ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, January 25, 2022

Mahabharata Tatparya Nirnaya Kannada 21: 260-269

            ದೇವಸಙ್ಘಭವಿನಾಂ ಮಹಾನಭೂದೀಕ್ಷ್ಯ ತೋಷ ಇಹ ಕೇಶವೇSಧಿಕಾಮ್ ।

ಅರ್ಚ್ಚನಾಂ ಯ ಇಹ ಮಾನುಷೋ ಜನೋ ಮದ್ಧ್ಯ ಏವ ಸ ತು ಸಂಸ್ಥಿತೋSಭವತ್ ॥೨೧.೨೬೦॥

 

ಈ ರಾಜಸೂಯ ಯಾಗದಲ್ಲಿ ಶ್ರೀಕೃಷ್ಣನಲ್ಲಿ  ಅಗ್ರಪೂಜೆಯನ್ನು ಕಂಡ ಸಾತ್ವಿಕರಾದ ಉತ್ತಮ ಜೀವರಿಗೆ  ಬಹಳ ಸಂತೋಷ ಉಂಟಾಯಿತು. ಮಧ್ಯಮರಾದ ಮನುಷ್ಯರು ಮಧ್ಯಾವಸ್ಥೆಯಲ್ಲಿಯೇ ಇರುವಂತಾದರು. (ಅದೂ ಸರಿ, ಇದೂ ಸರಿ ಎನ್ನುವಂತೆ ಮಧ್ಯದ ಅಭಿಪ್ರಾಯವನ್ನು ಹೊಂದಿದರು).

 

ಆಸುರಾ ಇಹ ಸುಯೋಧನಾದಯಸ್ತತ್ರ ತೇ ವಿಮನಸೋ ಬಭೂವಿರೇ ।

ದುರ್ವಚೋಭಿರಧಿಕಂ ಚ ಚೇದಿಪಃ ಕೃಷ್ಣಮಾರ್ಚ್ಛದುರುಸದ್ಗುಣಾರ್ಣ್ಣವಮ್             ॥೨೧.೨೬೧॥

 

ದುರ್ಯೋಧನ ಮೊದಲಾದ ಅಸುರ ಪ್ರಕೃತಿಯವರು ಮನಸ್ಸಿನಲ್ಲಿಯೇ ಸಂಕಟಗೊಂಡರು. ಶಿಶುಪಾಲನು ಗುಣಗಳಿಗೆ ಕಡಲಿನಂತೆ ಇರುವ ಕೃಷ್ಣನನ್ನು ಕೆಟ್ಟ-ಕೆಟ್ಟ ಮಾತುಗಳಿಂದ ಬೈಯ್ಯಲು ಪ್ರಾರಂಭಿಸಿದ.

 

ಸಮಾಹ್ವಯಚ್ಚ ಕೇಶವಂ ಯುಧೇ ತಮಾಶು ಕೇಶವಃ ।

ನಿವಾರ್ಯ್ಯ ತಸ್ಯ ಸಾಯಕಾಞ್ಜಘಾನ ಚಾರಿಣಾ ಪ್ರಭುಃ                           ॥೨೧.೨೬೨॥

 

ಶಿಶುಪಾಲನು ಶ್ರೀಕೃಷ್ಣನನ್ನು ಯುದ್ಧಕ್ಕಾಗಿ ಕರೆದನು. ಸರ್ವಸಮರ್ಥನಾದ ನಾರಾಯಣನು ಶೀಘ್ರದಲ್ಲಿ ಶಿಶುಪಾಲನ ಬಾಣಗಳನ್ನು ತಡೆದು, ಚಕ್ರದಿಂದ ಅವನನ್ನು ಸಂಹಾರ ಮಾಡಿದನು.

 

ನಿಕೃತ್ತ್ಯಮಾನಕನ್ಧರಃ ಸ ಭಕ್ತಿಮಾನಭೂದ್ಧರೌ ।

ತಮಾಶ್ರಿತಶ್ಚ ಯೋSಸುರೋ ಮಹಾತಮಃ ಪ್ರಪೇದಿವಾನ್                   ॥೨೧.೨೬೩॥

 

ಕತ್ತು ತುಂಡರಿಸಿ ಹೋಗುತ್ತಿರುವಾಗ ಶಿಶುಪಾಲನು (ಅವನೋಳಗಿದ್ದ ಜಯನು) ಕೃಷ್ಣನಲ್ಲಿ ಭಕ್ತಿಯುಳ್ಳವನಾದನು. ಅವನನ್ನು ಆಶ್ರಯಿಸಿರುವ ಅಸುರನೋ, ಅನ್ಧಂತಮಸ್ಸಿಗೆ ಹೋದನು.

 

ಜಯಃ ಪ್ರವಿಶ್ಯ ಕೇಶವಂ ಪುನಶ್ಚ ಪಾರ್ಷದೋSಭವತ್ ।

ಅಸೌ ಚ ಪಾಣ್ಡವಕ್ರತುಃ ಪ್ರವರ್ತ್ತಿತೋ ಯಥೋದಿತಃ                ॥೨೧.೨೬೪॥

 

ಜಯನು ಆಗ ಕೇಶವನನ್ನು ಪ್ರವೇಶಿಸಿ, ಮತ್ತೆ ಪುನಃ ದ್ವಾರಪಾಲಕನಾದನು. ಪಾಂಡವರ ಈ ರಾಜಸೂಯ ಯಾಗವು ಶಾಸ್ತ್ರೋಕ್ತವಾಗಿ ನಡೆಯಿತು.

 

ಸುವರ್ಣ್ಣರತ್ನಭಾರಕಾನ್ ಬಹೂನ್ ನೃಪಾ ಉಪಾನಯನ್ ।

ಉಪಾಯನಂ ಸುಯೋಧನಂ ನೃಪೋSದಿಶದ್ ಗ್ರಹೇSಸ್ಯ ಚ                ॥೨೧.೨೬೫॥

 

ರಾಜರುಗಳು ಬಹಳವಾಗಿರುವ ಬಂಗಾರದ, ರತ್ನದ ಗಟ್ಟಿಗಳನ್ನು ಕಾಣಿಕೆಯಾಗಿ ಕೊಟ್ಟರು. ಈ ಎಲ್ಲಾ ಕಾಣಿಕೆಗಳನ್ನು ಸ್ವೀಕರಿಸುವ ಜವಾಬ್ದಾರಿಯನ್ನು ಯುಧಿಷ್ಠಿರ ದುರ್ಯೋಧನನಿಗೊಪ್ಪಿಸಿ ಆಜ್ಞೆ ಮಾಡಿದ.

 

ಅಭೋಜಯಂಸ್ತಥಾ ದ್ವಿಜಾನ್ ಯಥೇಷ್ಟಭಕ್ಷ್ಯಭೋಜ್ಯಕೈಃ ।

ಸುವರ್ಣ್ಣರತ್ನಭಾರಕಾನ್ ಬಹೂಂಶ್ಚ ದಕ್ಷಿಣಾ ದದುಃ                   ॥೨೧.೨೬೬॥

 

ಅವರವರಿಗೆ ಇಷ್ಟವಾದ ಭಕ್ಷ್ಯಭೋಜ್ಯಗಳಿಂದ ಬ್ರಾಹ್ಮಣರಿಗೆ ಉಣಬಡಿಸಿ, ಬಂಗಾರದ-ರತ್ನದ ಗಟ್ಟಿಗಳನ್ನು ಅವರಿಗೆ ದಕ್ಷಿಣೆಯಾಗಿ ಕೊಟ್ಟರು.  

 

ಯದಿಷ್ಟಮಾಸ ಯಸ್ಯ ಚ ಪ್ರದತ್ತಮೇವ ಪಾಣ್ಡವೈಃ ।

ಸಮಸ್ತಮತ್ರ ಸರ್ವಶೋsಥ ಸಸ್ನುರುದ್ಭೃತಾ ಮುದಾ               ॥೨೧.೨೬೭॥

 

ಈ ಯಜ್ಞದಲ್ಲಿ ಯಾರಿಗೆ ಯಾವುದರ ಬಯಕೆ ಇತ್ತೋ, ಅದು ಪಾಂಡವರಿಂದ ಕೊಡಲ್ಪಟ್ಟಿತು. ಯಜ್ಞ ಸಮಾಪ್ತಿಯಾಗುತ್ತಿದ್ದಂತೆ ಪಾಂಡವರು ಎಲ್ಲರೊಂದಿಗೆ ಅವಭೃಥಸ್ನಾನ ಮಾಡಿದರು.

 

ನದತ್ಸುರೋರುದುನ್ದುಭಿಪ್ರಗೀತದೇವಗಾಯಕಾಃ ।

ಪ್ರನೃತ್ತದಿವ್ಯಯೋಷಿತಃ ಸುರಾಪಗಾಂ ವ್ಯಗಾಹಯನ್               ॥೨೧.೨೬೮॥

 

ಉತ್ಕೃಷ್ಟವಾದ ದುಂದುಭಿ ಮೊದಲಾದ ದೇವತಾ ವಾದ್ಯಗಳು ಶಬ್ದ ಮಾಡುತ್ತಿರಲು, ಗಂಧರ್ವರೇ ಮೊದಲಾದವರು ಹಾಡುತ್ತಿರಲು, ಅಪ್ಸರೆಯರು ನರ್ತನ ಮಾಡುತ್ತಿರಲು, ಅವರೆಲ್ಲರೂ ಗಂಗಾನದಿಯಲ್ಲಿ ಸ್ನಾನ ಮಾಡಿದರು.

 

ಸಮಸ್ತರಾಜಸಂಯುತಾ ವಿಗಾಹ್ಯ ಜಾಹ್ನವೀಜಲೇ ।

ಪುರಂ ಯಯುಃ ಪುನಶ್ಚ  ತೇ ಸುಸದ್ಮ ಚಾಗಮನ್ ಸುರಾಃ             ॥೨೧.೨೬೯॥

 

ಎಲ್ಲಾ ರಾಜರಿಂದ ಕೂಡಿದವರಾದ ಪಾಂಡವರು ಗಂಗೆಯಲ್ಲಿ ಸ್ನಾನ ಮಾಡಿ, ಮತ್ತೆ ತಮ್ಮ ಪಟ್ಟಣಕ್ಕೆ (ಇಂದ್ರಪ್ರಸ್ಥಕ್ಕೆ)ತೆರಳಿದರು. ದೇವತೆಗಳು  ತಮ್ಮ ಲೋಕಕ್ಕೆ ಹಿಂತಿರುಗಿದರು.

No comments:

Post a Comment