ಕೃತಶ್ಚ ಕದ್ರ್ವಾಸ್ತನಯೋsತ್ರ ವಾಸುಕಿರ್ನ್ನೇತ್ರಂ ತ್ವಯಾ
ಕಶ್ಯಪಜಃ ಸ ನಾಗರಾಟ್ ।
ಮಮನ್ಥುರಬ್ಧಿಂ ಸಹಿತಾಸ್ತ್ವಯಾ ಸುರಾಃ ಸಹಾಸುರಾ ದಿವ್ಯಪಯೋ
ಘೃತಾಧಿಕಮ್ ॥೧೦.೦೯
॥
ಓ ಪರಮಾತ್ಮನೇ, ನಿನ್ನಿಂದಾಗಿ ಸಮುದ್ರಮಥನದಲ್ಲಿ ಕದ್ರು ಮತ್ತು ಕಶ್ಯಪರ ದಾಂಪತ್ಯದಲ್ಲಿ
ಹುಟ್ಟಿರುವ, ನಾಗರ ಒಡೆಯನಾದ ವಾಸುಕಿಯು ಹಗ್ಗವಾಗಿ ಬಳಸಲ್ಪಟ್ಟನು (ವಾಸುಕಿಯನ್ನು ಹಗ್ಗದಂತೆ ಬಳಸಿ ಕಡಲನ್ನು ಕಡೆದರು).
ನಿನ್ನಿಂದಾಗಿ ದೈತ್ಯರಿಂದೊಡಗೂಡಿದ ದೇವತೆಗಳು ಅಲೌಕಿಕವಾಗಿರುವ, ತುಪ್ಪದಂತೆ ಸಾಂದ್ರತೆಯನ್ನು ಹೊಂದಿರುವ
ಆ ಹಾಲನ್ನು ಕಡೆದರು[ತಥಾಚ: ದೇವತೆಗಳು ಮತ್ತು ದೈತ್ಯರು ಪರಮಾತ್ಮನ ಜೊತೆಗೇ
ಕ್ಷೀರ ಸಮುದ್ರವನ್ನು, ಮಂದರವೇ ಕಡಗೋಲಾಗಿ, ವಾಸುಕಿಯನ್ನು ಹಗ್ಗವಾಗಿ ಬಳಸಿ ಕಡೆದರು]
ನೈಚ್ಛನ್ತ ಪುಚ್ಛಂ ದಿತಿಜಾ ಅಮಙ್ಗಲಂ ತದಿತ್ಯಥಾಗ್ರಂ
ಜಗೃಹುರ್ವಿಷೋಲ್ಬಣಮ್ ।
ಶ್ರಾನ್ತಾಶ್ಚ ತೇsತೋ ವಿಬುಧಾಸ್ತು ಪುಚ್ಛಂ ತ್ವಯಾ
ಸಮೇತಾ ಜಗೃಹುಸ್ತ್ವದಾಶ್ರಯಾಃ ॥೧೦.೧೦॥
ಹೀಗೆ ಕಡೆಯುವಾಗ ದೈತ್ಯರು ಅಮಂಗಲ ಎಂದು ಭಾವಿಸಿ, ಬಾಲವನ್ನು ಬಯಸದೇ,
ವಿಷದಿಂದ ಕೂಡಿರುವ ವಾಸುಕಿಯ ಮುಂಭಾಗವನ್ನು ಹಿಡಿದರು. ಆ ಕಾರಣದಿಂದ ದೈತ್ಯರು ಆಯಾಸಗೊಂಡರು. (ಮುಂಭಾಗದಿಂದ
ಹಾವಿನ ವಿಷ ಅವರನ್ನು ಸ್ಪರ್ಶಿಸುತ್ತಿತ್ತು) . ನಿನ್ನಿಂದ ಸಹಿತರಾದ, ನಿನ್ನನ್ನೇ ಆಶ್ರಯವಾಗಿ ಹೊಂದಿರುವ(ನಿನ್ನ ಭಕ್ತರಾದ)
ದೇವತೆಗಳು ಬಾಲವನ್ನು ಹಿಡಿದರು.
ಅಥಾತಿಭಾರಾದವಿಶತ್ ಸುಕಾಞ್ಚನೋ ಗಿರಿಃ ಸ ಪಾತಾಳಮಥ ತ್ವಮೇವ ।
ತಂ ಕಚ್ಛಪಾತ್ಮಾ ತ್ವಭರಃ ಸ್ವಪೃಷ್ಠೇ ಹ್ಯನನ್ಯಧಾರ್ಯ್ಯಂ ಪುರುಲೀಲಯೈವ ॥೧೦.೧೧॥
ತದನಂತರ, ಬಂಗಾರಮಯವಾದ ಆ ಬೆಟ್ಟವು ಅತ್ಯಂತ ಒತ್ತಡ ಬಿದ್ದುದರಿಂದ ಪಾತಾಳದತ್ತ ಕುಸಿಯಲಾರಂಭಿಸಿತು.
ಆಗ ನೀನೇ, ಯಾರಿಗೂ ಹೊರಲಾಗದ ಆ ಪರ್ವತವನ್ನು ಅತ್ಯಂತ
ಲೀಲೆಯಿಂದ, ಕೂರ್ಮಾವತಾರವನ್ನು ತಾಳಿ, ನಿನ್ನ ಬೆನ್ನಿನ ಮೇಲೆ ಹೊತ್ತೆಯಷ್ಟೇ.
ಉಪರ್ಯ್ಯಧಶ್ಚಾsತ್ಮನಿ ನೇತ್ರಗೋತ್ರಯೋಸ್ತ್ವಯಾ
ಪರೇಣಾsವಿಶತಾ ಸಮೇಧಿತಾಃ ।
ಮಮಂಥುರಬ್ಧಿಂ ತರಸಾ ಮದೋತ್ಕಟಾಃ ಸುರಾಸುರಾಃ ಕ್ಷೋಭಿತನಕ್ರಚಕ್ರಮ್ ॥೧೦.೧೨॥
ಹಗ್ಗ ಮತ್ತು ಪರ್ವತಗಳೆರಡರಲ್ಲೂ(ಪರ್ವತದ
ಮೇಲೆ ಮತ್ತು ಪರ್ವತದ ಕೆಳಗೂ) ನೀನು ಪ್ರವೇಶಿಸಿದ್ದುದರಿಂದ , ಎಲ್ಲರ ಅಂತರ್ಯಾಮಿಯಾಗಿಯೂ ಕೂಡಾ
ನೀನು ಪ್ರವೇಶ ಮಾಡಿದುದರಿಂದ, ಬಲದಿಂದ ಕೂಡಿರುವ ದೇವತೆಗಳು ಮತ್ತು ದೈತ್ಯರು, ಜಲಚರ ಪ್ರಾಣಿಗಳಿಂದ
ಕೂಡಿದ ಆ ಸಮುದ್ರವನ್ನು ವೇಗದಿಂದ ಕಡೆದರು.[ ಕಡಲಿನಲ್ಲಿ ಆ ಬೆಟ್ಟವನ್ನು ಇಟ್ಟಿದ್ದರು.
ಬೆಟ್ಟಕ್ಕೆ ಆ ಹಾವನ್ನು ಸುತ್ತಿದ್ದರು. ಆ ಹಾವಿನ ಒಳಗೆ ಭಗವಂತ ಸನ್ನಿಹಿತನಾಗಿದ್ದ. ಆದ್ದರಿಂದ
ಅದು ತುಂಡಾಗಲಿಲ್ಲಾ. ಇನ್ನು ಪರ್ವತದ ಒಳಗೂ ಭಗವಂತ
ಸನ್ನಿಹಿತನಾಗಿದ್ದ. ಕೂರ್ಮರೂಪಿಯಾಗಿ ಪರ್ವತದ ಕೆಳಭಾಗದಲ್ಲಿ ಭಗವಂತ ಪರ್ವತವನ್ನು ಬೆನ್ನಿನ ಮೇಲೆ ಹೊತ್ತು
ನಿಂತಿದ್ದ. ಹೀಗೆ ಮದೋತ್ಕಟರಾಗಿ ದೇವತೆಗಳು ಹಾಗು
ದೈತ್ಯರು ಕಡಲನ್ನು ಕಡೆದರು].
No comments:
Post a Comment