ವಸುದೇವಃ ಪಾರ್ತ್ಥಮುಖಾಚ್ಛ್ರುತ್ವೈತದ್ ಯೋಗಮಾಸ್ಥಿತಃ ।
ತ್ಯಕ್ತ್ವಾ ದೇಹಂ
ಕಶ್ಯಪತ್ವಂ ಪ್ರಾಪ ಕೃಷ್ಣಾನುರಾಗತಃ ॥ ೩೨.೪೧ ॥
ವಸುದೇವನು ಪ್ರಭಾಸದಿಂದ ದ್ವಾರಕೆಗೆ ಬಂದ ಅರ್ಜುನನ ಮುಖದಿಂದ ಯಾದವೀ-ಕಲಹದ ಸುದ್ದಿಯನ್ನು ಕೇಳಿ, ಧ್ಯಾನವನ್ನು ಹೊಂದಿ ತನ್ನ ಶರೀರವನ್ನು
ಬಿಟ್ಟನು. ಕೃಷ್ಣನ ಮೇಲಿನ ಭಕ್ತಿಯಿಂದ ಅವನು ತನ್ನ ಮೂಲರೂಪವಾದ ಕಶ್ಯಪತ್ವವನ್ನು ಹೊಂದಿದನು.
ತಸ್ಯಾರ್ಜ್ಜುನೋSಶ್ವಮೇಧಾಗ್ನಾವನ್ತ್ಯಕರ್ಮ್ಮಾಕರೋತ್ ತದಾ ।
ತ್ಯಕ್ತದೇಹಾಸ್ತಸ್ಯ ಭಾರ್ಯ್ಯಾ
ವಹ್ನೌ ಪ್ರಾಪುಸ್ತಮೇವ ಚ ॥ ೩೨.೪೨ ॥
ಅರ್ಜುನನು ಅಶ್ವಮೇಧದಲ್ಲಿ ಪೂಜಿಸಿದ ಅಗ್ನಿಯಿಂದ ವಸುದೇವನ ಅಂತ್ಯಕ್ರಿಯೆಯನ್ನು ಮಾಡಿದನು.
ವಸುದೇವನ ಹೆಂಡಂದಿರೆಲ್ಲರೂ ಕೂಡಾ ಬೆಂಕಿಯಲ್ಲಿಯೇ ದೇಹವನ್ನು ಬಿಟ್ಟು, ಕಶ್ಯಪನನ್ನೇ
ಹೊಂದಿದರು.
ಸ್ತ್ರಿಯೋ ಬಾಲಾಂಸ್ತಥಾSSದಾಯ ಧನಂ ಚೈವ ಧನಞ್ಜಯಃ ।
ವಿನಿರ್ಯ್ಯಯೌ
ದ್ವಾರವತ್ಯಾಸ್ತಾಂ ಜಗ್ರಾಸ ಚ ಸಾಗರಃ ॥ ೩೨.೪೩ ॥
ಅರ್ಜುನನು ಹೆಣ್ಣುಮಕ್ಕಳನ್ನೂ, ಮಕ್ಕಳನ್ನೂ, ಹಾಗೆಯೇ ಧನವನ್ನೂ ತೆಗೆದುಕೊಂಡು, ದ್ವಾರಕೆಯಿಂದ ಹೊರನಡೆದನು. ಸಮುದ್ರವು ದ್ವಾರಕೆಯನ್ನು ನುಂಗಿತು. (ದ್ವಾರಕಾನಗರವು
ಸಮುದ್ರದಲ್ಲಿ ಮುಳುಗಿಹೋಯಿತು)
ಸ್ತ್ರೀಬಾಲಸಹಿತೇ ಪಾರ್ತ್ಥ
ಏಕಸ್ಮಿನ್ ಪಥಿ ಗಚ್ಛತಿ ।
ಶಾಪಾತ್ ಸುಪಾಪಾ
ಆಭೀರಾಃ ಸ್ತ್ರೀಜನಾನ್ ಜಹ್ರುರುದ್ಧತಾಃ ॥ ೩೨.೪೪ ॥
ಸ್ತ್ರೀ ಹಾಗೂ ಬಾಲಕರಿಂದ ಕೂಡಿರುವ ಅರ್ಜುನನೊಬ್ಬನೇ ನಡೆಯುತ್ತಿರಲು, ಅತ್ಯಂತ ಪಾಪಿಷ್ಠರಾದ ಬೇಡರು, ಬಲದಿಂದ ಉದ್ಧತರಾಗಿ ಶಾಪಗ್ರಸ್ತರಾಗಿದ್ದ ಸ್ತ್ರೀಯರನ್ನು
ಅಪಹರಿಸಿದರು.
[ಯಾವ ಶಾಪ ಎನ್ನುವುದನ್ನು ವಿವರಿಸುತ್ತಾರೆ-]
ಯಾಸ್ತಾಃ
ಷೋಡಶಸಾಹಸ್ರವನಿತಾಃ ಶತಸಂಯುತಾಃ
ಕೃಷ್ಣಶಾಪಾನ್ಮ್ಲೇಚ್ಛವಶಂ
ಯಯುರ್ದ್ದರ್ಪ್ಪನಿಮಿತ್ತತಃ ॥ ೩೨.೪೫ ॥
ಯಾವ ಹದಿನಾರುಸಾವಿರದ ನೂರು ಮಂದಿ ಶ್ರೀಕೃಷ್ಣನ ಸ್ತ್ರೀಯರಿದ್ದರೋ, ಅವರೆಲ್ಲರೂ ಶ್ರೀಕೃಷ್ಣನ ಕುರಿತು ಹಿಂದೆ ತೋರಿದ್ದ ವಿಪರೀತ ಅಹಂಕಾರ ನಿಮಿತ್ತ ಕೃಷ್ಣನ
ಶಾಪಕ್ಕೆ ಒಳಗಾಗಿ, ಮ್ಲೇಚ್ಛರ ವಶವಾದರು.
ಹ್ರೀಯಮಾಣೇ ಧನೇ ಚೈವ
ವನಿತಾಸು ಚ ವಾಸವಿಃ ।
ಯುಯುತ್ಸುರ್ಗ್ಗಾಣ್ಡಿವಂ
ಸಜ್ಯಂ ಕೃಚ್ಛ್ರೇಣೈವ ಚಕಾರ ಹ ॥ ೩೨.೪೬ ॥
ಹಣವು ಅಪಹರಿಸಲ್ಪಡಲು, ಸ್ತ್ರೀಯರು ಕೂಡಾ ಅಪಹರಿಸಲ್ಪಡಲು, ಅರ್ಜುನನು ಯುದ್ಧಮಾಡಲು ಬಯಸಿ, ಕಷ್ಟಪಟ್ಟು ಗಾಂಡೀವದ ದಾರವನ್ನು
ಬಿಗಿದನು.
ಕ್ಷೀಣಾಸ್ತಸ್ಯ ಶರಾ
ದೈವಾನ್ನಾಸ್ತ್ರಾಣಿ ಸ್ಮೃತಿಮಾಯಯುಃ ।
ಸ ತದ್ ದೈವಕೃತಂ
ಜ್ಞಾತ್ವಾ ಸಂಸ್ಮರನ್ ಪುರುಷೋತ್ತಮಮ್ ।
ನಿಘ್ನಞ್ಛತ್ರೂನ್
ಗಾಣ್ಡಿವೇನ ಶೇಷಂ ರಕ್ಷನ್ ಕುರೂನಗಾತ್ ॥ ೩೨.೪೭ ॥
ಅರ್ಜುನನ ಬತ್ತಳಿಕೆಯಲ್ಲಿರುವ ಬಾಣಗಳು ಕ್ಷಯಗೊಂಡವು. ದೈವಸಂಕಲ್ಪದಿಂದಾಗಿ ಅವನಿಗೆ ಅಸ್ತ್ರಗಳ
ನೆನಪೇಬರಲಿಲ್ಲ. ಆಗ ಅರ್ಜುನನು ‘ಇದು ದೈವದ
ಸಂಕಲ್ಪ’ ಎಂದು ತಿಳಿದು, ಕೃಷ್ಣನನ್ನು ಸ್ಮರಣೆ ಮಾಡುತ್ತಾ, ಗಾಂಡೀವದ
ದಂಡದಿಂದ ಶತ್ರುಗಳನ್ನು ಹೊಡೆಯುತ್ತಾ, ಉಳಿದವರನ್ನು ರಕ್ಷಿಸುತ್ತಾ, ಕುರುಕ್ಷೇತ್ರವನ್ನು ತಲುಪಿದನು.
No comments:
Post a Comment