ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, January 30, 2023

Mahabharata Tatparya Nirnaya Kannada 25-103-113

 

ಸಂಶ್ರಾವಿತಃ ಕ್ರೂರವಚಃ  ಸ ತೇನ ಚಕ್ರೇ ಸತ್ಯಂ ಮೃತ್ಯುಭಯಂ ವಿಹಾಯ ।

ಶಕ್ತ್ಯಾ  ಹನಿಷ್ಯಾಮಿ ಪರಾನಿತಿ ಸ್ಮ ಚಕ್ರೇ ಚ ತತ್ ಕರ್ಮ್ಮ ತಥಾSಪರೇದ್ಯುಃ  ॥೨೫.೧೦೩॥

 

ದುರ್ಯೋಧನನಿಂದ ಅತ್ಯಂತ ಕ್ರೂರ ವಚನವನ್ನು ಕೇಳಿಸಿಕೊಂಡ ಭೀಷ್ಮರು ಪ್ರತಿಜ್ಞೆ ಮಾಡಿದರು: ’ನಾಳೆ ನಾನು ಮರಣದ ಭಯವನ್ನು ಬಿಟ್ಟು ನನ್ನ ಶಕ್ತಿ ಇರುವಷ್ಟು ಶತ್ರುಗಳನ್ನು ಕೊಲ್ಲುತ್ತೇನೆ ಎಂದು. ಮರುದಿನದ (ಒಂಬತ್ತನೇ ದಿನದ) ಯುದ್ಧದಲ್ಲಿ ತಾನು ಏನು ಪ್ರತಿಜ್ಞೆ ಮಾಡಿದ್ದರೋ ಅದನ್ನು ಸತ್ಯವನ್ನಾಗಿ ಮಾಡಿದರು ಕೂಡಾ.

 

ತಂ ಶಕ್ತಿತೋ ಗುಪುರ್ದ್ಧಾರ್ತ್ತರಾಷ್ಟ್ರಾಸ್ತೇನಾರ್ದ್ದಿತಾಶ್ಚೇದಿಪಾಞ್ಚಾಲಮತ್ಸ್ಯಾಃ ।

ಪರಾದ್ರವನ್ ಭೀಷ್ಮಬಾಣೋರುಭೀತಾಃ ಸಿಂಹಾರ್ದ್ದಿತಾಃ ಕ್ಷುದ್ರಮೃಗಾ ಇವಾSರ್ತ್ತಾಃ ॥ ೨೫.೧೦೪॥

 

ದುರ್ಯೋಧನಾದಿಗಳು ತಮ್ಮ ಪೂರ್ಣಶಕ್ತಿಯೊಂದಿಗೆ ಭೀಷ್ಮರನ್ನು ರಕ್ಷಿಸಿದರು. ಭೀಷ್ಮರ ಪರಾಕ್ರಮದಿಂದ ಪೀಡಿತರಾಗಿರುವ ಚೇದಿ, ಪಾಂಚಾಲ, ಮತ್ಸ್ಯದೇಶದವರು ಅವರ ಬಾಣಗಳಿಂದ ಭೀತರಾಗಿ, ಹೇಗೆ ಸಿಂಹದಿಂದ ಪೀಡಿತವಾದ ಕ್ಷುದ್ರಮೃಗಗಳು ಓಡಿಹೋಗುತ್ತವೋ ಹಾಗೆ ಓಡಿಹೋದರು.

 

ಸಂಸ್ಥಾಪ್ಯ ತಾನ್ ಭೀಷ್ಮಮಭಿಪ್ರಯಾನ್ತಮಲಮ್ಬುಸೋSವಾರಯತ್ ಪಾರ್ತ್ಥಸೂನುಮ್ ।

ವಿಜಿತ್ಯ ತಂ ಕೇಶವಭಾಗಿನೇಯೋ ಯಯೌ ಭೀಷ್ಮಂ ಧಾರ್ತ್ತರಾಷ್ಟ್ರೋSಮುಮಾರ ॥೨೫.೧೦೫॥

 

ಓಡುತ್ತಿರುವ ಅವರೆಲ್ಲರನ್ನೂ ನಿಲ್ಲಿಸಿ, ಅವರನ್ನು ಹುರಿದುಂಬಿಸಿ, ಧೈರ್ಯತುಂಬಿ, ಭೀಷ್ಮರೊಂದಿಗೆ  ಯುದ್ಧಮಾಡಲೆಂದು ಎದುರುಗೊಳ್ಳುತ್ತಿರುವ ಅಭಿಮನ್ಯುವನ್ನು ಅಲಂಬುಸನು ತಡೆದ.  ಕೇಶವನ ಸೋದರಳಿಯನಾದ ಅಭಿಮನ್ಯುವು ಅಲಂಬುಸನನ್ನು ಸುಲಭವಾಗಿ ಗೆದ್ದು, ಭೀಷ್ಮರೊಂದಿಗೆ ಯುದ್ಧ ಮಾಡಲೆಂದು ಹೊರಟ. ಆಗ ಸ್ವಯಂ ದುರ್ಯೋಧನ ಅಭಿಮನ್ಯುವಿನ ಎದುರು ಬಂದ.  

 

ತದ್ ಯುದ್ಧಮಾಸೀನ್ನೃಪಪಾರ್ತ್ಥಪುತ್ರಯೋರ್ವಿಚಿತ್ರಮತ್ಯದ್ಭುತಮುಗ್ರರೂಪಮ್ ।

ಸಮಂ ಚಿರಂ ತತ್ರ ಧನುಶ್ಚಕರ್ತ್ತ ಧ್ವಜಂ ಚ ರಾಜಾ ಸಹಸಾSಭಿಮನ್ಯೋಃ ॥ ೨೫.೧೦೬॥

 

ದುರ್ಯೋಧನನಿಗೆ ಮತ್ತು ಅಭಿಮನ್ಯುವಿನ ನಡುವೆ ವಿಚಿತ್ರವಾಗಿರುವ ಅತ್ಯದ್ಭುತವಾಗಿರುವ, ಭಯಾನಕ ಯುದ್ಧವು ನಡೆಯಿತು. ಸಮಾನವಾಗಿರುವ ಅವರ ಯುದ್ಧ ಬಹಳಕಾಲ ನಡೆಯಿತು. ಆ ಯುದ್ಧದಲ್ಲಿ ದುರ್ಯೋಧನನು ಕೂಡಲೇ ಅಭಿಮನ್ಯುವಿನ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿದನು.

 

ಅಥೈನಮುಗ್ರೈಶ್ಚ ಶರೈರ್ವವರ್ಷ ಸೂತಂ ಚ ತಸ್ಯಾSಶು ಜಘಾನ ವೀರಃ ।

ತದಾSSಸದದ್ ಭೀಮಸೇನೋ ನೃಪಂ ತಂ ಜಘಾನ ಚಾಶ್ವಾನ್ ಧೃತರಾಷ್ಟ್ರಜಸ್ಯ ॥ ೨೫.೧೦೭॥

 

ಹೀಗೆ ಬಿಲ್ಲನ್ನು ಕತ್ತರಿಸಿದ ಮೇಲೆ ಭಯಂಕರವಾದ ಬಾಣಗಳಿಂದ ಅಭಿಮನ್ಯುವನ್ನು ದುರ್ಯೋಧನ ಪೀಡಿಸಿದ. ಶೀಘ್ರದಲ್ಲಿ ಅಭಿಮನ್ಯುವಿನ ಸಾರಥಿಯನ್ನು ಕೊಂದ ಕೂಡಾ. ಆಗ ಅಭಿಮನ್ಯುವಿನ  ದೊಡ್ದಪ್ಪನಾದ ಭೀಮಸೇನನು ದುರ್ಯೋಧನನನ್ನು ಹೊಂದಿದನು ಮತ್ತು ಕೂಡಲೇ ದುರ್ಯೋಧನನ ಕುದುರೆಗಳನ್ನು ಕೊಂದುಹಾಕಿದನು.

 

ದ್ರೋಣೋ ದ್ರೌಣಿರ್ಭಗದತ್ತಃ ಕೃಪಶ್ಚ ಸಚಿತ್ರಸೇನಾ ಅಭ್ಯಯುರ್ಭೀಮಸೇನಮ್ ।

ಸರ್ವಾಂಶ್ಚ ತಾನ್  ವಿಮುಖೀಕೃತ್ಯ ಭೀಮಃ  ಸ ಚಿತ್ರಸೇನಾಯ ಗದಾಂ ಸಮಾದದೇ ॥ ೨೫.೧೦೮॥

 

ದ್ರೋಣ, ಅಶ್ವತ್ಥಾಮ, ಭಗದತ್ತ, ಕೃಪ, ಚಿತ್ರಸೇನ, ಇವರೆಲ್ಲರೂ ಕೂಡಾ ಭೀಮಸೇನನನ್ನು ಎದುರುಗೊಂಡರು. ಅವರೆಲ್ಲರನ್ನೂ ಭೀಮ ಹೊಡೆದೋಡಿಸಿ, ದುರ್ಯೋಧನನ ತಮ್ಮನಾದ ಚಿತ್ರಸೇನನನ್ನು ಕೊಲ್ಲುವುದಕ್ಕಾಗಿ ಗದೆಯನ್ನು ಹಿಡಿದುಕೊಂಡ.

 

ತಾಮುದ್ಯತಾಂ ವೀಕ್ಷ್ಯ ಪರಾದ್ರವಂಸ್ತೇ ಸ ಚಿತ್ರಸೇನಶ್ಚ ರಥಾದವಪ್ಲುತಃ ।

ಸಞ್ಚೂರ್ಣ್ಣಿತೋ ಗದಯಾ ತದ್ರಥಶ್ಚ ತಜ್ಜೀವನೇನೋದ್ಧೃಷಿತಾಶ್ಚ ಕೌರವಾಃ ॥ ೨೫.೧೦೯॥

 

ಭೀಮಸೇನ ಎಸೆದ ಗದೆ ತಮ್ಮೆಡೆಗೆ ಬರುವುದನ್ನು ನೋಡಿದ ದ್ರೋಣಾದಿಗಳು ಓಡಿಹೋದರು. ಚಿತ್ರಸೇನನು ತನ್ನ ರಥದಿಂದ ಕೆಳಗೆ ಹಾರಿದನು. ಚಿತ್ರಸೇನನ ರಥವು ಆ ಗದೆಯಿಂದ ಪುಡಿ ಮಾಡಲ್ಪಟ್ಟಿತು. ಚಿತ್ರಸೇನ ಬದುಕುಳಿದಿರುವುದಕ್ಕೆ  ಕೌರವರೆಲ್ಲರೂ ಬಹಳ ಸಂತೋಷಪಟ್ಟರು.

 

ಭೀಷ್ಮಸ್ತು ಪಾಞ್ಚಾಲಕರೂಶಚೇದಿಷ್ವಹನ್ ಸಹಸ್ರಾಣಿ ಚತುರ್ದ್ದಶೋಗ್ರಃ ।

ರಥಪ್ರಬರ್ಹಾನತಿತಿಗ್ಮತೇಜಾ ವಿದ್ರಾವಯಾಮಾಸ ಪರಾನವೀನಿವ ॥ ೨೫.೧೧೦॥

 

ಇತ್ತ, ರಣಭೂಮಿಯ ಇನ್ನೊಂದು ಮಗ್ಗಲಲ್ಲಿ ಭೀಷ್ಮನು ಪಾಂಚಾಲ, ಕರೂಶ, ಛೇದಿದೇಶಗಳ ಹದಿನಾಲ್ಕು ಸಾವಿರ ಅತ್ಯಂತ ಶ್ರೇಷ್ಠ ರಥಿಕರನ್ನು ಭಯಂಕರನಾಗಿ ಕೊಂದ. ಶತ್ರುಗಳನ್ನು ಕುರಿಗಳನ್ನೆಂಬಂತೆ ಓಡಿಸಿದ.   

 

ವಿದ್ರಾಪ್ಯ ಸರ್ವಾಮಪಿ ಪಾಣ್ಡುಸೇನಾಂ ವಿಶ್ರಾವ್ಯ ಲೋಕೇಷು ಚ ಕೀರ್ತ್ತಿಮಾತ್ಮನಃ ।

ಸೇನಾಂ ಸಮಾಹೃತ್ಯ ಯಯೌ ನಿಶಾಗಮೇ ಸಮ್ಪೂಜ್ಯಮಾನೋ ಧೃತರಾಷ್ಟ್ರಪುತ್ರೈಃ ॥ ೨೫.೧೧೧॥

 

ಭೀಷ್ಮಾಚಾರ್ಯರು ಎಲ್ಲಾ ಪಾಂಡವ ಸೇನೆಯನ್ನು ಓಡಿಸಿ, ಲೋಕದಲ್ಲಿ ತನ್ನ ಕೀರ್ತಿ ಸತ್ಯವಾದದ್ದು ಎಂದು ತೋರಿಸಿ, ಸೇನೆಯನ್ನು ಉಪಸಂಹರಿಸಿ, ದುರ್ಯೋಧನಾದಿಗಳಿಂದ ಸ್ತುತಿಸಲ್ಪಟ್ಟವರಾಗಿ ಶಿಬಿರಕ್ಕೆ ತೆರಳಿದರು. (ಹೀಗೆ ಒಂಬತ್ತನೆಯ ದಿನದ ಯುದ್ದವು ಭೀಷ್ಮಾಚಾರ್ಯರ ತೀಕ್ಷ್ಣವಾದ ಸಾಮರ್ಥ್ಯದಿಂದ ಕೌರವರ ಮೇಲುಗೈಯೊಂದಿಗೆ ಸಮಾಪ್ತಿಯಾಯಿತು).

 

[ಒಂಬತ್ತನೇ ದಿನದ ಯುದ್ಧದಲ್ಲಿ ಇನ್ನೂ ಕೆಲವು ಘಟನೆ ನಡೆದಿರುವುದನ್ನು ಇಲ್ಲಿ ಹೇಳುತ್ತಾರೆ:]

 

ದ್ರೋಣೋ ವಿರಾಟಸ್ಯ ಪುರೋ ನಿಹತ್ಯ ಶಙ್ಖಂ ಸುತಂ ತಸ್ಯ ವಿಜಿತ್ಯ ತಂ ಚ ।

ವಿದ್ರಾಪ್ಯ ಸೇನಾಮಪಿ ಪಾಣ್ಡವಾನಾಂ ಯಯೌ ನದೀಜೇನ ಸಹೈವ ಹೃಷ್ಟಃ ॥ ೨೫.೧೧೨॥

 

 

ದ್ರೋಣಾಚಾರ್ಯರು ವಿರಾಟನ ಎದುರುಗಡೆಯಲ್ಲಿಯೇ, ಅವನ ಮಗನಾಗಿರುವ ಶಂಖನನ್ನು ಕೊಂದು, ವಿರಾಟನನ್ನು ಗೆದ್ದು,  ಪಾಂಡವರ ಸೇನೆಯನ್ನು ಓಡಿಸಿ, ಭೀಷ್ಮಾಚಾರ್ಯರಿಂದ ಕೂಡಿಕೊಂಡು ಅತ್ಯಂತ ಸಂತೋಷದಿಂದ ತೆರಳಿದರು.

 

ಭೀಮಾರ್ಜ್ಜುನಾವಪಿ ಶತ್ರೂನ್ ನಿಹತ್ಯ ವಿದ್ರಾಪ್ಯ ಸರ್ವಾಂಶ್ಚ ಯುಧಿ ಪ್ರವೀರಾನ್ ।

ಯುಧಿಷ್ಠಿರೇಣಾಪಹೃತೇ ಸ್ವಸೈನ್ಯೇ ಭೀತೇನ ಭೀಷ್ಮಾಚ್ಛಿಬಿರಂ ಪ್ರಜಗ್ಮತುಃ ॥ ೨೫.೧೧೩॥

 

ರಣಭೂಮಿಯ ಇನ್ನೊಂದು ಮಗ್ಗಲಲ್ಲಿ ಭೀಮಸೇನಾರ್ಜುನರೂ ಕೂಡಾ ಶತ್ರುಗಳನ್ನು ಸಂಹಾರಮಾಡಿ, ಮಹಾವೀರರಾದವರೆಲ್ಲರನ್ನೂ ಓಡಿಸಿ,  ಭೀಷ್ಮಾಚಾರ್ಯರಿಂದ ಭಯಗೊಂಡ ಯುಧಿಷ್ಠಿರನಿಂದ ತಮ್ಮ ಸೈನ್ಯವು ಹಿಂದಕ್ಕೆ ಕರೆಸಲ್ಪಡುತ್ತಿರಲು, ಭೀಮಸೇನಾರ್ಜುನರೂ ಶಿಬಿರಕ್ಕೆ ತೆರಳಿದರು.

Mahabharata Tatparya Nirnaya Kannada 25-96-102

ದುರ್ಯ್ಯೋಧನೋSಥ ಸ್ವಜನೈಃ ಸಮೇತಃ ಪುನಃ ಪ್ರಾಯಾದ್ ರಣಭೂಮಿಂ ಸ ಭೀಷ್ಮಮ್ ।

ಜಯೋಪಾಯಂ ಭೈಮಸೇನೇರಪೃಚ್ಛತ್  ಸ್ವಸ್ಯೈವ ಸ ಪ್ರಾಹ ನ ತಂ ವ್ರಜೇತಿ ॥ ೨೫.೯೬॥

 

ಆಮೇಲೆ ತನ್ನವರೊಂದಿಗೆ ಶಿಬಿರದಿಂದ  ರಣರಂಗಕ್ಕೆ ಮರಳಿ ಬಂದ ದುರ್ಯೋಧನನು ಭೀಷ್ಮನನ್ನು ಕುರಿತು ಘಟೋತ್ಕಚನನ್ನು ಗೆಲ್ಲುವ ಉಪಾಯವನ್ನು ಕೇಳಿದನು. ಆಗ ಭೀಷ್ಮಾಚಾರ್ಯರು ‘ಘಟೋತ್ಕಚನನ್ನು ಕುರಿತು ಹೋಗಬೇಡ ಎಂದರು.

 

ಪ್ರಾಗ್ಜೋತಿಷಂ ಚೈವ ಘಟೋತ್ಕಚಾಯಾ ಸಮ್ಪ್ರೇಷಯಾಮಾಸ ಸುರಾಪಗಾಸುತಃ ।

ಸ ಪ್ರಾಪ್ಯ ಹೈಡಿಮ್ಬಮಯೋಧಯದ್ ಬಲೀ ಸ ಚಾರ್ದ್ದಯಾಮಾಸ ಸಕುಞ್ಜರಂ ತಮ್ ॥ ೨೫.೯೭॥

 

ಭೀಷ್ಮಾಚಾರ್ಯರು ಭಗದತ್ತನನ್ನು ಘಟೋತ್ಕಚನಿಗಾಗಿ ಕಳುಹಿಸಿದರು. ಬಲಿಷ್ಠನಾದ ಭಗದತ್ತನು ಹಿಡಿಂಬೆಯ ಮಗನಾದ ಘಟೋತ್ಕಚನನ್ನು ಹೊಂದಿ ಯುದ್ಧಮಾಡಿದನು. ಆಗ ಆನೆಯಿಂದೊಡಗೊಡಿದ ಭಗದತ್ತನನ್ನು ಘಟೋತ್ಕಚ ಚೆನ್ನಾಗಿ ಪೀಡಿಸಿದ.

 

ತೇನಾರ್ದ್ದಿತಃ ಪ್ರಾಹಿಣೋಚ್ಛೂಲಮಸ್ಮೈ ವಿಯತ್ಯಭಿಪ್ಲುತ್ಯ ತದಾ ಘಟೋತ್ಕಚಃ ।

ಪ್ರಗೃಹ್ಯ ಶೂಲಂ ಪ್ರಬಭಞ್ಜ ಜಾನುಮಾರೋಪ್ಯ ದೇವಾ ಜಹೃಷುಸ್ತದೀಕ್ಷ್ಯ ॥ ೨೫.೯೮॥

 

ಘಟೋತ್ಕಚನಿಂದ ಪೀಡಿತನಾದ ಭಗದತ್ತನು ಅವನ ಮೇಲೆ ಶೂಲವನ್ನು ಎಸೆದನು. ಆಗ ಘಟೋತ್ಕಚನು ಆಕಾಶದಲ್ಲಿ ಹಾರಿ ಶೂಲವನ್ನು ಹಿಡಿದು, ಅದನ್ನು ತನ್ನ ಮೊಣಕಾಲಿನ ಮೇಲಿಟ್ಟು ಮುರಿದುಹಾಕಿದನು. ಈರೀತಿಯಾದ ಅವನ ಕರ್ಮವನ್ನು ಕಂಡು ದೇವತೆಗಳು ಸಂತೋಷಪಟ್ಟರು.

 

ತದಾ ಸ ತಸ್ಯೈವ ಪದಾನುಗಾನ್ ನೃಪೋ ಜಘಾನ ತಂ ಮಾರುತಿರಭ್ಯಯಾದ್ ರಣೇ ।

ಸ ಪ್ರಾಹಿಣೋದ್ ಭೀಮಸೇನಾಯ ವೀರೋ ಗಜಂ ತಮಸ್ತಮ್ಭಯದಾಶು ಸಾಯಕೈಃ ॥ ೨೫.೯೯॥

 

ಸಂಸ್ತಮ್ಭಿತೇ ಬಾಣವರೈಸ್ತು ನಾಗೇ ಭೀಮಸ್ಯಾಶ್ವಾನ್ ಸಾಯಕೈರಾರ್ದ್ದಯತ್ ಸಃ ।

ಸೋSಭ್ಯರ್ದ್ದಿತಾಶ್ವೋSಥ ಗದಾಂ ಪ್ರಗೃಹ್ಯ ಹನ್ತುಂ ನೃಪಂ ತಂ ಸಗಜಂ ಸಮಾಸದತ್ ॥ ೨೫.೧೦೦॥

 

ರಾಜನಾದ ಆ ಭಗದತ್ತನು ಘಟೋತ್ಕಚನ ಬೆಂಗಾವಲು ಪಡೆಯನ್ನು ಸಂಹಾರಮಾಡಿದನು. ಆಗ ಘಟೋತ್ಕಚನಿಗೆ  ಬೆಂಗಾವಲಾಗಿ ಭೀಮಸೇನನು ಭಗದತ್ತನನ್ನು ಎದುರುಗೊಂಡ. ಭಗದತ್ತನು ಭೀಮಸೇನನತ್ತ ತನ್ನ ಆನೆಯನ್ನು ಕಳುಹಿಸಿದ. ವೀರನಾಗಿರುವ ಭೀಮಸೇನನು ಕೂಡಲೇ ತನ್ನ ಬಾಣಗಳಿಂದ ಆ ಆನೆಯನ್ನು ಅಲ್ಲಾಡದಂತೆ ಮಾಡಿದನು. ಭೀಮನ ಬಾಣಗಳ ವರಸೆಯಿಂದ ಆ ಸುಪ್ರತೀಕವು ಚಲನೆ ಇಲ್ಲದಂತೆ ಅವಕ್ಕಾಗಿ ನಿಲ್ಲಲು, ಭಗದತ್ತನು ಭೀಮಸೇನನ ಕುದುರೆಗಳನ್ನು ತನ್ನ ಬಾಣಗಳಿಂದ ಪೀಡಿಸಿದನು. ಕುದುರೆಗಳಿಗೆ ಗಾಯಗಳಾಗಿ ವೇಗ ಕಡಿಮೆಯಾಗಲು, ಭೀಮಸೇನ ಗದೆಯನ್ನು ಹಿಡಿದುಕೊಂಡು ಆನೆಯಿಂದ ಕೂಡಿರುವ ಭಗದತ್ತನನ್ನು ಕೊಲ್ಲುವುದಕ್ಕಾಗಿ ಬಂದನು.   

 

ಸ ಹನ್ತುಕಾಮೇನ ರುಷಾSಭಿಪನ್ನೋ ಭೀಮೇನ ರಾಜಾ ಪುರತಃ ಪೃಷ್ಠತಶ್ಚ ।

ಕೃಷ್ಣೇನಾಸ್ತ್ರಂ ವೈಷ್ಣವಂ ತದ್ ಗೃಹೀತುಂ ಸಹಾರ್ಜ್ಜುನೇನಾಪಯಯೌ ಸುಭೀತಃ ॥ ೨೫.೧೦೧॥

 

ಹೀಗೆ ಎದುರಿನಲ್ಲಿ ಸಿಟ್ಟಿನಿಂದ ಕೊಲ್ಲಲು ಇಷ್ಟಪಟ್ಟು ಮುನ್ನುಗ್ಗಿ ಬರುತ್ತಿರುವ ಭೀಮಸೇನ ಹಾಗು ಹಿಂಭಾಗದಲ್ಲಿ ವೈಷ್ಣವಾಸ್ತ್ರವನ್ನು ಅಪಹರಿಸಲು ಬರುತ್ತಿರುವ ಕೃಷ್ಣನಿಂದೊಡಗೂಡಿದ ಅರ್ಜುನನ್ನು ಕಂಡು ಭಯಗೊಂಡವನಾದ ಭಗದತ್ತ ಪಲಾಯನ ಮಾಡಿದನು.

 

ತಸ್ಮಿನ್ ಗತೇ ಭೀಮಸೇನಾರ್ಜ್ಜುನಾಭ್ಯಾಂ ವಿದ್ರಾವಿತೇ ರಾಜಸಙ್ಘೇ ಸಮಸ್ತೇ ।

ಭೀಷ್ಮಃ ಸೇನಾಮಪಹೃತ್ಯಾಪಯಾತೋ ದುರ್ಯ್ಯೋಧನಸ್ತಂ ನಿಶಿ ಚೋಪಜಗ್ಮಿವಾನ್ ॥ ೨೫.೧೦೨॥

 

ಭಗದತ್ತ ಓಡಿಹೋಗಲು, ಭೀಮಸೇನ ಹಾಗೂ ಅರ್ಜುನರಿಂದ ಎಲ್ಲಾ ರಾಜರ ಸಮೂಹವು ಓಡಿಸಲ್ಪಡುತ್ತಿರಲು, ಭೀಷ್ಮರು ಸೇನೆಯನ್ನು ಉಪಸಂಹಾರಮಾಡಿ ಶಿಬಿರಕ್ಕೆ ಹಿಂತಿರುಗಿದರು. ದುರ್ಯೋಧನನು ಆ ರಾತ್ರಿ ಭೀಷ್ಮಾಚಾರ್ಯರನ್ನು ಹೊಂದಿದನು. 

Sunday, January 29, 2023

Mahabharata Tatparya Nirnaya Kannada 25-82-95

 

ತತ್ರಾSಸದನ್ನಾಗಸುತಾಸಮುದ್ಭವಃ ಪಾರ್ತ್ಥಾತ್ಮಜಃ ಶಾಕುನೇಯಾನ್ ಷಳೇಕಃ ।

ತೈಃ ಪ್ರಾಸಹಸ್ತೈಃ ಕ್ಷತಕಾಯೋSತಿರೂಢಕೋಪಃ ಸ ಖಡ್ಗೇನ ಚಕರ್ತ್ತ ತೇಷಾಮ್ ॥ ೨೫.೮೨॥

 

ಶಿರಾಂಸಿ ವೀರೋ ಬಲವಾನಿರಾವಾನ್  ಭಯಂ ದಧದ್ ಧಾರ್ತ್ತರಾಷ್ಟ್ರೇಷು ಚೋಗ್ರಮ್ ।

ದೃಷ್ಟ್ವಾ ತಮುಗ್ರಂ ಧೃತರಾಷ್ಟ್ರಪುತ್ರೋ ದಿದೇಶ ರಕ್ಷೋSಲಮ್ಭುಸನಾಮಧೇಯಮ್ ॥ ೨೫.೮೩॥

 

ಜಹ್ಯಾರ್ಜ್ಜುನಿಂ ಕ್ಷಿಪ್ರಮಿತಿ ಸ್ಮ ತಚ್ಚ ಸಮಾಸದನ್ನಾಗಸುತಾತನೂಜಮ್ ।

ತಯೋರಭೂದ್ ಯುದ್ಧಮತೀವ ದಾರುಣಂ ಮಾಯಾಯುಜೋರ್ವೀರ್ಯ್ಯವತೋರ್ಮ್ಮಹಾದ್ಭುತಮ್ ॥೨೫.೮೪॥

 

ಆ ದಿನದ ಯುದ್ಧದಲ್ಲಿ ಉಲೂಪಿಕೆಯಲ್ಲಿ ಹುಟ್ಟಿದ ಅರ್ಜುನನ ಮಗನಾದ ಇರಾವಂತನು ಆರು ಜನ ಶಕುನಿಯ ಮಕ್ಕಳನ್ನು ಯುದ್ಧಕ್ಕೆಂದು ಎದುರುಗೊಂಡ. ಈಟಿಯನ್ನು ಹಿಡಿದ ಶಕುನಿಪುತ್ರರಿಂದ ಗಾಯಗೊಂಡ ಮೈಯುಳ್ಳವನಾದ ಇರಾವಂತನು, ಉಕ್ಕಿಬಂದ ಸಿಟ್ಟುಳ್ಳವನಾಗಿ ಕತ್ತಿಯಿಂದ ಅವರೆಲ್ಲರ ಕತ್ತನ್ನು ಕತ್ತರಿಸಿದ. ವೀರನೂ, ಬಲಿಷ್ಠನೂ ಆದ ಇರಾವಂತ ದುರ್ಯೋಧನಾದಿಗಳಲ್ಲಿ ಭಯವನ್ನುಂಟುಮಾಡಿದ. ಉಗ್ರವಾಗಿ ಹೋರಾಡುತ್ತಿರುವ ಇರಾವಂತನನ್ನು ಕಂಡ ದುರ್ಯೋಧನನು ಅಲಂಬುಸ ಎನ್ನುವ ಹೆಸರಿನ ರಾಕ್ಷಸನಿಗೆ ‘ಅರ್ಜುನನ ಮಗನನ್ನು ಕೂಡಲೇ ಕೊಲ್ಲು’ ಎಂದು ಆಜ್ಞೆಮಾಡಿದ. ಅಲಂಬುಸನು ಉಲೂಪಿಯ ಮಗನಾದ ಇರಾವಂತನನ್ನು ಎದುರುಗೊಂಡ. ಮಾಯಾವಿದ್ಯೆಯನ್ನು ಬಲ್ಲ ಅವರಿಬ್ಬರ ನಡುವೆ ಅತ್ಯಂತ ಭಯಂಕರವಾದ, ಅದ್ಭುತ ಯುದ್ಧ ನಡೆಯಿತು.

 

ಸಸಾದಿನೋSಶ್ವಾನ್ ಸ ತು ರಾಕ್ಷಸೋSಸೃಜತ್ ತೇ ಪಾರ್ತ್ಥಪುತ್ರಸ್ಯ ಚ ಸಾದಿನೋSಹನನ್ ।

ತತಸ್ತ್ವನನ್ತಾಕೃತಿಮಾಪ್ತಮಾರ್ಜ್ಜುನಿಂ ಸುಪರ್ಣ್ಣರೂಪೋSಹನದಾಶು ರಾಕ್ಷಸಃ ॥ ೨೫.೮೫॥

 

ಈ ರಾಕ್ಷಸನಾದರೋ, ತನ್ನ ಮಾಯೆಯಿಂದ ಅಶ್ವಾರೂಢರಿಂದ ಕೂಡಿರುವ ಕುದುರೆಗಳನ್ನು ಸೃಷ್ಟಿ ಮಾಡಿದನು. ಅವರು ಇರಾವಂತನ ಸೈನಿಕರನ್ನು ಕೊಂದರು. ತದನಂತರ ಸರ್ಪದ ರೂಪವನ್ನು  ಹೊಂದಿದ ಇರಾವಂತನನ್ನು ಅಲಂಬುಸ ಸುಪರ್ಣ(ಗರುಡ)ನ ರೂಪನಾಗಿ ಕೊಂದ.

 

ಹತಂ ನಿಶಮ್ಯಾSರ್ಜ್ಜುನಿಮುಗ್ರಪೌರುಷೋ ನನಾದ ಕೋಪೇನ ವೃಕೋದರಾತ್ಮಜಃ ।

ಚಚಾಲ ಭೂರ್ನ್ನಾನದತೋSಸ್ಯ ರಾವತಃ ಸಸಾಗರಾಗೇನ್ದ್ರನಗಾ ಭೃಶಂ ತದಾ ॥ ೨೫.೮೬॥

 

ಉಗ್ರವಾದ ಪರಾಕ್ರಮವುಳ್ಳ ಘಟೋತ್ಕಚನು ಅರ್ಜುನನ ಮಗನಾಗಿರುವ ಇರಾವಂತ ಸತ್ತಾ ಎಂದು ಕೇಳಿ, ಕೋಪದಿಂದ ಗರ್ಜಿಸಿದನು. ಅವನ ಘರ್ಜನೆಗೆ ಸಮುದ್ರ, ಪರ್ವತ, ಮರಗಳಿಂದ ಕೂಡಿರುವ ಭೂಮಿಯು ಕಂಪಿಸಿತು.

[ಮಹಾಭಾರತ ಘಟೋತ್ಕಚನ ಘರ್ಜನೆಯನ್ನು ಹೀಗೆ ವರ್ಣಿಸಿದೆ: ‘ನದತಸ್ತಸ್ಯ ಶಬ್ದೇನ ಪೃಥಿವೀ ಸಾಗರಾಮ್ಬರಾ । ಸಪರ್ವತವನಾ  ರಾಜಂಶ್ಚಚಾಲ ಸುಭೃುಶಂ ತದಾ’ (ಭೀಷ್ಮಪರ್ವ ೯೧.೩)]

 

ಅಲಮ್ಬುಸಸ್ತಂ ಪ್ರಸಮೀಕ್ಷ್ಯ ಮಾರುತೇಃ ಸುತಂ ಬಲಾಢ್ಯಂ ಭಯತಃ ಪರಾದ್ರವತ್ ।

ಪರಾದ್ರವನ್ ಧಾರ್ತ್ತರಾಷ್ಟ್ರಸ್ಯ ಸೇನಾಃ ಸರ್ವಾಸ್ತಮಾರಾಥ ಸುಯೋಧನೋ ನೃಪಃ ॥ ೨೫.೮೭॥

 

ಅಂತಹ ಬಲದಿಂದ ಕೂಡಿರುವ ಘಟೋತ್ಕಚನನ್ನು ಕಂಡ ಅಲಂಬುಸನು ಭಯದಿಂದ ಕಾಲಿಗೆ ಬುದ್ಧಿಹೇಳಿದನು. ದುರ್ಯೋಧನನ ಬೆಂಗಾವಲು ಪಡೆ ಕೂಡಾ ಓಡಿಹೋಯಿತು. ಎಲ್ಲರೂ ಓಡಿಹೋಗಲು, ದುರ್ಯೋಧನನು ಘಟೋತ್ಕಚನನ್ನು ಹೊಂದಿದನು.

 

ಸ ಭೀಮಪುತ್ರಸ್ಯ ಜಘಾನ ಮನ್ತ್ರಿಣೋ ಮಹಾಬಲಾಂಶ್ಚತುರೋSನ್ಯಾಂಸ್ತಥೈವ ।

ಹತಾವಶೇಷೇಷು ಚ ವಿದ್ರವತ್ಸು ಘಟೋತ್ಕಚೋSಭ್ಯಾಹನದಾಶು ತಂ ನೃಪಮ್ ॥ ೨೫.೮೮॥

 

ದುರ್ಯೋಧನನು ಘಟೋತ್ಕಚನ ಮಹಾಬಲವುಳ್ಳ ನಾಲ್ಕುಜನ ಮಂತ್ರಿಗಳನ್ನು ಕೊಂದ. [‘ವೇಗವನ್ತಂ ಮಹಾರೌದ್ರಂ ವಿದ್ಯುಜ್ಜಿಹ್ವಂ ಪ್ರಮಾಥಿನಮ್ । ಶರೈಶ್ಚತುರ್ಭಿಶ್ಚತುರೋ ನಿಜಘಾನ ಮಹಾಬಲಃ’ (ಭೀಷ್ಮಪರ್ವ ೯೧.೨೦)]. ಅಷ್ಟೇ ಅಲ್ಲಾ, ಉಳಿದ ಅನೇಕರನ್ನು ಕೊಂದ ಕೂಡಾ.  ಅಳಿದುಳಿದ ಬೆಂಗಾವಲುಪಡೆ ಓಡಲು, ಘಟೋತ್ಕಚ ದುರ್ಯೋಧನನನ್ನು ಬಲವಾಗಿ ಹೊಡೆದ. 

 

ಸ ಪೀಡ್ಯಮಾನೋ ಯುಧಿ ತೇನ ರಕ್ಷಸಾ ಪ್ರವೇಶಯಾಮಾಸ ಶರಂ ಘಟೋತ್ಕಚೇ ।

ದೃಢಾಹತಸ್ತೇನ ತದಾ ಬಲೀಯಸಾ ಘಟೋತ್ಕಚಃ ಪ್ರವ್ಯಥಿತೇನ್ದ್ರಿಯೋ ಭೃಶಮ್ ।

ತಸ್ಥೌ ಕಥಞ್ಚಿದ್ ಭುವಿ ಪಾತ್ಯಮಾನಃ ಪುನಃ ಶರಾನಪ್ಯಸೃಜತ್ ಸುಯೋಧನೇ ॥ ೨೫.೮೯॥

 

ಯುದ್ಧದಲ್ಲಿ ಘಟೋತ್ಕಚನಿಂದ ವಿಪರೀತ ಪೀಡೆಗೆ ಒಳಗಾದ ದುರ್ಯೋಧನನು ಘಟೋತ್ಕಚನ ದೇಹದೊಳಗೆ ಬಾಣವನ್ನು ತೂರಿದನು. ಆ ಬಾಣದಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟ ಘಟೋತ್ಕಚನು ನೋವುಳ್ಳ ಇಂದ್ರಿಯದವನಾಗಿ ರಥದಿಂದ ಕೆಳಗೆ ಭೂಮಿಯಲ್ಲಿ ಬೀಳಿಸಲ್ಪಟ್ಟವನಾದರೂ,   ಹೇಗೋ ಕಷ್ಟಪಟ್ಟು ಒಂದುಕಡೆ ನಿಂತ ಅವನು ದುರ್ಯೋಧನನಲ್ಲಿ ಬಾಣಗಳನ್ನು ಬಿಟ್ಟ.

 

ಚಿರಪ್ರಯುದ್ಧೌ ನೃಪರಾಕ್ಷಸಾಧಿಪೌ ಪರಸ್ಪರಾಜೇಯತಮೌ ರಣಾಜಿರೇ ।

ದ್ರೋಣಾದಯೋ ವಿಕ್ಷ್ಯ ರಿರಕ್ಷಿಷನ್ತಃ ಸುಯೋಧನಂ ಪ್ರಾಪುರಮಿತ್ರಸಾಹಾಃ ॥ ೨೫.೯೦॥

 

ರಾಕ್ಷಸಾದಿಪನಾಗಿರುವ ಘಟೋತ್ಕಚ ಹಾಗೂ ರಾಜನಾಗಿರುವ ದುರ್ಯೋಧನ ಬಹಳ ಕಾಲ ಯುದ್ಧಮಾಡುತ್ತಿದ್ದರು ಮತ್ತು ಪರಸ್ಪರವಾಗಿ ಜಯಿಸಲು ಅಶಕ್ಯರಾಗಿದ್ದರು. ಇದನ್ನು ಕಂಡ ದ್ರೋಣಾದಿಗಳು ದುರ್ಯೋಧನನನ್ನು ರಕ್ಷಿಸಲು ಬಯಸಿ ಅವನನ್ನು ಹೊಂದಿದರು.

 

ಸ ದ್ರೋಣಶಲ್ಯೌ ಗುರುಪುತ್ರಗೌತಮೌ ಭೂರಿಶ್ರವಃಕೃತವರ್ಮ್ಮಾದಿಕಾಂಶ್ಚ ।

ವವರ್ಷ ಬಾಣೈರ್ಗ್ಗಗನಂ ಸಮಾಶ್ರಿತೋ ಘಟೋತ್ಕಚಃ ಸ್ಥೂಲತಮೈಃ ಸುವೇಗೈಃ ॥ ೨೫.೯೧॥

 

ಆ ಘಟೋತ್ಕಚನು ಆಕಾಶದಲ್ಲಿಯೇ ಇದ್ದು, ದ್ರೋಣ, ಶಲ್ಯ, ಅಶ್ವತ್ಥಾಮ, ಕೃಪ, ಭೂರಿಶ್ರವಸ್ಸು, ಕೃತವರ್ಮ ಮೊದಲಾದವರ ಮೇಲೆ  ಬಹಳ ದಪ್ಪವಾಗಿರುವ, ಅತ್ಯಂತ ವೇಗದಿಂದ ಕೂಡಿರುವ ಬಾಣಗಳ ಮಳೆಗರೆದನು.

 

ತಮೇಕಮಗ್ರ್ಯೈ ರಥಿಭಿಃ ಪರಿಷ್ಕೃತಂ ನಿರೀಕ್ಷ್ಯ ಭೀಮೋSಭ್ಯಗಮತ್ ಸಮಸ್ತಾನ್ ।

ದ್ರೋಣೋSತ್ರ ಭೀಮಪ್ರಹಿತೈಃ ಶರೋತ್ತಮೈಃ ಸುಪೀಡಿತಃ ಪ್ರಾಪ್ತಮೂರ್ಚ್ಛಃ ಪಪಾತ ॥ ೨೫.೯೨॥

 

ಶ್ರೇಷ್ಠವಾದ ರಥಿಗಳಿಂದ ಘಟೋತ್ಕಚನೊಬ್ಬನೇ ಸುತ್ತುವರಿಯಲ್ಪಟ್ಟಿದ್ದಾನೆ ಎನ್ನುವುದನ್ನು ತಿಳಿದ  ಭೀಮಸೇನನು ಅವರೆಲ್ಲರನ್ನೂ ಎದುರುಗೊಂಡ. ಆ ಯುದ್ಧದಲ್ಲಿ ದ್ರೋಣಾಚಾರ್ಯರು ಭೀಮನ ಬಾಣಗಳಿಂದ ಪೀಡಿತರಾಗಿ ಮೂರ್ಛೆಯನ್ನು ಹೊಂದಿ ಬಿದ್ದರು.

[ಮಹಾಭಾರತದ ಭೀಷ್ಮಪರ್ವದಲ್ಲಿ ಈ ಕುರಿತು ಹೀಗೆ ಹೇಳಿದ್ದಾರೆ: ‘ತಂ ಪ್ರತ್ಯವಿಧ್ಯದ್ ದಶಭಿರ್ಭಿಮಸೇನಃ ಶಿಲೀಮುಖೈಃ’ (೯೪.೧೮),  ಸ ಗಾಢವಿದ್ಧೋ ವ್ಯಥಿತೋ  ವಯೋವೃದ್ಧಶ್ಚ ಭಾರತ  ಪ್ರನಷ್ಟಸಞ್ಜ್ಞಃ  ಸಹಸಾ ರಥೋಪಸ್ಥ ಉಪಾವಿಶತ್’ (೧೯) ಹತ್ತು ಬಾಣಗಳಿಂದ ಭೀಮಸೇನ ಹೊಡೆದಾಗ ವಯೋವೃದ್ಧನಾದ ದ್ರೋಣ  ಬಹಳ ಖತಿಗೊಂಡು ರಥದ ಕಂಬಕ್ಕೆ ಒರಗಿ ಕುಸಿದು ಕುಳಿತ].

 

ದ್ರೌಣಿಂ ಕೃಪಾದ್ಯಾನ್ ಸಸುಯೋಧನಾಂಶ್ಚ ಚಕಾರ ಭೀಮೋ ವಿರಥಾನ್ ಕ್ಷಣೇನ ।

ನಿವಾರ್ಯ್ಯಮಾಣಾಂಸ್ತು ವೃಕೋದರೇಣ ಘಟೋತ್ಕಚಸ್ತಾನ್ ಪ್ರವವರ್ಷ ಸಾಯಕೈಃ ॥ ೨೫.೯೩॥

 

ಮತ್ತೆ ಅಶ್ವತ್ಥಾಮ, ಕೃಪ, ದುರ್ಯೋಧನ, ಮೊದಲಾದವರನ್ನು ಭೀಮಸೇನನು ಕ್ಷಣದಲ್ಲಿ ರಥಹೀನರನ್ನಾಗಿ ಮಾಡಿದ. ವೃಕೋದರನಿಂದ ವೇಗವನ್ನು ತಗ್ಗಿಸಿಕೊಂಡ ಅವರೆಲ್ಲರನ್ನೂ ಘಟೋತ್ಕಚ ಹೊಡೆದ.  

 

ತೇನಾಮ್ಬರಸ್ಥೇನ ತರುಪ್ರಮಾಣೈರಭ್ಯರ್ದ್ದಿತಾಃ ಕುರವಃ ಸಾಯಕೌಘೈಃ ।

ಭೂಮೌ ಚ ಭೀಮೇನ ಶರೌಘಪೀಡಿತಾಃ ಪೇತುರ್ನ್ನೇದುಃ ಪ್ರಾದ್ರವಂಶ್ಚಾತಿಭೀತಾಃ ॥ ೨೫.೯೪॥

 

ಆಕಾಶದಲ್ಲಿರುವ ಘಟೋತ್ಕಚ ಬಿಟ್ಟ ದೊಡ್ಡ ಮರದಂತೆ ಇರುವ ಬಾಣಗಳಿಂದ ಕೌರವರು ಗಾಯಗೊಂಡರು. ಭೂಮಿಯಲ್ಲಿ ಭೀಮಸೇನನ ಬಾಣಗಳಿಂದ ಅವರು ಪೀಡಿತರಾಗಿ ಬಿದ್ದರು. ಅವರು  ಕಿರುಚುತ್ತಾ ಓಡಿದರು ಕೂಡಾ.

 

ಸರ್ವಾಂಶ್ಚ ತಾಞ್ಚಿಬಿರಂ ಪ್ರಾಪಯಿತ್ವಾ ವಿನಾ ಭೀಷ್ಮಂ ಕೌರವಾನ್ ಭೀಮಸೇನಃ ।

ಘಟೋತ್ಕಚಶ್ಚಾನದತಾಂ ಮಹಾಸ್ವನೌ ನಾದೇನ ಲೋಕಾನಭಿಪೂರಯನ್ತೌ ॥ ೨೫.೯೫॥

 

ಹೀಗೆ ಭೀಷ್ಮನನ್ನು ಬಿಟ್ಟು ಇತರರೆಲ್ಲರನ್ನೂ ಶಿಬಿರಕ್ಕೆ ಕಳುಹಿಸಿದ ಭೀಮಸೇನ ಮತ್ತು ಘಟೋತ್ಕಚರಿಬ್ಬರೂ ತಮ್ಮ ಮಹತ್ತಾದ ಧ್ವನಿಯಿಂದ ಇಡೀ ರಣಭೂಮಿ ತುಂಬುವಂತೆ ಗರ್ಜಿಸಿದರು.

Saturday, January 28, 2023

Mahabharata Tatparya Nirnaya Kannada 25-72-81

 

ತತಃ ಪರೇದ್ಯುಃ ಪುನರೇವ ಭೀಮಭೀಷ್ಮೌ ಪುರಸ್ಕೃತ್ಯ ಸಮೀಯತುಸ್ತೇ ।

ಸೇನೇ ತದಾ ಸಾರಥಿಹೀನಮಾಶು ಭೀಷ್ಮಂ ಕೃತ್ವಾ ಮಾರುತಿರಭ್ಯಗಾತ್ ಪರಾನ್ ॥ ೨೫.೭೨॥

 

ಮಾರನೇ ದಿವಸ ಮತ್ತೆ ಭೀಮ ಹಾಗೂ ಭೀಷ್ಮಾಚಾರ್ಯರನ್ನು ಮುಂದೆ ಇಟ್ಟುಕೊಂಡು ಆ ಕೌರವ-ಪಾಂಡವ ಸೇನೆಯು ಯುದ್ಧಕ್ಕಾಗಿ ಸೇರಿತು. ಆಗ ಭೀಮಸೇನನು ಶೀಘ್ರದಲ್ಲಿ ಭೀಷ್ಮಾಚಾರ್ಯರನ್ನು ಸಾರಥಿಹೀನನನ್ನಾಗಿ ಮಾಡಿ ಶತ್ರುಗಳನ್ನು ಎದುರಿಸಿದನು.

 

ನಿಪಾತಿತಾಸ್ತೇನ ರಥೇಭವಾಜಿನಃ ಪ್ರದುದ್ರುವುಶ್ಚಾವಶಿಷ್ಟಾಃ ಸಮಸ್ತಾಃ ।

ದುರ್ಯ್ಯೋಧನಾದ್ಯೇಷು ಪರಾಜಿತೇಷು ಭೀಷ್ಮದ್ರೋಣದ್ರೌಣಿಪುರಸ್ಸರೇಷು ॥ ೨೫.೭೩॥

 

ಅಂತಹ ಭೀಮಸೇನನಿಂದ ರಥಗಳು, ಆನೆಗಳು, ಕುದುರೆಗಳು, ಇವುಗಳಲ್ಲಿರುವ ವೀರರು, ಹೀಗೆ  ಎಲ್ಲವೂ ಕೂಡಾ ಕೆಡವಲ್ಪಟ್ಟವು. ಭೀಷ್ಮ, ದ್ರೋಣ, ಅಶ್ವತ್ಥಾಮ, ದುರ್ಯೋಧನ ಮೊದಲಾದವರೂ ಕೂಡಾ ಸೋಲುತ್ತಿರಲು, ಉಳಿದವರೆಲ್ಲರೂ ಕೂಡಾ ಓಡಿಹೋದರು.  

 

ಮಹಾಗಜಸ್ಥೋ ಭಗದತ್ತ ಆಗಾದಾಯನ್ ಬಾಣಂ ಭೀಮಸೇನೇSಮುಚಚ್ಚ ।

ತೇನಾತಿವಿದ್ಧೇ ಭೀಮಸೇನೇSಸ್ಯ ಪುತ್ರ ಉದ್ಯಚ್ಛಮಾನಂ ಪಿತರಂ ನಿವಾರ್ಯ್ಯ ॥ ೨೫.೭೪॥

 

ಘಟೋತ್ಕಚೋSಭ್ಯದ್ರವದಾಶು ವೀರಃ ಸ್ವಮಾಯಯಾ ಹಸ್ತಿಚತುಷ್ಟಯಸ್ಥಃ ।

ಸ ವೈಷ್ಣವಾಸ್ತ್ರಂ ಭಗದತ್ತಸಂಸ್ಥಂ ವಿಜ್ಞಾಯ ವಿಷ್ಣೋರ್ವರತೋ ವಿಶೇಷತಃ ॥ ೨೫.೭೫॥

 

ಅಮೋಘಮನ್ಯತ್ರ ಹರೇರ್ಮ್ಮರುತ್ಸುತಃ ಪುತ್ರೇ ಯಾತೇ ನ ಸ್ವಯಮಭ್ಯಧಾವತ್ ।

ಅನುಗ್ರಹಾದಭ್ಯಧಿಕಾದವದ್ಧ್ಯಂ ಜಾನನ್ನಪಿ ಸ್ವಂ ವಾಸುದೇವಸ್ಯ ನಿತ್ಯಮ್  ॥ ೨೫.೭೬॥

 

ತದ್ಭಕ್ತಿವೈಶೇಷ್ಯತ ಏವ ತಸ್ಯ ಸತ್ಯಂ ವಾಕ್ಯಂ ಕರ್ತ್ತುಮರಿಂ ನಚಾಯಾತ್ ।

ಯದಾ ಸ್ವಪುತ್ರೇಣ ಜಿತೋ ಭವೇತ್ ಸ ಕಿಮ್ವಾತ್ಮನೇತ್ಯೇವ ತದಾ ಪ್ರವೇತ್ತುಮ್ ॥ ೨೫.೭೭॥

 

ಆಗ ದೊಡ್ಡ ಆನೆಯಮೇಲೆ ಕುಳಿತ ಭಗದತ್ತನು ಯುದ್ಧಕ್ಕೆಂದು ಬಂದ(ಭಗದತ್ತ ಕುಬೇರನ ಅವತಾರ, ಅವನ ಆನೆ ದಿಗ್ಗಜಗಳಲ್ಲಿ ಒಂದಾದ ಸುಪ್ರತೀಕ. ಅವನು ಮಹಾ ಅಸುರಾವೇಶದಿಂದ ಕೂಡಿದ್ದ).

ಬರುತ್ತಲೇ ಭಗದತ್ತನು ಭೀಮಸೇನನಲ್ಲಿ ಬಾಣಗಳನ್ನು ಬಿಟ್ಟ.  ಭಗದತ್ತನಿಂದ ಭೀಮಸೇನನು ಅತ್ಯಂತ ಉಗ್ರವಾಗಿ ಹೊಡೆಯಲ್ಪಡಲು, ಭೀಮಸೇನನ ಮಗನಾದ ಘಟೋತ್ಕಚನು ಭಗದತ್ತನನ್ನು ಕುರಿತು ಯುದ್ಧ ಮಾಡಲು ಬಂದ. ತಂದೆಯನ್ನು ತಡೆದ ವೀರನಾಗಿರುವ ಘಟೋತ್ಕಚನು ತನ್ನ ಮಾಯೆಯಿಂದ ನಾಲ್ಕು ರೂಪವನ್ನು ಧರಿಸಿ, ನಾಲ್ಕು ಆನೆಗಳಲ್ಲಿ ಒಟ್ಟಿಗೆ ಕುಳಿತು, ಭಗದತ್ತನನ್ನು ಇದಿರುಗೊಂಡ.

(ಏಕೆ ಭೀಮಸೇನ ಭಗದತ್ತನೊಂದಿಗೆ ಯುದ್ಧ ಮುಂದುವರಿಸದೇ ಮಗನಿಗೆ ಅವಕಾಶ ಮಾಡಿಕೊಟ್ಟ ಎಂದರೆ:)  ಭೀಮಸೇನನು ವಿಶೇಷತಃ ಪರಮಾತ್ಮನನ್ನು ಬಿಟ್ಟು ಬೇರೆಯವರಲ್ಲಿ ಎಂದೂ ವ್ಯರ್ಥವಾಗದ, ವಿಷ್ಣುವಿನ ವಿಶೇಷ ವರದಿಂದ ಭಗದತ್ತನು ಪಡೆದಿರುವ ನಾರಾಯಣಾಸ್ತ್ರವಿರುವುದನ್ನು ತಿಳಿದು, ತಾನು ಘಟೋತ್ಕಚನನ್ನು ತಡೆದು ಮುಂದೆ ಹೋಗಲಿಲ್ಲ.

(ಹಾಗಿದ್ದರೆ ಭೀಮಸೇನ ತನ್ನ ಜೀವ ಉಳಿಸಿಕೊಳ್ಳಲು ಹೀಗೆ ಮಾಡಿದನೇ ಎಂದರೆ-) ಶ್ರೀಕೃಷ್ಣ ಪರಮಾತ್ಮನ ಅನುಗ್ರಹದಿಂದ, ಭಗವಂತನ ವಿಶೇಷವಾದ ವರದಿಂದ ತಾನು ಅವಧ್ಯ ಎಂದು ತಿಳಿದೂ ಕೂಡಾ, ಅವನು  ಹೋಗಲಿಲ್ಲ. ಏಕೆಂದರೆ ಪರಮಾತ್ಮನಲ್ಲಿರುವ ವಿಶೇಷವಾದ ಭಕ್ತಿಯಿಂದಲೇ, ಪರಮಾತ್ಮನ ಮಾತನ್ನು ಸತ್ಯವನ್ನಾಗಿ ಮಾಡಲು ಮತ್ತು ‘ಒಂದು ವೇಳೆ ಭಗದತ್ತ ಘಟೋತ್ಕಚನಿಂದ ಸೋತರೆ  ಆಗ ತನ್ನಿಂದ ಪರಾಜಿತನಾಗುವನೆಂದು ಏನು ಹೇಳಬೇಕು’ ಎಂದು ತಿಳಿಸಿಕೊಡುವುದಕ್ಕಾಗಿ  ಭೀಮ ಹೀಗೆ ಮಾಡಿದ.

[ಇದು ಭೀಮಸೇನನ ಯುದ್ಧದ ಹಿನ್ನೆಲೆಯ ಮನಸ್ಥಿತಿ. ನಾರಾಯಣಾಸ್ತ್ರ ವ್ಯರ್ಥವಾಯಿತು ಎಂದಾಗಬಾರದು ಎಂದು, ಪರಮಾತ್ಮನ ಮೇಲಿನ ಭಕ್ತಿಯಿಂದ  ಭೀಮ ಹೀಗೆ ಮಾಡಿದ. ಮಹಾಭಾರತದ ದ್ರೋಣಪರ್ವದಲ್ಲಿ ಈ ಮಾತಿಗೆ ಪ್ರಮಾಣ ಕಾಣಸಿಗುತ್ತದೆ: ದೇವಾನಾಂ ದಾನವಾನಾಂ ಚ ಅವಧ್ಯಸ್ತನಯೋSಸ್ತು ಮೇ । ಉಪೇತೋ ವೈಷ್ಣವಾಸ್ತ್ರೇಣ ತನ್ಮೇ ತ್ವಂ ದಾತುಮರ್ಹಸಿ ।  ಏವಂ ವರಮಹಂ ಶ್ರುತ್ವಾ ಜಗತ್ಯಾಸ್ತನಯೇ ತದಾ । ಅಮೋಘಮಸ್ತ್ರಂ ಪ್ರಾಯಚ್ಛಂ ವೈಷ್ಣವಂ ಪರಮಂ ಪುರಾ । ಅವೋಚಂ ಚೈತದಸ್ತ್ರಂ ವೈ ಹ್ಯಮೋಘಂ ಭವತು ಕ್ಷಮೇ । ನರಕಸ್ಯಾಭಿರಕ್ಷಾರ್ಥಂ ನೈನಂ ಕಶ್ಚಿದ್ ಬಧಿಷ್ಯತಿ (೨೯.೩೭-೩೯). ‘ತಸ್ಮಾತ್ ಪ್ರಾಗ್ಜ್ಯೋತಿಷಂ ಪ್ರಾಪ್ತಂ ತದಸ್ತ್ರಂ ಪಾರ್ಥ ಮಾಮಕಮ್ । ನಾಸ್ಯಾವಧ್ಯೋSಸ್ತಿ ಲೋಕೇಷು ಸೇಂದ್ರರುದ್ರೇಷು ಮಾರಿಷ’ (೪೩)]

 

ಸ ವಿಸ್ಮೃತಾಸ್ತ್ರಸ್ತು ಯದಾ ಭವೇತ ತದಾ ಭೀಮೋ ಭಗದತ್ತಂ ಪ್ರಯಾತಿ ।

ಋತೇ ಭೀಮಂ ವಾSರ್ಜ್ಜುನಂ ನಾಸ್ತ್ರಮೇಷ ಪ್ರಮುಞ್ಚತೀತ್ಯೇವ ಹಿ ವೇದ ಭೀಮಃ ॥ ೨೫.೭೮॥

 

ಭಗದತ್ತ ಯಾವಾಗ ಅಸ್ತ್ರಮಂತ್ರವನ್ನು ಮರೆಯುತ್ತಿದ್ದನೋ, ಆಗ ಭೀಮನು ಭಗದತ್ತನ ಜೊತೆ ಯುದ್ಧ ಮಾಡುತ್ತಿದ್ದ. ಭೀಮಸೇನ ಮತ್ತು ಅರ್ಜುನನನ್ನು ಬಿಟ್ಟು ಇತರರ ಮೇಲೆ ಭಗದತ್ತ ವೈಷ್ಣವಾಸ್ತ್ರವನ್ನು ಪ್ರಯೋಗಿಸುವುದಿಲ್ಲ ಎನ್ನುವುದನ್ನು ಭೀಮ ತಿಳಿದಿದ್ದ.

 

ಚತುರ್ಗ್ಗಜಾತ್ಮೋಪರಿಗಾತ್ಮಕಶ್ಚ ಘಟೋತ್ಕಚಃ ಸುಪ್ರತೀಕಂ ಚ ತಂ ಚ ।

ನಾನಾಪ್ರಹಾರೈರ್ವಿತುದಂಶ್ಚಕಾರ ಸನ್ದಿಗ್ಧಜೀವೌ ಜಗತಾಂ ಸಮಕ್ಷಮ್ ॥ ೨೫.೭೯॥

 

ಘಟೋತ್ಕಚನು ನಾಲ್ಕು ಗಜಗಳ ಮೇಲೆ ಇರತಕ್ಕ ನಾಲ್ಕು ರೂಪವುಳ್ಳವನಾಗಿ, ಸುಪ್ರತೀಕ ಆನೆಯನ್ನೂ, ಭಗದತ್ತನನ್ನೂ, ಅನೇಕ ತರದ ಹೊಡೆತಗಳಿಂದ ಪೀಡಿಸುತ್ತಾ, ಜಗತ್ತೆಲ್ಲಾ ನೋಡುತ್ತಿರುವಂತೆ, ಅವರು ಬದುಕಿದ್ದಾರೋ ಇಲ್ಲವೋ ಎಂಬ ಸಂದೇಹ ಬರುವಂತೆ ಮಾಡಿದ.

 

ಗಜಾರ್ತ್ತನಾದಂ ತು ನಿಶಮ್ಯ ಭೀಷ್ಮಮುಖಾಃ ಸಮಾಪೇತುರಮುಂ ಚ ದೃಷ್ಟ್ವಾ ।

ಮಹಾಕಾಯಂ ಭೀಮಮಮುಷ್ಯ ಪೃಷ್ಠಗೋಪಂ ಚ ವಾಯ್ವಾತ್ಮಜಮತ್ರಸನ್ ಭೃಶಮ್  ॥ ೨೫.೮೦॥

 

ಸುಪ್ರತೀಕ ಆನೆಯ ಆರ್ತನಾದವನ್ನು ಕೇಳಿ, ಭೀಷ್ಮ ಮೊದಲಾದವರೆಲ್ಲರೂ ಭಗದತ್ತನ ರಕ್ಷಣೆಗಾಗಿ ಓಡೋಡಿ ಬಂದರು. ಆದರೆ ಮಹಾಕಾಯನಾದ ಘಟೋತ್ಕಚ ಹಾಗೂ ಅವನ ಬೆಂಬಲಿಗನಾಗಿ ನಿಂತು ಯುದ್ಧಮಾಡುತ್ತಿರುವ ಭೀಮಸೇನನನ್ನು ಕಂಡು ಭಯಗೊಂಡರು.

 

ತೇ ಭೀತಭೀತಾಃ ಪೃತನಾಪಹಾರಂ ಕೃತ್ವಾSಪಜಗ್ಮುಃ ಶಿಬಿರಾಯ ಶೀಘ್ರಮ್ ।

ದಿನೇ ಪರೇ ಚೈವ ಪುನಃ ಸಮೇತಾಃ ಪರಸ್ಪರಂ ಪಾಣ್ಡವಕೌರವಾಸ್ತೇ ॥ ೨೫.೮೧॥

 

ಭೀಷ್ಮಾದಿಗಳೆಲ್ಲರೂ ಭಯಗೊಂಡು ಯುದ್ಧವಿರಾಮವನ್ನು ಮಾಡಿ ಶೀಘ್ರದಲ್ಲಿ ಶಿಬಿರಕ್ಕೆ ಓಡಿಹೋದರು(ಹೀಗೆ ಆರನೇ ದಿನದ ಯುದ್ಧ ಮುಗಿಯಿತು). ಮಾರನೇದಿನ ಮತ್ತೆ ಪಾಂಡವರು ಹಾಗೂ ಕೌರವರು ಯುದ್ಧಕ್ಕೆಂದು ಸೇರಿದರು.