ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, March 21, 2022

Mahabharata Tatparya Nirnaya Kannada 22: 01-05

 

೨೨. ಅರಣೀಪ್ರಾಪ್ತಿಃ

̐

ಆಗನ್ತುಕಾಮಾನ್ ಪುರವಾಸಿನಸ್ತೇ ಸಂಸ್ಥಾಪ್ಯ ಕೃಚ್ಛ್ರೇಣ ಕುರುಪ್ರವೀರಾಃ ।

ರಾತ್ರೌ ಪ್ರವಿಷ್ಟಾ ಗಹನಂ ವನಂ ಚ ಕಿರ್ಮ್ಮೀರಮಾಸೇದುರಥೋ ನರಾಶಮ್     ॥ ೨೨.೦೧ ॥

 

ನಿಮ್ಮ ಜೊತೆಗೇ ಬಂದಿರುತ್ತೇವೆ ಎಂದು ಬಯಸುವ ಹಸ್ತಿನಪುರ ಪಟ್ಟಣದಲ್ಲಿ ವಾಸಮಾಡಿಕೊಂಡು  ಇರತಕ್ಕ ನಾಗರಿಕರನ್ನು ಬಹಳ ಕಷ್ಟದಿಂದ ತಡೆದ ಪಾಂಡವರು, ರಾತ್ರಿಯಾಗುತ್ತಿರಲು ದಟ್ಟವಾದ ಅಡವಿಯನ್ನು ಹೊಕ್ಕರು. ಅಲ್ಲಿ ನರಭಕ್ಷಕನಾದ ಕಿರ್ಮೀರ ಎನ್ನುವ ರಾಕ್ಷಸನನ್ನು ಹೊಂದಿದರು.

 

ಬಕಾನುಜೋSಸೌ ನಿಖಿಲೈರಜೇಯೋ ವರಾದ್ ಗಿರೀಶಸ್ಯ ನಿಹನ್ತುಕಾಮಃ ।

ಸದಾರಸೋದರ್ಯ್ಯಮಭಿಪ್ರಸಸ್ರೇ ಭೀಮಂ ಮಹಾವೃಕ್ಷಗಿರೀನ್ ಪ್ರಮುಞ್ಚನ್ ॥ ೨೨.೦೨ ॥

 

ಕಿರ್ಮೀರ ಬಕಾಸುರನ ತಮ್ಮ. ರುದ್ರದೇವನ ವರಬಲದಿಂದ ಇವನು ಎಲ್ಲರಿಂದ ಅಜೇಯನು. ಅಂತಹ ಕಿರ್ಮೀರನು,  ಹೆಂಡತಿಯೂ ಹಾಗೂ ಅಣ್ಣ-ತಮ್ಮಂದಿರರಿಂದಲೂ ಕೂಡಿದ ಭೀಮಸೇನನನ್ನು ಕೊಲ್ಲಲು ಬಯಸಿದವನಾಗಿ  ಮರಗಳನ್ನೂ, ಬಂಡೆಗಳನ್ನೂ ಎಸೆಯುತ್ತಾ, ಭೀಮಸೇನನನ್ನು ಎದುರುಗೊಂಡ.

[ಕಿರ್ಮೀರನಿಗೆ ತನ್ನ ಅಣ್ಣನನ್ನು ಕೊಂದ ಭೀಮಸೇನನ ಮೇಲೆ ಅತಿಯಾದ ದ್ವೇಷವಿತ್ತು. ಹಾಗಾಗಿ ಭೀಮನನ್ನು ಎದುರುಗೊಂಡ]

 

ಸ ಸಮ್ಪ್ರಹಾರಂ ಸಹ ತೇನ ಕೃತ್ವಾ ಭೀಮೋ ನಿಪಾತ್ಯಾSಶು ಧರಾತಳೇ ತಮ್ ।

ಚಕ್ರೇ ಮಖೇ ಸಙ್ಗರನಾಮಧೇಯೇ ಪ್ರಸ̐ಹ್ಯ ನಾರಾಯಣದೈವತೇ ಪಶುಮ್     ॥ ೨೨.೦೩ ॥

 

ಭೀಮಸೇನನು ಕಿರ್ಮೀರನ ಜೊತೆಗೆ ಯುದ್ಧವನ್ನು ಮಾಡಿ, ಕೂಡಲೇ ಕಿರ್ಮೀರನನ್ನು ಭೂಮಿಯಲ್ಲಿ ಕೆಡವಿ, ಯುದ್ಧ ಎಂಬ ಹೆಸರಿನ, ನಾರಾಯಣನನ್ನೇ ದೇವತೆಯಾಗಿ ಉಳ್ಳ ಯಜ್ಞದಲ್ಲಿ ಅವನನ್ನು ಪಶುವನ್ನಾಗಿ ಮಾಡಿದನು. (ಈ ಅನುಸಂಧಾನದಿಂದ ಭೀಮಸೇನ ಕಿರ್ಮೀರನನ್ನು ಕೊಂದನು).

 

ನಿಹತ್ಯ ರಕ್ಷೋ ವನಮದ್ಧ್ಯಸಂಸ್ಥಾಸ್ತದಾ ಯತೀನಾಮಯುತೈಃ ಸಮೇತಾಃ ।

ಅಶೀತಿಸಾಹಸ್ರಮುನಿಪ್ರವೀರೈರ್ದ್ದಶಾಂಶಯುಕ್ತೈಃ ಸಹಿತಾ ವ್ಯಚಿನ್ತಯನ್           ॥ ೨೨.೦೪ ॥

 

ಹೀಗೆ ಕಿರ್ಮೀರನನ್ನು ಕೊಂದು, ಕಾಡಿನ ನಡುವೆ ಇರುತ್ತಾ, ಹತ್ತು ಸಹಸ್ರ ಯತಿಗಳಿಂದಲೂ, ಎಂಬತ್ತೆಂಟು ಸಹಸ್ರ ಮುನಿಗಳಿಂದಲೂ ಕೂಡಿದವರಾಗಿ ಪಾಂಡವರು ಚಿಂತಿಸಿದರು.

[ಮಹಾಭಾರತದಲ್ಲಿ(ವನಪರ್ವ ೨೩೪.೪೬) ಹೀಗೆ ಹೇಳಿದ್ದಾರೆ: ‘ದಶಾನ್ಯಾನಿ ಸಹಸ್ರಾಣಿ ಏಷಾಮನ್ನಂ ಸುಸಂಸ್ಕೃತಂ । ಹ್ರಿಯತೇ ರುಗ್ಮಪಾತ್ರಿಭಿರ್ಯತೀನಾಮೂರ್ಧ್ವರೇತಸಾಮ್’ (ಹತ್ತು ಸಾವಿರ ಜನ ಯತಿಗಳಿಗೆ ಬಂಗಾರದ ಪಾತ್ರೆಯಲ್ಲಿ ಅನ್ನವನ್ನು ಕೊಡುತ್ತಿದ್ದರು). ‘ಅಷ್ಟಾವಗ್ರೇ ಬ್ರಾಹ್ಮಣಾನಾಂ ಸಹಸ್ರಾಣಿ ಸ್ಮ ನಿತ್ಯದಾ । ಭುಞ್ಜತೇ ರುಗ್ಮಪಾತ್ರೀಷು ಯುಧಿಷ್ಠಿರನಿವೇಶನೇ’ (೪೪), ಅಷ್ಟಾಶೀತಿಸಹಸ್ರಾಣಿ ಸ್ನಾತಕಾ ಗೃಹಮೇಧಿನಃ । ತ್ರಿಂಶದ್ದಾಸೀಕ ಏಕೈಕೋ ಯಾನ್ ಬಿಭರ್ತಿ ಯುಧಿಷ್ಠಿರಃ’ (೪೫) ಈ ರೀತಿಯಾದ ದೊಡ್ಡ ಪರಿವಾರವನ್ನು ಕಟ್ಟಿಕೊಂಡಮೇಲೆ ಅನ್ನಕ್ಕೆ ಚಿಂತೆಯಾಗದೇ ಇದ್ದೀತೇ?]

 

ವಿಚಿನ್ತ್ಯ ತೇಷಾಂ ಭರಣಾಯ ಧರ್ಮ್ಮಜಃ ಸಮ್ಪೂಜ್ಯ ಸೂರ್ಯ್ಯಸ್ಥಿತಮಚ್ಯುತಂ ಪ್ರಭುಮ್ ।

ದಿನೇSಕ್ಷಯಾನ್ನಂ ಪಿಠರಂ ತದಾSSಪ ರತ್ನಾದಿದಂ ಕಾಮವರಾನ್ನದಂ ಚ         ॥ ೨೨.೦೫ ॥

 

ಅವರೆಲ್ಲರ ಊಟ ತಿಂಡಿಯ(ಪೋಷಣೆಯ) ಕುರಿತು ಚಿಂತಿಸಿದ ಧರ್ಮರಾಜನು, ಸೂರ್ಯಾಂತರ್ಯಾಮಿ ನಾರಾಯಣನನ್ನು ಪೂಜಿಸಿ, ಒಂದು ದಿನದಲ್ಲಿ ಎಂದೂ ಮುಗಿಯದಂತೆ ಅನ್ನವನ್ನು ಕೊಡುವ, ರತ್ನ ಮೊದಲಾದವುಗಳನ್ನು ಕೊಡುವ, ಬೇಡಿದ ಅನ್ನವನ್ನು ಕೊಡುವ ಪಾತ್ರೆಯನ್ನು ಹೊಂದಿದ.

[ಮಹಾಭಾರತದಲ್ಲಿ(ವನಪರ್ವ ೩.೨೬) ಈ ವಿವರ ಕಾಣಸಿಗುತ್ತದೆ: ಸಬ್ರಹ್ಮಕೇಷು ಲೋಕೇಷು ಸಪ್ತಸ್ವಪ್ಯಖಿಲೇಷು ಚ । ನ ತದ್ ಭೂತಮಹಂ ಮನ್ಯೇ  ಯದರ್ಕಾದತಿರಿಚ್ಯತೇ’ .  ‘ಬ್ರಹ್ಮನೇ ಮೊದಲಾಗಿರುವ ಈ ಏಳೂ ಲೋಕಗಳಲ್ಲಿ ಅರ್ಕನಿಗಿಂತ ಮಿಗಿಲಾಗಿರುವ ಒಂದು ಭೂತವನ್ನು ಕಂಡಿಲ್ಲ’ ಎನ್ನುವ ಈ ಮಾತನ್ನು ವಿಶ್ಲೇಷಿಸಿದಾಗ - ಆದಿತ್ಯ ಬ್ರಹ್ಮ-ರುದ್ರನಿಗಿಂತ ಮಿಗಿಲಲ್ಲ ಎನ್ನುವುದು ನಮಗೆ ತಿಳಿದಿರುವ ವಿಷಯ. ಹಾಗಾಗಿ ಇಲ್ಲಿ ಹೇಳುತ್ತಿರುವ ಅರ್ಕ  ಮಹಾಮರ್ಕ ಮಘವಂ ಚಿತ್ರಮರ್ಚಾ...’ ಎಂದು ವೇದದಲ್ಲಿ ಹೇಳಿರುವ ಅರ್ಕ ಯಾರಿದ್ದಾನೋ ಅವನೇ ಎಂದು ತಿಳಿಯುತ್ತದೆ. ಮಹಾಭಾರತದಲ್ಲಿ ‘ತ್ವಾಮಿಂದ್ರಮಾಹುಸ್ತ್ವಂ ರುದ್ರಸ್ತ್ವಂ ವಿಷ್ಟುಸ್ತ್ವಂ ಪ್ರಜಾಪತಿಃ’ (೪೧)  ಎಂದು ಹೇಳುತ್ತಾರೆ. ಅಂದರೆ ಮೂಲರೂಪದಲ್ಲಿ ಧರ್ಮರಾಜನಿಗೆ ಸಮಾನ ಕಕ್ಷೆಯಲ್ಲಿರುವವನು ಸೂರ್ಯ. ಅವನನ್ನು ಧರ್ಮರಾಜ ಸ್ತೋತ್ರ ಮಾಡುತ್ತಿದ್ದಾನೆ ಎಂದರೆ, ಅದು ಸೂರ್ಯಾಂತರ್ಗತ ನಾರಾಯಣನನ್ನೇ ಎಂದು ಅರ್ಥವಾಗುತ್ತದೆ. ಇವೆಲ್ಲವನ್ನೂ ಸಂಗ್ರಹಿಸಿದ ಆಚಾರ್ಯರು ಇಲ್ಲಿ ‘ಸೂರ್ಯಸ್ಥಿತಮಚ್ಯುತಮ್’ ಎಂದು ಹೇಳಿದ್ದಾರೆ.

ದಿನೇSಕ್ಷಯಾನ್ನಮ್’- ಎಂದರೆ ಪ್ರತಿದಿನವೂ ಅಕ್ಷಯವಾದ ಅನ್ನವನ್ನು ಕೊಡುವ ಪಾತ್ರೆ ಎಂದರ್ಥ.  ಅಕ್ಷಯಪಾತ್ರೆ ಕುರಿತಾಗಿ ಒಂದು ಕಥೆ ಪ್ರಚಲಿತದಲ್ಲಿದೆ. ಕೃಷ್ಣ ಬಂದಾಗ ಪಾಂಡವರಲ್ಲಿ ಊಟವನ್ನು ನೀಡಲು  ಅನ್ನವಿರಲಿಲ್ಲ, ಆದರೆ ಪಾತ್ರೆಯಲ್ಲಿ ಒಂದು ಅನ್ನದ ಅಗಳು ಇತ್ತು, ಅದನ್ನು ಕೃಷ್ಣ ತಿಂದ ..ಇತ್ಯಾದಿ. ಇದು ಪ್ರಕ್ಷಿಪ್ತ. ಈ ಕಥೆ ಮೂಲಮಹಾಭಾರತದ ಕಥೆಯಲ್ಲ. ಇದು ಜಾನಪದ ಕಥೆಗಾರರ ಸೇರ್ಪಡೆ.]

Sunday, March 20, 2022

Mahabharata Tatparya Nirnaya Kannada 21: 406-415

ಪ್ರಯಾತಾನನು ತಾನ್ ಕುನ್ತೀ ಪ್ರಯಯೌ ಪುತ್ರಗೃದ್ಧಿನೀ ।

ರೋರುದ್ಯಮಾನಾಂ ವಿದುರಃ ಸ್ಥಾಪಯಾಮಾಸ ತಾಂ ಗೃಹೇ ।

ಪ್ರಣಮ್ಯ ತಾಂ ಯಯುಃ ಪಾರ್ತ್ಥಾಃ ಸಕೃಷ್ಣಾಃ ಶೀಘ್ರಗಾಮಿನಃ                ॥೨೧.೪೦೬॥

 

ಕಾಡಿಗೆ ಹೊರಟಿರುವ ಅವರನ್ನು ಕುಂತಿಯು ಮಕ್ಕಳ ಹಿತವನ್ನು ಬಯಸುತ್ತಾ, ಅನುಸರಿಸಿ ಹೋದಳು. ಗಟ್ಟಿಯಾಗಿ ಅಳುತ್ತಿರುವ ಅವಳನ್ನು ವಿದುರನು ತನ್ನ ಮನೆಯಲ್ಲೇ ನಿಲ್ಲಿಸಿದನು. ಆ ಪಾಂಡವರೆಲ್ಲರೂ ದ್ರೌಪದಿಯಿಂದ ಕೂಡಿ ಕುಂತಿಗೆ ನಮಸ್ಕರಿಸಿ, ಶೀಘ್ರವಾಗಿ ಕಾಡಿನಡೆಗೆ ತೆರಳಿದರು.

 

ಯುಧಿಷ್ಠಿರೋSವಾಗ್ವದನೋ ಯಯೌ ನ ಕ್ರೋಧಚಕ್ಷುಷಾ ।

ದಹೇಯಂ ಕೌರವಾನ್ ಸರ್ವಾನಿತಿ ಕಾರುಣಿಕೋ ನೃಪಃ                        ॥೨೧.೪೦೭॥

 

ಕೃಪೆಯುಳ್ಳ ಯುಧಿಷ್ಠಿರನು ತನ್ನ ಮುನಿದ ಕಣ್ಣಿನಿಂದ ಕೌರವರು ಸುಡಬಾರದು ಎಂದು ತಲೆಯನ್ನು ತಗ್ಗಿಸಿ ತೆರಳಿದನು.

 

ಉದ್ಧೃತ್ಯ ಬಾಹೂ ಪ್ರಯಯೌ ಬಾಹುಷಾಳೀ ವೃಕೋದರಃ ।

ಆಭ್ಯಾಮೇವಾಖಿಲಾಞ್ಛತ್ರೂಞ್ಛಕ್ತೋ ಹನ್ತುಮಹಂ ತ್ವಿತಿ                           ॥೨೧.೪೦೮॥

 

ದಪ್ಪನಾದ ತೋಳ್ಗಳುಳ್ಳ ಭೀಮಸೇನನು ಕೈಗಳನ್ನು ಮೇಲಕ್ಕೆತ್ತಿ, ಇವುಗಳಿಂದಲೇ ಎಲ್ಲಾ ಶತ್ರುಗಳನ್ನು ಕೊಲ್ಲಲು ನಾನು ಶಕ್ತನು ಅನ್ನುವ ಅಭಿಪ್ರಾಯವನ್ನು ತೋರುತ್ತಾ ತೆರಳಿದನು. (ನಾವು ಸೋತಿದ್ದು ಮೋಸದ ಜೂಜಿನಿಂದಲೇ ಹೊರತು ಬಾಹುಬಲದಿಂದ ಅಲ್ಲ ಎನ್ನುವುದನ್ನು ಭೀಮಸೇನ ಹೀಗೆ ತೋರಿಸಿದ)

 

ಅಬದ್ಧಕೇಶಾ ಪ್ರಯಯೌ ದ್ರೌಪದೀ ಸಾ ಸಭಾತಳಾತ್

ಮುಕ್ತಕೇಶಾ ಭವಿಷ್ಯನ್ತಿ ಧಾರ್ತ್ತರಾಷ್ಟ್ರಸ್ತ್ರಿಯಸ್ತ್ವಿತಿ                                   ॥೨೧.೪೦೯॥

 

ದುರ್ಯೋಧನನ ಹೆಣ್ಣುಮಕ್ಕಳು ಜಡೆಯನ್ನು ಬಿಚ್ಚಿ ಅಳುತ್ತಾರೆ ಎಂದು ಅವರ ವೈಧವ್ಯದ  ಅಭಿಪ್ರಾಯಯವನ್ನು ಸೂಚಿಸುತ್ತಾ ದ್ರೌಪದೀದೇವಿಯು ಆ ಸಭೆಯಿಂದ ತನ್ನ ಜಡೆಯನ್ನು ಬಿಚ್ಚಿ ತೆರಳಿದಳು.

[ಅಂದು ಗಂಡನನ್ನು ಕಳೆದುಕೊಂಡವರು ಜಡೆಯನ್ನು ಬಿಚ್ಚುತ್ತಿದ್ದರು. ಅದು ಆಗಿನ ಕಾಲದ  ಸಾಮಾಜಿಕ ಪದ್ಧತಿಯಾಗಿತ್ತು. ಈರೀತಿ ವೈಧವ್ಯದ ಸೂಚನೆಯನ್ನು ದುರ್ಯೋಧನಾದಿಗಳಿಗೆ ಸೂಚಿಸಲು ದ್ರೌಪದಿ ತನ್ನ ಜಡೆಯನ್ನು ಬಿಚ್ಚಿ ಸಭೆಯಿಂದ ನಡೆದಳೇ ವಿನಃ, ೧೩ ವರ್ಷಗಳ ಕಾಲ  ಜಡೆಯನ್ನು ಬಿಚ್ಚಿಕೊಂಡು ದ್ರೌಪದಿ ಇರಲಿಲ್ಲ. ‘ದ್ರೌಪದಿ ಸಿರಿಮುಡಿಯನ್ನು ಬಿಚ್ಚಿಕೊಂಡೇ ಇದ್ದಳು, ಅದನ್ನು ಯುದ್ಧಾನಂತರ ಭೀಮಸೇನ ಹೆಣೆದ, ಇತ್ಯಾದಿ ಕಥೆಗಳು ಭಟ್ಟನಾರಾಯಣನ ಕಲ್ಪನೆ ಹೊರತು ಮೂಲ ಮಹಾಭಾರತದಲ್ಲಿ ಹೇಳಿರುವುದಲ್ಲ]

 

ವರ್ಷನ್ ಪಾಂಸೂನ್ ಯಯೌ ಪಾರ್ತ್ಥ ಇತ್ಥಂ ಶತ್ರುಷು ಸಾಯಕಾನ್ ।

ವರ್ಷಯಾನೀತ್ಯಭಿಪ್ರಾಯಃ ಪರಮಾಸ್ತ್ರವಿದಾಂ ವರಃ                            ॥೨೧.೪೧೦॥

 

ಅಸ್ತ್ರಜ್ಞರಲ್ಲಿ ಶ್ರೇಷ್ಠನಾದ ಅರ್ಜುನನು ಮಣ್ಣನ್ನು ಎರಚುತ್ತಾ ತೆರಳಿದ. ಈ ಪ್ರಕಾರವಾಗಿ ಶತ್ರುಗಳಲ್ಲಿ ಬಾಣಗಳನ್ನು ಯುದ್ಧದಲ್ಲಿ ಸುರಿಸುತ್ತೇನೆ ಎನ್ನುವ ಅಭಿಪ್ರಾಯದಿಂದ ಅವನು ಹೀಗೆ ತೆರಳಿದ.

 

ಯಮಾವವಾಙ್ಮುಖೌ ಯಾತೌ ನಾSವಯೋಃ ಶತ್ರವೋ ಮುಖಮ್ ।

ಪಶ್ಯನ್ತ್ವಸ್ಯಾಮವಸ್ಥಾಯಾಮಿತ್ಯೇವ ಧೃತಚೇತಸೌ                                ॥೨೧.೪೧೧॥

 

ತಮ್ಮ ಮೋರೆಯನ್ನು ಈ ಅವಸ್ಥೆಯಲ್ಲಿ ಶತ್ರುಗಳು ಕಾಣದಿರಲಿ ಎಂದು ನಕುಲ-ಸಹದೇವರು ಮುಖವನ್ನು ಕೆಳಗಡೆ ಮಾಡಿಕೊಂಡು ತೆರಳಿದರು.

 

ಪ್ರೇತಸಂಸ್ಕಾರಸೂಕ್ತಾನಿ ಪಠನ್ ಧೌಮ್ಯೋSಗ್ರತೋ ಯಯೌ ।

ಹತೇಷು ಧಾರ್ತ್ತರಾಷ್ಟ್ರೇಷು ಮಯಾ ಕಾರ್ಯ್ಯಾಃ ಕ್ರಿಯಾ ಇತಿ               ॥೨೧.೪೧೨॥

 

ಪುರೋಹಿತರಾದ ಧೌಮ್ಯರು ಪ್ರೇತಸಂಸ್ಕಾರ ಸೂಕ್ತಗಳನ್ನು ಹೇಳುತ್ತಾ, ಎಲ್ಲರಿಗಿಂತ ಮುಂದೆ ಸಾಗಿದರು. ಈ ಧೃತರಾಷ್ಟ್ರನ ಮಕ್ಕಳೆಲ್ಲರಿಗೂ ಮುಂದೆ ಪ್ರೇತಸಂಸ್ಕಾರಕ್ಕೆ ನಾನೇ ಪೌರೋಹಿತ್ಯ ಮಾಡಬೇಕು – ಅನ್ನುವ ಅಭಿಪ್ರಾಯದಲ್ಲಿ ಅವರು ಆರೀತಿ ಮಾಡಿದರು.

 

ತಾನಥಾನುಯಯುಃ ಸೂತಾ ರಥೈಃ ಪರಿಚತುರ್ದ್ದಶೈಃ ।

ಸೂದಾಃ ಪೌರೋಗವಾಶ್ಚೈವ ಭೃತ್ಯಾ ಯೇ ತ್ವಾಪ್ತಕಾರಿಣಃ                     ॥೨೧.೪೧೩॥

 

ಕೆಲವು ಸೂತರು ಮತ್ತು ಪಾಂಡವರ ಅತ್ಯಂತ ಹತ್ತಿರದ ಸೇವಕರು ಸರಿ ಸುಮಾರು ಹದಿನಾಲ್ಕು ರಥಗಳಿಂದ ಅವರನ್ನು ಅನುಸರಿಸಿದರು. ಅವರಲ್ಲಿ ಮುಖ್ಯರಾದವರು ಅಡಿಗೆ ಮಾಡುವವರು, ಬಟ್ಟೆ ಮೊದಲಾದವುಗಳನ್ನು ನೋಡಿಕೊಳ್ಳುವ ಭೃತ್ಯರು, ಅತ್ಯಂತ ಆತ್ಮೀಯ ಸೇವಕರು.

 

ತತಸ್ತೇ ಜಾಹ್ನವೀತೀರೇ ವನೇ ವಟಮುಪಾಶ್ರಿತಾಃ ।

ನ್ಯಷೀದನ್ನಾಗತಾನ್ ದೃಷ್ಟ್ವಾ ಸಮಸ್ತಾನ್ ಪುರವಾಸಿನಃ                       ॥೨೧.೪೧೪॥

 

ತದನಂತರ ಅವರು ಗಂಗಾನದಿ ತೀರದಲ್ಲಿ ಒಂದು ದೊಡ್ಡ ಆಲದ ಮರದ ಬಳಿಯಲ್ಲಿ ಕುಳಿತುಕೊಂಡರು. ಆಗ ಎಲ್ಲಾ ಪಟ್ಟಣವಾಸಿಗಳು ಅಲ್ಲಿಗೆ ಬಂದರು.

 

ತತಸ್ತು ತೇ ಸರ್ವಜಗನ್ನಿವಾಸಂ ನಾರಾಯಣಂ ನಿತ್ಯಸಮಸ್ತಸದ್ಗುಣಮ್

ಸ್ವಯಮ್ಭುಶರ್ವಾದಿಭಿರರ್ಚ್ಚಿತಂ ಸದಾ ಭಕ್ತ್ಯಾSಸ್ಮರನ್ ಭಕ್ತಭವಾಪಹಂ ಪ್ರಭುಮ್ ॥೨೧.೪೧೫॥

 

ತದನಂತರ ಅವರು ಎಲ್ಲಾ ಜಗಕ್ಕೂ ಆಧಾರನಾದ, ಸದ್ಗುಣಗಳಿಂದ ತುಂಬಿರುವ, ಬ್ರಹ್ಮ-ರುದ್ರಾದಿಗಳಿಂದ ಪೂಜಿಸಲ್ಪಡುವ, ಭಕ್ತರ ಸಂಸಾರವನ್ನು ನೀಗಿಸುವ, ಸರ್ವೋತ್ತಮನಾದ ನಾರಾಯಣನನ್ನು ಭಕ್ತಿಯಿಂದ ಸ್ಮರಣೆ ಮಾಡಿದರು.

 

[ಆದಿತಃ ಶ್ಲೋಕಾಃ :  ೨೭೬೬+೪೧೫=೩೧೮೧]

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವವನಪ್ರವೇಶೋ ನಾಮ ಏಕವಿಂಶೋsಧ್ಯಾಯಃ ॥

                                                                       ********* 



Saturday, March 19, 2022

Mahabharata Tatparya Nirnaya Kannada 21: 396-405

 

ಗಾನ್ಧಾರೇಣ ಪುನಶ್ಚಾಕ್ಷಹೃದಯಜ್ಞೇನ ಧರ್ಮ್ಮಜಃ ।

ಪರಾಜಿತೋ ವನಂ ಯಾತುಮೈಚ್ಛತ್ ಸಭ್ರಾತೃಕೋ ಯದಾ             ॥೨೧.೩೯೬॥

 

ಮತ್ತೆ ನುರಿತ ಜೂಜುಕೋರನಾದ ಶಕುನಿಯಿಂದ ಧರ್ಮರಾಜನು ಸೋತವನಾಗಿ ತನ್ನ ತಮ್ಮಂದಿರರಿಂದ ಕೂಡಿಕೊಂಡು ಕಾಡಿಗೆ ತೆರಳ ಬಯಸಿದನು.

 

ತದಾ ನನರ್ತ್ತ ಪಾಪಕೃತ್ ಸುಯೋಧನಾನುಜೋ ಹಸನ್ ।

ವದಂಶ್ಚ ಮಾರುತಾತ್ಮಜಂ ಪುನಃಪುನಶ್ಚ ಗೌರಿತಿ                      ॥೨೧.೩೯೭॥

 

ಆಗ ಪಾಪಿಯಾದ ದುಶ್ಯಾಸನನು ನಗುತ್ತಾ ಭೀಮಸೇನನನ್ನು ‘ಅತ್ಯಂತ ಅಶಕ್ತನಾದ ಹಸು ನೀನು’ ಎಂದು ಮತ್ತೆಮತ್ತೆ ಹೇಳುತ್ತಾ ನರ್ತಿಸಿದನು.

 

ಉವಾಚ ಚ ಪುನಃ ಕೃಷ್ಣಾಂ ನೃತ್ಯನ್ನೇವ ಸಭಾತಳೇ ।

ಅಪತಿರ್ಹ್ಯಸಿ ಕಲ್ಯಾಣಿ ಗಚ್ಛ ದುರ್ಯ್ಯೋಧನಾಲಯಮ್               ॥೨೧.೩೯೮॥

 

ಮತ್ತೆ  ಕುಣಿಯುತ್ತಲೇ ದ್ರೌಪದಿಯನ್ನು ಕುರಿತು ಹೇಳಿದ: ‘ಓ ಚಲುವೆಯೇ, ಗಂಡಂದಿರಿದ್ದೂ ಪ್ರಯೋಜನವಿಲ್ಲ. ಅದರಿಂದ ಗಂಡಂದಿರಿಲ್ಲದವಳಾಗಿದ್ದೀಯ. ನಿನಗೆ ಒಳ್ಳೆ ಗಂಡ ಬೇಕಿದ್ದರೆ ದುರ್ಯೋಧನನ ಮನೆಗೆ ನಡೆ.

 

ಏತೇSಖಿಲಾಃ ಷಣ್ಢತಿಲಾಸ್ತಮೋsನ್ಧಮಾಪ್ತಾ ನಚೈಷಾಂ ಪುನರುತ್ಥಿತಿಃ ಸ್ಯಾತ್ ।

ಇತಿ ಬ್ರುವಾಣೋSನುಚಕಾರ ಭೀಮಂ ತದಾSಹಸನ್ ಧಾರ್ತ್ತರಾಷ್ಟ್ರಾಶ್ಚ ಸರ್ವೇ ॥೨೧.೩೯೯॥

 

ಇವರೆಲ್ಲರೂ ಕೂಡಾ ಎಣ್ಣಿಯನ್ನು ಕಳೆದುಕೊಂಡ ಜೊಳ್ಳು ಎಳ್ಳಿನ ಕಾಳಿನಂತಿರುವವರು(ಗಂಡಸರೇ ಅಲ್ಲ ಎನ್ನುವ ಭಾವ). ಇವರು ಅನ್ಧಂತಮಸ್ಸನ್ನು ಹೊಂದಿದ್ದಾರೆ. ಅದರಿಂದ ಮತ್ತೆ ಮೇಲೆ ಬರುವಂತಿಲ್ಲ’. ಈರೀತಿಯಾಗಿ ಹೇಳುತ್ತಾ ದುಶ್ಯಾಸನನು ಭೀಮನ ನಡಿಗೆಯನ್ನು ವಕ್ರವಕ್ರವಾಗಿ ಅಣಕಿಸಿದ. ಆಗ ಎಲ್ಲಾ ದುರ್ಯೋಧನಾದಿಗಳು ಗಟ್ಟಿಯಾಗಿ ನಕ್ಕರು.

 

ತದಾSಕರೋದ್ ಭೀಮಸೇನಃ ಪ್ರತಿಜ್ಞಾಂ ಹನ್ತಾಸ್ಮಿ ವೋ ನಿಖಿಲಾನ್  ಸಙ್ಗರೇSಹಮ್ ।

ಇತೀರಿತೇ ಶರಣಂ ದ್ರೋಣಮೇವ ಜಗ್ಮುಃ ಸಮಸ್ತಾ ಧೃತರಾಷ್ಟ್ರಪುತ್ರಾಃ             ॥೨೧.೪೦೦॥

 

ಆಗ ಭೀಮಸೇನನು ಇನ್ನೊಂದು ಪ್ರತಿಜ್ಞೆ ಮಾಡಿದ: ‘ಯುದ್ಧದಲ್ಲಿ ನಾನು ನಿಮ್ಮೆಲ್ಲರನ್ನೂ ಕೂಡಾ ಕೊಲ್ಲುತ್ತೇನೆ’ ಎಂದು. ಈರೀತಿಯಾಗಿ ಅವನು ಹೇಳುತ್ತಿರಲು, ಎಲ್ಲಾ ಧೃತರಾಷ್ಟ್ರ ಪುತ್ರರು ದ್ರೋಣನನ್ನೇ ಶರಣು ಹೋದರು.

 

[ಏಕೆ ದ್ರೋಣರನ್ನು ರಕ್ಷಕನನ್ನಾಗಿ ಹೊಂದಿದರು ಎಂದರೆ:]

 

ಯತ್ರ ದ್ರೋಣಸ್ತತ್ರ ಪುತ್ರಸ್ತತ್ರ ಭೀಷ್ಮಃ ಕೃಪಸ್ತಥಾ ।

ನಚಾತ್ಯೇತಿ ಗುರೂನ್ ಭೀಮ ಇತಿ ತಂ ಶರಣಂ ಯಯುಃ             ॥೨೧.೪೦೧॥

 

ಎಲ್ಲಿ ದ್ರೋಣರಿರುವರೋ ಅಲ್ಲಿ ದ್ರೋಣಪುತ್ರ ಅಶ್ವತ್ಥಾಮ. ಅವರಿಬ್ಬರೂ ಎಲ್ಲಿ ಇರುತ್ತಾರೋ ಅಲ್ಲಿ  ಭೀಷ್ಮಾಚಾರ್ಯರು ಮತ್ತು ಕೃಪಾಚಾರ್ಯರೂ ಇರುತ್ತಾರೆ. ಭೀಮಸೇನ ಹಿರಿಯರನ್ನು ಮೀರುವುದಿಲ್ಲ. ಈ ಅಭಿಪ್ರಾಯದಿಂದಲೇ ಅವರೆಲ್ಲರೂ ದ್ರೋಣಾಚಾರ್ಯರನ್ನು ಶರಣು ಹೊಂದಿದರು.

 

ಅಬ್ರವೀದ್ ಧಾರ್ತ್ತರಾಷ್ಟ್ರಾಂಶ್ಚ ದ್ರೋಣೋ ವಿಪ್ರೋSಪಿ ಸನ್ನಹಮ್ ।

ಸಪುತ್ರಃ ಸಕೃಪಃ ಶಸ್ತ್ರಂ ಗ್ರಹೀಷ್ಯೇ ಭವತಾಂ ಕೃತೇ                    ॥೨೧.೪೦೨॥

 

ಆಗ ದ್ರೋಣಾಚಾರ್ಯರು : ನಾನು ಬ್ರಾಹ್ಮಣನಾದರೂ ಕೂಡಾ ನನ್ನ ಮಗನಿಂದ ಕೂಡಿಕೊಂಡು, ಕೃಪಾಚಾರ್ಯರಿಂದ ಕೂಡಿಕೊಂಡು ನಿಮಗಾಗಿ ಆಯುಧವನ್ನು ಹಿಡಿಯುತ್ತೇನೆ.

 

ರಕ್ಷಣೇ ಭವತಾಂ ಚೈವ ಕುರ್ಯ್ಯಾಂ ಯತ್ನಂ ಸ್ವಶಕ್ತಿತಃ ।

ನತು ಭೀಮಾದ್ ರಕ್ಷಿತುಂ ವಃ ಶಕ್ತಃ ಸತ್ಯಂ ಬ್ರವೀಮ್ಯಹಮ್             ॥೨೧.೪೦೩॥

 

ನಿಮ್ಮ ರಕ್ಷಣೆಯಲ್ಲಿ ನನ್ನ ಶಕ್ತಿಗನುಗುಣವಾಗಿ ಪ್ರಯತ್ನವನ್ನು ಮಾಡುತ್ತೇನೆ. ಭೀಮನಿಂದ ನಿಮ್ಮನ್ನು ರಕ್ಷಿಸಲು ನನಗೆ ಸಾಧ್ಯವಿಲ್ಲ, ಇದು ನನ್ನಿ(ಸತ್ಯ).

 

ತತೋ ಯಯುಃ ಪಾಣ್ಡವಾಸ್ತೇ ಸಭಾಯಾ ವನಾಯ ಕೃಷ್ಣಾಸಹಿತಾಃ ಸುಶೂರಾಃ ।

ಗತ್ಯಾSನುಚಕ್ರೇ ಯುವಸಿಂಹಖೇಲಗತಿಂ ಭೀಮಂ ಧಾರ್ತ್ತರಾಷ್ಟ್ರೋSಪಹಸ್ಯ             ॥೨೧.೪೦೪॥

 

ತದನಂತರ ಆ ಪಾಂಡವರು ದ್ರೌಪದಿಯಿಂದ ಒಡಗೂಡಿ ಸಭೆಯಿಂದ ಹೊರ ಸಾಗಿದರು. ದುರ್ಯೋಧನನು ಅವರನ್ನು ಅಪಹಾಸ್ಯ ಮಾಡುತ್ತಾ, ಸಿಂಹದಂತೆ ಗಂಭೀರ ನಡೆಯ ಭೀಮಸೇನನನ್ನು ನಡೆದು ಅಣಕಿಸಿದನು.

 

ದೃಷ್ಟ್ವಾ ಸಭಾಯಾ ಅರ್ದ್ಧನಿಷ್ಕ್ರಾನ್ತದೇಹೋ ವ್ಯಾವೃತ್ಯ ಭೀಮಃ ಪ್ರಾಹ ಸಂರಕ್ತನೇತ್ರಃ ।

ಊರುಂ ತವಾನ್ಯಂ ಚ ರಣೇ ವಿಭೇತ್ಸ್ಯ ಇತ್ಯುಕ್ತ್ವಾSಸೌ ನಿರ್ಗ್ಗತೋSಸತ್ಸಭಾಯಾಃ ॥೨೧.೪೦೫॥

 

ಸಭೆಯಿಂದ ಹೊರಟವನಾಗಿದ್ದ ಭೀಮಸೇನ ತಿರುಗಿ ನೋಡಿ,  ಕೆಂಪಡರಿದ ಕಣ್ಗಳುಳ್ಳವನಾಗಿ ಹೇಳಿದ: ‘ನಿನ್ನ ಇನ್ನೊಂದು ತೊಡೆಯನ್ನೂ ಕೂಡಾ ಯುದ್ಧದಲ್ಲಿ ಮುರಿಯುತ್ತೇನೆ’ ಎಂದು. ಹೀಗೆ ಹೇಳಿ ಆ ಅತ್ಯಂತ ಕೆಟ್ಟ ಸಭೆಯಿಂದ ಹೊರ ನಡೆದ.