ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 21, 2021

Mahabharata Tatparya Nirnaya Kannada 21: 133-138

 

ಇತೀರಿತೋsಸೌ ಮಗಧಾಧಿಪೋ ರುಷಾ ಜಗಾದ ನಾಹಂ ಶಿವಯಾಗಯುಕ್ತಾನ್ ।

ಮೋಕ್ಷ್ಯೇ ಪಶೂನ್ ಯುಗಪದ್ ವಾ ಕ್ರಮೇಣ ಯೋತ್ಸ್ಯೇ ಚ ವೋsಥಾಪಿ ಚಮೂಸಹಾಯಾನ್ ೨೧.೧೩೩

 

ಈರೀತಿಯಾಗಿ ಕೃಷ್ಣ ನುಡಿದಾಗ ಜರಾಸಂಧ ಸಿಟ್ಟಿನಿಂದ ಮಾತನಾಡುತ್ತಾನೆ: ‘ನಾನು ಸದಾಶಿವನ ಯಾಗದಲ್ಲಿ ಮೀಸಲಾಗಿಟ್ಟಿರುವ ಪಶುಗಳನ್ನು ಬಿಡುವುದಿಲ್ಲ. ನೀವು ಮೂವರ ವಿರುದ್ಧ ಏಕಕಾಲದಲ್ಲಿ ಅಥವಾ ಕ್ರಮವಾಗಿ ಒಬ್ಬರಾದ ಮೇಲೆ ಒಬ್ಬರೊಂದಿಗೆ ಅಥವಾ ನೀವು ಸೇನಾ ಸಹಾಯದಿಂದ ಕೂಡಿ ಬಂದರೂ ಕೂಡಾ ನಾನು ಯುದ್ಧ ಮಾಡುತ್ತೇನೆ.

 

ನಿರಾಯುಧಃ ಸಾಯುಧೋ ವಾ ಯುಷ್ಮದಿಷ್ಟಾಯುಧೇನ ವಾ ।

ಏಕೋsಪಿ ಸಕಲೈರ್ಯ್ಯೋತ್ಸ್ಯೇ ಸಸೇನೋ ವಾ ಸಸೈನಿಕಾನ್   ೨೧.೧೩೪

 

ನಿರಾಯುಧನಾಗಿ ಆಗಲೀ ಅಥವಾ ಆಯುಧ ಸಹಿತನಾಗಿ ಆಗಲೀ ಅಥವಾ ನಿಮಗೆ ಯಾವ ಆಯುಧ ಇಷ್ಟವೋ ಆ ಆಯುಧದಿಂದಾಗಲೀ ನಾನು ಯುದ್ಧ ಮಾಡುತ್ತೇನೆ. ನೀವು ಸೈನ್ಯದಿಂದ ಬಂದರೆ ನಾನೊಬ್ಬನೇ ಎಲ್ಲರ ಜೊತೆಗೆ ಹೋರಾಡುತ್ತೇನೆ ಅಥವಾ ನನ್ನ ಸೈನ್ಯದೊಂದಿಗೆ ಬರಬೇಕೆಂದರೆ ಅದಕ್ಕೂ ನಾನು ಸಿದ್ಧ’.

 

ಇತ್ಯುಕ್ತವನ್ತಮವದದಜಿತೋರುಬಲೋ ಹರಿಃ ।

ಏಹ್ಯೇಕಮೇಕೋ ವಾsಸ್ಮಾಸು ಸಸೈನ್ಯೋ ವಾ ರಣೇ ನೃಪ             ೨೧.೧೩೫

 

ಈ ರೀತಿಯಾಗಿ ಹೇಳುತ್ತಿರುವ ಜರಾಸಂಧನನ್ನು  ಕುರಿತು ಯಾರೂ ಸೋಲಿಸಲಾಗದ  ಬಲವುಳ್ಳ ಕೃಷ್ಣ ಪರಮಾತ್ಮನು ಹೀಗೆ ಹೇಳಿದ: ‘ಎಲೈ ರಾಜನೇ, ನಮ್ಮಲ್ಲಿ ಒಬ್ಬನನ್ನು ನೀನು ಆರಿಸಿಕೋ. ಸೈನ್ಯದೊಂದಿಗಾಗಲೀ  ಅಥವಾ ನೀನೊಬ್ಬನೇ ಆಗಲೀ.

 

ಯೇನ ಕಾಮಯಸೇ ಯೋದ್ಧುಂ ತಂ ನ ಆಸಾದಯ ದ್ರುತಮ್ ।

ನಿರಾಯುಧಃ ಸಾಯುಧೋ ವಾ ತ್ವದಭೀಷ್ಟಾಯುಧೇನ ವಾ ೨೧.೧೩೬

 

ನಮ್ಮ ಮೂವರಲ್ಲಿ ಯಾರೊಂದಿಗೆ ನೀನು ಯುದ್ಧ ಮಾಡಲು ಇಚ್ಛಿಸುವೆಯೋ ಅವನನ್ನು ನೀನು ಹೊಂದು. ಆಯುಧ ರಹಿತನಾಗಿ ಆಗಲೀ ಆಯುಧದಿಂದ ಕೂಡಿದವನಾಗಿ ಆಗಲೀ ನಿನಗೆ ಇಷ್ಟವಾದ ಆಯುಧದಿಂದಾಗಲೀ’.

 

ಇತ್ಯಾsಹ ಭಗವಾಞ್ಛತ್ರುಂ ಯಶೋ ಭೀಮೇ ವಿವರ್ದ್ದಯನ್ ।

ಘಾತಯಿತ್ವಾ ಸ್ವಶತ್ರುಂ ಚ ಭೀಮೇನಾನುಗ್ರಹಂ ಪರಮ್      ೨೧.೧೩೭

 

ಭೀಮಸ್ಯ ಕರ್ತ್ತುಮಿಚ್ಛಂಶ್ಚ ಭಕ್ತಿಜ್ಞಾನಾದಿವರ್ದ್ಧನಮ್[1]

ತೃಣೀಕರ್ತ್ತುಂ ರಿಪುಂ ಚೈವ ನಿರಾಯುಧತಯಾsಗಮತ್             ೨೧.೧೩೮

 

ಈರೀತಿಯಾಗಿ ತನ್ನ ಶತ್ರುವಾದ ಜರಾಸಂಧನನ್ನು ಭೀಮನಿಂದ  ಕೊಲ್ಲಿಸುವ ಮುಖೇನ ಭೀಮನ ಕೀರ್ತಿಯನ್ನು ಹೆಚ್ಚಿಸಲು, ಅವನಿಗೆ ಪರಮಾನುಗ್ರಹ ಮಾಡಲು, ಜ್ಞಾನ ಭಕ್ತಿ  ಮೊದಲಾದವುಗಳನ್ನು ಭೀಮನಲ್ಲಿ ಮತ್ತಷ್ಟು ಬೆಳೆಸಲು(/ಅನಾವರಣಗೊಳಿಸಲು) ಮತ್ತು ಶತ್ರುವಾಗಿರುವ ಜರಾಸಂಧನನ್ನು ಕಡೆಗಣಿಸಲು ಶ್ರೀಕೃಷ್ಣ ನಿರಾಯುಧನಾಗಿ ಜರಾಸಂಧನಲ್ಲಿಗೆ ಬಂದಿದ್ದ.



[1] -ಭಕ್ತಿಜ್ಞಾನಾಭಿವರ್ದ್ಧನಮ್’ ಇತಿಚ


Sunday, December 19, 2021

Mahabharata Tatparya Nirnaya Kannada 21: 127-132

 ತಾನ್ ವಿಪ್ರವೇಷಾನ್ ಸ ನಿಶಾಮ್ಯ ರಾಜಾ ಮಹಾಭುಜಾನ್ ಸ್ನಾತಕವೇಷಯುಕ್ತಾನ್ ।

  ದ್ವಿತೀಯವರ್ಣ್ಣಾನ್ ಪ್ರವಿಚಿನ್ತ್ಯ ಬಾಹೂನ್ ಜ್ಯಾಕರ್ಕ್ಕಶಾನ್ ವೀಕ್ಷ್ಯ ಬಭಾಷ ಏತಾನ್             ೨೧.೧೨೭

 

ಜರಾಸಂಧನು ದಪ್ಪನಾದ ತೋಳ್ಗಳುಳ್ಳ ಆದರೆ ಬ್ರಾಹ್ಮಣರ ವೇಷವನ್ನು ಧರಿಸಿರುವ, ಬಿಲ್ಲಿನ ದಾರದಿಂದ ಒರಟಾಗಿರುವ ಕೈಗಳಿರುವ ಇವರನ್ನು ಕ್ಷತ್ರಿಯರು ಎಂದು ಚಿಂತಿಸಿ, ಅವರನ್ನು ಕುರಿತು ಹೀಗೆ ಹೇಳಿದನು:

 

ಕೇ ಷ್ಠಾಥ ಕಿಂಹೇತುತ ಆಗತಾಶ್ಚ ಕುತಶ್ಚ ಮೇ ಪರ್ವತಲಿಙ್ಗಭೇದನಮ್ ।

ಕೃತಂ ಭವದ್ಭಿಃ ಕುತ ಏವ ದುರ್ನ್ನಯಾಃ  ಕೃತಾಸ್ತಥಾsನ್ಯೇ ದ್ವಿಜವರ್ಯ್ಯವೇಷೈಃ ೨೧.೧೨೮

 

‘ನೀವು ಯಾರು? ಏಕಾಗಿ ಬಂದಿದ್ದೀರಿ? ಏಕಾಗಿ ನನ್ನ ಪರ್ವತ ಲಿಂಗವನ್ನು ಒಡೆದಿರಿ? ಬ್ರಾಹ್ಮಣರಂತೆ ಕಾಣಿಸಿಕೊಂಡು ಏಕೆ ಈ ರೀತಿ ತೀರ ಕೆಟ್ಟದ್ದಾಗಿ ನೆಡೆದುಕೊಂಡಿರಿ? 

 

ಇತಿ ಬ್ರುವಾಣಂ ಭಗವಾನುವಾಚ ಕಾರ್ಯ್ಯಂ ಹಿ ಶತ್ರೋರಖಿಲಂ ಪ್ರತೀಪಮ್ ।

ಇತ್ಯುಕ್ತ ಊಚೇ ನಹಿ ವಿಪ್ರಶತ್ರುರಹಂ ಕುತೋ ವೋ ಮಮ ಶತ್ರುತಾ ಭವೇತ್             ೨೧.೧೨೯

 

ಈರೀತಿಯಾಗಿ ಹೇಳುವ ಜರಾಸಂಧನನ್ನು ಕುರಿತು ಶ್ರೀಕೃಷ್ಣನು: ‘ಶತ್ರುವಿಗಾಗಬೇಕಾದರೆ ಎಲ್ಲವನ್ನೂ ವಿರುದ್ಧವಾಗಿಯೇ ಮಾಡಬೇಕು. (ಶತ್ರುವಿನ ಮನೆಯನ್ನು ಹಿಂಬಾಗಿಲಿನಿಂದಲೇ ಪ್ರವೇಶಿಸಬೇಕು.  ಶತ್ರುವಿನ ರಾಜ್ಯದಲ್ಲಿ ಅವನ ಪ್ರತಿಷ್ಠೆಯ ಸಂಕೇತವೇನಿದೆ ಅದನ್ನು ಮೊದಲು ಒಡೆದುಹಾಕಬೇಕು-ಇದು ರಾಜನೀತಿ ಅದನ್ನು ಮಾಡಿದೆವು ಎನ್ನುವ ಅಭಿಪ್ರಾಯದಲ್ಲಿ ಶ್ರೀಕೃಷ್ಣ ಮಾತನಾಡಿದ). ಈರೀತಿಯಾಗಿ ಹೇಳಲ್ಪಟ್ಟಾಗ  ಜರಾಸಂಧ ಹೇಳುತ್ತಾನೆ: ‘ನಾನು ಬ್ರಾಹ್ಮಣರ ಶತ್ರುವೇ ಅಲ್ಲ. ನೀವು ನನಗೆ ಶತ್ರುಗಳಾಗಲು ಸಾಧ್ಯವಿಲ್ಲ’ ಎಂದು. (ಜರಾಸಂಧನ ಈ ಮಾತಿನಿಂದ ಇನ್ನೂ ಕೂಡಾ ಅವನಿಗೆ ಇವರು ಬ್ರಾಹ್ಮಣರಲ್ಲ ಎನ್ನುವುದು ನಿಶ್ಚಯವಾಗಿಲ್ಲ ಎನ್ನುವುದು ತಿಳಿಯುತ್ತದೆ).

 

ಇತ್ಯುಕ್ತವಾಕ್ಯಂ ನೃಪತಿಂ ಜಗಾದ ಜನಾರ್ದ್ದನೋ ನೈವ ಹಿ ತಾದೃಶಾ ದ್ವಿಜಾಃ ।

ವಯಂ ರಿಪುಸ್ತೇsಸ್ಮಿ ಹಿ ವಾಸುದೇವ ಇಮೌ ಚ ಭೀಮಾರ್ಜ್ಜುನನಾಮಧೇಯೌ             ೨೧.೧೩೦

 

ಈರೀತಿಯಾಗಿ ಹೇಳುತ್ತಿರಲು ಶ್ರೀಕೃಷ್ಣನು ಜರಾಸಂಧನನ್ನು ಕುರಿತು : ‘ನಾವು ನೀನು ಅಂದುಕೊಂಡಂತಹ ಬ್ರಾಹ್ಮಣರಲ್ಲ. (ವೇದವನ್ನು ಓದುವವರು ಆದರೆ ನೀನು ಅಂದುಕೊಂಡ ಕ್ಷಮಪ್ರಧಾನರಾದ, ದುರ್ಬಲರಾದ, ಜ್ಞಾನಮಾರ್ಗದಲ್ಲಿ ಮಾತ್ರ ಇರುವ ಬ್ರಾಹ್ಮಣರಲ್ಲ ಎನ್ನುವ ಧ್ವನಿ).  ನಾನು ಯಾರು ನಿನ್ನನ್ನು ದ್ವೇಷಿಸುತ್ತಿರುವನೋ ಆ ವಾಸುದೇವ. ಇವರಿಬ್ಬರು-ಭೀಮಾರ್ಜುನರು.

 

ಯದ್ ಬಾನ್ಧವಾನ್ ನಃ ಪಿಶಿತಾಶಿಧರ್ಮ್ಮತೋ ರೌದ್ರೇ ಮಖೇ ಕಲ್ಪಯಿತುಂ ಪಶುತ್ವೇ ।

ಇಚ್ಛಸ್ಯರೇ ವೇದಪಥಂ ವಿಹಾಯ ತಂ ತ್ವಾಂ ಬಲಾಚ್ಛಾಸ್ತುಮಿಹಾsಗತಾ ವಯಮ್ ೨೧.೧೩೧

 

ಯಾವ ಕಾರಣದಿಂದ ನಮ್ಮ ಬಂಧುಗಳಾಗಿರುವ ರಾಜರನ್ನು ರಾಕ್ಷಸಧರ್ಮದಿಂದ ರುದ್ರನಿಗೆ ಸಂಬಂಧಿಸಿದ ಯಾಗದಲ್ಲಿ ಪಶುಗಳನ್ನಾಗಿ ಮಾಡಲು ನೀನು ಬಯಸುತ್ತಿದ್ದೀಯ? ಎಲೈ ಶತ್ರುವೇ, ನೀನು  ವೇದಮಾರ್ಗವನ್ನು ಬಿಟ್ಟು ನರಮೇದವನ್ನು ಮಾಡಲು ಹೊರಟಿದ್ದೀಯ. ಅಂತಹ ನಿನ್ನನ್ನು ಬಲದಿಂದ ನಿಗ್ರಹಿಸಲು ನಾವು ಬಂದಿದ್ದೇವೆ.

 

ವಿಮೋಕ್ಷಯಾಮಃ ಸ್ವಜನಾನ್ ಯದಿ ತ್ವಂ ನ ಮೋಚಯಸ್ಯದ್ಯ ನಿಗೃಹ್ಯ ಚ ತ್ವಾಮ್ ।

ಮುಞ್ಚಾಥ ವಾ ತಾನಭಿಯಾಹಿ ವಾsಸ್ಮಾನ್ ರಣಾಯ ಮರ್ತ್ತುಂ ಕೃತನಿಶ್ಚಯೋsತ್ರ ೨೧.೧೩೨

 

ಒಂದುವೇಳೆ ನೀನು ನಮ್ಮ ಬಂಧುಗಳಾದ ರಾಜರನ್ನು ಬಿಡುವುದಿಲ್ಲವಾದರೆ, ನಿನ್ನನ್ನು ಕೊಂದು ನಮ್ಮವರನ್ನು ಬಿಡಿಸುತ್ತೇವೆ. ಅದರಿಂದ ಅವರನ್ನು ಬಿಡು ಅಥವಾ ಯುದ್ಧದಿಂದ ನಮ್ಮನ್ನು ಗೆಲ್ಲು. ಸಾಯುವ ನಿಶ್ಚಯ ಮಾಡಿಕೊಂಡೇ ನಮ್ಮೊಂದಿಗೆ ಯುದ್ಧಕ್ಕೆ ಬಾ’.

Wednesday, December 15, 2021

Mahabharata Tatparya Nirnaya Kannada 21: 123-126

 

ಸಮೇತ್ಯ ಮಾಗಧಾಂಸ್ತು ತೇ ಶಿವೋರುಲಿಙ್ಗಮಿತ್ಯಲಮ್ ।

ಸುಮಾಲ್ಯವಸ್ತ್ರಭೂಷಣೈಃ ಸಮರ್ಚ್ಚಿತಂ ಗಿರಿಂ ಯಯುಃ           ೨೧.೧೨೩

 

ಅವರು ಮಗಧದೇಶವನ್ನು ತಲುಪಿ, ಪ್ರತಿದಿನವೂ ಪುಷ್ಪಮಾಲೆ-ವಸ್ತ್ರಾಭರಣಗಳಿಂದ ಚೆನ್ನಾಗಿ ಪೂಜೆಗೊಳ್ಳುತ್ತಿದ್ದ ಉತ್ಕೃಷ್ಟವಾದ ಲಿಂಗದ ಆಕಾರದಲ್ಲಿರುವ ಪರ್ವತವನ್ನು ಹೊಂದಿದರು.  [ಆ ಬೆಟ್ಟಕ್ಕೆ ಜರಾಸಂಧನ ರಾಜ್ಯದಲ್ಲಿ ವಿಶೇಷವಾದ ಗೌರವ ಸಲ್ಲುತ್ತಿತ್ತು. ಅದು ಲಿಂಗದ ಆಕಾರದಲ್ಲಿರುವುದರಿಂದ ಪ್ರತಿದಿನವೂ ಆ ಬೆಟ್ಟವನ್ನು ವಸ್ತ್ರಾಭರಣಗಳನ್ನು ಹಾಕಿ ಆತ ಪೂಜಿಸುತ್ತಿದ್ದ].

[ಮಹಾಭಾರತದಲ್ಲಿ ಈ ಕುರಿತ  ವಿವರ ಕಾಣಸಿಗುತ್ತದೆ:  ದುರ್ವಾಸಾಸ್ತು ಸಹಂಸೇನ ಡಿಭಕೇನ ನಿರಾಕೃತಃ । ಜರಾಸನ್ಧಂ ಸಮಾಗಮ್ಯ ಜಹಿ ತಾವಿತ್ಯುವಾಚ ಹ । ಉಪೇಕ್ಷಿತೇ  ತೇನ ಕಾರ್ಯೇ ಶಿಷ್ಯಾವಿತಿ ತಪೋಧನಃ । ಶಶಾಪ ಮಾಗಧಂ ರೋಷಾತ್ ತ್ಯಕ್ಷ್ಯತೀಶಃ  ಪುರಂ  ತವ । ತ್ವದರ್ಚಿತಂ  ಚ ಲಿಙ್ಗಂ ವೈ  ಪರ್ವತಂ  ವಿಫಲಂ ಭವೇತ್’  ಹಂಸ ಮತ್ತು ಡಿಭಕರು ಶಿವನ ವರಪಡೆದು ಶಿವನ ಅವತಾರವೇ ಆಗಿರುವ ದುರ್ವಾಸರಿಗೆ ಕಾಟ ಕೊಟ್ಟರು. ಆಗ ದುರ್ವಾಸರು ಮೊದಲು ಜರಾಸಂಧನ ಬಳಿಗೆ ಹೋಗಿ ಈ ಕುರಿತು ಹೇಳಿದರು. ಆದರೆ ಜರಾಸಂಧ ತನ್ನ ಶಿಷ್ಯರಾದ ಹಂಸ-ಡಿಭಕರನ್ನು ಕೊಲ್ಲಲಿಲ್ಲ. ಆಗ ದುರ್ವಾಸರು ಅವನಿಗೆ ‘ಇನ್ನು ಮುಂದೆ  ರುದ್ರದೇವರ ಅನುಗ್ರಹ ನಿನ್ನ ಮೇಲಿರುವುದಿಲ್ಲ. ನೀನು ಶಿವಲಿಂಗ ಎಂದು ಪೂಜಿಸುವ ಆ ಪರ್ವತವನ್ನು ಸದ್ಯದಲ್ಲೇ ನಿನ್ನ ಶತ್ರುಗಳು ನಾಶಮಾಡಲಿದ್ದಾರೆ’ ಎಂದು ಶಾಪವಿತ್ತಿದ್ದರು].

 

ಸ್ವಶೀರ್ಷತೋsಪಿ ಚಾsದೃತಂ ಜರಾಸುತೇನ ತೇ ಗಿರಿಮ್ ।

ನ್ಯಪಾತಯನ್ತ ಬಾಹುಭಿಸ್ತಮಸ್ಯ ಚೋತ್ತಮಾಙ್ಗವತ್                  ೨೧.೧೨೪

 

ಜರಾಸಂಧ ತನ್ನ ತಲೆಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ(ದಿನವೂ ತಲೆ ಮಣಿಯುತ್ತಿದ್ದ)  ಆ ಲಿಂಗಾಕಾರದ ಗಿರಿಯನ್ನು  ಅವರು ತಮ್ಮ  ಕೈಗಳಿಂದ, ಅವನ ಶಿರಚ್ಛೇದ ಮಾಡುವಂತೆ ಬೀಳಿಸಿದರು

 

ಅದ್ವಾರತಸ್ತೇ ನಗರಂ ಪ್ರವಿಶ್ಯ ಮಾಷಸ್ಯ ನಾಳೇನ ಕೃತಾಸ್ತ್ರಿಭೇರೀಃ ।

ಪುಷ್ಟಿಪ್ರದಾ ಬಿಭಿದುಸ್ತಸ್ಯ ಕೀರ್ತ್ತಿಶಾಸ್ತ್ರೋಪಮಾ ನ್ಯಕ್ಕೃತಮಾಗಧೇಶಾಃ             ೨೧.೧೨೫

 

ಕೃಷ್ಣ-ಭೀಮಾರ್ಜುನರು  ನಗರದ ಮುಖ್ಯದ್ವಾರದಿಂದ ಪ್ರವೇಶಿಸದೇ, ಹಿಂದಿನ ದ್ವಾರದಿಂದ  ನಗರವನ್ನು ಪ್ರವೇಶಮಾಡಿ, ಮಾಷನೆಂಬ ರಕ್ಕಸನ ಕಂಠನಾಳಗಳಿಂದ ಮಾಡಿದ, ಅದರ ಶಬ್ದವನ್ನು ಕೇಳಿದೊಡನೆ ಶಕ್ತಿಯನ್ನು ಕೊಡುವ(ಜರಾಸಂಧನ ಕೀರ್ತಿಯೋ ಎಂಬಂತಿದ್ದ) ಮೂರು ಭೇರಿಗಳನ್ನು ಜರಾಸಂಧನನ್ನು ತಿರಸ್ಕರಿಸಿ ಅವರು ಒಡೆದು ಹಾಕಿದರು.

[ಮಹಾಭಾರತದಲ್ಲಿ(ಸಭಾಪರ್ವ ೨೧.೨೦) ಹೀಗಿದೆ: ‘ವೃಷಭಾಕಾರಮಸುರಂ ಮಾಷನಾಮಾನಮಾಹನತ್ । ತಂ ಹತ್ವಾ ಮಾಷನಾಳೇಭ್ಯಸ್ತಿಸ್ರೋ ಭೇರಿರಕಾರಯತ್ । ಅನಡುಚ್ಚರ್ಮಣಾ ತೇನ ಸ್ಥಾಪಯಾಮಾಸ ವೈ ಪುರೇ’] ಮಾಷ ಎನ್ನುವ ಒಬ್ಬ ನರಭಕ್ಷಕ ಅಸುರನಿದ್ದ. ಅವನು ಎತ್ತಿನ ವೇಷವನ್ನು ಹಾಕಿಕೊಂಡಿರುತ್ತಿದ್ದ.  ಜರಾಸಂಧ ಆ ಅಸುರನನ್ನು ಕೊಂದು, ಅವನ ಚರ್ಮವನ್ನು ಸುಲಿಸಿ, ಅದರಿಂದ ಮೂರು ಭೇರಿಗಳನ್ನು ಮಾಡಿ ನಗರದಲ್ಲಿಟ್ಟಿದ್ದ. ಆ ಭೇರಿಗಳನ್ನು ಇವರು ಒಡೆದು ಹಾಕಿದರು].

 

ತಥಾsಪಣೇಭ್ಯೋ ಬಹುಮಾಲ್ಯಗನ್ಧಾನ್ ಪ್ರಸ̐ಹ್ಯ ಸಙ್ಗೃಹ್ಯ ಶುಭಾಂಶ್ಚ ದಧ್ರುಃ ।

ಅದ್ವಾರತಸ್ತಸ್ಯ ಗೃಹಂ ಚ ಸಸ್ರುರ್ಭೋಶಬ್ದತಸ್ತಂ  ಚ ನೃಪಂ ಪ್ರಸಸ್ರುಃ  ೨೧.೧೨೬

 

ಹಾಗೆಯೇ, ಅಂಗಡಿಗಳಿಂದ ಹಾರಗಳನ್ನೂ, ಗಂಧಗಳನ್ನೂ ಬಲಾತ್ಕಾರವಾಗಿ ತೆಗೆದುಕೊಂಡ ಅವರು, ಗಂಧವನ್ನು ಪೂಸಿಕೊಂಡು ಹಾರವನ್ನು ಧರಿಸಿದರು. ನಂತರ ಜರಾಸಂಧನ ಮನೆಯನ್ನು ಹಿತ್ತಲ ಬಾಗಿಲಿನಿಂದ ಪ್ರವೇಶ ಮಾಡಿದರು. ‘ಭೋಃ - ಜರಾಸಂಧ’ ಎಂದು ಆ ಜರಾಸಂಧನ ಬಳಿ ಬಂದರು.

[‘ಬಲಾದ್ ಗೃಹೀತ್ವಾ ಮಾಲ್ಯಾನಿ ಮಾಲಾಕಾರಾನ್ಮಹಾಬಲಾಃ’ (ಸಭಾಪರ್ವ ೨೧.೩೦) ‘ಅಧ್ವಾರೇಣ ಪ್ರವಿಷ್ಟಾ ಸ್ಥ ನಿರ್ಭಯಾ ರಾಜಕಿಲ್ಬಿಷಾತ್’ (೫೨). ರಾಜನಿಗೆ ವಿರುದ್ಧವಾದ ತಮ್ಮ ನಡೆಯ ಬಗ್ಗೆ ಭಯಪಡದೇ ಅವರು ಇವೆಲ್ಲವನ್ನೂ ಮಾಡಿದರು. ‘ಭೋಶಬ್ದೇನೈವ ರಾಜಾನಮೂಚುಸ್ತೇ ತು ಮಹಾರಥಾಃ’ (೩೭) ಬ್ರಾಹ್ಮಣರು ‘ಭೋಃ ಎಂದು ಸಂಬೋಧನೆ ಮಾಡಬಹುದೇ ವಿನಃ, ಆ ರೀತಿಯಾಗಿ ರಾಜನನ್ನು ಎಲ್ಲರೂ ಸಂಬೊಧನೆ ಮಾಡುವಂತಿಲ್ಲ. ಆದರೆ ಇಲ್ಲಿ ಕ್ಷತ್ರಿಯರಾದ ಅವರು ಆ ರೀತಿ ಸಂಬೋಧನೆ ಮಾಡಿದರು].