ಅಥ ವ್ಯೂಢೇಷ್ವನೀಕೇಷು
ನದನ್ ವಾಯುಸುತೋSಭ್ಯಯಾತ್
।
ಸಮಿತಿಂ ಧಾರ್ತ್ತರಾಷ್ಟ್ರಾಣಾಂ
ತೇ ತಂ ಸರ್ವೇSಭ್ಯವಾರಯನ್
॥ ೨೫.೧೮ ॥
ತದನಂತರ ಎಲ್ಲಾ
ಆಯಕಟ್ಟಿನಲ್ಲಿ ನಿಂತು ಯುದ್ಧಕ್ಕೆ ಸಂಪೂರ್ಣ
ಸಿದ್ಧವಾಗಲು, ಭೀಮಸೇನನು ಗರ್ಜಿಸುತ್ತಾ ದುರ್ಯೋಧನಾದಿಗಳ ಸೇನೆಯನ್ನು ಯುದ್ಧಕ್ಕಾಗಿ ಎದುರುಗೊಂಡ.
ಅವರೆಲ್ಲರೂ ಭೀಮಸೇನನನ್ನು ಸುತ್ತುವರಿದರು.
ಸಸೃಜುಃ ಶರವೃಷ್ಟಿಂ ಚ
ಭೀಮಸೇನಸ್ಯ ಮೂರ್ದ್ಧನಿ ।
ಕ್ಷಿಪ್ರಂ ನೈವ ಪ್ರಹರ್ತ್ತವ್ಯಂ
ಜ್ಞಾತಿಷು ಪ್ರಹರತ್ಸ್ವಪಿ ॥ ೨೫.೧೯ ॥
ಇತ್ಯೇವಾಪ್ರಹರತ್ಯಸ್ಮಿನ್
ಶತ್ರುಭಿಃ ಶರವಿಕ್ಷತೇ ।
ಅಮುಚನ್ ಧಾರ್ತ್ತರಾಷ್ಟ್ರೇಷು
ಶಸ್ತ್ರವೃಷ್ಟಿಂ ದುರಾಸದಾಮ್ ॥ ೨೫.೨೦ ॥
ಸೌಭದ್ರಪ್ರಮುಖಾ ವೀರಾಃ
ಸರ್ವೇ ಪಾಣ್ಡುಸುತಾತ್ಮಜಾಃ ।
ಅಪೀಡಯಂಸ್ತಾಞ್ಛಸ್ತ್ರೌಘೈರ್ದ್ಧಾರ್ತ್ತರಾಷ್ಟ್ರಾಃ
ಸಮನ್ತತಃ ॥ ೨೫.೨೧ ॥
ರರಕ್ಷ ತಾನ್ ವಾಯುಸುತೋ
ವಿಸೃಜಞ್ಛರಸಞ್ಚಯಾನ್ ।
ತತ್ರ ಭೀಮಶರೈರ್ನ್ನುನ್ನಾ
ಧಾರ್ತ್ತರಾಷ್ಟ್ರಾಃ ಸಮನ್ತತಃ ॥ ೨೫.೨೨ ॥
ಭಗ್ನಾಸ್ತಾನಥ
ಗಾಙ್ಗೇಯೋ ದಿವ್ಯಾಸ್ತ್ರವಿದಧಾರಯತ್ ।
ಅಥ ದ್ವನ್ದ್ವಾನಿ
ಯುದ್ಧಾನಿ ಬಭೂವುರ್ವಿಜಿಗೀಷತಾಮ್ ॥ ೨೫.೨೩ ॥
ಕೌರವರು ಭೀಮಸೇನನ
ತಲೆಯಮೇಲೆ ಬಾಣಗಳ ಮಳೆಗರೆದರು. ಆದರೆ ಸಂಬಂಧಿಕರು ಹೊಡೆಯುತ್ತಿರುವಾಗ ತಕ್ಷಣ ಪ್ರತಿಕ್ರಿಯಿಸಬಾರದು
ಎನ್ನುವ ಕಾರಣಕ್ಕೆ ಭೀಮ ತಕ್ಷಣ ಪ್ರತಿಕ್ರಿಯೆ ನೀಡದೇ ಶತ್ರುಗಳ ಬಾಣಗಳಿಗೆ ಸಿಲುಕಿ ಹೊಡೆಸಿಕೊಂಡ. ಆಗ ಅಭಿಮನ್ಯುವೇ
ಮೊದಲಾಗಿರುವ ಪಾಂಡವರ ಮಕ್ಕಳೆಲ್ಲರೂ ಕೂಡಾ ದುರ್ಯೋಧನಾದಿಗಳಲ್ಲಿ ಬಾಣ ವೃಷ್ಟಿಗೈದರು. ಆಗ ದುರ್ಯೋಧನಾದಿಗಳೂ
ಕೂಡಾ ಅಭಿಮನ್ಯು ಮೊದಲಾದವರನ್ನು ಪೀಡಿಸಿದರು. ಆಗ ಭೀಮಸೇನನು ಬಾಣಗಳನ್ನು ಬಿಡುತ್ತಾ, ಅವರನ್ನು ರಕ್ಷಿಸಿದ. ಯುದ್ಧದ
ಮೊದಲನೇ ದಿನದ ಮಧ್ಯಾಹ್ನದ ಹೊತ್ತಿಗೆ ಭೀಮನ ಬಾಣಗಳಿಂದ ಪೀಡಿತರಾಗಿ ಕೌರವರು ಪಲಾಯನ ಮಾಡಿದರು. ಆಗ
ಭೀಷ್ಮಾಚಾರ್ಯರು ಅವರೆಲ್ಲರಿಗೂ ಅಭಯವನ್ನು ಕೊಟ್ಟು, ದಿವ್ಯಾಸ್ತ್ರವನ್ನು
ಬಳಸಲು ಪ್ರಾರಂಭಿಸಿದರು. ಆಮೇಲೆ ದ್ವಂದ್ವಯುದ್ಧ ನಡೆಯಿತು.
[ಮಹಾಭಾರತದಲ್ಲಿ
ಸಂಕುಲಯುದ್ಧ ಹಾಗೂ ದ್ವಂದ್ವಯುದ್ಧ ಎನ್ನುವ ಎರಡು ವಿಧದ ಯುದ್ಧವನ್ನು ಕಾಣಬಹುದು. ಸಂಕುಲಯುದ್ಧ
ಎಂದರೆ ಸಾಮಾನ್ಯಯುದ್ಧ. ಯಾರಿಗೆ ಯಾರು ಎದುರಾಳಿ ಎಂದು ತೀರ್ಮಾನವಾಗಿರುವುದಿಲ್ಲ. ಎಲ್ಲಾ ರಥಗಳೂ
ಕೂಡಾ ನಿರಂತರ ಚಲಿಸುತ್ತಿರುತ್ತವೆ. ಕ್ರಮೇಣ ಸಂಕುಲ ಯುದ್ಧದಿಂದ ದ್ವಂದ್ವಯುದ್ಧ
ಪ್ರಾರಂಭವಾಗುತ್ತದೆ (ಈ ಎರಡೂ ತರದ ಯುದ್ಧದಲ್ಲೂ ನಿಂತಿರುವ ರಥದಲ್ಲಿದ್ದುಕೊಂಡು ಯುದ್ಧ
ಮಾಡುವುದಿಲ್ಲ. ಯುದ್ಧಮಾಡುವಾಗ ನಿರಂತರವಾಗಿ ಚಲಿಸುತ್ತಾ ಯುದ್ಧ ಮಾಡುತ್ತಾರೆ.)]
ದ್ರೋಣಪಾರ್ಷತಯೋಶ್ಚೈವ
ಶೈನೇಯಕೃತವರ್ಮ್ಮಣೋಃ ।
ದುಃಶಾಸನೇನ ವೀರಸ್ಯ
ಮಾದ್ರೇಯಸ್ಯ ಯವೀಯಸಃ ॥ ೨೫.೨೪ ॥
ನಕುಲಸ್ಯ ವಿಕರ್ಣ್ಣಸ್ಯ ಕಾರ್ಷ್ಣೇಯೈರ್ದ್ದುರ್ಮ್ಮುಖಾದಿನಾಮ್ ।
ವೃತ್ತೇ
ದ್ವನ್ದ್ವಮಹಾಯುದ್ಧೇ ತತ್ರ ಧರ್ಮ್ಮಜಪಕ್ಷಗಾಃ ॥ ೨೫.೨೫ ॥
ಜಿತಾ ವಿನೈವ ಶೈನೇಯಂ
ಸೋSಜಯದ್ಧೃದಿಕಾತ್ಮಜಮ್
।
ಅಥ
ಭೀಷ್ಮದ್ರೋಣಮುಖೈರ್ಭಗದತ್ತಾದಿಭಿಸ್ತಥಾ ॥ ೨೫.೨೬ ॥
ವಿದ್ರಾಪ್ಯಮಾಣಂ
ಸ್ವಬಲಂ ಸ್ಥಾಪಯಾಮಾಸ ಮಾರುತಿಃ ।
ದ್ರೋಣಂ ಚ ಭಗದತ್ತಂ ಚ
ಕೃಪಂ ದುರ್ಯ್ಯೋಧನಂ ತಥಾ ॥೨೫.೨೭ ॥
ಕೇವಲಂ ಬಾಹುವೀರ್ಯ್ಯೇಣ
ವ್ಯಜಯದ್ ಭೀಮವಿಕ್ರಮಃ ।
ಹತ್ವೋತ್ತರಂ ಮದ್ರರಾಜೋ
ವ್ಯದ್ರಾವಯದನೀಕಿನೀಮ್ ॥ ೨೫.೨೮ ॥
ದ್ರೋಣಾಚಾರ್ಯರು ಮತ್ತು
ಧೃಷ್ಟದ್ಯುಮ್ನ [‘ಧೃಷ್ಟದ್ಯುಮ್ನಸ್ತತೋ ದ್ರೋಣಮಭ್ಯದ್ರವತ ಭಾರತ’ (ಭೀಷ್ಮಪರ್ವ ೪೫.೩೧)]
, ಸಾತ್ಯಕಿ ಹಾಗೂ ಕೃತವರ್ಮ,
ಚಿಕ್ಕವನಾದ ಮಾದ್ರಿಯ ಮಗನಾದ ಸಹದೇವ ಹಾಗೂ ದುಃಶಾಸನ, ನಕುಲ-ವಿಕರ್ಣ, ದ್ರೌಪದಿಯ ಮಕ್ಕಳಾದ
ಪ್ರತಿವಿನ್ದ್ಯಾ ಮೊದಲಾದವರಿಗೆ ದುರ್ಮುಖ
ಮೊದಲಾದವರು, ಹೀಗೆ ಈ ಎಲ್ಲರ ನಡುವೆ ದ್ವಂದ್ವ ಯುದ್ಧ ನಡೆಯಿತು. ಅಲ್ಲಿ ಧರ್ಮರಾಜನ ಪಕ್ಷದಲ್ಲಿದ್ದವರಲ್ಲಿ ಸಾತ್ಯಕಿಯನ್ನು ಹೊರತುಪಡಿಸಿ ಇತರರು ಸೋತರು. ಆಮೇಲೆ
ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ಭಗದತ್ತ
ಮೊದಲಾದವರೆಲ್ಲಾ ಉಗ್ರವಾಗಿ ಯುದ್ಧಮಾಡಲಾರಂಭಿಸಿದರು. ಆಗ ಪಾಂಡವರ ಸೇನೆಯಲ್ಲಿದ್ದವರಿಗೆ ಭಯವಾಗಿ
ಓಡಲು ಪ್ರಾರಂಭಿಸಿದರು. ಓಡಿಸಲ್ಪಡುತ್ತಿರುವ ತನ್ನ ಸೈನ್ಯವನ್ನು ಭೀಮಸೇನ ತಡೆದ.
ದ್ರೋಣಾಚಾರ್ಯ, ಭಗದತ್ತ, ಕೃಪ, ದುರ್ಯೋಧನ, ಇವರೆಲ್ಲರನ್ನು ಕೇವಲ ತನ್ನ ಬಾಹುವೀರ್ಯದಿಂದ ಭೀಮಸೇನ ಗೆದ್ದ. ಮೊದಲನೇ
ದಿನದ ಯುದ್ಧದ ಮಧ್ಯಾಹ್ನ ಸುಮಾರಿಗೆ ಶಲ್ಯ ಉತ್ತರ ಕುಮಾರನನ್ನು ಕೊಂದು ಪಾಂಡವರ ಸೇನೆಯನ್ನು
ಓಡಿಸಿದ.
No comments:
Post a Comment