ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 26, 2023

Mahabharata Tatparya Nirnaya Kannada 32-48-58

 

ತದಾ ಕುರುಕ್ಷೇತ್ರಗತಂ ಜಗದ್ಗುರುಂ ಸುಪೂರ್ಣ್ಣವಿಜ್ಞಾನಬಲರ್ದ್ಧಿಸತ್ಸುಖಮ್ ।

ತಮೇವ ವಾಸಿಷ್ಠಕುಲೋದ್ವಹಂ ಹರಿಂ ನಿರೀಕ್ಷ್ಯ ದುಃಖೇನ ಪಪಾತ ಪಾದಯೋಃ ॥ ೩೨.೪೮ ॥

 

ಅರ್ಜುನನು ಕುರುಕ್ಷೇತ್ರಕ್ಕೆ ಬಂದವನೇ ಅಲ್ಲಿದ್ದ, ಪೂರ್ಣವಾಗಿರುವ ವಿಜ್ಞಾನ ಹಾಗೂ ಬಲವೆಂಬ ಸಂಪತ್ತಿನಿಂದ ಕೂಡಿರುವ, ವಾಸಿಷ್ಠರ ಕುಲದಲ್ಲಿ ಬಂದಿರುವ, ಎಲ್ಲರಿಗೂ ಉಪದೇಶಕರಾಗಿರುವ ವೇದವ್ಯಾಸರನ್ನು ಕಂಡ ಮತ್ತು ಉಮ್ಮಳಿಸುವ ದುಃಖದಿಂದ ಅವರ ಪಾದಗಳಿಗೆ ಬಿದ್ದ.

 

ಸ ತೇನ ಪುಂಸಾಂ ಪ್ರವರೇಣ ಹೇತುಭಿಃ ಸಮ್ಬೋಧಿತೋSಜ್ಞಾನತಮೋಂಶುಮಾಲಿನಾ ।

ಸಂಸ್ಥಾಪ್ಯ ಚೇತಃ ಪುನರೇವ ತಸ್ಮಿನ್ ಜಹೌ ಶುಚಃ ಪ್ರಾಯಶ ಏವ ಧೈರ್ಯ್ಯಾತ್ ॥ ೩೨.೪೯ ॥

 

ಅಜ್ಞಾನವೆಂಬ ಕತ್ತಲಿಗೆ ನೇಸರನಂತಿರುವ, ಪುರುಷೋತ್ತಮ ವೇದವ್ಯಾಸರಿಂದ ಅನೇಕ ಯುಕ್ತಿಗಳಿಂದ ಬೋಧನೆಗೆ ಒಳಗಾದ ಅರ್ಜುನನು, ತನ್ನ ಮನಸ್ಸನ್ನು ಶ್ರೀಕೃಷ್ಣನಲ್ಲಿಯೇ ಇಟ್ಟು, ಬಹಳ ಮಟ್ಟಿಗೆ ದುಃಖವನ್ನು ಬಿಟ್ಟನು.  

 

ಸ್ತ್ರಿಯೋ ಮ್ಲೇಚ್ಛಹೃತಾಃ ಕೃಷ್ಣಪ್ರೇಷಿತಾದ್ ದಾಲ್ಬ್ಯತಃ ಪುನಃ ।

ಗೋವಿನ್ದೈಕಾದಶೀಂ ಶ್ರುತ್ವಾ ಕೃತ್ವಾ ಸಾರಸ್ವತೇ ಜಲೇ ॥ ೩೨.೫೦ ॥             

 

ನಿಮಜ್ಜ್ಯ ವಾಯೋರ್ವಚನಾತ್  ತ್ಯಕ್ತದೇಹಾ ದಿವಂ ಯಯುಃ ।

ಅರ್ಜ್ಜುನಸ್ತು ಕುರುಕ್ಷೇತ್ರೇ ಹಾರ್ದ್ದಿಕ್ಯಯುಯುಧಾನಯೋಃ ॥ ೩೨.೫೧ ॥

 

ಸುತೌ ಸಾರಸ್ವತೇ ಚೈವ ದೇಶೇ ರಾಜ್ಯೇSಭ್ಯಷೇಚಯತ್ ।

ಅನಿರುದ್ಧಸುತಂ ವಜ್ರಂ ಪ್ರಿಯಂ ಕೃಷ್ಣಸ್ಯ ಸದ್ಗುಣಮ್ ॥ ೩೨.೫೨ ॥

 

ಸಶೂರಸೇನೇನ್ದ್ರಪ್ರಸ್ಥರಾಜಾನಮಕರೋದ್ ವಶೀ ।

ಸ್ತ್ರೀಬಾಲಾಂಶ್ಚ ಧನಂ ಚೈವ ತಸ್ಮಿನ್ ಸಂಸ್ಥಾಪ್ಯ ಫಲ್ಗುನಃ ॥ ೩೨.೫೩ ॥

 

ಯಯೌ ಭ್ರಾತೄನಶೇಷಂ ಚ ವೃತ್ತಂ ತೇಷಾಮವರ್ಣ್ಣಯತ್ ।

ತೇ ಚಾವಿಯೋಗಸಮಯಂ ಸ್ಮರನ್ತೋ ಮುರವೈರಿಣಾ ॥ ೩೨.೫೪ ॥

 

ಅಭ್ಯಷಿಞ್ಚನ್ ಭಾಗವತಂ ಮಾಹಾರಾಜ್ಯೇ ಪರೀಕ್ಷಿತಮ್ ।

ಸ್ತ್ರೀಹಾರಿಣಾಂ ಚ ಮ್ಲೇಚ್ಛಾನಾಂ ವಧಾಯೈನಮಯೋಜಯನ್  ॥ ೩೨.೫೫ ॥

 

ಮ್ಲೇಚ್ಛರಿಂದ ಅಪಹರಿಸಲ್ಪಟ್ಟ ಸ್ತ್ರೀಯರೆಲ್ಲರೂ ಕೂಡಾ, ಶ್ರೀಕೃಷ್ಣ ಕಳುಹಿಸಿದ ದಾಲ್ಬ್ಯಮುನಿಗಳಿಂದ, ಗೋವಿಂದ ಏಕಾದಶಿಯನ್ನು ಕೇಳಿ, ಆ ಏಕಾದಶಿಯನ್ನು ಆಚರಿಸಿ, ಸರಸ್ವತೀ ನದಿಯಲ್ಲಿ ಮುಳುಗಿ, ಮುಖ್ಯಪ್ರಾಣನ ಮಾತಿನಂತೆ ದೇಹವನ್ನು ಬಿಟ್ಟು, ಸ್ವರ್ಗವನ್ನು ಹೊಂದಿದರು.

ಅರ್ಜುನನಾದರೋ, ಕುರುಕ್ಷೇತ್ರದಲ್ಲಿದ್ದುಕೊಂಡು, ಕೃತವರ್ಮ- ಸಾತ್ಯಕಿಯರ ಮಕ್ಕಳನ್ನು ಸರಸ್ವತೀ ದಡದ ಕುರುಕ್ಷೇತ್ರ ಹಾಗೂ ಸಾರಸ್ವತ ರಾಜ್ಯದ ಅಧಿಪತಿಗಳಾಗಿ ವಿಧಿಬದ್ಧವಾಗಿ ಅಭಿಷೇಕ ಮಾಡಿದನು. ಕೃಷ್ಣನಿಗೆ ಪ್ರಿಯನಾಗಿರುವ, ಸದ್ಗುಣನಾದ ಅನಿರುದ್ಧನ ಮಗನಾಗಿರುವ ವಜ್ರನನ್ನು ಶೂರಸೇನ ರಾಜ್ಯದ ಸಹಿತವಾದ ಇಂದ್ರಪ್ರಸ್ಥದ ರಾಜನಾಗಿ ಮಾಡಿದನು. ಆ ವಜ್ರನ ಸುಪರ್ದಿಯಲ್ಲಿ ಸ್ತ್ರೀಯರು, ಮಕ್ಕಳು ಹಾಗೂ  ಹಣವನ್ನೂ ಕೂಡಾ ನೆಲೆಗೊಳಿಸಿದ ಅರ್ಜುನನು ಹಸ್ತಿನಪುರಕ್ಕೆ ತೆರಳಿದನು ಮತ್ತು ಅಣ್ಣಂದಿರನ್ನು ಕುರಿತು, ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದನು. ಅವರೂ ಕೂಡಾ ಕೃಷ್ಣನೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಸ್ಮರಣೆಮಾಡುತ್ತಾ, ಭಗವದ್ಭಕ್ತನಾದ ಪರೀಕ್ಷಿತನನ್ನು ಮಹಾಸಾಮ್ರಾಜ್ಯದಲ್ಲಿ ಅಭಿಷೇಕ ಮಾಡಿದರು.  ಸ್ತ್ರೀಯರನ್ನು ಅಪಹರಿಸಿದ ಮ್ಲೇಚ್ಛರ ನಾಶಕ್ಕೆಂದು ಪರೀಕ್ಷಿತರಾಜನನ್ನು ಪಾಂಡವರು ನೇಮಿಸಿದರು.

 

ಕೃತಂ ಚ ತೇನ ತತ್ ಕರ್ಮ್ಮ ವೋಢ್ರಾ ಪೈತಾಮಹಂ ಧುರಮ್ ।

ಸಮಯಂ ಪರಿರಕ್ಷದ್ಭಿರ್ನ್ನ ಪಾರ್ತ್ಥೈರೇವ ಯತ್ ಕೃತಮ್ ॥ ೩೨.೫೬ ॥

 

ತಾತನ ರಾಜ್ಯವನ್ನು ಹೊತ್ತಿರುವ ಪರೀಕ್ಷಿತನಿಂದ ತಾತ ಒಪ್ಪಿಸಿದ ಕೆಲಸವು ಮಾಡಲ್ಪಟ್ಟಿತು ಕೂಡಾ. ಯಾವ ಕೆಲಸವು ಒಪ್ಪಂದವನ್ನು ಪಾಲಿಸುವಂತಹ ಅರ್ಜುನಾದಿಗಳಿಂದ ಮಾಡಲಿಲ್ಲವೋ, ಅಂತಹಾ ಕರ್ಮವನ್ನು ಪರೀಕ್ಷಿತ ಮಾಡಿದ.

 

[ಇಲ್ಲಿ ಹೇಳಿರುವ ಒಪ್ಪಂದ ಯಾವುದು ಎನ್ನುವುದನ್ನು ಹೇಳುತ್ತಾರೆ-]

 

ವಾಸುದೇವಪದಾ ಸ್ಪೃಷ್ಟಭೂಕಣ್ಟಕಸಮುದ್ಧೃತಿಃ ।

ಸಮಯಃ ಪಾಣ್ಡವಾನಾಂ ಹಿ ತಸ್ಯೈವಾನುಗತಿಃ ಪರಮ್ ॥ ೩೨.೫೭ ॥

 

 

ಅನುವ್ರಜದ್ಭಿರ್ವಿಶ್ವೇಶಂ ನಾಸ್ಮಾಭಿರ್ಭೂಸ್ತದುಜ್ಝಿತಾ ।

ಭೋಜ್ಯಾ ರಕ್ಷ್ಯಾSಪಿ ವಾ ತೇಷಾಮಿತ್ಯೇವ ಸಮಯಃ ಪುರಾ ॥ ೩೨.೫೮ ॥

 

ಶ್ರೀಕೃಷ್ಣನ ಪಾದದಿಂದ ಮುಟ್ಟಲ್ಪಟ್ಟ ಭೂಮಿಯ ಮುಳ್ಳುಗಳ ಕೀಳುವಿಕೆಯು(ಅಂದರೆ ಕೃಷ್ಣನ ಪಾದಗಳಿಂದ ಮುಟ್ಟಲ್ಪಟ್ಟ ಭೂಮಿಗೆ ಕಂಟಕರೆನಿಸಿದ ಅಸುರರನ್ನು ಸಂಹಾರಮಾಡುವುದು),  ಶ್ರೀಕೃಷ್ಣನು ಪರಂಧಾಮಕ್ಕೆ  ತೆರಳಿದಮೇಲೆ ಅವನನ್ನೇ ಅನುಸರಿಸುವ ತಾವು ಕೃಷ್ಣನಿಲ್ಲದ  ಭೂಮಿಯನ್ನು ಆಳಲು ಅಥವಾ ಪಾಲಿಸಲು ಅರ್ಹರಲ್ಲದಿರುವುದರಿಂದ ಅವನ ಹಿಂದೆಯೇ ಹೋಗುವುದು ಎನ್ನುವುದೇ ಅವರ ಒಪ್ಪಂದವಾಗಿತ್ತು. (ಈ ಕಾರಣದಿಂದ ಪಾಂಡವರು ಮ್ಲೇಚ್ಛರ ನಾಶಕ್ಕೆಂದು ಪರೀಕ್ಷಿತರಾಜನನ್ನು ನೇಮಿಸಿದರೇ ಹೊರತು ತಾವು ಆ ಕಾರ್ಯವನ್ನು ಮಾಡಲಿಲ್ಲ ಮತ್ತು ಅಧಿಕಾರದಲ್ಲಿ ಮುಂದುವರಿಯಲಿಲ್ಲ)  

Wednesday, October 11, 2023

Mahabharata Tatparya Nirnaya Kannada 32-41-47

 

ವಸುದೇವಃ ಪಾರ್ತ್ಥಮುಖಾಚ್ಛ್ರುತ್ವೈತದ್ ಯೋಗಮಾಸ್ಥಿತಃ ।

ತ್ಯಕ್ತ್ವಾ ದೇಹಂ ಕಶ್ಯಪತ್ವಂ ಪ್ರಾಪ ಕೃಷ್ಣಾನುರಾಗತಃ ॥ ೩೨.೪೧ ॥

 

ವಸುದೇವನು ಪ್ರಭಾಸದಿಂದ ದ್ವಾರಕೆಗೆ ಬಂದ ಅರ್ಜುನನ ಮುಖದಿಂದ ಯಾದವೀ-ಕಲಹದ ಸುದ್ದಿಯನ್ನು ಕೇಳಿ, ಧ್ಯಾನವನ್ನು ಹೊಂದಿ ತನ್ನ ಶರೀರವನ್ನು ಬಿಟ್ಟನು. ಕೃಷ್ಣನ ಮೇಲಿನ ಭಕ್ತಿಯಿಂದ ಅವನು ತನ್ನ ಮೂಲರೂಪವಾದ ಕಶ್ಯಪತ್ವವನ್ನು ಹೊಂದಿದನು.

 

ತಸ್ಯಾರ್ಜ್ಜುನೋSಶ್ವಮೇಧಾಗ್ನಾವನ್ತ್ಯಕರ್ಮ್ಮಾಕರೋತ್ ತದಾ ।

ತ್ಯಕ್ತದೇಹಾಸ್ತಸ್ಯ ಭಾರ್ಯ್ಯಾ ವಹ್ನೌ ಪ್ರಾಪುಸ್ತಮೇವ ಚ ॥ ೩೨.೪೨ ॥

 

ಅರ್ಜುನನು ಅಶ್ವಮೇಧದಲ್ಲಿ ಪೂಜಿಸಿದ ಅಗ್ನಿಯಿಂದ ವಸುದೇವನ ಅಂತ್ಯಕ್ರಿಯೆಯನ್ನು ಮಾಡಿದನು. ವಸುದೇವನ ಹೆಂಡಂದಿರೆಲ್ಲರೂ ಕೂಡಾ ಬೆಂಕಿಯಲ್ಲಿಯೇ ದೇಹವನ್ನು ಬಿಟ್ಟು, ಕಶ್ಯಪನನ್ನೇ ಹೊಂದಿದರು.

  

ಸ್ತ್ರಿಯೋ ಬಾಲಾಂಸ್ತಥಾSSದಾಯ ಧನಂ ಚೈವ ಧನಞ್ಜಯಃ ।

ವಿನಿರ್ಯ್ಯಯೌ ದ್ವಾರವತ್ಯಾಸ್ತಾಂ ಜಗ್ರಾಸ ಚ ಸಾಗರಃ ॥ ೩೨.೪೩ ॥

 

ಅರ್ಜುನನು ಹೆಣ್ಣುಮಕ್ಕಳನ್ನೂ, ಮಕ್ಕಳನ್ನೂ, ಹಾಗೆಯೇ ಧನವನ್ನೂ ತೆಗೆದುಕೊಂಡು, ದ್ವಾರಕೆಯಿಂದ ಹೊರನಡೆದನು. ಸಮುದ್ರವು ದ್ವಾರಕೆಯನ್ನು ನುಂಗಿತು. (ದ್ವಾರಕಾನಗರವು ಸಮುದ್ರದಲ್ಲಿ ಮುಳುಗಿಹೋಯಿತು)

 

ಸ್ತ್ರೀಬಾಲಸಹಿತೇ ಪಾರ್ತ್ಥ ಏಕಸ್ಮಿನ್ ಪಥಿ ಗಚ್ಛತಿ ।

ಶಾಪಾತ್ ಸುಪಾಪಾ ಆಭೀರಾಃ ಸ್ತ್ರೀಜನಾನ್ ಜಹ್ರುರುದ್ಧತಾಃ ॥ ೩೨.೪೪ ॥

 

ಸ್ತ್ರೀ ಹಾಗೂ ಬಾಲಕರಿಂದ ಕೂಡಿರುವ ಅರ್ಜುನನೊಬ್ಬನೇ ನಡೆಯುತ್ತಿರಲು, ಅತ್ಯಂತ ಪಾಪಿಷ್ಠರಾದ ಬೇಡರು, ಬಲದಿಂದ ಉದ್ಧತರಾಗಿ ಶಾಪಗ್ರಸ್ತರಾಗಿದ್ದ ಸ್ತ್ರೀಯರನ್ನು ಅಪಹರಿಸಿದರು.

 

[ಯಾವ ಶಾಪ ಎನ್ನುವುದನ್ನು ವಿವರಿಸುತ್ತಾರೆ-]

 

ಯಾಸ್ತಾಃ ಷೋಡಶಸಾಹಸ್ರವನಿತಾಃ ಶತಸಂಯುತಾಃ 

ಕೃಷ್ಣಶಾಪಾನ್ಮ್ಲೇಚ್ಛವಶಂ ಯಯುರ್ದ್ದರ್ಪ್ಪನಿಮಿತ್ತತಃ ॥ ೩೨.೪೫ ॥

 

ಯಾವ ಹದಿನಾರುಸಾವಿರದ ನೂರು ಮಂದಿ ಶ್ರೀಕೃಷ್ಣನ ಸ್ತ್ರೀಯರಿದ್ದರೋ, ಅವರೆಲ್ಲರೂ ಶ್ರೀಕೃಷ್ಣನ ಕುರಿತು ಹಿಂದೆ ತೋರಿದ್ದ ವಿಪರೀತ ಅಹಂಕಾರ ನಿಮಿತ್ತ ಕೃಷ್ಣನ ಶಾಪಕ್ಕೆ ಒಳಗಾಗಿ, ಮ್ಲೇಚ್ಛರ ವಶವಾದರು.

 

ಹ್ರೀಯಮಾಣೇ ಧನೇ ಚೈವ ವನಿತಾಸು ಚ ವಾಸವಿಃ ।

ಯುಯುತ್ಸುರ್ಗ್ಗಾಣ್ಡಿವಂ ಸಜ್ಯಂ ಕೃಚ್ಛ್ರೇಣೈವ ಚಕಾರ ಹ ॥ ೩೨.೪೬ ॥

 

ಹಣವು ಅಪಹರಿಸಲ್ಪಡಲು, ಸ್ತ್ರೀಯರು ಕೂಡಾ ಅಪಹರಿಸಲ್ಪಡಲು, ಅರ್ಜುನನು ಯುದ್ಧಮಾಡಲು ಬಯಸಿ, ಕಷ್ಟಪಟ್ಟು ಗಾಂಡೀವದ ದಾರವನ್ನು  ಬಿಗಿದನು.

 

ಕ್ಷೀಣಾಸ್ತಸ್ಯ ಶರಾ ದೈವಾನ್ನಾಸ್ತ್ರಾಣಿ ಸ್ಮೃತಿಮಾಯಯುಃ ।

ಸ ತದ್ ದೈವಕೃತಂ ಜ್ಞಾತ್ವಾ ಸಂಸ್ಮರನ್ ಪುರುಷೋತ್ತಮಮ್ ।

ನಿಘ್ನಞ್ಛತ್ರೂನ್ ಗಾಣ್ಡಿವೇನ ಶೇಷಂ ರಕ್ಷನ್ ಕುರೂನಗಾತ್ ॥ ೩೨.೪೭ ॥

 

ಅರ್ಜುನನ ಬತ್ತಳಿಕೆಯಲ್ಲಿರುವ ಬಾಣಗಳು ಕ್ಷಯಗೊಂಡವು. ದೈವಸಂಕಲ್ಪದಿಂದಾಗಿ ಅವನಿಗೆ ಅಸ್ತ್ರಗಳ  ನೆನಪೇಬರಲಿಲ್ಲ. ಆಗ ಅರ್ಜುನನು ‘ಇದು ದೈವದ ಸಂಕಲ್ಪ’ ಎಂದು ತಿಳಿದು, ಕೃಷ್ಣನನ್ನು ಸ್ಮರಣೆ ಮಾಡುತ್ತಾ, ಗಾಂಡೀವದ ದಂಡದಿಂದ ಶತ್ರುಗಳನ್ನು ಹೊಡೆಯುತ್ತಾ, ಉಳಿದವರನ್ನು ರಕ್ಷಿಸುತ್ತಾ, ಕುರುಕ್ಷೇತ್ರವನ್ನು ತಲುಪಿದನು.

Sunday, October 8, 2023

Mahabharata Tatparya Nirnaya Kannada 32-31-40

ಸ ಪೂರ್ವರೂಪೇಣ ಸಮಾಪ್ಯ ಚೈಕ್ಯಂ ವಿಭಜ್ಯ ಚೇಚ್ಛಾನುಸೃತೋSಥ ರೇಮೇ ।

ಹರಿಃ ಶ್ರಿಯಾ ಬ್ರಹ್ಮಮುಖೈಶ್ಚ ಮುಕ್ತೈಃ ಸಮ್ಪೂಜ್ಯಮಾನೋSಮಿತಸದ್ಗುಣಾತ್ಮಾ ॥ ೩೨.೩೧ ॥

 

ಶ್ರೀಕೃಷ್ಣನು ಮೂಲಸ್ವರೂಪದಲ್ಲಿ ಐಕ್ಯ ಹೊಂದಿಯೂ ಮತ್ತೆ ಇಚ್ಛಾನುಸಾರ ಬೇರೆಯಾಗಿಯೂ ಆನಂದದಿಂದ ಇದ್ದನು. ಪರಮಾತ್ಮನು ಲಕ್ಷ್ಮೀದೇವಿಯಿಂದಲೂ, ಬ್ರಹ್ಮಮೊದಲಾದವರಿಂದಲೂ, ಮುಕ್ತರಿಂದಲೂ ಪೂಜಿಸಲ್ಪಡುವವನಾಗಿ, ಎಲ್ಲಾ ಗುಣಗಳೇ ಮೈವೆತ್ತು ಕ್ರೀಡಿಸಿದನು.   

 

ಬ್ರಹ್ಮಾSಪಿ ಶರ್ವಾದಿಯುತಃ ಸ್ವಲೋಕಂ ಪ್ರಾಪ್ತಃ ಪುನಸ್ತತ್ರ ಗತಂ ಚ ಕೃಷ್ಣಮ್ ।

ರೇಮೇSಭಿಪಶ್ಯನ್ ಪ್ರತಿಪೂಜಯಂಸ್ತಂ ಸುರಾಶ್ಚ ಸರ್ವೇ ರವಿಬಿಮ್ಬಸಂಸ್ಥಮ್ ॥ ೩೨.೩೨ ॥

 

ರುದ್ರಾದಿಗಳಿಂದ ಕೂಡಿದ ಚತುರ್ಮುಖಬ್ರಹ್ಮನೂ ಕೂಡಾ ತನ್ನ ಲೋಕಕ್ಕೆ(ಸತ್ಯಲೋಕಕ್ಕೆ) ತೆರಳಿ, ಅಲ್ಲಿರುವ ಕೃಷ್ಣನನ್ನು ನೋಡುತ್ತಾ, ಪೂಜಿಸುತ್ತಾ, ಆನಂದಿಸಿದನು. ಎಲ್ಲಾ ದೇವತೆಗಳೂ ಸೂರ್ಯಮಂಡಲದಲ್ಲಿರುವ ಪರಮಾತ್ಮನನ್ನು ಕಾಣುತ್ತಾ, ಪೂಜಿಸುತ್ತಾ ಆನಂದಿಸಿದರು.

 

 

ಯತೋ ನ ದರ್ಶಿತಾ ಭ್ರಾನ್ತಿಃ ಪ್ರಾದುರ್ಭಾವೇಷ್ವಪಿ ಕ್ವಚಿತ್  ।

ದೇಹತ್ಯಾಗಾನುಕಾರೇಣ ಹರಿಣಾ ತದಿಹಾಚ್ಯುತಃ ॥ ೩೨.೩೩ ॥

 

ಮೋಹಯಿತ್ವಾSಸುರಾನನ್ಧಂ ತಮಃ ಪ್ರಾಪಯಿತುಂ ಪ್ರಭುಃ ।

ಚಿದಾನನ್ದೈಕದೇಹೋSಪಿ ತ್ಯಕ್ತಂ ದೇಹಮಿವಾಪರಮ್ ॥ ೩೨.೩೪ ॥

 

ಸೃಷ್ಟ್ವಾ ಸ್ವದೇಹೋಪಮಿತಂ ಶಯಾನಂ ಭುವ್ಯಗಾದ್ ದಿವಮ್ ।

ದಾರುಕೋಕ್ತ್ಯಾ ಸಮಾಯಾತಃ ಪಾರ್ತ್ಥಸ್ತಮದಹತ್ ತದಾ ॥ ೩೨.೩೫ ॥

 

ರೌಹಿಣೇಯಾದಿಕಾನಾಂ ಚ ಶರೀರಾಣಿ ಪ್ರಧಾನತಃ ।

ದಾರುಕೋ ವಿಷ್ಣುಲೋಕಂ ತು ಪುನರಾಪ ಯಥಾಗತಮ್ ॥ ೩೨.೩೬ ॥

 

ಯಾವ ಕಾರಣದಿಂದ ಶ್ರೀಕೃಷ್ಣನು ತಾನು ಅಭಿವ್ಯಕ್ತನಾಗುವಾಗ ದುರ್ಜನರಿಗೆ ಭ್ರಾಂತಿಯನ್ನು ಕೊಡಲಿಲ್ಲವೋ, ಆ ಕಾರಣದಿಂದ ದೈತ್ಯರನ್ನು ತಪ್ಪು ತಿಳಿಯುವಂತೆ ಮಾಡಿ, ಅವರನ್ನು ಅನ್ಧಂತಮಸ್ಸಿಗೆ ಹೊಂದಿಸಲು ಸರ್ವಸಮರ್ಥನಾದ ಅಚ್ಯುತನು ದೇಹವನ್ನು ಬಿಡುತ್ತಿದ್ದೇನೆ ಎನ್ನುವ ಭ್ರಮೆಯನ್ನು ಹುಟ್ಟಿಸಿದನು. ಜ್ಞಾನಾನಂದವೇ ಮೈವೆತ್ತು ಬಂದರೂ, ದೇಹವನ್ನು ಬಿಟ್ಟನೋ ಎಂಬಂತೆ ತನ್ನ ದೇಹದಂತೆಯೇ ಇರುವ ದೇಹವನ್ನು ಭೂಮಿಯಲ್ಲಿ ಮಲಗಿದಂತೆ ಸೃಷ್ಟಿಸಿ, ಸ್ವಧಾಮಕ್ಕೆ ತೆರಳಿದನು. ದಾರುಕನ ಮಾತಿನಂತೆ ಹಸ್ತಿನಾವತಿಯಿಂದ ಬಂದ ಅರ್ಜುನನು -ಬಲರಾಮ ಕೃಷ್ಣ ಮೊದಲಾದವರ ಪ್ರಧಾನವಾಗಿರುವ ಶರೀರಗಳನ್ನು ಶವಸಂಸ್ಕಾರಕ್ಕೆ ಒಳಪಡಿಸಿದನು. ದಾರುಕನು ಬಂದ ಹಾಗೆಯೇ ಪುನಃ  ನಾರಾಯಣನ ಲೋಕವನ್ನು ಹೊಂದಿದನು.

[ಅಸಜ್ಜನರಿಗೆ ಭ್ರಾಂತಿ ಹುಟ್ಟಿಸಲು ಶ್ರೀಕೃಷ್ಣ ತನ್ನ ದೇಹದಂತೆಯೇ ಇರುವ ಒಂದು ದೇಹವನ್ನು ಸೃಷ್ಟಿಮಾಡಿ, ಪರಲೋಕಕ್ಕೆ ತೆರಳಿದನು. ಜನರು ಕೃಷ್ಣನೂ ಮನುಷ್ಯರಂತೆಯೇ ಸತ್ತ ಎಂದುಕೊಂಡರು. ದುಷ್ಟಜನರನ್ನು ಮೋಹಿಸಿ ಅನ್ಧಂತಮಸ್ಸಿಗೆ ಕಳುಹಿಸಲು ಕೃಷ್ಣ ಹೀಗೆ ಮಾಡಿದನು.]

 

ತಥೈವ ಜನಮೋಹಾಯ ಪ್ರಾಪ್ಯ ವಹ್ನಾವದೃಶ್ಯತಾಮ್ ।

ರುಗ್ಮಿಣ್ಯಗಾದ್ಧರೇಃ ಪಾರ್ಶ್ವಂ ಸತ್ಯಾ ಕೃತ್ವಾ ತಪಸ್ತಥಾ ॥ ೩೨.೩೭ ॥

 

ಚಿದಾನನ್ದೈಕದೇಹೇ ಹಿ ದ್ವಿರೂಪೇ ಇವ ತೇ ಯತಃ ।

ಏಕೈವಾತಃ ಕೃಷ್ಣವತ್ ತೇ ದುಷ್ಟಾನ್ ಮೋಹಯತಸ್ತಥಾ ॥ ೩೨.೩೮ ॥

 

ಹಾಗೆಯೇ ರುಗ್ಮಿಣೀದೇವಿಯು ಜನರ ಮೋಹಕ್ಕಾಗಿ ಬೆಂಕಿಯಲ್ಲಿ ಅದೃಶ್ಯಳಾಗಿ ನಾರಾಯಣನ ಸಮೀಪಕ್ಕೆ ತೆರಳಿದಳು. ಸತ್ಯಭಾಮೆಯು ತಪಸ್ಸನ್ನು ಮಾಡಿ, ಪರಮಾತ್ಮನ ಪಾರ್ಶ್ವವನ್ನು ಸೇರಿದಳು.

[ಯಾವ ಕಾರಣದಿಂದ ಆ ಇಬ್ಬರೂ ಜ್ಞಾನಾನಂದವೇ ವೈವೆತ್ತು ಬಂದಿರುವ ಶ್ರೀಲಕ್ಷ್ಮೀದೇವಿಯೇ ಆಗಿದ್ದಾಳೋ, ಆ ಕಾರಣದಿಂದ ಶ್ರೀಕೃಷ್ಣನಂತೆ ದುಷ್ಟರನ್ನು ಮೋಹಿಸಲು ಅವರು ಬೆಂಕಿಯಲ್ಲಿ ಬಿದ್ದು ಪ್ರಾಣಕಳೆದುಕೊಂಡಂತೆಯೂ, ಸಮಾಧಿಯೋಗದಿಂದ ಪ್ರಾಣ ಕಳೆದುಕೊಂಡಂತೆಯೂ ತೋರಿದರು.]  

 

ಅನ್ಯಾ ಮಹಾಮಹಿಷ್ಯಸ್ತು ತ್ಯಕ್ತ್ವಾ ದೇಹಂ ಹುತಾಶನೇ ।

ಕಾಶ್ಚಿತ್ ಕಾಶ್ಚಿತ್ತು ತಪಸಾ ತ್ಯಕ್ತದೇಹಾ ಹರಿಂ ಯಯುಃ ॥ ೩೨.೩೯ ॥

 

ಷಣ್ಮಹಿಷಿಯರಲ್ಲಿ ಕೆಲವರು ಅಗ್ನಿಯಲ್ಲಿ ದೇಹವನ್ನು ಬಿಟ್ಟರೆ, ಉಳಿದವರು ಧ್ಯಾನಯೋಗದಿಂದ ದೇಹವನ್ನು ಬಿಟ್ಟು, ನಾರಾಯಣನನ್ನು ಕುರಿತು ತೆರಳಿದರು.

 

ರೌಹಿಣೇಯಾದಿಕಾನಾಂ ಚ ಭಾರ್ಯ್ಯಾ ವಹ್ನಿಮುಖೇ ತನುಮ್ ।

ತ್ಯಕ್ತ್ವಾ ಸ್ವಭರ್ತ್ತೄನೇವಾSಪುಃ ಸರ್ವಾ ಏವ ಪತಿವ್ರತಾಃ ॥ ೩೨.೪೦ ॥

 

ಪತಿವೃತೆಯರಾದ ಬಲರಾಮ, ಪ್ರದ್ಯುಮ್ನ, ಮೊದಲಾದವರ ಪತ್ನಿಯರು ಅಗ್ನಿಮುಖದಲ್ಲಿ ದೇಹವನ್ನು ಬಿಟ್ಟು, ತಮ್ಮ ಗಂಡಂದಿರನ್ನು ಆ ಲೋಕದಲ್ಲಿಯೂ ಸೇರಿದರು. 

Saturday, October 7, 2023

Mahabharata Tatparya Nirnaya Kannada 32-27-30

 

 

ಗೋಪಾಲಮನ್ತ್ರಂ ಭಜತಾಂ ಫಲಪ್ರದ ಏಕೇನ ರೂಪೇಣ ಸ ಭುವ್ಯದೃಶ್ಯಃ ।

ತಸ್ಥೌ ದ್ವಿತೀಯೇನ ಚ ಸೂರ್ಯ್ಯಮಣ್ಡಲೇ ತೃತೀಯಮಾಸೀಚ್ಛಿವಪೂಜಿತಂ ವಪುಃ ॥ ೩೨.೨೭ ॥

 

ಶ್ರೀಕೃಷ್ಣನು ಭೂಲೋಕದಲ್ಲಿ ಗೋಪಾಲಮಂತ್ರದಿಂದ[1] ಭಜಿಸುವವರಿಗೆ ಒಂದು ರೂಪದಿಂದ ಫಲವನ್ನೀಯುತ್ತಾ ಅದೃಶ್ಯನಾಗಿ ನಿಂತ.  ಎರಡನೇ ರೂಪದಿಂದ ಸೂರ್ಯಮಂಡಲದಲ್ಲಿ ನಿಂತ. ಮೂರನೇ ರೂಪದಿಂದ ಶಿವಲೋಕದಲ್ಲಿ ಶಿವನಿಂದ ಪೂಜಿತನಾದ.

[ಈ ಕುರಿತು ಮಹಾಭಾರತದ ಮೌಸಲಪರ್ವದಲ್ಲಿ ವಿವರ ಕಾಣಸಿಗುತ್ತದೆ. ಗೋಪಾಲಮಂತ್ರದಿಂದ ಪೂಜಿಸಲ್ಪಡುವ ಭಗವಂತನ ರೂಪದ ವರ್ಣನೆ ಹೀಗಿದೆ- ‘ಭುಜೈಶ್ಚತುರ್ಭಿಃ ಸಮುಪೇತಂ ಮಮೇದಂ ರೂಪಂ ವಿಶಿಷ್ಟಂ ಜೀವಿತಂ ಸಂಸ್ಥಿತಂ ಚ । ಭೂಮೌ ಗತಂ ಪೂಜಯತಾಪ್ರಮೇಯಂ ಸದಾ ಹಿ ತಸ್ಮಿನ್ ನಿವಸಾಮೀತಿ ದೇವಾಃ’ (೫.೩೪).  ಸೂರ್ಯಮಂಡಲದಲ್ಲಿರುವ ಭಗವಂತನ ವರ್ಣನೆಯನ್ನೂ ಇಲ್ಲಿ ಹೇಳಲಾಗಿದೆ- ‘ವಾಣೀ ಚಾSಸೀತ್ ಸಂಶ್ರಿತಾ ರೂಪಿಣೀ ಸಾ ಭಾನೋರ್ಮಧ್ಯೇ ಪ್ರವಿಶ ತ್ವಂ ತು ರಾಜನ್’ (೫.೩೩) ]

 

ಸಮ್ಪೂಜಿತಂ ಬ್ರಹ್ಮಲೋಕೇ ಚತುರ್ಥಂ ಕಞ್ಜೋದ್ಭವೇನಾಥ ಪರಂ ಸ್ವಧಾಮ ।

ಸಮಾಪ್ನುವಾನಂ ವಪುರಸ್ಯ ಪಞ್ಚಮಂ ಭಕ್ತ್ಯಾSನ್ವಯುರ್ದ್ದೇವವರಾಃ ಸ್ವಶಕ್ತ್ಯಾ ॥ ೩೨.೨೮ ॥

 

ಬ್ರಹ್ಮಲೋಕದಲ್ಲಿ ಬ್ರಹ್ಮನಿಂದ ಚೆನ್ನಾಗಿ ಪೂಜಿಸಲ್ಪಡುವುದು ಪರಮಾತ್ಮನ ನಾಲ್ಕನೇ ರೂಪವು. ತನ್ನ ಮನೆಯಾದ ವೈಕುಂಠಕ್ಕೆ ತೆರಳುತ್ತಿರುವ ಭಗವಂತನ ಐದನೇ ರೂಪವನ್ನು ದೇವತೆಗಳು ತಮ್ಮ ಸ್ವರೂಪಯೋಗ್ಯತೆಗೆ ಅನುಗುಣವಾಗಿ ಭಕ್ತಿಯಿಂದ ಅನುಸರಿಸಿದರು.

[ಭಾಗವತ ಈ ಕುರಿತು ಹೇಳುವುದನ್ನು ಕಾಣಬಹುದು- ‘ಭವಂ ಪಿತಾಮಹಂ ವೀಕ್ಷ್ಯ ವಿಭೂತೀರಾತ್ಮನೋ ವಿಭುಃ ।  ಸಂಯುಜ್ಯಾSತ್ಮನಿ ಚಾSತ್ಮಾನಂ ಪದ್ಮನೇತ್ರೇ ನ್ಯಮೀಲಯತ್’ (೧೧.೩೧.೫), ‘ದೇವಾದಯೋ ಬ್ರಹ್ಮಮುಖಾ ಆವಿಶಂತಂ ಸ್ವಧಾಮನಿ ।   ಅವಿಜ್ಞಾತಗತಿಂ ಕೃಷ್ಣಂ ದದೃಶುಶ್ಚಾತಿವಿಸ್ಮಿತಾಃ’(೧೧.೩೧.೮)]

[ಭಗವಂತನ ನಾಲ್ಕು ರೂಪಗಳು ರಾಮಾಯಣ ಮತ್ತು ಮಹಾಭಾರತದಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಕಾಣುತ್ತೇವೆ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ, ಈ ನಾಲ್ಕು ರೂಪಗಳ ಉಪಾಸನೆ, ಜೊತೆಗೆ ಐದನೆಯದಾಗಿ ನಾರಾಯಣ ರೂಪದ ಉಪಾಸನೆಯನ್ನು ತೈತ್ತಿರೀಯ ಸಂಹಿತೆ ಹೇಳುತ್ತದೆ. ಈ ನಾಲ್ಕು ರೂಪಗಳ ವಿಶೇಷವಾದ ಉಪಾಸನೆ ಬ್ರಹ್ಮಸೂತ್ರದ ನಾಲ್ಕು ಅಧ್ಯಾಯದಲ್ಲಿ  ಪ್ರತಿಪಾದಿತವಾಗಿದೆ. ಯಾರು ಈ ನಾಲ್ಕು ಅಧ್ಯಾಯವನ್ನು ತಿಳಿಯುತಾರೋ ಅವರಿಗೆ ಭಗವಂತನ ನಾಲ್ಕು ರೂಪಗಳ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳುತ್ತಾರೆ. ಇನ್ನೂ ವಿಶೇಷವಾದವರಲ್ಲಿ ಪ್ರತೀ ಅಧ್ಯಾಯದಲ್ಲಿರುವ ನಾಲ್ಕು ಪಾದಗಳಲ್ಲಿ ನಾಲ್ಕು ಪರಮಾತ್ಮನ ರೂಪಗಳು ಗೋಚರವಾಗುತ್ತದೆ ಎನ್ನುತ್ತಾರೆ. ಇನ್ನೂ ವಿಶೇಷವಾಗಿ ಬ್ರಹ್ಮಸೂತ್ರದ ಒಂದೊಂದು ಸೂತ್ರದಲ್ಲೂ, ಒಂದೊಂದು ಅಕ್ಷರದಲ್ಲೂ  ಭಗವಂತನ ರೂಪ ಗೋಚರವಾಗುತ್ತದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ನಾಲ್ಕು/ಐದು ರೂಪಗಳು ರಾಮಾಯಣ ಮಹಾಭಾರತದಲ್ಲಿ ವಿಶೇಷ ಪಾತ್ರವನ್ನು ವಹಿಸಿರುವುದನ್ನು ನಾವು ಕಾಣುತ್ತೇವೆ.]

 

ತತ್ತೇಜಸಾ ತೇ ಪ್ರತಿಮುಷ್ಟದೃಷ್ಟಯಃ ಪುರುಷ್ಟುತಾದ್ಯಾ ಅಮಿತೋರುದೀಧಿತೇಃ ।

ಯಾವತ್ ಸ್ವಗಮ್ಯಂ ತ್ವನುಗಮ್ಯ  ತಸ್ಥುರ್ನ್ನಿಮೀಲಿತಾಕ್ಷಾ ವಿಹತೋರ್ಧ್ವಚಾರಾಃ   ॥ ೩೨.೨೯ ॥

 

ಇಂದ್ರ ಮೊದಲಾದ ದೇವತೆಗಳು ಭಗವಂತನ ಜೊತೆಗೆ ತಾವು ಎಲ್ಲಿಯತನಕ ಹೋಗಬಹುದೋ ಅಲ್ಲಿಯ ತನಕ ಅನುಸರಿಸಿ ಹೋದರು. ನಂತರ ಪರಮಾತ್ಮನ ತೇಜಸ್ಸಿನಿಂದ ಕಣ್ಗಳನ್ನು ಮುಚ್ಚಿ, ಇನ್ನೂ ಮೇಲೆ ಹೋಗಲಾರದೇ ಅಲ್ಲಿಯೇ ನಿಂತರು.

[ಮಹಾಭಾರತದ ಮೌಸಲಪರ್ವದಲ್ಲಿ(೫.೩೫)  ಈ ಪ್ರಮೇಯವನ್ನು ಹೇಳಿದ್ದಾರೆ-ದೇವಾ ನಿವೃತ್ತಾಸ್ತತ್ಪದಂ ನಾSಪ್ನುವಂತೋ ಬುದ್ಧ್ಯಾ ದೇವಂ ಸಂಸ್ಮರಂತಃ ಪ್ರತೀತಾಃ ಇನ್ನು ಭಾಗವತದಲ್ಲೂ ಈ ವಿವರಣೆಯನ್ನು ಕಾಣಬಹುದು- ಸೌದಾಮಿನ್ಯಾ ಯಥಾSSಕಾಶೇ ಯಾಂತ್ಯಾ ಭಿತ್ತ್ವಾSಭ್ರಮಂಡಲಮ್ | ಗತಿರ್ನ ಲಕ್ಷ್ಯತೇ ಮರ್ತ್ಯೈಸ್ತಥಾ ಕೃಷ್ಣಸ್ಯ ದೈವತೈಃ’ (೧೧.೩೧.೯)]

 

ವೀನ್ದ್ರೇಶಶೇಷಾನುಗತಃ ಸ್ವಯಮ್ಭೂರ್ದ್ಧಾಮ ಪ್ರವಿಷ್ಟಂ ತಮಜಂ ಪ್ರಣಮ್ಯ ।

ವೀನ್ದ್ರಾದಿಕೈರಪ್ಯಯುತಃ ಸ್ವಪಿತ್ರಾSSಶ್ಲಿಷ್ಟೋ ರಹಶ್ಚಾಕಥಯತ್ ತಥಾSಸ್ತೌತ್  ॥ ೩೨.೩೦ ॥

 

ಗರುಡ-ಶೇಷ-ರುದ್ರ ಇವರಿಂದ ಅನುಸರಿಸಲ್ಪಟ್ಟವನಾದರೂ ಕೂಡಾ ಬ್ರಹ್ಮನು ಸ್ವಧಾಮಕ್ಕೆ ತೆರಳಿರುವ ಆ ಸರ್ವೋತ್ಕೃಷ್ಟ ನಾರಾಯಣನನ್ನು ನಮಸ್ಕರಿಸಿ, ರುದ್ರಾದಿಗಳಿಂದಲೂ ಬೇರ್ಪಟ್ಟು, ಅಲ್ಲಿಂದ ಮುಂದೆ  ತೆರಳಿ, ತಂದೆಯಾದ ಪರಮಾತ್ಮನಿಂದ ಆಲಿಂಗಿತನಾಗಿ ರಹಸ್ಯದಲ್ಲಿ ಮಾತನಾಡಿದನು. ಹಾಗೆಯೇ ಸ್ತೋತ್ರಮಾಡಿದ ಕೂಡಾ.   



[1] ಗೋಪಾಲಮಂತ್ರದ ಕುರಿತು ಆಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. ಕಾಮಬೀಜವಾದ 'ಕ್ಲೀಂ’ ಕಾರದಿಂದ ಕೂಡಿದ, ಚತುರ್ಥ್ಯಂತವಾದ 'ಕೃಷ್ಣ' ಶಬ್ದ ಮತ್ತು ವೇದವೇದ್ಯ ಎಂಬ ಅರ್ಥದ 'ಗೋವಿಂದ' ಶಬ್ದ, ಅನಂತರ ಗೋಪಿಯರಿಗೆ ಪ್ರಿಯ ಎನ್ನುವ ಅರ್ಥದ ಚತುರ್ಥ್ಯಂತವಾದ 'ಗೋಪೀಜನವಲ್ಲಭ' ಶಬ್ದ ಮತ್ತು 'ಸ್ವಾಹಾ' ಶಬ್ದ- ಈ ೧೮ ಅಕ್ಷರಗಳು ಸೇರಿ ಗೋಪಾಲಮಂತ್ರವಾಗುವುದು.(ತಥಾಚ ಮಂತ್ರಃ -‘ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಸ್ವಾಹಾ’) ಈ ಮಂತ್ರವು ವಿಷ್ಣುಪ್ರೀತಿಯ ಮೂಲಕ ಎಲ್ಲಾ ಬಯಕೆಗಳನ್ನೂ, ಮೋಕ್ಷವನ್ನೂ ಕೊಡುವಂಥದು. ಮಂತ್ರದ ೫ ಪದಗಳಿಂದ ಪಂಚಾಂಗನ್ಯಾಸವನ್ನಾಚರಿಸಬೇಕು.

ಧ್ಯಾಯೇದ್ಧರಿನ್ಮಣಿ-ನಿಭಂ ಜಗದೇಕ-ವಂದ್ಯಂ ಸೌಂದರ್ಯ-ಸಾರಮರಿ-ಶಂಖ-ವರಾಭಯಾನಿ

ದೋರ್ಭಿರ್ದಧಾನಮಜಿತಂ ಸ-ರಸಂ ಚ ಭೈಷ್ಮೀ-ಸತ್ಯಾ-ಸಮೇತಮಖಿಲ-ಪ್ರದಮಿಂದಿರೇಶಮ್

ಸಮಸ್ತ ಜನರಿಂದಲೂ ವಂದ್ಯನಾದ, ಸೌಂದರ್ಯಪೂರ್ಣನಾದ, ನಾಕು ಕೈಗಳಲ್ಲಿ ಚಕ್ರಶಂಖವರಾಭಯಮುದ್ರೆಗಳನ್ನು ಧರಿಸಿರುವ, ಭಕ್ತರ ಮೇಲೆ ದಯಾರಸವನ್ನು ಬೀರುತ್ತಿರುವ, ಸಕಲ ಪುರುಷಾರ್ಥಪ್ರದನಾದ, ರುಗ್ಮಿಣಿ ಸತ್ಯಭಾಮೆಯರೊಡನೆ ಕುಳಿತಿರುವ, ನೀಲಮಣಿಯಂತೆ ಕಪ್ಪು ಮೈಯ, ಅಜೇಯನಾದ ಶ್ರೀಹರಿಯನ್ನು ನೆನೆಯಬೇಕು. ಕಾಮಬೀಜದಿಂದ ಮತ್ತು ನಮಃ ಪದದಿಂದ ಕೂಡಿದ ಚತುರ್ಥ್ಯಂತವಾದ 'ಕೃಷ್ಣ' ಶಬ್ದವು ಕೃಷ್ಣಷಡಕ್ಷರ ಎನ್ನಿಸಿಕೊಳ್ಳುವುದು.(ತಥಾಚ ಮಂತ್ರಃ – ‘ಕ್ಲೀಂ ಕೃಷ್ಣಾಯ ನಮಃ  ಅದರ ಆದ್ಯಕ್ಷರವಾದ ಕಾಮಬೀಜವೂ ಒಂದು ಸ್ವತಂತ್ರ ಮಂತ್ರವಾಗಿದ್ದು ಚಿಂತಾಮಣಿಯಂತೆ ಸರ್ವೇಷ್ಟಪ್ರದವಾಗಿದೆ.