ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 22, 2018

Mahabharata Tatparya Nirnaya Kannada 10.69-10.73


ಅಥಾಸ್ಯ ಪುತ್ರತ್ವಮವಾಪ್ತುಮಿಚ್ಛಂಶ್ಚಚಾರ ರುದ್ರಃ ಸುತಪಸ್ತದೀಯಮ್
ದದೌ ಚ ತಸ್ಮೈ ಭಗವಾನ್ ವರಂ ತಂ ಸ್ವಯಂ ಚ ತಪ್ತ್ವೇವ ತಪೋ ವಿಮೋಹಯನ್           ೧೦.೬೯

ತದನಂತರ, ವೇದವ್ಯಾಸರ ಮಗನಾಗಿ ಹುಟ್ಟಬೇಕು ಎನ್ನುವ ಇಚ್ಛೆಯಿಂದ, ರುದ್ರದೇವರು ವೇದವ್ಯಾಸರ ಕುರಿತಾಗಿ ಉತ್ಕೃಷ್ಟವಾದ  ತಪಸ್ಸನ್ನು ಮಾಡಿದರು. ಈ ರೀತಿ ತಪಸ್ಸನ್ನು ಮಾಡಿದ ರುದ್ರದೇವರಿಗೆ ತನ್ನ ಮಗನಾಗಿ ಅವತರಿಸುವಂತೆ ವೇದವ್ಯಾಸರು ವರವನ್ನು ಅನುಗ್ರಹಿಸಿದರು.  ಆದರೆ,  ದುಷ್ಟ ಜನರ ಮೋಹನಾರ್ಥನವಾಗಿ ತಾನೇ ತಪಸ್ಸು ಮಾಡಿ ರುದ್ರನನ್ನು ಮಗನಾಗಿ ಪಡೆದಂತೆ ತೋರಿದರು.
[ಮೊದಲು ರುದ್ರ ದೇವರು ತಪಸ್ಸನ್ನು ಮಾಡಿ ಭಗವಂತನ ಮಗನಾಗಿ ಹುಟ್ಟುವ ವರವನ್ನು ಪಡೆದರು. ಆದರೆ, ಆ ನಂತರ, ದುರ್ಜನರ ಕಣ್ಣಿಗೆ ಕಾಣುವಂತೆ, ರುದ್ರ ಮಗನಾಗಿ ಬರಲಿ ಎಂದು ವೇದವ್ಯಾಸರು ತಪಸ್ಸು ಮಾಡಿದರು! ವೇದವ್ಯಾಸರು ರುದ್ರನನ್ನು ಮಗನಾಗಿ ಪಡೆಯಲು ತಪಸ್ಸು ಮಾಡಿರುವ ಪ್ರಸಂಗವನ್ನು ಪುರಾಣಗಳು ಉಲ್ಲೇಖಿಸಿಸುತ್ತವೆ].

ವಿಮೋಹನಾಯಾಸುರಸರ್ಗ್ಗಿಣಾಂ ಪ್ರಭುಃ ಸ್ವಯಂ ಕರೋತೀವ ತಪಃ ಪ್ರದರ್ಶಯೇತ್
ಕಾಮಾದಿದೋಷಾಂಶ್ಚ ಮೃಷೈವ ದರ್ಶಯೇನ್ನ ತಾವತಾ ತೇsಸ್ಯ ಹಿ ಸನ್ತಿ ಕುತ್ರಚಿತ್         ೧೦.೭೦

ಸರ್ವಸಮರ್ಥರಾದ ವೇದವ್ಯಾಸರೂಪಿ ಭಗವಂತ, ಅಸುರ ಸ್ವಭಾವದವರ ಮೋಹಕ್ಕಾಗಿ, ತಾನೇ ತಪಸ್ಸನ್ನು ಮಾಡುತ್ತಾನೋ ಎಂಬಂತೆ ತೋರಿಸುತ್ತಾನಷ್ಟೇ. ಹಾಗೆಯೇ, ಅವನು ಕಾಮಾದಿ ದೋಷಗಳನ್ನು ತೋರಿಸುತ್ತಾನೆ. ಆದರೆ ಕಾಮಾದಿಗಳು ನಾರಾಯಣನಿಗೆ ಯಾವುದೇ ರೂಪದಲ್ಲೂ ಇರುವುದಿಲ್ಲಾ.

ತತಸ್ತ್ವರಣ್ಯ ಸ್ಮ ಬಭೂವ ಪುತ್ರಕಃ ಶಿವೋsಸ್ಯ ಸೋsಭೂಚ್ಛುಕನಾಮಧೇಯಃ
ಶುಕೀ ಹಿ ಭೂತ್ವಾsಭ್ಯಗಮದ್ ಘೃತಾಚೀ ವ್ಯಾಸಂ ವಿಮತ್ಥ್ನನ್ತಮುತಾರಣೀ ತಮ್          ೧೦.೭೧

ಅಕಾಮಯನ್ ಕಾಮುಕವತ್ ಸ ಭೂತ್ವಾ ತಯಾsರ್ತ್ಥಿತಸ್ತಂ ಶುಕನಾಮಧೇಯಮ್
ಚಕ್ರೇ ಹ್ಯರಣ್ಯೋಸ್ತನಯಂ ಚ ಸೃಷ್ಟ್ವಾ ವಿಮೋಹಯಂಸ್ತತ್ವಮಾರ್ಗ್ಗೇಷ್ವಯೋಗ್ಯಾನ್     ೧೦.೭೨

ತದನಂತರ, ಸದಾಶಿವನು ಈ ವೇದವ್ಯಾಸರ ಪುತ್ರನಾಗಿ(ಶುಕನಾಗಿ) ಅರಣಿಯಿಂದ ಹುಟ್ಟಿದನು. (ಅರಣಿಮಥನ ಕಾಷ್ಠದ ಮದ್ಯದಲ್ಲಿ  ಹುಟ್ಟಿದನು).
ಶುಕಮುನಿಯ ಹುಟ್ಟು ಅರಣಿಯಲ್ಲಿ ಹೇಗೆ ಸಾಧ್ಯವಾಯಿತು ಎಂದರೆ:  ಘೃತಾಚೀ ಎನ್ನುವ ಅಪ್ಸರೆಯು ಹೆಣ್ಣುಗಿಣಿ ರೂಪದಲ್ಲಿ(ಶುಕಿಯಾಗಿ) ಅರಣಿಯನ್ನು ಕಡೆಯುತ್ತಿರುವ ವೇದವ್ಯಾಸರನ್ನು ಕುರಿತು ಬಂದಳು.
ವಸ್ತುತಃ ಕಾಮದ ಸ್ಪರ್ಶವೂ ಇಲ್ಲದೇ ಇರುವ ವ್ಯಾಸರು, ಅವಳಿಂದ ಬೇಡಲ್ಪಟ್ಟವನಾಗಿ, ಕಾಮುಕನಂತೆ ತೋರಿಸುತ್ತಾ,  ಶುಕ ಎನ್ನುವ ಹೆಸರಿನ ಆ ಮಗುವನ್ನು ಹುಟ್ಟಿಸಿದರು.
[ಶುಕಿಯನ್ನು  ನೋಡಿ ವೇದವ್ಯಾಸರ ರೇತಸ್ಸು ಅರಣಿಯಲ್ಲಿ ಬಿತ್ತು. ಅದು ಕೂಡಲೇ ಒಂದು ಮಗುವಾಗಿ ಹೊರಬಂತು. ಇಲ್ಲಿಯೂ ಕೂಡಾ, ಘೃತಾಚೀ ಕೇವಲ ನಿಮಿತ್ತಮಾತ್ರ . ಇದೆಲ್ಲವೂ  ಅಯೋಗ್ಯರನ್ನು ತತ್ತ್ವಮಾರ್ಗದಲ್ಲಿ ಮೋಹಗೊಳಿಸಲು ದೇವರು ಆಡುವ ಲೀಲಾನಾಟಕ. ಬಾಹ್ಯವಾಗಿ ದುರ್ಜನರ ದೃಷ್ಟಿಯಲ್ಲಿ: ಶುಕಿಯನ್ನು ಕಂಡ ಅರಣಿಮಥನ  ಮಾಡುತ್ತಿದ್ದ  ವೇದವ್ಯಾಸರು  ಕಾಮವಶರಾದರು, ಅದರ ಫಲದಿಂದ ಶುಕನ ಜನನವಾಯಿತು! )

ಶುಕಂ ತಮಾಶು ಪ್ರವಿವೇಶ ವಾಯುರ್ವ್ಯಾಸಸ್ಯ ಸೇವಾರ್ತ್ಥಮಥಾಸ್ಯ ಸರ್ವಮ್
ಜ್ಞಾನಂ ದದೌ ಭಗವಾನ್ ಸರ್ವವೇದಾನ್ ಸಭಾರತಂ ಭಾಗವತಂ ಪುರಾಣಾಮ್         ೧೦.೭೩

ಶುಕಮುನಿಯ ಜನನ ನಂತರ,  ವೇದವ್ಯಾಸರ ಸೇವೆಗಾಗಿ ಮುಖ್ಯಪ್ರಾಣನು ಶುಕಾಚಾರ್ಯರ ಒಳಗೆ ಪ್ರವೇಶ ಮಾಡಿದರು. ವೇದವ್ಯಾಸರು ಶುಕನಿಗೆ ವೇದ, ಮಹಾಭಾರತ, ಭಾಗವತವೇ ಮೊದಲಾದ  ಪುರಾಣವನ್ನೊಳಗೊಂಡ ಸಮಸ್ತ ಜ್ಞಾನವನ್ನು ಉಪದೇಶ ಮಾಡಿದರು.

No comments:

Post a Comment