ಪಿತಾಮಹಾಗ್ರ್ಯಪೂಜಾರ್ಹಃ
ಕೋsತ್ರ ಲೋಕಸಮಾಗಮೇ ।
ಬ್ರಹ್ಮಶರ್ವಾದಯಶ್ಚಾತ್ರ
ಸನ್ತಿ ರಾಜಾನ ಏವ ಚ ॥೨೧.೨೪೯॥
‘ಭೀಷ್ಮ ಪಿತಾಮಹರೇ, ಈ ಲೋಕಸಮಾಗಮದಲ್ಲಿ ಮೊದಲ ಪೂಜೆಗೆ ಅರ್ಹನಾದವನು ಯಾರು? (ಯಾಗ ಮುಗಿದು, ಅವಭೃಥಕ್ಕೂ ಮೊದಲು, ಎಲ್ಲರಿಗೂ ಗೌರವ ಸಲ್ಲಿಸುವಾಗ, ಅಲ್ಲಿ ಮೊದಲ ಪೂಜೆಗೆ ಅರ್ಹನಾದವನು ಯಾರು ಎನ್ನುವ ಪ್ರಶ್ನೆ). ಬ್ರಹ್ಮ, ರುದ್ರ, ಮೊದಲಾದವರಿದ್ದಾರೆ. ದೊಡ್ಡದೊಡ್ಡ ಚಕ್ರವರ್ತಿಗಳಿದ್ದಾರೆ. ಯಾರಿಗೆ ಮೊದಲ ಪೂಜೆ ಸಲ್ಲಬೇಕು?
ಇತಿ ಪೃಷ್ಟೋSಬ್ರವೀತ್
ಭೀಷ್ಮಃ ಕೃಷ್ಣಂ ಪೂಜ್ಯತಮಂ ಪ್ರಭುಮ್ ।
ಯದ್ಯಪ್ಯೇಕಸ್ತ್ರಿಧಾ
ವಿಷ್ಣುರ್ವಸಿಷ್ಠಭೃಗುವೃಷ್ಣಿಷು ॥೨೧.೨೫೦॥
ಪ್ರಾದುರ್ಭೂತಸ್ತಥಾSಪ್ಯೇತೇ ನೃಪಾ ಹಿ ವ್ಯಾಸರಾಮಯೋಃ ।
ವಿಪ್ರತ್ವಾನ್ನ ವಿರುದ್ಧ್ಯನ್ತೇ
ತತ ಏವ ಚ ಯುಕ್ತತಾಮ್ ॥೨೧.೨೫೧॥
ಈ ರೀತಿಯಾಗಿ ಯುಧಿಷ್ಠಿರನಿಂದ ಕೇಳಲ್ಪಟ್ಟ ಭೀಷ್ಮಾಚಾರ್ಯರು ‘ಶ್ರೀಕೃಷ್ಣನೇ ಮೊದಲ ಪೂಜೆಗೆ ಅರ್ಹನು’ ಎಂದು ಹೇಳಿದರು. [ಪರಮಾತ್ಮನ ಇನ್ನೆರಡು ರೂಪಗಳಾದ ವೇದವ್ಯಾಸ ಮತ್ತು ಪರಶುರಾಮ ಅಲ್ಲೇ ಇರುವಾಗ ಏಕೆ ಭೀಷ್ಮಾಚಾರ್ಯರು ಶ್ರೀಕೃಷ್ಣನನ್ನೇ ಹೇಳಿದರು ಎಂದರೆ:] ನಿಜವಾಗಿಯೂ ಅಲ್ಲಿ ಒಬ್ಬ ವಿಷ್ಣುವೇ ಮೂರು ರೂಪದಲ್ಲಿದ್ದಾನೆ. ವಸಿಷ್ಠರ ಕುಲದಲ್ಲಿ ಬಂದ-ವೇದವ್ಯಾಸನಾಗಿ, ಭೃಗುವಿನ ಕುಲದಲ್ಲಿ ಬಂದ-ಪರಶುರಾಮನಾಗಿ, ವೃಷ್ಣಿಯ ಕುಲದಲ್ಲಿ ಬಂದ ಶ್ರೀಕೃಷ್ಣನಾಗಿ. ಆದರೂ ಅಲ್ಲಿ ಸೇರಿರುವ ರಾಜರುಗಳು ವೇದವ್ಯಾಸ-ಪರಶುರಾಮರಿಗೆ ಬ್ರಾಹ್ಮಣತ್ವವಿದ್ದ ಕಾರಣ ವಿರೋಧವನ್ನು ಮಾಡುವುದಿಲ್ಲ. ಬ್ರಾಹ್ಮಣರಾಗಿರುವುದರಿಂದ ಮೊದಲಪೂಜೆ ಪಡೆದರು ಎಂದುಕೊಳ್ಳುತ್ತಾರೆ.
ಮನ್ಯನ್ತೇ ನ ವಿರೋಧಶ್ಚ
ತೇಷಾಂ ತತ್ರ ಹಿ ತಾದೃಶಃ ।
ಅವಿವಾದೇ
ಪ್ರಸಿದ್ಧಿಶ್ಚ ನೈವಾಸ್ಯ ಭವಿತಾ ಕ್ವಚಿತ್ ॥೨೧.೨೫೨॥
ತಸ್ಮಾತ್ ಕೃಷ್ಣಾಯ
ದಾತವ್ಯಮಿತಿ ಭೀಷ್ಮೇಣ ಚಿನ್ತಿತಮ್ ।
ಕೃಷ್ಣಾಯ ದತ್ತೇ
ರಾಜಾನೋ ವಿವಾದಂ ಕುರ್ಯ್ಯುರಞ್ಜಸಾ ॥೨೧.೨೫೩॥
ವಿವಾದೇನ ಚ ಕೀರ್ತ್ತಿಃ
ಸ್ಯಾದ್ ವಾಸುದೇವಸ್ಯ ವಿಸ್ತೃತಾ ।
ತತಃ ಕೃಷ್ಣಾಯಾಗ್ರಪೂಜಾ ದತ್ತಾ ಪಾರ್ತ್ಥೈರ್ಜ್ಜಗತ್ಪುರಃ ॥೨೧.೨೫೪॥
ಆದ್ದರಿಂದ ವೇದವ್ಯಾಸರಿಗಾಗಲೀ ಅಥವಾ ಪರಶುರಾಮನಿಗಾಗಲೀ ಅಗ್ರಪೂಜೆಯನ್ನು
ಸಲ್ಲಿಸಿದರೆ ಅಲ್ಲಿ ವಿರೋಧ ಬರುವುದಿಲ್ಲ. ವಿವಾದ
ಆಗದೇ ಹೋದರೆ ಪ್ರಸಿದ್ಧಿ ಆಗುವುದಿಲ್ಲ.(ಶ್ರೀಕೃಷ್ಣ ಸರ್ವೋತ್ತಮ ಎನ್ನುವುದು ಜನರಿಗೆ
ತಿಳಿಯುವುದಿಲ್ಲ. ಅವನೂ ಒಬ್ಬ ಮನುಷ್ಯ ಎಂದುಕೊಳ್ಳುತ್ತಾರೆ ಜನ) ಆಕಾರಣದಿಂದ ಕೃಷ್ಣನಿಗೇ ಆಗ್ರಪೂಜೆಯನ್ನು
ಕೊಡಬೇಕೆಂದು ಭೀಷ್ಮಾಚಾರ್ಯರಿಂದ ಚಿಂತಿಸಲ್ಪಟ್ಟಿತು. ‘ಕೃಷ್ಣನಿಗೆ ಆಗ್ರಪೂಜೆ ಕೊಟ್ಟಾಗ ರಾಜರು
ಚೆನ್ನಾಗಿ ವಿವಾದ ಮಾಡಿಯಾರು. ವಿವಾದದಿಂದ ಕೃಷ್ಣನ ಕೀರ್ತಿಯು ಹಬ್ಬೀತು’ ಎನ್ನುವುದು
ಭೀಷ್ಮಾಚಾರ್ಯರ ಚಿಂತನೆಯಾಗಿತ್ತು. ಹೀಗಾಗಿ ಕೃಷ್ಣನಿಗೆ ಎಲ್ಲಾ ಜಗತ್ತಿನ ಸಮಾಗಮದಲ್ಲಿ
ಪಾಂಡವರಿಂದ ಮೊದಲ ಸಮ್ಮಾನವಾಯಿತು.
ವ್ಯಾಸಭಾರ್ಗ್ಗವಯೋಃ
ಸಾಕ್ಷಾತ್ ತದೈಕ್ಯಾತ್ ತದನನ್ತರಮ್ ।
ಅಗ್ರ್ಯಾಂ ಪೂಜಾಂ
ದದುಶ್ಚಾನ್ಯಾನ್ ಯಥಾಯೋಗ್ಯಮಪೂಜಯನ್ ॥೨೧.೨೫೫॥
ಕೃಷ್ಣನ ಪೂಜೆಯಾದಮೇಲೆ ವ್ಯಾಸರು ಹಾಗೂ ಪರಶುರಾಮರಿಗೆ ಮುಖ್ಯವಾಗಿ ಶ್ರೀಕೃಷ್ಣನಿಂದ ಐಕ್ಯವನ್ನು
ಹೊಂದಿರುವುದರಿಂದ ಆಗ್ರಪೂಜೆಯನ್ನು ಕೊಡಲಾಯಿತು. ನಂತರ ಉಳಿದವರನ್ನು ಅವರವರ ಯೋಗ್ಯತೆಗನುಗುಣವಾಗಿ
ಪೂಜಿಸಲಾಯಿತು.
ಅಗ್ರ್ಯೋಪಹಾರಮುಪಯಾಪಿತ ಏವ ಕೃಷ್ಣೇ ಕೋಪಾದನಿನ್ದದಮುಮಾಶು ಚ ಚೇದಿರಾಜಃ ।
ಶ್ರುತ್ವೈವ ತತ್ ಪವನಜೋSಭಿಯಯೌ ನೃಪಂ ತಂ
ಹನ್ತುಂ ಜಗದ್ಗುರುವಿನಿನ್ದಕಮೃದ್ಧಮನ್ಯುಃ ॥೨೧.೨೫೬॥
ಶ್ರೀಕೃಷ್ಣನಿಗೆ ಅಗ್ರಪೂಜೆ ನಡೆಯುತ್ತಿರಲು ಶಿಶುಪಾಲನು ಕೋಪದಿಂದ
ಮೇಲೆದ್ದು ಕೃಷ್ಣನನ್ನು ಚೆನ್ನಾಗಿ ಬೈದನು(ನಿಂದಿಸಿದನು). ಆಗ ಪರಮಾತ್ಮನನ್ನು ನಿಂದನೆ
ಮಾಡಿರುವುದಕ್ಕಾಗಿ ಮುನಿದ ಭೀಮಸೇನನು ಶಿಶುಪಾಲನನ್ನು ಕೊಲ್ಲಲೆಂದು ಮೇಲೆದ್ದನು.
ದೂರೇSಪಿ ಕೇಶವವಿನಿನ್ದನಕಾರಿಜಿಹ್ವಾ̐ಮುಚ್ಛೇತ್ಸ್ಯ
ಇತ್ಯುರುತರಾSಸ್ಯ ಸದಾ ಪ್ರತಿಜ್ಞಾ ।
ಭೀಮಸ್ಯ ತಂ ತು ಜಗೃಹೇ ಸರಿದಾತ್ಮಜೋSಥ ಸಮ್ಪ್ರೋಚ್ಯ ಕೇಶವವಚೋ ನಿಜಯೋರ್ವಧಾಯ ॥೨೧.೨೫೭॥
‘ತನ್ನಿಂದ ದೂರದಲ್ಲಿಯೂ ಕೂಡಾ ಪರಮಾತ್ಮನ ನಿಂದನೆ ಮಾಡುವ
ದುಷ್ಟನ ನಾಲಿಗೆಯನ್ನು ಕಿತ್ತು ಹಾಕುತ್ತೇನೆ’ ಎನ್ನುವ ಭೀಮನ ಉತ್ಕೃಷ್ಟವಾದ ಪ್ರತಿಜ್ಞೆ ಯಾವಾಗಲೂ
ಇರುವಂತಹದ್ದಷ್ಟೇ. ಆಗ ಭೀಷ್ಮಾಚಾರ್ಯರು ಭೀಮನನ್ನು ಗಟ್ಟಿಯಾಗಿ ಹಿಡಿದುಕೊಂಡರು. ತನ್ನವರಾದ
ಜಯ-ವಿಜಯರ ಮೂರೂ ಜನ್ಮಗಳಲ್ಲಿನ ನಡೆಯನ್ನು, ಅವರ ವಧೆಯನ್ನೂ, ಆಕುರಿತು ಪರಮಾತ್ಮನ ಸಂಕಲ್ಪ ಏನಿದೆ
ಎನ್ನುವುದನ್ನು ಭೀಮನಲ್ಲಿ ಹೇಳಿದ ಭೀಷ್ಮಾಚಾರ್ಯರು ಅವನನ್ನು ತಡೆದರು.
ಮಯೈವ ವದ್ಧ್ಯಾವಿತಿ
ತಾವಾಹ ಯತ್ ಕೇಶವಃ ಪುರಾ ।
ತಚ್ಛ್ರುತ್ವಾ ಭೀಮಸೇನೋSಪಿ
ಸ್ಥಿತೋ ಭೀಷ್ಮಕರಗ್ರಹಾತ್ ॥೨೧.೨೫೮॥
ಮೂಲರೂಪದಲ್ಲಿ ನಾರಾಯಣನು ಈ ಜಯ-ವಿಜಯರಿಬ್ಬರೂ ನನ್ನಿಂದಲೇ
ಕೊಲ್ಲಲ್ಪಡುವವರು ಎಂದು ಯಾವುದನ್ನು ಹೇಳಿದ್ದನೋ, ಅದನ್ನು ಕೇಳಿ
ಭೀಮಸೇನನು ಭೀಷ್ಮನ ತಡೆಯುವಿಕೆಯಿಂದ ಸುಮ್ಮನಾದನು.
[ ಹಾಗಿದ್ದರೆ ಭೀಷ್ಮಾಚಾರ್ಯರಿಗೆ ತಿಳಿದಿದ್ದ ಈ ವಿಷಯ ಭೀಮನಿಗೆ
ಮೊದಲೇ ತಿಳಿದಿರಲಿಲ್ಲವೇ ಎಂದರೆ: ]
ಜಾನನ್ನಪಿ ಹರೇರಿಷ್ಟಂ
ಸ್ವಕರ್ತ್ತವ್ಯತಯೋತ್ಥಿತಃ ।
ಭೀಮ ಏತಾವದುಚಿತಮಿತಿ
ಮತ್ವಾ ಸ್ಥಿತಃ ಪುನಃ ॥೨೧.೨೫೯॥
ಪರಮಾತ್ಮನ ಅಭೀಷ್ಟವನ್ನು ತಿಳಿದಿದ್ದರೂ ಕೂಡಾ, ಅನ್ಯಾಯವನ್ನು ವಿರೋಧಿಸುವ
ಕರ್ತವ್ಯಪ್ರಜ್ಞೆಯಿಂದ ಭೀಮಸೇನ ಎದ್ದು ನಿಂತಿದ್ದ. ಪ್ರತಿಭಟಿಸಬೇಕು ಎಂದು ಎದ್ದುನಿಂತಿದ್ದ ಆತ ಮತ್ತೆ
ಕುಳಿತ.
No comments:
Post a Comment