ದೇವಮೀಮಾಂಸಿಕಾದ್ಯನ್ತಂ ಕೃತ್ವಾ ಪೈಲಮಥಾsದಿಶತ್ ।
ಶೇಷಂ ಚ ಮದ್ಧ್ಯಕರಣೇ ಪುರಾಣಾನ್ಯಥ ಚಾಕರೋತ್ ॥೧೦.೮೩॥
ಆನಂತರ ವೇದವ್ಯಾಸರು ದೈವೀ ಮೀಮಾಂಸದ
ಆದಿಭಾಗವನ್ನೂ , ಅಂತ್ಯಭಾಗವನ್ನೂ ತಾನೇ ರಚಿಸಿ, ಪೈಲರಿಗೆ^ ಉಳಿದ ಮಧ್ಯಭಾಗವನ್ನು ರಚಿಸಲು ಆಜ್ಞೆ ಮಾಡಿದರು. ನಂತರ ಪುರಾಣಗಳನ್ನು ತಾನೇ
ರಚಿಸಿದರು.
[^ಇಲ್ಲಿ ಪೈಲರಿಗೆ ವ್ಯಾಸರು ಆಜ್ಞೆ
ಮಾಡಿದರು ಎಂದರೆ: ಪೈಲ ಮತ್ತು ಅವರೊಳಗಿರುವ ಶೇಷ ಇಬ್ಬರಿಗೂ ದೈವೀ ಮೀಮಾಂಸವನ್ನು ಪೂರ್ಣಗೊಳಿಸಲು ವ್ಯಾಸರು ಆಜ್ಞೆ
ಮಾಡಿದರು ಎಂದರ್ಥ.
ಇಂದು ನಮಗೆ ದೈವೀ ಮೀಮಾಂಸ
ಲಭ್ಯವಿಲ್ಲ. ದೈವೀ ಮೀಮಾಂಸದ ಕೊನೆಯಲ್ಲಿ ‘ವಿಷ್ಣುರಾಹಹೀ’
ಎನ್ನುವ ಸೂತ್ರವಿರುವುದರ ಕುರಿತು ಮಧ್ವಾಚಾರ್ಯರು ತಿಳಿಸುತ್ತಾರೆ. ಈ ಸೂತ್ರವನ್ನು ಪ್ರಮಾಣವಾಗಿ ಬಳಸಿ ಬ್ರಹ್ಮಜಿಜ್ಞಾಸ ಎಂದರೆ ನಾರಾಯಣ ಜಿಜ್ಞಾಸ ಎಂದು
ಆಚಾರ್ಯರು ಹೇಳಿರುವುದು ನಮಗೆ ತಿಳಿಯುತ್ತದೆ]
ಶೈವಾನ್ ಪಾಶುಪತಾಚ್ಚಕ್ರೇ ಸಂಶಯಾರ್ತ್ಥಂ ಸುರದ್ವಿಷಾಮ್ ।
ವೈಷ್ಣವಾನ್ ಪಞ್ಚರಾತ್ರಾಚ್ಚ ಯಥಾರ್ತ್ಥಜ್ಞಾನಸಿದ್ಧಯೇ ॥೧೦.೮೪॥
ದೈತ್ಯರ
ಸಂಶಯಕ್ಕಾಗಿಯೇ(ಮೋಹಕ್ಕಾಗಿಯೇ) ವ್ಯಾಸರು ಪಾಶುಪತಾಗಮನವನ್ನು ಆಶ್ರಯಿಸಿ, ಶೈವಾಂಶಗಳನ್ನೊಳಗೊಂಡ
ಪುರಾಣಗಳನ್ನೂ ಕೂಡಾ ರಚಿಸಿದರು.
ಯಥಾರ್ತ್ಥಜ್ಞಾನವನ್ನು
ತಿಳಿಸುವುದಕ್ಕಾಗಿ ಪಂಚರಾತ್ರಾಗಮನವನ್ನು ಸಂಗ್ರಹ ಮಾಡಿ, ವೈಷ್ಣವ ಪುರಾಣಗಳನ್ನೂ ವ್ಯಾಸರು
ರಚಿಸಿದರು.
ಬ್ರಾಹ್ಮಾಂಶ್ಚ ವೇದತಶ್ಚಕ್ರೇ ಪುರಾಣಗ್ರನ್ಥಸಙ್ಗ್ರಹಾನ್ ।
ಏವಂ ಜ್ಞಾನಂ ಪುನಃ ಪ್ರಾಪುರ್ದ್ದೇವಾಶ್ಚ ಋಷಯಸ್ತಥಾ ॥೧೦.೮೫॥
ಸನತ್ಕುಮಾರಪ್ರಮುಖಾ ಯೋಗಿನೋ ಮಾನುಷಾಸ್ತಥಾ ।
ಕೃಷ್ಣ ದ್ವೈಪಾಯನಾತ್ ಪ್ರಾಪ್ಯ ಜ್ಞಾನಂ ತೇ ಮುಮುದುಃ ಸುರಾಃ ॥೧೦.೮೬ ॥
(ದುರ್ಜನರ ಮೋಹಕ್ಕಾಗಿಯೇ) ಬ್ರಹ್ಮನನ್ನೇ
ಪ್ರತಿಪಾದನೆ ಮಾಡುವ ಪುರಾಣಗಳನ್ನು, ವೇದದ ಅಪಾತವಾದ ಅರ್ಥವನ್ನು (verbal meaning) ಆದರಿಸಿ ಪುರಾಣ ಗ್ರಂಥ ಸಂಗ್ರಹಗಳನ್ನೂ ವ್ಯಾಸರು ರಚಿಸಿದರು.
ಒಟ್ಟಿನಲ್ಲಿ, ವ್ಯಾಸಾವತಾರದಿಂದ ದೇವತೆಗಳು, ಋಷಿಗಳು, ಮೊದಲಾದವರೆಲ್ಲರೂ ಜ್ಞಾನವನ್ನು ಹೊಂದುವಂತಾಯಿತು. ಸನತ್ಕುಮಾರ ಮೊದಲಾದ
ಯೋಗಿಗಳೂ, ಮನುಷ್ಯರೂ, ಕೃಷ್ಣದ್ವೈಪಾಯನರಿಂದ ಜ್ಞಾನವನ್ನು ಪಡೆದು ಸಂತೋಷಪಟ್ಟರು.
ಸಮಸ್ತವಿಜ್ಞಾನಗಭಸ್ತಿಚಕ್ರಂ ವಿತಾಯವಿಜ್ಞಾನಮಹಾದಿವಾಕರಃ ।
ನಿಪೀಯ ಚಾಜ್ಞಾನತಮೋ ಜಗತ್ತತಂ ಪ್ರಭಾಸತೇ ಭಾನುರಿವಾವಭಾಸಯನ್ ॥೧೦.೮೭॥
ಜ್ಞಾನದಲ್ಲಿ ಸೂರ್ಯನಂತಿರುವ ವ್ಯಾಸರು,
ಜ್ಞಾನವೆಂಬ ಕಿರಣಗಳ ಸಮೂಹವನ್ನ ಎಲ್ಲೆಡೆ ಹರಡಿ, ಅಜ್ಞಾನವೆಂಬ ಕತ್ತಲನ್ನು ಕುಡಿದು, ಈ
ಜಗತ್ತನ್ನು ಬೆಳಗಿದರು.
ಚತುರ್ಮ್ಮುಖೇಶಾನಸುರೇನ್ದ್ರಪೂರ್ವಕೈಃ ಸದಾ ಸುರೈಃ ಸೇವಿತಪಾದಪಲ್ಲವಃ ।
ಪ್ರಕಾಶಯಂಸ್ತೇಷು ಸದಾತ್ಮಗುಹ್ಯಂ ಮುಮೋದ ಮೇರೌ ಚ ತಥಾ ಬದರ್ಯ್ಯಾಮ್ ॥೧೦.೮೮ ॥
ಚತುರ್ಮುಖ, ರುದ್ರ ಮೊದಲಾದ ಎಲ್ಲಾ
ದೇವತೆಗಳಿಂದ ಸೇವಿತವಾಗಿರುವ ಪಾದ ಪಲ್ಲವವುಳ್ಳವರಾದ (ಸೇವಿಸಲ್ಪಟ್ಟ ಚಿಗುರೆಲೆಯಂತೆ ಇರುವ ಪಾದ ಕಮಲವುಳ್ಳವರಾದ
) ವೇದವ್ಯಾಸರು ಸಮೀಚೀನವಾದ ಗುಣಾದಿ ರಹಸ್ಯವನ್ನು ಪ್ರಕಟಿಸುತ್ತಾ, ಮೇರುವಿನಲ್ಲಿಯೂ
ಬದರಿಯಲ್ಲಿಯೂ ಕ್ರೀಡಿಸಿದರು.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ವ್ಯಾಸಾವತಾರಾನುವರ್ಣ್ಣನಂ ನಾಮ ದಶಮೋsಧ್ಯಾಯಃ ॥
॥ಶ್ರೀಕೃಷ್ಣಾರ್ಪಣಮಸ್ತು॥