ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 20, 2022

Mahabharata Tatparya Nirnaya Kannada 21: 406-415

ಪ್ರಯಾತಾನನು ತಾನ್ ಕುನ್ತೀ ಪ್ರಯಯೌ ಪುತ್ರಗೃದ್ಧಿನೀ ।

ರೋರುದ್ಯಮಾನಾಂ ವಿದುರಃ ಸ್ಥಾಪಯಾಮಾಸ ತಾಂ ಗೃಹೇ ।

ಪ್ರಣಮ್ಯ ತಾಂ ಯಯುಃ ಪಾರ್ತ್ಥಾಃ ಸಕೃಷ್ಣಾಃ ಶೀಘ್ರಗಾಮಿನಃ                ॥೨೧.೪೦೬॥

 

ಕಾಡಿಗೆ ಹೊರಟಿರುವ ಅವರನ್ನು ಕುಂತಿಯು ಮಕ್ಕಳ ಹಿತವನ್ನು ಬಯಸುತ್ತಾ, ಅನುಸರಿಸಿ ಹೋದಳು. ಗಟ್ಟಿಯಾಗಿ ಅಳುತ್ತಿರುವ ಅವಳನ್ನು ವಿದುರನು ತನ್ನ ಮನೆಯಲ್ಲೇ ನಿಲ್ಲಿಸಿದನು. ಆ ಪಾಂಡವರೆಲ್ಲರೂ ದ್ರೌಪದಿಯಿಂದ ಕೂಡಿ ಕುಂತಿಗೆ ನಮಸ್ಕರಿಸಿ, ಶೀಘ್ರವಾಗಿ ಕಾಡಿನಡೆಗೆ ತೆರಳಿದರು.

 

ಯುಧಿಷ್ಠಿರೋSವಾಗ್ವದನೋ ಯಯೌ ನ ಕ್ರೋಧಚಕ್ಷುಷಾ ।

ದಹೇಯಂ ಕೌರವಾನ್ ಸರ್ವಾನಿತಿ ಕಾರುಣಿಕೋ ನೃಪಃ                        ॥೨೧.೪೦೭॥

 

ಕೃಪೆಯುಳ್ಳ ಯುಧಿಷ್ಠಿರನು ತನ್ನ ಮುನಿದ ಕಣ್ಣಿನಿಂದ ಕೌರವರು ಸುಡಬಾರದು ಎಂದು ತಲೆಯನ್ನು ತಗ್ಗಿಸಿ ತೆರಳಿದನು.

 

ಉದ್ಧೃತ್ಯ ಬಾಹೂ ಪ್ರಯಯೌ ಬಾಹುಷಾಳೀ ವೃಕೋದರಃ ।

ಆಭ್ಯಾಮೇವಾಖಿಲಾಞ್ಛತ್ರೂಞ್ಛಕ್ತೋ ಹನ್ತುಮಹಂ ತ್ವಿತಿ                           ॥೨೧.೪೦೮॥

 

ದಪ್ಪನಾದ ತೋಳ್ಗಳುಳ್ಳ ಭೀಮಸೇನನು ಕೈಗಳನ್ನು ಮೇಲಕ್ಕೆತ್ತಿ, ಇವುಗಳಿಂದಲೇ ಎಲ್ಲಾ ಶತ್ರುಗಳನ್ನು ಕೊಲ್ಲಲು ನಾನು ಶಕ್ತನು ಅನ್ನುವ ಅಭಿಪ್ರಾಯವನ್ನು ತೋರುತ್ತಾ ತೆರಳಿದನು. (ನಾವು ಸೋತಿದ್ದು ಮೋಸದ ಜೂಜಿನಿಂದಲೇ ಹೊರತು ಬಾಹುಬಲದಿಂದ ಅಲ್ಲ ಎನ್ನುವುದನ್ನು ಭೀಮಸೇನ ಹೀಗೆ ತೋರಿಸಿದ)

 

ಅಬದ್ಧಕೇಶಾ ಪ್ರಯಯೌ ದ್ರೌಪದೀ ಸಾ ಸಭಾತಳಾತ್

ಮುಕ್ತಕೇಶಾ ಭವಿಷ್ಯನ್ತಿ ಧಾರ್ತ್ತರಾಷ್ಟ್ರಸ್ತ್ರಿಯಸ್ತ್ವಿತಿ                                   ॥೨೧.೪೦೯॥

 

ದುರ್ಯೋಧನನ ಹೆಣ್ಣುಮಕ್ಕಳು ಜಡೆಯನ್ನು ಬಿಚ್ಚಿ ಅಳುತ್ತಾರೆ ಎಂದು ಅವರ ವೈಧವ್ಯದ  ಅಭಿಪ್ರಾಯಯವನ್ನು ಸೂಚಿಸುತ್ತಾ ದ್ರೌಪದೀದೇವಿಯು ಆ ಸಭೆಯಿಂದ ತನ್ನ ಜಡೆಯನ್ನು ಬಿಚ್ಚಿ ತೆರಳಿದಳು.

[ಅಂದು ಗಂಡನನ್ನು ಕಳೆದುಕೊಂಡವರು ಜಡೆಯನ್ನು ಬಿಚ್ಚುತ್ತಿದ್ದರು. ಅದು ಆಗಿನ ಕಾಲದ  ಸಾಮಾಜಿಕ ಪದ್ಧತಿಯಾಗಿತ್ತು. ಈರೀತಿ ವೈಧವ್ಯದ ಸೂಚನೆಯನ್ನು ದುರ್ಯೋಧನಾದಿಗಳಿಗೆ ಸೂಚಿಸಲು ದ್ರೌಪದಿ ತನ್ನ ಜಡೆಯನ್ನು ಬಿಚ್ಚಿ ಸಭೆಯಿಂದ ನಡೆದಳೇ ವಿನಃ, ೧೩ ವರ್ಷಗಳ ಕಾಲ  ಜಡೆಯನ್ನು ಬಿಚ್ಚಿಕೊಂಡು ದ್ರೌಪದಿ ಇರಲಿಲ್ಲ. ‘ದ್ರೌಪದಿ ಸಿರಿಮುಡಿಯನ್ನು ಬಿಚ್ಚಿಕೊಂಡೇ ಇದ್ದಳು, ಅದನ್ನು ಯುದ್ಧಾನಂತರ ಭೀಮಸೇನ ಹೆಣೆದ, ಇತ್ಯಾದಿ ಕಥೆಗಳು ಭಟ್ಟನಾರಾಯಣನ ಕಲ್ಪನೆ ಹೊರತು ಮೂಲ ಮಹಾಭಾರತದಲ್ಲಿ ಹೇಳಿರುವುದಲ್ಲ]

 

ವರ್ಷನ್ ಪಾಂಸೂನ್ ಯಯೌ ಪಾರ್ತ್ಥ ಇತ್ಥಂ ಶತ್ರುಷು ಸಾಯಕಾನ್ ।

ವರ್ಷಯಾನೀತ್ಯಭಿಪ್ರಾಯಃ ಪರಮಾಸ್ತ್ರವಿದಾಂ ವರಃ                            ॥೨೧.೪೧೦॥

 

ಅಸ್ತ್ರಜ್ಞರಲ್ಲಿ ಶ್ರೇಷ್ಠನಾದ ಅರ್ಜುನನು ಮಣ್ಣನ್ನು ಎರಚುತ್ತಾ ತೆರಳಿದ. ಈ ಪ್ರಕಾರವಾಗಿ ಶತ್ರುಗಳಲ್ಲಿ ಬಾಣಗಳನ್ನು ಯುದ್ಧದಲ್ಲಿ ಸುರಿಸುತ್ತೇನೆ ಎನ್ನುವ ಅಭಿಪ್ರಾಯದಿಂದ ಅವನು ಹೀಗೆ ತೆರಳಿದ.

 

ಯಮಾವವಾಙ್ಮುಖೌ ಯಾತೌ ನಾSವಯೋಃ ಶತ್ರವೋ ಮುಖಮ್ ।

ಪಶ್ಯನ್ತ್ವಸ್ಯಾಮವಸ್ಥಾಯಾಮಿತ್ಯೇವ ಧೃತಚೇತಸೌ                                ॥೨೧.೪೧೧॥

 

ತಮ್ಮ ಮೋರೆಯನ್ನು ಈ ಅವಸ್ಥೆಯಲ್ಲಿ ಶತ್ರುಗಳು ಕಾಣದಿರಲಿ ಎಂದು ನಕುಲ-ಸಹದೇವರು ಮುಖವನ್ನು ಕೆಳಗಡೆ ಮಾಡಿಕೊಂಡು ತೆರಳಿದರು.

 

ಪ್ರೇತಸಂಸ್ಕಾರಸೂಕ್ತಾನಿ ಪಠನ್ ಧೌಮ್ಯೋSಗ್ರತೋ ಯಯೌ ।

ಹತೇಷು ಧಾರ್ತ್ತರಾಷ್ಟ್ರೇಷು ಮಯಾ ಕಾರ್ಯ್ಯಾಃ ಕ್ರಿಯಾ ಇತಿ               ॥೨೧.೪೧೨॥

 

ಪುರೋಹಿತರಾದ ಧೌಮ್ಯರು ಪ್ರೇತಸಂಸ್ಕಾರ ಸೂಕ್ತಗಳನ್ನು ಹೇಳುತ್ತಾ, ಎಲ್ಲರಿಗಿಂತ ಮುಂದೆ ಸಾಗಿದರು. ಈ ಧೃತರಾಷ್ಟ್ರನ ಮಕ್ಕಳೆಲ್ಲರಿಗೂ ಮುಂದೆ ಪ್ರೇತಸಂಸ್ಕಾರಕ್ಕೆ ನಾನೇ ಪೌರೋಹಿತ್ಯ ಮಾಡಬೇಕು – ಅನ್ನುವ ಅಭಿಪ್ರಾಯದಲ್ಲಿ ಅವರು ಆರೀತಿ ಮಾಡಿದರು.

 

ತಾನಥಾನುಯಯುಃ ಸೂತಾ ರಥೈಃ ಪರಿಚತುರ್ದ್ದಶೈಃ ।

ಸೂದಾಃ ಪೌರೋಗವಾಶ್ಚೈವ ಭೃತ್ಯಾ ಯೇ ತ್ವಾಪ್ತಕಾರಿಣಃ                     ॥೨೧.೪೧೩॥

 

ಕೆಲವು ಸೂತರು ಮತ್ತು ಪಾಂಡವರ ಅತ್ಯಂತ ಹತ್ತಿರದ ಸೇವಕರು ಸರಿ ಸುಮಾರು ಹದಿನಾಲ್ಕು ರಥಗಳಿಂದ ಅವರನ್ನು ಅನುಸರಿಸಿದರು. ಅವರಲ್ಲಿ ಮುಖ್ಯರಾದವರು ಅಡಿಗೆ ಮಾಡುವವರು, ಬಟ್ಟೆ ಮೊದಲಾದವುಗಳನ್ನು ನೋಡಿಕೊಳ್ಳುವ ಭೃತ್ಯರು, ಅತ್ಯಂತ ಆತ್ಮೀಯ ಸೇವಕರು.

 

ತತಸ್ತೇ ಜಾಹ್ನವೀತೀರೇ ವನೇ ವಟಮುಪಾಶ್ರಿತಾಃ ।

ನ್ಯಷೀದನ್ನಾಗತಾನ್ ದೃಷ್ಟ್ವಾ ಸಮಸ್ತಾನ್ ಪುರವಾಸಿನಃ                       ॥೨೧.೪೧೪॥

 

ತದನಂತರ ಅವರು ಗಂಗಾನದಿ ತೀರದಲ್ಲಿ ಒಂದು ದೊಡ್ಡ ಆಲದ ಮರದ ಬಳಿಯಲ್ಲಿ ಕುಳಿತುಕೊಂಡರು. ಆಗ ಎಲ್ಲಾ ಪಟ್ಟಣವಾಸಿಗಳು ಅಲ್ಲಿಗೆ ಬಂದರು.

 

ತತಸ್ತು ತೇ ಸರ್ವಜಗನ್ನಿವಾಸಂ ನಾರಾಯಣಂ ನಿತ್ಯಸಮಸ್ತಸದ್ಗುಣಮ್

ಸ್ವಯಮ್ಭುಶರ್ವಾದಿಭಿರರ್ಚ್ಚಿತಂ ಸದಾ ಭಕ್ತ್ಯಾSಸ್ಮರನ್ ಭಕ್ತಭವಾಪಹಂ ಪ್ರಭುಮ್ ॥೨೧.೪೧೫॥

 

ತದನಂತರ ಅವರು ಎಲ್ಲಾ ಜಗಕ್ಕೂ ಆಧಾರನಾದ, ಸದ್ಗುಣಗಳಿಂದ ತುಂಬಿರುವ, ಬ್ರಹ್ಮ-ರುದ್ರಾದಿಗಳಿಂದ ಪೂಜಿಸಲ್ಪಡುವ, ಭಕ್ತರ ಸಂಸಾರವನ್ನು ನೀಗಿಸುವ, ಸರ್ವೋತ್ತಮನಾದ ನಾರಾಯಣನನ್ನು ಭಕ್ತಿಯಿಂದ ಸ್ಮರಣೆ ಮಾಡಿದರು.

 

[ಆದಿತಃ ಶ್ಲೋಕಾಃ :  ೨೭೬೬+೪೧೫=೩೧೮೧]

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವವನಪ್ರವೇಶೋ ನಾಮ ಏಕವಿಂಶೋsಧ್ಯಾಯಃ ॥

                                                                       ********* 



No comments:

Post a Comment