ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, January 26, 2023

Mahabharata Tatparya Nirnaya Kannada 25-47-57

 

ವಿರಥೋ ವ್ಯಾಯುಧಶ್ಚೈವ ದೃಢವೇಧವಿಮೂರ್ಚ್ಛಿತಃ ।

ಕೃತೋ ದುರ್ಯ್ಯೋಧನಃ ಸರ್ವರಾಜ್ಞಾಂ ಭೀಮೇನ ಪಶ್ಯತಾಮ್ ॥ ೨೫.೪೭ ॥

 

ಎಲ್ಲರೂ ನೋಡುತ್ತಿರುವಾಗಲೇ ಭೀಮಸೇನನಿಂದ ದುರ್ಯೋಧನನು ರಥಹೀನನೂ. ಆಯುಧಹೀನನೂ ಆಗಿ,  ಬಲವಾದ ಹೊಡೆತದಿಂದ ಮೂರ್ಛಿತನಾದನು.

 

ತತೋSಪಹಾರಂ ಸೈನ್ಯಸ್ಯ ಜಿತ್ವಾಶ್ಚಕ್ರುಶ್ಚ ಕೌರವಾಃ ।

ದುರ್ಯ್ಯೋಧನೋ ನಿಶಾಯಾಂ ಚ ಯಯೌ ಯತ್ರ ನದೀಸುತಃ ॥ ೨೫.೪೮ ॥

 

ಪರಾಜಿತರಾದ ಕೌರವರು ತಮ್ಮ ಸೈನ್ಯದ ಉಪಸಂಹಾರವನ್ನು ಮಾಡಿಕೊಂಡರು(ಮೂರನೇ ದಿನದ ಯುದ್ಧ ಮುಗಿಯಿತು). ಆ ರಾತ್ರಿ ದುರ್ಯೋಧನನು ಎಲ್ಲಿ ಭೀಷ್ಮಾಚಾರ್ಯರು ಇದ್ದರೋ ಅಲ್ಲಿಗೆ ಹೋದನು.

 

ಪೀಡಿತೋ ಭೀಮಬಾಣೈಶ್ಚ ಕ್ಷರದ್ಗಾತ್ರೋ ನನಾಮ ತಮ್ ।

ಉವಾಚ ಹೇತುನಾ ಕೇನ ವಯಂ ಕ್ಷೀಯಾಮ ಸರ್ವದಾ  ॥ ೨೫.೪೯ ॥

 

ಭೀಮನ ಬಾಣಗಳಿಂದ ಪೀಡಿತನಾಗಿ, ನೆತ್ತರು ಸುರಿಸುವ ಮೈಯುಳ್ಳವನಾಗಿರುವ ದುರ್ಯೋಧನ  ಭೀಷ್ಮಾಚಾರ್ಯರಿಗೆ ನಮಸ್ಕಾರ ಮಾಡಿ, ‘ಏಕೆ ನಾವೇ ಯಾವಾಗಲೂ ಸೋಲುತ್ತೇವೆ’ ಎಂದು ಕೇಳಿದ.

 

ಪಾಣ್ಡವಾಶ್ಚ ಜಯಂ ನಿತ್ಯಂ ಲಬ್ಧ್ವಾ ಹರ್ಷಮವಾಪ್ನುವನ್ ।

ತಮಾಹ ಭೀಷ್ಮಸ್ತೇSಜೇಯಾ ದೇವಾಸ್ತೇ ಧರಣೀಂ ಗತಾಃ  ॥ ೨೫.೫೦ ॥

 

ವಿಶೇಷತಃ  ಕೇಶವೇನ ಪಾಲಿತಾಸ್ತತ್ಪ್ರಿಯಾಃ ಸದಾ ।

ಮಾನಸೋತ್ತರಶೈಲೇ ಹಿ ಪುರಾ ಬ್ರಹ್ಮಪುರಸ್ಸರಾಃ ॥ ೨೫.೫೧ ॥

 

‘ಪಾಂಡವರಾದರೋ, ಯಾವಾಗಲೂ ಜಯವನ್ನು ಹೊಂದಿ ಹರ್ಷವನ್ನು ಹೊಂದಿದ್ದಾರೆ’ ಎಂದು ಹೇಳಿದ  ದುರ್ಯೋಧನನನ್ನು ಕುರಿತು  ಭೀಷ್ಮಾಚಾರ್ಯರು ಹೇಳುತ್ತಾರೆ: ‘ಅವರು ಭೂಮಿಗೆ ಬಂದಿರುವ  ಸೋಲಿಲ್ಲದ ದೇವತೆಗಳು. ವಿಶೇಷವಾಗಿ ಅವರು ಶ್ರೀಕೃಷ್ಣನಿಂದ ಪಾಲಿತರಾಗಿದ್ದಾರೆ ಮತ್ತು ಯಾವಾಗಲೂ ಅವನಿಗೆ ಪ್ರಿಯರಾಗಿದ್ದಾರೆ. (ದೇವತೆಗಳ ಅವತಾರಕ್ಕೆ ನಿಮಿತ್ತವೇನು ಎನ್ನುವುದನ್ನು ಹೇಳುತ್ತಾರೆ: ) ಬಹಳ ಹಿಂದೆ ಬ್ರಹ್ಮನೇ ಮೊದಲಾಗಿರುವ ದೇವತೆಗಳು ಮಾನಸಸರೋವರದ ಉತ್ತರ ದಿಕ್ಕಿನಲ್ಲಿರುವ ಪರ್ವತದಲ್ಲಿರುವಾಗ ಶ್ರೀಮನ್ನಾರಾಯಣ ಬ್ರಹ್ಮದೇವರೊಬ್ಬರಿಗೆ ಮಾತ್ರ ಆಕಾಶದಲ್ಲಿ ಕಾಣಿಸಿಕೊಂಡ.

 

ಸ್ಥಿತಾ ದೇವಾಸ್ತದಾSಪಶ್ಯದ್ ಬ್ರಹ್ಮೈಕೋ ಹರಿಮಮ್ಬರೇ ।

ಸ್ತುತ್ವಾ ಸಮ್ಪೂಜ್ಯ ಭೂಮೇಃ ಸ ಭಾರಾವತರಣಾಯ ತಮ್ ॥ ೨೫.೫೨ ॥

 

ಪ್ರಾರ್ತ್ಥಯಾಮಾಸ ತೇನೋಕ್ತಂ ದೇವಾನಾಮವದದ್ ವಿಭುಃ ।

ಅಯಂ ನಾರಾಯಣೋ ದೇವಃ ಪೂರ್ಣ್ಣಾನನ್ತಗುಣಾರ್ಣ್ಣವಃ ॥ ೨೫.೫೩ ॥

 

ಅಜ್ಞಾಪಯತಿ ವಃ ಸರ್ವಾನ್ ಪ್ರಾದುರ್ಭಾವಾಯ ಭೂತಳೇ ।

ಸ್ವಯಂ ಚ ದೇವಕೀಪುತ್ರೋ ಭವಿಷ್ಯತಿ ಜಗತ್ಪತಿಃ ॥೨೫.೫೪ ॥

 

ಬ್ರಹ್ಮನು ಆ ನಾರಾಯಣನನ್ನು ಸ್ತೋತ್ರಮಾಡಿ, ಪೂಜಿಸಿ, ಭೂಮಿಯ ಭಾರವನ್ನು ಇಳಿಸು ಎಂದು ಪ್ರಾರ್ಥನೆ ಮಾಡಿದನು. ಆಗ ನಾರಾಯಣನಿಂದ ಏನು ಹೇಳಲ್ಪಟ್ಟಿತೋ, ಅದನ್ನು ಬ್ರಹ್ಮದೇವರು ದೇವತೆಗಳಿಗೆ ಹೇಳುತ್ತಾರೆ: - ‘ಪೂರ್ಣವಾಗಿರುವ, ಎಣೆಯಿರದ ಗುಣಗಳಿಗೆ ಕಡಲಿನಂತಿರುವ ನಾರಾಯಣನು ನಿಮ್ಮೆಲ್ಲರಿಗೂ ಕೂಡಾ ಭೂಮಿಯಲ್ಲಿ ಅವತರಿಸಲು ಆಜ್ಞಾಪಿಸಿದ್ದಾನೆ. ಜಗತ್ಪತಿಯಾದ  ಭಗವಂತ ಸ್ವಯಂ ದೇವಕೀಪುತ್ರನಾಗಿ ಭೂಮಿಯಲ್ಲಿ ಅವತರಿಸುತ್ತಾನೆ.

 

ಏವಂ ತೇನ ಸಮಾದಿಷ್ಟಾ ಧರ್ಮ್ಮವಾಯ್ವಾದಯೋSಖಿಲಾಃ ।

ಅಭವನ್ ಪಾಣ್ಡವಾದ್ಯಾಸ್ತೇ ಸೇನ್ದ್ರಾಃ ಸಹಮರುದ್ಗಣಾಃ ॥ ೨೫.೫೫ ॥

 

ಈರೀತಿಯಾಗಿ ಬ್ರಹ್ಮದೇವರ ಮೂಲಕ ದೇವರಿಂದ ಆಜ್ಞಾಪಿಸಲ್ಪಟ್ಟ ದೇವೇಂದ್ರ, ಮರುದ್ಗಣ ಸಹಿತರಾದ  ಧರ್ಮ, ವಾಯು, ಮೊದಲಾದ ದೇವತೆಗಳೆಲ್ಲರೂ, ಪಾಂಡವಾದಿಗಳಾಗಿ ಭೂಮಿಯಲ್ಲಿ ಅವತರಿಸಿದರು.

 

ಸ ಚ ನಾರಾಯಣೋ ದೇವೋ ದೇವಕೀನನ್ದನೋSಭವತ್ ।

ತೇನೈತೇ ಪಾಲಿತಾಃ ಪಾರ್ತ್ಥಾ ಅಜೇಯಾ ದೇವಸರ್ಗ್ಗಿಣಃ ॥ ೨೫.೫೬ ॥

 

ಆ ನಾರಾಯಣನೇ ದೇವಕೀಪುತ್ರನಾದ ಶ್ರಿಕೃಷ್ಣನಾಗಿ ಭೂಮಿಯಲ್ಲಿ ಅವತರಿಸಿದನು. ಇಂತಹ ಶ್ರೀಕೃಷ್ಣನಿಂದ ರಕ್ಷಿತರಾದ ಪಾಂಡವರನ್ನು ಜಯಿಸುವುದು ಅಸಾಧ್ಯ.

 

ತಸ್ಮಾತ್ ತೈಃ ಸನ್ಧಿಮನ್ವಿಚ್ಛ ಯದೀಚ್ಛಸ್ಯಪರಾಭವಮ್ ।

ಇತ್ಯುಕ್ತೋ ಡಮ್ಭಬುದ್ಧ್ಯೈವ ನತ್ವಾ ವಿಷ್ಣುಂ ತತೋ ಯಯೌ ॥ ೨೫.೫೭ ॥

 

ಹೀಗಾಗಿ ಒಂದು ವೇಳೆ ನೀನು ಪರಾಭವವನ್ನು ಬಯಸಲಿಲ್ಲವೆಂದಾದರೆ ಪಾಂಡವರೊಂದಿಗೆ ಸಂಧಾನವನ್ನು ಮಾಡಿಕೊ’. ಈರೀತಿಯಾಗಿ ಭೀಷ್ಮಾಚಾರ್ಯರಿಂದ ಹೇಳಲ್ಪಟ್ಟ ದುರ್ಬುದ್ಧಿಯುಳ್ಳ ದುರ್ಯೋಧನನು ಡಂಭ ಬುದ್ಧಿಯಿಂದ ಶ್ರೀವಿಷ್ಣುವನ್ನು ನಮಸ್ಕರಿಸಿ ಅಲ್ಲಿಂದ ತೆರಳಿದನು.

No comments:

Post a Comment