ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 6, 2018

Mahabharata Tatparya Nirnaya Kannada 10.05-10.08


[ಮುಂದಿನ ಶ್ಲೋಕವನ್ನು ವಿಶ್ಲೇಷಿಸುವ ಮೊದಲು ಸಮುದ್ರ ಮಥನಕ್ಕೆ ಸಂಬಂಧಿಸಿದಂತೆ ಬೇರೆಬೇರೆ ಗ್ರಂಥಗಳಲ್ಲಿ ಹೇಳಿರುವ ಮಾತುಗಳ ಸಂಗ್ರಹವನ್ನು  ನೋಡೋಣ. ಈ ಎಲ್ಲಾ ವಿವರಗಳನ್ನು  ನೋಡಿದಾಗ,  ಮುಂದಿನ ಶ್ಲೋಕಗಳಲ್ಲಿ  ಆಚಾರ್ಯರು ಈ ಕುರಿತು ನೀಡಿರುವ ನಿರ್ಣಯ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಮೊದಲನೆಯದಾಗಿ ಮಹಾಭಾರತದಲ್ಲಿ ಸಮುದ್ರ ಮಥನ ಕುರಿತಾಗಿ ಈ ರೀತಿಯ ವಿವರಣೆ ಕಾಣಸಿಗುತ್ತದೆ: ತತೋSಭ್ರಶಿಖರಾಕಾರೈರ್ಗಿರಿಶೃನ್ಗೈರಲನ್ಕೃತಮ್ ಮನ್ದರಂ ಪರ್ವತವರಂ ಲತಾಜಾಲಸಮಾವೃತಮ್ ... ಏಕಾದಶಸಹಸ್ರಾಣಿ ಯೋಜನಾನಾಂ ಸಮುಚ್ಛ್ರಿತಂ ಅಧೋ ಭೂಮೇಃ ಸಹಸ್ರೇಷು ತಾವತ್ಸ್ವೇವ ಪ್ರತಿಷ್ಠಿತಂ ತಮುದ್ಧರ್ತುಂಮಶಕ್ತಾ  ವೈ ಸರ್ವೇ ದೇವಗಣಾಸ್ತದಾ ವಿಷ್ಣುಮಾಸೀನಮಭ್ಯೇತ್ಯ ಬ್ರಹ್ಮಾಣಂ ಚೇದಮಬ್ರುವನ್ ಭವನ್ತಾವತ್ರ ಕುರುತಾಂ ಬುದ್ಧಿಂ ನೈಃಶ್ರೇಯಸೀಂ ಪರಾಮ್ ಮನ್ದರೋದ್ಧರಣೇ ಯತ್ನಃ  ಕ್ರಿಯತಾಂ ಚ  ಹಿತಾಯ ನಃ  ಸೌತಿಃ-ತಥೇತಿ ಚಾಬ್ರವೀದ್  ವಿಷ್ಣುರ್ಬ್ರಹ್ಮಣಾ ಸಹ ಭಾರ್ಗವ ಅಚೋದಯದಮೇಯಾತ್ಮಾ ಫಣೀನ್ದ್ರಂ  ಪದ್ಮಲೋಚನಃ ತತೋSನನ್ತಃ ಸಮುತ್ಥಾಯ ಬ್ರಹ್ಮಣಾ ಪರಿಚೋದಿತಃ ನಾರಾಯಣೇನ ಚಾಪ್ಯುಕ್ತಸ್ತಸ್ಮಿನ್ ಕರ್ಮಣಿ  ವೀರ್ಯವಾನ್ ಅಥ ಪರ್ವತರಾಜಾನಂತಮನಂತೋ ಮಹಾಬಲಃ ಉಜ್ಜಹಾರ ಬಲಾದ್ ಬ್ರಹ್ಮನ್ ಸವನಂ ಸವನೌಕಸಂ ತತಸ್ತೇನ ಸುರಾಃ ಸಾರ್ಧಂ ಸಮುದ್ರಮುಪತಸ್ತಿರೇ (ಆದಿಪರ್ವ -೧೮.೧-೧೦)
ಮಂದರ ಪರ್ವತ  ಹನ್ನೊಂದು ಸಾವಿರ ಯೋಜನ ಸುತ್ತಳತೆ ಇದ್ದು,  ಭೂಮಿಯ ಆಳಕ್ಕೂ ಕೂಡಾ  ಹನ್ನೊಂದು ಸಾವಿರ ಯೋಜನ ವ್ಯಾಪಿಸಿತ್ತು. ಅಂತಹ ಪರ್ವತವನ್ನು ಎತ್ತಲು ದೇವತೆಗಳಿಂದ ಸಾಧ್ಯವಾಗಲಿಲ್ಲಾ. ಆಗ ದೇವತೆಗಳೆಲ್ಲರೂ ನಾರಾಯಣನ ಬಳಿ ಬಂದು ಈ ರೀತಿ ನಿವೇದಿಸಿಕೊಂಡರು:  ‘ಮಂದರವನ್ನು ತಂದು ಕಡಗೊಲಿನಂತೆ ಇಟ್ಟು ಸಮುದ್ರವನ್ನು ಕಡೆಯಬೇಕು.  ಆದರೆ ಅದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅದನ್ನು ನೀವೇ ಎತ್ತಬೇಕು’ ಎಂದು. ಆಗ ಭಗವಂತ ಶೇಷನನ್ನು ಪ್ರಚೋದಿಸಿದ. ಹೀಗೆ ನಾರಾಯಣನಿಂದ ಪ್ರಚೋದಿಸಲ್ಪಟ್ಟ ಅನಂತನು ಪರ್ವತ ಶ್ರೇಷ್ಠವಾದ ಮಂದಾರವನ್ನು ಕಿತ್ತು ತಂದ.

ಇನ್ನು ಸ್ಕಂದಪುರಾಣದಲ್ಲಿ ಸಮುದ್ರಮಥನದ ಕುರಿತು ಈ ರೀತಿಯ ವಿವರಣೆ ಇದೆ:
ಮನ್ದರಾದ್ರಿಮುಪೇತ್ಯಾಥ ನಾನೌಷಧಿವಿರಾಜಿತಮ್ ಏಕಾದಶ ಸಹಸ್ರಾಣಿ  ಯೋಜನಾನಾಂ ಭುವಿ ಸ್ಥಿತಂ ನೋದ್ಧರ್ತಮಶಕಂಸ್ತೇ  ತಂ ತದಾನಿಂ  ತುಷ್ಟೂರ್ವರ್ಹರಿಮ್ ಏತದ್ ವಿದಿತ್ವಾಭಗವಾನ್ ಸನ್ಕರ್ಷಣಮಹೀಶ್ವರಂ ಅಜಿಜ್ಞಪತ್ ತಮುದ್ಧರ್ತುಂ  ಬದ್ಧಮೂಲಂ  ಮಹೀಧರಂ ಫೂತ್ಕಾರಮಾತ್ರೇಣೈಕೇನ ಸ ತು ಸಧ್ಯಸ್ತಮೀಶ್ವರಃ ಬಹಿಶ್ಚಿಕ್ಷೇಪ ತತ್ಸ್ಥಾನಾದ್ ಯೋಜನದ್ವಿತಯಾಂತರೇ ಅತ್ಯಾಶ್ಚರ್ಯಂ ತದಾಲೋಕ್ಯ ಹೃಷ್ಟಾಃ ಸರ್ವೇ ಸುರಾಸುರಾಃ  ತದನ್ತಿಕಮುಪಾಜಗ್ಮುರ್ಧಾವಂತಶ್ಚ ಕೃತಾರವಾಃ   ಬಲಿನೋ ಯತ್ನವನ್ತೋSಪಿ ಪರಿಘೋಪಮಬಾಹವಃ ಉದ್ಧೃತ್ಯ  ನೇತುಂ ನೋ ಶೇಕುರ್ವಿಶಣ್ಣಾ ವಿಫಲಶ್ರಮಾಃ   ಜ್ಞಾತ್ವಾ ಸುರಗಣಾನ್ ಖಿನ್ನಾನ್ ಭಗವಾನ್ ಸರ್ವದರ್ಶನಃ  ತಾರ್ಕ್ಷ್ಯಮಾಜ್ಞಾಪಯಾಮಾಸ ನೇತುಂ ತಮುದಧಿಂ ದೃತಂ’ (ವೈಷ್ಣವ ಖಂಡೇ ವಾಸುದೇವ ಮಹತ್ಮ್ಯೇ. ೧೧.೪-೧೦)

ಸ್ಕಂದ ಪುರಾಣವೂ ಮಂದರಪರ್ವತದ ಪರಿಮಾಣವನ್ನು ಮಹಾಭಾರತದಲ್ಲಿ ಹೇಳಿದಂತೆ ಹೇಳುತ್ತದೆ. ಎತ್ತಲಾಗದೇ ದೇವತೆಗಳು ಭಗವಂತನನ್ನು ಸ್ತೋತ್ರ ಮಾಡುತ್ತಾರೆ ಎಂತಲೂ ಇಲ್ಲಿ ಹೇಳಿದ್ದಾರೆ. ದೇವತೆಗಳ ಪ್ರಾರ್ಥನೆಯನ್ನಾಲಿಸಿದ ಭಗವಂತ ಸಂಕರ್ಷಣನಿಗೆ ಆಜ್ಞೆಕೊಟ್ಟು ‘ಊಫ್’ ಎಂದು ಊದಿದ. ಆಗ ಮಂದರ ಪರ್ವತ ಕಿತ್ತುಕೊಂಡು ಬಂತು. ಸಂತಸದಿಂದ ಕೇಕೆ ಹಾಕುತ್ತಾ ಕೂಗು ಹಾಕುತ್ತಾ ದೇವತೆಗಳು ಪರ್ವತವಿದ್ದಲ್ಲಿಗೆ  ಹೋಗಿ ಅದನ್ನು ಎತ್ತಲು ಪ್ರಯತ್ನಿಸಿದರು. ಆದರೆ ಅವರಿಂದ ಎತ್ತಲಾಗಲಿಲ್ಲಾ. ಅವರದ್ದು ವಿಫಲಶ್ರಮವಾಯಿತು.  ಖಿನ್ನರಾಗಿರುವ ಅವರನ್ನು ನೋಡಿ  ದೇವರು ಮಂದರವನ್ನು ಸಮುದ್ರದ ಬಳಿ ಕೊಂಡಯ್ಯಲು ಗರುಡನಿಗೆ ಆಜ್ಞೆ ಮಾಡಿದ’.

ಇನ್ನು ಭಾಗವತದಲ್ಲಿ ಈ ಕುರಿತಾಗಿ  ಬೇರೆಯೇ ಕಥೆ ಇದೆ: ತತೋ ದೇವಾಸುರಾಃ ಕೃತ್ವಾ ಸಂವಿಧಂ ಕೃತಸೌಹೃದಾಃ ಉದ್ಯಮಂಪರಮಂ ಚಕ್ರುರಮೃತಾರ್ಥೇ ಪರಂತಪ ತತಸ್ತೇ ಮಂದರಗಿರಿಮೋಜಸೋತ್ಪಾಟ್ಯ ದುರ್ಮದಾಃ ನದಂತ ಉದಧಿಂ ನಿನ್ಯುಃ ಶಕ್ತ್ಯಾ ಪರಿಘಬಾಹವಃ ದೂರಭಾರೋದ್ವಹಶ್ರಾನ್ತಾಃ  ಶಕ್ರವೈರೋಚನಾದಯಃ   ಅಪಾರಯನ್ತಸ್ತಂ ವೋಢುಂ ವಿವಶಾ  ವಿಜಹುಃ ಪಥಿ  ನಿಪತನ್ ಸ ಗಿರಿಸ್ತತ್ರ ಬಹೂನಮರದಾನವಾನ್ ಚೂರ್ಣಯಾಮಾಸ ಸಹಸಾ ಭಾರೇಣ ಕನಕಾಚಲಃ ತಾಂಸ್ತಥಾ ಭಗ್ನಮನಸೋ ಭಗ್ನಬಾಹೂರುಕಂಧರಾನ್   ವಿಜ್ಞಾಯ ಭಗವಾಂಸ್ತತ್ರ ಬಭೂವ ಗರುಡಧ್ವಜಃ  ಗಿರಿಪಾತವಿನಿಷ್ಪಿಷ್ಟಾನ್ ವಿಲೋಕ್ಯಾಮರದಾನವಾನ್ । ಈಕ್ಷಯಾ ಜೀವಯಾಮಾಸ ನಿರ್ಜರಾನ್ ನಿರ್ವ್ರಣಾನ್ ಯಥಾ ಗಿರಿಂ ಚಾSರೋಪ್ಯ ಗರುಡೇ ಹಸ್ತೇನೈಕೇನ ಲೀಲಯಾ। ಆರುಹ್ಯ ಪ್ರಯಯಾವಬ್ಧಿಂ ಸುರಾಸುರಗಣೈರ್ವೃತಃ (೮.೬.೩೨-೩೮)
ದೇವತೆಗಳು ಮತ್ತು ಅಸುರರು ಇಬ್ಬರೂ ಒಪ್ಪಂದ ಮಾಡಿಕೊಂಡರು.  ದೇವತೆಗಳು ದಾನವರು ಸೇರಿ ಮಂದರ ಪರ್ವತವನ್ನು  ಕಿತ್ತು ಕ್ಷೀರ ಸಮುದ್ರದತ್ತ  ಹೊರಟರು. ಪರ್ವತದ ಭಾರದಿಂದ ಬಹಳ ದೂರ ಸಾಗಲಾಗದೇ  ಮಧ್ಯದಲ್ಲೇ ಅವರು ಪರ್ವತವನ್ನು ಕೆಳಗಿಟ್ಟರು. ಪರ್ವತ ಬಹಳ ಭಾರವಿದ್ದುದರಿಂದ ಅವರ ಅಂಗಾಂಗಗಳಿಗೆ ಹಾನಿಯಾಯಿತು. ಇದನ್ನು ನೋಡಿ ಭಗವಂತ ಗರುಡನ ಮೇಲೇರಿ ತಾನೇ ಬಂದ. ಭಗವಂತ ಕೇವಲ ತನ್ನ ನೋಟದಿಂದಲೇ ದೇವ-ದಾನವರ ಅಂಗಾಂಗಗಳನ್ನು ಸರಿಪಡಿಸಿದ. ನಂತರ ಪರ್ವತವನ್ನು ಎತ್ತಿ  ಗರುಡನ ಮೇಲಿರಿಸಿದ ಮತ್ತು ಗರುಡ ಅದನ್ನು ಲೀಲೆಯಿಂದ ಎತ್ತಿಕೊಂಡು ಸಮುದ್ರಕ್ಕೆ ಬಂದ. ಹೀಗೆ ಮಂದರ ಪರ್ವತದ ಆನಯನವಾಯಿತು.

ಇನ್ನು  ಸ್ಕಂದಪುರಾಣದ ಮಾಹೇಶ್ವರ ಖಂಡದಲ್ಲಿ ಈ ರೀತಿಯ ವಿವರಣೆ ಇದೆ : ತದಾ ದೇವಾಸುರಾಃ ಸರ್ವೇ ಸ್ತೂಯಮಾನಾ ಮಹಾಚಲಮ್ ಉತ್ಪಾಟಯೇಯುರತುಲಂ ಮಂದರಂ ಚ ತತೋSದ್ಭುತಮ್ ಕ್ಷೀರಾರ್ಣವಂ  ನೇತುಕಾಮಾ ಅಶಕ್ತಾಸ್ತೇ  ತತೋSಭವನ್ ಪರ್ವತಃ ಪತಿತಃ ಸದ್ಯೋ  ದೈವದೈತ್ಯೋ ಪರಿಧ್ರುವಂ   ಏವಂ  ಭಗ್ನೋದ್ಯಮಾ ಜಾಥಾ ಅಸುರಾಃ  ಸುರದಾನವಾಃ ಚೇತನಾಂ ಪರಮಾಮ್ ಪ್ರಾಪ್ತಾಸ್ತುಷ್ಟುವುರ್ಜಗದೀಶ್ವರಮ್ ರಕ್ಷರಕ್ಷ ಮಹಾವಿಷ್ಣೋಶರಣಾಗತವಾತ್ಸಲ ತ್ವಯಾ ತತಮಿದಂ ಸರ್ವಂ  ಜನ್ಗಮಾಜನ್ಗಮಂ ಚ ಯತ್ ದೇವಾನಾಂ ಕಾರ್ಯಸಿದ್ಧ್ಯರ್ಥಂ ಪ್ರಾದುರ್ಭೂತೋ ಹರಿಸ್ತದಾ ತಾನ್ ದೃಷ್ಟ್ವಾ ಸಹಸಾ ವಿಷ್ಣುರ್ಗರುಡಸ್ಯ ಉಪರಿಸ್ಥಿತಃ ಲೀಲಯಾ ಪರ್ವತ ಶ್ರೇಷ್ಠಮುತ್ತಭ್ಯಾರೋಪಯತ್ ಕ್ಷಣಾತ್ ಗರುತ್ಮತಿತದಾ ದೇವಃ  ಸರ್ವೇಷಾಮಭಯಂ ದದೌ (ಮಾಹೇಶ್ವರ ಖಂಡೇ ೯.೭೭.-೮೩)
ಅವರಿಂದ ಮಂದರವನ್ನುಹೊತ್ತು ಸಾಗಲು ಸಾಧ್ಯವಾಗಲಿಲ್ಲಾ.  ಪರ್ವತ ದೇವತೆಗಳು ಮತ್ತು ದೈತ್ಯರ ಮೇಲೆ ಬಿದ್ದಿತು. ಆಗ ಅವರು ಭಗವಂತನನ್ನು ಸ್ತೋತ್ರ ಮಾಡಿದರು.  ಭಗವಂತ ಪರ್ವತವನ್ನು ಗರುಡನ ಮೇಲಿಟ್ಟು  ಕ್ಷೀರಸಾಗರಕ್ಕೆ ತೆಗೆದುಕೊಂಡು ಬಂದ.

ಪಾದ್ಮಪುರಾಣದಲ್ಲಿ ಹೇಳುವಂತೆ: ‘ತತಃ ಸುರಗಣಾಃ ಸರ್ವೇ ದಾನವಾಧ್ಯಾ ಮಹಾಬಲಾಃ ಉತ್ಪಾಟ್ಯ ಮಂದರಂ ಶೈಲಂ  ಚಿಕ್ಷಿಪುಃ ಪಯಸಾನ್ನಿದೌ’ (ಉ.ಖಂಡ. ೨೩೨.೧)
ಆಮೇಲೆ, ಮಹಾಬಲಿಷ್ಠರಾದ ದೇವತೆಗಳು ಹಾಗೂ ದಾನವರು ಎಲ್ಲರೂ ಸೇರಿ ಮಂದರವೆಂಬ ಬೆಟ್ಟವನ್ನು ಕಿತ್ತು ಹಾಲು ಕಡಲಲ್ಲಿ ಹಾಕಿದರು.

ಈ ರೀತಿ ಸಮುದ್ರ ಮಥನದ ಕುರಿತು ಪರಸ್ಪರ ವಿರೋಧವಾಗಿ ತೋರುವ  ಹೇಳಿಕೆಗಳ ಸಂಗ್ರಹವನ್ನು  ಬೇರೆಬೇರೆ ಗ್ರಂಥಗಳಲ್ಲಿ ನಾವು ಕಾಣುತ್ತೇವೆ.  ಇದನ್ನು ಯಾವ ರೀತಿ, ಯಾವ   ಕ್ರಮದಲ್ಲಿ  ಅನುಸಂಧಾನ ಮಾಡಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ತೋರಿಸಿಕೊಟ್ಟಿದ್ದಾರೆ:

ತ್ವದಾಜ್ಞಯಾ ಬಲಿನಾ ಸನ್ದಧಾನಾ ವರಾದ್ ಗೀರೀಶಸ್ಯ ಪರೈರಚಾಲ್ಯಮ್
ವೃನ್ದಾರಕಾ ಮನ್ದರಮೇತ್ಯ ಬಾಹುಭಿರ್ನ್ನ ಶೇಕುರುದ್ಧರ್ತ್ತುಮಿಮೇ ಸಮೇತಾಃ ೧೦.೦೫

ನಿನ್ನ(ಭಗವಂತನ) ಆಜ್ಞೆಯಂತೆ ದೈತ್ಯರಾಜನಾದ ಬಲಿಯೊಂದಿಗೆ ಸಂಧಾನವನ್ನು ಮಾಡಿಕೊಂಡು, ರುದ್ರನ ವರದಿಂದಾಗಿ  ಬೇರೊಬ್ಬರಿಂದ ಅಲುಗಾಡಿಸಲೂ ಅಸಾಧ್ಯವಾದ ಮಂದರ ಪರ್ವತವನ್ನು ಹೊಂದಿ, ಎಲ್ಲರೂ ಸೇರಿಕೊಂಡು ಪ್ರಯತ್ನಿಸಿದರೂ  ಕೂಡಾ, ತಮ್ಮ ಬಾಹುವಿನಿಂದ ಮಂದರವನ್ನು ಎತ್ತಲು ಅವರು ಸಮರ್ಥರಾಗಲಿಲ್ಲಾ. 

[ಮೊತ್ತ ಮೊದಲು ನಾವು  ಭಾಗವತದಲ್ಲಿ ಬರುವ ಮಾತನ್ನು ಅನುಸಂಧಾನ ಮಾಡಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ತೋರಿಸಿಕೊಟ್ಟಿದ್ದಾರೆ.  ಅಲ್ಲಿ ಹೇಳಿರುವಂತೆ: ದೇವತೆಗಳೆಲ್ಲರೂ ಭಗವಂತನ ಬಳಿ ಹೋಗಿ ತಮಗೆ ಶಕ್ತಿ ಬೇಕೆಂದು ಕೇಳಿಕೊಳ್ಳುತ್ತಾರೆ. ಆಗ ಭಗವಂತ ಅವರಿಗೆ ಸಮುದ್ರ ಮಥನ ಮಾಡಲು ಆಜ್ಞೆ ಮಾಡುತ್ತಾನೆ.  ಆದರೆ ಮಥನ ಮಾಡಲು ದೇವತೆಗಳ ಸಂಖ್ಯೆ ಸಾಲದೇ ಇರುವುದರಿಂದ, ಭಗವಂತ ಅವರಿಗೆ ಹೀಗೆ ಹೇಳುತ್ತಾನೆ(ಭಾಗವತ ೮.೬): “ದೈತ್ಯರು ನಿಮ್ಮ ಶತ್ರುಗಳು. ಆದರೂ ನೀವು ಈ ಕೆಲಸಕ್ಕಾಗಿ ಅವರೊಂದಿಗೆ ಸಂಧಿ ಮಾಡಿಕೊಳ್ಳಬೇಕಾಗುತ್ತದೆ. ಯಾವುದಾದರೂ ದೊಡ್ಡ ಕೆಲಸವಾಗಬೇಕಾದರೆ ಶತ್ರುಗಳೊಂದಿಗೂ ಸಂಧಾನ ಮಾಡಿಕೊಳ್ಳಲೇಬೇಕು” (‘ಯಾತುದಾನೈಶ್ಚ ದೈತೆಯೈಸ್ತಾವತ್ ಸಂಧಿರ್ವಿಧೀಯತಾಮ್’   ‘ಅರಯೋSಪಿ ಹಿ ಸಂಧೇಯಾಃ ಸತಿ ಕಾರ್ಯಾರ್ಥ ಗೌರವೇ’).  ಭಗವಂತನ  ಮಾತಿನಂತೆ ದೇವತೆಗಳು ಬಲಿಯೊಂದಿಗೆ ಸಂಧಾನ ಮಾಡಿಕೊಳ್ಳುತ್ತಾರೆ].

ತದಾ ತ್ವಯಾ ನಿತ್ಯಬಲತ್ವಹೇತುತೋ ಯೋsನನ್ತನಾಮಾ ಗರುಡಸ್ತದಂಸಕೇ
ಉತ್ಪಾಟ್ಯ ಚೈಕೇನ ಕರೇಣ ಮನ್ದರೋ ನಿಧಾಪಿತಸ್ತಂ ಸ ಸಹ ತ್ವಯಾsವಹತ್೧೦.೦೬

‘ಅನಂತ’ ಎನ್ನುವ ಹೆಸರುಳ್ಳ (ನಿತ್ಯದಲ್ಲಿಯೂ ಬಲವಿರುವ)  ಗರುಡನ ಬೆನ್ನಿನ ಮೇಲೆ ನೀನು ಒಂದೇ ಕೈಯಿಂದ ಮಂದರವನ್ನು ಕಿತ್ತು ಇಟ್ಟೆ. ಆತ  ಆ ಮಂದರವನ್ನು ಹೊತ್ತು ನಿನ್ನೊಂದಿಗೆ ಕ್ಷೀರ ಸಾಗರದತ್ತ ಸಾಗಿದ.

[ಈ ಹಿಂದೆ ನೋಡಿದ ಭಾಗವತದ ಮಾತಿನ ನಂತರ ನಾವು ನೋಡಬೇಕಾಗಿರುವ, ಇತರ ಎಲ್ಲಾ ಪುರಾಣಗಳಲ್ಲಿ ಹೇಳಿರುವ ಮುಂದಿನ ಘಟನೆಯನ್ನು ಆಚಾರ್ಯರು ಈ ಶ್ಲೋಕದಲ್ಲಿ ವರ್ಣಿಸಿದ್ದಾರೆ.  ರುದ್ರನ ವರವಿದ್ದುದರಿಂದ ದೇವ-ದೈತ್ಯರಿಗೆ ಮಂದರವನ್ನು ಎತ್ತಲು ಸಾಧ್ಯವಾಗುವುದಿಲ್ಲ. ಆಗ  ಅವರು ಭಗವಂತನನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ದೇವತೆಗಳ ಪ್ರಾರ್ಥನೆಯನ್ನಾಲಿಸಿದ ಭಗವಂತ ಮಂದರವನ್ನು ತರಲು ದೇವತೆಗಳಿಗೆ ಯಾವ ರೀತಿ ಸಹಾಯ ಮಾಡಿದ  ಎನ್ನುವುದನ್ನು ಆಚಾರ್ಯರು    ಶ್ಲೋಕದಲ್ಲಿ ತಿಳಿಸಿದ್ದಾರೆ].

ಪುನಃ ಪರೀಕ್ಷದ್ಬಿರಸೌ ಗಿರಿಃ ಸುರೈಃ ಸಹಾಸುರೈರುನ್ನಮಿತಸ್ತದಂಸತಃ
ವ್ಯಚೂರ್ಣ್ಣಯತ್ ತಾನಖಿಲಾನ್ ಪುನಶ್ಚ ತೇ ತ್ವದೀಕ್ಷಯಾ ಪೂರ್ವವದುತ್ಥಿತಾಃ ಪ್ರಭೋ    ೧೦.೦೭

ಗರುಡ ಅನಾಯಾಸವಾಗಿ ಮಂದರವನ್ನು ಹೊತ್ತು ಸಾಗುತ್ತಿರುವುದನ್ನು ನೋಡಿದ ದೇವತೆಗಳು ಮತ್ತು ದಾನವರು ತಮ್ಮ ವೀರ್ಯವನ್ನು ಪರೀಕ್ಷಿಸುವುದಕ್ಕಾಗಿ, ಗರುಡನ ಹೆಗಲ ಮೇಲಿದ್ದ ಪರ್ವತವನ್ನು ತಾವು ತೆಗೆದುಕೊಳ್ಳುತ್ತಾರೆ. ಆದರೆ ಪರ್ವತ ಕೆಳಗೆ ಬೀಳುತ್ತದೆ ಮತ್ತು ಅದರಿಂದಾಗಿ  ಅವರ ಅಂಗಾಂಗಗಳು ಹಾನಿಗೊಳಗಾಗುತ್ತದೆ. ‘ಆಗ ನೀನು ಅವರೆಲ್ಲರನ್ನು ಕರುಣೆಯಿಂದ ನೋಡಿದೆ. ಇದರಿಂದ ಮುರಿದ ಅವಯವಗಳು ಸರಿ ಹೋಗಿ ಅವರು ಮೊದಲಿನಂತೆಯೇ ಎದ್ದು ನಿಂತರು’.

ಪುನಶ್ಚ ವಾಮೇನ ಕರೇಣ ವೀಶ್ವರೇ ನಿಧಾಯ ತಂ ಸ್ಕನ್ಧಗತಸ್ತ್ವಮಸ್ಯ
ಅಗಾಃ ಪಯೋಬ್ಧಿಂ ಸಹಿತಃ ಸುರಾಸುರೈರ್ಮ್ಮತ್ಥ್ನಾ  ಚ ತೇನಾಬ್ಧಿಮಥಾಪ್ಯಮತ್ಥ್ನಾಃ       ೧೦.೦೮

ಮತ್ತೆ ಬೆಟ್ಟವನ್ನು ನಿನ್ನ  ಎಡಗೈಯಿಂದ ಎತ್ತಿ, ಪಕ್ಷೀಶ್ವರನಾದ ಗರುಡನ ಮೇಲ್ಲಿಟ್ಟು, ನೀನೂ  ಕೂಡಾ ಗರುಡನನ್ನೇರಿ, ದೇವತೆಗಳು ಮತ್ತು ದೈತ್ಯರನ್ನು ಕೂಡಿಕೊಂಡು  ಕ್ಷೀರಸಾಗರವನ್ನು ಕುರಿತು ತೆರಳಿದೆ. ಅಲ್ಲಿ ಮಂದರವನ್ನು ಕಡಗೋಲನ್ನಾಗಿ ಮಾಡಿ, ಸಮುದ್ರವನ್ನು ಕಡೆದೆ ಕೂಡಾ.

No comments:

Post a Comment