ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 13, 2022

Mahabharata Tatparya Nirnaya Kannada 22-438-450

 

ಸಕುಣ್ಡಲಮ್ ಸಕವಚಮವದ್ಧ್ಯಂ ಸೂರ್ಯ್ಯನನ್ದನಮ್ ।

ಜ್ಞಾತ್ವೇನ್ದ್ರ ಉಭಯಂ ತಸ್ಮಾದೈಚ್ಛದಾದಾತುಮುತ್ತಮಮ್ ॥೨೨.೪೩೮॥

 

ಇತ್ತ, ಸಹಜವಾಗಿರುವ ಕವಚ-ಕುಂಡಲಗಳಿಂದ ಸಹಿತನಾಗಿರುವ ತನಕ ಸೂರ್ಯಪುತ್ರ ಕರ್ಣ ಅವಧ್ಯ ಎಂದು ತಿಳಿದ ಇಂದ್ರನು, ಕರ್ಣನ ಕವಚ-ಕುಂಡಲವನ್ನು ತೆಗೆದುಕೊಳ್ಳಲು ಬಯಸಿದನು.

 

ತದ್ ವಿಜ್ಞಾಯ ರವಿಃ ಕರ್ಣ್ಣಂ ಸ್ವಪ್ನ ಉಕ್ತ್ವಾ ನ್ಯವಾರಯತ್ 

ಸರ್ವಥಾ ದಾಸ್ಯ ಇತ್ಯುಕ್ತೇ ಪ್ರಾಹಾSದೇಯಂ ವರಾಯುಧಮ್ ॥೨೨.೪೩೯॥

 

ಇಂದ್ರನ ಈ ಸಂಕಲ್ಪವನ್ನು ತಿಳಿದ ಸೂರ್ಯನು ಕನಸಿನಲ್ಲಿ ಕರ್ಣನಿಗೆ ವಿಷಯವನ್ನು ಹೇಳಿ ತಡೆದನು. ‘ಖಂಡಿತಾ ಕೊಟ್ಟೇ ಕೊಡುತ್ತೇನೆ’ ಎಂದು ಕರ್ಣ ಹೇಳಿದಾಗ, ‘ಉತ್ಕೃಷ್ಟವಾದ ಅಸ್ತ್ರವನ್ನು ನೀನು ಇಂದ್ರನಿಂದ ವರವಾಗಿ ತೆಗೆದುಕೊಳ್ಳಬೇಕು’ ಎಂದು ಸೂರ್ಯನು ಮಗನಿಗೆ ಹೇಳಿದನು.

 

ದದೌ ಚೋತ್ಕೃತ್ಯ ಕವಚಂ ಕುಣ್ಡಲೇ ಚ ಶಚೀಪತೇಃ ।

ಅಮೋಘಾಂ ಶಕ್ತಿಮಾದಾಯ ಜ್ಞಾತ್ವೈವ ದ್ವಿಜರೂಪಿಣಮ್ ॥೨೨.೪೪೦॥

 

ಬ್ರಾಹ್ಮಣವೇಷ ಧರಿಸಿ ಬಂದವನು ಇಂದ್ರ ಎಂದು ತಿಳಿದೇ ಕರ್ಣ ಅಮೋಘವಾದ, ಎಂದೂ ವ್ಯರ್ಥವಾಗದ  ಶಕ್ತ್ಯಾಯುಧವನ್ನು ಅವನಿಂದ ಪಡೆದು ತನ್ನ ಕುಂಡಲ ಮತ್ತು ಕವಚವನ್ನು ತನ್ನ ದೇಹದಿಂದ ಕಿತ್ತು ಇಂದ್ರನಿಗಿತ್ತ.

 

ಋತೇSರ್ಜ್ಜುನಾದೇಕಮೇವ ವಧಿಷ್ಯಸ್ಯನಯೇತಿ ಸಃ ।

ದತ್ವಾ ಶಕ್ತಿಂ ಯಯೌ ಶಕ್ರಃ ಸಾರ್ದ್ದಂ ಕವಚಕುಣ್ಡಲೈಃ ॥೨೨.೪೪೧॥

 

ಶಕ್ತ್ಯಾಯುಧವನ್ನು ಕರ್ಣನಿಗೆ ನೀಡಿದ ಇಂದ್ರನು, ‘ಈ ಆಯುಧದಿಂದ ನೀನು ಅರ್ಜುನನನ್ನು ಬಿಟ್ಟು, ಕೇವಲ ಒಬ್ಬನೇ ವೀರನನ್ನು ಸಂಹಾರಮಾಡುವಿ’ ಎಂದು ಹೇಳಿದ. ಹೀಗೆ ಹೇಳಿ, ಕವಚ-ಕುಂಡಲದೊಂದಿಗೆ ಇಂದ್ರ ಹಿಂತಿರುಗಿದ.

  

ಪಾರ್ತ್ಥ ವಿಮುಚ್ಯೈವ ಸುಯೋಧನಂ ತಂ ವನೇ ವಸನ್ತೋ ಮುದಿತಾಃ ಸದೈವ ।

ಸಹಾರಣೀಭಾಣ್ಡಮಥೋ ಮೃಗೇಣ ಹೃತಂ ದ್ವಿಜಸ್ಯಾSಶು ನಿಶಮ್ಯ ಚಾನ್ವಯುಃ ॥೨೨.೪೪೨॥

 

ಇತ್ತ ದುರ್ಯೋಧನನನ್ನು ಗಂಧರ್ವರಿಂದ ಬಿಡಿಸಿದ ನಂತರ ಪಾಂಡವರು ಕಾಡಿನಲ್ಲಿ ವಾಸಮಾಡುತ್ತಾ, ಅತ್ಯಂತ ಸಂತಸದಿಂದಿದ್ದರು. ಹೀಗಿರುವಾಗ ಒಮ್ಮೆ ಬ್ರಾಹ್ಮಣನೊಬ್ಬನ ಅಗ್ನಿಮಥನ ಕಾಷ್ಠಗಳಿಂದ ಕೂಡಿದ ಪಾತ್ರೆಯನ್ನು ಜಿಂಕೆಯೊಂದು ಅಪಹರಿಸಿತು ಎಂದು ಕೇಳಿದ ಪಾಂಡವರು ಆ ಜಿಂಕೆಯನ್ನು ಹಿಂಬಾಲಿಸಿದರು.

 

ತಸ್ಮಿನ್ನದೃಶ್ಯೇ ತೃಷಿತಾ ಏಕೈಕ ಉದಕಾರ್ತ್ಥಿನಃ ।

ಯಯುರ್ಯ್ಯುಧಿಷ್ಠಿರಮೃತೇ ಸುಪ್ತಾಸ್ತೇ ಧರ್ಮ್ಮಮಾಯಯಾ ॥೨೨.೪೪೩॥

 

ಅದೃಶ್ಯೇನೈವ ಧರ್ಮ್ಮೇಣ ವಾರಿತಾ ವಾರಿಪಾಯಿನಃ ।

ಕ್ಷತ್ರಧರ್ಮ್ಮಸ್ಯ ರಕ್ಷಾರ್ತ್ಥಂ ನ ತತ್ಪ್ರಶ್ನಾನ್ ವಿದಾಂ ವರಾಃ ॥೨೨.೪೪೪॥

 

ವ್ಯಾಚಕ್ರುಃ ಶಕ್ತಿಮನ್ತೋSಪಿ ಪಾನೀಯಾರ್ತ್ಥಮರಿನ್ದಮಾಃ ।

ನ ವಿಪ್ರಾಣಾಂ ಚ ಧರ್ಮ್ಮೋSಯಂ ವಿದ್ಯಾಯಾ ಉಪಜೀವನಮ್ ॥೨೨.೪೪೫॥

 

ಕ್ಷತ್ರಿಯಾಣಾಂ ತು ಕಿಮುತ ಪ್ರಸಭಂ ತೇನ ತೇ ಪಪುಃ ।

ದೇವಾ ಅಪಿ ಮನುಷ್ಯೇಷು ಜಾತಾಃ ಸುಬಲಿನೋSಪಿ ಹಿ ॥೨೨.೪೪೬॥

 

ಮಾನುಷೇಣೈವ ಭಾವೇನ ಯುಕ್ತಾಃ ಸ್ಯುಃ ಕೇಶವಾದೃತೇ ।

ಕಾರ್ಯ್ಯೇಷ್ವೇಷಾಂ ಕ್ರಮೇಣೈವ ವ್ಯಕ್ತಿಮಾಯಾನ್ತಿ  ಸದ್ಗುಣಾಃ ॥೨೨.೪೪೭॥

 

ಆ ಜಿಂಕೆ ಕಾಣದಾಗಲು, ಬಾಯಾರಿದವರಾಗಿ, ಯುಧಿಷ್ಠಿರನನ್ನು ಹೊರತುಪಡಿಸಿ ಇತರರು ಪ್ರತ್ಯೇಕ ಪ್ರತ್ಯೇಕವಾಗಿ ನೀರನ್ನು ಹುಡುಕಿಕೊಂಡು ತೆರಳಿದರು. ಬಕರೂಪಿಯಾಗಿದ್ದು, ಯಾರಿಗೂ ಕಾಣದ ಯಮಧರ್ಮನಿಂದ ತಡೆಯಲ್ಪಟ್ಟರೂ(ನನ್ನ ಪ್ರಶ್ನೆಗೆ ಉತ್ತರ ಕೊಟ್ಟರೆ  ನೀರು ಕುಡಿಯಬಹುದು, ಇಲ್ಲಾ ಎಂದರೆ ನೀರು ಮುಟ್ಟಬಾರದು ಎಂದು ತಡೆಯಲ್ಪಟ್ಟರೂ), ನೀರು ಕುಡಿದವರಾಗಿ, ಯಮಧರ್ಮನ ಶಕ್ತಿಯಿಂದ ಅವರೆಲ್ಲರೂ ನಿದ್ರಾವಶರಾದರು. ಹೀಗೆ ಬಿದ್ದ ನಾಲ್ಕೂ ಜನರು ಅತ್ಯಂತ ಜ್ಞಾನಿಗಳಾಗಿದ್ದರೂ, ಕ್ಷತ್ರಧರ್ಮರಕ್ಷಣೆ ಮಾಡಲೋಸುಗ(ವಿದ್ಯೆಯಿಂದ ಕ್ಷತ್ರಿಯರು ಬದುಕಬಾರದು ಎನ್ನುವ ಧರ್ಮ ನಿಭಾಯಿಸುವವರಾಗಿ), ಯಮಧರ್ಮ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿಯುಳ್ಳವರಾಗಿದ್ದರೂ  ಕೂಡಾ ನೀರಿಗಾಗಿ ವ್ಯಾಖ್ಯಾನ ಮಾಡಲಿಲ್ಲ(ಉತ್ತರ ಕೊಡಲಿಲ್ಲ).

ಬ್ರಾಹ್ಮಣರಿಗೇ ವಿದ್ಯೋಪಜೀವನ ಧರ್ಮವಲ್ಲ ಎನ್ನುತ್ತಾರೆ. (ಶಾಸ್ತ್ರದಲ್ಲಿ ಬ್ರಾಹ್ಮಣರಿಗೆ ಶಿಷ್ಯರಿಂದ ಬಂದದ್ದನ್ನು, ಪೌರೋಹಿತ್ಯದಿಂದ ಬಂದದ್ದನ್ನು ಅನುಭವಿಸಬಹುದು ಎಂದು ಹೇಳಿದ್ದರೂ ಕೂಡಾ, ಅದನ್ನು ಮಾಡದೆಯೇ ಬದುಕಿದರೆ ಇನ್ನೂ ಒಳ್ಳೆಯದು ಎನ್ನುವ ಅಭಿಪ್ರಾಯವಿದೆ) ಹೀಗಿರುವಾಗ ಇನ್ನು ಕ್ಷತ್ರಿಯರಿಗೆ ವಿದ್ಯೋಪಜೀವನ ಒಳ್ಳೆಯದಲ್ಲ ಎಂದು ಹೇಳಬೇಕೇ? ಹೀಗಾಗಿ ಪ್ರಶ್ನೆಗೆ ಉತ್ತರ ಹೇಳದೇ, ಬಲವಂತವಾಗಿ ನೀರನ್ನು ಕುಡಿದರು.

ಭಗವಂತನನ್ನು ಹೊರತುಪಡಿಸಿ, ಇತರ ದೇವತೆಗಳು ಮನುಷ್ಯರಲ್ಲಿ ಹುಟ್ಟಿದಾಗ, ಅವರು ಅತ್ಯಂತ ಬಲಿಷ್ಠರಾದರೂ ಕೂಡಾ, ಸ್ವಲ್ಪ ಮನುಷ್ಯ ಭಾವ ಇದ್ದೇ ಇರುತ್ತದೆ. ಯಾವುದೋ ಒಂದು ದೊಡ್ಡ ಕೆಲಸವಾಗಬೇಕಾದಾಗ ಈ ಗುಣಗಳು ಕ್ರಮವಾಗಿ ಅಭಿವ್ಯಕ್ತಿ ಹೊಂದುತ್ತವೆ. ಅಲ್ಲಿಯ ತನಕ ಆಗುವುದಿಲ್ಲ.

 

ಅತೋ ಭೀಮಾರ್ಜ್ಜುನೌ ಧರ್ಮ್ಮಾದತ್ಯುತ್ತಮಬಲಾವಪಿ ।

ದೇವಮಾಯಾಂ ಸಮಾಶ್ರಿತ್ಯ ಧರ್ಮ್ಮೇಣ ಸ್ವಾಪಿತೌ ಕ್ಷಣಾತ್ ॥೨೨.೪೪೮॥

 

ಅದರಿಂದಾಗಿ ಯಮಧರ್ಮನಿಗಿಂತಲೂ ಅತ್ಯುತ್ತಮ ಬಲವುಳ್ಳ ಭೀಮಾರ್ಜುನರು ದೇವಮಾಯೆಯನ್ನು ಆಶ್ರಯಿಸಿ, ಯಮಧರ್ಮನಿಂದ ಮಲಗಿಸಲ್ಪಟ್ಟರು. (ಭೀಮಾರ್ಜುನರು ಮಾನುಷ್ಯ ಸ್ವಭಾವವನ್ನು ಹೊಂದಿದ್ದರೆ, ಯಮಧರ್ಮ ದೇವಮಾಯೆಯನ್ನು ಬಳಸಿದ).

 

ಮುಹೂರ್ತ್ತಮೇವ ಸ  ಮಾಯಾ ತಯೋರಾಚ್ಛಾದನಕ್ಷಮಾ ।

ತತಃ ಪ್ರಬುದ್ಧಯೋರ್ದ್ಧರ್ಮ್ಮೋ ನೈವ ಶಕ್ತಿಶತಾಂಶಭಾಕ್ ॥೨೨.೪೪೯॥

 

ಆ ಮಾಯೆ ಒಂದು ಮಹೂರ್ತ ಮಾತ್ರ ಭೀಮಾರ್ಜುನರು ಬಲವನ್ನು ಪ್ರಕಟಿಸದೇ ಇರುವಂತೆ ಮಾಡಲು ಸಮರ್ಥ. ಯಮಧರ್ಮನ ಬಲವು ಈ ದೇವಮಾಯೆಯಿಂದ ಪ್ರಬುದ್ಧರಾದ ಭೀಮಾರ್ಜುನರ ಬಲದ ನೂರನೇ ಒಂದು ಭಾಗವೂ ಅಲ್ಲವಷ್ಟೇ.

 

ಉಕ್ತಂ ಪಾದ್ಮಪುರಾಣೇ ಚ ತದೇತತ್ ಸರ್ವಮಞ್ಚಸಾ ।

ತಸ್ಮಾನ್ನಾಶಕ್ತಿರನಯೋಃ ಸಮ್ಭಾವ್ಯಾ ಭೀಮಪಾರ್ತ್ಥಯೋಃ ॥೨೨.೪೫೦॥

 

ಈ ಪ್ರಮೇಯಗಳೆಲ್ಲವನ್ನೂ ಪಾದ್ಮಪುರಾಣದಲ್ಲಿ ಹೇಳಲಾಗಿದೆ. ಆ ಕಾರಣದಿಂದ ಇಲ್ಲಿ ಭೀಮಾರ್ಜುನರಿಗೆ ಅಸಾಮರ್ಥ್ಯವನ್ನು ತಿಳಿಯಕೂಡದು.

Saturday, November 12, 2022

Mahabharata Tatparya Nirnaya Kannada 22-433-437

 ಉಮಯಾ ನಿರ್ಮ್ಮಿತಾತ್ಮಾರ್ದ್ದಮುತ್ತರಂ ಹರನಿರ್ಮ್ಮಿತಮ್ ।

ಜ್ಞಾತ್ವೈವಾವದ್ಧ್ಯತಾಂ ಚೈವ ರಾಜ್ಯೇ ಬುದ್ಧಿಂ ಚಕಾರ ಸಃ ॥೨೨.೪೩೩॥

 

ನೋವಾಚ ಕಸ್ಯಚಿತ್ ತೇಷು ಸ್ವಾನುಭೂತಂ ಸುಯೋಧನಃ ।

ಪ್ರಭಾತಾಯಾಂ ತು ಶರ್ವರ್ಯ್ಯಾಂ ಪುನಃ ಕರ್ಣ್ಣೋ ವಚೋSಬ್ರವೀತ್ ॥೨೨.೪೩೪॥

 

ದುರ್ಯೋಧನನು ತನ್ನ ಅರ್ಧದೇಹ ಪಾರ್ವತೀದೇವಿಯಿಂದಲೂ, ಇನ್ನರ್ಧದೇಹ ರುದ್ರನಿಂದ ನಿರ್ಮಿಸಲ್ಪಟ್ಟಿದೆ ಎಂದು ತಿಳಿದು, (ಪಾರ್ವತೀ-ಪರಮೇಶ್ವರರಿಂದ ನಿರ್ಮಿತವಾದ ತನ್ನ ದೇಹ ವಜ್ರಮಯ ಎಂದು ತಿಳಿದು), ತನಗೆ ಅವಧ್ಯತ್ವವನ್ನು ತಿಳಿದು, ತಾನು ರಾಜ್ಯವಾಳಬೇಕು ಎಂದು ನಿಶ್ಚಿತಬುದ್ಧಿಯನ್ನು  ಮಾಡಿದನು.

ರಾತ್ರಿ ನಡೆದ ಘಟನೆಯನ್ನು, ತಾನು ಅನುಭವಿಸಿದ್ದನ್ನು ದುರ್ಯೋಧನ ಯಾರಿಗೂ, ತನ್ನ ಆತ್ಮೀಯರಿಗೂ  ಕೂಡಾ ಹೇಳಲಿಲ್ಲ. ಮರುದಿನ ಬೆಳಿಗ್ಗೆ ಮತ್ತೆ ಕರ್ಣನು ದುರ್ಯೋಧನನನ್ನು ಕುರಿತು ಹೇಳಿದ-

 

ಭೃತ್ಯೈಸ್ತವೈವ ಪಾರ್ತ್ಥೈರ್ಯ್ಯನ್ಮೋಚಿತೋSಸಿ ಪರನ್ತಪ ।

ತೇನ ಮಾನ್ಯೋSಧಿಕಂ ಲೋಕೇ ಯದ್ ಭೃತ್ಯಾ ಏವ ತಾದೃಶಾಃ ।

ಕಿಮು ತ್ವಂ ರಾಜಶಾರ್ದ್ದೂಲ ತದುತ್ತಿಷ್ಠ ಸ್ಥಿರೋ ಭವ ॥೨೨.೪೩೫॥

 

ಶತ್ರುಗಳ ಎದೆಗೆಡಿಸುವವನೇ, ಯಾವ ಕಾರಣದಿಂದ ನಿನ್ನ ಭೃತ್ಯರೇ ಆಗಿರುವ ಪಾಂಡವರಿಂದ ನೀನು ಬಿಡುಗಡೆಗೊಳಗಾಗಿದ್ದೀಯೋ, ಅದರಿಂದ ನೀನು ಇನ್ನೂ ಹೆಚ್ಚು ಗೌರವಾಸ್ಪದನಾದೆ. (ಯಾರಸೇವಕರು ಇಷ್ಟು ಬಲಿಷ್ಠವಾಗಿರಬೇಕಾದರೆ ಅವರ ಸ್ವಾಮಿಯಾದ ನೀನು ಎಷ್ಟು ಬಲಿಷ್ಠನಾಗಿರಬೇಕು ಎಂದು ಲೋಕದವರು ನಿನ್ನ ಬಲದ ಬಗ್ಗೆಯೇ ಚಿಂತನೆ ಮಾಡುತ್ತಾರೆ ಎನ್ನುವ ಧ್ವನಿ). ಅದರಿಂದ ಓ ರಾಜನೇ  ಏಳು, ಏನು ಮಾಡಬೇಕೆಂದುಕೊಂಡಿದ್ದೀಯೋ ಅದರಲ್ಲಿ ಗಟ್ಟಿಯಾಗಿ ನಿಲ್ಲು.

 

ಯಾ ಚ ತೇSರ್ಜ್ಜುನಮಾಹಾತ್ಮ್ಯೇ ಶಙ್ಕಾ ಸಾ ವ್ಯೈತು ಮೇ ಶೃಣು ।

ಯಾವನ್ನೈವಾರ್ಜ್ಜುನಂ ಹನ್ಯಾಂ ಪಾದೌ ಪ್ರಕ್ಷಾಳಯೇ ಸ್ವಯಮ್ ॥೨೨.೪೩೬॥

 

ಅರ್ಜುನನ ಬಲದಲ್ಲಿ ನಿನಗೆ ಯಾವ ಅನುಮಾನ ಭೀತಿಗಳಿವೆಯೋ ಅದು ನಾಶವಾಗಲಿ. ನನ್ನ ಮಾತನ್ನು  ಕೇಳು. ಎಲ್ಲಿಯ ತನಕ ನಾನು ಅರ್ಜುನನನ್ನು ಕೊಲ್ಲಲಾರೆನೋ, ಅಲ್ಲಿಯ ತನಕ ನಾನೇ ಕಾಲುಗಳನ್ನು ತೊಳೆದುಕೊಳ್ಳುತ್ತೇನೆ(ಭೃತ್ಯರಿಂದ ತೊಳೆಸಿಕೊಳ್ಳುವುದಿಲ್ಲ).

[ಮಹಾಭಾರತದಲ್ಲಿ(ವನಪರ್ವ ೨೫೮.೧೭) ಅರ್ಜುನನನ್ನು ಕೊಲ್ಲುವತನಕ ಕಾಲನ್ನೇ ತೊಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ- ‘ಪಾದೌ ನ ಧಾವಯೇತಾವದ್ ಯಾವನ್ನ ನಿಹತೋSರ್ಜುನಃ’  ಇದರ ಅಭಿಪ್ರಾಯ ತನ್ನ ದಾಸರಿಂದ ಕಾಲು ತೊಳೆಸಿಕೊಳ್ಳುವುದಿಲ್ಲ ಎನ್ನುವ ನಿರ್ಣಯವನ್ನು ಇಲ್ಲಿ ಆಚಾರ್ಯರು ನೀಡಿದ್ದಾರೆ]  

 

ಇತ್ಯುಕ್ತೋSವರಜೈಶ್ಚೈವ ಸರ್ವೈಃ ಶಕುನಿನಾ ತಥಾ ।

ಯಾಚಿತೋ ರಥಮಾರು̐ಹ್ಯ ಯಯೌ ನಾಗಪುರಂ ದ್ರುತಮ್ ॥೨೨.೪೩೭॥

 

ಈರೀತಿಯಾಗಿ ದುಃಶ್ಯಾಸನಾದಿಗಳಿಂದಲೂ, ಶಕುನಿಯಿಂದಲೂ ಹೇಳಲ್ಪಟ್ಟವನಾಗಿ, ಬೇಡಲ್ಪಟ್ಟವನಾಗಿ, ದುರ್ಯೋಧನ ನಾಗಪುರಕ್ಕೆ(ಹಸ್ತಿನಪುರಕ್ಕೆ) ತೆರಳಿದನು.

[ಇಲ್ಲಿ ಕರ್ಣಾದಿಗಳು ತಾವು ಸಮರ್ಥವಾಗಿ ದುರ್ಯೋಧನನ ಮನಃಪರಿವರ್ತನೆ ಮಾಡಿದೆವು ಎಂದುಕೊಂಡರೇ ವಿನಃ, ಅಲ್ಲಿ ರಾತ್ರಿ ನಡೆದ ಘಟನೆ ಅವರಿಗೆ ತಿಳಿದಿರಲಿಲ್ಲ. ಮಹಾಭಾರತ(ವನಪರ್ವ ೨೫೩.೩೭) ಇದನ್ನು ಸ್ಪಷ್ಟವಾಗಿ ಹೇಳಿದೆ: ‘ನಚಾSಚಚಕ್ಷೇ ಕಸ್ಮೈಚಿದೇತದ್ ರಾಜಾ ಸುಯೋಧನಃ’ ]

Mahabharata Tatparya Nirnaya Kannada 22-421-432

 

ಸ ಪಾಣ್ಡವೈರ್ಮ್ಮೋಚಿತಃ ಸಾನುಜಶ್ಚ ಸಭಾರ್ಯ್ಯಕಃ ಕಿಞ್ಚಿದತೋSಪಗಮ್ಯ ।

ಸಮ್ಮೇಳನಾಯೋಪವಿಷ್ಟಶ್ಚ ತತ್ರ  ಸುಬ್ರೀಳಿತಃ ಸೂತಪುತ್ರಂ ದದರ್ಶ ॥೨೨.೪೨೧॥

 

ಪಾಂಡವರಿಂದ ಬೀಳ್ಕೊಟ್ಟವನಾದ, ಅತ್ಯಂತ ಅವಮಾನಿತನಾದ ದುರ್ಯೋಧನನು, ತನ್ನ ತಮ್ಮಂದಿರು ಹಾಗೂ ಪತ್ನಿಯರೊಂದಿಗೆ ದ್ವೈತವನದಿಂದ  ಸ್ವಲ್ಪ ಆಚೆ ತೆರಳಿ, ಆ ಮಾರ್ಗದಲ್ಲೇ ಓಡಿಹೋದ ತನ್ನವರೆಲ್ಲರೂ ಸೇರಲೆಂದು ಅಲ್ಲೇ ಕುಳಿತನು. ಅಲ್ಲಿ ಸೂತಪುತ್ರ ಕರ್ಣನನ್ನು ಕಂಡನು.

 

ಸ ಚಾSಹ ದಿಷ್ಟ್ಯಾ ಜಯಸಿ ರಾಜನ್ನಿತಿ ಸುಯೋಧನಮ್ ।

ಬ್ರೀಳಿತೋ ನೇತಿ ತಂ ಚೋಕ್ತ್ವಾ ಯಥಾವೃತ್ತಂ ಸುಯೋಧನಃ  ॥೨೨.೪೨೨॥

 

ಆಗ ಕರ್ಣನು ದುರ್ಯೋಧನನನ್ನು ಕುರಿತು- ‘ರಾಜನೇ, ದೇವರ ದಯದಿಂದ ಗಂಧರ್ವರನ್ನು ಗೆದ್ದಿದ್ದೀಯ’ ಎಂದು ಹೇಳಿದ.  ಆಗ ಬಹಳ ನಾಚಿಕೊಂಡ ದುರ್ಯೋಧನನು ‘ಇಲ್ಲಾ’ ಎಂದು ಹೇಳಿ, ನಡೆದ ವಿಷಯವನ್ನು ಯಥಾವತ್ತಾಗಿ ಕರ್ಣನಿಗೆ ವಿವರಿಸಿದನು.

 

ಉಕ್ತ್ವಾ ಪ್ರಾಯೋಪವೇಶಂ ಚ ಚಕ್ರೇ ತತ್ರ ಸುದುಃಖಿತಃ ।

ಕರ್ಣ್ಣದುಃಶಾಸನಾಭ್ಯಾಂ ಚ ಸೌಬಲೇನ ಚ ದೇವಿನಾ ॥೨೨.೪೨೩॥

 

ಅನ್ಯೈಶ್ಚಯಾಚ್ಯಮಾನೋSಪಿ ನೈವೋತ್ತಸ್ಥೌ ಸಯೋಧನಃ ।

ತತೋ ನಿಶಾಯಾಂ ಪ್ರಾಪ್ತಾಯಾಂ ಸ್ವಪಕ್ಷೇ ಪ್ರವಿಷೀದತಿ ॥೨೨.೪೨೪॥

 

ಮನ್ತ್ರಯಿತ್ವಾSಸುರೈಃ ಕೃತ್ಯಾ ನಿರ್ಮ್ಮಿತಾ ಹೋಮಕರ್ಮ್ಮಣಾ ।

ಶುಕ್ರೇಣೋತ್ಪಾದಿತಾ ಕೃತ್ಯಾ ಸಾ ಪ್ರಸುಪ್ತೇಷು ಮನ್ತ್ರಿಷು ॥೨೨.೪೨೫॥

 

 

ಧಾರ್ತ್ತರಾಷ್ಟ್ರಂ ಸಮಾದಾಯ ಯಯೌ ಪಾತಾಳಮಾಶು ಚ ।

ಅಥ ಸಮ್ಬೋಧಯಾಮಾಸುರ್ದ್ದೈತ್ಯಾ ದುರ್ಯ್ಯೋಧನಂ ನೃಪಮ್ ॥೨೨.೪೨೬॥

 

ಎಲ್ಲವನ್ನೂ ಕರ್ಣನಿಗೆ ಹೇಳಿ, ಬಹಳ ದುಃಖಿತನಾದ ದುರ್ಯೋಧನನು ಆಮರಣಾಂತ ಉಪವಾಸವ್ರತಕ್ಕೆ ಕುಳಿತನು. ಕರ್ಣ, ದುಃಶ್ಯಾಸನ, ಜೂಜುಕೋರ ಶಕುನಿ, ಉಳಿದವರಿಂದಲೂ ಬೇಡಲ್ಪಟ್ಟರೂ ಕೂಡಾ ದುರ್ಯೋಧನ ಏಳಲಿಲ್ಲ.  

ತದನಂತರ ರಾತ್ರಿಯಾಗಲು, ದೈತ್ಯಪಕ್ಷವು ಕಳೆಗುಂದುತ್ತಿರುವುದನ್ನು ನೋಡಿ, ಅಸುರರು ಏನುಮಾಡವುದೆಂದು ಮಂತ್ರಾಲೋಚನೆಮಾಡಿ, ಹೊಮಕರ್ಮದಿಂದ ಕೃತ್ಯವನ್ನು ಎಬ್ಬಿಸಿದರು. ಶುಕ್ರಾಚಾರ್ಯರಿಂದ ಉತ್ಪಾದಿಸಲ್ಪಟ್ಟ ಆ ಕೃತ್ಯವು ಎಲ್ಲರೂ ಮಲಗಿರಲು ದುರ್ಯೋಧನನನ್ನು ಎತ್ತಿಕೊಂಡು ಪಾತಾಳಕ್ಕೆ ತೆರಳಿತು. ಅಲ್ಲಿ ಎಲ್ಲಾ ದೈತ್ಯರು ದುರ್ಯೋಧನನನ್ನು ಕುರಿತು ಮಾತನಾಡಿದರು-

[ಮಹಾಭಾರತದಲ್ಲಿ(ವನಪರ್ವ ೨೫೨.೨೯) ಈ ವಿವರ ಕಾಣಸಿಗುತ್ತದೆ: ‘ಸಮಾದಾಯಚ ರಾಜಾನಂ ಪ್ರವಿವೇಶ ರಸಾತಳಮ್’ ]

 

ತ್ವಂ ದಿವ್ಯಃ ಪುರುಷೋ ವೀರಃ ಸೃಷ್ಟೋSಸ್ಮಾಭಿಃ ಪ್ರತೋಷಿತಾತ್ ।

ತಪಸಾ ಶಙ್ಕರಾದ್ ವಜ್ರಕಾಯೋSವದ್ಧ್ಯಶ್ಚ ಸರ್ವದಾ ॥೨೨.೪೨೭॥

 

ದುರ್ಯೋಧನನೇ, ನೀನು ಅಲೌಕಿಕ ಪುರುಷನೂ, ವೀರನೂ ಆಗಿದ್ದೀಯ. ನಮ್ಮಿಂದ ಸಂತೋಷಗೊಳಿಸಲ್ಪಟ್ಟ ಶಂಕರನಿಂದ ನೀನು ಸೃಷ್ಟಿಸಲ್ಪಟ್ಟಿದ್ದೀಯ.  ನಿನ್ನ ದೇಹ ವಜ್ರದಂತೆ ಗಟ್ಟಿಯಾಗಿದೆ. ನಿನ್ನನ್ನು ಕೊಲ್ಲಲು ಸಾಧ್ಯವಿಲ್ಲ.

 

ಅಸ್ಮಾಕಂ ಪಕ್ಷಭೂತಸ್ತ್ವಂ ದೇವಾನಾಂ ಚೈವ ಪಾಣ್ಡವಾಃ ।

ಇದಾನೀಂ ಸರ್ವದೇವಾನಾಂ ವರಾತ್ ತ್ವಂ ವಿಜಿತೋ ರಣೇ ॥೨೨.೪೨೮॥

 

ನೀನು ನಮ್ಮ ಪಕ್ಷದವನಾಗಿದ್ದೀಯ. ಪಾಂಡವರು ದೇವತೆಗಳ ಪಕ್ಷದವರು. ಈಗ ಎಲ್ಲಾ ದೇವತೆಗಳ ವರದಿಂದಾಗಿ ನೀನು ಯುದ್ಧದಲ್ಲಿ ಪರಾಜಿತನಾಗಿರುವೆ.

 

ವಯಂ ತಥಾ ಕರಿಷ್ಯಾಮೋ ಯಥಾ ಜ್ಯೇಷ್ಯಸಿ ಪಾಣ್ಡವಾನ್ ।

ಕೃಷ್ಣೇನ ನಿಹತಶ್ಚೈವ ನರಕಃ ಕರ್ಣ್ಣ ಆಸ್ಥಿತಃ ॥೨೨.೪೨೯॥

 

ಹೇಗೆ ನೀನು ಪಾಂಡವರನ್ನು ಗೆಲ್ಲುವಿಯೋ ಹಾಗೆ ನಾವು ಮಾಡುತ್ತೇವೆ. ಕೃಷ್ಣನಿಂದ ಹತನಾದ ನರಕಾಸುರನು ಕರ್ಣನಲ್ಲಿದ್ದಾನೆ.

[ಮಹಾಭಾರತದ ವನಪರ್ವದ ೧೫೩ನೇ ಅಧ್ಯಾಯದಲ್ಲಿ ಈ ಎಲ್ಲಾ ವಿವರಗಳನ್ನು ಕಾಣಬಹುದು. ‘ ತ್ವಮಸ್ಮಾಕಂ ಗತಿರ್ನಿತ್ಯಂ ದೇವತಾನಾಂ ಚ ಪಾಂಡವಾಃ(೨೫)’ ‘ ಹತಸ್ಯ ನರಕಸ್ಯಾSತ್ಮಾ ಕರ್ಣಮೂರ್ತಿಮುಪಾಶ್ರಿತಃ(೨೦) ]

 

ಸ ಚ ಕೃಷ್ಣಾರ್ಜ್ಜುನಾಭಾವಂ ಕರಿಷ್ಯತಿ ನ ಸಂಶಯಃ ।

ಭೀಷ್ಮಾದೀಂಶ್ಚ ವಯಂ ಸರ್ವಾನಾವಿಶಾಮ ಜಯಾಯ ತೇ ॥೨೨.೪೩೦॥

 

ಅವನು ಕೃಷ್ಣಾರ್ಜುನರನ್ನು ಇಲ್ಲದಂತೆ ಮಾಡುತ್ತಾನೆ, ಇದರಲ್ಲಿ ಸಂಶಯಬೇಡ. ನಿನ್ನ ಜಯಕ್ಕಾಗಿ ಭೀಷ್ಮ ಮೊದಲಾದವರನ್ನೂ ಕೂಡಾ ನಾವು ಪ್ರವೇಶಮಾಡುತ್ತೇವೆ.

 

ತಪಸಾ ವರ್ದ್ಧಯಿಷ್ಯಾಮಸ್ತ್ವಾಂ ಕರ್ಣ್ಣಾದೀಂಶ್ಚ ಸರ್ವಶಃ ।

ತಸ್ಮಾದ್ ಗತ್ವಾ ಪಾಲಯಸ್ವ ರಾಜ್ಯಂ ರಾಜನ್ನಪೇತಭೀಃ ॥೨೨.೪೩೧॥

 

ನಿನ್ನನ್ನು, ಕರ್ಣನೇ ಮೊದಲಾದವರನ್ನು ನಾವು ತಪಸ್ಸಿನಿಂದ ಬಲಿಷ್ಠರಾಗುವಂತೆ ನೋಡಿಕೊಳ್ಳುತ್ತೇವೆ. ಆ ಕಾರಣದಿಂದ ಈಗ ಅಳುಕದೇ ಹಿಂತಿರುಗಿ ಧೈರ್ಯದಿಂದ ರಾಜ್ಯಪಾಲನೆ ಮಾಡು.

 

ಇದಂ ಕಸ್ಯಾಪಿ ನಾSಖ್ಯೇಯಂ ಸುಗುಪ್ತಂ ಭೂತಿವರ್ದ್ಧನಮ್ ।

ಇತ್ಯುಕ್ತ್ವಾ ಕೃತ್ಯಯಾ ಭೂಯಃ ಸ್ವಸ್ಥಾನೇ ಸ್ಥಾಪಿತೋ ನೃಪಃ ॥೨೨.೪೩೨॥

 

ಇದು ಅತ್ಯಂತ ಗೋಪ್ಯವಾದದ್ದು ಮತ್ತು ಶ್ರೇಯೋಭಿವೃದ್ಧಿಯನ್ನು ಮಾಡತಕ್ಕದ್ದು. ಹಾಗಾಗಿ ಇದನ್ನು ಯಾರಿಗೂ ಹೇಳಬಾರದು. ಈರೀತಿಯಾಗಿ ದೈತ್ಯರಿಂದ ಹೇಳಲ್ಪಟ್ಟ ರಾಜ ದುರ್ಯೋಧನನು  ಕೃತ್ಯಾದೇವತೆಯಿಂದ ಮತ್ತೆ ಸ್ವಸ್ಥಾನದಲ್ಲಿ ಇಡಲ್ಪಟ್ಟ.