ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, January 26, 2022

Mahabharata Tatparya Nirnaya Kannada 21: 270-277

 

ಗತೇಷು ಸರ್ವರಾಜಸು ಸ್ವಕಾಂ ಪುರಂ ಸ್ವಕೇಷು ಚ ।

ಸಭೀಷ್ಮಕೇಷು ಸರ್ವಶಃ ಸಹಾsಮ್ಬಿಕೇಯಕೇಷು ಚ                   ॥೨೧.೨೭೦॥

 

ವಿಚಿತ್ರರತ್ನನಿರ್ಮ್ಮಿತೇ ರವಿಪ್ರಭೇ ಸಭಾತಳೇ ।

ಸಕೇಶವೋ ವರಾಸನೇ ವಿವೇಶ ಧರ್ಮ್ಮನನ್ದನಃ                       ॥೨೧.೨೭೧॥

 

ಎಲ್ಲಾ ರಾಜರೂ ತಮ್ಮ ಪಟ್ಟಣಕ್ಕೆ ಹಿಂತಿರುಗುತ್ತಿರಲು, ಹಾಗೆಯೇ,  ಭೀಷ್ಮಾಚಾರ್ಯರೇ ಮೊದಲಾಗಿರುವ, ಧೃತರಾಷ್ಟ್ರನೇ ಮೊದಲಾದ ಹಿರಿಯರೆಲ್ಲರೂ ತಮ್ಮತಮ್ಮ ಪಟ್ಟಣಕ್ಕೆ ತೆರಳಲು, ವಿಚಿತ್ರರತ್ನದಿಂದ ರಚಿತವಾದ, ಸೂರ್ಯನಂತೆ ಕಾಂತಿಯುಳ್ಳ ಸಭಾತಳದಲ್ಲಿ, ಕೃಷ್ಣನಿಂದೊಡಗೂಡಿದ ಧರ್ಮರಾಜನು ಉತ್ಕೃಷ್ಟವಾದ ಆಸನದಲ್ಲಿ ಕುಳಿತನು. 

 

ತಥೈವ ರುಗ್ಮಿಣೀಮುಖಾಃ ಪರಿಗ್ರಹಾ ರಮೇಶಿತುಃ ।

ತಥೈವ ಭೀಮಫಲ್ಗುನಾವುಪಾವಿಶನ್ ಹರೇರುಪ                       ॥೨೧.೨೭೨॥

 

ಹಾಗೆಯೇ, ರುಗ್ಮಿಣಿ ಮೊದಲಾಗಿರುವ ಪರಮಾತ್ಮನ ಹೆಂಡಂದಿರು, ಭೀಮಸೇನ ಮತ್ತು ಅರ್ಜುನ ಮೊದಲಾದವರು ಪರಮಾತ್ಮನ ಸಮೀಪ ಕುಳಿತರು.

[ಇಲ್ಲಿ ವಿವರಿಸಿರುವ ಘಟನೆಗಳನ್ನು ವ್ಯತ್ಯಾಸ ಶೈಲಿಯಲ್ಲಿ ಭಾರತ ವಿವರಿಸಿರುವುದನ್ನು ಕಾಣುತ್ತೇವೆ.  ಪರಮಾತ್ಮ ಕುಳಿತಿರುವಾಗಲೇ ಅವನ ಮುಂದೆ ದುರ್ಯೋಧನನಿಗೆ ಅವಮಾನವಾಯಿತು ಎನ್ನುತ್ತದೆ ಭಾಗವತ. ಆದರೆ ಶ್ರೀಕೃಷ್ಣ ಮೊದಲೇ ಹೋಗಿದ್ದ ಎಂದು ಮಹಾಭಾರತ ಹೇಳಿದಂತೆ ಕಾಣುತ್ತದೆ.  ಅವೆರಡರ ಕಥಾಶೈಲಿಯನ್ನು ಕೂಡಿಸಿ ಯಾವ ರೀತಿ ಅರ್ಥಮಾಡಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ವಿವರಿಸಿದ್ದಾರೆ].

 

ಸಹೈವ ವಾಯುಸೂನುನಾ ತಥೈವ ಪಾರ್ಷತಾತ್ಮಜಾ ।

ಉಪೈವ ರುಗ್ಮಿಣೀಂ ಶುಭಾ ತಥೈವ ಸತ್ಯಭಾಮಿನೀಮ್             ॥೨೧.೨೭೩॥

 

ಭೀಮನ ಜೊತೆಗೂಡಿಯೇ ದ್ರೌಪದಿಯೂ ಕೂಡಾ ರುಗ್ಮಿಣಿ ಹಾಗೂ ಸತ್ಯಭಾಮೆಯ ಜೊತೆಗೆ ಕುಳಿತಳು.

 

ಯಮೌ ಚ ಪಾರ್ಷತಾದಯೋ ಧನಞ್ಜಯಾನ್ತಿಕೇSವಿಶನ್ ।

ತಥೈವ ರಾಮಸಾತ್ಯಕೀ ಸಮೀಪ ಏವ ಭೂಭೃತಃ                     ॥೨೧.೨೭೪॥

 

ನಕುಲ-ಸಹದೇವರು, ಧೃಷ್ಟದ್ಯುಮ್ನ ಮೊದಲಾದವರು ಅರ್ಜುನನ ಬಳಿ ಕುಳಿತರು. ಹಾಗೆಯೇ ಬಲರಾಮ ಹಾಗೂ ಸಾತ್ಯಕಿ ಪರಮಾತ್ಮನ ಸಮೀಪದಲ್ಲಿಯೇ ಕುಳಿತರು.

 

ಸಮಾಸತಾಂ ತು ಸಾ ಸಭಾ ವ್ಯರೋಚತಾಧಿಕಂ ತದಾ ।

ಯಥಾ ಸಭಾ ಸ್ವಯಮ್ಭುವಃ ಸಮಾಸ್ಥಿತಾ ಚ ವಿಷ್ಣುನಾ               ॥೨೧.೨೭೫॥

 

ವಿಷ್ಣುವಿನಿಂದ ಅಧಿಷ್ಠಿತವಾದ ಬ್ರಹ್ಮದೇವರ ಸಭೆಯಂತೆ ಈ ಸಭೆಯೂ ಕೂಡಾ ಬಹಳವಾಗಿ ಕಂಗೊಳಿಸಿತು.

 

ವಿಚಿತ್ರಹೇಮಮಾಲಿನಃ ಶುಭಾಮ್ಬರಾಶ್ಚ ತೇSಧಿಕಮ್ ।

ಸ್ಪುರತ್ಕಿರೀಟಕುಣ್ಡಲಾ ವಿರೇಜುರತ್ರ ತೇ ನೃಪಾಃ                       ॥೨೧.೨೭೬॥

 

ವಿಚಿತ್ರವಾದ ಬಂಗಾರದ ಮಾಲೆಗಳನ್ನು ಧರಿಸಿ, ಶುಭ್ರ ವಸ್ತ್ರಗಳನ್ನು, ಹೊಳೆಯುವ(ಪ್ರಕಾಶಮಾನವಾದ) ಕಿರೀಟ-ಕುಂಡಲಗಳನ್ನೂ ಧರಿಸಿ, ಪ್ರಸಿದ್ಧರಾದ ರಾಜರು ಶೋಭಿಸಿದರು.

 

ವಿಶೇಷತೋ ಜನಾರ್ದ್ದನಃ ಸಭಾರ್ಯ್ಯಕೋ ಜಗತ್ಪ್ರಭುಃ ।

ಯಥಾ ದಿವೌಕಸಾಂ ಸದಸ್ಯನನ್ತಸದ್ಗುಣಾರ್ಣ್ಣವಃ                       ॥೨೧.೨೭೭॥

 

ವಿಶೇಷವಾಗಿ ಜಗದೊಡೆಯನಾದ ಶ್ರೀಕೃಷ್ಣನು ತನ್ನ ಹೆಂಡತಿಯರೊಡಗೂಡಿ ಕುಳಿತಿದ್ದ. ಯಾವರೀತಿ ದೇವತೆಗಳ ಸಭೆಯಲ್ಲಿ ತನ್ನ ಮೂಲರೂಪದಿಂದ ಕುಳಿತಿರುತ್ತಾನೋ, ಹಾಗೇ ಅವತಾರ ರೂಪದಿಂದಲೂ ಕುಳಿತಿದ್ದ.

No comments:

Post a Comment