ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 24, 2022

Mahabharata Tatparya Nirnaya Kannada 22: 89-95

 

ತಸ್ಮಾತ್ ಕಾರ್ಯ್ಯಂ ತೇನ  ಕ್ಲ್ ಪ್ತಂ ಸ್ವಕರ್ಮ್ಮ ತತ್ ಪೂಜಾರ್ತ್ಥಂ ತೇನ ತತ್ಪ್ರಾಪ್ತಿರೇವ ।

ಅತೋSನ್ಯಥಾ ನಿರಯಃ ಸರ್ವಥಾ ಸ್ಯಾತ್ ಸ್ವಕರ್ಮ್ಮ ವಿಪ್ರಸ್ಯ ಜಪೋಪದೇಶೌ ॥೨೨.೮೯॥

 

ವಿಷ್ಣೋರ್ಮ್ಮುಖಾದ್ ವಿಪ್ರಜಾತಿಃ ಪ್ರವೃತ್ತಾ ಮುಖೋತ್ಥಿತಂ ಕರ್ಮ್ಮ ತೇನಾಸ್ಯ ಸೋSದಾತ್ ।

ಬಾಹ್ವೋರ್ಜ್ಜಾತಃ ಕ್ಷತ್ರಿಯಸ್ತೇನ ಬಾಹ್ವೋಃ ಕರ್ಮ್ಮಾಸ್ಯ ಪಾಪಪ್ರತಿವಾರಣಂ ಹಿ ॥೨೨.೯೦॥

 

ಪರಮಾತ್ಮ  ಸ್ವತಂತ್ರನಾಗಿರುವುದರಿಂದ ಜೀವಯೋಗ್ಯತೆ ಇದ್ದರೂ ಕೂಡಾ, ಯೋಗ್ಯತೆಗೆ ಪೂರಕವಾಗಿ ಪ್ರಯತ್ನ  ಇರಬೇಕಾಗಿರುವುದರಿಂದ, ‘ಸ್ವಕರ್ಮವನ್ನು ಪರಮಾತ್ಮನ ಪ್ರೀತ್ಯರ್ಥ ಅವರವರು ಮಾಡಲೇಬೇಕು’.  ಕರ್ಮವನ್ನು ದೇವರಪೂಜೆ ಎಂದು ಮಾಡುವುದರಿಂದ ಭಗವಂತನನ್ನು ಹೊಂದುವುದೇ(ಮೋಕ್ಷ ಪಡೆಯುವುದೇ) ಪ್ರಯೋಜನ. ಹೀಗೆ ಮಾಡದೇ ಹೋದರೆ ನರಕ ಕಟ್ಟಿಟ್ಟ ಬುತ್ತಿ.

ಬ್ರಾಹ್ಮಣನಿಗೆ ಸ್ವಕರ್ಮ ಜಪ(ಅಧ್ಯಯನ) ಮತ್ತು ಉಪದೇಶ(ಅಧ್ಯಾಪನ). ವಿಷ್ಣುವಿನ ಮುಖದಿಂದ ಬ್ರಾಹ್ಮಣ ವರ್ಣ ಹುಟ್ಟಿತು. ಆಕಾರಣದಿಂದ ಮುಖದಿಂದ ಮಾಡಬಲ್ಲ ಕರ್ಮವನ್ನು ಬ್ರಾಹ್ಮಣನಿಗಾಗಿ ಭಗವಂತ ಕೊಟ್ಟ. ಕ್ಷತ್ರಿಯನು ಪರಮಾತ್ಮನ ತೊಳ್ಗಳಿಂದ ಹುಟ್ಟಿದ. ಅವನ ಕರ್ಮವು ಪಾಪವನ್ನು(ಪಾಪಿಷ್ಠರನ್ನು) ತಡೆಯುವಿಕೆ.

 

ಪ್ರವರ್ತ್ತನಂ ಸಾಧುಧರ್ಮ್ಮಸ್ಯ ಚೈವ ಮುಖಸ್ಯ ಬಾಹ್ವೋಶ್ಚಾತಿಸಾಮೀಪ್ಯತೋSಸ್ಯ ।

ಜಪೋಪದೇಶೌ ಕ್ಷತ್ರಿಯಸ್ಯಾಪಿ ವಿಷ್ಣುಶ್ಚಕ್ರೇ ಧರ್ಮ್ಮೌ ಯಜ್ಞಕರ್ಮ್ಮಾಪಿ ವಿಪ್ರೇ ॥೨೨.೯೧॥

 

ಧರ್ಮದ ಪ್ರವರ್ತನೆ – ಕ್ಷತ್ರಿಯರ ಕರ್ತವ್ಯ. ಮುಖ ಮತ್ತು ಬಾಹು ಸಮೀಪವಾಗಿವೆ, ಅದರಿಂದಾಗಿ ಭಗವಂತ ಕ್ಷತ್ರಿಯರಿಗೂ ಕೂಡಾ ಜಪ ಹಾಗೂ ಉಪದೇಶಗಳನ್ನು ಧರ್ಮವನ್ನಾಗಿ ಮಾಡಿದನು. ಯಜ್ಞಕರ್ಮವನ್ನು ಬ್ರಾಹ್ಮಣರಿಗೆ ಧರ್ಮವಾಗಿ ಭಗವಂತ ಕಲ್ಪಿಸಿದ.

 

ವೈಶ್ಯೋ ಯಸ್ಮಾದೂರುಜಸ್ತೇನ ತಸ್ಯ ಪ್ರಜಾವೃದ್ಧಿಸ್ತಜ್ಜಕರ್ಮ್ಮೈವ ಧರ್ಮ್ಮಃ ।

ತತ್ಸಾದೃಶ್ಯಾತ್ ಸ್ಥಾವರಾಣಾಂ ಚ ವೃದ್ಧಿಂ ಕರೋರೂರ್ವೋಃ ಸನ್ನಿಕೃಷ್ಟತ್ವಹೇತೋಃ ॥೨೨.೯೨॥

 

ವಾರ್ತ್ತಾತ್ಮಕಂ ಕರ್ಮ್ಮ ಧರ್ಮ್ಮಂ ಚಕಾರ ವಿಷ್ಣುಸ್ತಸ್ಯೈವಾಙ್ಘ್ರಿಜಃ ಶೂದ್ರ ಉಕ್ತಃ ।

ಗತಿಪ್ರಧಾನಂ ಕರ್ಮ್ಮ ಶುಶ್ರೂಷಣಾಖ್ಯಂ ಸಾದೃಶ್ಯತೋ ಹಸ್ತಪದೋಸ್ತಥೈವ ॥೨೨.೯೩॥

 

ಹಸ್ತೋದ್ಭವಂ ಕರ್ಮ್ಮ ತಸ್ಯಾಪಿ ಧರ್ಮ್ಮಃ ಸನ್ತಾನವೃದ್ಧಿಶ್ಚ ಸಮೀಪಗತ್ವಾತ್ ।  

ಭುಜಾವುರೋ ಹೃದಯಂ ಯದ್ ಬಲಸ್ಯ ಜ್ಞಾನಸ್ಯ ಚ ಸ್ಥಾನಮತೋ ನೃಪಾಣಾಮ್ ॥೨೨.೯೪॥

 

ಬಲಂ ಜ್ಞಾನಂ ಚೋಭಯಂ ಧರ್ಮ್ಮ ಉಕ್ತಃ ಪಾಣೌ ಕೃತೀನಾಂ ಕೌಶಲಂ ಕೇವಲಂ ಹಿ ।

ತಸ್ಮಾತ್ ಪಾಣ್ಯೋರೂರುಪದೋರುಪಸ್ಥಿತೇರ್ವಿಟ್ಛೂದ್ರಕೌ ಕರ್ಮ್ಮಣಾಂ ಕೌಶಲೇತೌ ॥೨೨.೯೫॥

 

ವೈಶ್ಯರು ಯಾವ ಕಾರಣದಿಂದ ಭಗವಂತನ ತೊಡೆಯಿಂದ ಹುಟ್ಟಿರುವರೋ, ಅದರಿಂದ ಅವರಿಗೆ ಪ್ರಜೆಗಳ ಅಭಿವೃದ್ಧಿಯೇ ಧರ್ಮವಾಗಿ ಹೇಳಲ್ಪಟ್ಟಿದೆ. ಗಿಡ, ಮರ ಇವುಗಳ ವೃದ್ಧಿಯನ್ನು ಭಗವಂತ ವೈಶ್ಯರ ಧರ್ಮವನ್ನಾಗಿರಿಸಿದ. ಕೈ ಮತ್ತು ತೊಡೆಗಳ ಹತ್ತಿರವಿರುವುದರಿಂದ ನಾರಾಯಣನು ವೈಶ್ಯನಿಗೆ ವ್ಯಾಪಾರ-ವಹಿವಾಟು ಆಯಾತ-ನಿರ್ಯಾತ [ಪ್ರತಿಯೊಬ್ಬರ ಜೀವಿಕೆಗೆ(ವೃತ್ತಿಗೆ) ಅನುಕೂಲವಾದ ಕರ್ಮ-ವಾರ್ತಾ] ಇವುಗಳನ್ನು ಧರ್ಮವನ್ನಾಗಿ ಮಾಡಿದ. ಶೂದ್ರನು ಪರಮಾತ್ಮನ ಕಾಲಿನಿಂದ ಹುಟ್ಟಿದ ಎಂದು ಹೇಳುತ್ತಾರೆ. ಅವನಿಗೆ ಓಡಾಡುವುದೇ ಪ್ರಧಾನ. ನಡಿಗೆಯೇ ಪ್ರಧಾನವಾಗಿರುವ ಕರ್ಮ ಶುಶ್ರೂಷಣ(service). ಅವನೂ ಕೂಡಾ ಹಸ್ತದಿಂದ ಉಂಟಾಗುವ ಕರ್ಮವನ್ನು ಮಾಡಬೇಕು. ಸಂತಾನ ವೃದ್ಧಿಯೂ ಕೂಡಾ  ಶೂದ್ರನ ಮುಖ್ಯ ಕರ್ತವ್ಯ.

ಭುಜ, ತೊಡೆ, ಹೃದಯ ಇದು ಬಲ ಹಾಗೂ ಜ್ಞಾನ ಎಲ್ಲವುದಕ್ಕೂ ಕಾರಣವಾಗಿದೆ. ಕ್ಷತ್ರಿಯರು ಭುಜದ ಸ್ಥಾನದಲ್ಲಿರುವುದರಿಂದಾಗಿ ನಿರಂತರ ರಕ್ಷಣೆ ಮಾಡುವುದು ಅವರ ಕರ್ತವ್ಯ. ತೋಳುಗಳ ನಡುವೆ ಹೃದಯವಿದೆ. ಇದು ಬಲಕ್ಕೂ ಆಸರೆ, ಜ್ಞಾನಕ್ಕೂ ಆಸರೆ. ಹೀಗಾಗಿ ಬಲ ಹಾಗೂ ಜ್ಞಾನ ವಿಶೇಷತಃ ಕ್ಷತ್ರಿಯರಲ್ಲಿ ಇರಬೇಕಾಗಿರುವುದು. (ಎಲ್ಲಾ ಇಂದ್ರಿಯಗಳ ಸಂವೇದನೆ ಆಗುವುದು ಹೃದಯದಲ್ಲಷ್ಟೇ). ಹೀಗಾಗಿ ಬಲ ಹಾಗೂ ಜ್ಞಾನ ಎರಡೂ ಕ್ಷತ್ರಿಯನ ಧರ್ಮವಾಗಿದೆ. ಜಾಣ್ಮೆಯ ಕೆಲಸ ಕೈಯದ್ದು. ಕೈಗಳಿಗೂ, ತೊಡೆ ಮತ್ತು ಕಾಲುಗಳಿಗೂ ಸಾಮಿಪ್ಯವಿರುವುದರಿಂದ ವೈಶ್ಯ ಹಾಗೂ ಶೂದ್ರರನ್ನು  ಹಸ್ತಯೋಗ್ಯವಾದ ಕರ್ಮದಲ್ಲಿ ನಿಪುಣರನ್ನಾಗಿ ಭಗವಂತ ಮಾಡಿದ.

Saturday, May 14, 2022

Mahabharata Tatparya Nirnaya Kannada 22: 83-88

 

ಅಜ್ಞಃ ಪ್ರತ್ಯಕ್ಷಂ ತ್ವಪಹಾಯೈವ ದೈವಂ ಮತ್ವಾ ಕರ್ತ್ತೃ ಸ್ವಾತ್ಮಕರ್ಮ್ಮ ಪ್ರಜಹ್ಯಾತ್ ।

ವಿದ್ವಾನ್ ಜೀವಂ ವಿಷ್ಣುವಶಂ ವಿದಿತ್ವಾ ಕರೋತಿ ಕರ್ತ್ತವ್ಯಮಜಸ್ರಮೇವ ॥೨೨.೮೩॥

 

ಒಬ್ಬ ಮೂಢನು ತನ್ನ ಅನುಭವವನ್ನು ಬದಿಗಿಟ್ಟು ದೈವವನ್ನೇ ಕರ್ತೃ ಎಂದು ತಿಳಿದು ತಾನು ಮಾಡಬೇಕಾದ ಕರ್ತವ್ಯವನ್ನು ಬಿಡುತ್ತಾನೆ. ಆದರೆ ಜ್ಞಾನಿಯೊಬ್ಬನು ಜೀವನು ವಿಷ್ಣುವಶನಾಗಿದ್ದಾನೆ ಎಂದು ತಾನು ಮಾಡಬೇಕಾದ ಕರ್ತವ್ಯವನ್ನು ನಿರಂತರವಾಗಿ ಮಾಡುತ್ತಾನೆ.  

 

ಸ್ವಭಾವಾಖ್ಯಾ ಯೋಗ್ಯತಾ ಯಾ ಹಠಾಖ್ಯಾ ಯಾSನಾದಿಸಿದ್ಧಾ ಸರ್ವಜೀವೇಷು ನಿತ್ಯಾ ।

ಸಾ ಕಾರಣಂ ತತ್ ಪ್ರಥಮಂ ತು ದ್ವಿತೀಯಮನಾದಿ ಕರ್ಮ್ಮೈವ ತಥಾ ತೃತೀಯಃ ॥೨೨.೮೪॥

 

ಜೀವಪ್ರಯತ್ನಃ ಪೌರುಷಾಖ್ಯಸ್ತದೇತತ್ ತ್ರಯಂ ವಿಷ್ಣೋರ್ವಶಗಂ ಸರ್ವದೈವ ।

ಸ ಕಸ್ಯಚಿನ್ನ ವಶೇ ವಾಸುದೇವಃ ಪರಾತ್ ಪರಃ ಪರಮೋSಸೌ ಸ್ವತನ್ತ್ರಃ             ॥೨೨.೮೫॥

 

ಸ್ವಭಾವವನ್ನು ‘ಯೋಗ್ಯತಾ ಎಂದು ಕರೆಯುತ್ತಾರೆ. ಅದು ‘ಹಠ’ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಅದು ಅನಾದಿಕಾಲದಿಂದ ಸಿದ್ಧವಾಗಿದೆ ಮತ್ತು  ಎಲ್ಲಾ ಜೀವರಲ್ಲಿ ನಿತ್ಯವಾಗಿದೆ. ಅದು ಮೊದಲ ಕಾರಣ. ಎರಡನೆಯದ್ದು ಅನಾದಿಕರ್ಮ. [ಒಬ್ಬ ಪುರುಷನ ಬೆಳವಣಿಗೆಯಲ್ಲಿ ಹಠ(ಜೀವಯೋಗ್ಯತೆ/ಸ್ವಭಾವ) ಎನ್ನುವುದು ಮೊದಲನೇ ಕಾರಣ. ಎರಡನೆಯದು ಅನಾದಿಕಾಲದಿಂದ ನಡೆದುಕೊಂಡು ಬಂದ ಮಾನಸಿಕ ಕರ್ಮ. ಈ ಕರ್ಮದಿಂದ  ಜೀವನಿಗೆ ಜನ್ಮ ಬರುತ್ತದೆ. ಆ ಜನ್ಮದಲ್ಲಿ ಮಾಡಿದ ಪುಣ್ಯ-ಪಾಪಗಳು ಇನ್ನೊಂದು ಜನ್ಮಕ್ಕೆ ಕಾರಣವಾಗುತ್ತಾ ಹೋಗುತ್ತಿರುತ್ತದೆ] ಮೂರನೆಯದು ಜೀವರ ಪ್ರಯತ್ನ. ಅದನ್ನು ಪೌರುಷ(ಪುರುಷ ಪ್ರಯತ್ನ) ಎಂದು ಕರೆಯುತ್ತಾರೆ. ಇವು ಮೂರೂ ಕೂಡಾ (ಜೀವಸ್ವಭಾವ,  ಅನಾದಿಕರ್ಮ ಮತ್ತು ಜೀವ ಪ್ರಯತ್ನ) ವಿಷ್ಣುವಿನ ವಶದಲ್ಲಿದೆ ಮತ್ತು ಯಾವಾಗಲೂ ಇರುತ್ತದೆ. ಆದರೆ ಪರಮಾತ್ಮನು ಯಾರ ವಶದಲ್ಲಿಯೂ ಇಲ್ಲ.

[ಈಕುರಿತು ಮಹಾಭಾರತದಲ್ಲಿಯೂ ವಿವರಣೆ ಕಾಣಸಿಗುತ್ತದೆ: ‘ಯಶ್ಚ ದಿಷ್ಟಪರೋ ಲೋಕೇ ಯಶ್ಚಾಪಿ ಹಠವಾದಿಕಃ । ಉಭಾವಪಿ ಶಠಾವೇತೌ ಕರ್ಮಬುದ್ಧಿಃ ಪ್ರಶಸ್ಯತೇ’ (ವನಪರ್ವ ೩೨-೧೩). ಯಾರು ದೈವಮಾತ್ರ ಕ್ರಿಯೆಯನ್ನು ಮಾಡುತ್ತದೆ ಎಂದು ನಂಬಿಕೊಂಡಿರುತ್ತಾನೋ, ಯಾರು ಜೀವ ಮಾತ್ರ ಕರ್ತೃ ಎಂದು ತಿಳಿದಿರುತ್ತಾನೋ, ಅವರಿಬ್ಬರೂ ಕೂಡಾ ಮೂರ್ಖರು.  ಇವರಿಬ್ಬರ ನಡುವೆ ಯಾರಿಗೆ ತಾನೂ ಕರ್ತವ್ಯ ನಿರ್ವಹಿಸಬೇಕು ಎನ್ನುವ ಬುದ್ಧಿಯಿದೆ, ಅವನು ಒಳ್ಳೆಯ ಗತಿಯನ್ನು ಪಡೆಯುತ್ತಾನೆ. ‘ಅಕಸ್ಮಾದಿಹ  ಯಃ  ಕಶ್ಚಿದರ್ಥಂ ಪ್ರಾಪ್ನೋತಿ ಪೂರುಷಃ । ತಂ ಹಠೇನೇತಿ ಮನ್ಯನ್ತೇ ಸ ಹಿ ಯತ್ನೋ ನ  ಕಸ್ಯಚಿತ್ (೧೬), ‘ಸರ್ವಮೇವ ಹಠೇನೈಕೇ ದೈವೇನೈಕೇ ವದನ್ತ್ಯುತ ।  ಪುಂಸಃ ಪ್ರಯತ್ನಜಂ ಕೇಚಿದ್ ದೈವಮೇವ ವಿಶಿಷ್ಯತೇ’ (೩೨). ಕೆಲವರು ಹಠದಿಂದಲೇ ಎಲ್ಲವೂ ಸಿಗುವುದು ಎಂದು ಹೇಳುತ್ತಾರೆ(ಪುರುಷ ಪ್ರಯತ್ನದಿಂದ ಏನುಬೇಕಾದರೂ ಆಗುತ್ತದೆ ಎಂದು ತಿಳಿಯುತ್ತಾರೆ). ಕೆಲವರೂ ಎಲ್ಲವೂ ಕೇವಲ ದೇವರು ಮಾಡುವುದು ಎಂದು ಹೇಳುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿರುವುದು ದೈವವೇ. ‘ಏವಂ  ಹಠಾಚ್ಚ ದೈವಾಚ್ಚ ಸ್ವಭಾವಾತ್ ಕರ್ಮಣಸ್ತಥಾ । ಯಾನಿ ಪ್ರಾಪ್ನೋತಿ ಪುರುಷಸ್ತತ್ಫಲಂ ಪೂರ್ವಕರ್ಮಣಾಮ್’(೨೦) ದೈವ, ಹಠ, ಕರ್ಮ -ಇವು ಮೂರೂ ವಿಷ್ಣು ವಶ. ಒಂದು ಜೀವನ ಸಂಪನ್ನವಾಗಬೇಕಾದರೆ ಅಲ್ಲಿ ಈ ಮೂರೂ ಇರುತ್ತದೆ.]

ಜೀವನ ಪ್ರಯತ್ನವನ್ನು ಪೌರುಷ ಎಂದು ಕರೆಯುತ್ತಾರೆ. ಜೀವ ಯೋಗ್ಯತೆಯನ್ನು ಹಠ ಎಂದು ಕರೆಯುತ್ತಾರೆ. ಮನಸ್ಸು ಅನಾಧಿ. ಈ ಅನಾಧಿಯಾಗಿರುವ ಮನಸ್ಸಿನ ಚರ್ಯೆಗಳೂ ಕೂಡಾ ಅನಾಧಿಯಾಗಿರುತ್ತವೆ. ಅನಾಧಿಯಾದ ಮನಸ್ಸು, ಜೀವಪ್ರಯತ್ನ ಎಂದು ಕರೆಸಿಕೊಳ್ಳುವ ಪೌರುಷ ಮತ್ತು ಜೀವಯೋಗ್ಯತೆ(ಹಠ) ಈ ಮೂರೂ ಕೂಡಾ ನಾರಾಯಣನಿಗೆ ಯಾವಾಗಲೂ ವಶವಾಗಿವೆ.(ದೇವರು ಇದನ್ನು ಸೃಷ್ಟಿ ಮಾಡುವುದಿಲ್ಲ, ಆದರೆ ತನ್ನ ಅಧೀನದಲ್ಲಿಟ್ಟುಕೊಂಡಿರುತ್ತಾನೆ. ಅವನು ಅದನ್ನು ಬದಲಿಸುವುದೂ ಇಲ್ಲ). ಅಂತಹ  ನಾರಾಯಣನು ಯಾರ ವಶದಲ್ಲಿಯೂ ಇಲ್ಲ. ಅವನು ಉತ್ಕೃಷ್ಟರಿಗಿಂತ ಉತ್ಕೃಷ್ಟ. ಎಲ್ಲರಿಗೂ ಮಿಗಿಲು. ಅವನು ತನ್ನ ಅಧೀನದಲ್ಲಿ ತಾನಿರುತ್ತಾನೆ.

 

ಹಠಶ್ಚಾಸೌ ತಾರತಮ್ಯಸ್ಥಿತೋ ಹಿ ಬ್ರಹ್ಮಾಣಮಾರಭ್ಯ ಕಲಿಶ್ಚ ಯಾವತ್ ।

ಹಠಾಚ್ಚ ಕರ್ಮ್ಮಾಣಿ ಭವನ್ತಿ ಕರ್ಮ್ಮಜೋ ಯತ್ನೋ ಯತ್ನೋ ಹಠಕರ್ಮ್ಮಪ್ರಯೋಕ್ತಾ ॥೨೨.೮೬॥

 

ಜೀವಯೋಗ್ಯತೆ ಏನಿದೆ, ಅದು ತರತಮ ಭಾವದಲ್ಲಿದೆ. ಜೀವೊತ್ತಮನಾಗಿರುವ ಬ್ರಹ್ಮನಿಂದ ಆರಂಭಿಸಿ ಕಲಿಯ ತನಕ ಈ ಜೀವ ಯೋಗ್ಯತೆ ಎನ್ನುವುದು ಉತ್ತಮ-ಮಧ್ಯಮ-ಅದಮ ಮೊದಲಾದ ಏರಿಳಿತಗಳಿಂದ ಕೂಡಿದೆ. ಜೀವಯೋಗ್ಯತೆಗೆ ಅನುಗುಣವಾಗಿ ಕರ್ಮಗಳು ಸಾಗುತ್ತವೆ. ಅಂತಹ ಕರ್ಮದಿಂದ ಯತ್ನವು ರೂಪಿತವಾಗುತ್ತದೆ. ಹಠದ ಕ್ರಮಗಳನ್ನು ನಡೆಸಿಕೊಡತಕ್ಕಂಥದ್ದು ಯತ್ನ. (‘ಜೀವಸ್ವಭಾವ’ಕ್ಕೆ ಅನುಗುಣವಾದ ‘ಪ್ರಯತ್ನ’ ಎನ್ನುವುದು  ಜೀವಕರ್ಮದ ವಿಕಾಸಕ್ಕೆ ಕಾರಣವಾಗುತ್ತದೆ. ಹಾಗಾಗಿ ಇವೆರಡರ ನಡುವೆ ಅವಲಂಬನೆ ಎನ್ನುವುದಿದೆ.)

 

ವಿನಾ ಯತ್ನಂ ನ ಹಠೋ ನಾಪಿ ಕರ್ಮ್ಮ ಫಲಪ್ರದೌ ವಾಸುದೇವೋSಖಿಲಸ್ಯ ।

ಸ್ವಾತನ್ತ್ರ್ಯಶಕ್ತೇರ್ವಿನಿಯಾಮಕೋ ಹಿ ತಥಾSಪ್ಯೇತಾನ್ ಸೋSಪ್ಯಪೇಕ್ಷೈವ ಯುಞ್ಜೇತ್ ॥೨೨.೮೭॥

 

ಪ್ರಯತ್ನ ಇಲ್ಲದೇ ಜೀವಯೋಗ್ಯತೆಯಾಗಲೀ, ಅನಾಧಿಕರ್ಮವಾಗಲೀ ಫಲವನ್ನು ಕೊಡುವುದಿಲ್ಲ. (ಹೀಗಾಗಿ ಜೀವಯೋಗ್ಯತೆಗೆ ಅನುಗುಣವಾಗಿ ಎಲ್ಲವೂ ನಡೆಯುತ್ತದೆ ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಪ್ರಯತ್ನಪಡಲೇಬೇಕು). ವಾಸುದೇವನು ಎಲ್ಲಾ ಸ್ವಾತಂತ್ರ್ಯ ಶಕ್ತಿಗೂ ಕೂಡಾ ನಿಯಾಮಕನಷ್ಟೇ. ಆದರೂ ಅವನು ಜೀವಪ್ರಯತ್ನ, ಜೀವಯೋಗ್ಯತೆ, ಅನಾಧಿಕರ್ಮ – ಇವುಗಳನ್ನು ಅಪೇಕ್ಷಿಸಿಕೊಂಡೇ ಆಯಾ ಗತಿಯಲ್ಲಿ ಪ್ರಯುಕ್ತವಾಗುವಂತೆ ಮಾಡುತ್ತಾನೆ.

 

[ಹಾಗಿದ್ದರೆ ಭಗವಂತ ಅಸ್ವತಂತ್ರನೇ-ಎಂದರೆ ಹೇಳುತ್ತಾರೆ: ]

 

ಏತಾನಪೇಕ್ಷ್ಯೈವ ಫಲಂ ದದಾನೀತ್ಯಸ್ಯೈವ ಸಙ್ಕಲ್ಪ ಇತಿ ಸ್ವತನ್ತ್ರತಾ ।

ನಾಸ್ಯಾಪಗಚ್ಛೇತ್ ಸ ಹಿ ಸರ್ವಶಕ್ತಿರ್ನ್ನಾಶಕ್ತತಾ ಕ್ವಚಿದಸ್ಯ ಪ್ರಭುತ್ವಾತ್ ॥೨೨.೮೮॥

 

‘ಇವುಗಳನ್ನು ಅವಲಂಭಿಸಿಯೇ ಫಲವನ್ನು ಕೊಡುತ್ತೇನೆ’ ಎನ್ನುವುದು ಭಗವಂತನದ್ದೇ ಸಂಕಲ್ಪ. ಅದನ್ನೇ ಸ್ವಾತಂತ್ರ್ಯ(self reliant) ಎಂದು ಕರೆಯುತ್ತಾರೆ. ಈರೀತಿಯ ಸ್ವಾತಂತ್ರ್ಯ ಏನಿದೆ, ಅದು ಎಂದೂ ಹೊರಟು ಹೋಗುವುವಂತದ್ದಲ್ಲ. ಭಗವಂತ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿಟ್ಟುಕೊಂಡಿದ್ದಾನೆ. ಅವನ ಸಾಮರ್ಥ್ಯದಲ್ಲಿ ಅಶಕ್ತತೆ ಎನ್ನುವುದು ಇಲ್ಲವೇ ಇಲ್ಲ.


Sunday, May 8, 2022

Mahabharata Tatparya Nirnaya Kannada 22: 75-82

 

ಇತೀರಿತೋ ಧರ್ಮ್ಮಜಃ ಕೃಷ್ಣಯೈವ ನಿರುತ್ತರತ್ವಂ ಗಮಿತಸ್ತ್ವಭತ್ಸಯತ್ ।

ಕುತರ್ಕ್ಕಮಾಶ್ರಿತ್ಯ ಹರೇರಪಿ ತ್ವಮಸ್ವಾತನ್ತ್ರ್ಯಂ ಸಾಧಯಸೀತಿ ಚೋಕ್ತ್ವಾ ॥೨೨.೭೫॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ದ್ರೌಪದೀಯಿಂದಲೇ ನಿರುತ್ತರತ್ವವನ್ನು ಹೊಂದಿ(ಅವಳಿಗೆ ಉತ್ತರ ಕೊಡಲಾಗದೇ) ‘ನೀನು ಕೆಟ್ಟ ತರ್ಕವನ್ನು ಆಶ್ರಯಿಸಿ ನಾರಾಯಣನಿಗೂ ಕೂಡಾ ಅಸ್ವತಂತ್ರವನ್ನು ಹೇಳುತ್ತಿದ್ದೀಯ’ ಎಂದು  ಅವಳನ್ನು ಬೈದನು! 

 

ಛಲೇನ ತೇನ ಪ್ರತಿಭತ್ಸಿತಾ ಸಾ ಕ್ಷಮಾಪಯಾಮಾಸ ನೃಪಂ ಯತಃ ಸ್ತ್ರೀ ।

ವಾಚಾಳತಾ ನಾತಿತರಾಂ ಹಿ ಶೋಭತೇ ಸ್ತ್ರೀಣಾಂ ತತಃ ಪ್ರಾಹ ವೃಕೋದರಸ್ತಮ್ ॥೨೨.೭೬॥

 

ಧರ್ಮರಾಜನು ಛಲದಿಂದ (ಕುತರ್ಕ ಬಲದಿಂದ) ಬೈದರೂ ಕೂಡಾ, ದ್ರೌಪದಿಯು ಸ್ತ್ರೀ ಪ್ರಪಂಚದ ಆದರ್ಶಕ್ಕನುಗುಣವಾಗಿ ಧರ್ಮರಾಜನಲ್ಲಿ ಕ್ಷಮಿಸುವಂತೆ ಕೇಳಿದಳು. ಏಕೆಂದರೆ ವಾಚಾಳತ್ವ ಹೆಣ್ಣುಮಕ್ಕಳಿಗೆ ಹೆಚ್ಚಾಗಿ ಶೋಭಿಸುವುದಿಲ್ಲ. ಬಳಿಕ ಭೀಮಸೇನನು ಧರ್ಮರಾಜನನ್ನು ಕುರಿತು ಮಾತನಾಡಿದನು:

 

ರಾಜನ್ ವಿಷ್ಣುಃ ಸರ್ವಕರ್ತ್ತಾ ನಚಾನ್ಯಸ್ತತ್ತನ್ತ್ರಮೇವಾನ್ಯದಸೌ ಸ್ವತನ್ತ್ರಃ ।

ತಥಾsಪಿ ಪುಂಸಾ ವಿಹಿತಂ ಸ್ವಕರ್ಮ್ಮ ಕಾರ್ಯ್ಯಂ ತ್ಯಾಜ್ಯಂ ಚಾನ್ಯದತ್ಯನ್ತಯತ್ನಾತ್ ॥೨೨.೭೭॥

 

ಧರ್ಮರಾಜನೇ, ನಾರಾಯಣನು ಸರ್ವಕರ್ತೃನಾಗಿದ್ದಾನೆ. ಇತರ ಯಾವ ಜೀವನೂ ಕೂಡಾ ಸರ್ವಕರ್ತೃ ಅಲ್ಲ. ಬೇರೆಯಾದುದೆಲ್ಲವೂ ಭಗವಂತನ ಅಧೀನವಾಗಿವೆ. ನಾರಾಯಣನು ತನ್ನ ಅಧೀನದಲ್ಲಿಯೇ ತಾನಿದ್ದಾನೆ. ಆದರೂ ಕೂಡಾ ಪುರುಷನಿಂದ (ಒಬ್ಬ ಪ್ರಜ್ಞಾವಂತನಾದ ಜೀವನಿಂದ) ಸ್ವಕರ್ಮವು ಅತ್ಯಂತ ಪ್ರಯತ್ನಪಟ್ಟು ಮಾಡಲ್ಪಡಬೇಕು. ಹಾಗೇ ಅತ್ಯಂತ ಪ್ರಯತ್ನಪಟ್ಟು ವಿಕರ್ಮಗಳನ್ನೂ(ಕುತ್ಸಿತ ಕರ್ಮಗಳನ್ನು) ಮಾಡದೇ ಇರಬೇಕು.

 

ಪ್ರತ್ಯಕ್ಷಮೇತತ್ ಪುರುಷಸ್ಯ ಕರ್ಮ್ಮ ತೇನಾನುಮೇಯಾ ಪ್ರೇರಣಾ ಕೇಶವಸ್ಯ ।

ಸ್ವಕರ್ಮ್ಮ ಕೃತ್ವಾ ವಿಹಿತಂ ಹಿ ವಿಷ್ಣುನಾ ತತ್ಪ್ರೇರಣೇತ್ಯೇವ ಬುಧೋSನುಮನ್ಯತೇ ॥೨೨.೭೮॥

 

ಒಬ್ಬ ಜೀವನಿಗೆ ಅವನ ಕರ್ಮವು ಪ್ರತ್ಯಕ್ಷ ಸಿದ್ಧ. ಅದರ ಅನುಭವ ಅವನಿಗಾಗುತ್ತದೆ. ವಾಸ್ತವವಾಗಿ ನಾರಾಯಣನ ಪ್ರೇರಣೆಯಿಂದಲೇ ಕ್ರಿಯೆ ನಡೆದಿರುತ್ತದೆ. (ಜೀವನಿಗೆ ಕರ್ತೃತ್ವವಿದೆ. ಆದರೆ ಸ್ವತಂತ್ರವಾಗಿ ಪರಮಾತ್ಮನ ಪ್ರೇರಣೆ ಇಲ್ಲದೇ ಯಾವುದನ್ನೂ ಜೀವ ಸಾಧಿಸಲು ಸಾಧ್ಯವಿಲ್ಲ). ಸ್ವಕರ್ಮವನ್ನು (ತನ್ನ ವರ್ಣ ಮತ್ತು ತನ್ನ ಆಶ್ರಮಕ್ಕೆ ಯೋಗ್ಯವಾಗಿರುವ ಕರ್ಮವನ್ನು) ಮಾಡಿ ಪರಮಾತ್ಮ ಮಾಡಿದ್ದು ಎಂದು ಜ್ಞಾನಿಗಳು ಸೂಕ್ಷ್ಮ ದೃಷ್ಟಿಯಿಂದ ತಿಳಿಯುತ್ತಾರೆ. (ದೇವರು ನನಗೆ ಬುದ್ಧಿ ಕೊಟ್ಟು ಅವಕಾಶ ಮಾಡಿಕೊಟ್ಟ, ಅದರಿಂದ ಮುಖ್ಯ ಕರ್ತೃತ್ವ ಪರಮಾತ್ಮ ಎನ್ನುವುದನ್ನು  ಅವರು ತಿಳಿಯುತ್ತಾರೆ).

 

ತೇನೈತಿ ಸಮ್ಯಗ್ಗತಿಮಸ್ಯ ವಿಷ್ಣೋರ್ಜ್ಜನೋSಶುಭೋ ದೈವಮಿತ್ಯೇವ ಮತ್ವಾ ।

ಹಿತ್ವಾ ಸ್ವಕಂ ಕರ್ಮ್ಮ ಗತಿಂ ಚ ತಾಮಸೀಂ ಪ್ರಯಾತಿ ತಸ್ಮಾತ್ ಕಾರ್ಯ್ಯಮೇವ ಸ್ವಕರ್ಮ್ಮ             ॥೨೨.೭೯॥

 

ಈರೀತಿಯಾಗಿ ಮಾಡುವುದರಿಂದ ಅವರು ಒಳ್ಳೆಯ ಗತಿಯನ್ನು ಹೊಂದುತ್ತಾರೆ. ಆದರೆ ಕೆಟ್ಟ ಬುದ್ಧಿಯ ಮನುಷ್ಯರು ಎಲ್ಲವನ್ನೂ ದೇವತೆಗಳೇ ಮಾಡಿಸುತ್ತಾರೆ(ದೈವವೇ ಕರ್ತೃ) ಎನ್ನುತ್ತಾ, ‘ಇಲ್ಲಿ ನಮಗೇನು ಕೆಲಸ’ ಎಂದು ಸ್ವಕರ್ಮವನ್ನು ಬಿಟ್ಟು ಅನ್ಧಂತಮಸ್ಸನ್ನು ಹೊಂದುತ್ತಾರೆ. (ಅಂದರೆ ದೇವರು ಇದ್ದಾನೆ ಎನ್ನುವ ವಿಶ್ವಾಸಕ್ಕಿಂತ, ಸೋಮಾರಿತನಕ್ಕೆ ಪೋಷಕವಾಗಿ ಸರ್ವಕರ್ತೃತ್ವ ವಾದವನ್ನು ಕೆಲವರು ಬಳಸುತ್ತಾರೆ. ಅಂತವರು ಅನ್ಧಂತಮಸ್ಸನ್ನು ಹೊಂದುತ್ತಾರೆ). ಹೀಗಾಗಿ ಜೀವರು ಸ್ವಕರ್ಮವನ್ನು ಮಾಡಲೇಬೇಕು.  (ಅದರಿಂದ ರಿಯಾಯಿತಿ ಇಲ್ಲ).

 

ಜ್ಞಾತವ್ಯಂ ಚೈವಾಸ್ಯ ವಿಷ್ಣೋರ್ವಶತ್ವಂ ಕರ್ತ್ತವ್ಯಂ ಚೈವಾsತ್ಮನಃ ಕಾರ್ಯ್ಯಕರ್ಮ್ಮ ।

ಪ್ರತ್ಯಕ್ಷೈಷಾ ಕರ್ತ್ತೃತಾ ಜೀವಸಂಸ್ಥಾ ತಥಾSSಗಮಾದನುಮಾನಾಚ್ಚ ಸರ್ವಮ್ ॥೨೨.೮೦॥

 

ಪರಮಾತ್ಮನಿಗೆ ಜಗವೆಲ್ಲವೂ ಅಧೀನವಾಗಿದೆ ಎಂದು ತಿಳಿಯಲೇಬೇಕು ಮತ್ತು ತಾನು ಮಾಡಬೇಕಾದ ಕರ್ತವ್ಯಗಳ ಬಗೆಗೆ ಎಚ್ಚರವಾಗಿದ್ದು ಅದನ್ನು ಮಾಡಬೇಕು. ಜೀವನಲ್ಲಿ ಇರುವ ಕರ್ತೃತ್ವವು ಪ್ರತ್ಯಕ್ಷಗೋಚರವಾಗಿದೆ. ಅಷ್ಟೇ ಅಲ್ಲ, ಆಗಮ-ಅನುಮಾನ(logic)ದಿಂದಲೂ, ಪರಮಾತ್ಮನಲ್ಲಿರುವ ಕರ್ತೃತ್ವವು, ಪರಮಾತ್ಮನ ವಶತ್ವವು, ಎಲ್ಲವೂ ಕೂಡಾ ಸಿದ್ಧವಾಗಿದೆ.

 

ವಿಷ್ಣೋರ್ವಶೇ ತನ್ನ ಹೇಯಂ ದ್ವಯಂ ಚ ಜಾನನ್ ವಿದ್ವಾನ್ ಕುರುತೇ ಕಾರ್ಯ್ಯಕರ್ಮ್ಮ ।

ತತ್ಪ್ರೇರಕಂ ವಿಷ್ಣುಮೇವಾಭಿಜಾನನ್ ಭವೇತ್ ಪ್ರಮಾಣತ್ರಿತಯಾನುಗಾಮೀ ॥೨೨.೮೧॥

 

ಪರಮಾತ್ಮನ ಕರ್ತೃತ್ವವನ್ನಾಗಲೀ, ಜೀವನ ಕರ್ತೃತ್ವವನ್ನಾಗಲೀ ತಿರಸ್ಕರಿಸಲು ಬರುವುದಿಲ್ಲ. ಅವೆರಡೂ ನಾರಾಯಣನ ವಶದಲ್ಲಿಯೇ ಇದೆ. ಅದರಿಂದಾಗಿ ಈ ಎರಡನ್ನೂ ತಿಳಿಯುತ್ತಾ, ಒಬ್ಬ ಜ್ಞಾನಿಯು ತನ್ನ ಪಾಲಿಗೆ ಬಂದ ಕರ್ಮವನ್ನು ಮಾಡುತ್ತಾನೆ. ನಾರಾಯಣ ‘ಪ್ರೇರಿಸುತ್ತಾನೆ’ ಎನ್ನುವುದಕ್ಕಾಗಿ ಮೂರು ಪ್ರಮಾಣಗಳನ್ನು ಅವನು ಅನುಸರಿಸುತ್ತಾನೆ. [ಪ್ರತ್ಯಕ್ಷ, ಅನುಮಾನ, ಆಗಮ-ಇವು ಮೂರನ್ನೂ ಕೂಡಾ ಅನುಸರಿಸಿಕೊಂಡು ಹೋಗುತ್ತಾನೆ. ಜೀವನದಲ್ಲಿ ಈ ಮೂರಕ್ಕೇ ಪ್ರಾಮುಖ್ಯತೆ ಇರುವುದು. ಯಾವುದೇ ವಸ್ತುವನ್ನು ತಿಳಿಯಬೇಕೆಂದರೆ ಇವು ಮೂರರಿಂದಲೇ ತಿಳಿಯಬೇಕು].

 

ಪೂರ್ಣ್ಣಂ ಪ್ರಮಾಣಂ ತತ್ತ್ರಯಂ ಚಾವಿರೋಧೇನೈಕತ್ರಸ್ಥಂ ತತ್ ತ್ರಯಂ ಚಾವಿರೋಧಿ ।

ಪೃಥಙ್ ಮದ್ಧ್ಯಂ ಚಾಪ್ರಮಾಣಂ ವಿರೋಧಿ ಸ್ಯಾತ್ ತತ್ ತಸ್ಮಾತ್ ತ್ರಯಮೇಕತ್ರ ಕಾರ್ಯ್ಯಮ್॥೨೨.೮೨॥

 

ಈ ಮೂರೂ ಕೂಡಾ ವಿರೋಧವಿಲ್ಲದೇ ಒಂದೆಡೆ ಇದ್ದರೆ ಪೂರ್ತಿಯಾಗಿ ಪ್ರಮಾಣವಾಗುತ್ತದೆ. ಕೇವಲ ಅನುಮಾನ/ಊಹೆ/ತರ್ಕ ಮಾತ್ರ ಇದ್ದರೆ ಅದು ಅಪ್ರಮಾಣ(ಕೇವಲ ತರ್ಕಕ್ಕೆ ಅರ್ಥವಿಲ್ಲ). ಅದರಿಂದ ಈ ಮೂರನ್ನೂ ಒಂದೆಡೆ ಮಾಡಿಕೊಳ್ಳಬೇಕು. (ಒಂದು ವಿಚಾರದಲ್ಲಿ ಪ್ರತ್ಯಕ್ಷ-ಆಗಮ-ಅನುಮಾನ ಈ ಮೂರರ ಸಮ್ಮತಿಯನ್ನು ಪಡೆದು ಮುಂದೆ ಹೋಗಬೇಕು. ಈ ಪರಸ್ಪರ ಆಲಂಬನೆ ಜೀವನವನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುತ್ತದೆ).