ಅಥೋ ಮನುಷ್ಯೇಷು ತಥಾsಸುರೇಷು ರೂಪಾನ್ತರೈಃ
ಕಲಿರೇವಾವಶಿಷ್ಟಃ ।
ತತೋ ಮನುಷ್ಯೇಷು ಚ ಸತ್ಸು ಸಂಸ್ಥಿತೋ ವಿನಾಶ್ಯ ಇತ್ಯೇಷ
ಹರಿರ್ವ್ಯಚಿನ್ತಯತ್ ॥೧೦.೬೧ ॥
ದೇವತೆಗಳ ಮನಸ್ಸಿನಿಂದ ಹೊರಟುಹೋದ
ಮೇಲೆ, ಮನುಷ್ಯರಲ್ಲಿ ಮತ್ತು ಅಸುರರಲ್ಲಿ
ಬೇರೆಬೇರೆ ರೀತಿಗಳಿಂದ ಕಲಿಯು ಅವಶಿಷ್ಟನೇ ಆಗಿರುತ್ತಾನೆ. ಅದರಿಂದಾಗಿ ‘ಸಜ್ಜನರಾಗಿರುವ ಮನುಷ್ಯರಲ್ಲಿ ಇರತಕ್ಕಂತಹ
ಕಲಿಯು ವಿನಾಶಕ್ಕೆ ಅರ್ಹನು’ ಎಂದು ವೇದವ್ಯಾಸರು
ಚಿಂತಿಸಿದರು.
ತತೋ ನೃಣಾಂ ಕಾಲಬಲಾತ್ ಸುಮನ್ದಮಾಯುರ್ಮ್ಮತಿಂ ಕರ್ಮ್ಮ ಚ ವೀಕ್ಷ್ಯ
ಕೃಷ್ಣಃ ।
ವಿವ್ಯಾಸ ವೇದಾನ್ ಸ ವಿಭುಶ್ಚತುರ್ದ್ಧಾ ಚಕ್ರೇ ತಥಾ ಭಾಗವತಂ ಪುರಾಣಮ್ ॥೧೦.೬೨॥
ತದನಂತರ ಸರ್ವಸಮರ್ಥರಾದ
ವೇದವ್ಯಾಸರು, ಕಾಲದ ಬಲದಿಂದಾಗಿ(ಯುಗಸಾಮರ್ಥ್ಯದಿಂದ) ಮನುಷ್ಯರ ಅತ್ಯಂತ ಅಲ್ಪವಾದ ಆಯುಷ್ಯ, ಬುದ್ಧಿಶಕ್ತಿ, ಮತ್ತು ಕರ್ಮವನ್ನು ವಿಚಾರಮಾಡಿ, ಮೂಲವೇದವನ್ನು ನಾಲ್ಕು
ವೇದಗಳನ್ನಾಗಿ ವಿಭಾಗಿಸಿದರು. ಹಾಗೆಯೇ , ನೇರವಾಗಿ ಭಗವಂತನ ಮಹಿಮೆಯನ್ನು ಸಾರುವ, ಪುರಾಣಗಳ ರಾಜ ಎನಿಸಿದ ಶ್ರೀಮದ್ಭಾಗವತನ್ನೊಳಗೊಂಡ ಭಗವತ್ಸಂಬಂಧಿಯಾದ ಅಷ್ಟಾದಶ ಪುರಾಣಗಳನ್ನು ರಚಿಸಿದರು.
ಯೇಯೇ ಚ ಸನ್ತಸ್ತಮಸಾsನುವಿಷ್ಟಾಸ್ತಾಂಸ್ತಾನ್
ಸುವಾಕ್ಯೈಸ್ತಮಸೋ ವಿಮುಞ್ಚನ್ ।
ಚಚಾರ ಲೋಕಾನ್ ಸ ಪಥಿ ಪ್ರಯಾನ್ತಂ ಕೀಟಂ ವ್ಯಪಶ್ಯತ್ ತಮುವಾಚ ಕೃಷ್ಣಃ ॥೧೦.೬೩॥
ಭವಸ್ವ ರಾಜಾ ಕುಶರೀರಮೇತತ್ ತ್ಯಕ್ತ್ವೇತಿ ನೈಚ್ಛತ್ ತದಸೌ ತತಸ್ತಮ್ ।
ಅತ್ಯಕ್ತದೇಹಂ ನೃಪತಿಂ ಚಕಾರ ಪುರಾ ಸ್ವಭಕ್ತಂ ವೃಷಲಂ ಸುಲುಬ್ಧಮ್ ॥೧೦.೬೪॥
ಲೋಭಾತ್ ಸ ಕೀಟತ್ವಮುಪೇತ್ಯ ಕೃಷ್ಣಪ್ರಸಾದತಶ್ಚಾsಶು ಬಭೂವ ರಾಜಾ ।
ತದೈವ ತಂ ಸರ್ವನೃಪಾಃ ಪ್ರಣೇಮುರ್ದ್ಧದುಃ ಕರಂ ಚಾಸ್ಯ ಯಥೈವ ವೈಶ್ಯಾಃ
॥೧೦.೬೫॥
ಯಾವಯಾವ ಸಜ್ಜನರು ಅಜ್ಞಾನದಿಂದ
ಕೂಡಿದ್ದಾರೋ(ಪ್ರವಿಷ್ಟರಾಗಿದ್ದಾರೋ) ಅವರೆಲ್ಲರನ್ನೂ ಕೂಡಾ ಜ್ಞಾನಪೂರ್ವಕವಾದ ಉತ್ತಮ ಮಾತುಗಳಿಂದ ಅಜ್ಞಾನದಿಂದ ಬಿಡುಗಡೆ ಮಾಡಿದ ವೇದವ್ಯಾಸರು,
ಲೋಕದಲೆಲ್ಲಾ ಸಂಚಾರ ಮಾಡಿದರು.(ಇಲ್ಲಿಯ ತನಕ ಆದಿಪರ್ವದ
ಭಾಗವನ್ನು ವಿವರಿಸಿದ ಆಚಾರ್ಯರು ಇಲ್ಲಿ ಅನುಶಾಸನಪರ್ವ ಮತ್ತು ಶಾಂತಿಪರ್ವದಲ್ಲಿ ಬರುವ ಕಥೆಯನ್ನು
ಜೋಡಿಸಿ ನೀಡಿದ್ದಾರೆ)
ಒಮ್ಮೆ ವೇದವ್ಯಾಸರು ಸಾಗುತ್ತಿದ್ದ ಮಾರ್ಗದಲ್ಲಿ ಕಂಡ ಒಂದು ಕೀಟವನ್ನು ನೋಡಿ ಈ ರೀತಿ ಹೇಳುತ್ತಾರೆ:
“ಈ ಕೆಟ್ಟ ಶರೀರವನ್ನು ಬಿಟ್ಟು
ರಾಜನಾಗು” ಎಂದು. ಆದರೆ ದೇಹವನ್ನು ಬಿಡಲು ಕೀಟ ಬಯಸಲಿಲ್ಲಾ! (ಯಾರ್ಯಾರು ಯಾವಯಾವ ದೇಹದಲ್ಲಿರುತ್ತಾರೋ,
ಆ ದೇಹದ ಮೇಲೆ ಅವರಿಗೆ ಅತ್ಯಂತ ವ್ಯಾಮೋಹವಿರುತ್ತದೆ.
ಅದು ಎಂತಹ ದೇಹವೇ ಇರಲಿ. ಇದೊಂದು ವಿಚಿತ್ರ ಬಂಧ). ಆದರೆ ದೇಹ ಬಿಡದ ಆ ಜೀವವನ್ನು ವ್ಯಾಸರು ರಾಜನನ್ನಾಗಿ
ಮಾಡಿದರು. (ಇದನ್ನೇ ವಾದಿರಾಜರು ‘ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ’ ಎನ್ನುವ
ತಮ್ಮ ರಚನೆಯಲ್ಲಿ ‘ಕ್ರಿಮಿಯಿಂದರಾಜ್ಯವಾಳಿಸಿದ ಜಗತ್ಸ್ವಾಮಿ ನೀನೆಂದು ತೋರಿಸಿದೆ’ ಎಂದು ಹಾಡಿ ಹೊಗಳಿದ್ದಾರೆ).
ಆ ಜೀವ ಹಿಂದಿನ ಜನ್ಮದಲ್ಲಿ ಪರಮಾತ್ಮನ
ಅನನ್ಯ ಭಕ್ತಿಯುಳ್ಳ ಒಬ್ಬ ವೃಷಲನಾಗಿದ್ದ(ಶೂದ್ರನಾಗಿದ್ದ). ಆದರೆ ಹಿಂದಿನ ಜನ್ಮದಲ್ಲಿ ಅವನಲ್ಲೊಂದು ದೋಷವಿತ್ತು. ಆತ ಅತ್ಯಂತ ಜಿಪುಣನಾಗಿದ್ದ. ಆ ಪಾಪದಿಂದಾಗಿ ಕೀಟವಾಗಿ
ಹುಟ್ಟಿದ್ದ. ಆದರೆ ಆ ಕೀಟ ದೇಹದಲ್ಲೂ ಹಿಂದಿನ ಜನ್ಮದ
ಅನನ್ಯ ಭಕ್ತಿಯ ಪ್ರಭಾವದಿಂದ ಆತ ವೇದವ್ಯಾಸರ ಅನುಗ್ರಹಕ್ಕೆ ಪಾತ್ರನಾದ.
ಹೀಗೆ ತನ್ನ ಪೂರ್ವ ಜನ್ಮದ ಕರ್ಮದಿಂದ
ಕ್ರಿಮಿಯಾಗಿದ್ದ ಆತ, ವೇದವ್ಯಾಸರ ಅನುಗ್ರಹದಿಂದ ಕೀಟ
ದೇಹದಲ್ಲೇ ರಾಜನಾದ! ಅವನಿಗೆ ಎಲ್ಲಾ ರಾಜರೂ, ವೈಶ್ಯರು ರಾಜನಿಗೆ ಕಪ್ಪವನ್ನು ಕೊಡುವಂತೆ ಕಪ್ಪ-ಕಾಣಿಕೆಯನ್ನು
ಕೊಟ್ಟು ನಮಸ್ಕರಿಸಿ ಹೋಗುತ್ತಿದ್ದರು.
ಉವಾಚ ತಂ ಭಗವಾನ್ ಮುಕ್ತಿಮಸ್ಮಿಂಸ್ತವ ಕ್ಷಣೇ ದಾತುಮಹಂ ಸಮರ್ತ್ಥಃ ।
ತಥಾsಪಿ ಸೀಮಾರ್ತ್ಥಮವಾಪ್ಯ ವಿಪ್ರತನುಂ
ವಿಮುಕ್ತೋ ಭವ ಮತ್ ಪ್ರಸಾದಾತ್ ॥೧೦.೬೬
॥
ಈ ರೀತಿ ರಾಜನಾದ ಆತನನ್ನು ಕುರಿತು ವೇದವ್ಯಾಸರು ಹೇಳುತ್ತಾರೆ: “ನಿನಗೆ ಈ ಕ್ಷಣದಲ್ಲಿಯೇ (ನಿನ್ನ
ಪ್ರಾರಬ್ಧಕರ್ಮವನ್ನೂ ಮುರಿದು) ಮೋಕ್ಷವನ್ನು ಕೊಡಲು ನಾನು ದಕ್ಷನಿದ್ದೇನೆ. ಆದರೂ, ನಿನ್ನ ಕರ್ಮಕ್ಕನುಗುಣವಾಗಿ, ಕೊನೆಯ ಜನ್ಮವಾದ ಮುಂದಿನ ಜನ್ಮದಲ್ಲಿ,
ಬ್ರಾಹ್ಮಣ ಶರೀರವನ್ನು ಹೊಂದಿ, ನನ್ನ ಅನುಗ್ರಹದಿಂದ
ಮುಕ್ತನಾಗುವೆ” ಎಂದು.
ಜ್ಞಾನಂ ಚ ತಸ್ಮೈ ವಿಮಲಂ ದದೌ ಸ ಮಹೀಂ ಚ ಸರ್ವಾಂ ಬುಭುಜೇ ತದನ್ತೇ ।
ತ್ಯಕ್ತ್ವಾ ತನುಂ ವಿಪ್ರವರತ್ವಮೇತ್ಯ ಪದಂ ಹರೇರಾಪ ಸುತತ್ತ್ವವೇದೀ ॥೧೦.೬೭॥
ಹೀಗೆ ವೇದವ್ಯಾಸ ರೂಪಿ ಭಗವಂತ ಆ ಕೀಟದಲ್ಲಿರುವ
ಸಜ್ಜೀವಿಗೆ ನಿರ್ಮಲವಾದ ವೇದಾಂತ ಜ್ಞಾನವನ್ನು ಕೊಟ್ಟ. ಈ ರೀತಿ ವೇದವ್ಯಾಸರಿಂದ
ಅನುಗ್ರಹಿಸಲ್ಪಟ್ಟ ಆತ ಸಮಗ್ರ ಭೂಮಿಯನ್ನು ಆಳಿದ. ಕೊನೆಯಲ್ಲಿ ತನ್ನ ದೇಹವನ್ನು ಬಿಟ್ಟು, ಬ್ರಾಹ್ಮಣ ಜನ್ಮವನ್ನು ಹೊಂದಿ, ಒಳ್ಳೆಯ
ತತ್ತ್ವವನ್ನು ತಿಳಿದು, ನಾರಾಯಣನ ಪದವನ್ನು(ಮೋಕ್ಷವನ್ನು) ಸೇರಿದ.
ಏವಂ ಬಹೂನ್ ಸಂಸೃತಿಬನ್ಧತಃ ಸ ವ್ಯಮೋಚಯದ್ ವ್ಯಾಸತನುರ್ಜ್ಜನಾರ್ದ್ದನಃ
।
ಬಹೂನ್ಯಚಿನ್ತ್ಯಾನಿ ಚ ತಸ್ಯ ಕರ್ಮ್ಮಾಣ್ಯಶೇಷದೇವೇಶಸದೋದಿತಾನಿ ॥೧೦.೬೮॥
ಹೀಗೆ ವ್ಯಾಸರೂಪದಲ್ಲಿ ಕಾಣಿಸಿಕೊಂಡ ನಾರಾಯಣನು,
ಬಹಳ ಜನರನ್ನು ಸಂಸಾರ ಬಂಧನದಿಂದ ಬಿಡುಗಡೆಗೊಳಿಸಿದ. ವ್ಯಾಸರೂಪದಲ್ಲಿ ಭಗವಂತ ಮಾಡಿ ತೋರಿದ ಅನೇಕ ದಿವ್ಯ
ಕರ್ಮಗಳನ್ನು ಎಲ್ಲಾ ದೇವತಾ ಶ್ರೇಷ್ಠರೂ ಕೂಡಾ ನಿರಂತರ ಸ್ಮರಿಸುತ್ತಿರುತ್ತಾರೆ.
No comments:
Post a Comment