ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 19, 2023

Mahabharata Tatparya Nirnaya Kannada 26-49-58

 

ತಸ್ಮಿನ್ ಹತೇ ಶತ್ರುರವಂ ನಿಶಮ್ಯ ಹರ್ಷೋದ್ಭವಂ ಮಾರುತಿರುಗ್ರವಿಕ್ರಮಃ ।

ವಿಜಿತ್ಯ ಸರ್ವಾನಪಿ ಸೈನ್ಧವಾದೀನ್ ಯುಧಿಷ್ಠಿರಸ್ಯಾನುಮತೇ ನ್ಯಷೀದತ್  ॥೨೬.೪೯॥

 

ಅಭಿಮನ್ಯುವು ಕೊಲ್ಲಲ್ಪಡಲು ಹರ್ಷದಿಂದ ಉಂಟಾದ ಶತ್ರುಗಳ ಧ್ವನಿಯನ್ನು ಕೇಳಿ, ಎಣೆಯಿರದ ಪರಾಕ್ರಮವುಳ್ಳ ಭೀಮಸೇನನು ಜಯದ್ರಥ ಮೊದಲಾದ ಎಲ್ಲರನ್ನೂ ಗೆದ್ದು, ಯುಧಿಷ್ಠಿರನ ಅನುಮತಿಯಿಂದಲೇ ಅವನ ಸಮೀಪದಲ್ಲಿ ನಿಂತ.

 

ವ್ಯಾಸಸ್ತದಾ ತಾನಮಿತಾತ್ಮವೈಭವೋ  ಯುಧಿಷ್ಠಿರಾದೀನ್ ಗ್ಲಪಿತಾನಭೋಧಯತ್ ।

ವಿಜಿತ್ಯ ಸಂಶಪ್ತಕಪೂಗಮುಗ್ರೋ ನಿಶಾಗಮೇ ವಾಸವಿರಾಪ ಸಾಚ್ಯುತಃ ॥೨೬.೫೦॥

 

ಆಗ ಎಣೆಯಿರದ ಆತ್ಮ ವೈಭವವುಳ್ಳ, ಸುಖ ಮೊದಲಾದ ಗುಣಗಳುಳ್ಳ ವೇದವ್ಯಾಸರು, ಅಭಿಮನ್ಯುವಿನ ಸಾವಿನಿಂದ ನೊಂದ ಯುಧಿಷ್ಠಿರ ಮೊದಲಾದವರಿಗೆ ಬೋಧಿಸಿ ಅವರ ದುಃಖವನ್ನು ಶಮನಗೊಳಿಸಿದರು. ಇತ್ತ ಸಂಶಪ್ತಕರ ಸಮೂಹವನ್ನು ಗೆದ್ದು, ರಾತ್ರಿಯಾಗುತ್ತಿರಲು ಕೃಷ್ಣನಿಂದೊಡಗೂಡಿದ ಅರ್ಜುನನು ಶಿಬಿರಕ್ಕೆ ಹಿಂತಿರುಗಿದ. (ಇಲ್ಲಿಗೆ ಹದಿಮೂರನೇ ದಿನದ ಯುದ್ಧ ಮುಕ್ತಾಯವಾಯಿತು).

 

ನಿಶಮ್ಯ ಪುತ್ರಸ್ಯ ವಧಂ ಭೃಶಾರ್ತ್ತಃ ಪ್ರತಿಶ್ರವಂ ಸೋSಥ ಚಕಾರ ವೀರಃ ।

ಜಯದ್ರಥಸ್ಯೈವ ವಧೇ ನಿಶಾಯಾಂ ಸ್ವಪ್ನೇSನಯತ್ ತಂ ಗಿರಿಶಾನ್ತಿಕಂ ಹರಿಃ ॥೨೬.೫೧॥

 

ಮಗನಾದ ಅಭಿಮನ್ಯುವಿನ ಸಾವನ್ನು ಕೇಳಿ ಸಂಕಟಗೊಂಡ ಅರ್ಜುನನು ಜಯದ್ರಥನ ಸಂಹಾರದಲ್ಲಿ ಪ್ರತಿಜ್ಞೆಮಾಡಿದನು. (ನಾಳೆ ಸಂಜೆಯೊಳಗೆ ಜಯದ್ರಥನನ್ನು ಕೊಲ್ಲುತ್ತೇನೆ, ಇಲ್ಲದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ ಎನ್ನುವ ಪ್ರತಿಜ್ಞೆ). ಶ್ರೀಕೃಷ್ಣ ಪರಮಾತ್ಮನು ರಾತ್ರಿಯಾಗಲು ಕನಸಿನಲ್ಲಿ ಅರ್ಜುನನನ್ನು ರುದ್ರನ ಸಮೀಪ ಕೊಂಡೊಯ್ದ.

 

ಸ್ವಯಮೇವಾಖಿಲಜಗದ್ರಕ್ಷಾದ್ಯಮಿತಶಕ್ತಿಮಾನ್ ।

ಅಪ್ಯಚ್ಯುತೋ ಗುರುದ್ವಾರಾ ಪ್ರಸಾದಕೃದಹಂ ತ್ವಿತಿ ॥೨೬.೫೨॥

 

ಜ್ಞಾಪಯನ್ ಫಲ್ಗುನಸ್ಯಾಸ್ತ್ರಗುರುಂ ಗಿರಿಶಮಞ್ಜಸಾ ।

ಪ್ರಾಪಯಿತ್ವೈನಮೇವೈತತ್ಪ್ರಸಾದಾದಸ್ತ್ರಮುದ್ಬಣಮ್ ।

ಚಕ್ರೇ ತದರ್ಥಮೇವಾಸ್ಯ ರಕ್ಷಾಂ ಚಕ್ರೇ ತದಾತ್ಮಿಕಾಮ್ ॥೨೬.೫೩॥

 

ತಾನೇ ಎಲ್ಲಾ ಜಗತ್ತಿನ ರಕ್ಷಣೆ ಮೊದಲಾದವುಗಳಲ್ಲಿ ಎಣೆಯಿರದ ಶಕ್ತಿಯುಳ್ಳವನಾದರೂ, ಶ್ರೀಕೃಷ್ಣನು ‘ಸ್ವರೂಪಯೋಗ್ಯ ಗುರುಗಳ ಮೂಲಕವೇ ಅನುಗ್ರಹವನ್ನು ಮಾಡುತ್ತೇನೆ’ ಎಂದು ಜಗತ್ತಿಗೆ ತಿಳಿಸುತ್ತಾ, ಅರ್ಜುನನಿಗೆ ಅಸ್ತ್ರಾದಿಗಳಿಗೆ ಗುರುವಾಗಿರುವ ರುದ್ರದೇವರನ್ನು ಕುರಿತು ಹೊಂದಿಸಿ, ಅವನ ಅನುಗ್ರಹದಿಂದ ಉಗ್ರವಾಗಿರುವ ಪಾಶುಪತಾಸ್ತ್ರವನ್ನು ಮತ್ತೆ ಹೊಂದಿಸಿ, ಅವನಿಗಾಗಿಯೇ ರುದ್ರ ದೇವರ ರಕ್ಷಣೆಯನ್ನು ಮಾಡಿದನು.

[ತಾತ್ಪರ್ಯ: ರಾತ್ರಿ ಮಲಗಿದಾಗ ಅರ್ಜುನನನ್ನು ಅವನ ಕನಸಿನಲ್ಲಿ ಕೃಷ್ಣ ರುದ್ರದೇವರ ಬಳಿ ಕೊಂಡೊಯ್ದು,  ಶಿವರಕ್ಷೆ ಅರ್ಜುನನ ಮೇಲೆ ಇರುವಂತೆ ಮಾಡಿದ. ಸ್ವರೂಪ ಗುರುಗಳ ಮೂಲಕವೇ ಪರಮಾತ್ಮ ಅನುಗ್ರಹವನ್ನು ಮಾಡುತ್ತಾನೆ. ಹಾಗಾಗಿ ಇಂದ್ರನ ಸ್ವರೂಪ ಗುರುವಾದ  ರುದ್ರದೇವರ ಮುಖೇನ ಕೃಷ್ಣ ಈ ಕೆಲಸವನ್ನು ಮಾಡಿಸಿದ.]

  

ಸಾನ್ತ್ವಯಿತ್ವಾ ಸುಭದ್ರಾಂ ಚ ಗತ್ವೋಪಪ್ಲಾವ್ಯಮಚ್ಯುತಃ ।

ಯೋಜಯಿತ್ವಾ ರಥಂ ಪ್ರಾತಃ ಸಾರ್ಜ್ಜುನೋ ಯುದ್ಧಮಭ್ಯಯಾತ್ ॥೨೬.೫೪॥

 

ಶ್ರೀಕೃಷ್ಣನು ಉಪಪ್ಲಾವ್ಯಕ್ಕೆ ಹೋಗಿ, ಸುಭದ್ರೆಯನ್ನು ಸಾಂತ್ವನಗೊಳಿಸಿ, ಬೆಳಿಗ್ಗೆ ರಥವನ್ನು ಸಿದ್ಧಗೊಳಿಸಿ, ಅರ್ಜುನನೊಡಗೂಡಿ ಯುದ್ಧಕ್ಕೆಂದು ತೆರಳಿದ.

 

ಶ್ರುತ್ವಾ ಪ್ರತಿಜ್ಞಾಂ ಪುರುಹೂತಸೂನೋರ್ದ್ದುರ್ಯ್ಯೋಧನೇನಾರ್ತ್ಥಿತಃ ಸಿನ್ಧುರಾಜಮ್ ।

ತ್ರಾತಾಸ್ಮ್ಯಹಂ ಸರ್ವಥೇತಿ ಪ್ರತಿಜ್ಞಾಂ ಕೃತ್ವಾ ದ್ರೋಣೋ ವ್ಯೂಹಮಭೇದ್ಯಮಾತನೋತ್ ॥೨೬.೫೫॥

 

ಅರ್ಜುನನ ಪ್ರತಿಜ್ಞೆಯನ್ನು ಕೇಳಿ, ದುರ್ಯೋಧನನಿಂದ ಪ್ರಾರ್ಥಿಸಲ್ಪಟ್ಟ ದ್ರೋಣಾಚಾರ್ಯರು- ‘ಜಯದ್ರಥನನ್ನು ಎಲ್ಲಾ ರೀತಿಯಿಂದ ರಕ್ಷಿಸುತ್ತೇನೆ’ ಎಂದು ಪ್ರತಿಜ್ಞೆಯನ್ನು ಮಾಡಿ, ಭೇದಿಸಲಾಗದ ಯುದ್ಧ ವ್ಯೂಹವನ್ನು ರಚಿಸಿದರು.

 

ಸ ದಿವ್ಯಮಗ್ರ್ಯಂ ಶಕಟಾಬ್ಜಚಕ್ರಂ ಕೃತ್ವಾ ಸ್ವಯಂ ವ್ಯೂಹಮುಖೇ ವ್ಯವಸ್ಥಿತಃ ।

ಪೃಷ್ಠೇ ಕರ್ಣ್ಣದ್ರೌಣಿಕೃಪೈಃ ಸಶಲ್ಯೈರ್ಜ್ಜಯದ್ರಥಂ ಗುಪ್ತಮಧಾತ್ ಪರೈಶ್ಚ ॥೨೬.೫೬॥

 

ದ್ರೋಣಾಚಾರ್ಯರು ದಿವ್ಯವಾದ ಶಕಟಾಬ್ಜಚಕ್ರವನ್ನು (ಹೊರಗೆ ಬಂಡಿಯ ಆಕಾರ, ಅದರ ಒಳಗೆ ಪದ್ಮಾಕಾರದ ವ್ಯೂಹ ನಂತರ ಮಧ್ಯದಲ್ಲಿ ಚಕ್ರಾಕಾರದ ವ್ಯೂಹ) ಮಾಡಿ, ತಾನೇ ವ್ಯೂಹದ ಮುಂಭಾಗದಲ್ಲಿ ನಿಂತರು. ಹಿಂಭಾಗದಲ್ಲಿ ಕರ್ಣ, ಅಶ್ವತ್ಥಾಮ, ಕೃಪಾ, ಶಲ್ಯ, ಮೊದಲಾದವರಿಂದ ಜಯದ್ರಥನನ್ನು ರಕ್ಷಿತನನ್ನಾಗಿ ಮಾಡಿದರು.

 

ಅಥಾರ್ಜ್ಜುನೋ ದಿವ್ಯರಥೋಪರಿಸ್ಥಿತಃ ಸುರಕ್ಷಿತಃ ಕೇಶವೇನಾವ್ಯಯೇನ ।

ವಿಜಿತ್ಯ ದುರ್ಮ್ಮರ್ಷಣಮಗ್ರತೋSಭ್ಯಯಾದ್ ದ್ರೋಣಂ ಸುಧನ್ವಾ ಗುರುಮುಗ್ರಪೌರುಷಃ ॥೨೬.೫೭॥

 

ತದನಂತರ ಅಲೌಕಿಕವಾದ ರಥದಮೇಲೆ ಕುಳಿತ, ನಾಶವಿರದ ಶ್ರೀಕೃಷ್ಣನಿಂದ ರಕ್ಷಿತನಾದ ಧನುರ್ಧಾರಿ ಅರ್ಜುನನು ಮೊದಲು ಎದುರಾದ ದುರ್ಯೋಧನನ ತಮ್ಮ ದುರ್ಮರ್ಷಣನನ್ನು ಸುಲಭವಾಗಿ ಗೆದ್ದು,  ಉಗ್ರಪೌರುಷವುಳ್ಳವನಾಗಿ ದ್ರೋಣಾಚಾರ್ಯರನ್ನು ಎದುರುಗೊಂಡ.

 

ಪ್ರದಕ್ಷಿಣೀಕೃತ್ಯ ತಮಾಶ್ವಗಾತ್ ತತಃ ಕಾಲಾತ್ಯಯಂ ತ್ವೇವ ವಿಶಙ್ಕಮಾನಃ ।

ರಥಂ ಮನೋವೇಗಮಥಾನಯದ್ಧರಿರ್ಯ್ಯಥಾ ಶರಾಃ ಪೇತುರಮುಷ್ಯ ಪೃಷ್ಠತಃ ॥೨೬.೫೮॥

 

(ಜಯದ್ರಥನ ಸಂಹಾರಕ್ಕೆ ಸಮಯ ಸಾಲದು ಎಂದು) ಅರ್ಜುನನು  ದ್ರೋಣಾಚಾರ್ಯರೊಂದಿಗೆ ಯುದ್ಧ ಮಾಡದೇ,  ಕೂಡಲೇ ಅವರಿಗೆ (ತನ್ನ ರಥದಲ್ಲೇ) ಪ್ರದಕ್ಷಿಣೆ ಮಾಡಿ ಮುಂದೆ ಹೋದನು. ಆಗ ಶ್ರೀಕೃಷ್ಣ ಪರಮಾತ್ಮನು ಮನೋವೇಗದಲ್ಲಿ ರಥವನ್ನು ಕೊಂಡೊಯ್ದ. ಇದರಿಂದ ಅರ್ಜುನನನ್ನು ಗುರಿಯಾಗಿ ಬಿಟ್ಟ ಬಾಣಗಳು ಅವನನ್ನು ತಲುಪದೇ ಅವನ ಹಿಂದೆ ಬೀಳುವಂತಾಯಿತು.

[‘ಗುರುರ್ಭವಾನ್ ನ ಮೇ ಶತ್ರುಃ  ಶಿಷ್ಯಃ ಪುತ್ರಸಮೋSಸ್ಮಿ ತೇ’ (ದ್ರೋಣಪರ್ವ ೯೧.೩೬) ‘ನೀವು ನಮ್ಮ ಗುರುಗಳು, ನನ್ನ ಶತ್ರು ಅಲ್ಲ, ನಾನು ನಿಮ್ಮ ಶಿಷ್ಯ. ಶಿಷ್ಯ ಮಗನ ಸಮಾನನಲ್ಲವೇ?  ಹೀಗಾಗಿ ನನ್ನನ್ನು ತಡೆಯಬೇಡಿ’ ಎಂದು ಹೇಳಿ ಅರ್ಜುನ ಮುಂದುವರಿದ.

ಮಹಾಭಾರತ ಶ್ರೀಕೃಷ್ಣನ ರಥದ ವೇಗವನ್ನು ಹೀಗೆ ವಿವರಿಸುತ್ತದೆ: ‘ರಥಸ್ಥಿತೋSಗ್ರತಃ ಕ್ರೋಶಂ ಯಾನಸ್ಯತ್ಯರ್ಜುನಃ ಶರಾನ್ । ರಥೇ ಕ್ರೋಶಮತಿಕ್ರಾನ್ತೇ ತಸ್ಯ ತೇ ಘ್ನನ್ತಿ ಶಾತ್ರವಾನ್’ (೯೯.೧) ಅರ್ಜುನನು ತನ್ನ ಶರಗಳನ್ನು ಕ್ರೋಶಮಾತ್ರ ದೂರ(ಮೈಲಿ ದೂರ)  ಪ್ರಯೋಗಿಸಲು, ಅವುಗಳು ಅವನ ರಥವು ಆ ಕ್ರೋಶ ದೂರವನ್ನು ದಾಟಿ ಬರುವಷ್ಟರಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದವು. (ಅಂದರೆ ರಥದ ವೇಗ ಬಾಣದ ವೇಗಕ್ಕಿಂತ ಹೆಚ್ಚಾಗಿತ್ತು)]

Friday, February 17, 2023

Mahabharata Tatparya Nirnaya Kannada 26-36-48

 

ಪ್ರಾಗ್ಜ್ಯೋತಿಷೇ ನಿಹತೇSಥಾಗ್ರಹಾಚ್ಚ ಯುಧಿಷ್ಠಿರಸ್ಯಾತಿವಿಷಣ್ಣರೂಪಃ ।

ದುರ್ಯ್ಯೋಧನೋSಶ್ರಾವಯದ್ ದೀನವಾಕ್ಯಾನ್ಯತ್ರ ದ್ರೋಣಂ ಸೋSಪಿ ನೃಪಂ ಜಗಾದ ॥ ೨೬.೩೬ ॥

 

ಬಲಿಷ್ಠನಾದ ಭಗದತ್ತನು ಕೊಲ್ಲಲ್ಪಡುತ್ತಿರಲು, ಯುಧಿಷ್ಠಿರನ ಬಂಧನ ಸಾಧ್ಯವಾಗದೇ ಇದ್ದುದರಿಂದ ಅತ್ಯಂತ ವಿಷಾದಕ್ಕೆ ಒಳಗಾದ ದುರ್ಯೋಧನನು ರಾತ್ರಿ ದೀನ ವಾಕ್ಯಗಳನ್ನಾಡಿದನು. ಆಗ ದ್ರೋಣಾಚಾರ್ಯರು ಹೀಗೆ ಹೇಳಿದರು-

[ಮಹಾಭಾರತ: ‘ನೂನಂ ವಯಂ ವಧ್ಯಪಕ್ಷೇ ಭವತೋ ದ್ವಿಜಸತ್ತಮ । ತಥಾಹಿ ನಾಗ್ರಹೀಃ ಪ್ರಾಪ್ತಂ ಸಮೀಪೇSದ್ಯ ಯುಧಿಷ್ಠಿರಮ್’ ‘ಆಚಾರ್ಯರೇ, ನಾವು ನಿಮ್ಮ ಶತ್ರುಪಕ್ಷದಲ್ಲಿದ್ದೆವೋ ಅಥವಾ ನಮ್ಮ ಶತ್ರುಪಕ್ಷದಲ್ಲಿ ನೀವಿದ್ದೀರೋ ತಿಳಿಯುತ್ತಿಲ್ಲ. ಯುಧಿಷ್ಠಿರನು ಸಮೀಪದಲ್ಲೇ ಸಿಕ್ಕಿದ್ದರೂ ಕೂಡಾ ಅವನನ್ನು ನೀವು ಸೆರೆಹಿಡಿಯಲಿಲ್ಲ’ ಎನ್ನುತ್ತಾನೆ ದುರ್ಯೋಧನ (ದ್ರೋಣಪರ್ವ ೩೩.೭)]

 

ಪಾರ್ತ್ಥೇ ಗತೇ ಶ್ವೋ ನೃಪತಿಂ ಗ್ರಹೀಷ್ಯೇ ನಿಹನ್ಮಿ ವಾ ತತ್ಸದೃಶಂ ತದೀಯಮ್ ।

ಇತಿ ಪ್ರತಿಜ್ಞಾಂ ಸ ವಿಧಾಯ ಭೂಯಃ  ಪ್ರಾತರ್ಯ್ಯಯೌ ಯುದ್ಧಮಾಕಾಙ್ಕ್ಷಮಾಣಃ ॥ ೨೬.೩೭ ॥

 

‘ನಾಳೆ ಅರ್ಜುನ ಹೋಗುತ್ತಿರಲು ಯುಧಿಷ್ಠಿರನನ್ನು ಹಿಡಿದು ಕೊಡುತ್ತೇನೆ ಅಥವಾ ಅವನಿಗೆ ಸಮಾನನಾದ ಪಾಂಡವ ಪಕ್ಷದ ವೀರನನ್ನು ಕೊಲ್ಲುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ ದ್ರೋಣಾಚಾರ್ಯರು, ಮತ್ತೆ ಬೆಳಿಗ್ಗೆ ಯುದ್ಧವನ್ನು ಬಯಸಿ ತೆರಳಿದನು.

 

ಪದ್ಮವ್ಯೂಹಂ ವ್ಯೂಹ್ಯ ಪರೈರಭೇದ್ಯಂ ವರಾದ್ ವಿಷ್ಣೋಸ್ತಸ್ಯ ಮನ್ತ್ರಂ ಹ್ಯಜಪ್ತ್ವಾ।

ಪಾರ್ತ್ಥಾಶ್ಚ ತಂ ಪ್ರಾಪುರ್ಋತೇSರ್ಜ್ಜುನೇನ ಸಂಶಪ್ತಕೈರ್ಯ್ಯುಯುಧೇ ಸೋSಪಿ ವೀರಃ ॥ ೨೬.೩೮ ॥

 

ನಾರಾಯಣನ ವರದಿಂದ, ನಾರಾಯಣ ಮಂತ್ರವನ್ನು ಜಪಿಸದೇ ಭೇದಿಸಲಾಗದ ಪದ್ಮವ್ಯೂಹವನ್ನು ಯುದ್ಧದಲ್ಲಿ ಸ್ಥಾಪಿಸಿ ದ್ರೋಣಾಚಾರ್ಯರು ಯುದ್ಧವನ್ನಾರಂಭಿಸಿದರು. ಪಾಂಡವರಾದರೋ, ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿದ್ದ ಅರ್ಜುನನನ್ನು ಹೊರತು ವ್ಯೂಹದ ಬಳಿ ಬಂದರು.

[ಇಲ್ಲಿ ನಮಗೆ ಹಲವಾರು ಸಮಸ್ಯೆ ಪರಿಹಾರವಾಗುತ್ತದೆ. ಉತ್ತರದ ಪಾಠದಲ್ಲಿ ಅಭಿಮನ್ಯು ಚಕ್ರವ್ಯೂಹದೊಳಗೆ ಸಿಕ್ಕಿ ಸತ್ತ ಎಂದಿದ್ದಾರೆ. ಆದರೆ ಪ್ರಾಚೀನ ಪಾಠದ ಪ್ರಕಾರ ಅದು ಪದ್ಮವ್ಯೂಹ.  ಈಗ ನಾವು ಕೇಳುವ ಕಥೆಗಳಲ್ಲಿ - ಕೃಷ್ಣ ಸುಭದ್ರೆಗೆ ಚಕ್ರವ್ಯೂಹ ಭೇದಿಸುವ ವಿಧಾನವನ್ನು ಹೇಳುತ್ತಿದ್ದ, ಅಭಿಮನ್ಯು ಗರ್ಭದ ಒಳಗಡೆ ಕುಳಿತು ಅದನ್ನು ಕೇಳುತ್ತಿದ್ದ, ಕೃಷ್ಣ ಚಕ್ರವ್ಯೂಹದ ಒಳಗೆ ಹೋಗುವುದನ್ನು ಹೇಳಿದ, ಆದರೆ ಹೊರಗೆ ಬರುವುದನ್ನು ಹೇಳಲಿಲ್ಲಾ ಎಂದಿದೆ. ಆದರೆ ಇದು ಅತ್ಯಂತ ಅಬದ್ದವಾದ ಕಥೆ. ಇಲ್ಲಿ ಆಚಾರ್ಯರು ಹೇಳುತ್ತಾರೆ- ದ್ರೋಣಾಚಾರ್ಯರು ರಚಿಸಿದ ವ್ಯೂಹವನ್ನು ಭೇದಿಸಲು ಒಂದು ಕಾಮ್ಯಮಂತ್ರವನ್ನು ಜಪಮಾಡಬೇಕಾಗಿತ್ತು. ಅದು ನಾರಾಯಣ ದೇವತಾಕವಾದ ಮಂತ್ರ. ಆ ಮಂತ್ರವನ್ನು ಜಪ ಮಾಡದೇ ಪದ್ಮವ್ಯೂಹವನ್ನು ಭೇದಿಸಿ ಒಳಗೆ ಹೋಗಲು ಸಾಧ್ಯವಿರಲಿಲ್ಲ]      

 

 

ಪಾರ್ತ್ಥಾ ವ್ಯೂಹಂ ತು ತಂ ಪ್ರಾಪ್ಯ ನಾಶಕನ್ ಬೇತ್ತುಮುದ್ಯತಾಃ ।

ಜಾನಂಶ್ಚ ಪ್ರತಿಭಾಯೋಗಾತ್ ಕಾಮ್ಯಂ ನೈವಾಜಪನ್ಮನುಮ್ ॥ ೨೬.೩೯ ॥

 

ಪಾಂಡವರು ಆ ಪದ್ಮವ್ಯೂಹವನ್ನು ಹೊಂದಿ, ಅದನ್ನು ಭೇದಿಸಲು ಸಿದ್ಧರಾದರು. ಆದರೆ  ವ್ಯೂಹವನ್ನು ಒಡೆಯಲು ಅವರು ಸಮರ್ಥರಾಗಲಿಲ್ಲ. ಭೀಮಸೇನನಲ್ಲಿ ವ್ಯೂಹವನ್ನು ಭೇದಿಸುವ ಶಕ್ತಿ ಇದ್ದರೂ ಅವನು   ಕಾಮ್ಯಮಂತ್ರವನ್ನು ಹೇಳಲಿಲ್ಲ.

 

ಭೀಮೋ ಯುಧಿಷ್ಠಿರಸ್ತತ್ರ ತಜ್ಜ್ಞಂ ಸೌಭದ್ರಮಬ್ರವೀತ್ ।

ಭಿನ್ಧಿ ವ್ಯೂಹಮಿಮಂ ತಾತ ವಯಂ ತ್ವಾಮನುಯಾಮಹೇ ॥ ೨೬.೪೦ ॥

 

ಆಗ ಯುಧಿಷ್ಠಿರನು ವ್ಯೂಹಭೇದ ಮಂತ್ರವನ್ನು ತಿಳಿದಿರುವ ಅಭಿಮನ್ಯುವನ್ನು ಕುರಿತು, ‘ಮಗನೇ, ಈ ಪದ್ಮವ್ಯೂಹವನ್ನು ಭೇದಿಸು, ನಾವು ನಿನ್ನನ್ನು ಅನುಸರಿಸುತ್ತೇವೆ’ ಎಂದ.

 

ಸ ಏವಮುಕ್ತೋ ರಥಿನಾಂ ಪ್ರಬರ್ಹೋ ವಿವೇಶ ಭಿತ್ತ್ವಾ ಧ್ವಿಷತಾಂ ಚಮೂಂ ತಾಮ್ ।

ಅನ್ವೇವ ತಂ ವಾಯುಸುತಾದಯಶ್ಚ ವಿವಿಕ್ಷವಃ ಸೈನ್ಧವೇನೈವ ರುದ್ಧಾಃ ॥ ೨೬.೪೧ ॥

 

ವರೇಣ ರುದ್ರಸ್ಯ ನಿರುದ್ಧ್ಯಮಾನೋ ಜಯದ್ರಥೇನಾತ್ರ ವೃಕೋದರಸ್ತು ।

ವಿಷ್ಣೋರಭೀಷ್ಟಂ ವಧಮಾರ್ಜ್ಜುನೇಸ್ತದಾ ವಿಜ್ಞಾಯ ಶಕ್ತೋSಪಿ ನಚಾತ್ಯವರ್ತ್ತತ ॥ ೨೬.೪೨ ॥

 

ಈರೀತಿಯಾಗಿ ಹೇಳಲ್ಪಟ್ಟ, ರಥಿಕ ವೀರರಲ್ಲೇ ಅಗ್ರಗಣ್ಯನಾದ ಅಭಿಮನ್ಯುವು ಶತ್ರುಗಳ ಆ ಸೇನೆಯನ್ನು ಭೇದಿಸಿ ವ್ಯೂಹವನ್ನು ಪ್ರವೇಶಿಸಿದನು. ಭೀಮಸೇನ, ನಕುಲ-ಸಹದೇವ, ಯುಧಿಷ್ಠಿರರು ಅಭಿಮನ್ಯುವನ್ನು ಅನುಸರಿಸಿ, ವ್ಯೂಹವನ್ನು ಪ್ರವೇಶಮಾಡಲು ಬಯಸಿ ಜಯದ್ರಥನಿಂದ ತಡೆಹಿಡಿಯಲ್ಪಟ್ಟರು.

ರುದ್ರ ದೇವರ ವರದಿಂದ ಜಯದ್ರಥನಿಂದ ತಡೆಯಲ್ಪಟ್ಟ ಭೀಮಸೇನನು ಶಕ್ತನಾಗಿದ್ದರೂ ಕೂಡಾ  ಅಭಿಮನ್ಯುವಿನ ಸಾವು ಕೃಷ್ಣನಿಗೆ ಅಭೀಷ್ಟ ಎಂದು ತಿಳಿದು, ಜಯದ್ರಥನನ್ನು ಮೀರಲಿಲ್ಲ.

[ತಾತ್ಪರ್ಯ : ಹಿಂದೆ ಕಾಡಿನಲ್ಲಿ ಜಯದ್ರಥ ದ್ರೌಪದಿಯನ್ನು ಅವಮಾನ ಮಾಡಿದ ಪ್ರಸಂಗವನ್ನು ನಾವು ಈ ಹಿಂದೆ ನೋಡಿದ್ದೇವೆ. ಆಗ ರುದ್ರದೇವರು ಅರ್ಜುನನನ್ನು ಬಿಟ್ಟು ಉಳಿದ ನಾಲ್ಕು ಜನ ಪಾಂಡವರನ್ನು ಒಂದು ವಿಶೇಷ ಸಂದರ್ಭದಲ್ಲಿ ತಡೆಹಿಡಿಯಬಲ್ಲ ಸಾಮರ್ಥ್ಯದ  ವರವನ್ನು ಜಯದ್ರಥನಿಗೆ ನೀಡಿದ್ದರು. ಇಲ್ಲಿ ಭೀಮಸೇನ ರುದ್ರದೇವರ ವರವನ್ನು ಗೌರವಿಸಿದ. ಭೀಮ ಮೀರಬಹುದಿತ್ತು ಆದರೆ ಪರಮಾತ್ಮನ ಸಂಕಲ್ಪ ಅಭಿಮನ್ಯು ಸಾಯಬೇಕು ಎನ್ನುವುದಾಗಿತ್ತು. ಹೀಗಾಗಿ ಶಕ್ತನಾದರೂ ಮೀರಲಿಲ್ಲ.]

 

 

ಜಯದ್ರಥಸ್ಥೇನ ವೃಷಧ್ವಜೇನ ಪ್ರಯುದ್ಧ್ಯಮಾನೇಷು ವೃಕೋದರಾದಿಷು ।

ಪ್ರವಿಶ್ಯ ವೀರಃ ಸ ಧನಞ್ಜಯಾತ್ಮಜೋ ವಿಲೋಳಯಾಮಾಸ ಪರೋರುಸೇನಾಮ್ ॥ ೨೬.೪೩ ॥

 

ಜಯದ್ರಥನ ಒಳಗಿರುವ ರುದ್ರನ ಜೊತೆಗೆ ಭೀಮಸೇನ ಮೊದಲಾದವರು ಯುದ್ಧ ಮಾಡುತ್ತಿರಲು, ವೀರನಾಗಿರುವ, ಅರ್ಜುನನ ಮಗನಾಗಿರುವ ಅಭಿಮನ್ಯುವು ಕೌರವ ಸೇನೆಯನ್ನು ಪ್ರವೇಶಿಸಿ, ಶತ್ರುಗಳ ಸೇನೆಯನ್ನು ಉಲ್ಲೋಲಕಲ್ಲೋಲ ಮಾಡಿದ.

 

ಸ ದ್ರೋಣದುರ್ಯ್ಯೋಧನಕರ್ಣ್ಣಶಲ್ಯೈ ರ್ದ್ದ್ರೌಣ್ಯಗ್ರಣೀಭಿಃ ಕೃತವರ್ಮ್ಮಯುಕ್ತೈಃ ।

ರುದ್ಧಶ್ಚಚಾರಾರಿಬಲೇಷ್ವಭೀತಃ ಶಿರಾಂಸಿ ಕೃನ್ತಂಸ್ತದನುಬ್ರತಾನಾಮ್ ॥ ೨೬.೪೪ ॥

 

ಅಭಿಮನ್ಯುವು ದ್ರೋಣ, ದುರ್ಯೋಧನ, ಕರ್ಣ, ಶಲ್ಯ, ಅಶ್ವತ್ಥಾಮ, ಮೊದಲಾದವರೇ ಮುಂದಾಳುಗಳಾಗಿರುವವರಿಂದಲೂ, ಕೃತವರ್ಮನಿಂದ ಕೂಡಿರುವ ಸೇನೆಯಿಂದಲೂ ತಡೆಯಲ್ಪಟ್ಟರೂ, ಭಯವಿಲ್ಲದೇ ಆ ಎಲ್ಲಾ ದೊಡ್ಡ ದೊಡ್ಡ ವೀರರ ಅನುಯಾಯಿಗಳ ತಲೆಯನ್ನು ತರಿಯುತ್ತಾ  ಆರಾಮವಾಗಿ ಶತ್ರುಸೈನ್ಯಗಳಲ್ಲಿ ಸಂಚಾರಮಾಡಿದನು.

 

ಸ ಲಕ್ಷಣಂ ರಾಜಸುತಂ ಪ್ರಸಹ್ಯ ಪಿತುಃ ಸಮೀಪೇSನಯದಾಶು ಮೃತ್ಯವೇ ।

ಬೃಹದ್ಬಲಂ ಚೋತ್ತಮವೀರ್ಯ್ಯಕರ್ಮ್ಮಾ ವರಂ ರಥಾನಾಮಯುತಂ ಚ ಪತ್ರಿಭಿಃ ॥ ೨೬.೪೫ ॥

 

ಅಭಿಮನ್ಯುವು ದುರ್ಯೋಧನನ ಮಗನಾಗಿರುವ ಲಕ್ಷಣನನ್ನು ತಂದೆಯಾದ ದುರ್ಯೋಧನನ ಸಮೀಪದಲ್ಲೇ ಆಕ್ರಮಿಸಿ ಕೊಂದ. ಬೃಹದ್ಬಲನನ್ನು ಕೊಂದ ಅಭಿಮನ್ಯು, ಉತ್ಕೃಷ್ಟ ಪರಾಕ್ರಮವುಳ್ಳ, ಶ್ರೇಷ್ಠವಾದ ಹತ್ತುಸಾವಿರ ರಥಿಕರನ್ನು ಬಾಣಗಳಿಂದ ಕೊಂದುಹಾಕಿದ.

 

ದ್ರೋಣಾದಯಸ್ತಂ ಹರಿಕೋಪಭೀತಾಃ ಪ್ರತ್ಯಕ್ಷತೋ ಹನ್ತುಮಶಕ್ನುವನ್ತಃ ।

ಸಮ್ಮನ್ತ್ರ್ಯ ಕರ್ಣ್ಣಂ ಪುರತೋ ನಿಧಾಯ ಚಕ್ರುರ್ವಿಚಾಪಾಶ್ವರಥಂ ಕ್ಷಣೇನ ॥ ೨೬.೪೬ ॥

 

ಇವನನ್ನು ಕೊಂದರೆ ಎಲ್ಲಿ ಕೃಷ್ಣನಿಗೆ ಕೋಪ ಬರುತ್ತದೋ ಎಂದು ಭಯಗೊಂಡ ದ್ರೋಣಾದಿಗಳು ಪ್ರತ್ಯಕ್ಷವಾಗಿ ಅಭಿಮನ್ಯುವನ್ನು ಕೊಲ್ಲಲು ಅಶಕ್ತರಾಗಿ, ಕರ್ಣನ ಜೊತೆ ಮಂತ್ರಾಲೋಚನೆ ಮಾಡಿ, ಕರ್ಣನನ್ನು ಮುಂದೆ ಇಟ್ಟು, ಕ್ಷಣದಲ್ಲಿ ಅವನ ಬಿಲ್ಲನ್ನೂ, ಕುದುರೆಯನ್ನೂ, ರಥವನ್ನೂ ನಾಶಮಾಡಿದರು.

 

ಕರ್ಣ್ಣೋ ಧನುಸ್ತಸ್ಯ ಕೃಪಶ್ಚ ಸಾರಥೀ ದ್ರೋಣೋ ಹಯಾನಾಶು ವಿಧಮ್ಯ ಸಾಯಕೈಃ ।

ಸಚರ್ಮ್ಮಖಡ್ಗಂ ರಥಚಕ್ರಮಸ್ಯ ಪ್ರಣುದ್ಯ ಹಸ್ತಸ್ಥಿತಮೇವ ತಸ್ಥುಃ ॥ ೨೬.೪೭ ॥

 

ಕರ್ಣನು ಅಭಿಮನ್ಯುವಿನ ಬಿಲ್ಲನ್ನೂ, ಕೃಪಾಚಾರ್ಯರು ಅವನ ಸಾರಥಿಯನ್ನೂ, ದ್ರೋಣಾಚಾರ್ಯರು ಕುದುರೆಗಳನ್ನೂ ಬಾಣಗಳಿಂದ ನಾಶಮಾಡಿ, ಅವನ ಕತ್ತಿ-ಗುರಾಣಿಯನ್ನೂ ನಾಶಮಾಡಿ, ಅವನ ಕೈಯಲ್ಲಿರುವ ರಥದ ಚಕ್ರವನ್ನು ನಾಶಮಾಡಿ, ಅವನನ್ನು ಬರಿಗೈಯಲ್ಲಿರತಕ್ಕವನನ್ನಾಗಿ ಮಾಡಿದರು.     

 

ಭೀತೇಷು ಕೃಷ್ಣಾದಥ ತದ್ವಧಾಯ ತೇಷ್ವಾಸಸಾದಾSಶು ಗದಾಯುಧಂ ಗದೀ ।

ದೌಃಶಾಸನಿಸ್ತೌ ಯುಗಪಚ್ಚ ಮಮ್ರತುರ್ಗ್ಗದಾಭಿಘಾತೇನ ಮಿಥೋSತಿಪೌರುಷೌ ॥ ೨೬.೪೮ ॥

 

ಅಭಿಮನ್ಯುವನ್ನು ಕೊಲ್ಲಲು ಕೃಷ್ಣನಿಂದ ಭಯಗೊಂಡು ಅವರೆಲ್ಲರೂ ಹಾಗೇ ನಿಂತಿರಲು, ಗದೆಯನ್ನು ಹಿಡಿದುಕೊಂಡಿರುವ ಅವನನ್ನು ಗದೆಯನ್ನು ಧರಿಸಿದ ದುಃಶಾಸನನ ಮಗನು ಎದುರುಗೊಂಡ. ಅವರಿಬ್ಬರೂ  ಅತ್ಯಂತ ಪೌರುಷವುಳ್ಳವರಾಗಿ ಪರಸ್ಪರ ಗದಾಪ್ರಹಾರದಿಂದ ಒಟ್ಟಿಗೇ ಸತ್ತುಹೋದರು.

[ಈ ವಿವರವನ್ನು ದ್ರೋಣಪರ್ವದಲ್ಲಿ ಕಾಣಲು ಸಾಧ್ಯವಿಲ್ಲ. ಅಲ್ಲಿ ದುಃಶಾಸನನ ಮಗ ಅಭಿಮನ್ಯುವಿಗೆ ಹೊಡೆದ, ಅಭಿಮನ್ಯು ಕೆಳಗೆ ಬಿದ್ದ ಎಂದಷ್ಟೇ ಹೇಳಿದ್ದಾರೆ. ಹೀಗಾಗಿ ಅಲ್ಲಿ ದುಃಶಾಸನನ ಮಗನ ಕಥೆ ಏನಾಯಿತು ಎನ್ನುವುದೇ ಗೊತ್ತಾಗುವುದಿಲ್ಲ. ಆದರೆ ಮುಂದೆ ಕರ್ಣಪರ್ವದಲ್ಲಿ ಎಷ್ಟು ಜನ ಪ್ರಮುಖ ವೀರರು ಸತ್ತರು ಎಂದು ಧೃತರಾಷ್ಟ್ರ ವಿಲಾಪ ಮಾಡುತ್ತಾ ಹೀಗೆ ಹೇಳುತ್ತಾನೆ:  ‘ತಥಾ ದುರ್ಯೋಧನಸುತಸ್ತರಸ್ವೀ ಯುದ್ಧದುರ್ಮದಃ । ವರ್ತಮಾನಃ ಪಿತುಃ ಶಾಸ್ತ್ರೇ ಸೌಭದ್ರೇಣ ನಿಪಾತಿತಃ । ತಥಾ ದೌಃಶಾಸನಿಃ ಶೂರೋ ಬಾಹುಷಾಳೀ ರಾಣೋತ್ಕಟಃ’ (೨.೧೫)- ತಂದೆಯ ಶಾಸನಾನುಸಾರವಾಗಿಯೇ ನಡೆಯುತ್ತಿದ್ದ ದುರ್ಯೋಧನನ ಮಗ ತರಸ್ವೀ-ಯುದ್ಧದುರ್ಮದ ಲಕ್ಷಣನನ್ನು ಸೌಭದ್ರನು ಕೊಂದ. ಹಾಗೆಯೇ ದುಃಶಾಸನನ ಮಗ ವೀರ, ಬಾಹುಷಾಳೀ, ರಣೋತ್ಕಟನು ಅಭಿಮನ್ಯುವಿನಿಂದಲೇ ಸತ್ತ’ ಎಂದು ಧೃತರಾಷ್ಟ್ರ ಪ್ರಲಾಪ ಮಾಡುತ್ತಾನೆ. ಇಲ್ಲಿ ದುಃಶಾಸನನ ಮಗ ಅಭಿಮನ್ಯುವಿನಿಂದ ಸತ್ತ ಎನ್ನುವುದು ತಿಳಿಯುತ್ತದೆ.]

Thursday, February 16, 2023

Mahabharata Tatparya Nirnaya Kannada 26-23-35

 

ವಿಸೃಜ್ಯ ಭೀಮಂ ಸ ಚ ಪಾರ್ತ್ಥಮೇವ ಯಯೌ ಗಜಸ್ಕನ್ಧಗತೋ ಗಜಂ ತಮ್ ।

ಪ್ರಚೋದಯಾಮಾಸ ರಥಾಯ ತಸ್ಯ ಚಕ್ರೇSಪಸವ್ಯಂ ಹರಿರೇನಮಾಶು ॥ ೨೬.೨೩ ॥

 

ಅರ್ಜುನ ಬರುತ್ತಿರುವಂತೆಯೇ ಆನೆಯಮೇಲೆ ಕುಳಿತಿರುವ ಭಗದತ್ತ ಭೀಮಸೇನನನ್ನು ಬಿಟ್ಟು, ಅರ್ಜುನನನ್ನು ಕುರಿತು ತೆರಳಿದ ಮತ್ತು ಸುಪ್ರತೀಕ ಆನೆಯನ್ನು ಅರ್ಜುನನ ರಥವನ್ನು ಭಗ್ನಗೊಳಿಸಲು ಪ್ರಚೋದನೆ ಮಾಡಿದ. ಆಗ ಶ್ರೀಕೃಷ್ಣನು ಶೀಘ್ರವಾಗಿ ತನ್ನ ರಥದ ಪಥಬದಲಾಯಿಸಿ, ಆನೆಯ ಸುತ್ತ ಅಪ್ರದಕ್ಷಿಣವಾಗಿ ರಥವನ್ನು ವೇಗವಾಗಿ ಚಲಿಸಿದ.

[ಮಹಾಭಾರತ: ‘ಚೋದಯಾಮಾಸ ತಂ ನಾಗಂ ವಧಾಯಾಚ್ಯುತಪಾರ್ಥಯೋಃ । ತಮಾಪತನ್ತಂ ದ್ವಿರದಂ ದೃಷ್ಟ್ವಾ ಕೃದ್ಧಮಿವಾನ್ತಕಮ್ । ಚಕ್ರೇSಪಸವ್ಯಂ ತ್ವರಿತಃ ಸ್ಯನ್ದನೇನ ಜನಾರ್ದನಃ’ (ದ್ರೋಣಪರ್ವ: ೨೮.೨೮)- ಶರಜಾಲದಿಂದ ಕೃಷ್ಣಾರ್ಜುನರನ್ನು ಮುಚ್ಚಿ, ಅವರನ್ನು ಕೊಲ್ಲಲು ಆನೆಯನ್ನು ಪ್ರಚೋದಿಸಿದನು. ಅಂತಕನಂತೆ ಮೇಲೆ ಬೀಳುತ್ತಿದ್ದ ಆನೆಯನ್ನು ನೋಡಿ ಕೂಡಲೇ ಜನಾರ್ದನನು ರಥವನ್ನು ತಿರುಗಿಸಿದನು.] 

 

ಮನೋಜವೇನೈವ ರಥೇ ಪರೇಣ ಸಮ್ಭ್ರಾಮ್ಯಮಾಣೇ ನತು ತಂ ಗಜಃ ಸಃ ।

ಪ್ರಾಪ್ತುಂ ಶಶಾಕಾಥ ಶರೈಃ ಸುತೀಕ್ಷ್ಣೈರಭ್ಯರ್ದ್ಧಯಾಮಾಸ ನೃಪಂ ಸ ವಾಸವಿಃ ॥ ೨೬.೨೪ ॥

 

ಮನಸ್ಸಿಗೂ ಮೀರಿದ ವೇಗದಿಂದ ಶ್ರೀಕೃಷ್ಣನಿಂದ ರಥವು ತಿರುಗಿಸಲ್ಪಡಲು, ಆನೆಯು ರಥವನ್ನು ಹಿಡಿಯಲು ಸಮರ್ಥವಾಗಲಿಲ್ಲ. ಆಗ ಅರ್ಜುನ ತೀಕ್ಷ್ಣವಾದ ಬಾಣಗಳಿಂದ ಭಗದತ್ತನನ್ನು ಪೀಡಿಸಿದ.

 

ಅಸ್ತ್ರೈಶ್ಚ ಶಸ್ತ್ರೈಃ ಸುಚಿರಂ ನೃವೀರಾವಯುದ್ಧ್ಯತಾಂ ತೌ ಬಲಿನಾಂ ಪ್ರಬರ್ಹೌ ।

ಅಥೋ ಚಕರ್ತ್ತಾಸ್ಯ ಧನುಃ ಸ ಪಾರ್ತ್ಥಃ ಸ ವೈಷ್ಣವಾಸ್ತ್ರಂ ಚ ತದಾSಙ್ಕುಶೇSಕರೋತ್ ॥ ೨೬.೨೫ ॥

 

ಅಸ್ತ್ರಗಳಿಂದಲೂ, ಶಸ್ತ್ರಗಳಿಂದಲೂ ಬಹಳ ಕಾಲದವರೆಗೆ ಬಲಿಷ್ಟರಲ್ಲೇ ಅಗ್ರಗಣ್ಯರಾದ,  ವೀರರಾಗಿರುವ ಭಗದತ್ತ ಹಾಗೂ ಅರ್ಜುನರು ಯುದ್ಧ ಮಾಡಿದರು. ತದನಂತರ ಅರ್ಜುನನು ಭಗದತ್ತನ  ಬಿಲ್ಲನ್ನು ಕತ್ತರಿಸಿದನು. ಭಗದತ್ತನಾದರೋ ಅಂಕುಶದಲ್ಲಿ ನಾರಾಯಣಾಸ್ತ್ರವನ್ನು ಅಭಿಮಂತ್ರಿಸಿದನು. 

[‘ವಿದ್ಧಸ್ತತೋSತಿವ್ಯಥಿತೋ ವೈಷ್ಣವಾಸ್ತ್ರಮುದೀರಯನ್ । ಅಭಿಮಂತ್ರ್ಯಾಙ್ಕುಶಂ ಕ್ರುದ್ಧೋ ವ್ಯಸೃಜತ್ ಪಾಣ್ಡವೋರಸಿ’ (ದ್ರೋಣಪರ್ವ: ೨೯.೧೭) ಗಾಯಗೊಂಡು ಕ್ರುದ್ಧನಾದ ಭಗದತ್ತ  ವೈಷ್ಣವಾಸ್ತ್ರವನ್ನು ಸ್ಮರಿಸಿಕೊಂಡು ಅಂಕುಶವನ್ನು ಅಭಿಮಂತ್ರಿಸಿ ಅರ್ಜುನನ ಎದೆಗೆ ಗುರಿಯಿಟ್ಟು ಎಸೆದನು.]

 

ತಸ್ಮಿನ್ನಸ್ತ್ರೇ ತೇನ  ತದಾ ಪ್ರಯುಕ್ತೇ ದಧಾರ ತದ್ ವಾಸುದೇವೋSಮಿತೌಜಾಃ ।

ತದಂಸದೇಶಸ್ಯ ತು ವೈಜಯನ್ತೀ ಬಭೂವ ಮಾಲಾSಖಿಲಲೋಕಭರ್ತ್ತುಃ ॥ ೨೬.೨೬ ॥

 

ಭಗದತ್ತನಿಂದ ಆ ನಾರಾಯಣಾಸ್ತ್ರವು ಬಿಡಲ್ಪಡುತ್ತಿರಲು, ಎಣೆಯಿರದ ಕಸುವುಳ್ಳ ವಾಸುದೇವ ಶ್ರೀಕೃಷ್ಣನು ತಾನೇ ಎದೆಕೊಟ್ಟು ಆ ಅಸ್ತ್ರವನ್ನು ಧರಿಸಿದನು. ಆಗ ಆ ವೈಷ್ಣವಾಸ್ತ್ರವು ಅವನ ಹೆಗಲಿನಲ್ಲಿ ಹೂವಿನ ಮಾಲೆಯಾಗಿ ಬದಲಾಯಿತು. 

[‘ವೈಜಯಂತ್ಯಭವನ್ಮಾಲಾ ತದಸ್ತ್ರಂ ಕೇಶವೋರಸಿ (ದ್ರೋಣಪರ್ವ ೨೯.೧೯)- ಆ ಅಸ್ತ್ರವು ಕೇಶವನ ಎದೆಯಮೇಲೆ ವೈಜಯಂತಿ ಮಾಲೆಯಾಯಿತು]

 

ದೃಷ್ಟ್ವೈವ ತದ್ ಧಾರಿತಮಚ್ಯುತೇನ ಪಾರ್ತ್ಥಃ ಕಿಮರ್ತ್ಥಂ ವಿಧೃತಂ ತ್ವಯೇತಿ ।

ಊಚೇ ತಮಾಹಾSಶು ಜಗನ್ನಿವಾಸೋ ಮಯಾSಖಿಲಂ ಧಾರ್ಯ್ಯತೇ ಸರ್ವದೈವ ॥ ೨೬.೨೭ ॥

 

ಅರ್ಜುನನು ಶ್ರೀಕೃಷ್ಣನಿಂದ ಧರಿಸಲ್ಪಟ್ಟ ಅಸ್ತ್ರವನ್ನು ಕಂಡು, ‘ನಿನ್ನಿಂದ ಏಕಾಗಿ ಧರಿಸಲ್ಪಟ್ಟಿತು’ ಎಂದು ಕೇಳಿದನು.  ಆಗ ಜಗತ್ತಿಗೆ ಆಧಾರಭೂತನಾಗಿರುವ ನಾರಾಯಣನು ‘ನನ್ನಿಂದ ಎಲ್ಲವೂ ಯಾವಾಗಲೂ ಧರಿಸಲ್ಪಟ್ಟಿರುತ್ತದೆ’ ಎಂದನು.  

 

ನ ಮಾದೃಶೋSನ್ಯೋSಸ್ತಿ ಕುತಃ ಪರೋ ಮತ್ ಸೋSಹಂ ಚತುರ್ದ್ಧಾ ಜಗತೋ ಹಿತಾಯ ।

ಸ್ಥಿತೋSಸ್ಮಿ ಮೋಕ್ಷಪ್ರಳಯಸ್ಥಿತೀನಾಂ ಸೃಷ್ಟೇಶ್ಚ ಕರ್ತ್ತಾ ಕ್ರಮಶಃ ಸ್ವಮೂರ್ತ್ತಿಃಭಿಃ ।

ಸ ವಾಸುದೇವಾದಿಚತುಃ ಸ್ವರೂಪಃ ಸ್ಥಿತೋSನಿರುದ್ಧೋ ಹೃದಿ ಚಾಖಿಲಸ್ಯ ॥ ೨೬.೨೮ ॥

 

‘ನನಗೆ ಸಮನಾದವನು ಇನ್ನೊಬ್ಬನಿಲ್ಲ. ಹೀಗಿರುವಾಗ ನನ್ನಿಂದ ಉತ್ತಮನು ಎಲ್ಲಿಂದ? (ನನಗೆ ಸಮನಾಗಲೀ ಅಧಿಕನಾಗಲೀ ಇಲ್ಲಾ). ಅಂತಹ ನಾನು ನಾಲ್ಕು ರೂಪಗಳಿಂದ ಜಗತ್ತಿನ ಹಿತಕ್ಕಾಗಿ ಇರುತ್ತೇನೆ. ಮೋಕ್ಷ ಪ್ರಳಯ ಸ್ಥಿತಿ, ಇವುಗಳನ್ನೂ, ಸೃಷ್ಟಿಯನ್ನೂ ಈ ನನ್ನ ರೂಪಗಳಿಂದ ಮಾಡುತ್ತಿದ್ದೇನೆ. ಅಂತಹ ವಾಸುದೇವ ಮೊದಲಾದ ನಾಲ್ಕು ರೂಪವುಳ್ಳವನಾಗಿ ನಾನಿದ್ದೇನೆ. ಎಲ್ಲರ ಹೃದಯದಲ್ಲಿ ನಾನು ಅನಿರುದ್ಧನಾಗಿದ್ದೇನೆ.  

 

ಸ ಏವ ಚ ಕ್ರೋಡತನುಃ ಪುರಾSಹಂ ಭೂಮಿಪ್ರಿಯಾರ್ತ್ಥಂ ನರಕಾಯ ಚಾದಾಮ್ ।

ಅಸ್ತ್ರಂ ಮದೀಯಂ ವರಮಸ್ಯ ಚಾದಾಮವದ್ಧ್ಯತಾಂ ಯಾವದಸ್ತ್ರಂ ಸಸೂನೋಃ  ॥ ೨೬.೨೯ ॥

 

ಅಂತಹ ಸಂಕರ್ಷಣ-ಪ್ರದ್ಯುಮ್ನಾದಿ ಸ್ವರೂಪನಾದ ನಾನೇ ವರಾಹರೂಪನಾಗಿ ಹಿಂದೆ ಭೂದೇವಿಯ ಪ್ರೀತ್ಯರ್ಥವಾಗಿ ನರಕಾಸುರನಿಗೆ ನನ್ನ ಸಂಬಂಧಿಯಾದ ಅಸ್ತ್ರವನ್ನು ಕೊಟ್ಟಿರುವೆನು. ಮಗನಾದ ಭಗದತ್ತ ಮತ್ತು ಅವನಲ್ಲಿ ಎಲ್ಲಿಯ ತನಕ ಆ ಅಸ್ತ್ರ ಇರುತ್ತದೋ, ಅಲ್ಲಿಯ ತನಕ ಅವಧ್ಯತ್ವವದ ವರವನ್ನು ನಾನು ಕೊಟ್ಟಿರುವೆನು.

 

ಅಸ್ತ್ರಸ್ಯ ಚಾನ್ಯೋ ನತು ಕಶ್ಚಿದಸ್ತಿ ಯೋSವದ್ಧ್ಯ ಏತಸ್ಯ ಕುತಶ್ಚ ಮತ್ತಃ ।

ಇತಿ ಸ್ಮ ತೇನೈವ ಮಯಾ ಧೃತಂ ತದಸ್ತ್ರಂ ತದೇನಂ ಜಹಿ ಚಾಸ್ತ್ರಹೀನಮ್ ॥ ೨೬.೩೦ ॥

 

ಈ ಅಸ್ತ್ರಕ್ಕೆ ವಧ್ಯನಾಗದವನು ಜಗತ್ತಿನಲ್ಲಿ ಯಾರೂ ಇಲ್ಲ. ಹೀಗಾಗಿ ನನ್ನಿಂದ ನಾರಾಯಣಾಸ್ತ್ರವು  ಧರಿಸಲ್ಪಟ್ಟಿದೆ. ಅದರಿಂದ ಈಗ ಅಸ್ತ್ರದಿಂದ ರಹಿತನಾಗಿರುವ ಈ ಭಗದತ್ತನನ್ನು ಕೊಲ್ಲು ಎಂದು ಶ್ರೀಕೃಷ್ಣ ಅರ್ಜುನನಿಗೆ ಆಜ್ಞೆಮಾಡಿದ.

[ಮಹಾಭಾರತ ದ್ರೋಣಪರ್ವ: ‘ಏಕಾ ಮೂರ್ತಿಸ್ತಪಶ್ಚರ್ಯಾಂ ಕುರುತೇ ಮೇ ಭುವಿ ಸ್ಥಿತಾ ಅಪರಾ ಪಶ್ಯತಿ ಜಗತ್ ಕುರ್ವಾಣಂ ಸಾಧ್ವಸಾಧುನೀ   ಅಪರಾ ಕುರುತೇ ಕರ್ಮ ಮಾನುಷಂ ಲೋಕಮಾಶ್ರಿತಾ ಶೇತೇ ಚತುರ್ಥೀ ತ್ವಪರಾ ನಿದ್ರಾಂ ವರ್ಷಸಹಸ್ರಕೀಮ್’  (೩೩.೩೪) - ಒಂದು ಮೂರ್ತಿ ಜಗತ್ತಿನಲ್ಲಿ ತಪಶ್ಚರ್ಯದಲ್ಲಿದೆ. ಇನ್ನೊಂದು ಮೂರ್ತಿ ಜಗತ್ತನ್ನು ನೋಡುತ್ತದೆ. ಇನ್ನೊಂದು ಮೂರ್ತಿ ಜಗತ್ತನ್ನು ಸೃಷ್ಟಿ ಮಾಡುತ್ತದೆ. ಇನ್ನೊಂದು ಮೂರ್ತಿ ಪ್ರಳಯಕಾಲದಲ್ಲಿ ಮಲಗಿರುತ್ತದೆ... ‘ನಾಸ್ಯಾವಧ್ಯೋSಸ್ತಿ ಲೋಕೇSಸ್ಮಿನ್ ಮದನ್ಯಃ ಕಶ್ಚಿದರ್ಜುನ । ತಸ್ಮಾನ್ಮಯಾ ಕೃತಂ ಹ್ಯೇತನ್ಮಾ ಭೂತ್ ತೇ ಬುದ್ಧಿರನ್ಯಥಾ’ (೨೯.೩೦) ತಪ್ಪು ತಿಳಿಯಬೇಡ. ಈ ಅಸ್ತ್ರವನ್ನು ಯಾರೂ ಕೂಡಾ ಎದುರಿಸಲು ಸಾಧ್ಯವಿಲ್ಲ. ಹಾಗಾಗಿ ನಾನೇ ಧರಿಸಿದೆ. ]

 

ಇತ್ಯುಕ್ತಮಾಕರ್ಣ್ಯ ಸ ಕೇಶವೇನ ಸಮ್ಮನ್ತ್ರ್ಯ ಬಾಣಂ ಹೃದಯೇ ಮುಮೋಚ ।

ಪ್ರಾಗ್ಜ್ಯೋತಿಷಸ್ಯಾಪರಮುತ್ತಮಂ ಶರಂ ಗಜೇನ್ದ್ರಕುಮ್ಭಸ್ಥಲ ಆಶ್ವಮಜ್ಜಯತ್ ॥ ೨೬.೩೧ ॥

 

ಈರೀತಿಯಾಗಿ ಶ್ರೀಕೃಷ್ಣನಿಂದ ಹೇಳಲ್ಪಟ್ಟ ಅರ್ಜುನನು, ಬಾಣವನ್ನು ಅಭಿಮಂತ್ರಿಸಿ ಭಗದತ್ತನ ಎದೆಗೆ  ಬಿಟ್ಟ. ಇನ್ನೊಂದು ಉತ್ಕೃಷ್ಟವಾದ ಬಾಣವನ್ನು ಸುಪ್ರತೀಕದ ಕುಮ್ಭಸ್ಥಳದಲ್ಲಿ ಕೂಡಲೇ ಹೊಕ್ಕಿಸಿದ.

 

ಉಭೌ ಚ ತೌ ಪೇತತುರದ್ರಿಸನ್ನಿಭೌ ಮಹೇನ್ದ್ರವಜ್ರಾಭಿಹತಾವಿವಾSಶು ।

ನಿಹತ್ಯ ತೌ ವಾಸವಿರುಗ್ರಪೌರುಷೋ ಮುಮೋದ ಸಾಧು ಸ್ವಜನಾಭಿಪೂಜಿತಃ ॥ ೨೬.೩೨ ॥

 

ದೊಡ್ಡ ಆಕಾರವುಳ್ಳ ಭಗದತ್ತ ಮತ್ತು ಸುಪ್ರತೀಕ ಇಂದ್ರನ ವಜ್ರಾಯುಧದಿಂದ ಹೊಡೆಯಲ್ಪಟ್ಟು ಬಿದ್ದ ಬೆಟ್ಟಗಳೋ ಎಂಬಂತೆ ಬಿದ್ದರು. ಅರ್ಜುನನು ಅವರಿಬ್ಬರನ್ನೂ ಕೊಂದು, ತನ್ನವರಿಂದ ಪೂಜಿತನಾಗಿ ಸಂತೋಷಪಟ್ಟ.

ಅಥಾಚಲಂ ವೃಷಕಂ ಚೈವ ಹತ್ವಾ ಕನೀಯಸೌ ಶಕುನೇಸ್ತಂ ಚ ಬಾಣೈಃ ।

ವಿವ್ಯಾಧ ಮಾಯಾಮಸೃಜತ್ ಸ ತಾಂ ಚ ವಿಜ್ಞಾನಾಸ್ತ್ರೇಣಾSಶು ನಾಶಾಯ ಚಕ್ರೇ ॥ ೨೬.೩೩ ॥

 

ತದನಂತರ ಅರ್ಜುನನು ಶಕುನಿಯ ತಮ್ಮಂದಿರರಾದ ವೃಷಕ ಮತ್ತು ಅಚಲ ಎನ್ನುವವರನ್ನು ಕೊಂದು, ಬಾಣಗಳಿಂದ ಶಕುನಿಯನ್ನೂ ಕೂಡಾ ಹೊಡೆದ. ಶಕುನಿಯಾದರೋ ಮಾಯೆಯನ್ನು ಸೃಷ್ಟಿಮಾಡಿದ. ಆಗ ಅರ್ಜುನ ವಿಜ್ಞಾನಾಸ್ತ್ರದಿಂದ ಅದನ್ನು ನಾಶಮಾಡಿದ.

 

ಸ ನಷ್ಟಮಾಯಃ ಪ್ರಾದ್ರವತ್ ಪಾಪಕರ್ಮ್ಮಾ ತತಃ ಪಾರ್ತ್ಥಃ ಶರಪೂಗೈಶ್ಚಮೂಂ ತಾಮ್ ।

ವಿದ್ರಾವಯಾಮಾಸ ತದಾ ಗುರೋಃ ಸುತೋ ಮಾಹಿಷ್ಮತೀಪತಿಮಾಜೌ ಜಘಾನ ॥ ೨೬.೩೪ ॥

 

ಪಾಪಿಷ್ಠನಾದ ಶಕುನಿಯ ಕಣ್ಕಟ್ಟು ವಿದ್ಯೆಯ ಆಟ ನಡೆಯದೇ ಇದ್ದಾಗ, ಮಾಯೆಯ ಪ್ರಭಾವವನ್ನು ಕಳೆದುಕೊಂಡ ಶಕುನಿಯು ಯುದ್ಧದಿಂದ ಓಡಿಹೋದ. ತದನಂತರ ಅರ್ಜುನನು ಬಾಣಗಳ ಸಮೂಹದಿಂದ  ಸೇನೆಯನ್ನು ಓಡಿಸಿದ. ಆಗಲೇ ಅಶ್ವತ್ಥಾಮನು ಮಾಹಿಷ್ಮತೀಪತಿಯಾದ ನೀಲನನ್ನು ಯುದ್ಧದಲ್ಲಿ ಸಂಹರಿಸಿದನು.

 

ತದಾ ಭೀಮಸ್ತಸ್ಯ ನಿಹತ್ಯ ವಾಹಾನ್ ವ್ಯದ್ರಾವಯದ್ ಧಾರ್ತ್ತರಾಷ್ಟ್ರೀಂ ಚಮೂಂ ಚ ।

ಭೀಮಾರ್ಜ್ಜುನಾಭ್ಯಾಂ ಹನ್ಯಮಾನಾಂ ಚಮೂಂ ತಾಂ ದೃಷ್ಟ್ವಾ ದ್ರೋಣಃ ಕ್ಷಿಪ್ರಮಪಾಜಹಾರ ॥ ೨೬.೩೫ ॥

 

ಆಗ ಭೀಮಸೇನನು ಅಶ್ವತ್ಥಾಮನ ಕುದುರೆಗಳನ್ನು ಕೊಂದು, ಅವನ ಆರ್ಭಟವನ್ನು ತಗ್ಗಿಸಿ, ದುರ್ಯೋಧನನ ಸೇನೆಯನ್ನು ಓಡಿಸಿದ. ಭೀಮಾರ್ಜುನರಿಂದ ಕೊಲ್ಲಲ್ಪಡುತ್ತಿರುವ ಆ ಸೇನೆಯನ್ನು ಕಂಡ ದ್ರೋಣಾಚಾರ್ಯರು ಕೂಡಲೇ ಯುದ್ಧ ವಿರಾಮವನ್ನು ಘೋಷಿಸಿದರು (ಇಲ್ಲಿಗೆ ಹನ್ನೆರಡನೇ ದಿನದ ಯುದ್ಧ ಮುಗಿಯಿತು)