. ಅನಂತವಾದ ಗುಣಮಹಾತ್ಮ್ಯನು. ಜ್ಞಾನಾನಂದವೇ ಮೈವೆತ್ತು ಬಂದವನು.

 

ಮದ್ವಶಾ ಏವ ಸರ್ವೇsಪಿ ತ್ವಂ ಚಾನ್ಯೇ ಚ ಧನಞ್ಜಯ।

ಮತ್ಪ್ರಸಾದಾದ್ ಬಲಂ ಚೈವ ವಿಜಯಶ್ಚಾಖಿಲಾ ಗುಣಾಃ ।

ತಸ್ಮಾನ್ನ ವಿಸ್ಮಯಃ ಕಾರ್ಯ್ಯೋ ನ ದರ್ಪ್ಪಶ್ಚ ತ್ವಯಾsನಘ         ೨೧.೫೧

 

ಎಲೋ ಧನಂಜಯ, ನೀನಾಗಲೀ, ಬೇರೊಬ್ಬರಾಗಲೀ, ಎಲ್ಲರೂ ಕೂಡಾ ನನ್ನ ಕೈಗೊಂಬೆಗಳು. ತನ್ನ ಅನುಗ್ರಹದಿಂದ ಬಲ, ವಿಜಯ, ಮೊದಲಾದ ಎಲ್ಲಾ ಗುಣಗಳೂ ಬರುತ್ತವೆ. ಆ ಕಾರಣದಿಂದ ಆಶ್ಚರ್ಯ ಪಡಬೇಡ. ಪಾಪವಿಲ್ಲದ ನೀನು(ಅನಘ) ದರ್ಪ(ಅಹಂಕಾರ)ವನ್ನೂ ಪಡಬೇಡ. (ದೈತ್ಯಾವೇಶವನ್ನು ತೊಡೆದುಕೋ).

 

‘ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ’      ೨೧.೫೨

 

ನನ್ನಲ್ಲೇ ಬಗೆಯನ್ನು ನೆಡು. ನನ್ನ ಭಕ್ತನಾಗು, ನನ್ನ ಪೂಜೆಯನ್ನು ಮಾಡು, ನನ್ನನ್ನು ಕುರಿತು ಪೊಡಮಡು. ನನ್ನನ್ನೇ ಹೊಂದುತ್ತೀಯ. ಇದು ಎಂದಿಗೂ ಹುಸಿಯಲ್ಲ. ನೀನು ನನಗೆ ಪ್ರಿಯನಾಗಿದ್ದೀಯ ಹಾಗಾಗಿ  ಪ್ರತಿಜ್ಞೆ ಮಾಡಿ ಹೇಳುತ್ತಿದ್ದೇನೆ’.  

 

ಇತ್ಯುಕ್ತಃ ಪ್ರಣಿಪತ್ಯೈನಂ ಕ್ಷಮಸ್ವೇತ್ಯಾಹ ಫಲ್ಗುನಃ

ಉಷಿತ್ವಾ ಕತಿಚಿನ್ಮಾಸಾನ್ ಯಯುಃ ಸರ್ವೇಪಿ ಪಾಣ್ಡವಾಃ         ೨೧.೫೩

 

ಅನುಜ್ಞಾತಾಃ ಕೇಶವೇನ ಭಕ್ತಿನಮ್ರಧಿಯೋsಚ್ಯುತೇ ।

ಸಮ್ಭಾವಿತಾಃ ಕೇಶವೇನ ಸೌಹಾರ್ದ್ದೇನಾಧಿಕೇನ ಚ                  ೨೧.೫೪

 

ಈರೀತಿಯಾಗಿ ಹೇಳಲ್ಪಟ್ಟ ಅರ್ಜುನನು ಕೃಷ್ಣನಿಗೆ ನಮಸ್ಕರಿಸಿ ಕ್ಷಮೆ ಬೇಡಿದ. ಎಲ್ಲಾ ಪಾಂಡವರೂ ಕೂಡಾ ಕೆಲವು ತಿಂಗಳುಗಳ ಕಾಲ ದ್ವಾರಕಾ ಪಟ್ಟಣದಲ್ಲೇ ಇದ್ದು, ಕೃಷ್ಣನಲ್ಲಿ ಭಕ್ತಿಯಿಂದ ಬಾಗಿದ ಬಗೆಯುಳ್ಳವರಾಗಿ, ನಾರಾಯಣನಿಂದ ಬಹುಮಾನಿಸಲ್ಪಟ್ಟು, ಅತ್ಯಂತ ಪ್ರೀತಿಯನ್ನು ಗಳಿಸಿದವರಾಗಿ, ಕೃಷ್ಣನ ಅನುಜ್ಞೆಯನ್ನು ಪಡೆದು ತಮ್ಮ ಪಟ್ಟಣಕ್ಕೆ ತೆರಳಿದರು.

[ಇದು ಭಾಗವತದ ೧೦ನೇ ಸ್ಕಂಧದ ೧೦೩ನೇ ಅಧ್ಯಾಯದಲ್ಲಿ ಬರುವ ಕಥೆಯಾಗಿದ್ದು, ಅದನ್ನು ಇಲ್ಲಿ ಆಚಾರ್ಯರು ಕಾಲಕ್ರಮದಲ್ಲಿ ಪ್ರಸ್ತುತಪಡಿಸಿರುವುದನ್ನು ನಾವು ಗಮನಿಸಬೇಕು]