ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 1, 2018

Mahabharata Tatparya Nirnaya Kannada 10.01-10.04

೧೦. ವ್ಯಾಸಾವತಾರಾನುವರ್ಣ್ಣನಮ್

ಓಂ
ದ್ವಾಪರೇsಥ ಯುಗೇ ಪ್ರಾಪ್ತೇ ತ್ವಷ್ಟಾವಿಂಶತಿಮೇ ಪುನಃ
ಸ್ವಯಂಭುಶರ್ವಶಕ್ರಾದ್ಯಾ ದುಗ್ಧಾಬ್ಧೇಸ್ತೀರಮಾಯಯುಃ                   ೦೧

ರಾಮನ ಅವತಾರದ ನಂತರ ಪುನಃ ಇಪ್ಪತ್ತೆಂಟನೆಯ ದ್ವಾಪರಯುಗವು ಬರುತ್ತಿರಲು, ಬ್ರಹ್ಮ-ರುದ್ರಾದಿಗಳೆಲ್ಲರೂ ಕೂಡಾ  ಕ್ಷೀರಸಮುದ್ರದ ತಟಕ್ಕೆ ತೆರಳಿದರು.

ಪಯೋಬ್ಧೇರುತ್ತರಂ ತೀರಮಾಸಾದ್ಯ ವಿಬುಧರ್ಷಭಾಃ
ತುಷ್ಟುವುಃ ಪುಣ್ಡರೀಕಾಕ್ಷಮಕ್ಷಯಂ ಪುರುಷೋತ್ತಮಮ್            ೦೨

ಕ್ಷೀರ ಸಮುದ್ರದ ಶ್ವೇತದ್ವೀಪವನ್ನು ಹೊಂದಿ, ನಾಶವಿಲ್ಲದ ಪುರುಷೋತ್ತಮನೂ, ಪುಣ್ಡರೀಕಾಕ್ಷನೂ ಆದ ನಾರಾಯಣನನ್ನು   ಸ್ತೋತ್ರಮಾಡಿದರು.

ನಮೋನಮೋsಗಣ್ಯಗುಣೈಕಧಾಮ್ನೇ ಸಮಸ್ತವಿಜ್ಞಾನಮರೀಚಿಮಾಲಿನೇ
ಅನಾದ್ಯವಿಜ್ಞಾನತಮೋನಿಹನ್ತ್ರೇ ಪರಾಮೃತಾನನ್ದಪದಪ್ರದಾಯಿನೇ          ೦೩

‘ಎಣೆಯಿರದ ಗುಣಗಳಿಗೆ ನೆಲೆಯಾದವನೇ, ಅರಿವುಗಳ ಕಾಂತಿಯ ಮಾಲೆಯನ್ನೇ ಧರಿಸಿದವನೇ(ಜ್ಞಾನವೇ ಬೆಳಕಾಗಿ ಉಳ್ಳವನೇ), ಅನಾಧಿಕಾಲದಿಂದ ಅಜ್ಞಾನವೆಂಬ ಕತ್ತಲನ್ನು ನಾಶಮಾಡುವವನೇ, ಉತ್ಕೃಷ್ಟವಾಗಿರುವ ಮೋಕ್ಷದ ಆನಂದವನ್ನು ಕೊಡುವವನೇ, ನಿನಗೆ ನಮಸ್ಕಾರ-ನಮಸ್ಕಾರ’.

ಸ್ವದತ್ತಮಾಲಾಭುವಿಪಾತಕೋಪತೋ ದುರ್ವಾಸಸಃ ಶಾಪತ ಆಶು ಹಿ ಶ್ರಿಯಾ
ಶಕ್ರೇ ವಿಹೀನೇ ದಿತಿಜೈಃ ಪರಾಜಿತೇ ಪುರಾ ವಯಂ ತ್ವಾಂ ಶರಣಂ ಗತಾಃ ಸ್ಮ          ೦೪

‘ತಾನು ಕೊಟ್ಟ ವಿಷ್ಣುವಿನ ನಿರ್ಮಾಲ್ಯ ರೂಪವಾದ ಮಾಲೆಯನ್ನು ಭೂಮಿಯಲ್ಲಿ ಬಿಟ್ಟ ಎನ್ನುವ ಸಿಟ್ಟಿನಿಂದ ದುರ್ವಾಸಮುನಿ ಕೊಟ್ಟ ಶಾಪದಿಂದ ಇಂದ್ರನು ಸಂಪತ್ತಿನಿಂದ ಭ್ರಷ್ಟನಾಗಿ, ದೈತ್ಯರಿಂದ ಸೋಲಿಸಲ್ಪಟ್ಟ ಈ ಸಂದರ್ಭದಲ್ಲಿ, ಹಿಂದಿನಂತೆಯೇ  ಇಂದು  ನಾವು ನಿನ್ನನ್ನು ಶರಣುಹೊಂದಿದ್ದೇವೆ’.
[ ಈ ಮೇಲಿನ ಮಾತಿನ ಹಿನ್ನೆಲೆ ವಿಷ್ಣುಪುರಾಣದಿಂದ ತಿಳಿಯುತ್ತದೆ.  ದುರ್ವಾಸಾಃ  ಶಞ್ಕರಸ್ಯಾಂಶಶ್ಚಚಾರ ಪೃಥವೀಮಿಮಾಂ ಸ ದದರ್ಶ ಸ್ರಜಂ ದಿವ್ಯಾಮೃಷಿರ್ವಿದ್ಯಾಧರೀಕರೇ  ತಾಂ ಯಯಾಚೇ ವರಾರೋಹಾಂ ವಿದ್ಯಾಧರವಧೂಂ ತತಃ  ಯಾಚಿತಾ ತೇನ ತನ್ವನ್ಗೀ ಮಾಲಾಂ ವಿದ್ಯಾಧರಾನ್ಗನಾ ದದೌ ತಸ್ಮೈ ವಿಶಾಲಾಕ್ಷೀ ಸಾದರಂ ಪ್ರಣಿಪತ್ಯ  ತಮ್ ಸ ದದರ್ಶ  ಸಮಾಯಾಂನ್ತಮುನ್ಮತ್ತೈರಾವತೇ  ಸ್ಥಿತಮ್  ತ್ರೈಲೋಕ್ಯಾಧಿಪತಿಂ ದೇವಂ ಸಹ ದೇವೈಃ ಶಚೀಪತಿಮ್
ತಾಮಾತ್ಮನಃ   ಶಿರಸಃ  ಸ್ರಜಮುನ್ಮತ್ತಷಟ್ಪದಾಮ್   ಆದಾಯಾಮರರಾಜಾಯ ಚಿಕ್ಷೇಪೋನ್ಮತ್ತವನ್ಮುನಿಃ ಗೃಹೀತ್ವಾsಮರರಾಜೇನ ಸ್ರಗೈರಾವತಮೂರ್ಧನಿ ನ್ಯಸ್ತಾ ರರಾಜ ಕೈಲಾಸಶಿಖರೇ  ಜಾಹ್ನವೀ ಯಥಾ
ಮದಾಂಧಕಾರಿತಾಕ್ಷೋsಸೌ  ಗಂಧಾಕೃಷ್ಟೇನ ವಾರಣಃ  ಕರೇಣಾಘ್ರಾಯಾ ಚಿಕ್ಷೇಪ  ತಾಂ ಸ್ರಜಂ ಧರಣೀತಳೇ
ತತಶ್ಚುಕ್ರೋಧ ಭಗವಾನ್ ದುರ್ವಾಸಾ ಮುನಿಸತ್ತಮಃ ಮೈತ್ರೇಯ  ದೇವರಾಜಂ  ತಂ  ಕ್ರುದ್ಧಶ್ಚೈತದುವಾಚ ಹ (೧.೯.೨-೧೧)   ಮಯಾ ದತ್ತಾಮಿಮಾಂ ಮಾಲಾಂ ಯಸ್ಮಾನ್ನ ಬಹುಮನ್ಯಸೇ ತ್ರೈಲೋಕ್ಯಶ್ರೀರತೋ ಮೂಢ ವಿನಾಶಮುಪಯಾಸ್ಯತಿ (೧.೯.೧೪)..ಇತ್ಯಾದಿ.
ಶಿವನ ಅಂಶನಾದ ದುರ್ವಾಸರು ಒಮ್ಮೆ  ಭೂಮಿಯಲ್ಲಿ ಸಂಚರಿಸುತ್ತಿರುವಾಗ, ವಿದ್ಯಾಧರೆ ಎನ್ನುವ ಸ್ತ್ರೀಯ ಕೈಯಲ್ಲಿರುವ ಸುಂದರವಾದ ಹೂಮಾಲೆಯೊಂದನ್ನು ನೋಡುತ್ತಾರೆ. ಅವರು ಆ ಮಾಲೆಯನ್ನು ತನಗೆ ಕೊಡು ಎಂದು ವಿದ್ಯಾಧರೆಯನ್ನು ಕೇಳುತ್ತಾರೆ.
ಮಾಲೆಯನ್ನು ವಿಧ್ಯಾಧರೆಯಿಂದ ಪಡೆದ ದುರ್ವಾಸರು, ಒಮ್ಮೆ ಮದವೇರಿದ ಐರಾವತವನ್ನೇರಿ ಬರುತ್ತಿರುವ ಇಂದ್ರನನ್ನು ಕಾಣುತ್ತಾರೆ.  ಇನ್ನೂ ದುಂಬಿಗಳು ಸುತ್ತುತ್ತಿದ್ದ, ತಾಜಾತನದಿಂದ ಕೂಡಿದ್ದ  ಆ ಮಾಲೆಯನ್ನು ಅವರು ಇಂದ್ರನಿಗೆ ಕೊಡುತ್ತಾರೆ. ಆದರೆ ಇಂದ್ರ ಆ ಮಾಲೆಯನ್ನು ತನ್ನ ಐರಾವತದ ತಲೆಯ ಮೇಲೆ ಇಡುತ್ತಾನೆ.  ಅಲ್ಲಿ ಆ ಮಾಲೆಯು  ಕೈಲಾಸಶಿಖರದಲ್ಲಿನ  ಗಂಗೆಯಂತೆ ಶೋಭಿಸುತ್ತಿತ್ತು. (ಐರಾವತ ಕೈಲಾಸ ಶಿಖರದಂತೆ ಬಿಳಿ , ಹೂವಿನ ಮಾಲೆಯೂ ಗಂಗೆಯಂತೆ  ಬಿಳಿ.  ಹಾಗಾಗಿ ಈ ಹೋಲಿಕೆ).  ಆದರೆ ತನ್ನ ತಲೆಯಮೇಲಿಟ್ಟ ಹೂಮಾಲೆಯನ್ನು ಐರಾವತ ಭೂಮಿಯ ಮೇಲೆ ಎಸೆಯುತ್ತದೆ. ಇದನ್ನು ಕಂಡ ದುರ್ವಾಸರು ಕೋಪಗೊಳ್ಳುತ್ತಾರೆ.
ತಾನು ಕೊಟ್ಟ ಮಾಲೆಯನ್ನು ಗೌರವಿಸದೇ ಭೂಮಿಗೆ ಎಸೆದ  ನಿನ್ನ ಮೂರು ಲೋಕದ ಸಂಪತ್ತೂ ನಷ್ಟವಾಗುವುದು ಎನ್ನುವ ಶಾಪವನ್ನು ದುರ್ವಾಸರು ಇಂದ್ರನಿಗೆ ನೀಡುತ್ತಾರೆ.  (ವಿಷ್ಣುಪುರಾಣದಲ್ಲಿ ಪರಾಶರರು ಈ ಮಾತನ್ನು ಮೈತ್ರೆಯರಿಗೆ ಹೇಳಿರುವುದರಿಂದ  ಮೈತ್ರೇಯ ಎನ್ನುವ ಸಂಬೋಧನೆ ಇಲ್ಲಿದೆ) ].

No comments:

Post a Comment