೨೨. ಅರಣೀಪ್ರಾಪ್ತಿಃ
ಓ̐ ॥
ಆಗನ್ತುಕಾಮಾನ್
ಪುರವಾಸಿನಸ್ತೇ ಸಂಸ್ಥಾಪ್ಯ ಕೃಚ್ಛ್ರೇಣ ಕುರುಪ್ರವೀರಾಃ ।
ರಾತ್ರೌ ಪ್ರವಿಷ್ಟಾ
ಗಹನಂ ವನಂ ಚ ಕಿರ್ಮ್ಮೀರಮಾಸೇದುರಥೋ ನರಾಶಮ್ ॥
೨೨.೦೧ ॥
ನಿಮ್ಮ ಜೊತೆಗೇ ಬಂದಿರುತ್ತೇವೆ ಎಂದು ಬಯಸುವ ಹಸ್ತಿನಪುರ ಪಟ್ಟಣದಲ್ಲಿ ವಾಸಮಾಡಿಕೊಂಡು ಇರತಕ್ಕ ನಾಗರಿಕರನ್ನು ಬಹಳ ಕಷ್ಟದಿಂದ ತಡೆದ ಪಾಂಡವರು, ರಾತ್ರಿಯಾಗುತ್ತಿರಲು
ದಟ್ಟವಾದ ಅಡವಿಯನ್ನು ಹೊಕ್ಕರು. ಅಲ್ಲಿ ನರಭಕ್ಷಕನಾದ ಕಿರ್ಮೀರ ಎನ್ನುವ ರಾಕ್ಷಸನನ್ನು
ಹೊಂದಿದರು.
ಬಕಾನುಜೋSಸೌ
ನಿಖಿಲೈರಜೇಯೋ ವರಾದ್ ಗಿರೀಶಸ್ಯ ನಿಹನ್ತುಕಾಮಃ ।
ಸದಾರಸೋದರ್ಯ್ಯಮಭಿಪ್ರಸಸ್ರೇ ಭೀಮಂ ಮಹಾವೃಕ್ಷಗಿರೀನ್ ಪ್ರಮುಞ್ಚನ್ ॥ ೨೨.೦೨ ॥
ಕಿರ್ಮೀರ ಬಕಾಸುರನ ತಮ್ಮ. ರುದ್ರದೇವನ ವರಬಲದಿಂದ ಇವನು ಎಲ್ಲರಿಂದ ಅಜೇಯನು. ಅಂತಹ ಕಿರ್ಮೀರನು,
ಹೆಂಡತಿಯೂ ಹಾಗೂ ಅಣ್ಣ-ತಮ್ಮಂದಿರರಿಂದಲೂ ಕೂಡಿದ
ಭೀಮಸೇನನನ್ನು ಕೊಲ್ಲಲು ಬಯಸಿದವನಾಗಿ ಮರಗಳನ್ನೂ,
ಬಂಡೆಗಳನ್ನೂ ಎಸೆಯುತ್ತಾ, ಭೀಮಸೇನನನ್ನು ಎದುರುಗೊಂಡ.
[ಕಿರ್ಮೀರನಿಗೆ ತನ್ನ ಅಣ್ಣನನ್ನು ಕೊಂದ ಭೀಮಸೇನನ ಮೇಲೆ ಅತಿಯಾದ ದ್ವೇಷವಿತ್ತು. ಹಾಗಾಗಿ
ಭೀಮನನ್ನು ಎದುರುಗೊಂಡ]
ಸ ಸಮ್ಪ್ರಹಾರಂ ಸಹ ತೇನ
ಕೃತ್ವಾ ಭೀಮೋ ನಿಪಾತ್ಯಾSಶು ಧರಾತಳೇ ತಮ್ ।
ಚಕ್ರೇ ಮಖೇ
ಸಙ್ಗರನಾಮಧೇಯೇ ಪ್ರಸ̐ಹ್ಯ ನಾರಾಯಣದೈವತೇ
ಪಶುಮ್ ॥ ೨೨.೦೩ ॥
ಭೀಮಸೇನನು ಕಿರ್ಮೀರನ ಜೊತೆಗೆ ಯುದ್ಧವನ್ನು ಮಾಡಿ, ಕೂಡಲೇ ಕಿರ್ಮೀರನನ್ನು ಭೂಮಿಯಲ್ಲಿ
ಕೆಡವಿ, ಯುದ್ಧ ಎಂಬ ಹೆಸರಿನ, ನಾರಾಯಣನನ್ನೇ ದೇವತೆಯಾಗಿ ಉಳ್ಳ ಯಜ್ಞದಲ್ಲಿ ಅವನನ್ನು ಪಶುವನ್ನಾಗಿ
ಮಾಡಿದನು. (ಈ ಅನುಸಂಧಾನದಿಂದ ಭೀಮಸೇನ ಕಿರ್ಮೀರನನ್ನು ಕೊಂದನು).
ನಿಹತ್ಯ ರಕ್ಷೋ ವನಮದ್ಧ್ಯಸಂಸ್ಥಾಸ್ತದಾ
ಯತೀನಾಮಯುತೈಃ ಸಮೇತಾಃ ।
ಅಶೀತಿಸಾಹಸ್ರಮುನಿಪ್ರವೀರೈರ್ದ್ದಶಾಂಶಯುಕ್ತೈಃ ಸಹಿತಾ ವ್ಯಚಿನ್ತಯನ್ ॥ ೨೨.೦೪ ॥
ಹೀಗೆ ಕಿರ್ಮೀರನನ್ನು ಕೊಂದು, ಕಾಡಿನ ನಡುವೆ ಇರುತ್ತಾ, ಹತ್ತು ಸಹಸ್ರ ಯತಿಗಳಿಂದಲೂ, ಎಂಬತ್ತೆಂಟು ಸಹಸ್ರ ಮುನಿಗಳಿಂದಲೂ ಕೂಡಿದವರಾಗಿ ಪಾಂಡವರು ಚಿಂತಿಸಿದರು.
[ಮಹಾಭಾರತದಲ್ಲಿ(ವನಪರ್ವ ೨೩೪.೪೬) ಹೀಗೆ ಹೇಳಿದ್ದಾರೆ: ‘ದಶಾನ್ಯಾನಿ ಸಹಸ್ರಾಣಿ
ಏಷಾಮನ್ನಂ ಸುಸಂಸ್ಕೃತಂ । ಹ್ರಿಯತೇ ರುಗ್ಮಪಾತ್ರಿಭಿರ್ಯತೀನಾಮೂರ್ಧ್ವರೇತಸಾಮ್’ (ಹತ್ತು ಸಾವಿರ
ಜನ ಯತಿಗಳಿಗೆ ಬಂಗಾರದ ಪಾತ್ರೆಯಲ್ಲಿ ಅನ್ನವನ್ನು ಕೊಡುತ್ತಿದ್ದರು). ‘ಅಷ್ಟಾವಗ್ರೇ
ಬ್ರಾಹ್ಮಣಾನಾಂ ಸಹಸ್ರಾಣಿ ಸ್ಮ ನಿತ್ಯದಾ । ಭುಞ್ಜತೇ ರುಗ್ಮಪಾತ್ರೀಷು ಯುಧಿಷ್ಠಿರನಿವೇಶನೇ’
(೪೪), ಅಷ್ಟಾಶೀತಿಸಹಸ್ರಾಣಿ ಸ್ನಾತಕಾ ಗೃಹಮೇಧಿನಃ । ತ್ರಿಂಶದ್ದಾಸೀಕ ಏಕೈಕೋ ಯಾನ್ ಬಿಭರ್ತಿ
ಯುಧಿಷ್ಠಿರಃ’ (೪೫) ಈ ರೀತಿಯಾದ ದೊಡ್ಡ ಪರಿವಾರವನ್ನು ಕಟ್ಟಿಕೊಂಡಮೇಲೆ ಅನ್ನಕ್ಕೆ ಚಿಂತೆಯಾಗದೇ
ಇದ್ದೀತೇ?]
ವಿಚಿನ್ತ್ಯ ತೇಷಾಂ
ಭರಣಾಯ ಧರ್ಮ್ಮಜಃ ಸಮ್ಪೂಜ್ಯ ಸೂರ್ಯ್ಯಸ್ಥಿತಮಚ್ಯುತಂ ಪ್ರಭುಮ್ ।
ದಿನೇSಕ್ಷಯಾನ್ನಂ
ಪಿಠರಂ ತದಾSSಪ ರತ್ನಾದಿದಂ ಕಾಮವರಾನ್ನದಂ ಚ ॥ ೨೨.೦೫ ॥
ಅವರೆಲ್ಲರ ಊಟ ತಿಂಡಿಯ(ಪೋಷಣೆಯ) ಕುರಿತು ಚಿಂತಿಸಿದ ಧರ್ಮರಾಜನು, ಸೂರ್ಯಾಂತರ್ಯಾಮಿ
ನಾರಾಯಣನನ್ನು ಪೂಜಿಸಿ, ಒಂದು ದಿನದಲ್ಲಿ ಎಂದೂ ಮುಗಿಯದಂತೆ ಅನ್ನವನ್ನು ಕೊಡುವ, ರತ್ನ
ಮೊದಲಾದವುಗಳನ್ನು ಕೊಡುವ, ಬೇಡಿದ ಅನ್ನವನ್ನು ಕೊಡುವ ಪಾತ್ರೆಯನ್ನು ಹೊಂದಿದ.
[ಮಹಾಭಾರತದಲ್ಲಿ(ವನಪರ್ವ ೩.೨೬) ಈ ವಿವರ ಕಾಣಸಿಗುತ್ತದೆ: ಸಬ್ರಹ್ಮಕೇಷು ಲೋಕೇಷು ಸಪ್ತಸ್ವಪ್ಯಖಿಲೇಷು
ಚ । ನ ತದ್ ಭೂತಮಹಂ ಮನ್ಯೇ ಯದರ್ಕಾದತಿರಿಚ್ಯತೇ’ . ‘ಬ್ರಹ್ಮನೇ ಮೊದಲಾಗಿರುವ ಈ ಏಳೂ ಲೋಕಗಳಲ್ಲಿ ಅರ್ಕನಿಗಿಂತ
ಮಿಗಿಲಾಗಿರುವ ಒಂದು ಭೂತವನ್ನು ಕಂಡಿಲ್ಲ’ ಎನ್ನುವ ಈ ಮಾತನ್ನು ವಿಶ್ಲೇಷಿಸಿದಾಗ - ಆದಿತ್ಯ ಬ್ರಹ್ಮ-ರುದ್ರನಿಗಿಂತ
ಮಿಗಿಲಲ್ಲ ಎನ್ನುವುದು ನಮಗೆ ತಿಳಿದಿರುವ ವಿಷಯ. ಹಾಗಾಗಿ ಇಲ್ಲಿ ಹೇಳುತ್ತಿರುವ ಅರ್ಕ ‘ಮಹಾಮರ್ಕ ಮಘವಂ ಚಿತ್ರಮರ್ಚಾ...’ ಎಂದು
ವೇದದಲ್ಲಿ ಹೇಳಿರುವ ಅರ್ಕ ಯಾರಿದ್ದಾನೋ ಅವನೇ ಎಂದು ತಿಳಿಯುತ್ತದೆ. ಮಹಾಭಾರತದಲ್ಲಿ ‘ತ್ವಾಮಿಂದ್ರಮಾಹುಸ್ತ್ವಂ
ರುದ್ರಸ್ತ್ವಂ ವಿಷ್ಟುಸ್ತ್ವಂ ಪ್ರಜಾಪತಿಃ’ (೪೧)
ಎಂದು ಹೇಳುತ್ತಾರೆ. ಅಂದರೆ ಮೂಲರೂಪದಲ್ಲಿ ಧರ್ಮರಾಜನಿಗೆ ಸಮಾನ ಕಕ್ಷೆಯಲ್ಲಿರುವವನು
ಸೂರ್ಯ. ಅವನನ್ನು ಧರ್ಮರಾಜ ಸ್ತೋತ್ರ ಮಾಡುತ್ತಿದ್ದಾನೆ ಎಂದರೆ, ಅದು
ಸೂರ್ಯಾಂತರ್ಗತ ನಾರಾಯಣನನ್ನೇ ಎಂದು ಅರ್ಥವಾಗುತ್ತದೆ. ಇವೆಲ್ಲವನ್ನೂ ಸಂಗ್ರಹಿಸಿದ ಆಚಾರ್ಯರು
ಇಲ್ಲಿ ‘ಸೂರ್ಯಸ್ಥಿತಮಚ್ಯುತಮ್’ ಎಂದು ಹೇಳಿದ್ದಾರೆ.
‘ದಿನೇSಕ್ಷಯಾನ್ನಮ್’- ಎಂದರೆ ಪ್ರತಿದಿನವೂ ಅಕ್ಷಯವಾದ
ಅನ್ನವನ್ನು ಕೊಡುವ ಪಾತ್ರೆ ಎಂದರ್ಥ. ಅಕ್ಷಯಪಾತ್ರೆ ಕುರಿತಾಗಿ ಒಂದು ಕಥೆ ಪ್ರಚಲಿತದಲ್ಲಿದೆ. ಕೃಷ್ಣ
ಬಂದಾಗ ಪಾಂಡವರಲ್ಲಿ ಊಟವನ್ನು ನೀಡಲು ಅನ್ನವಿರಲಿಲ್ಲ, ಆದರೆ ಪಾತ್ರೆಯಲ್ಲಿ ಒಂದು ಅನ್ನದ ಅಗಳು
ಇತ್ತು, ಅದನ್ನು ಕೃಷ್ಣ ತಿಂದ ..ಇತ್ಯಾದಿ. ಇದು ಪ್ರಕ್ಷಿಪ್ತ. ಈ ಕಥೆ ಮೂಲಮಹಾಭಾರತದ
ಕಥೆಯಲ್ಲ. ಇದು ಜಾನಪದ ಕಥೆಗಾರರ ಸೇರ್ಪಡೆ.]
No comments:
Post a Comment