ಶೇಷೋsಥ ಪೈಲಂ ಮುನಿಮಾವಿಶತ್ ತದಾ ವೀಶಃ
ಸುಮನ್ತುಮಪಿ ವಾರುಣಿಂ ಮುನಿಮ್ ।
ಬ್ರಹ್ಮಾsವಿಶತ್ ತಮುತ ವೈಶಮ್ಪಾಯನಂ ಶಕ್ರಶ್ಚ
ಜೈಮಿನಿಮಥಾsವಿಶದ್ ವಿಭುಃ ॥೧೦.೭೪॥
ಕೃಷ್ಣಸ್ಯ ಪಾದಪರಿಸೇವನೋತ್ಸುಕಾಃ ಸುರೇಶ್ವರಾ ವಿವಿಶುರಾಶು ತಾನ್
ಮುನೀನ್ ।
ಸಮಸ್ತವಿದ್ಯಾಃ ಪ್ರತಿಪಾದ್ಯ ತೇಷ್ವಸೌ ಪ್ರವರ್ತ್ತಕಾಂಸ್ತಾನ್ ವಿದಧೇ
ಹರಿಃ ಪುನಃ ॥೧೦.೭೫॥
ತದನಂತರ, ವೇದವ್ಯಾಸರಿಂದ ಉಪದೇಶ
ಪಡೆಯಲೆಂದು ಶೇಷನು ಪೈಲ ಮುನಿಯನ್ನು ಪ್ರವೇಶ ಮಾಡಿದನು. ಹಾಗೇ, ಗರುಡನು ವರುಣನ ಮಗನಾಗಿರುವ
ಸುಮಂತು ಎನ್ನುವ ಮುನಿಯನ್ನು ಪ್ರವೇಶಿಸಿದನು. ಬ್ರಹ್ಮದೇವರೂ ಕೂಡಾ ಇನ್ನೊಂದು ರೂಪದಿಂದ
ವೈಶಂಪಾಯರನ್ನು ಪ್ರವೇಶ ಮಾಡಿದರು. ಇಂದ್ರನು ಜೈಮಿನಿಯನ್ನು ಪ್ರವೇಶಿಸಿದನು.
ಈ ರೀತಿ ವೇದವ್ಯಾಸರ
ಪಾದಪರಿಸೇವನೆಯಲ್ಲಿ ಉತ್ಸುಕರಾಗಿರುವ ದೇವತಾ ಪ್ರಮುಖರು ಶೀಘ್ರದಲ್ಲಿ ಆ ಎಲ್ಲಾ
ಮುನಿಗಳನ್ನು ಪ್ರವೇಶಿಸಿ ನಿಂತರು. ವೇದವ್ಯಾಸರು ಅವರಲ್ಲಿ (ಮುನಿಗಳು ಮತ್ತು ಅವರೊಳಗೆ
ಪ್ರವೇಶಿಸಿರುವ ದೇವತೆಗಳಲ್ಲಿ) ಎಲ್ಲಾ ವಿದ್ಯೆಗಳನ್ನಿಟ್ಟು, ಲೋಕದಲ್ಲಿ ಅವರನ್ನು ಜ್ಞಾನಪ್ರವರ್ತಕರನ್ನಾಗಿ ನಿಯಮಿಸಿದರು.
ಋಚಾಂ ಪ್ರವರ್ತ್ತಕಂ ಪೈಲಂ ಯಜುಷಾಂ ಚ ಪ್ರವರ್ತ್ತಕಮ್ ।
ವೈಶಮ್ಪಾಯನಮೇವೈಕಂ ದ್ವಿತೀಯಂ ಸೂರ್ಯ್ಯಮೇವ ಚ ॥೧೦.೭೬॥
ವೇದವ್ಯಾಸರು ಪೈಲ ಮುನಿಯನ್ನು ಋಗ್ವೇದ
ಪ್ರವರ್ತಕರನ್ನಾಗಿ ನಿಯಮಿಸಿದರು. ವೈಶಮ್ಪಾಯನರು ಕೃಷ್ಣ
ಯಜುರ್ವೇದದ ಪ್ರವರ್ತಕರಾದರು. ಶುಕ್ಲ ಯಜುರ್ವೇದ ಸೂರ್ಯನ ಮೂಲಕ (ಯಾಜ್ಞವಲ್ಕ್ಯರಿಂದ)
ಜಗತ್ತಿನಲ್ಲಿ ಪ್ರಚಲಿತಕ್ಕೆ ಬಂತು. [ಹೀಗಾಗಿ ಯಜುರ್ವೇದಕ್ಕೆ ಇಬ್ಬರು ಪ್ರವರ್ತಕರು. ಒಬ್ಬ
ಸೂರ್ಯ , ಇನ್ನೊಬ್ಬ ವೈಶಂಪಾಯನ].
ಚಕ್ರೇsಥ ಜೈಮಿನಿಂ
ಸಾಮ್ನಾಮಥರ್ವಾಙ್ಗಿರಸಾಮಪಿ ।
ಸುಮನ್ತುಂ ಭಾರತಸ್ಯಾಪಿ ವೈಶಮ್ಪಾಯನಮಾದಿಶತ್ ॥೧೦.೭೭॥
ಪ್ರವರ್ತ್ತನೇ ಮಾನುಷೇಷು ಗನ್ಧರ್ವಾದಿಷು ಚಾsತ್ಮಜಮ್ ।
ನಾರದಂ ಪಾಠಯಿತ್ವಾ ಚ ದೇವಲೋಕಪ್ರವೃತ್ತಯೇ ॥೧೦.೭೮
॥
ತದನಂತರ, ವೇದವ್ಯಾಸರು ಜೈಮಿನಿ
ಋಷಿಗಳನ್ನು ಸಾಮವೇದಕ್ಕೆ ಪ್ರವರ್ತಕರನ್ನಾಗಿ ನಿಯಮಿಸಿದರು. ಅಥರ್ವ ವೇದಕ್ಕೆ ಸುಮಂತುವನ್ನು
ನಿಯಮಿಸಿದ ವ್ಯಾಸರು, ಮನುಷ್ಯಲೋಕದಲ್ಲಿ ಮಹಾಭಾರತದ ಜ್ಞಾನಪ್ರಸಾರಕ್ಕಾಗಿ ವೈಶಮ್ಪಾಯನರಿಗೆ ಆದೇಶವನ್ನು ನೀಡಿದರು. ಗಂಧರ್ವರಲ್ಲಿ ಭಾರತ ಜ್ಞಾನವನ್ನು ಹರಡಲು
ಶುಕಾಚಾರ್ಯರಿಗೆ ಆದೇಶ ನೀಡಿ, ನಾರದರನ್ನು ದೇವಲೋಕದಲ್ಲಿ ಮಹಾಭಾರತದ ಜ್ಞಾನ ಪ್ರಸಾರಕ್ಕಾಗಿ ವ್ಯಾಸರು ನಿಯಮಿಸಿದರು.
ಆದಿಶತ್ ಸಸೃಜೋ ಸೋsಥ ರೋಮಾಞ್ಚಾದ್ ರೋಮಹರ್ಷಣಮ್ ।
ತಂ ಭಾರತಪುರಾಣಾನಾಂ ಮಾಹಾರಾಮಾಯಣಸ್ಯ ಚ ॥೧೦.೭೯ ॥
ಪಞ್ಚರಾತ್ರಸ್ಯ ಕೃತ್ಸ್ನಸ್ಯ ಪ್ರವೃತ್ತ್ಯರ್ತ್ಥಮಥಾsದಿಶತ್ ।
ತಮಾವಿಶತ್ ಕಾಮದೇವಃ ಕೃಷ್ಣಸೇವಾಸಮುತ್ಸುಕಃ ॥೧೦.೮೦॥
ಸ ತಸ್ಮೈ ಜ್ಞಾನಮಖಿಲಂ ದದೌ ದ್ವೈಪಾಯನಃ ಪ್ರಭುಃ ।
ಸನತ್ಕುಮಾರಪ್ರಮುಖಾಂಶ್ಚಕ್ರೇ ಯೋಗಪ್ರವರ್ತ್ತಕಾನ್ ॥೧೦.೮೧॥
ವೇದವ್ಯಾಸರು ತಮ್ಮ ರೋಮಾಂಚನದ ಅಭಿವ್ಯಕ್ತ
ಎಂಬಂತೆ ತಮ್ಮ ರೋಮಕೂಪದಲ್ಲಿ ರೋಮಹರ್ಷಣ ಎನ್ನುವ ಮುನಿಗಳನ್ನು ಸೃಷ್ಟಿ ಮಾಡಿದರು. ಭಾರತ, ಪುರಾಣ, ಮಹಾರಾಮಾಯಣ, ಸಮಗ್ರ
ಪಂಚರಾತ್ರ , ಇವುಗಳ ಪ್ರವೃತ್ತ್ಯರ್ತ್ಥವಾಗಿ
ರೋಮಹರ್ಷಣರಿಗೆ ವ್ಯಾಸರು ಆಜ್ಞೆ
ಮಾಡಿದರು. ವೇದವ್ಯಾಸರ ಸೇವೆಯಲ್ಲಿ ಉತ್ಸಹವುಳ್ಳ ಮನ್ಮಥ, ರೋಮಹರ್ಷಣನನ್ನು ಪ್ರವೇಶ ಮಾಡಿದನು.
ದ್ವೈಪಾಯನರು ಆ ಕಾಮದೇವನಿಂದ
ಕೂಡಿರುವ ರೋಮಹರ್ಷಣನಿಗೆ ಎಲ್ಲಾ ಜ್ಞಾನವನ್ನು ನೀಡಿದರು. ಸನತ್ಕುಮಾರ ಮೊದಲಾದವರನ್ನು ವ್ಯಾಸರು ಯೋಗಪ್ರವರ್ತಕರನ್ನಾಗಿ ನಿಯಮಿಸಿದರು.
ಭೃಗ್ವಾದೀನ್ ಕರ್ಮ್ಮಯೋಗಸ್ಯ ಜ್ಞಾನಂ ದತ್ವಾsಮಲಂ ಶುಭಮ್ ।
ಜೈಮಿನಿಂ ಕರ್ಮ್ಮಮೀಮಾಂಸಾಕರ್ತ್ತಾರಮಕರೋತ್ ಪ್ರಭುಃ ॥೧೦.೮೨ ॥
ಭೃಗು ಮೊದಲಾದವರಿಗೆ ಕರ್ಮಯೋಗದ
ಜ್ಞಾನವನ್ನು ಕೊಟ್ಟ ವ್ಯಾಸರು, ಆ ಕರ್ಮಯೋಗವನ್ನು ಪ್ರವರ್ತನೆ ಮಾಡುವಂತೆ ಅವರಿಗೆ ಆದೇಶ ನೀಡಿದರು.
ಜೈಮಿನಿಗಳು ವೇದವ್ಯಾಸರ ಆಜ್ಞೆಯಿಂದ ಕರ್ಮಮೀಮಾಂಸವನ್ನು ರಚಿಸಿದರು. [ಅಥಾತೋ ಧರ್ಮ ಜಿಜ್ಞಾಸಾ..
ಎಂದು ಇಂದು ನಾವೇನು ಓದುತ್ತಿದ್ದೇವೆ, ಈ ಸೂತ್ರಗಳನ್ನು ರಚಿಸಿದ್ದು ಜೈಮಿನಿಗಳು.]
No comments:
Post a Comment