ಅಥ ಭೀಷ್ಮಮುದೀರ್ಣ್ಣಾಸ್ತ್ರಂ
ದ್ರಾವಯನ್ತಂ ವರೂಥಿನೀಮ್ ।
ಸಸೌಮದತ್ತಿಂ ಸೌಭದ್ರಸಹಾಯೋSರ್ಜ್ಜುನ ಆಸದತ್ ॥ ೨೫.೨೯ ॥
ತದನಂತರ ಅಭಿಮನ್ಯು
ಮೊದಲಾದವರ ಸಹಾಯವನ್ನು ಹೊಂದಿರುವ ಅರ್ಜುನನು, ಉತ್ಕೃಷ್ಟವಾದ ಅಸ್ತ್ರವನ್ನು ಪ್ರಯೋಗಮಾಡುತ್ತಿರುವ,
ಸೌಮದತ್ತೀ ಮೊದಲಾದವರೊಂದಿಗಿರುವ ಭೀಷ್ಮಾಚಾರ್ಯರನ್ನು ಹೊಂದಿದನು.
ಸೌಭದ್ರಂ ತತ್ರ
ವಿಕ್ರಾನ್ತಮತೀತ್ಯ ದ್ಯುಸರಿತ್ಸುತಃ ।
ದ್ರಾವಯಾಮಾಸ
ಪಾಞ್ಚಾಲಾನ್ ಪಶ್ಯತಃ ಸವ್ಯಸಾಚಿನಃ ॥ ೨೫.೩೦ ॥
ಯುದ್ಧದಲ್ಲಿ ಪರಾಕ್ರಮವನ್ನು
ತೋರಿಸುತ್ತಿರುವ ಅಭಿಮನ್ಯುವನ್ನು ಸುಲಭವಾಗಿ ದಾಟಿದ ಭೀಷ್ಮಾಚಾರ್ಯರು, ಅರ್ಜುನ
ನೋಡುತ್ತಿರುವಾಗಲೇ ಪಾಂಚಾಲ ದೇಶದ ವೀರರನ್ನು ಓಡಿಸಿದರು.
ತಸ್ಯ ವಿಕ್ರಮಮಾಲಕ್ಷ್ಯ
ಪಾರ್ತ್ಥಂ ತದ್ಗೌರವಾನುಗಮ್ ।
ದೃಷ್ಟ್ವಾ ಯುಧಿಷ್ಠಿರೋ
ರಾಜಾ ಕ್ರುದ್ಧಃ ಸೇನಾಮಪಾಹರತ್ ॥ ೨೫.೩೧ ॥
ಭೀಷ್ಮಾಚಾರ್ಯರ
ಪರಾಕ್ರಮವನ್ನು ಕಂಡು, ಭೀಷ್ಮಾಚಾರ್ಯರ ಮೇಲಿನ ಗೌರವದಿಂದ
ಅವರನ್ನೇ ಅನುಸರಿಸುತ್ತಿರುವ(ಭೀಷ್ಮಾಚಾರ್ಯರಿಗೆ ಅನುಕೂಲವಾಗುವಂತೆ ನಡೆಯುತ್ತಿರುವ)
ಅರ್ಜುನನನ್ನು ಕಂಡು ಮುನಿದ ಯುಧಿಷ್ಠಿರನು, ಸೇನೆಯನ್ನು
ಶಿಬಿರದತ್ತ ಒಯ್ದನು(ಮೊದಲನೇ ದಿನದ ಯುದ್ಧವನ್ನು ಮುಗಿಸಿದನು).
ರಾತ್ರೌ
ಯುಧಿಷ್ಠಿರಶ್ಚಿನ್ತಾಮಾಪ್ಯ ಪಾರ್ತ್ಥಂ ವ್ಯಗರ್ಹಯತ್ ।
ಸ ಕೃಷ್ಣಾದ್ಯೈಃ
ಸಾನ್ತ್ವಿತಶ್ಚ ಪುನರ್ಯುದ್ಧಾಯ ನಿರ್ಯ್ಯಯೌ ॥ ೨೫.೩೨ ॥
ಆ ರಾತ್ರಿ ಚಿಂತಿತನಾದ ಯುಧಿಷ್ಠಿರನು
ಅರ್ಜುನನನ್ನು ಚೆನ್ನಾಗಿ ನಿಂದಿಸಿದನು(ಬೈದನು). ಕೃಷ್ಣ ಮೊದಲಾದವರು ಅವನಿಗೆ ಸಮಾಧಾನ ಮಾಡಿದರು. ಇದರಿಂದ ಸಮಾಧಾನಗೊಂಡ ಧರ್ಮರಾಜ
ಮಾರನೇ ದಿನದ ಯುದ್ಧಕ್ಕೆ ಸನ್ನದ್ದನಾದ.
[ಧರ್ಮರಾಜ ಹೇಗೆ
ಅರ್ಜುನನ್ನು ನಿಂದಿಸಿ ಮಾತನಾಡಿದ ಎನ್ನುವುದನ್ನು ಮಹಾಭಾರತದಲ್ಲಿ ಹೀಗೆ ಹೇಳಿದ್ದಾರೆ: ‘ಮಧ್ಯಸ್ಥಮಿವ
ಪಶ್ಯಾಮಿ ಸಮರೇ ಸವ್ಯಸಾಚಿನಮ್ । ಏಕೋ ಭೀಮಃ ಪರಂ ಶಕ್ತ್ಯಾ ಯುದ್ಧ್ಯತ್ಯೇವ ಮಹಾಭುಜಃ’ (ಭೀಷ್ಮಪರ್ವ
೫೦.೧೭) ‘ಏಕೋSಸ್ತ್ರವಿತ್
ಸಖಾ ತೇSಯಂ ಸೋSಪ್ಯಸ್ಮಾನ್ ಸಮುಪೇಕ್ಷತೇ’ (೨೦) – ‘ನೀನು ಯುದ್ಧ ನೋಡುವುದಕ್ಕೆ
ಬಂದಿರುವುದೋ ಅಥವಾ ಯುದ್ಧ ಮಾಡಲು ಬಂದಿರುವುದೋ ? ಏಕೆ ತಟಸ್ಥನಾಗಿರುವೆ? ಭೀಮನೊಬ್ಬನೇ ಇಂದು
ನಿಜವಾಗಿ ಯುದ್ಧ ಮಾಡಿರುವುದು’ ಎನ್ನುತ್ತಾನೆ ಧರ್ಮರಾಜ. ನಂತರ ಧರ್ಮರಾಜ ಶ್ರೀಕೃಷ್ಣನನ್ನು ಕುರಿತು – ‘ಅಸ್ತ್ರವನ್ನು
ಬಲ್ಲವನು ನಿನ್ನ ಸಖನಾದ ಅರ್ಜುನನೊಬ್ಬನೇ. ಅಂತಹ ಅರ್ಜುನ ಇಂದು ನಮ್ಮನ್ನು ಉಪೇಕ್ಷೆ
ಮಾಡುತ್ತಿದ್ದಾನೆ’ ಎಂದ]
ಏವಂ ಭೀಷ್ಮೋ ದಶಾಹಾನಿ
ಸೇನಾಪತ್ಯಂ ಚಕಾರ ಹ ।
ಕೃತ್ವಾSಪಿ ಪಾಣ್ಡವೈರ್ಯ್ಯುದ್ಧಂ ತತ್
ಕರ್ತ್ತುಮಕೃತೋಪಮಮ್ ॥ ೨೫.೩೩ ॥
ಕರ್ಣ್ಣೋSರ್ದ್ಧರಥ ಇತ್ಯುಕ್ತ್ವಾ ತಾವದ್
ಯುದ್ಧಾತ್ ಪ್ರಯಾಪಿತಃ ।
ಯಾವತ್ ತ್ವಂ
ಯೋತ್ಸ್ಯಸೇ ತಾವನ್ನ ಯೋತ್ಸ್ಯಾಮೀತಿ ನಿರ್ಗತೇ ॥ ೨೫.೩೪ ॥
ಕರ್ಣ್ಣೇSಯುತರಥಾನಾಂ ಸ ನಿತ್ಯಶೋ
ವಧಮಾಹವೇ ।
ಪ್ರತಿಜಜ್ಞೇSಕರೋತ್ ತಚ್ಚ
ಪುನಶ್ಚಾಸ್ತ್ರವಿದಾಂ ವರಃ ॥ ೨೫.೩೫ ॥
ಹೀಗೆಯೇ
ಭೀಷ್ಮಾಚಾರ್ಯರು ಹತ್ತು ದಿನಗಳ ಕಾಲ ಸೇನಾಧಿಪತಿಯಾಗಿ ಯುದ್ಧ ಮಾಡಿದರು. (ಭೀಮನಾಗಲೀ,
ಅರ್ಜುನನಾಗಲೀ ಭೀಷ್ಮಾಚಾರ್ಯರನ್ನು ಕೊಲ್ಲಲು ಹೋಗಲಿಲ್ಲ. ಹಾಗಾಗಿ ಅವರು ಹತ್ತು ದಿನ ಯುದ್ಧ ಮಾಡಿದರು).
ಭೀಷ್ಮಾಚಾರ್ಯರು ಪಾಂಡವರೊಂದಿಗೆ ಯುದ್ಧವನ್ನು ಮಾಡಿ, ಆ ಯುದ್ಧವನ್ನು ಇತರರ ಉಪಮಾನವಿಲ್ಲದಿರುವ ಅಸದೃಶವಾದುದ್ದನ್ನಾಗಿ
ಮಾಡಲು(ಭೀಷ್ಮಾಚಾರ್ಯರಿಂದಲೇ ಮಾಡಲ್ಪಟ್ಟದ್ದನ್ನಾಗಿ ಮಾಡಲು)ಕರ್ಣನನ್ನು ಅರ್ಧರಥ ಎಂದು ಜರಿದು ನಿರಾಕರಣೆ
ಮಾಡಿದ್ದರು. ಭೀಷ್ಮಾಚಾರ್ಯರಿಂದ ಅರ್ಧರಥ ಎಂದು ಹೇಳಿಸಿಕೊಂಡ ಕರ್ಣ ‘ಎಲ್ಲಿಯ ತನಕ ನೀನು ಯುದ್ಧ
ಮಾಡುತ್ತೀಯೋ, ಅಲ್ಲಿಯ ತನಕ ನಾನು ಯುದ್ಧಮಾಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿ ತೆರಳಿದ್ದ. (ಆಗ ದುರ್ಯೋಧನ ಕೋಪಗೊಂಡು ಕರ್ಣನನ್ನು ಯುದ್ಧ
ಮಾಡಲು ಬಿಡದೇ ಇರುವುದಕ್ಕೆ ನಷ್ಟಪರಿಹಾರ ಕೇಳಿದಾಗ-) ಭೀಷ್ಮಾಚಾರ್ಯರು ಪ್ರತಿದಿನವೂ ತಾನು ಹತ್ತುಸಾವಿರ
ಸೈನಿಕರ ಸಂಹಾರವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು ಮತ್ತು ಅದನ್ನು ಅವರು
ನೆರವೇರಿಸಿದರು ಕೂಡಾ.
[ಮಹಾಭಾರತದ ಉದ್ಯೋಗಪರ್ವದಲ್ಲಿ ಭೀಷ್ಮಾಚಾರ್ಯರು ಕರ್ಣನನ್ನು ನಿಂದಿಸಿ ಮಾತನಾಡುವ ವಿವರ
ಕಾಣಸಿಗುತ್ತದೆ: ‘ರಣೇರಣೇSಭಿಮಾನೀ ಚ ವಿಮುಖಶ್ಚಾಪಿ ದೃಶ್ಯತೇ । ಘೃಣೀ ಕರ್ಣಃ ಪ್ರಮಾದೀ ಚ ತೇನ ಮೇSರ್ಧರಥೋ ಮತಃ’ (ಉದ್ಯೋಗಪರ್ವ ೧೬೮. ೦೯) – ಯುದ್ಧ-ಯುದ್ಧಗಳಲ್ಲಿ
ಒಂದೊಂದು ತರ ಇರುತ್ತಾನೆ ಕರ್ಣ. ಒಂದು ಯುದ್ಧದಲ್ಲಿ ಗೆದ್ದರೆ ಇನ್ನೊಂದರಲ್ಲಿ ಸೋಲುತ್ತಾನೆ. ಅವನಲ್ಲಿ
ಸ್ಥಿರತೆ ಎನ್ನುವುದಿಲ್ಲ. ಆದರೆ ವಿಪರೀತ ಅಭಿಮಾನ. ಯಾವ ಪ್ರಮುಖ ಯುದ್ಧದಲ್ಲಿ ಕರ್ಣ
ಗೆದ್ದಿದ್ದಾನೆ? ಯಾವ
ಪ್ರಸಂಗದಲ್ಲಿ ಕರುಣೆ ಇರಬಾರದೋ ಅಲ್ಲಿ ಅವನಿಗೆ ಕರುಣೆ ಇರುತ್ತದೆ. ಯಾವ ಕಾಲದಲ್ಲಿ ಏನು ಮಾಡಬೇಕೋ,
ಅದನ್ನು ಅವನು ಮರೆತಿರುತ್ತಾನೆ. ಈ ಎಲ್ಲಾ ದೋಷಗಳಿರುವುದರಿಂದ ಅವನು ಅರ್ಧರಥ ಎನ್ನುತ್ತಾರೆ
ಭೀಷ್ಮಾಚಾರ್ಯರು. (ಶಸ್ತ್ರಸನ್ನದ್ಧನಾಗಿ ಸಾರಥಿಯೋಡಗೂಡಿ ಯುದ್ಧಮಾಡುವವನು ರಥ. ಒಂದೇ ಬಾರಿ ಹತ್ತುಸಾವಿರ
ಜನರನ್ನು ಎದುರಿಸಿ ಯುದ್ಧಮಾಡಬಲ್ಲ, ಶಸ್ತ್ರದಲ್ಲೂ ಶಾಸ್ತ್ರದಲ್ಲೂ ಪರಿಣತ ಯಾರು ಇರುತ್ತಾನೋ
ಅವನು ಮಹಾರಥ. ಲಕ್ಷ ಜನರ ಜೊತೆ ಯುದ್ಧ ಮಾಡಬಲ್ಲ, ಸಾರಥ್ಯವನ್ನೂ ತಾನೇ ಮಾಡಿಕೊಳ್ಳಬಲ್ಲ,
ಶಸ್ತ್ರ-ಶಾಸ್ತ್ರದಲ್ಲಿ ಪರಿಣತ ಅತಿರಥ)].
ಸುಸಮರ್ತ್ಥಾವಪಿ ವಧೇ
ತಸ್ಯ ಭೀಮಧನಞ್ಜಯೌ ।
ಸ್ನೇಹೇನ ಯನ್ತ್ರಿತೌ
ತಸ್ಯ ಗೌರವಾಚ್ಚಾನ್ವವರ್ತ್ತತಾಮ್ ॥ ೨೫.೩೬ ॥
ಭೀಷ್ಮಾಚಾರ್ಯರ
ಸಂಹಾರದಲ್ಲಿ ಭೀಮಾರ್ಜುನರು ಸಮರ್ಥರಾಗಿದ್ದರೂ ಕೂಡಾ, ಅವರ ಮೇಲಿನ ಪ್ರೀತಿಯಿಂದ, ಗೌರವದಿಂದಾಗಿ ಯುದ್ಧದಲ್ಲಿ
ಅವರಿಗೆ ಅನುಕೂಲರಾಗಿರುತ್ತಿದ್ದರು.
No comments:
Post a Comment