ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, January 24, 2023

Mahabharata Tatparya Nirnaya Kannada 25-37-46

 

ಬಭೂವುಸ್ತತ್ರ ಯುದ್ಧಾನಿ ಚಿತ್ರಾಣಿ ಸುಬಹೂನಿ ಚ ।

ತಾನ್ಯಮ್ಬರೇ ವಿಮಾನಸ್ಥಾ ಬ್ರಹ್ಮರುದ್ರಪುರಸ್ಸರಾಃ ॥ ೨೫.೩೭ ॥

 

ಅಪಶ್ಯನ್ ದೇವತಾಃ ಸರ್ವಾ ಗನ್ಧರ್ವಾಪ್ಸರಸೋSಸುರಾಃ ।

ಧೃಷ್ಟದ್ಯುಮ್ನೋ ಮಹೇಷ್ವಾಸಃ ಪ್ರತಿವ್ಯೂಹ್ಯಾSಪಗಾಸುತಮ್ ॥ ೨೫.೩೮ ॥

 

ಆ ರಣರಂಗದಲ್ಲಿ ಚಿತ್ರ-ವಿಚಿತ್ರವಾಗಿರುವ ಬಹಳ ಯುದ್ಧಗಳು ನಡೆದವು. ಈ ಯುದ್ಧವನ್ನು ಆಕಾಶದಲ್ಲಿ ವಿಮಾನದಲ್ಲಿರತಕ್ಕ ಬ್ರಹ್ಮ-ರುದ್ರ ಮೊದಲಾದ ಎಲ್ಲಾ ದೇವತೆಗಳೂ, ಗಂಧರ್ವರೂ, ಅಪ್ಸರೆಯರೂ, ಅಸುರರೂ ಕೂಡಾ ನೋಡಿದರು. ದೊಡ್ಡ ಬಿಲ್ಗಾರನಾದ ಧೃಷ್ಟದ್ಯುಮ್ನನು ಭೀಷ್ಮಾಚಾರ್ಯರಿಗೆ ಪ್ರತಿವ್ಯೂಹವನ್ನು ಮಾಡಿ ಅವರನ್ನು ಎದುರಿಸಿದನು.

 

ಚಕ್ರೇ ಯುದ್ಧಾನಿ ಸುಬಹೂನ್ಯಜೇಯಃ ಶತ್ರುಭೀ ರಣೇ ।

ತತ್ರೋದ್ದಧಾರ ಕೃಷ್ಣೋSಪಿ ಫಲ್ಗುನಂ ಮೃದುಯೋಧಿನಮ್ ॥ ೨೫.೩೯ ॥

 

ದೃಷ್ಟ್ವಾ ಚಕ್ರಂ ತಥೋದ್ಯಮ್ಯ ಬಾಹುಂ ಭೀಷ್ಮಾಯ ಜಗ್ಮಿವಾನ್ ।

ತೇನ ಸ್ತುತೋ ಗೃಹೀತಶ್ಚ ಫಲ್ಗುನೇನ ಪ್ರಣಮ್ಯ ಚ ॥ ೨೫.೪೦ ॥

 

ಪ್ರಾರ್ತ್ಥಿತೋ ರಥಮಾರೂಢಃ ಪುನಃ ಶಙ್ಖಮಪೂರಯತ್ ।

ತತೋ ಭೀಷ್ಮೋSರ್ಜ್ಜುನಶ್ಚೈವ ಶಸ್ತ್ರಾಸ್ತ್ರೈರಭ್ಯವರ್ಷತಾಮ್ ॥ ೨೫.೪೧ ॥

 

ಯುದ್ಧದಲ್ಲಿ ಶತ್ರುಗಳಿಂದ ಗೆಲ್ಲಲ್ಪಡದ ಧೃಷ್ಟದ್ಯುಮ್ನನು ಭೀಷ್ಮಾಚಾರ್ಯರನ್ನು ತಡೆದು ಬಹಳ ತರದ ಯುದ್ಧಗಳನ್ನು ಮಾಡಿದನು.  ಇತ್ತ ಮೃದುವಾಗಿ ಯುದ್ಧ ಮಾಡುತ್ತಿರುವ ಅರ್ಜುನನನ್ನು ಕಂಡ ಶ್ರೀಕೃಷ್ಣನು ಚಕ್ರವನ್ನು ಎತ್ತಿಹಿಡಿದು, ತೋಳನ್ನು ಎತ್ತಿ ಭೀಷ್ಮನನ್ನು ಕುರಿತು(ಭೀಷ್ಮನಿಗಾಗಿ^) ತೆರಳಿದ.

ಆಗ ಶ್ರೀಕೃಷ್ಣ ಭೀಷ್ಮನಿಂದ ಸ್ತೋತ್ರ ಮಾಡಲ್ಪಟ್ಟ.  ಇತ್ತ ಅರ್ಜುನ ಶ್ರೀಕೃಷ್ಣನನ್ನು ಗಟ್ಟಿಯಾಗಿ ಹಿಡಿದುಕೊಂಡು, ಕೃಷ್ಣನನ್ನು ಪ್ರಾರ್ಥಿಸಿದ. ಆಗ ಶ್ರೀಕೃಷ್ಣ ಪುನಃ ರಥವನ್ನು ಏರಿ, ಪಾಂಚಜನ್ಯವನ್ನೂದಿದ. ಈ ಘಟನೆಯಾದ ಮೇಲೆ ಭೀಷ್ಮ ಮತ್ತು ಅರ್ಜುನರು ಶಸ್ತ್ರಾಸ್ತಗಳಿಂದ ಪರಸ್ಪರ ಯುದ್ಧ ಮಾಡಿದರು.

[^ಭೀಷ್ಮನಿಗಾಗಿ ಎಂದು ಚತುರ್ಥ ವಿಭಕ್ತಿಯಲ್ಲಿ ಹೇಳಿರುವ ಹಿನ್ನೆಲೆ:  ಕೃಷ್ಣನ ಕೈಯಲ್ಲಿ ಆಯುಧ ಹಿಡಿಸುತ್ತೇನೆ ಎನ್ನುವ ಭೀಷ್ಮಾಚಾರ್ಯರ ಪ್ರತಿಜ್ಞೆಯನ್ನು ಈಡೇರಿಸಿ ಅವರಿಗೆ ಕೀರ್ತಿ ನೀಡುವುದಕ್ಕೋಸ್ಕರ ಶ್ರೀಕೃಷ್ಣ ಚಕ್ರವನ್ನು ಹಿಡಿದು ಹೋದ. ಆಗ ಭೀಷ್ಮಾಚಾರ್ಯರು ತನ್ನೆಲ್ಲಾ ಆಯುಧಗಳನ್ನು ಬದಿಗಿಟ್ಟು, 'ನನ್ನನ್ನು ಕೊಲ್ಲು' ಎಂದು ಕೃಷ್ಣನನ್ನು ಸ್ತೋತ್ರ ಮಾಡಿದರು]

 

ಅಯತ್ನೇನ ಜಿತಶ್ಚೈವ ಫಲ್ಗುನೇನಾSಪಗಾಸುತಃ ।

ಅಯುತಾನಿ ಬಹೂನ್ಯಾಜೌ ರಥಾನಾಂ ನಿಜಘಾನ ಚ ॥ ೨೫.೪೨ ॥

 

ಯಾವುದೇ ಪ್ರಯತ್ನವಿಲ್ಲದೇ ಅರ್ಜುನನಿಂದ ಗಂಗಾಪುತ್ರ ಭೀಷ್ಮ ಗೆಲ್ಲಲ್ಪಟ್ಟ. ಅಷ್ಟೇ ಅಲ್ಲ, ಅರ್ಜುನ ಹತ್ತಾರು ಸಾವಿರ ರಥಿಕರನ್ನು ಕೊಂದ ಕೂಡಾ.

 

ಜಿತಾಃ ಸೇನಾಪಹಾರಂ ಚ ಚಕ್ರುರ್ಭೀಷ್ಮಮುಖಾಸ್ತತಃ ।

ಕದಾಚಿದಗ್ರಗೋ ಭೀಮೋ ಭೀಷ್ಮದ್ರೋಣೌ ವಿಸಾರಥೀ ॥ ೨೫.೪೩ ॥

 

ಕೃತ್ವ ವಿದ್ರಾಪ್ಯ ತಾನಶ್ವಾನ್ ಭಿತ್ತ್ವಾ ವ್ಯೂಹಂ ವಿವೇಶ ಹ ।

ಪುನಃ  ಸಂಸ್ಥಾಪಿತರಥೌ ವಿಜಿತ್ಯಾಯತ್ನತೋ ಬಲೀ ॥ ೨೫.೪೪ ॥

 

ಸೋಲಿಸಲ್ಪಟ್ಟ ಭೀಷ್ಮನೇ ಮೊದಲಾದವರು ಆ ಎರಡನೇ ದಿನದ ಯುದ್ಧವನ್ನು ಕೊನೆಗೊಳಿಸಿದರು. ಮೂರನೇದಿನದ ಒಂದು ಯುದ್ಧಕಾಲದಲ್ಲಿ ಸೇನೆಯ ಮುಂದಾಳಾಗಿರುವ  ಭೀಮಸೇನನು ಭೀಷ್ಮಾಚಾರ್ಯರು ಹಾಗೂ ದ್ರೋಣಾಚಾರ್ಯರನ್ನು ಸಾರಥೀಹೀನರನ್ನಾಗಿ ಮಾಡಿ, ಅವರ ಕುದುರೆಗಳನ್ನು ಓಡಿಸಿ, ಅವರು ಪಲಾಯನ ಮಾಡುವಂತೆ ಮಾಡಿ, ವ್ಯೂಹವನ್ನು ಪ್ರವೇಶ ಮಾಡಿದನು. ಪುನಃ ಬೇರೆ ರಥವನ್ನೇರಿ ಬಂದ ಅವರನ್ನು ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ವ್ಯೂಹವನ್ನು ಭೀಮ ಅಲ್ಲೋಲ-ಕಲ್ಲೋಲ ಮಾಡಿದ.

 

ಯತಮಾನೌ ಮಹೇಷ್ವಾಸೌ ಧಾರ್ತ್ತರಾಷ್ಟ್ರಾನ್ ಜಘಾನ ಹ ।

ಪಞ್ಚವಿಂಶದ್ಧತಾಸ್ತತ್ರ ಧಾರ್ತ್ತರಾಷ್ಟ್ರಾ ಮಹಾಬಲಾಃ ॥ ೨೫.೪೫ ॥

 

ಭೀಮನನ್ನು ನಿಗ್ರಹಿಸಬೇಕು ಎಂದು ಬಹಳ ಪ್ರಯತ್ನಪಡುತ್ತಿರುವ ಅವರನ್ನು ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ಮಹಾಬಲರಾಗಿರುವ ಇಪ್ಪತ್ತೈದು ಮಂದಿ ಧೃತರಾಷ್ಟ್ರನ ಮಕ್ಕಳನ್ನು(ದುರ್ಯೋಧನನ ತಮ್ಮಂದಿರನ್ನು)  ಭೀಮ ಕೊಂದು ಹಾಕಿದ.

 

ಭಗದತ್ತದ್ರೌಣಿಕೃಪಶಲ್ಯದುರ್ಯ್ಯೋಧನಾದಯಃ ।

ಸರ್ವೇ ಜಿತಾ ದ್ರಾವಿತಾಶ್ಚ ಸೇನಾ ಚ ಬಹುಲಾ ಹತಾ ॥ ೨೫.೪೬ ॥

 

ಭಗದತ್ತ, ಅಶ್ವತ್ಥಾಮ, ಕೃಪಾ, ಶಲ್ಯ, ದುರ್ಯೋಧನ, ಮೊದಲಾದವರೆಲ್ಲರೂ ಕೂಡಾ ಭೀಮನಿಂದ ಸೋತರು ಮತ್ತು  ಓಡಿಸಲ್ಪಟ್ಟರು .  ಭೀಮನು ಬಹಳ ಸೇನೆಯನ್ನು ನಿಗ್ರಹಿಸಿದ ಕೂಡಾ.

No comments:

Post a Comment