ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, January 26, 2022

Mahabharata Tatparya Nirnaya Kannada 21: 270-277

 

ಗತೇಷು ಸರ್ವರಾಜಸು ಸ್ವಕಾಂ ಪುರಂ ಸ್ವಕೇಷು ಚ ।

ಸಭೀಷ್ಮಕೇಷು ಸರ್ವಶಃ ಸಹಾsಮ್ಬಿಕೇಯಕೇಷು ಚ                   ॥೨೧.೨೭೦॥

 

ವಿಚಿತ್ರರತ್ನನಿರ್ಮ್ಮಿತೇ ರವಿಪ್ರಭೇ ಸಭಾತಳೇ ।

ಸಕೇಶವೋ ವರಾಸನೇ ವಿವೇಶ ಧರ್ಮ್ಮನನ್ದನಃ                       ॥೨೧.೨೭೧॥

 

ಎಲ್ಲಾ ರಾಜರೂ ತಮ್ಮ ಪಟ್ಟಣಕ್ಕೆ ಹಿಂತಿರುಗುತ್ತಿರಲು, ಹಾಗೆಯೇ,  ಭೀಷ್ಮಾಚಾರ್ಯರೇ ಮೊದಲಾಗಿರುವ, ಧೃತರಾಷ್ಟ್ರನೇ ಮೊದಲಾದ ಹಿರಿಯರೆಲ್ಲರೂ ತಮ್ಮತಮ್ಮ ಪಟ್ಟಣಕ್ಕೆ ತೆರಳಲು, ವಿಚಿತ್ರರತ್ನದಿಂದ ರಚಿತವಾದ, ಸೂರ್ಯನಂತೆ ಕಾಂತಿಯುಳ್ಳ ಸಭಾತಳದಲ್ಲಿ, ಕೃಷ್ಣನಿಂದೊಡಗೂಡಿದ ಧರ್ಮರಾಜನು ಉತ್ಕೃಷ್ಟವಾದ ಆಸನದಲ್ಲಿ ಕುಳಿತನು. 

 

ತಥೈವ ರುಗ್ಮಿಣೀಮುಖಾಃ ಪರಿಗ್ರಹಾ ರಮೇಶಿತುಃ ।

ತಥೈವ ಭೀಮಫಲ್ಗುನಾವುಪಾವಿಶನ್ ಹರೇರುಪ                       ॥೨೧.೨೭೨॥

 

ಹಾಗೆಯೇ, ರುಗ್ಮಿಣಿ ಮೊದಲಾಗಿರುವ ಪರಮಾತ್ಮನ ಹೆಂಡಂದಿರು, ಭೀಮಸೇನ ಮತ್ತು ಅರ್ಜುನ ಮೊದಲಾದವರು ಪರಮಾತ್ಮನ ಸಮೀಪ ಕುಳಿತರು.

[ಇಲ್ಲಿ ವಿವರಿಸಿರುವ ಘಟನೆಗಳನ್ನು ವ್ಯತ್ಯಾಸ ಶೈಲಿಯಲ್ಲಿ ಭಾರತ ವಿವರಿಸಿರುವುದನ್ನು ಕಾಣುತ್ತೇವೆ.  ಪರಮಾತ್ಮ ಕುಳಿತಿರುವಾಗಲೇ ಅವನ ಮುಂದೆ ದುರ್ಯೋಧನನಿಗೆ ಅವಮಾನವಾಯಿತು ಎನ್ನುತ್ತದೆ ಭಾಗವತ. ಆದರೆ ಶ್ರೀಕೃಷ್ಣ ಮೊದಲೇ ಹೋಗಿದ್ದ ಎಂದು ಮಹಾಭಾರತ ಹೇಳಿದಂತೆ ಕಾಣುತ್ತದೆ.  ಅವೆರಡರ ಕಥಾಶೈಲಿಯನ್ನು ಕೂಡಿಸಿ ಯಾವ ರೀತಿ ಅರ್ಥಮಾಡಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ವಿವರಿಸಿದ್ದಾರೆ].

 

ಸಹೈವ ವಾಯುಸೂನುನಾ ತಥೈವ ಪಾರ್ಷತಾತ್ಮಜಾ ।

ಉಪೈವ ರುಗ್ಮಿಣೀಂ ಶುಭಾ ತಥೈವ ಸತ್ಯಭಾಮಿನೀಮ್             ॥೨೧.೨೭೩॥

 

ಭೀಮನ ಜೊತೆಗೂಡಿಯೇ ದ್ರೌಪದಿಯೂ ಕೂಡಾ ರುಗ್ಮಿಣಿ ಹಾಗೂ ಸತ್ಯಭಾಮೆಯ ಜೊತೆಗೆ ಕುಳಿತಳು.

 

ಯಮೌ ಚ ಪಾರ್ಷತಾದಯೋ ಧನಞ್ಜಯಾನ್ತಿಕೇSವಿಶನ್ ।

ತಥೈವ ರಾಮಸಾತ್ಯಕೀ ಸಮೀಪ ಏವ ಭೂಭೃತಃ                     ॥೨೧.೨೭೪॥

 

ನಕುಲ-ಸಹದೇವರು, ಧೃಷ್ಟದ್ಯುಮ್ನ ಮೊದಲಾದವರು ಅರ್ಜುನನ ಬಳಿ ಕುಳಿತರು. ಹಾಗೆಯೇ ಬಲರಾಮ ಹಾಗೂ ಸಾತ್ಯಕಿ ಪರಮಾತ್ಮನ ಸಮೀಪದಲ್ಲಿಯೇ ಕುಳಿತರು.

 

ಸಮಾಸತಾಂ ತು ಸಾ ಸಭಾ ವ್ಯರೋಚತಾಧಿಕಂ ತದಾ ।

ಯಥಾ ಸಭಾ ಸ್ವಯಮ್ಭುವಃ ಸಮಾಸ್ಥಿತಾ ಚ ವಿಷ್ಣುನಾ               ॥೨೧.೨೭೫॥

 

ವಿಷ್ಣುವಿನಿಂದ ಅಧಿಷ್ಠಿತವಾದ ಬ್ರಹ್ಮದೇವರ ಸಭೆಯಂತೆ ಈ ಸಭೆಯೂ ಕೂಡಾ ಬಹಳವಾಗಿ ಕಂಗೊಳಿಸಿತು.

 

ವಿಚಿತ್ರಹೇಮಮಾಲಿನಃ ಶುಭಾಮ್ಬರಾಶ್ಚ ತೇSಧಿಕಮ್ ।

ಸ್ಪುರತ್ಕಿರೀಟಕುಣ್ಡಲಾ ವಿರೇಜುರತ್ರ ತೇ ನೃಪಾಃ                       ॥೨೧.೨೭೬॥

 

ವಿಚಿತ್ರವಾದ ಬಂಗಾರದ ಮಾಲೆಗಳನ್ನು ಧರಿಸಿ, ಶುಭ್ರ ವಸ್ತ್ರಗಳನ್ನು, ಹೊಳೆಯುವ(ಪ್ರಕಾಶಮಾನವಾದ) ಕಿರೀಟ-ಕುಂಡಲಗಳನ್ನೂ ಧರಿಸಿ, ಪ್ರಸಿದ್ಧರಾದ ರಾಜರು ಶೋಭಿಸಿದರು.

 

ವಿಶೇಷತೋ ಜನಾರ್ದ್ದನಃ ಸಭಾರ್ಯ್ಯಕೋ ಜಗತ್ಪ್ರಭುಃ ।

ಯಥಾ ದಿವೌಕಸಾಂ ಸದಸ್ಯನನ್ತಸದ್ಗುಣಾರ್ಣ್ಣವಃ                       ॥೨೧.೨೭೭॥

 

ವಿಶೇಷವಾಗಿ ಜಗದೊಡೆಯನಾದ ಶ್ರೀಕೃಷ್ಣನು ತನ್ನ ಹೆಂಡತಿಯರೊಡಗೂಡಿ ಕುಳಿತಿದ್ದ. ಯಾವರೀತಿ ದೇವತೆಗಳ ಸಭೆಯಲ್ಲಿ ತನ್ನ ಮೂಲರೂಪದಿಂದ ಕುಳಿತಿರುತ್ತಾನೋ, ಹಾಗೇ ಅವತಾರ ರೂಪದಿಂದಲೂ ಕುಳಿತಿದ್ದ.

Tuesday, January 25, 2022

Mahabharata Tatparya Nirnaya Kannada 21: 260-269

            ದೇವಸಙ್ಘಭವಿನಾಂ ಮಹಾನಭೂದೀಕ್ಷ್ಯ ತೋಷ ಇಹ ಕೇಶವೇSಧಿಕಾಮ್ ।

ಅರ್ಚ್ಚನಾಂ ಯ ಇಹ ಮಾನುಷೋ ಜನೋ ಮದ್ಧ್ಯ ಏವ ಸ ತು ಸಂಸ್ಥಿತೋSಭವತ್ ॥೨೧.೨೬೦॥

 

ಈ ರಾಜಸೂಯ ಯಾಗದಲ್ಲಿ ಶ್ರೀಕೃಷ್ಣನಲ್ಲಿ  ಅಗ್ರಪೂಜೆಯನ್ನು ಕಂಡ ಸಾತ್ವಿಕರಾದ ಉತ್ತಮ ಜೀವರಿಗೆ  ಬಹಳ ಸಂತೋಷ ಉಂಟಾಯಿತು. ಮಧ್ಯಮರಾದ ಮನುಷ್ಯರು ಮಧ್ಯಾವಸ್ಥೆಯಲ್ಲಿಯೇ ಇರುವಂತಾದರು. (ಅದೂ ಸರಿ, ಇದೂ ಸರಿ ಎನ್ನುವಂತೆ ಮಧ್ಯದ ಅಭಿಪ್ರಾಯವನ್ನು ಹೊಂದಿದರು).

 

ಆಸುರಾ ಇಹ ಸುಯೋಧನಾದಯಸ್ತತ್ರ ತೇ ವಿಮನಸೋ ಬಭೂವಿರೇ ।

ದುರ್ವಚೋಭಿರಧಿಕಂ ಚ ಚೇದಿಪಃ ಕೃಷ್ಣಮಾರ್ಚ್ಛದುರುಸದ್ಗುಣಾರ್ಣ್ಣವಮ್             ॥೨೧.೨೬೧॥

 

ದುರ್ಯೋಧನ ಮೊದಲಾದ ಅಸುರ ಪ್ರಕೃತಿಯವರು ಮನಸ್ಸಿನಲ್ಲಿಯೇ ಸಂಕಟಗೊಂಡರು. ಶಿಶುಪಾಲನು ಗುಣಗಳಿಗೆ ಕಡಲಿನಂತೆ ಇರುವ ಕೃಷ್ಣನನ್ನು ಕೆಟ್ಟ-ಕೆಟ್ಟ ಮಾತುಗಳಿಂದ ಬೈಯ್ಯಲು ಪ್ರಾರಂಭಿಸಿದ.

 

ಸಮಾಹ್ವಯಚ್ಚ ಕೇಶವಂ ಯುಧೇ ತಮಾಶು ಕೇಶವಃ ।

ನಿವಾರ್ಯ್ಯ ತಸ್ಯ ಸಾಯಕಾಞ್ಜಘಾನ ಚಾರಿಣಾ ಪ್ರಭುಃ                           ॥೨೧.೨೬೨॥

 

ಶಿಶುಪಾಲನು ಶ್ರೀಕೃಷ್ಣನನ್ನು ಯುದ್ಧಕ್ಕಾಗಿ ಕರೆದನು. ಸರ್ವಸಮರ್ಥನಾದ ನಾರಾಯಣನು ಶೀಘ್ರದಲ್ಲಿ ಶಿಶುಪಾಲನ ಬಾಣಗಳನ್ನು ತಡೆದು, ಚಕ್ರದಿಂದ ಅವನನ್ನು ಸಂಹಾರ ಮಾಡಿದನು.

 

ನಿಕೃತ್ತ್ಯಮಾನಕನ್ಧರಃ ಸ ಭಕ್ತಿಮಾನಭೂದ್ಧರೌ ।

ತಮಾಶ್ರಿತಶ್ಚ ಯೋSಸುರೋ ಮಹಾತಮಃ ಪ್ರಪೇದಿವಾನ್                   ॥೨೧.೨೬೩॥

 

ಕತ್ತು ತುಂಡರಿಸಿ ಹೋಗುತ್ತಿರುವಾಗ ಶಿಶುಪಾಲನು (ಅವನೋಳಗಿದ್ದ ಜಯನು) ಕೃಷ್ಣನಲ್ಲಿ ಭಕ್ತಿಯುಳ್ಳವನಾದನು. ಅವನನ್ನು ಆಶ್ರಯಿಸಿರುವ ಅಸುರನೋ, ಅನ್ಧಂತಮಸ್ಸಿಗೆ ಹೋದನು.

 

ಜಯಃ ಪ್ರವಿಶ್ಯ ಕೇಶವಂ ಪುನಶ್ಚ ಪಾರ್ಷದೋSಭವತ್ ।

ಅಸೌ ಚ ಪಾಣ್ಡವಕ್ರತುಃ ಪ್ರವರ್ತ್ತಿತೋ ಯಥೋದಿತಃ                ॥೨೧.೨೬೪॥

 

ಜಯನು ಆಗ ಕೇಶವನನ್ನು ಪ್ರವೇಶಿಸಿ, ಮತ್ತೆ ಪುನಃ ದ್ವಾರಪಾಲಕನಾದನು. ಪಾಂಡವರ ಈ ರಾಜಸೂಯ ಯಾಗವು ಶಾಸ್ತ್ರೋಕ್ತವಾಗಿ ನಡೆಯಿತು.

 

ಸುವರ್ಣ್ಣರತ್ನಭಾರಕಾನ್ ಬಹೂನ್ ನೃಪಾ ಉಪಾನಯನ್ ।

ಉಪಾಯನಂ ಸುಯೋಧನಂ ನೃಪೋSದಿಶದ್ ಗ್ರಹೇSಸ್ಯ ಚ                ॥೨೧.೨೬೫॥

 

ರಾಜರುಗಳು ಬಹಳವಾಗಿರುವ ಬಂಗಾರದ, ರತ್ನದ ಗಟ್ಟಿಗಳನ್ನು ಕಾಣಿಕೆಯಾಗಿ ಕೊಟ್ಟರು. ಈ ಎಲ್ಲಾ ಕಾಣಿಕೆಗಳನ್ನು ಸ್ವೀಕರಿಸುವ ಜವಾಬ್ದಾರಿಯನ್ನು ಯುಧಿಷ್ಠಿರ ದುರ್ಯೋಧನನಿಗೊಪ್ಪಿಸಿ ಆಜ್ಞೆ ಮಾಡಿದ.

 

ಅಭೋಜಯಂಸ್ತಥಾ ದ್ವಿಜಾನ್ ಯಥೇಷ್ಟಭಕ್ಷ್ಯಭೋಜ್ಯಕೈಃ ।

ಸುವರ್ಣ್ಣರತ್ನಭಾರಕಾನ್ ಬಹೂಂಶ್ಚ ದಕ್ಷಿಣಾ ದದುಃ                   ॥೨೧.೨೬೬॥

 

ಅವರವರಿಗೆ ಇಷ್ಟವಾದ ಭಕ್ಷ್ಯಭೋಜ್ಯಗಳಿಂದ ಬ್ರಾಹ್ಮಣರಿಗೆ ಉಣಬಡಿಸಿ, ಬಂಗಾರದ-ರತ್ನದ ಗಟ್ಟಿಗಳನ್ನು ಅವರಿಗೆ ದಕ್ಷಿಣೆಯಾಗಿ ಕೊಟ್ಟರು.  

 

ಯದಿಷ್ಟಮಾಸ ಯಸ್ಯ ಚ ಪ್ರದತ್ತಮೇವ ಪಾಣ್ಡವೈಃ ।

ಸಮಸ್ತಮತ್ರ ಸರ್ವಶೋsಥ ಸಸ್ನುರುದ್ಭೃತಾ ಮುದಾ               ॥೨೧.೨೬೭॥

 

ಈ ಯಜ್ಞದಲ್ಲಿ ಯಾರಿಗೆ ಯಾವುದರ ಬಯಕೆ ಇತ್ತೋ, ಅದು ಪಾಂಡವರಿಂದ ಕೊಡಲ್ಪಟ್ಟಿತು. ಯಜ್ಞ ಸಮಾಪ್ತಿಯಾಗುತ್ತಿದ್ದಂತೆ ಪಾಂಡವರು ಎಲ್ಲರೊಂದಿಗೆ ಅವಭೃಥಸ್ನಾನ ಮಾಡಿದರು.

 

ನದತ್ಸುರೋರುದುನ್ದುಭಿಪ್ರಗೀತದೇವಗಾಯಕಾಃ ।

ಪ್ರನೃತ್ತದಿವ್ಯಯೋಷಿತಃ ಸುರಾಪಗಾಂ ವ್ಯಗಾಹಯನ್               ॥೨೧.೨೬೮॥

 

ಉತ್ಕೃಷ್ಟವಾದ ದುಂದುಭಿ ಮೊದಲಾದ ದೇವತಾ ವಾದ್ಯಗಳು ಶಬ್ದ ಮಾಡುತ್ತಿರಲು, ಗಂಧರ್ವರೇ ಮೊದಲಾದವರು ಹಾಡುತ್ತಿರಲು, ಅಪ್ಸರೆಯರು ನರ್ತನ ಮಾಡುತ್ತಿರಲು, ಅವರೆಲ್ಲರೂ ಗಂಗಾನದಿಯಲ್ಲಿ ಸ್ನಾನ ಮಾಡಿದರು.

 

ಸಮಸ್ತರಾಜಸಂಯುತಾ ವಿಗಾಹ್ಯ ಜಾಹ್ನವೀಜಲೇ ।

ಪುರಂ ಯಯುಃ ಪುನಶ್ಚ  ತೇ ಸುಸದ್ಮ ಚಾಗಮನ್ ಸುರಾಃ             ॥೨೧.೨೬೯॥

 

ಎಲ್ಲಾ ರಾಜರಿಂದ ಕೂಡಿದವರಾದ ಪಾಂಡವರು ಗಂಗೆಯಲ್ಲಿ ಸ್ನಾನ ಮಾಡಿ, ಮತ್ತೆ ತಮ್ಮ ಪಟ್ಟಣಕ್ಕೆ (ಇಂದ್ರಪ್ರಸ್ಥಕ್ಕೆ)ತೆರಳಿದರು. ದೇವತೆಗಳು  ತಮ್ಮ ಲೋಕಕ್ಕೆ ಹಿಂತಿರುಗಿದರು.

Monday, January 24, 2022

Mahabharata Tatparya Nirnaya Kannada 21: 249-259

 

ಪಿತಾಮಹಾಗ್ರ್ಯಪೂಜಾರ್ಹಃ ಕೋsತ್ರ ಲೋಕಸಮಾಗಮೇ ।

ಬ್ರಹ್ಮಶರ್ವಾದಯಶ್ಚಾತ್ರ ಸನ್ತಿ ರಾಜಾನ ಏವ ಚ                        ॥೨೧.೨೪೯॥

 

‘ಭೀಷ್ಮ ಪಿತಾಮಹರೇ, ಈ ಲೋಕಸಮಾಗಮದಲ್ಲಿ ಮೊದಲ ಪೂಜೆಗೆ ಅರ್ಹನಾದವನು ಯಾರು? (ಯಾಗ ಮುಗಿದು, ಅವಭೃಕ್ಕೂ ಮೊದಲು, ಎಲ್ಲರಿಗೂ ಗೌರವ ಸಲ್ಲಿಸುವಾಗ, ಅಲ್ಲಿ ಮೊದಲ ಪೂಜೆಗೆ ಅರ್ಹನಾದವನು ಯಾರು ಎನ್ನುವ ಪ್ರಶ್ನೆ). ಬ್ರಹ್ಮ, ರುದ್ರ, ಮೊದಲಾದವರಿದ್ದಾರೆ. ದೊಡ್ಡದೊಡ್ಡ ಚಕ್ರವರ್ತಿಗಳಿದ್ದಾರೆ. ಯಾರಿಗೆ ಮೊದಲ ಪೂಜೆ ಸಲ್ಲಬೇಕು?

 

ಇತಿ ಪೃಷ್ಟೋSಬ್ರವೀತ್ ಭೀಷ್ಮಃ ಕೃಷ್ಣಂ ಪೂಜ್ಯತಮಂ ಪ್ರಭುಮ್ ।

ಯದ್ಯಪ್ಯೇಕಸ್ತ್ರಿಧಾ ವಿಷ್ಣುರ್ವಸಿಷ್ಠಭೃಗುವೃಷ್ಣಿಷು              ॥೨೧.೨೫೦॥

 

ಪ್ರಾದುರ್ಭೂತಸ್ತಥಾSಪ್ಯೇತೇ ನೃಪಾ ಹಿ ವ್ಯಾಸರಾಮಯೋಃ  ।

ವಿಪ್ರತ್ವಾನ್ನ ವಿರುದ್ಧ್ಯನ್ತೇ ತತ ಏವ ಚ ಯುಕ್ತತಾಮ್ ॥೨೧.೨೫೧॥

 

 

ಈ ರೀತಿಯಾಗಿ ಯುಧಿಷ್ಠಿರನಿಂದ ಕೇಳಲ್ಪಟ್ಟ ಭೀಷ್ಮಾಚಾರ್ಯರು ‘ಶ್ರೀಕೃಷ್ಣನೇ  ಮೊದಲ ಪೂಜೆಗೆ ಅರ್ಹನು’ ಎಂದು ಹೇಳಿದರು. [ಪರಮಾತ್ಮನ ಇನ್ನೆರಡು ರೂಪಗಳಾದ ವೇದವ್ಯಾಸ ಮತ್ತು ಪರಶುರಾಮ ಅಲ್ಲೇ ಇರುವಾಗ ಏಕೆ ಭೀಷ್ಮಾಚಾರ್ಯರು ಶ್ರೀಕೃಷ್ಣನನ್ನೇ ಹೇಳಿದರು ಎಂದರೆ:] ನಿಜವಾಗಿಯೂ ಅಲ್ಲಿ ಒಬ್ಬ ವಿಷ್ಣುವೇ ಮೂರು ರೂಪದಲ್ಲಿದ್ದಾನೆ. ವಸಿಷ್ಠರ ಕುಲದಲ್ಲಿ ಬಂದ-ವೇದವ್ಯಾಸನಾಗಿ, ಭೃಗುವಿನ ಕುಲದಲ್ಲಿ ಬಂದ-ಪರಶುರಾಮನಾಗಿ,  ವೃಷ್ಣಿಯ ಕುಲದಲ್ಲಿ ಬಂದ ಶ್ರೀಕೃಷ್ಣನಾಗಿ. ಆದರೂ ಅಲ್ಲಿ ಸೇರಿರುವ ರಾಜರುಗಳು ವೇದವ್ಯಾಸ-ಪರಶುರಾಮರಿಗೆ ಬ್ರಾಹ್ಮಣತ್ವವಿದ್ದ ಕಾರಣ ವಿರೋಧವನ್ನು ಮಾಡುವುದಿಲ್ಲ. ಬ್ರಾಹ್ಮಣರಾಗಿರುವುದರಿಂದ ಮೊದಲಪೂಜೆ ಪಡೆದರು ಎಂದುಕೊಳ್ಳುತ್ತಾರೆ.

 

ಮನ್ಯನ್ತೇ ನ ವಿರೋಧಶ್ಚ ತೇಷಾಂ ತತ್ರ ಹಿ ತಾದೃಶಃ ।  

ಅವಿವಾದೇ ಪ್ರಸಿದ್ಧಿಶ್ಚ ನೈವಾಸ್ಯ ಭವಿತಾ ಕ್ವಚಿತ್                      ॥೨೧.೨೫೨॥

 

ತಸ್ಮಾತ್ ಕೃಷ್ಣಾಯ ದಾತವ್ಯಮಿತಿ ಭೀಷ್ಮೇಣ ಚಿನ್ತಿತಮ್ ।

ಕೃಷ್ಣಾಯ ದತ್ತೇ ರಾಜಾನೋ ವಿವಾದಂ ಕುರ್ಯ್ಯುರಞ್ಜಸಾ             ॥೨೧.೨೫೩॥

 

ವಿವಾದೇನ ಚ ಕೀರ್ತ್ತಿಃ ಸ್ಯಾದ್ ವಾಸುದೇವಸ್ಯ ವಿಸ್ತೃತಾ ।

ತತಃ ಕೃಷ್ಣಾಯಾಗ್ರಪೂಜಾ ದತ್ತಾ ಪಾರ್ತ್ಥೈರ್ಜ್ಜಗತ್ಪುರಃ               ॥೨೧.೨೫೪॥

 

ಆದ್ದರಿಂದ ವೇದವ್ಯಾಸರಿಗಾಗಲೀ ಅಥವಾ ಪರಶುರಾಮನಿಗಾಗಲೀ ಅಗ್ರಪೂಜೆಯನ್ನು ಸಲ್ಲಿಸಿದರೆ ಅಲ್ಲಿ  ವಿರೋಧ ಬರುವುದಿಲ್ಲ. ವಿವಾದ ಆಗದೇ ಹೋದರೆ ಪ್ರಸಿದ್ಧಿ ಆಗುವುದಿಲ್ಲ.(ಶ್ರೀಕೃಷ್ಣ ಸರ್ವೋತ್ತಮ ಎನ್ನುವುದು ಜನರಿಗೆ ತಿಳಿಯುವುದಿಲ್ಲ. ಅವನೂ ಒಬ್ಬ ಮನುಷ್ಯ ಎಂದುಕೊಳ್ಳುತ್ತಾರೆ ಜನ) ಆಕಾರಣದಿಂದ ಕೃಷ್ಣನಿಗೇ ಆಗ್ರಪೂಜೆಯನ್ನು ಕೊಡಬೇಕೆಂದು ಭೀಷ್ಮಾಚಾರ್ಯರಿಂದ ಚಿಂತಿಸಲ್ಪಟ್ಟಿತು. ‘ಕೃಷ್ಣನಿಗೆ ಆಗ್ರಪೂಜೆ ಕೊಟ್ಟಾಗ ರಾಜರು ಚೆನ್ನಾಗಿ ವಿವಾದ ಮಾಡಿಯಾರು. ವಿವಾದದಿಂದ ಕೃಷ್ಣನ ಕೀರ್ತಿಯು ಹಬ್ಬೀತು’ ಎನ್ನುವುದು ಭೀಷ್ಮಾಚಾರ್ಯರ ಚಿಂತನೆಯಾಗಿತ್ತು. ಹೀಗಾಗಿ ಕೃಷ್ಣನಿಗೆ ಎಲ್ಲಾ ಜಗತ್ತಿನ ಸಮಾಗಮದಲ್ಲಿ ಪಾಂಡವರಿಂದ ಮೊದಲ ಸಮ್ಮಾನವಾಯಿತು.

 

ವ್ಯಾಸಭಾರ್ಗ್ಗವಯೋಃ ಸಾಕ್ಷಾತ್ ತದೈಕ್ಯಾತ್ ತದನನ್ತರಮ್ ।

ಅಗ್ರ್ಯಾಂ ಪೂಜಾಂ ದದುಶ್ಚಾನ್ಯಾನ್ ಯಥಾಯೋಗ್ಯಮಪೂಜಯನ್             ॥೨೧.೨೫೫॥

 

ಕೃಷ್ಣನ ಪೂಜೆಯಾದಮೇಲೆ ವ್ಯಾಸರು ಹಾಗೂ ಪರಶುರಾಮರಿಗೆ ಮುಖ್ಯವಾಗಿ ಶ್ರೀಕೃಷ್ಣನಿಂದ ಐಕ್ಯವನ್ನು ಹೊಂದಿರುವುದರಿಂದ ಆಗ್ರಪೂಜೆಯನ್ನು ಕೊಡಲಾಯಿತು. ನಂತರ ಉಳಿದವರನ್ನು ಅವರವರ ಯೋಗ್ಯತೆಗನುಗುಣವಾಗಿ ಪೂಜಿಸಲಾಯಿತು.

 

ಅಗ್ರ್ಯೋಪಹಾರಮುಪಯಾಪಿತ ಏವ ಕೃಷ್ಣೇ ಕೋಪಾದನಿನ್ದದಮುಮಾಶು ಚ ಚೇದಿರಾಜಃ ।

ಶ್ರುತ್ವೈವ ತತ್ ಪವನಜೋSಭಿಯಯೌ ನೃಪಂ ತಂ ಹನ್ತುಂ ಜಗದ್ಗುರುವಿನಿನ್ದಕಮೃದ್ಧಮನ್ಯುಃ ॥೨೧.೨೫೬॥

 

ಶ್ರೀಕೃಷ್ಣನಿಗೆ ಅಗ್ರಪೂಜೆ ನಡೆಯುತ್ತಿರಲು ಶಿಶುಪಾಲನು ಕೋಪದಿಂದ ಮೇಲೆದ್ದು ಕೃಷ್ಣನನ್ನು ಚೆನ್ನಾಗಿ ಬೈದನು(ನಿಂದಿಸಿದನು). ಆಗ ಪರಮಾತ್ಮನನ್ನು ನಿಂದನೆ ಮಾಡಿರುವುದಕ್ಕಾಗಿ ಮುನಿದ ಭೀಮಸೇನನು ಶಿಶುಪಾಲನನ್ನು ಕೊಲ್ಲಲೆಂದು ಮೇಲೆದ್ದನು.

 

ದೂರೇSಪಿ ಕೇಶವವಿನಿನ್ದನಕಾರಿಜಿಹ್ವಾ̐ಮುಚ್ಛೇತ್ಸ್ಯ ಇತ್ಯುರುತರಾSಸ್ಯ ಸದಾ ಪ್ರತಿಜ್ಞಾ ।

ಭೀಮಸ್ಯ ತಂ ತು ಜಗೃಹೇ ಸರಿದಾತ್ಮಜೋSಥ ಸಮ್ಪ್ರೋಚ್ಯ ಕೇಶವವಚೋ ನಿಜಯೋರ್ವಧಾಯ ॥೨೧.೨೫೭॥

 

‘ತನ್ನಿಂದ ದೂರದಲ್ಲಿಯೂ ಕೂಡಾ ಪರಮಾತ್ಮನ ನಿಂದನೆ ಮಾಡುವ ದುಷ್ಟನ ನಾಲಿಗೆಯನ್ನು ಕಿತ್ತು ಹಾಕುತ್ತೇನೆ’ ಎನ್ನುವ ಭೀಮನ ಉತ್ಕೃಷ್ಟವಾದ ಪ್ರತಿಜ್ಞೆ ಯಾವಾಗಲೂ ಇರುವಂತಹದ್ದಷ್ಟೇ. ಆಗ ಭೀಷ್ಮಾಚಾರ್ಯರು ಭೀಮನನ್ನು ಗಟ್ಟಿಯಾಗಿ ಹಿಡಿದುಕೊಂಡರು. ತನ್ನವರಾದ ಜಯ-ವಿಜಯರ ಮೂರೂ ಜನ್ಮಗಳಲ್ಲಿನ ನಡೆಯನ್ನು, ಅವರ ವಧೆಯನ್ನೂ, ಆಕುರಿತು ಪರಮಾತ್ಮನ ಸಂಕಲ್ಪ ಏನಿದೆ ಎನ್ನುವುದನ್ನು ಭೀಮನಲ್ಲಿ ಹೇಳಿದ ಭೀಷ್ಮಾಚಾರ್ಯರು ಅವನನ್ನು ತಡೆದರು.

 

ಮಯೈವ ವದ್ಧ್ಯಾವಿತಿ ತಾವಾಹ ಯತ್ ಕೇಶವಃ ಪುರಾ ।

ತಚ್ಛ್ರುತ್ವಾ ಭೀಮಸೇನೋSಪಿ ಸ್ಥಿತೋ ಭೀಷ್ಮಕರಗ್ರಹಾತ್             ॥೨೧.೨೫೮॥

 

ಮೂಲರೂಪದಲ್ಲಿ ನಾರಾಯಣನು ಈ ಜಯ-ವಿಜಯರಿಬ್ಬರೂ ನನ್ನಿಂದಲೇ ಕೊಲ್ಲಲ್ಪಡುವವರು ಎಂದು ಯಾವುದನ್ನು ಹೇಳಿದ್ದನೋ, ಅದನ್ನು ಕೇಳಿ ಭೀಮಸೇನನು ಭೀಷ್ಮನ ತಡೆಯುವಿಕೆಯಿಂದ ಸುಮ್ಮನಾದನು.

 

[ ಹಾಗಿದ್ದರೆ ಭೀಷ್ಮಾಚಾರ್ಯರಿಗೆ ತಿಳಿದಿದ್ದ ಈ ವಿಷಯ ಭೀಮನಿಗೆ ಮೊದಲೇ ತಿಳಿದಿರಲಿಲ್ಲವೇ ಎಂದರೆ: ]

 

ಜಾನನ್ನಪಿ ಹರೇರಿಷ್ಟಂ ಸ್ವಕರ್ತ್ತವ್ಯತಯೋತ್ಥಿತಃ ।

ಭೀಮ ಏತಾವದುಚಿತಮಿತಿ ಮತ್ವಾ ಸ್ಥಿತಃ ಪುನಃ                       ॥೨೧.೨೫೯॥

 

ಪರಮಾತ್ಮನ ಅಭೀಷ್ಟವನ್ನು ತಿಳಿದಿದ್ದರೂ ಕೂಡಾ, ಅನ್ಯಾಯವನ್ನು ವಿರೋಧಿಸುವ ಕರ್ತವ್ಯಪ್ರಜ್ಞೆಯಿಂದ ಭೀಮಸೇನ ಎದ್ದು ನಿಂತಿದ್ದ. ಪ್ರತಿಭಟಿಸಬೇಕು ಎಂದು ಎದ್ದುನಿಂತಿದ್ದ ಆತ ಮತ್ತೆ ಕುಳಿತ.