ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 19, 2022

Mahabharata Tatparya Nirnaya Kannada 21: 396-405

 

ಗಾನ್ಧಾರೇಣ ಪುನಶ್ಚಾಕ್ಷಹೃದಯಜ್ಞೇನ ಧರ್ಮ್ಮಜಃ ।

ಪರಾಜಿತೋ ವನಂ ಯಾತುಮೈಚ್ಛತ್ ಸಭ್ರಾತೃಕೋ ಯದಾ             ॥೨೧.೩೯೬॥

 

ಮತ್ತೆ ನುರಿತ ಜೂಜುಕೋರನಾದ ಶಕುನಿಯಿಂದ ಧರ್ಮರಾಜನು ಸೋತವನಾಗಿ ತನ್ನ ತಮ್ಮಂದಿರರಿಂದ ಕೂಡಿಕೊಂಡು ಕಾಡಿಗೆ ತೆರಳ ಬಯಸಿದನು.

 

ತದಾ ನನರ್ತ್ತ ಪಾಪಕೃತ್ ಸುಯೋಧನಾನುಜೋ ಹಸನ್ ।

ವದಂಶ್ಚ ಮಾರುತಾತ್ಮಜಂ ಪುನಃಪುನಶ್ಚ ಗೌರಿತಿ                      ॥೨೧.೩೯೭॥

 

ಆಗ ಪಾಪಿಯಾದ ದುಶ್ಯಾಸನನು ನಗುತ್ತಾ ಭೀಮಸೇನನನ್ನು ‘ಅತ್ಯಂತ ಅಶಕ್ತನಾದ ಹಸು ನೀನು’ ಎಂದು ಮತ್ತೆಮತ್ತೆ ಹೇಳುತ್ತಾ ನರ್ತಿಸಿದನು.

 

ಉವಾಚ ಚ ಪುನಃ ಕೃಷ್ಣಾಂ ನೃತ್ಯನ್ನೇವ ಸಭಾತಳೇ ।

ಅಪತಿರ್ಹ್ಯಸಿ ಕಲ್ಯಾಣಿ ಗಚ್ಛ ದುರ್ಯ್ಯೋಧನಾಲಯಮ್               ॥೨೧.೩೯೮॥

 

ಮತ್ತೆ  ಕುಣಿಯುತ್ತಲೇ ದ್ರೌಪದಿಯನ್ನು ಕುರಿತು ಹೇಳಿದ: ‘ಓ ಚಲುವೆಯೇ, ಗಂಡಂದಿರಿದ್ದೂ ಪ್ರಯೋಜನವಿಲ್ಲ. ಅದರಿಂದ ಗಂಡಂದಿರಿಲ್ಲದವಳಾಗಿದ್ದೀಯ. ನಿನಗೆ ಒಳ್ಳೆ ಗಂಡ ಬೇಕಿದ್ದರೆ ದುರ್ಯೋಧನನ ಮನೆಗೆ ನಡೆ.

 

ಏತೇSಖಿಲಾಃ ಷಣ್ಢತಿಲಾಸ್ತಮೋsನ್ಧಮಾಪ್ತಾ ನಚೈಷಾಂ ಪುನರುತ್ಥಿತಿಃ ಸ್ಯಾತ್ ।

ಇತಿ ಬ್ರುವಾಣೋSನುಚಕಾರ ಭೀಮಂ ತದಾSಹಸನ್ ಧಾರ್ತ್ತರಾಷ್ಟ್ರಾಶ್ಚ ಸರ್ವೇ ॥೨೧.೩೯೯॥

 

ಇವರೆಲ್ಲರೂ ಕೂಡಾ ಎಣ್ಣಿಯನ್ನು ಕಳೆದುಕೊಂಡ ಜೊಳ್ಳು ಎಳ್ಳಿನ ಕಾಳಿನಂತಿರುವವರು(ಗಂಡಸರೇ ಅಲ್ಲ ಎನ್ನುವ ಭಾವ). ಇವರು ಅನ್ಧಂತಮಸ್ಸನ್ನು ಹೊಂದಿದ್ದಾರೆ. ಅದರಿಂದ ಮತ್ತೆ ಮೇಲೆ ಬರುವಂತಿಲ್ಲ’. ಈರೀತಿಯಾಗಿ ಹೇಳುತ್ತಾ ದುಶ್ಯಾಸನನು ಭೀಮನ ನಡಿಗೆಯನ್ನು ವಕ್ರವಕ್ರವಾಗಿ ಅಣಕಿಸಿದ. ಆಗ ಎಲ್ಲಾ ದುರ್ಯೋಧನಾದಿಗಳು ಗಟ್ಟಿಯಾಗಿ ನಕ್ಕರು.

 

ತದಾSಕರೋದ್ ಭೀಮಸೇನಃ ಪ್ರತಿಜ್ಞಾಂ ಹನ್ತಾಸ್ಮಿ ವೋ ನಿಖಿಲಾನ್  ಸಙ್ಗರೇSಹಮ್ ।

ಇತೀರಿತೇ ಶರಣಂ ದ್ರೋಣಮೇವ ಜಗ್ಮುಃ ಸಮಸ್ತಾ ಧೃತರಾಷ್ಟ್ರಪುತ್ರಾಃ             ॥೨೧.೪೦೦॥

 

ಆಗ ಭೀಮಸೇನನು ಇನ್ನೊಂದು ಪ್ರತಿಜ್ಞೆ ಮಾಡಿದ: ‘ಯುದ್ಧದಲ್ಲಿ ನಾನು ನಿಮ್ಮೆಲ್ಲರನ್ನೂ ಕೂಡಾ ಕೊಲ್ಲುತ್ತೇನೆ’ ಎಂದು. ಈರೀತಿಯಾಗಿ ಅವನು ಹೇಳುತ್ತಿರಲು, ಎಲ್ಲಾ ಧೃತರಾಷ್ಟ್ರ ಪುತ್ರರು ದ್ರೋಣನನ್ನೇ ಶರಣು ಹೋದರು.

 

[ಏಕೆ ದ್ರೋಣರನ್ನು ರಕ್ಷಕನನ್ನಾಗಿ ಹೊಂದಿದರು ಎಂದರೆ:]

 

ಯತ್ರ ದ್ರೋಣಸ್ತತ್ರ ಪುತ್ರಸ್ತತ್ರ ಭೀಷ್ಮಃ ಕೃಪಸ್ತಥಾ ।

ನಚಾತ್ಯೇತಿ ಗುರೂನ್ ಭೀಮ ಇತಿ ತಂ ಶರಣಂ ಯಯುಃ             ॥೨೧.೪೦೧॥

 

ಎಲ್ಲಿ ದ್ರೋಣರಿರುವರೋ ಅಲ್ಲಿ ದ್ರೋಣಪುತ್ರ ಅಶ್ವತ್ಥಾಮ. ಅವರಿಬ್ಬರೂ ಎಲ್ಲಿ ಇರುತ್ತಾರೋ ಅಲ್ಲಿ  ಭೀಷ್ಮಾಚಾರ್ಯರು ಮತ್ತು ಕೃಪಾಚಾರ್ಯರೂ ಇರುತ್ತಾರೆ. ಭೀಮಸೇನ ಹಿರಿಯರನ್ನು ಮೀರುವುದಿಲ್ಲ. ಈ ಅಭಿಪ್ರಾಯದಿಂದಲೇ ಅವರೆಲ್ಲರೂ ದ್ರೋಣಾಚಾರ್ಯರನ್ನು ಶರಣು ಹೊಂದಿದರು.

 

ಅಬ್ರವೀದ್ ಧಾರ್ತ್ತರಾಷ್ಟ್ರಾಂಶ್ಚ ದ್ರೋಣೋ ವಿಪ್ರೋSಪಿ ಸನ್ನಹಮ್ ।

ಸಪುತ್ರಃ ಸಕೃಪಃ ಶಸ್ತ್ರಂ ಗ್ರಹೀಷ್ಯೇ ಭವತಾಂ ಕೃತೇ                    ॥೨೧.೪೦೨॥

 

ಆಗ ದ್ರೋಣಾಚಾರ್ಯರು : ನಾನು ಬ್ರಾಹ್ಮಣನಾದರೂ ಕೂಡಾ ನನ್ನ ಮಗನಿಂದ ಕೂಡಿಕೊಂಡು, ಕೃಪಾಚಾರ್ಯರಿಂದ ಕೂಡಿಕೊಂಡು ನಿಮಗಾಗಿ ಆಯುಧವನ್ನು ಹಿಡಿಯುತ್ತೇನೆ.

 

ರಕ್ಷಣೇ ಭವತಾಂ ಚೈವ ಕುರ್ಯ್ಯಾಂ ಯತ್ನಂ ಸ್ವಶಕ್ತಿತಃ ।

ನತು ಭೀಮಾದ್ ರಕ್ಷಿತುಂ ವಃ ಶಕ್ತಃ ಸತ್ಯಂ ಬ್ರವೀಮ್ಯಹಮ್             ॥೨೧.೪೦೩॥

 

ನಿಮ್ಮ ರಕ್ಷಣೆಯಲ್ಲಿ ನನ್ನ ಶಕ್ತಿಗನುಗುಣವಾಗಿ ಪ್ರಯತ್ನವನ್ನು ಮಾಡುತ್ತೇನೆ. ಭೀಮನಿಂದ ನಿಮ್ಮನ್ನು ರಕ್ಷಿಸಲು ನನಗೆ ಸಾಧ್ಯವಿಲ್ಲ, ಇದು ನನ್ನಿ(ಸತ್ಯ).

 

ತತೋ ಯಯುಃ ಪಾಣ್ಡವಾಸ್ತೇ ಸಭಾಯಾ ವನಾಯ ಕೃಷ್ಣಾಸಹಿತಾಃ ಸುಶೂರಾಃ ।

ಗತ್ಯಾSನುಚಕ್ರೇ ಯುವಸಿಂಹಖೇಲಗತಿಂ ಭೀಮಂ ಧಾರ್ತ್ತರಾಷ್ಟ್ರೋSಪಹಸ್ಯ             ॥೨೧.೪೦೪॥

 

ತದನಂತರ ಆ ಪಾಂಡವರು ದ್ರೌಪದಿಯಿಂದ ಒಡಗೂಡಿ ಸಭೆಯಿಂದ ಹೊರ ಸಾಗಿದರು. ದುರ್ಯೋಧನನು ಅವರನ್ನು ಅಪಹಾಸ್ಯ ಮಾಡುತ್ತಾ, ಸಿಂಹದಂತೆ ಗಂಭೀರ ನಡೆಯ ಭೀಮಸೇನನನ್ನು ನಡೆದು ಅಣಕಿಸಿದನು.

 

ದೃಷ್ಟ್ವಾ ಸಭಾಯಾ ಅರ್ದ್ಧನಿಷ್ಕ್ರಾನ್ತದೇಹೋ ವ್ಯಾವೃತ್ಯ ಭೀಮಃ ಪ್ರಾಹ ಸಂರಕ್ತನೇತ್ರಃ ।

ಊರುಂ ತವಾನ್ಯಂ ಚ ರಣೇ ವಿಭೇತ್ಸ್ಯ ಇತ್ಯುಕ್ತ್ವಾSಸೌ ನಿರ್ಗ್ಗತೋSಸತ್ಸಭಾಯಾಃ ॥೨೧.೪೦೫॥

 

ಸಭೆಯಿಂದ ಹೊರಟವನಾಗಿದ್ದ ಭೀಮಸೇನ ತಿರುಗಿ ನೋಡಿ,  ಕೆಂಪಡರಿದ ಕಣ್ಗಳುಳ್ಳವನಾಗಿ ಹೇಳಿದ: ‘ನಿನ್ನ ಇನ್ನೊಂದು ತೊಡೆಯನ್ನೂ ಕೂಡಾ ಯುದ್ಧದಲ್ಲಿ ಮುರಿಯುತ್ತೇನೆ’ ಎಂದು. ಹೀಗೆ ಹೇಳಿ ಆ ಅತ್ಯಂತ ಕೆಟ್ಟ ಸಭೆಯಿಂದ ಹೊರ ನಡೆದ.

No comments:

Post a Comment