ಪ್ರಾತರ್ನ್ನಿರ್ಯ್ಯಾತಯಾಮಾಸ ಸೇನಾಂ ಯುದ್ಧಾಯ ದರ್ಮ್ಮತಿಃ ।
ದಿವ್ಯೌಷಧೇನ ಭೀಷ್ಮಸ್ಯ
ಭೂತ್ವಾ ಚ ನಿರುಜಸ್ತತಃ ॥ ೨೫.೫೮ ॥
ಭೀಷ್ಮಮಗ್ರೇ ನಿಧಾಯೈವ
ಯಯೌ ಯುದ್ಧಾಯ ದಂಸಿತಃ ।
ತತ್ರಾSಸೀದ್ ಯುದ್ಧಮತುಲಂ
ಭೀಮಭೀಷ್ಮಾನುಯಾಯಿನಾಮ್ ।
ಪಾಣ್ಡವಾನಾಂ ಕುರೂಣಾಂ
ಚ ಶೂರಾಣಾಮನಿವರ್ತ್ತಿನಾಮ್ ॥ ೨೫.೫೯॥
ಅತ್ಯಂತ
ಕೆಟ್ಟಬುದ್ಧಿಯುಳ್ಳ ದುರ್ಯೋಧನನು ಭೀಷ್ಮಾಚಾರ್ಯರ ದಿವ್ಯವಾದ ಔಷಧದಿಂದ ಗಾಯಗಳನ್ನು ಕಳೆದುಕೊಂಡು, ಮಾರನೇದಿನ ಬೆಳಗಾಗುತ್ತಿದ್ದಂತೇ,
ಭೀಷ್ಮರನ್ನು ಮುಂದೆ ಇಟ್ಟುಕೊಂಡು, ಕವಚವನ್ನು ಧರಿಸಿ, ಯುದ್ಧಕ್ಕೆಂದು
ತೆರಳಿದ. ಯುದ್ಧದಿಂದ ಓಡಿಹೋಗದ, ಪರಾಕ್ರಮಶಾಲಿಗಳಾದ ಪಾಂಡವರಿಗೂ ಮತ್ತು
ಕೌರವರಿಗೂ(ಅನಿವರ್ತಿಗಳ ನಡುವೆ) ನಿರಂತರವಾದ ಯುದ್ಧ ನಡೆಯಿತು.
ಧೃಷ್ಟದ್ಯುಮ್ನಸ್ತತ್ರ
ಭೀಮಾನುಯಾಯೀ ದುರ್ಯ್ಯೋಧನಸ್ಯಾವರಜೈಃ ಪ್ರಯುದ್ಧ್ಯನ್ ।
ಸಮ್ಮೋಹನಾಸ್ತ್ರೇಣ
ವಿಮೋಹಯಿತ್ವಾ ವಿಕರ್ಣ್ಣಪೂರ್ವಾನಹನಚ್ಚ ಸೇನಾಮ್ ॥ ೨೫.೬೦॥
ಆದಿನದ ಯುದ್ಧದಲ್ಲಿ ಭೀಮಸೇನನನ್ನು
ಅನುಸರಿಸಿಕೊಂಡಿರುವ ಧೃಷ್ಟದ್ಯುಮ್ನನು, ವಿಕರ್ಣನೇ ಮೊದಲಾಗಿರುವ ದುರ್ಯೋಧನನ ತಮ್ಮಂದಿರರನ್ನು ಸಮ್ಮೋಹನಾಸ್ತ್ರದಿಂದ
ಮೋಹಗೊಳಿಸಿ, ಅವರ
ಸೇನೆಯನ್ನು ನಾಶಮಾಡಿದನು.
ತತೋ ದ್ರೋಣಸ್ತಾನ್
ಸಮುತ್ಥಾಪ್ಯ ಸರ್ವಾನ್ ವಿಜ್ಞಾನಾಸ್ತ್ರೇಣಾSಸದತ್ ಪಾರ್ಷತಂ ಚ ।
ತಂ ಭೀಮಸೇನಃ ಸೂತಹೀನಂ
ವಿಧಾಯ ವ್ಯದ್ರಾವಯಚ್ಛತ್ರುಗಣಾಞ್ಛರೌಘೈಃ ॥ ೨೫.೬೧॥
ತದನಂತರ ದ್ರೋಣಾಚಾರ್ಯರು
ವಿಜ್ಞಾನಾಸ್ತ್ರದಿಂದ ಅವರೆಲ್ಲರನ್ನೂ ಎಬ್ಬಿಸಿ, ಧೃಷ್ಟದ್ಯುಮ್ನನ ಬಳಿಗೆ ಬಂದರು. ಆಗ ಭೀಮಸೇನನು
ದ್ರೋಣಾಚಾರ್ಯರನ್ನು ಸಾರಥಿಹೀನರನ್ನಾಗಿ ಮಾಡಿ ಓಡಿಸಿದನು. ತನ್ನ ಬಾಣಗಳಿಂದ ಶತ್ರುಗಣಗಳನ್ನೂ
ಕೂಡಾ ಭೀಮಸೇನ ಗೆದ್ದ.
ಅಥಾSಸದತ್ ಕೃತವರ್ಮ್ಮಾ ರಥೇನ
ಧೃಷ್ಟದ್ಯುಮ್ನಂ ಸೋSಭ್ಯಯಾತ್ ತಾವುಭೌ ಚ ।
ವವರ್ಷತುಃ
ಶರವರ್ಷೈರಥೋಗ್ರೈಸ್ತತ್ರಾಕರೋದ್ ವಿರಥಂ ದ್ರೌಪದಿಸ್ತಮ್ ॥ ೨೫.೬೨॥
ಸ್ವಲ್ಪಕಾಲ ಕಳೆದಮೇಲೆ
ಕೃತವರ್ಮನು ಧೃಷ್ಟದ್ಯುಮ್ನನನ್ನು ಎದುರುಗೊಂಡ. ಅವರಿಬ್ಬರೂ ಕೂಡಾ ಉಗ್ರವಾಗಿರುವ ಬಾಣಗಳ ಮಳೆಗಳಿಂದ
ಒಬ್ಬರನ್ನೊಬ್ಬರು ಪೀಡಿಸಿಕೊಂಡರು. ಆ ಮಹಾಯುದ್ಧದಲ್ಲಿ ದ್ರುಪದನ ಮಗನಾಗಿರುವ ಧೃಷ್ಟದ್ಯುಮ್ನನು ಕೃತವರ್ಮನನ್ನು
ರಥಹೀನನನ್ನಾಗಿ ಮಾಡಿದನು.
ತಸ್ಮಿನ್ ಜಿತೇ ರಥವೀರೇ
ಸ್ವಯಂ ತಂ ದುರ್ಯ್ಯೋಧನಃ ಪಾರ್ಷತಮಾಸಸಾದ ।
ತಂ ಭೀಮಸೇನೋ
ವಿರಥಾಯುಧಂ ಚ ಕೃತ್ವಾ ಬಾಣೇನಾಹನಜ್ಜತ್ರುದೇಶೇ ॥ ೨೫.೬೩॥
ರಥಿಕರಲ್ಲೆ ಅಗ್ರೇಸರನಾಗಿರುವ
ಕೃತವರ್ಮನು ಸೋಲುತ್ತಿರಲು, ಸ್ವಯಂ ದುರ್ಯೋಧನನು ಧೃಷ್ಟದ್ಯುಮ್ನನನ್ನು ಎದುರುಗೊಂಡನು. ಆಗ ಅವನನ್ನು
ಭೀಮಸೇನನು ರಥಹೀನನನ್ನಾಗಿ ಮಾಡಿ, ಎದೆ ಮತ್ತು ಕಂಠದ ನಡುವೆ ಇರುವ ಮೂಳೆ(ಜ್ಜತ್ರು) ಭಾಗವನ್ನು
ಬಾಣದಿಂದ ಗಟ್ಟಿಯಾಗಿ ಹೊಡೆದನು.
ವಿಮೂರ್ಚ್ಛಿತಂ ತಂ
ರುಧಿರೌಘಮುಚ್ಚೈರ್ವಮನ್ತಮಾಶು ಸ್ವರಥೇ ನಿಧಾಯ ।
ಕೃಪೋ ಯಯೌ ಮಾರುತಿರ್ಧಾರ್ತ್ತರಾಷ್ಟ್ರೀಂ ವ್ಯದ್ರಾವಯತ್ ಪೃತನಾಂ ಬಾಣಪೂಗೈಃ ॥ ೨೫.೬೪॥
ರಕ್ತವನ್ನು ಜೋರಾಗಿ
ವಾಂತಿ ಮಾಡಿಕೊಳ್ಳುತ್ತಿರುವ, ಮೂರ್ಛಿತನಾಗಿರುವ ದುರ್ಯೋಧನನನ್ನು ಕೃಪಾಚಾರ್ಯರು ತನ್ನ ರಥದಲ್ಲಿರಿಸಿಕೊಂಡು
ಯುದ್ಧಭೂಮಿಯಿಂದ ಪಲಾಯನ ಮಾಡಿದರು. ತದನಂತರ ಭೀಮನು ತನ್ನ ಬಾಣಗಳಿಂದ ದುರ್ಯೋಧನನಿಗೆ ಸಂಬಂಧಪಟ್ಟ
ಸೇನೆಯನ್ನು ಓಡಿಸಿದನು.
ಅಥೇನ್ದ್ರಸೂನುಃ
ಕೇಶವಪ್ರೇರಿತೇನ ರಥೇನ ಶತ್ರೂನ್ ವಿಧಮಞ್ಛರೌಘೈಃ ।
ರಥಾನ್ ರಣೇ ಪಞ್ಚವಿಂಶತ್ಸಹಸ್ರಾನ್ ನಿನಾಯ ವೈವಸ್ವತಸಾದನಾಯ ॥ ೨೫.೬೫॥
ಆಮೇಲೆ ಅರ್ಜುನನು
ಕೃಷ್ಣನಿಂದ ಪ್ರೇರಿತವಾದ ರಥದಲ್ಲಿದ್ದುಕೊಂಡು, ಶತ್ರುಗಳನ್ನು ನಾಶಮಾಡುತ್ತಾ, ಬಾಣ ಸಮೂಹಗಳಿಂದ ಯುದ್ಧದಲ್ಲಿ
ಇಪ್ಪತ್ತೈದು ಸಾವಿರ ರಥಿಕರನ್ನು ಯಮಲೋಕಕ್ಕೆ ಕಳುಹಿಸಿದನು.
ತಮನ್ವಯಾದ್ ಯುಯುಧಾನಃ
ಸುಧನ್ವಾ ವಿದ್ರಾವಯನ್ ಧಾರ್ತ್ತರಾಷ್ಟ್ರಸ್ಯ ಸೇನಾಮ್ ।
ತಮಭ್ಯಯಾತ್
ಸೌಮದತ್ತಿಸ್ತಯೋಶ್ಚ ಸುಯುದ್ಧಮಾಸೀದತಿಭೈರವಾಸ್ತ್ರಮ್ ॥ ೨೫.೬೬॥
ಸಾತ್ಯಕಿ ಯುಯುಧಾನನು
ಒಳ್ಳೆಯ ಬಿಲ್ಲನ್ನು ಹಿಡಿದು ಅರ್ಜುನನನ್ನು ಅನುಸರಿಸಿದ. ದುರ್ಯೋಧನನ ಸೇನೆಯನ್ನು ಓಡಿಸುತ್ತಿರುವ
ಅವನನ್ನು ಸೋಮದತ್ತನ ಮಗನಾದ ಭೂರಿಶ್ರವಸ್ಸು ಇದಿರುಗೊಂಡ. ಅವರಿಬ್ಬರಿಗೂ ಅಸ್ತ್ರಗಳ ಬಳಕೆಯುಳ್ಳ
ಭಯಂಕರವಾದ ಯುದ್ಧವಾಯಿತು.
ಪುತ್ರಾನ್ ದಶಾಸ್ಯಾSಶು ನಿಹತ್ಯ ವೀರಃ ಸ ಸಾತ್ಯಕೇಃ
ಸೌಮದತ್ತಿಃ ಸಕಾಶೇ ।
ಸಮರ್ಪ್ಪಯಾಮಾಸ
ಶರೀರದಾರಣೈಃ ಶರೈರುಭೌ ತೌ ವಿರಥೌ ಚ ಚಕ್ರತುಃ ॥ ೨೫.೬೭॥
ಸೋಮದತ್ತನ ಮಗನಾದ
ಭೂರೀಶ್ರವಸ್ಸನು ಸಾತ್ಯಕಿಯ ಹತ್ತು ಜನ ಮಕ್ಕಳನ್ನು ಅವನು ನೋಡುತ್ತಿರುವಾಗಲೇ ಕೊಂದು, ಶರೀರವನ್ನು
ಸೀಳುವ ಬಾಣಗಳಿಂದ ಸಾತ್ಯಕಿಯನ್ನು ಘಾಸಿಗೊಳಿಸಿದನು. ಅವರಿಬ್ಬರೂ ಪರಸ್ಪರರ ರಥಗಳನ್ನು ಮುರಿದುಕೊಂಡು
ರಥಹೀನರಾದರು.
ಅಥಾಸಿಪಾಣಿಂ
ಯುಯುಧಾನಮಾಶು ಮಹಾಸಿಹಸ್ತೇನ ಚ ಸೌಮದತ್ತಿನಾ ।
ಆಸಾದಿತಂ ವೀಕ್ಷ್ಯ ರಥಂ
ಸ್ವಕೀಯಮಾರೋಪಯಾಮಾಸ ಸುತೋSನಿಲಸ್ಯ ॥ ೨೫.೬೮॥
ಸ್ವಲ್ಪ ಹೊತ್ತಾದ ಮೇಲೆ,
ದೊಡ್ಡ ಕತ್ತಿಯನ್ನು ಹಿಡಿದ ಭೂರೀಶ್ರವಸ್ಸಿನಿಂದ ಆಕ್ರಮಿಸಲ್ಪಟ್ಟ, ಕತ್ತಿಯನ್ನು ಹಿಡಿದು ಯುದ್ಧ ಮಾಡುತ್ತಿರುವ ಸಾತ್ಯಕಿಯನ್ನು ಕಂಡ ಭೀಮಸೇನನು ಅವನನ್ನು ತನ್ನ ರಥಕ್ಕೇರಿಸಿಕೊಂಡನು.
ಸುಯೋಧನಃ ಸೌಮದತ್ತಿಂ
ಸ್ವಕೀಯರಥೇ ವ್ಯವಸ್ಥಾಪ್ಯ ಚ ಭೀಮಸೇನಾತ್ ।
ಅಪಾದ್ರವದ್
ವಾಸವಿರ್ಭೀಷ್ಮಮಾಜೌ ಸಮಾಸಸಾದಾSಶು ಮಹೇನ್ದ್ರಕಲ್ಪಃ ॥ ೨೫.೬೯॥
ಸಾತ್ಯಕಿಯ ರಕ್ಷಣೆ
ಭೀಮಸೇನನಿಂದಾಗಿರುವುದನ್ನು ಕಂಡ ದುರ್ಯೋಧನನು ಭೂರೀಶ್ರವಸ್ಸನನ್ನು ತನ್ನ ರಥದಲ್ಲಿರಿಸಿಕೊಂಡು,
ಭೀಮಸೇನನನ್ನು ಇದಿರಿಸಲಾಗದೇ ಪಲಾಯನ ಮಾಡಿದನು. ಇನ್ನೊಂದೆಡೆ ಇಂದ್ರನಂತಿರುವ ಅರ್ಜುನನು ಯುದ್ಧದಲ್ಲಿ
ಭೀಷ್ಮಾಚಾರ್ಯರನ್ನು ಇದಿರುಗೊಂಡ.
ಉಭೌ ಚ ತಾವಸ್ತ್ರವಿದಾಂ
ಪ್ರಬರ್ಹೌ ಶರೈರ್ಮ್ಮಹಾಶೀವಿಷಸನ್ನಿಕಾಶೈಃ ।
ತತಕ್ಷತುರ್ನ್ನಾಕಸದಾಂ ಸಮಕ್ಷಂ ಮಹಾಬಲೌ ಸಂಯತಿ ಜಾತದರ್ಪ್ಪೌ ॥ ೨೫.೭೦॥
ದೇವತೆಗಳೆಲ್ಲಾ
ನೋಡುತ್ತಿರುವಂತೆ ಅಸ್ತ್ರಗಳನ್ನು ಬಲ್ಲವರಲ್ಲಿಯೇ ಆಗ್ರಗಣ್ಯರಾದ, ಮಹಾಬಲರಾದ ಭೀಷ್ಮ ಹಾಗೂ ಅರ್ಜುನರು ಸರ್ಪದ ವಿಷದಂತೆ
ತೀಕ್ಷ್ಣವಾಗಿರುವ ಬಾಣಗಳಿಂದ ಪರಸ್ಪರ ಹೊಡೆದುಕೊಂಡರು(ಗಾಯಗೊಂಡರು). ಹೀಗೆ ಯುದ್ಧದ ತೀಕ್ಷ್ಣತೆ ಹೆಚ್ಚತೊಡಗಿತು.
ಸ್ವಭಾಹುವೀರ್ಯ್ಯೇಣ
ಜೀತಃ ಸ ಭೀಷ್ಮಃ ಕಿರೀಟಿನಾ ಲೋಕಮಹಾರಥೇನ ।
ಸೇನಾಮಪಾಹೃತ್ಯ ಯಯೌ
ನಿಶಾಯಾಮಾಸಾದಿತಾಯಾಮಥ ಪಾಣ್ಡವಾಶ್ಚ ॥ ೨೫.೭೧॥
ಭೀಷ್ಮಾಚಾರ್ಯರು ಎಲ್ಲಾ
ಲೋಕಗಳಲ್ಲಿಯೇ ಅತ್ಯಂತ ಶ್ರೇಷ್ಠ ರಥಿಕನಾಗಿರುವ ಅರ್ಜುನನ ಕೇವಲ ಬಾಹುವೀರ್ಯದಿಂದ(ಅಸ್ತ್ರಗಳನ್ನು
ಬಳಸದೆಯೇ) ಸೋತು ಸೇನೆಯನ್ನು ಹಿಂದೆ ತಿರುಗಿಸಿ ಹೋದರು. ರಾತ್ರಿಯಾಗುತ್ತಿರಲು, ಪಾಂಡವರೂ ತಮ್ಮ ಸೇನೆಯನ್ನು ಶಿಬಿರಕ್ಕೆ ಹಿಂತಿರುಗಿಸಿದರು(ಹೀಗೆ ಐದನೇ ದಿನದ ಯುದ್ಧ ಮುಗಿಯಿತು)
No comments:
Post a Comment